ಕಲ್ಲಿದ್ದಲು ಸಚಿವಾಲಯ

ಪ್ರಸ್ತುತ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಎಂಟು ಕಲ್ಲಿದ್ದಲು ಗಣಿಗಳ ಯಶಸ್ವಿ ಬಿಡ್ಡರ್‌ಗಳೊಂದಿಗೆ ಕಲ್ಲಿದ್ದಲು ಸಚಿವಾಲಯ ಒಪ್ಪಂದಕ್ಕೆ ಸಹಿ ಹಾಕಿದೆ


ಅತಿ ಶೀಘ್ರದಲ್ಲೇ 11 ಕಲ್ಲಿದ್ದಲು ಗಣಿಗಳ ಹರಾಜಿಗೆ ಎರಡನೇ ಪ್ರಯತ್ನ ನಡೆಯಲಿದೆ: ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ

ಮುಂಬರುವ ತಿಂಗಳುಗಳಲ್ಲಿ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜಿಗೆ ಚಾಲನೆ: ಸಚಿವರು

Posted On: 23 SEP 2021 5:16PM by PIB Bengaluru

ವಾಣಿಜ್ಯ ಗಣಿಗಾರಿಕೆಗಾಗಿ ಎರಡನೇ ಕಂತಿನ (ಸಿಎಂಎಸ್‌ಪಿ ಕಾಯ್ದೆಯಡಿ 12ನೇ ಕಂತು ಮತ್ತು ಎಂಎಂಡಿಆರ್ ಕಾಯ್ದೆಯಡಿ 2ನೇ ಕಂತು) ಕಲ್ಲಿದ್ದಲು ಗಣಿಗಳ ಹರಾಜಿಗೆ ಅನುಸಾರವಾಗಿ ಕಲ್ಲಿದ್ದಲು ಸಚಿವಾಲಯವು ಇಂದು ಇಲ್ಲಿ ಎಂಟು ಯಶಸ್ವಿ ಬಿಡ್ಡರ್ ಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿತು.

ಯಶಸ್ವಿ ಬಿಡ್ಡರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಹರಾಜು ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು. ಕಲ್ಲಿದ್ದಲು ವಲಯವನ್ನು ಸುಧಾರಿಸಲು ಮತ್ತು ದೇಶದ ಆರ್ಥಿಕತೆಯ ನೈಜ ಮೌಲ್ಯವನ್ನು ಅನಾವರಣಗೊಳಿಸಲು ಭಾರತ ಸರಕಾರ ಮತ್ತು ಕಲ್ಲಿದ್ದಲು ಸಚಿವಾಲಯ ನಿರಂತರ ಪ್ರಯತ್ನ ಮುಂದುವರಿಸಿವೆ ಎಂದು ಸಚಿವರು ಒತ್ತಿ ಹೇಳಿದರು. ಹರಾಜುಗಳ ಯಶಸ್ಸು ಆತ್ಮನಿರ್ಭರ್ ಭಾರತ್‌ನ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ. ಏಕೆಂದರೆ ಇದು ಭಾರತದ ಕಲ್ಲಿದ್ದಲು ಆಮದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿರುವ ಎಲ್ಲಾ ರಾಜ್ಯಗಳು ತಮಗೆ ಹಂಚಿಕೆಯಾದ ಕಲ್ಲಿದ್ದಲು ಗಣಿಗಳನ್ನು ತೆರೆಯಲು ಅನುಕೂಲ ಮಾಡಿಕೊಡಬೇಕು, ಇದರಿಂದ ಭಾರತವು ತನ್ನ ನಾಗರಿಕರಿಗೆ ಇಂಧನ ಭದ್ರತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ತನ್ನ ಹೇರಳವಾದ ಕಲ್ಲಿದ್ದಲು ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಅವರು ಮನವಿ ಮಾಡಿದರು. ವಾಣಿಜ್ಯ ಗಣಿಗಳ ಹರಾಜಿನ ಮುಂದಿನ ಹಂತವನ್ನು ಅಕ್ಟೋಬರ್/ ನವೆಂಬರ್ 2021ರಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವರು ಘೋಷಿಸಿದರು. ಗಣಿಗಳ ಪೈಕಿ ಹೆಚ್ಚಿನವುಗಳ ವಿವರಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಲಭ್ಯವಿದೆ. ಮತ್ತು ಇನ್ನೂ ಕೆಲವು ಗಣಿಗಳನ್ನು ಪಟ್ಟಿಗೆ ಸೇರಿಸಲಾಗುವುದು ಎಂದರು. ಏತನ್ಮಧ್ಯೆ, ಪ್ರಸ್ತುತ ನಡೆಯುತ್ತಿರುವ ಕಲ್ಲಿದ್ದಲು ಗಣಿಗಳ ಹರಾಜು ಕಂತಿನಲ್ಲಿ ಕೇವಲ ಒಂದೊಂದೇ ಬಿಡ್‌ಗಳನ್ನು ಸ್ವೀಕರಿಸಿರುವ 11 ಕಲ್ಲಿದ್ದಲು ಗಣಿಗಳಿಗೆ ಎರಡನೇ ಹರಾಜು ಪ್ರಯತ್ನಕ್ಕಾಗಿ ಕಲ್ಲಿದ್ದಲು ಸಚಿವಾಲಯವು ಶೀಘ್ರದಲ್ಲೇ ಟೆಂಡರ್ ಕರೆಯಲಿದೆ ಎಂದು ಮಾಹಿತಿ ನೀಡಿದರು.

ಎಂಟು ಕಲ್ಲಿದ್ದಲು ಗಣಿಗಳನ್ನು 6% ರಿಂದ 75.5% ಆದಾಯದ ಪಾಲು ಪಡೆಯುವ ಪಾಲುದಾರಿಕೆಯೊಂದಿಗೆ ಯಶಸ್ವಿಯಾಗಿ ಹರಾಜು ಮಾಡಲಾಗಿದ್ದು, ಸರಾಸರಿ ಶೇಕಡಾವಾರು ಆದಾಯದ ಪಾಲು ~30%. ಗಣಿಗಳ ವಿದ್ಯುನ್ಮಾನ ಹರಾಜನ್ನು ವರ್ಷದ ಆಗಸ್ಟ್ ಮೊದಲ ವಾರದಲ್ಲಿ ನಡೆಸಲಾಯಿತು.

ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿಗೆ ಕಲ್ಲಿದ್ದಲು ಸಚಿವಾಲಯದ ವಹಿವಾಟು ಸಲಹೆಗಾರ ಸಂಸ್ಥೆಯಾದ ʻಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ʼ ಹರಾಜನ್ನು ನಡೆಸಲು ವಿಧಾನಶಾಸ್ತ್ರವನ್ನು ರೂಪಿಸಿತ್ತು ಮತ್ತು ಸಚಿವಾಲಯಕ್ಕೆ ಸಹಾಯ ಮಾಡಿತು.

ಕಲ್ಲಿದ್ದಲು ಗಣಿ/ ಕ್ಷೇತ್ರ ಉತ್ಪಾದನೆ ಮತ್ತು ಅಭಿವೃದ್ಧಿ ಒಪ್ಪಂದಗಳನ್ನು ಕಾರ್ಯಗತಗೊಳಿಸಿದ ಗಣಿಗಳೆಂದರೆ ಭಾಸ್ಕರ್‌ಪರ, ಬುರಾಖಾಪ್ ಸ್ಮಾಲ್‌ ಪ್ಯಾಚ್, ಗೊಂಡ್ಖಾರಿ, ಜೋಗೇಶ್ವರ ಮತ್ತು ಖಾಸ್ ಜೋಗೇಶ್ವರ, ರಾವುತಾ ಮುಚ್ಚಿದ ಗಣಿ, ಭಿವ್‌ಕುಂಡ್, ಜಿಗಾಡೋರ್ ಮತ್ತು ಖಾರ್ಗಾಂವ್. ಯಶಸ್ವಿ ಬಿಡ್ಡರ್‌ಗಳಲ್ಲಿ ʻಸನ್ ಫ್ಲ್ಯಾಗ್ ಐರನ್ ಮತ್ತು ಸ್ಟೀಲ್ ಕಂಪನಿ ಲಿಮಿಟೆಡ್ʼ, ʻಸೌತ್ ವೆಸ್ಟ್ ಪಿನಾಕಲ್ ಎಕ್ಸ್ ಪ್ಲೋರೇಶನ್ ಲಿಮಿಟೆಡ್ʼ, ʻಪ್ರಕಾಶ್ ಇಂಡಸ್ಟ್ರೀಸ್ ಲಿಮಿಟೆಡ್ʼ, ʻಸಿಜಿ ನ್ಯಾಚುರಲ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ʼ, ʻಅದಾನಿ ಪವರ್ ಮಹಾರಾಷ್ಟ್ರ ಲಿಮಿಟೆಡ್ ʼಮತ್ತು ʻಶ್ರೀಸತ್ಯ ಮೈನ್ಸ್ ಪ್ರೈವೇಟ್ ಲಿಮಿಟೆಡ್ʼ ಸೇರಿವೆ.

***



(Release ID: 1757723) Visitor Counter : 189


Read this release in: English , Urdu , Hindi , Punjabi