ಆಯುಷ್  
                
                
                
                
                
                    
                    
                        ಜಮ್ಮು ಮತ್ತು ಕಾಶ್ಮೀರದ ಮೊದಲ ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬಿಯುಎಂಎಸ್ ಕೋರ್ಸ್ ಗಳಿಗೆ ಚಾಲನೆ ನೀಡಲಿರುವ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್
                    
                    
                        
                    
                
                
                    Posted On:
                16 SEP 2021 11:11AM by PIB Bengaluru
                
                
                
                
                
                
                ಗುಂಡೇರ್ ಬಾಲ್ ಜಿಲ್ಲೆಯ ನವಾಬ್ ಭಾಗ್ ನಲ್ಲಿ ಮೊದಲ ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಾರ್ಯಾರಂಭವನ್ನು ಸ್ವಾಗತಿಸಲು ಜಮ್ಮು ಮತ್ತು ಕಾಶ್ಮೀರ ಸಜ್ಜಾಗಿದೆ.  2021ರ ಸೆಪ್ಟಂಬರ್ 17ರಂದು ಕೇಂದ್ರ ಆಯುಷ್ ಮತ್ತು ಬಂದರು, ನೌಕಾ ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಕಾಲೇಜಿನಲ್ಲಿ ಬಿಯುಎಂಎಸ್ (ಬ್ಯಾಚುಲರ್ ಆಫ್ ಯುನಾನಿ ಮೆಡಿಸಿನ್ ಮತ್ತು ಸರ್ಜರಿ) ಕೋರ್ಸ್ ಗಳಿಗೆ ಚಾಲನೆ ನೀಡಲಿದ್ದಾರೆ. ಸಚಿವಾಲಯದ ಅಧಿಕಾರ ವಹಿಸಿಕೊಂಡ ನಂತರ ಸೋನೋವಾಲ್ ಕೈಗೊಳ್ಳುತ್ತಿರುವ ಮೊದಲ ಜಮ್ಮು ಮತ್ತು ಕಾಶ್ಮೀರ ಭೇಟಿ ಇದಾಗಿದೆ.  ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗೌರ್ನರ್ ಶ್ರೀ ಮನೋಜ್ ಸಿನ್ಹಾ ಉಪಸ್ಥಿತರಿರಲಿದ್ದಾರೆ.
ಕೇಂದ್ರದ ಪ್ರಾಯೋಜಕತ್ವ ಯೋಜನೆ (ಸಿಎಸ್ ಎಸ್ ) ಅಡಿಯಲ್ಲಿ ಕಾಶ್ಮೀರದಲ್ಲಿ ಯುನಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆಗೆ ಸುಮಾರು 32.50 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದ್ದು, ಅದರಲ್ಲಿ ಕೇಂದ್ರ ಆಯುಷ್ ಸಚಿವಾಲಯ ಸುಮಾರು 17.00 ಕೋಟಿ ರೂ. ಆರ್ಥಿಕ ನೆರವು ಒದಗಿಸಲಿದೆ. ಇದು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ದೇಶೀಯ ವೈದ್ಯಕೀಯ ಪದ್ದತಿಗಳನ್ನು ಉತ್ತೇಜಿಸಲು, ಅದರಲ್ಲೂ ವಿಶೇಷವಾಗಿ ಕಾಶ್ಮೀರ ವಿಭಾಗದಲ್ಲಿ ಯುನಾನಿ ವೈದ್ಯ ಪದ್ದತಿ ಉತ್ತೇಜಿಸುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮವಾಗಿದೆ. ಈ ಆಸ್ಪತ್ರೆ 136 ಗ್ರಾಮಗಳ ಸುಮಾರು 3 ಲಕ್ಷ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸುವ ನಿರೀಕ್ಷೆ ಇದೆ ಮತ್ತು ನೆರೆಯ ಶ್ರೀನಗರ, ಬಾರಾಮುಲ್ಲಾ ಹಾಗೂ ಬಾಂದಿಪೂರಾ ಜಿಲ್ಲೆಗಳ ಜನಸಂಖ್ಯೆಗೂ ಆರೋಗ್ಯ ಸೇವೆಗಳು ಲಭ್ಯವಾಗಲಿವೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಪರ್ಯಾಯ ಔಷಧಗಳ ಪ್ರಾಮುಖ್ಯತೆಯನ್ನು ಗುರುತಿಸಿದ ಆಯುಷ್ ಸಚಿವಾಲಯವು ಜನರಿಗೆ ಮೂಲಭೂತ ಆರೋಗ್ಯ ಸೇವೆಗಳನ್ನು ಒದಗಿಸಲು ಮತ್ತು ಅವರ ಜೀವನಶೈಲಿ ಸಂಬಂಧಿತ ಅಸ್ವಸ್ಥತೆಗಳನ್ನು ಸುಧಾರಿಸಲು ತೀರ್ಮಾನಿಸಿದೆ. ಕಾಶ್ಮೀರ ವಿಭಾಗದಲ್ಲಿ ಯುನಾನಿ ವೈದ್ಯಕೀಯ ಪದ್ದತಿ ಅತಿ ಹೆಚ್ಚು ಜನಪ್ರಿಯವಾಗಿದ್ದರೆ, ಜಮ್ಮು ವಿಭಾಗದಲ್ಲಿ ಆಯುರ್ವೇದ ಜನಪ್ರಿಯವಾಗಿದೆ ಮತ್ತು ಹೋಮಿಯೋಪಥಿ ಹಾಗೂ ಯೋಗ ಮತ್ತು ನ್ಯಾಚುರೋಪಥಿ ಜಮ್ಮು ಮತ್ತು ಕಾಶ್ಮೀರದ ಎರಡೂ ವಿಭಾಗಗಳಲ್ಲೂ ಸಾಮಾನ್ಯವಾಗಿ ಬಳಕೆಯಲ್ಲಿವೆ.
60 ಹಾಸಿಗೆಗಳ ಈ ಆಸ್ಪತ್ರೆಯಲ್ಲಿನ ಕಾಲೇಜು ವಾರ್ಷಿಕ 60 ಬಿಯುಎಂಎಸ್ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ಅವಕಾಶ ಹೊಂದಿದೆ. 7 ಕ್ಲಿನಿಕಲ್ ವಿಭಾಗಗಳು ಒಳಗೊಂಡಿವೆ, ಅವುಗಳೆಂದರೆ, ಮೋಲಿಜಿತ್ (ಔಷಧ), ಜರಾಹಟ್ (ಸರ್ಜರಿ), ಐನ್-ಉಜ್ನ-ಅನ್ಫ್-ಹಲ್ಕ್ (ಅಪ್ತಾಮಾಲಜಿ ಮತ್ತು ಇಎನ್ ಟಿ), ಇಲ್ಮ್ –ಉಲ್-ಕಬಲತ್ವಾ ನಿಸ್ವಾನ್, (ಪ್ರಸೂತಿ ಮತ್ತು ಸ್ತ್ರೀ ರೋಗ ಶಾಸ್ತ್ರ), ಇಲ್ಮುಲ್ ಅಟ್ಫಲ್ (ಮಕ್ಕಳ ತಜ್ಞರು), ಅಮ್ರಾಜ್ ಜಿಲ್ಡ್ (ಡರ್ಮಟಾಲಜಿ) ಮತ್ತು ಇಲಾಜ್ ಬಿಟ್ ತಡಬೀರ್ (ರೆಜಿಮೆಂಟಲ್ ಥೆರಪಿ) ವಿಭಾಗಗಳು ಕಾಲೇಜಿನಲ್ಲಿರಲಿವೆ.
***
                
                
                
                
                
                (Release ID: 1755395)
                Visitor Counter : 273