ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಕಳೆದ 75 ವರ್ಷಗಳಲ್ಲಿ ವಿದ್ಯುನ್ಮಾನ ಮತ್ತು ಐಟಿ ಕ್ಷೇತ್ರದಲ್ಲಿನ ಕೊಡುಗೆಗಾಗಿ ಟೆಕ್ ಚಾಂಪಿಯನ್ನರನ್ನು ಗೌರವಿಸಲಿರುವ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯ


ಭವಿಷ್ಯದ ತಂತ್ರಜ್ಞರಿಗೆ ಸ್ಫೂರ್ತಿ ತುಂಬುವ ಉಪಕ್ರಮ

Posted On: 15 SEP 2021 6:45PM by PIB Bengaluru

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು, ವಿದ್ಯುನ್ಮಾನ ಮತ್ತು ಐಟಿ ರಂಗದಲ್ಲಿ ವಿಜ್ಞಾನಿಗಳು /ತಂತ್ರಜ್ಞರು ನೀಡಿರುವ ಅದ್ಭುತ ಕೊಡುಗೆಯನ್ನು ಗೌರವಿಸಲು ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದ್ದಾರೆ. ಈ ಉಪಕ್ರಮದ ಭಾಗವಾಗಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ.ಇ.ಐ.ಟಿ.ವೈ)ವು, ಕಳೆದ 75 ವರ್ಷಗಳಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನೀಡಿದ ಅದ್ಭುತ ಕೊಡುಗೆ ಕುರಿತಂತೆ ವಿಜ್ಞಾನಿಗಳು/ತಂತ್ರಜ್ಞರಿಂದ ನಾಮಾಂಕನಗಳನ್ನು www.innovateindia.mygov.in ವೆಬ್ ಪೋರ್ಟಲ್ ನಲ್ಲಿ ಆಹ್ವಾನಿಸಿದೆ.

ಈ ನಾಮಾಂಕನಗಳನ್ನು ದೇಶಾದ್ಯಂತದ ಜನರಿಂದ ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀ ಚಂದ್ರಶೇಖರ್ ಅವರು, ದೇಶದ ಯುವಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವುದರಲ್ಲಿ ಬಲವಾದ ನಂಬಿಕೆ ಇಟ್ಟಿರುವ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದರ್ಶಿತ್ವದ ಬಗ್ಗೆ  ಮಾತನಾಡಿದರು. ಭಾರತವನ್ನು ಆತ್ಮನಿರ್ಭರ ಭಾರತವಾಗಿ ಪರಿವರ್ತಿಸಲು ಪ್ರಧಾನಮಂತ್ರಿಯವರು ಕರೆ ನೀಡಿದ್ದಾರೆ. ಈ ಗುರಿಯನ್ನು ಸಾಧಿಸಲು ಜ್ಞಾನ ಮತ್ತು ಹೊಸತನದ ದೃಢವಾದ ಪರಿಸರ ವ್ಯವಸ್ಥೆಯು ಕಡ್ಡಾಯವಾಗಿದೆ ಎಂಬುದು ಪ್ರಧಾನಮಂತ್ರಿಯವರ ನಿಲುವಾಗಿದೆ ಎಂದರು.

ಕೋವಿಡೋತ್ತರ ಜಾಗತಿಕ ಸನ್ನಿವೇಶ ಭಾರತಕ್ಕೆ ಅಪಾರ ಅವಕಾಶಗಳನ್ನು ನೀಡುತ್ತದೆ, ಕಾರಣ ದೇಶಗಳು ತಮ್ಮ ತಂತ್ರಜ್ಞಾನ ಪೂರೈಕೆ ಸರಪಳಿಯನ್ನು ಮರು ಹೊಂದಾಣಿಕೆ ಮಾಡಿಕೊಳ್ಳಲು ಭಾರತದತ್ತ ನೋಡುತ್ತಿವೆ ಎಂದು ಶ್ರೀ ಚಂದ್ರಶೇಖರ್ ಉಲ್ಲೇಖಿಸಿದರು. ಭಾರತ, ಕಳೆದ 75 ವರ್ಷಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನ ಶಕ್ತಿಯನ್ನು ಸಾಬೀತು ಮಾಡಿದೆ ಮತ್ತು ಮುಂದಿನ 25 ವರ್ಷಗಳಲ್ಲಿ ಅದರ ಬೆಳವಣಿಗೆ ಪಥವನ್ನು ವಿದ್ಯುನ್ಮಾನ ಮತ್ತು ಐಟಿ ವಲಯ ಬಲವಾಗಿ ಮುನ್ನಡೆಸುತ್ತದೆ ಎಂದರು.

ತಮ್ಮ ಸಚಿವಾಲಯವು ಈ ಎಲ್ಲ ಅವಕಾಶಗಳನ್ನೂ ಬಳಸಿಕೊಂಡು ಮಾನ್ಯ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಂಪೂರ್ಣವಾಗಿ ಬದ್ಧವಾಗಿದೆ. ಆ ಪ್ರಕಾರವಾಗಿ, ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯವು ಸ್ವಾತಂತ್ರ್ಯಾನಂತರ ವಿದ್ಯುನ್ಮಾನ ಮತ್ತು ಐಟಿ ಕ್ಷೇತ್ರದಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಲು ಒಂದು ಹೊಸ ಉಪಕ್ರಮವನ್ನು ಆರಂಭಿಸಿದೆ. ಈ ಉಪಕ್ರಮವು  ವಿಜ್ಞಾನಿಗಳು/ ತಂತ್ರಜ್ಞರ ವೈಜ್ಞಾನಿಕ ಕಾರ್ಯ ಮತ್ತು ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ, ಇದು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ವಿಜ್ಞಾನಿಗಳು ಮತ್ತು ತಾಂತ್ರಿಕ ನಾವೀನ್ಯದಾರರಿಗೆ ಸ್ಫೂರ್ತಿ ನೀಡುತ್ತದೆ.

ನಾಮಾಂಕನಗಳನ್ನು ಇಂದಿನಿಂದ ಆಹ್ವಾನಿಸಲಾಗಿದ್ದು, ನಾಮಾಂಕನ ಸಲ್ಲಿಸಲು 2021ರ ನವೆಂಬರ್ 7 ಕೊನೆಯ ದಿನವಾಗಿದೆ.

ಆಯ್ಕೆ ಮಾಡಲಾದ ವಿಜ್ಞಾನಿಗಳು/ತಂತ್ರಜ್ಞರ ಹೆಸರುಗಳನ್ನು ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಎಂ.ಇ.ಐ.ಟಿ.ವೈ ಪ್ರಕಟಿಸಲಿದೆ.

ಈ ಕಾರ್ಯಕ್ರಮದಲ್ಲಿ ಎಂ.ಇ.ಐ.ಟಿ.ವೈ ಕಾರ್ಯದರ್ಶಿ, ಎಂ.ಇ.ಐ.ಟಿ.ವೈನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಹೆಸರಾಂತ ಶಿಕ್ಷಣತಜ್ಞ ಪ್ರೊ. ಎಸ್. ಶಡೋಪನ್, ಪ್ರೊ. ಯು.ಬಿ. ದೇಸಾಯಿ, ಪ್ರೊ. ಭಾಸ್ಕರ್ ಮೊದಲಾದವರು ಭಾಗಿಯಾಗಿದ್ದರು.

***



(Release ID: 1755269) Visitor Counter : 255


Read this release in: English , Urdu , Hindi , Punjabi