ನೀತಿ ಆಯೋಗ
azadi ka amrit mahotsav

ನೀತಿ ಆಯೋಗ, ಆರ್‌ಎಂಐ ಮತ್ತು ಆರ್‌ಎಂಐ ಇಂಡಿಯಾದಿಂದ 'ಶೂನ್ಯ' ಅಭಿಯಾನಕ್ಕೆ ಚಾಲನೆ

ಅಭಿಯಾನದ ಭಾಗವಾಗಿ 30 ಕ್ಕೂ ಹೆಚ್ಚು ಇ-ಕಾಮರ್ಸ್, ಒಇಎಂಗಳು, ಫ್ಲೀಟ್ ಅಗ್ರಿಗೇಟರ್‌ಗಳು, ಮೂಲಸೌಕರ್ಯ ಕಂಪನಿಗಳು ಕಟ್ಟಕಡೆಯ ಹಂತದ ವಿತರಣೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಮೂಲಕ ಕೈ ಜೋಡಿಸಿವೆ

Posted On: 15 SEP 2021 5:12PM by PIB Bengaluru

ಗ್ರಾಹಕರು ಮತ್ತು ಉದ್ಯಮದೊಂದಿಗೆ ಸೇರಿ ಶೂನ್ಯ ಮಾಲಿನ್ಯಕಾರಕ ವಿತರಣಾ ವಾಹನಗಳನ್ನು ಉತ್ತೇಜಿಸುವ ಉಪಕ್ರಮವಾದ ಶೂನ್ಯ ಅಭಿಯಾನಕ್ಕೆ ಇಂದು ನೀತಿ ಆಯೋಗವು ಆರ್‌ಎಂಐ ಮತ್ತು ಆರ್‌ಎಂಐ ಇಂಡಿಯಾ ಬೆಂಬಲದೊಂದಿಗೆ ಚಾಲನೆ ನೀಡಿತು. ನಗರ ಪ್ರದೇಶಗಳ ವಿತರಣಾ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಅಳವಡಿಸಿಕೊಳ್ಳುವುದನ್ನು ವೇಗಗೊಳಿಸಲು ಮತ್ತು ಶೂನ್ಯ-ಮಾಲಿನ್ಯದ ಪ್ರಯೋಜನಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.

ಇ-ಕಾಮರ್ಸ್ ಕಂಪನಿಗಳು, ಫ್ಲೀಟ್ ಅಗ್ರಿಗೇಟರ್‌ಗಳು, ಮೂಲ ಸಲಕರಣೆ ತಯಾರಕರು (ಒಇಎಂ) ಮತ್ತು ಲಾಜಿಸ್ಟಿಕ್ಸ್ ಕಂಪನಿಗಳಂತಹ ಉದ್ಯಮದ ಪಾಲುದಾರರು ಕಟ್ಟಕಡೆಯ ಹಂತದ ವಿತರನೆಯಲ್ಲಿ ವಿದ್ಯುದ್ದೀಕರಣದ ಕಡೆಗೆ ತಮ್ಮ ಪ್ರಯತ್ನಗಳನ್ನು ಹೆಚ್ಚಿಸುತ್ತಿದ್ದಾರೆ. ಆರಂಭದಲ್ಲಿ, ಮಹೀಂದ್ರಾ ಎಲೆಕ್ಟ್ರಿಕ್, ಟಾಟಾ ಮೋಟಾರ್ಸ್, ಜೊಮಾಟೊ, ಅಶೋಕ ಲೇಲ್ಯಾಂಡ್, ಸನ್ ಮೊಬಿಲಿಟಿ, ಲೈಟ್ನಿಂಗ್ ಲಾಜಿಸ್ಟಿಕ್ಸ್, ಬಿಗ್ ಬಾಸ್ಕೆಟ್, ಬ್ಲೂಡಾರ್ಟ್, ಹೀರೋ ಎಲೆಕ್ಟ್ರಿಕ್ ಮತ್ತು ಸ್ವಿಗ್ಗಿ ಸೇರಿದಂತೆ ಸುಮಾರು 30 ಕಂಪನಿಗಳು ಅಭಿಯಾನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಚಾಲನಾ ಸಭೆಯಲ್ಲಿ ಭಾಗವಹಿಸಿದರು. ನಂತರದಲ್ಲಿ, ಉದ್ಯಮದ ಇತರರನ್ನೂ ಈ ಉಪಕ್ರಮಕ್ಕೆ ಸೇರಲು ಆಹ್ವಾನಿಸಲಾಗುತ್ತದೆ.

ಅಭಿಯಾನದ ಭಾಗವಾಗಿ, ಕಟ್ಟಕಡೆಯ ಹಂತದ ವಿತರಣೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತಿಸುವ ಕಡೆಗೆ ಉದ್ಯಮದ ಪ್ರಯತ್ನಗಳನ್ನು ಗುರುತಿಸಲು ಮತ್ತು ಉತ್ತೇಜಿಸಲು ಕಾರ್ಪೊರೇಟ್ ಬ್ರ್ಯಾಂಡಿಂಗ್ ಮತ್ತು ಸರ್ಟಿಫಿಕೇಶನ್ ಪ್ರೋಗ್ರಾಂ ಅನ್ನು ಆರಂಭಿಸಲಾಗಿದೆ. ಆನ್‌ಲೈನ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಎಲೆಕ್ಟ್ರಿಕ್ ವಾಹನಗಳಿಂದಾದ ಇಂಗಾಲದ ಉಳಿತಾಯ, ಮಾಲಿನ್ಯಕಾರಕ ಉಳಿತಾಯ ಮತ್ತಿತರ ಪ್ರಯೋಜನಗಳಂತಹ ಮಾಹಿತಿಯ ಮೂಲಕ ಅಭಿಯಾನದ ಪರಿಣಾಮವನ್ನು ಹಂಚಿಕೊಳ್ಳುತ್ತದೆ.

ಅಭಿಯಾನದ ಪ್ರಾಥಮಿಕ ಉದ್ದೇಶದ ಬಗ್ಗೆ ಮಾತನಾಡಿದ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, "ಶೂನ್ಯ ಅಭಿಯಾನದ ಮೂಲಕ ಎಲೆಕ್ಟ್ರಿಕ್ ವಾಹನಗಳಿಂದ ಆರೋಗ್ಯ, ಪರಿಸರ ಮತ್ತು ಆರ್ಥಿಕತೆಯ ಮೇಲಾಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ನಗರ ಸರಕು ವಲಯದಿಂದ ಮಾಲಿನ್ಯವನ್ನು ತೊಡೆದುಹಾಕುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಇ-ಕಾಮರ್ಸ್ ಕಂಪನಿಗಳು, ವಾಹನ ತಯಾರಕರು ಮತ್ತು ಲಾಜಿಸ್ಟಿಕ್ಸ್ ಫ್ಲೀಟ್ ಆಪರೇಟರ್‌ಗಳಿಗೆ ಒತ್ತಾಯಿಸುತ್ತೇನೆ. ನಮ್ಮ ಖಾಸಗಿ ಕ್ಷೇತ್ರವು ಶೂನ್ಯ ಅಭಿಯಾನವನ್ನು ಯಶಸ್ವಿಗೊಳಿಸುವ ವಿಶ್ವಾಸವಿದೆ” ಎಂದರು.

ಸ್ವಚ್ಛ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ತುರ್ತು ಅಗತ್ಯದ ಬಗ್ಗೆ ಮಾತನಾಡಿದ ಆರ್‌ಎಂಐ ವ್ಯವಸ್ಥಾಪಕ ನಿರ್ದೇಶಕ ಕ್ಲೇ ಸ್ಟ್ರೇಂಜರ್, "ಭಾರತವು ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಭವಿಷ್ಯದತ್ತ ಮುನ್ನಡೆಯುತ್ತಿರುವುದರಿಂದ ಸ್ವಚ್ಛ ಸಾರಿಗೆಗೆ ಪರಿವರ್ತನೆಗೊಳ್ಳುವುದು ನಿರ್ಣಾಯಕವಾಗಿದೆ. ಸ್ಪರ್ಧಾತ್ಮಕ ಆರ್ಥಿಕತೆ ಮತ್ತು ಲಭ್ಯವಿರುವ ತಂತ್ರಜ್ಞಾನವು ಭಾರತದ ನಗರ ವಿತರಣಾ ವಾಹನಗಳ ಸಂಪೂರ್ಣ ವಿದ್ಯುದೀಕರಣವನ್ನು ಬೆಂಬಲಿಸುತ್ತದೆ, ಇದು ಇತರ ಮಾರುಕಟ್ಟೆ ವಿಭಾಗಗಳು ಅನುಸರಿಸುವಂತಹ ಪರಿಣಾಮಗಳನ್ನು ಸೃಷ್ಟಿಸುತ್ತದೆ.” ಎಂದರು.

ಭಾರತದಲ್ಲಿ ಸರಕು ಸಾಗಣೆ-ಸಂಬಂಧಿತ ವಾಹನಗಳ ಇಂಗಾಲ ಹೊರಸೂಸುವಿಕೆಯ 10 ಪ್ರತಿಶತದಷ್ಟು ನಗರ ಸರಕು ವಾಹನಗಳದಾಗಿದೆ. ಈ ಹೊರಸೂಸುವಿಕೆಗಳು 2030 ರ ವೇಳೆಗೆ 114 ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಯಾವುದೇ ಟೈಲ್ ಪೈಪ್ ಹೊರಸೂಸುವಿಕೆ ಇರುವುದಿಲ್ಲ, ಇದು ಸುಧಾರಿತ ಗಾಳಿಯ ಗುಣಮಟ್ಟಕ್ಕೆ ಅಪಾರ ಕೊಡುಗೆ ನೀಡುತ್ತದೆ. ಅವುಗಳ ತಯಾರಿಕೆಯ ಸಮಯದಲ್ಲಿಯೂ ಸಹ, ಆಂತರಿಕ ದಹನಕಾರಿ ಎಂಜಿನ್ ವಾಹನಗಳಿಗೆ ಹೋಲಿಸಿದರೆ ಶೇಕಡಾ 15-40 ರಷ್ಟು ಕಡಿಮೆ ಇಂಗಾಲವನ್ನು ಹೊರಸೂಸುತ್ತವೆ ಮತ್ತು ಕಡಿಮೆ ಕಾರ್ಯಾಚರಣೆಯ ವೆಚ್ಚವನ್ನು ಹೊಂದಿರುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡಲು ನೀತಿಗಳನ್ನು ಪರಿಚಯಿಸಿವೆ, ಇದು ಬಂಡವಾಳದ ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ.

***(Release ID: 1755204) Visitor Counter : 143