ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಕೇಂದ್ರ ಸರ್ಕಾರ ದೇಶಾದ್ಯಂತ ವಿಜ್ಞಾನ ಮ್ಯೂಸಿಯಂಗಳನ್ನು ಸ್ಥಾಪಿಸಲಿದೆ: ಸಚಿವ ಡಾ. ಜಿತೇಂದ್ರ ಸಿಂಗ್
ಪ್ರಧಾನ ಮಂತ್ರಿ ಮೋದಿ ಅವರ ಇತ್ತೀಚಿನ ವಿಶ್ವಸಂಸ್ಥೆ ಭಾಷಣದಲ್ಲಿ ಹೇಳಿದ ಬುದ್ಧಿಮಾತಿಗೆ ಅನುಗುಣವಾಗಿ ವಿಜ್ಞಾನ-ಆಧರಿತ, ತಾರ್ಕಿಕ ಮತ್ತು ಪ್ರಗತಿಪರ ಚಿಂತನೆಗಳು ಅಭಿವೃದ್ಧಿಗೆ ಆಧಾರವಾಗಲಿವೆ: ಡಾ. ಜಿತೇಂದ್ರ ಸಿಂಗ್
ಆಯ್ದ ಸಿಎಸ್ಐಆರ್ ಪ್ರಯೋಗಾಲಯಗಳಲ್ಲಿ ವಿಜ್ಞಾನ ಮ್ಯೂಸಿಯಂಗಳನ್ನು ಸ್ಥಾಪಿಸಲು ಸಿಎಸ್ಐಆರ್ ಮತ್ತು ಎನ್ ಸಿಎಸ್ಎಂ(ವಿಜ್ಞಾನ ಮ್ಯೂಸಿಯಂಗಳ ರಾಷ್ಟ್ರೀಯ ಮಂಡಳಿ) ನಡುವೆ ತಿಳಿವಳಿಕೆ ಪತ್ರಕ್ಕೆ ಸಹಿ; ಭಾರತದ ಯುವ ಸಮುದಾಯದಲ್ಲಿ ವೈಜ್ಞಾನಿಕ ಮನೋಭಾವ ಉತ್ತೇಜನಕ್ಕೆ ಒತ್ತು
ದೇಶದಲ್ಲಿ ವಿಜ್ಞಾನ ಶಿಕ್ಷಣಕ್ಕೆ ಪೂರಕವಾಗಿ ವಿಜ್ಞಾನ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತವೆ; ಯುವ ಸಮುದಾಯ ಮತ್ತು ಜನ ಮಾನಸದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತವೆ: ಶ್ರೀ ಜಿ. ಕಿಶನ್ ರೆಡ್ಡಿ
Posted On:
29 SEP 2021 5:31PM by PIB Bengaluru
ದೇಶದ ಯುವ ಸಮುದಾಯ ಮತ್ತು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಮತ್ತು ಉತ್ತೇಜಿಸಲು ದೇಶಾದ್ಯಂತ ವಿಜ್ಞಾನ ಮ್ಯೂಸಿಯಂಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪೃಥ್ವಿ ವಿಜ್ಞಾನ ಇಲಾಖೆಯ ಸ್ವತಂತ್ರ ಖಾತೆ ಸಹಾಯಕ ಸಚಿವ, ಪ್ರಧಾನ ಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಂದು ತಿಳಿಸಿದ್ದಾರೆ.
ವಿಜ್ಞಾನ ಮ್ಯೂಸಿಯಂಗಳ ಸ್ಥಾಪನೆ ಸಂಬಂಧ ದೆಹಲಿಯಲ್ಲಿಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಆಸ್ಐಆರ್) ಮತ್ತು ವಿಜ್ಞಾನ ಮ್ಯೂಸಿಯಂಗಳ ರಾಷ್ಟ್ರೀಯ ಮಂಡಳಿ(ಎನ್ ಸಿಎಸ್ಎಂ) ನಡುವೆ ಏರ್ಪಟ್ಟ ತಿಳಿವಳಿಕೆ ಪತ್ರಕ್ಕೆ ಸಹಿ ನಂತರ ಸಚಿವರು, ಈ ವಿಷಯ ತಿಳಿಸಿದರು.
ತಿಳಿವಳಿಕೆ ಪತ್ರಕ್ಕೆ ಸಹಿ ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಖಾತೆ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಉಪಸ್ಥಿತರಿದ್ದರು.
ಆಯ್ದ ಸಿಎಸ್ಐಆರ್ ಪ್ರಯೋಗಾಲಯಗಳಲ್ಲಿ ವಿಜ್ಞಾನ ಮ್ಯೂಸಿಯಂಗಳನ್ನು ಸ್ಥಾಪಿಸುವುದು ತಿಳಿವಳಿಕೆ ಪತ್ರದ ಗುರಿಯಾಗಿದೆ. ದೇಶದ ಎಲ್ಲ ವರ್ಗದ ಶ್ರೀಸಾಮಾನ್ಯರಲ್ಲಿ ವೈಜ್ಞಾನಿಕ ಕುತೂಹಲ ಉತ್ತೇಜಿಸುವುದು ಮತ್ತು ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.
ನಂತರ ಮಾತನಾಡಿದ ಸಚಿವ ಡಾ. ಜಿತೇಂದ್ರ ಸಿಂಗ್, 21ನೇ ಶತಮಾನದಲ್ಲಿ ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಜನರು ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಇತ್ತೀಚೆಗೆ ದೇಶದಲ್ಲಿ ಕಾಣಿಸಿಕೊಂಡ ಕೋವಿಡ್-19 ಸಾಂಕ್ರಾಮಿಕ ಸೋಂಕು ವಿಜ್ಞಾನ ಮತ್ತು ವೈಜ್ಞಾನಿಕ ಚಿಂತನೆ ಕಡೆಗೆ ಸಮಾಜದ ಅರಿವು ಹೆಚ್ಚಾಗಬೇಕೆಂಬ ಮಹತ್ವವನ್ನು ಒತ್ತಿ ಹೇಳಿದೆ ಎಂದರು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನ್ಯೂಯಾರ್ಕ್ ನಲ್ಲಿ ಇತ್ತೀಚೆಗೆ ವಿಶ್ವಸಂಸ್ಥೆಯ 76ನೇ ಭದ್ರತಾ ಮಂಡಳಿ ಸಭೆ ಉದ್ದೇಶಿಸಿ ಮಾಡಿದ ಭಾಷಣವನ್ನು ಉಲ್ಲೇಖಿಸಿದ ಸಚಿವರು, “ಸಕಾರಾತ್ಮಕ ಆಲೋಚನೆಗಳು ಮತ್ತು ಮೂಲಭೂತವಾದದ ಬೆದರಿಕೆಗಳನ್ನು ಇಡೀ ವಿಶ್ವವೇ ಎದುರಿಸುತ್ತಿದೆ” ಎಂಬ ಮೋದಿ ಭಾಷಣವನ್ನು ಪ್ರಸ್ತಾಪಿಸಿದರು. ಈ ನಿಟ್ಟಿನಲ್ಲಿ ವಿಜ್ಞಾನ ಆಧರಿತ, ತಾರ್ಕಿಕ ಮತ್ತು ಪ್ರಗತಿಪ ಚಿಂತನೆಗಳು ಅಭಿವೃದ್ಧಿಯ ಮೂಲಾಧಾರಗಳಾಗಿವೆ. ವಿಜ್ಞಾನ ಆಧರಿತ ಕಾರ್ಯವಿಧಾನಗಳನ್ನು ಬಲಪಡಿಸುವ ಸಲುವಾಗಿ, ಭಾರತವು ಅನುಭವ ಆಧರಿತ ಕಲಿಕೆಯನ್ನು ಉತ್ತೇಜಿಸುತ್ತಿದೆ ಎಂದರು.
ಇಂದು ನಡೆದ ತಿಳಿವಳಿಕೆ ಪತ್ರಕ್ಕೆ ಸಹಿ ಕಾರ್ಯಕ್ರಮವು ಈ ದಿಕ್ಕಿನಲ್ಲಿ ಇಟ್ಟ ಪುಟ್ಟ ಹೆಜ್ಜೆಯಾಗಿದೆ. ವಿಜ್ಞಾನ ಸಂವಹನ ಮತ್ತು ಪ್ರಸರಣದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸುತ್ತದೆ. ಭಾರತ ಸ್ವಾತಂತ್ರ್ಯ ಗಳಿಸಿ 75 ವರ್ಷ ತುಂಬುತ್ತಿರುವ ಕಾಲಘಟ್ಟದಲ್ಲಿ ಆಚರಿಸುತ್ತಿರುವ ಆಜಾ಼ದಿ ಕಾ ಅಮೃತ ಮಹೋತ್ಸವ ಸುಸಂದರ್ಭದಲ್ಲೇ ವಿಜ್ಞಾನ ಮ್ಯೂಸಿಯಂಗಳ ಸ್ಥಾಪನೆಗೆ ಸಹಿ ಬೀಳುತ್ತಿರುವುದು ಹೆಮ್ಮೆಯ ವಿಷಯ ಎಂದು ಸಚಿವರು ಹೇಳಿದರು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಇಚ್ಛೆಯಂತೆ ಶಾಲಾ ವಿದ್ಯಾರ್ಥಿಗಳಿಗಾಗಿ ಐಐಟಿ-ಬಾಂಬೆ ಪಾಲುದಾರಿಕೆಯಲ್ಲಿ ಸಿಎಸ್ಐಆರ್ ವರ್ಚುಯಲ್ ಪ್ರಯೋಗಾಲಯ ಸ್ಥಾಪಿಸುವ ಹೊಸ ಉಪಕ್ರಮವು ಶ್ಲಾಘನೀಯ ಕ್ರಮವಾಗಿದೆ. ಸಿಎಸ್ಐಆರ್ ಕಳೆದ 8 ದಶಕಗಳಲ್ಲಿ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳನ್ನು ಪ್ರದರ್ಶಿಸಲು ಎನ್ ಸಿಎಸ್ಎಂ ಜತೆಗೂಡಿ ರಾಷ್ಟ್ರೀಯ ದೈಹಿತ ಪ್ರಯೋಗಾಲಯದಲ್ಲಿ ಮ್ಯೂಸಿಯಂ ಸ್ಥಾಪಿಸುವ ನಡೆ ಸ್ವಾಗತಾರ್ಹವಾಗಿದೆ ಎಂದು ಸಚಿವರು ತಿಳಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ದೇಶದ ಪ್ರತಿ ಮೂಲೆಗೂ ತಲುಪಬೇಕು ಮತ್ತು ಅದರ ವಿಸ್ತರಣೆಯ ಅವಶ್ಯಕತೆ ಇದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಮ್ಯೂಸಿಯಂ ಸ್ಥಾಪನೆಯ ಉಪಕ್ರಮ ಸೂಕ್ತವಾಗಿದೆ. ಮ್ಯೂಸಿಯಂಗಳು ವಸ್ತುಸಂಗ್ರಹಾಲಯಗಳು ನಿಂತ ನೀರಾಗಬಾರದು. ಅವು ಕ್ರಿಯಾತ್ಮಕ ಮತ್ತು ಆಕರ್ಷಕ ತಾಣಗಳಾಗಿ, ಹೊಸತನಶೋಧದ ನೆಲೆಗಳಾಗಿ ಹೊರಹೊಮ್ಮಬೇಕು. ವಿದ್ಯಾರ್ಥಿಗಳು ಮತ್ತು ಯುವ ಸಮುದಾಯದಲ್ಲಿ ವೈಜ್ಞಾನಿಕ ಕುತೂಹಲ ಮತ್ತು ಉತ್ಸಾಹವನ್ನು ನಾವು ಗುರುತಿಸುವಂತಾಗಬೇಕು ಎಂದರು.
ಸಿಎಸ್‌ಐಆರ್ ಸಂಸ್ಥೆಯು ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು, ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳು ಮತ್ತು ನೀತಿ ಆಯೋಗದ ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ, ಅದು ದೂರದ ಪ್ರದೇಶಗಳು ಮತ್ತು ಶಾಲೆಗಳಿಗೆ ತಲುಪಬೇಕು. ಡಿಜಿಟಲ್ ಸಾಧನಗಳ ಬಳಕೆ, ಸಿಎಸ್‌ಐಆರ್‌ನ ವರ್ಚುವಲ್ ಪ್ರಯೋಗಾಲಯಗಳು ಮತ್ತು ಎನ್‌ಸಿಎಸ್‌ಎಮ್ ಮೊಬೈಲ್ ವಿಜ್ಞಾನ ವಸ್ತುಸಂಗ್ರಹಾಲಯಗಳು ತುಂಬಾ ಪೂರಕ ಮತ್ತು ಮೌಲ್ಯಯುತವಾಗಿವೆ ಎಂದು ಸಚಿವರು ತಿಳಿಸಿದರು.
ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಖಾತೆ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಮಾತನಾಡಿ, ವಿಜ್ಞಾನ ಶಿಕ್ಷಣ ಉತ್ತೇಜಿಸಲು, ಯವ ಸಮುದಾಯ ಸೇರಿದಂತೆ ಜನಮಾನಸದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು, ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸ್ಕೃತಿ ಸೃಜಿಸಲು ವಿಜ್ಞಾನ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. 21ನೇ ಶತಮಾನದ ವಿನೂತನ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳು ಮುನ್ನುಗ್ಗಬೇಕು ಎಂಬುದು ಇಂದಿನ ವಾಸ್ತವವಾಗಿದ್ದು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವೂ ಇದೇ ಆಗಿದೆ. 21ನೇ ಶತಮಾನದಲ್ಲಿ 5ಸಿಗಳೆಂದರೆ ವಿಮರ್ಶಾತ್ಮಕ ಆಲೋಚನೆ, ಸೃಜನಶೀಲತೆ, ಸಹಭಾಗಿತ್ವ, ಕುತೂಹಲ ಮತ್ತು ಸಂವಹನ(critical thinking, creativity, collaboration, curiosity and communication). ಇವುಗಳನ್ನು ಯುವ ಸಮುದಾಯ ಅಳವಡಿಸಿಕೊಳ್ಳಬೇಕು ಎಂದರು.
ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಿರುವುದು ಎನ್‌ಸಿಎಸ್‌ಎಂ ಮತ್ತು ಸಿಎಸ್‌ಐಆರ್ ನಡುವೆ ಸಂಪರ್ಕ ಕಲ್ಪಿಸಲು, ಅವುಗಳ ಪ್ರಯೋಗಾಲಯಗಳ ಉದ್ದೇಶಗಳನ್ನು ಗಣನೀಯವಾಗಿ ಈಡೇರಿಸಲು ಸಹಾಯಕವಾಗಿದೆ. ಎಲ್ಲಕ್ಕಿಂತ ವಿಶೇಷವಾಗಿ, ನಮ್ಮ ಪ್ರಧಾನ ಮಂತ್ರಿ ಮೋದಿ ಅವರ ದೃಷ್ಟಿಕೋನವನ್ನು ಹೆಚ್ಚು ಫಲಪ್ರದ ರೀತಿಯಲ್ಲಿ ಈಡೇರಿಸಲು ಸಾಧ್ಯವಾಗಲಿದೆ. ಈ ಉಪಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಂಸ್ಕೃತಿ ಸಚಿವಾಲಯ ಎಲ್ಲ ಸಹಾಯ ಮತ್ತು ನೆರವು ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.
ಭಾರತ ಸರ್ಕಾರದ ಇತರೆ ಇಲಾಖೆಗಳ ಜತೆ ಸಹಭಾಗಿತ್ವ ಹೊಂದುವ ಅವಶ್ಯಕತೆಯಿದೆ ಎಂದು ಸಲಹೆ ನೀಡಿದ ಅವರು, ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸತನ ಶೋಧ ಸಂಸ್ಕೃತಿಯನ್ನು ಉತ್ತೇಜಿಸುವುದೇ ಈ ಎಲ್ಲಾ ಇಲಾಖೆಗಳ ಉದ್ದೇಶವಾಗಿದೆ ಎಂದರು.
***
(Release ID: 1759427)
Visitor Counter : 206