ಹಣಕಾಸು ಸಚಿವಾಲಯ
azadi ka amrit mahotsav

ಬೆಂಗಳೂರು ಮೆಟ್ರೋ ರೈಲು ಜಾಲ ವಿಸ್ತರಣೆಗೆ 500 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಭಾರತ, ಎಡಿಬಿ ಸಹಿ

Posted On: 23 AUG 2021 6:49PM by PIB Bengaluru

ಒಟ್ಟು 56 ಕಿಮೀ ಉದ್ದದ ಎರಡು ಹೊಸ ಮೆಟ್ರೋ ಮಾರ್ಗಗಳ ನಿರ್ಮಾಣದೊಂದಿಗೆ ಬೆಂಗಳೂರಿನಲ್ಲಿ ಮೆಟ್ರೋ ರೈಲು ಜಾಲವನ್ನು ವಿಸ್ತರಿಸಲು ಭಾರತ ಸರ್ಕಾರ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಇಂದು 500 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಸಹಿ ಹಾಕಿದವು.

ಬೆಂಗಳೂರು ಮೆಟ್ರೋ ರೈಲು ಯೋಜನೆ ಸಾಲ ಒಪ್ಪಂದಕ್ಕೆ ಭಾರತ ಸರ್ಕಾರದ ಪರವಾಗಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ರಜತ್ ಕುಮಾರ್ ಮಿಶ್ರಾ ಮತ್ತು ಎಡಿಬಿಯ ಭಾರತದ ನಿರ್ದೇಶಕ ಶ್ರೀ ಟೇಕೊ ಕೊನಿಶಿ ಎಡಿಬಿ ಪರವಾಗಿ ಸಹಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಿಶ್ರಾ, "ಹೊಸ ಮೆಟ್ರೋ ಮಾರ್ಗಗಳು ಬೆಂಗಳೂರಿನಲ್ಲಿ ಸುರಕ್ಷಿತ, ಕೈಗೆಟುಕುವ ಮತ್ತು ಹಸಿರು ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತವೆ, ಜೀವನದ ಗುಣಮಟ್ಟವನ್ನು ಹೆಚ್ಚಿಸಲು, ನಗರದ ಸುಸ್ಥಿರ ಬೆಳವಣಿಗೆ ಮತ್ತು ಜೀವನೋಪಾಯದ ಅವಕಾಶಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ" ಎಂದು ಹೇಳಿದರು.

"ಈ ಯೋಜನೆಯು ಬೆಂಗಳೂರು ನಗರವನ್ನು ಹೆಚ್ಚು ವಾಸಯೋಗ್ಯ ಮತ್ತು ಸುಸ್ಥಿರ ನಗರವಾಗಿ ಪರಿವರ್ತಿಸಲು ನಗರ ಸಾರ್ವಜನಿಕ ಸಾರಿಗೆ ಮತ್ತು ನಗರಾಭಿವೃದ್ಧಿಗೆ ಬೆಂಬಲ ನೀಡುತ್ತದೆ. ಸಾರಿಗೆ-ಆಧಾರಿತ ಅಭಿವೃದ್ಧಿ (ಟಿಒಡಿ) ಮತ್ತು ಬಹು ವಿಧಾನಗಳ ಏಕೀಕರಣ (ಎಂಎಂಐ) ಪರಿಕಲ್ಪನೆಗಳನ್ನು ಬೆಂಬಲಿಸುತ್ತದೆ" ಎಂದು ಶ್ರೀ ಕೋನಿಶಿ ಹೇಳಿದರು. "ಈ ಯೋಜನೆಯು ರಸ್ತೆ ದಟ್ಟಣೆ, ಉತ್ತಮ ನಗರ ವಾಸ ಮತ್ತು ಪರಿಸರ ಸುಧಾರಣೆ ಸೇರಿದಂತೆ ವಿವಿಧ ಪ್ರಯೋಜನಗಳನ್ನು ನೀಡುತ್ತದೆ." ಎಂದೂ ಅವರು ಹೇಳಿದರು.

ಸಾರಿಗೆ ಆಧಾರಿತ ನಗರಾಭಿವೃದ್ಧಿ ಮಾದರಿಯು ಹೆಚ್ಚಿನ ಸಾಂದ್ರತೆ, ಮಿಶ್ರ ಬಳಕೆ, ಮಿಶ್ರ ಆದಾಯ, ಸುರಕ್ಷಿತ ಮತ್ತು ಸಂಪನ್ಮೂಲ ದಕ್ಷ ಮತ್ತು ಅಂತರ್ಗತ ನೆರೆಹೊರೆಗಳನ್ನು ಸೃಷ್ಟಿಸುವ ಮೂಲಕ ಮರುಹೊಂದಿಕೆಯ ಬೆಳವಣಿಗೆಯ ಗುರಿಯನ್ನು ಹೊಂದಿದೆ ಮತ್ತು ನಗರದ ಆರ್ಥಿಕ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಸಾರಿಗೆ-ಆಧಾರಿತ ಅಭಿವೃದ್ಧಿಯು ಈ ಕಾರಿಡಾರ್‌ಗಳ ಉದ್ದಕ್ಕೂ ಭೂಮಿಯ ಮೌಲ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ನಗರದ ದೀರ್ಘಕಾಲೀನ ಹೂಡಿಕೆಯ ಅಗತ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರಕ್ಕೆ ಬಂಡವಾಳ ಆದಾಯವನ್ನು ಸೃಷ್ಟಿಸುತ್ತದೆ. ಸಾರ್ವಜನಿಕ ಸಾರಿಗೆಯ ವಿವಿಧ ವಿಧಾನಗಳ ತಡೆರಹಿತ ಏಕೀಕರಣದ ಮೂಲಕ ಬೆಂಗಳೂರಿನ ನಿವಾಸಿಗಳಿಗೆ ಜನ ಕೇಂದ್ರಿತ, ಪರಿಸರ ಸ್ನೇಹಿ ಪರಿಹಾರಗಳನ್ನು ಮತ್ತು ಸುರಕ್ಷಿತ, ಸಂಚಾರ ವ್ಯವಸ್ಥೆಯನ್ನು ಒದಗಿಸುವ ಗುರಿಯನ್ನು ಬಹು ವಿಧಾನಗಳ ಏಕೀಕರಣ ವ್ಯವಸ್ಥೆ ಹೊಂದಿದೆ.

ಈ ಯೋಜನೆಯು ಎರಡು ಹೊಸ ಮೆಟ್ರೋ ಮಾರ್ಗಗಳನ್ನು ನಿರ್ಮಿಸುತ್ತದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಹೊರವರ್ತುಲ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ 44 ರ ಉದ್ದಕ್ಕೂ 30 ನಿಲ್ದಾಣಗಳನ್ನು ಹೊಂದಿರುವ ಮಾರ್ಗವು ಬಹುತೇಕ ಎತ್ತರಿಸಿದ ಮಾರ್ಗವಾಗಿರುತ್ತವೆ. ಇದು ನಗರ ಪ್ರದೇಶದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ವಿಮಾನ ನಿಲ್ದಾಣಕ್ಕೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ವೃದ್ಧರು, ಮಹಿಳೆಯರು, ಮಕ್ಕಳು ಮತ್ತು ಅಂಗವಿಕಲ ವ್ಯಕ್ತಿಗಳಂತಹ ದುರ್ಬಲ ವರ್ಗಗಳ ಅಗತ್ಯಗಳು ಮೆಟ್ರೋ ಸೌಲಭ್ಯಗಳಲ್ಲಿ ಪ್ರತಿಫಲಿಸುತ್ತವೆ.

ಎಡಿಬಿಯಿಂದ ಹೆಚ್ಚುವರಿ 2 ಮಿಲಿಯನ್ ಡಾಲರ್ ತಾಂತ್ರಿಕ ನೆರವು ಅನುದಾನವು ರಾಜ್ಯ ಸರ್ಕಾರವು ನಗರಾಭಿವೃದ್ಧಿ ಯೋಜನೆಗಳನ್ನು ಮತ್ತು ಅವುಗಳ ಅನುಷ್ಠಾನ ಚೌಕಟ್ಟುಗಳನ್ನು ರೂಪಿಸಲು ಹಾಗೂ ಟಿಒಡಿ ಮತ್ತು ಎಂಎಂಐ ಮೇಲೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.ಈ ಉಪಕ್ರಮಗಳನ್ನು ಅನುಷ್ಠಾನಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಮತ್ತು ರಾಜ್ಯದ ಇತರ ಸಂಸ್ಥೆಗಳ ಸಾಮರ್ಥ್ಯವನ್ನು ಬಲಪಡಿಸಲು ಅನುದಾನವನ್ನು ಬಳಸಲಾಗುವುದು.

ತೀವ್ರ ಬಡತನವನ್ನು ನಿವಾರಣೆಯ ಪ್ರಯತ್ನಗಳೊಂದಿಗೆ ಸಮೃದ್ಧ, ಅಂತರ್ಗತ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಗುರಿ ಸಾಧಿಸಲು ಎಡಿಬಿಯು ಬದ್ಧವಾಗಿದೆ. 1966 ರಲ್ಲಿ ಸ್ಥಾಪಿಸಲಾದ ಎಡಿಬಿಯಲ್ಲಿ 68 ಸದಸ್ಯ ರಾಷ್ಟ್ರಗಳಿದ್ದು, ಈ ಪ್ರದೇಶದ 49 ಸದಸ್ಯ ರಾಷ್ಟ್ರಗಳಿವೆ.

***


(Release ID: 1748357) Visitor Counter : 276