ಇಂಧನ ಸಚಿವಾಲಯ
azadi ka amrit mahotsav

ನಾಲ್ಕು ವರ್ಷಗಳ ಯಶಸ್ವಿ ಅನುಷ್ಠಾನವನ್ನು ಪೂರ್ಣಗೊಳಿಸಿದ ʻಸೌಭಾಗ್ಯʼ ಯೋಜನೆ


ʻಸೌಭಾಗ್ಯʼ ಪ್ರಾರಂಭವಾದಾಗಿನಿಂದ 2.82 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ

ವಿದ್ಯುದ್ದೀಕರಣಗೊಳ್ಳದೆ ಉಳಿದ ಮನೆಗಳನ್ನು ಗುರುತಿಸಿ, ಅವುಗಳಿಗೆ ವಿದ್ಯುತ್ ಸಂಪರ್ಕಗಳನ್ನು ಒದಗಿಸಲು ವಿಶೇಷ ಉಚಿತ ಸಹಾಯವಾಣಿ ಸೌಲಭ್ಯವಿದೆ

Posted On: 25 SEP 2021 9:41AM by PIB Bengaluru

`ಸೌಭಾಗ್ಯ’ ಯೋಜನೆ ಪ್ರಾರಂಭವಾದಾಗಿನಿಂದ 2.82 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಅಂಕಿ-ಅಂಶಗಳು ಈ ವರ್ಷದ ಮಾರ್ಚ್ 31ರ ವರೆಗೆ ಮಾತ್ರ. ಮಾರ್ಚ್ 2019ರ ಹೊತ್ತಿಗೆ, ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 2.63 ಕೋಟಿ ಇಚ್ಛಾಪೂರ್ವಕವಾಗಿ ವಿದ್ಯುದ್ದೀಕರಣಗೊಳ್ಳದ ಕುಟುಂಬಗಳಿಗೆ 18 ತಿಂಗಳ ದಾಖಲೆಯ ಸಮಯದಲ್ಲಿ ವಿದ್ಯುತ್ ಸಂಪರ್ಕಗಳನ್ನು ಒದಗಿಸಲಾಯಿತು. ಆ ಬಳಿಕ ಅಸ್ಸಾಂ, ಛತ್ತೀಸ್‌ಗಢ, ಜಾರ್ಖಂಡ್, ಕರ್ನಾಟಕ, ಮಣಿಪುರ, ರಾಜಸ್ಥಾನ ಮತ್ತು ಉತ್ತರಪ್ರದೇಶ ಈ ಏಳು ರಾಜ್ಯಗಳು 31.03.2019ಕ್ಕೆ ಮೊದಲು ಗುರುತಿಸಲಾದ, ಆದರೆ ಆಗ ವಿದ್ಯುತ್‌ ಸಂಪರ್ಕ ಪಡೆಯಲು ಇಚ್ಛೆ ತೋರದ ಸುಮಾರು 18.85 ಲಕ್ಷ ವಿದ್ಯುತ್‌ ಸಂಪರ್ಕರಹಿತ ಕುಟುಂಬಗಳನ್ನು ಈ ಯೋಜನೆಯ ವ್ಯಾಪ್ತಿಗೆ ತಂದಿರುವುದಾಗಿ ವರದಿ ಮಾಡಿವೆ. 

ʻಸೌಭಾಗ್ಯʼ ಇದು ವಿಶ್ವದ ಅತಿದೊಡ್ಡ ಗೃಹ ವಿದ್ಯುದೀಕರಣ ಅಭಿಯಾನಗಳಲ್ಲಿ ಒಂದಾಗಿದೆ. 2017ರ ಸೆಪ್ಟೆಂಬರ್ 25ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻಸೌಭಾಗ್ಯʼ ಯೋಜನೆಯನ್ನು ಘೋಷಿಸಿದರು. ಅಂಚಿನಲ್ಲಿರುವ ಜನರೊಂದಿಗೆ ಸಂಪರ್ಕದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುದ್ದೀಕರಣಗೊಳ್ಳದ ಕುಟುಂಬಗಳು ಮತ್ತು ನಗರ ಪ್ರದೇಶಗಳಲ್ಲಿನ ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ,  ಆ ಮೂಲಕ ದೇಶಾದ್ಯಂತ ಸಾರ್ವತ್ರಿಕ ಗೃಹ ವಿದ್ಯುದೀಕರಣವನ್ನು ಸಾಧಿಸುವುದು  ಈ ಯೋಜನೆಯ ಉದ್ದೇಶ. ಈ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ನವಯುಗದ ಭಾರತದಲ್ಲಿ ಸರ್ವರಿಗೂ ವಿದ್ಯುತ್ ಸಂಪರ್ಕ ಒದಗಿಸುವುದಾಗಿ ಮತ್ತು ಸಮಾನತೆ, ದಕ್ಷತೆ ಹಾಗೂ ಸುಸ್ಥಿರತೆಗಾಗಿ ಕೆಲಸ ಮಾಡುವುದಾಗಿ ಸಂಕಲ್ಪ ತೊಟ್ಟಿದ್ದರು.

ಯೋಜನೆಯ ಒಟ್ಟು ಆರ್ಥಿಕ ವೆಚ್ಚ 16,320  ಕೋಟಿ ರೂಪಾಯಿಗಳು. ಒಟ್ಟು ಆಯವ್ಯಯ ಬೆಂಬಲ (ಜಿಬಿಎಸ್) 12,320 ಕೋಟಿ ರೂಪಾಯಿಗಳು. ಗ್ರಾಮೀಣ ಕುಟುಂಬಗಳಿಗೆ ಮೀಸಲಿಡಲಾದ ಮೊತ್ತ 14,025 ಕೋಟಿ ರೂಪಾಯಿಗಳಾಗಿದ್ದು, ಇದೇ ಬಾಬ್ತಿಗೆ ಒಟ್ಟು ಆಯವ್ಯಯ ಬೆಂಬಲ (ಜಿಬಿಎಸ್) 10,587.50 ಕೋಟಿ ರೂಪಾಯಿಗಳು. ನಗರ ಪ್ರದೇಶಗಳ ಕುಟುಂಬಗಳಿಗೆ ಈ ವೆಚ್ಚವು 2,295 ಕೋಟಿ ರೂ.ಗಳಾಗಿದ್ದರೆ, ಒಟ್ಟು ಆಯವ್ಯಯ ಬೆಂಬಲ (ಜಿಬಿಎಸ್) 1,732.50 ಕೋಟಿ ರೂ. ಆಗಿತ್ತು. ಭಾರತ ಸರಕಾರವು ಈ ಯೋಜನೆಗೆ ಬಹುತೇಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಣವನ್ನು ಒದಗಿಸಿದೆ.

ಹಳ್ಳಿಗಳಲ್ಲಿ ಮೂಲಭೂತ ವಿದ್ಯುತ್ ಮೂಲಸೌಕರ್ಯವನ್ನು ಕಲ್ಪಿಸುವ ಆಲೋಚನೆಯೊಂದಿಗೆ ʻದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆʼಗೆ (ಡಿಡಿಯುಜಿಜೆವೈ) ಚಾಲನೆ ನೀಡುವ ಮೂಲಕ ಈ ಪ್ರಯಾಣ ಪ್ರಾರಂಭವಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಹಾಗೂ ಅಸ್ತಿತ್ವದಲ್ಲಿರುವ ಫೀಡರ್‌ಗಳು/ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಮೀಟರಿಂಗ್‌ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಸಾಮರ್ಥ್ಯ ಹೆಚ್ಚಿಸಲು ಈ ಯೋಜನೆಯಲ್ಲಿ ಗಮನ ಹರಿಸಲಾಯಿತು.

ದೇಶದ ಮೂಲೆ ಮೂಲೆಯನ್ನೂ ಸಂಪರ್ಕಿಸಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯುದ್ದೀಕರಣಗೊಳ್ಳದೆ ಉಳಿದಿರುವ ಎಲ್ಲಾ ಕುಟುಂಬಗಳಿಗೆ ವಿದ್ಯುತ್ ಸಂಪರ್ಕದ ಕಲ್ಪಿಸುವ ಮೂಲಕ ಎಲ್ಲರಿಗೂ ವಿದ್ಯುತ್‌ ಸೌಲಭ್ಯ ದೊರಕಿಸಿಕೊಡುವುದು ಹಾಗೂ ಆ ಮೂಲಕ ದೇಶದಲ್ಲಿ ಸಾರ್ವತ್ರಿಕ ಗೃಹ ವಿದ್ಯುದೀಕರಣ ಗುರಿ ಸಾಧಿಸುವ ಧ್ಯೇಯವನ್ನು ʻಪ್ರಧಾನಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ – ಸೌಭಾಗ್ಯʼ ಹೊಂದಿದೆ.  ಯಾವುದೇ ಕುಟುಂಬಕ್ಕೆ ವಿದ್ಯುತ್‌ ಸಂಪರ್ಕವೆಂದರೆ ಅದು ಹತ್ತಿರದ ಕಂಬದಿಂದ ಮನೆಯ ಕಟ್ಟಡಕ್ಕೆ ಕೇಬಲ್ ಎಳೆಯುವ ಮೂಲಕ ವಿದ್ಯುತ್ ಸಂಪರ್ಕಗಳನ್ನು ಒದಗಿಸುವುದು, ವಿದ್ಯುತ್‌ ಮೀಟರ್‌ಗಳ ಅಳವಡಿಕೆ, ಎಲ್‌ಇಡಿ ಬಲ್ಬ್‌ನೊಂದಿಗೆ ಒಂದೇ ಲೈಟ್ ಪಾಯಿಂಟ್‌ಗೆ ವೈರಿಂಗ್ ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಅಳವಡಿಕೆಯನ್ನು ಒಳಗೊಂಡಿದೆ. 

ಮುಂದಿನ ಹಾದಿ
ಯೋಜನೆಯ ನಿಗದಿತ ಉದ್ದೇಶಗಳನ್ನು ಸಾಧಿಸಲಾಗಿದ್ದರೂ, ಎಲ್ಲರಿಗೂ 24X7 ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಒದಗಿಸುವ ಕೆಲಸವನ್ನು `ಸೌಭಾಗ್ಯ’ ತಂಡ ಮುಂದುವರಿಸಿದೆ. ವಿದ್ಯುದ್ದೀಕರಣಗೊಳ್ಳದ ಯಾವುದೇ ಕುಟುಂಬವನ್ನು ಗುರುತಿಸಲು ಮತ್ತು ನಂತರ ಅವರಿಗೆ ವಿದ್ಯುತ್ ಸಂಪರ್ಕಗಳನ್ನು ಒದಗಿಸಲು ಎಲ್ಲಾ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ವಿಶೇಷ ಅಭಿಯಾನಗಳನ್ನು ಪ್ರಾರಂಭಿಸಲು ವಿನಂತಿಸಲಾಗಿದೆ. ಅದಕ್ಕಾಗಿ ಮೀಸಲಾದ ಉಚಿತ ಸಹಾಯವಾಣಿಯನ್ನೂ ಪ್ರಾರಂಭಿಸಲಾಗಿದೆ.

***(Release ID: 1758083) Visitor Counter : 246