ಉಪರಾಷ್ಟ್ರಪತಿಗಳ ಕಾರ್ಯಾಲಯ

ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಯುವಕರಿಗೆ ಅರಿವು ಮೂಡಿಸುವ ಅಗತ್ಯವಿದೆ: ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು


ಯುವ ಪೀಳಿಗೆಯನ್ನು ಪ್ರೇರೇಪಿಸಲು ಶ್ರೀ ಕೃಷ್ಣದೇವರಾಯರಂತಹ ಮಹಾನ್ ದೊರೆಗಳ ಕಥೆಗಳನ್ನು ಇತಿಹಾಸ ಪುಸ್ತಕಗಳಲ್ಲಿ ಸೇರಿಸಬೇಕು: ಉಪರಾಷ್ಟ್ರಪತಿ

ಯುನೆಸ್ಕೋ ವಿಶ್ವ ಪರಂಪರೆಯ ತಾಣ ಹಂಪಿಗೆ ಉಪರಾಷ್ಟ್ರಪತಿ ಭೇಟಿ

ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ರಕ್ಷಣೆಗೆ ಉಪರಾಷ್ಟ್ರಪತಿ ಕರೆ

Posted On: 21 AUG 2021 5:05PM by PIB Bengaluru

ಯುವಜನರಿಗೆ ನಮ್ಮ ಗತವೈಭವ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಯುವ ಪೀಳಿಗೆಯನ್ನು ಪ್ರೇರೇಪಿಸಲು ಶ್ರೀ ಕೃಷ್ಣದೇವರಾಯರಂತಹ ಮಹಾನ್ ದೊರೆಗಳ ಕಥೆಗಳನ್ನು ನಮ್ಮ ಇತಿಹಾಸ ಪುಸ್ತಕಗಳಲ್ಲಿ ಪ್ರಮುಖವಾಗಿ ಸೇರಿಸಬೇಕು ಎಂದು ಎಂದು ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ತಾಣ ಹಂಪಿಗೆ ಭೇಟಿ ನೀಡಿದ ನಂತರ ಉಪರಾಷ್ಟ್ರಪತಿಯವರು ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. ಈ ಐತಿಹಾಸಿಕ ತಾಣವು ನಮ್ಮ ಶ್ರೀಮಂತ ಮತ್ತು ರೋಮಾಂಚಕ ಗತವೈಭವವನ್ನು ನೆನಪಿಸುತ್ತದೆ ಎಂದು ಉಪರಾಷ್ಟ್ರಪತಿಯವರು ಹೇಳಿದ್ದಾರೆ. "ನಮ್ಮ ಶ್ರೀಮಂತ ಮತ್ತು ಭವ್ಯ ಪರಂಪರೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುವಂತೆ ವಿದ್ಯಾರ್ಥಿಗಳ ಪ್ರವಾಸವನ್ನು ಐತಿಹಾಸಿಕ ಪ್ರಾಮುಖ್ಯದ ಸ್ಥಳಗಳಿಗೆ ಆಯೋಜಿಸಲು ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಭವ್ಯತೆ ಮತ್ತು ವೈಭವವನ್ನು ಶ್ಲಾಘಿಸಿರುವ ಶ್ರೀ ನಾಯ್ಡು, ಈ ಐತಿಹಾಸಿಕ ಯಾತ್ರೆಯು ನಮ್ಮ ಪೂರ್ವಜರ ದೂರದೃಷ್ಟಿ ಮತ್ತು ಕೌಶಲ್ಯಗಳ ಬಗ್ಗೆ ನನ್ನಲ್ಲಿ ಹೆಮ್ಮೆಯ ಭಾವವನ್ನು ಮೂಡಿಸಿತು ಎಂದು ಹೇಳಿದ್ದಾರೆ.

ಕೃಷ್ಣಾ ಮತ್ತು ತುಂಗಭದ್ರಾ ನದಿಯ ನಡುವೆ 1336 ರಲ್ಲಿ ಹರಿಹರ ರಾಯ -1 ಮತ್ತು ಬುಕ್ಕ ರಾಯ -1 ಸಹೋದರರಿಂದ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯವು ಚಕ್ರವರ್ತಿ ಶ್ರೀಕೃಷ್ಣದೇವರಾಯನ ಆಳ್ವಿಕೆಯಲ್ಲಿ ಸುವರ್ಣಯುಗವನ್ನು ತಲುಪಿತು. ಈ ಅವಧಿಯಲ್ಲಿ, ಪ್ರಪಂಚದಾದ್ಯಂತ ವ್ಯಾಪಾರವು ವಿಸ್ತರಿಸಿತು. ಸಂಗೀತ, ನೃತ್ಯ, ಸಾಹಿತ್ಯ, ಚಿತ್ರಕಲೆ, ಶಿಲ್ಪಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳು ಹೊಸ ಉತ್ತುಂಗವನ್ನು ಕಂಡವು ಮತ್ತು ಇತಿಹಾಸದಲ್ಲಿ ಅಳಿಸಲಾಗದ ಮುದ್ರೆಯನ್ನು ಒತ್ತಿದವು. "ಈ ಅವಧಿಯಲ್ಲಿ ತೆಲುಗು ಸಾಹಿತ್ಯವು ವೈಭವದ ಎತ್ತರವನ್ನು ತಲುಪಿತು ಮತ್ತು ವಿಜಯನಗರವು ಮಧ್ಯಕಾಲೀನ ಭಾರತದ ಅತ್ಯಂತ ಪ್ರಸಿದ್ಧ ಮಹಾನಗರವಾಯಿತು" ಎಂದು ಉಪರಾಷ್ಟ್ರಪತಿಯವರು ಬರೆದಿದ್ದಾರೆ.

ಚಕ್ರವರ್ತಿ ಶ್ರೀಕೃಷ್ಣದೇವರಾಯನ ಕೊಡುಗೆಗಳನ್ನು ನೆನಪಿಸಿಕೊಂಡ ಉಪರಾಷ್ಟ್ರಪತಿಯವರು, ಕೃಷ್ಣದೇವರಾಯ ಮಹಾನ್ ಸಾಹಿತಿ-ದೊರೆ, ಅವರು ತೆಲುಗಿನ ಮಹಾಕಾವ್ಯ ಅಮುಕ್ತ ಮಾಲ್ಯದಾ ರಚಿಸಿದರು, ಇದು ಲಕ್ಷ್ಮಿ ದೇವಿಯ ಅವತಾರವಾದ ಆಂಡಾಳ್ ಅನುಭವಿಸಿದ ವಿರಹದ ವೇದನೆಯನ್ನು ವಿವರಿಸುತ್ತದೆ. ಚಕ್ರವರ್ತಿಯ ಆಸ್ಥಾನದಲ್ಲಿದ್ದ 'ಅಷ್ಟದಿಗ್ಗಜರು' ಎಂದು ಹೆಸರಾದ ಎಂಟು ಮಂದಿ ಪ್ರಸಿದ್ಧ ವಿದ್ವಾಂಸರು ಮತ್ತು ಕವಿಗಳನ್ನು ಪಟ್ಟಿ ಮಾಡಿರುವ ಶ್ರೀ ನಾಯ್ಡು, ಈ ಮಹಾನ್ ಸಾಹಿತಿಗಳಾದ ಅಲ್ಲಸಾನಿ ಪೆದ್ದಣ್ಣ, ನಂದಿ ತಿಮ್ಮಣ್ಣ, ಮಾದಯ್ಯಗರಿ ಮಲ್ಲಣ್ಣ, ಧೂರ್ಜಟಿ, ಅಯ್ಯಲರಾಜು ರಾಮಭದ್ರುಡು, ಪಿಂಗಳಿ ಸೂರಣ್ಣ, ರಾಮರಾಜಭೂಷಣುಡು ಮತ್ತು ತೆನಾಲಿ ರಾಮಕೃಷ್ಣ ಒಟ್ಟಾಗಿ ತೆಲುಗು ಸಾಹಿತ್ಯ ಮತ್ತು ಕಾವ್ಯವನ್ನು ಅಸಾಧಾರಣ ಎತ್ತರ ಮತ್ತು ಶ್ರೇಷ್ಠತೆಗೆ ಕೊಂಡೊಯ್ದರು ಎಂದು ಹೇಳಿದ್ದಾರೆ.

ಕೋಟೆಗಳು, ಅರಮನೆಗಳು, ದೇವಾಲಯಗಳು ಮತ್ತು ಮಾರುಕಟ್ಟೆ ಸ್ಥಳಗಳ ಅವಶೇಷಗಳು ವಿಜಯನಗರ ಸಾಮ್ರಾಜ್ಯದ ವೈಭವಕ್ಕೆ ಸಾಕ್ಷಿಯಾಗಿವೆ ಎಂದು ಶ್ರೀ ನಾಯ್ಡು ಬರೆದಿದ್ದಾರೆ. ಹಂಪಿಯಲ್ಲಿರುವ ಪ್ರತಿಯೊಂದು ಸ್ಮಾರಕವು ಒಂದು ವಿಶಿಷ್ಟತೆಯನ್ನು ಹೊಂದಿದ್ದು, ಇದು ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತದೆ ಮತ್ತು ಅದರ ಭವ್ಯವಾದ ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ನಿನ್ನೆ ಹಂಪಿಗೆ ಆಗಮಿಸಿದ ಉಪರಾಷ್ಟ್ರಪತಿಯವರು ಇಂದು ಹಂಪಿಯಲ್ಲಿ ವಿರೂಪಾಕ್ಷ ದೇವಸ್ಥಾನ, ಗರುಡ ದೇಗುಲ (ಕಲ್ಲಿನ ರಥ) ಗಣೇಶನ ಮೂರ್ತಿಗಳು, ಲಕ್ಷ್ಮೀನರಸಿಂಹ, ಬಡವಿಲಿಂಗ, ವಿಜಯ ವಿಠಲ ದೇವಸ್ಥಾನ, ಪುಷ್ಕರಣಿ, ಕಮಲ ಮಹಲ್ ಮತ್ತು ಹಜಾರ ರಾಮ ದೇವಸ್ಥಾನ ಸೇರಿದಂತೆ ವಿವಿಧ ತಾಣಗಳಿಗೆ ಭೇಟಿ ನೀಡಿದರು. ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ವಿರೂಪಾಕ್ಷ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಹಂಪಿ ವಿಶ್ವ ಪರಂಪರೆಯ ತಾಣದ ವಿವಿಧ ಅಂಶಗಳನ್ನು ಉಪರಾಷ್ಟ್ರಪತಿಯವರಿಗೆ ವಿವರಿಸಿದರು. ಎಎಸ್‌ಐ ಕೈಗೊಂಡಿರುವ ಉತ್ತಮ ಕಾರ್ಯವನ್ನು ಉಪರಾಷ್ಟ್ರಪತಿಯವರು ಶ್ಲಾಘಿಸಿದರು. ನಮ್ಮ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ಸ್ಥಳೀಯ ನಿವಾಸಿಗಳು ಸೇರಿದಂತೆ ಎಲ್ಲರೂ ಒಗ್ಗೂಡುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು.

ಇಂದು ಸಂಜೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿಯವರು ಭಾಗವಹಿಸಲಿದ್ದಾರೆ. ಅದರ ನಂತರ, ಅವರು ವಿಶ್ವ ಪರಂಪರೆಯ ತಾಣ ಹಂಪಿಯ ಇತಿಹಾಸವನ್ನು ವಿವರಿಸುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

***



(Release ID: 1747886) Visitor Counter : 453