ಉಪರಾಷ್ಟ್ರಪತಿಗಳ ಕಾರ್ಯಾಲಯ
ಭಾರತವು ತನ್ನ ದೃಷ್ಟಿಕೋನದಲ್ಲಿ ಎಂದಿಗೂ ವಿಸ್ತರಣಾವಾದಿಯಾಗಿರಲಿಲ್ಲ - ಉಪ ರಾಷ್ಟ್ರಪತಿ
ಶಾಂತಿಯುತ ಸಹಬಾಳ್ವೆ; ಭಯೋತ್ಪಾದನೆ ಹಾಗೂ ವಿಧ್ವಂಸಕ ಶಕ್ತಿಗಳನ್ನು ತಡೆಯುವುದು ನಮ್ಮ ಕಾರ್ಯವಿಧಾನ ಎಂದ ಉಪ ರಾಷ್ಟ್ರಪತಿ
ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವಂತೆ ವಿಜ್ಞಾನಿಗಳಿಗೆ ಸಲಹೆ ನೀಡಿದ ಉಪ ರಾಷ್ಟ್ರಪತಿ
ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯಮದ ನಡುವೆ ಸಮನ್ವಯದ ಮೂಲಕ 'ಏರೋಸ್ಪೇಸ್ ಹಬ್' ಅಭಿವೃದ್ಧಿಪಡಿಸಲು ಕರೆ ನೀಡಿದರು
ಫಲಪ್ರದ ಫಲಿತಾಂಶಗಳಿಗಾಗಿ ರಕ್ಷಣಾ ಯೋಜನೆಗಳಲ್ಲಿ ಖಾಸಗಿ ಪಾಲುದಾರರನ್ನು ತೊಡಗಿಸಿಕೊಳ್ಳಬೇಕು – ಉಪ ರಾಷ್ಟ್ರಪತಿ
83 ತೇಜಸ್ ಯುದ್ಧ ವಿಮಾನಗಳನ್ನು ಖರೀದಿಸಲು ಐಎಎಫ್ ಬೇಡಿಕೆ ಇರಿಸಿರುವುದು ಭಾರತದಲ್ಲಿ ವೈಮಾನಿಕ ತಂತ್ರಜ್ಞಾನಕ್ಕೆ ದೊಡ್ಡ ಉತ್ತೇಜನವಾಗಿದೆ – ಉಪ ರಾಷ್ಟ್ರಪತಿ
ಬೆಂಗಳೂರಿನ ʻಎಚ್ಎಎಲ್ʼನ ವಿಮಾನ ಉತ್ಪಾದನಾ ಘಟಕಗಳಿಗೆ ಉಪರಾಷ್ಟ್ರಪತಿ ಭೇಟಿ
ʻಎಚ್ಎಎಲ್ʼನ ಬೆಳವಣಿಗೆಯು ಭಾರತದ ವೈಮಾನಿಕ ಉದ್ಯಮದ ಬೆಳವಣಿಗೆಗೆ ಅನ್ವರ್ಥವಾಗಿದೆ ಎಂದು ಹೇಳಿದರು
ಸಮಗ್ರ, ಪ್ರಾದೇಶಿಕ ಸಮತೋಲಿತ ಮತ್ತು ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಗೆ ಕರೆ ನೀಡಿದ ಉಪ ರಾಷ್ಟ್ರಪತಿಗಳು
Posted On:
20 AUG 2021 1:44PM by PIB Bengaluru
ರಕ್ಷಣಾ ತಂತ್ರಜ್ಞಾನದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲು ಮತ್ತು ಆಧುನಿಕ ಮಿಲಿಟರಿ ಹಾರ್ಡ್‌ವೇರ್ ರಫ್ತು ಕೇಂದ್ರವಾಗಿ ಹೊರಹೊಮ್ಮಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವ ಅಗತ್ಯವನ್ನು ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಒತ್ತಿ ಹೇಳಿದರು.
ಬೆಂಗಳೂರಿನ ʻಎಚ್ಎಎಲ್ʼ ಸಂಕೀರ್ಣದಲ್ಲಿ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಮತ್ತು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಬರುವ ವರ್ಷಗಳಲ್ಲಿ ಭಾರತವನ್ನು ವೈಮಾನಿಕ ತಂತ್ರಜ್ಞಾನ ಮತ್ತು ರಕ್ಷಣಾ ಶಕ್ತಿ ಕೇಂದ್ರವಾಗಿ ಮಾಡುವಲ್ಲಿ ದೇಶೀಯ ಉತ್ಪನ್ನಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಿದರು.
ಅತ್ಯಾಧುನಿಕ ಕ್ಷಿಪಣಿಗಳು, ಉಪಗ್ರಹಗಳು ಮತ್ತು ಬಾಹ್ಯಾಕಾಶ ವಾಹನಗಳನ್ನು ತಯಾರಿಸುವ ಭಾರತದ ಸಾಮರ್ಥ್ಯದ ಬಗ್ಗೆ ಗಮನ ಸೆಳೆದ ಅವರು, "ನಾವು ಇನ್ನೂ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರರಲ್ಲಿ ಒಬ್ಬರಾಗಿರುವುದು ವಿರೋಧಾಭಾಸವಾಗಿದೆ,ʼʼ ಎಂದರು ನಿರ್ಣಾಯಕ ತಂತ್ರಜ್ಞಾನಗಳ ದೇಶೀಯ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಮೂಲಕ ಈ ಪರಿಸ್ಥಿತಿಯನ್ನು ಬದಲಾಯಿಸಬೇಕು ಎಂದು ಅವರು ಕರೆ ನೀಡಿದರು.
ಅತ್ಯಂತ ಸಂಕೀರ್ಣವಾದ ಭೌಗೋಳಿಕ ರಾಜಕೀಯ ವಾತಾವರಣದಿಂದಾಗಿ ದೇಶ ಎದುರಿಸುತ್ತಿರುವ ಅನೇಕ ಭದ್ರತಾ ಸವಾಲುಗಳ ಬಗ್ಗೆ ಗಮನ ಸೆಳೆದ ಉಪ ರಾಷ್ಟ್ರಪತಿಗಳು, ಭದ್ರತಾ ಪಡೆಗಳ ಅನುಕರಣೀಯ ಧೈರ್ಯ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದರು. "ಯಾವುದೇ ಸವಾಲನ್ನು ಎದುರಿಸಲು ಮತ್ತು ಯಾವುದೇ ಭದ್ರತಾ ಸಂಬಂಧಿತ ಅಪಾಯವನ್ನು ದಿಟ್ಟವಾಗಿ ಹಿಮ್ಮೆಟ್ಟಿಸಲು ನಮ್ಮ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಜ್ಜಾಗಿವೆ ಎಂಬುದನ್ನು ಖಾತರಿಪಡಿಸಿಕೊಳ್ನಳುವುದು ಮ್ಮ ಕರ್ತವ್ಯವಾಗಿದೆ", ಎಂದು ಅವರು ಹೇಳಿದರು.
ಭಾರತವು ತನ್ನ ಎಲ್ಲಾ ನೆರೆ ದೇಶಗಳೊಂದಿಗೆ ಸ್ನೇಹ ಸಂಬಂಧವನ್ನು ಬಯಸುತ್ತದೆ. ಆದರೆ ಕೆಲವು ದೇಶಗಳು ಭಾರತದ ವಿರುದ್ಧ ಭಯೋತ್ಪಾದನೆಗೆ ಬೆಂಬಲ ಮತ್ತು ಹಣಕಾಸು ನೆರವು ನೀಡುತ್ತಿವೆ. ಮತ್ತೆ ಕೆಲ ನೆರೆ ದೇಶಗಳು ವಿಸ್ತರಣಾ ಪ್ರವೃತ್ತಿ ಪ್ರದರ್ಶಿಸುತ್ತಿವೆ ಎಂದು ಉಪರಾಷ್ಟ್ರಪತಿಗಳು ಹೇಳಿದರು. "ಆದ್ದರಿಂದ, ರಾಷ್ಟ್ರದ ಶಾಂತಿ ಮತ್ತು ಸಮೃದ್ಧಿಗೆ ನಮ್ಮ ಗಡಿಗಳ ಭದ್ರತೆ ಮತ್ತು ಸುರಕ್ಷತೆ ಬಹಳ ಮುಖ್ಯವಾಗಿದೆ" ಎಂದು ಅವರು ಹೇಳಿದರು. ಭಾರತವು ತನ್ನ ದೃಷ್ಟಿಕೋನದಲ್ಲಿ ಎಂದಿಗೂ ವಿಸ್ತರಣಾವಾದಿಯಾಗಿಲ್ಲ ಎಂದು ಒತ್ತಿ ಹೇಳಿದರು. ಶಾಂತಿಯುತ ಸಹಬಾಳ್ವೆ; ಭಯೋತ್ಪಾದನೆ ಮತ್ತು ವಿಧ್ವಂಸಕ ಶಕ್ತಿಗಳನ್ನು ತಡೆಯುವುದು ನಮ್ಮ ಕಾರ್ಯವಿಧಾನವಾಗಿದೆ ಎಂದು ಶ್ರೀ ನಾಯ್ಡು ಅವರು ಹೇಳಿದರು. "ಭಾರತವು ತನ್ನ ಜನರ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಸದೃಢಗೊಳ್ಳಲು ಬಯಸುತ್ತದೆ," ಎಂದು ಅವರು ಹೇಳಿದರು.
ರಕ್ಷಣಾ ಉತ್ಪಾದನೆಯಲ್ಲಿ ದೇಶೀಯತೆ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸಲು ಸರಕಾರ ಕೈಗೊಂಡಿರುವ ಹಲವಾರು ನೀತಿ ಉಪಕ್ರಮಗಳನ್ನು ಉಲ್ಲೇಖಿಸಿದ ಶ್ರೀ ನಾಯ್ಡು, ಫಲಪ್ರದ ಫಲಿತಾಂಶಗಳಿಗಾಗಿ ರಕ್ಷಣಾ ಯೋಜನೆಗಳಲ್ಲಿ ಖಾಸಗಿ ಪಾಲುದಾರರನ್ನು ತೊಡಗಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. "ಪ್ರಪಂಚದಾದ್ಯಂತದ ಅತ್ಯುತ್ತಮ ಉತ್ಪನ್ನಗಳೊಂದಿಗೆ ಹೋಲಿಸಬಹುದಾದ ಸ್ಪರ್ಧಾತ್ಮಕ ಉತ್ಪನ್ನಗಳನ್ನು ತಯಾರಿಸಲು ನಾವು ವ್ಯೂಹಾತ್ಮಕ ಪಾಲುದಾರಿಕೆ, ತಂತ್ರಜ್ಞಾನ ಹಂಚಿಕೆ ಮತ್ತು ತಂಡದ ಕೆಲಸದ ಮೇಲೆ ಅವಲಂಬಿತರಾಗಬೇಕಾಗುತ್ತದೆ," ಎಂದು ಉಪ ರಾಷ್ಟ್ರಪತಿಗಳು ಹೇಳಿದರು.
ರಕ್ಷಣಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮಿತಿ ಹೆಚ್ಚಳ, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಎರಡು ರಕ್ಷಣಾ ಕಾರಿಡಾರ್‌ಗಳನ್ನು ಸ್ಥಾಪಿಸುವ ನಿರ್ಧಾರ ಹಾಗೂ ರಕ್ಷಣಾ ಸಚಿವಾಲಯದಿಂದ ಎರಡು ದೇಶೀಯ ಉತ್ಪನ್ನಗಳ ಪಟ್ಟಿ ಅಧಿಸೂಚನೆಯಂತಹ ಕ್ರಮಗಳು ಭಾರತೀಯ ರಕ್ಷಣಾ ಉದ್ಯಮಕ್ಕೆ ಅತ್ಯುತ್ತಮ ಅವಕಾಶವನ್ನು ನೀಡುತ್ತವೆ ಎಂದು ಅವರು ಹೇಳಿದರು.
ಭಾರತೀಯ ವಾಯುಪಡೆ ಇತ್ತೀಚೆಗೆ 83 ತೇಜಸ್ ಯುದ್ಧ ವಿಮಾನಗಳ ಖರೀದಿಗೆ ʻಎಚ್ಎಎಲ್ʼನೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಕಂಪನಿಗಳು ಭಾಗಿಯಾಗಿರುವುದನ್ನು ಉಪರಾಷ್ಟ್ರಪತಿಗಳು ಶ್ಲಾಘಿಸಿದರು. ಅಂತಹ ಯೋಜನೆಗಳು ಭಾರತೀಯ ವೈಮಾನಿಕ ತಂತ್ರಜ್ಞಾನ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಆತ್ಮನಿರ್ಭರ್-ಸ್ವಾವಲಂಬಿಯಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದರು.
ವೈಮಾನಿಕ ತಂತ್ರಜ್ಞಾನ ಉದ್ಯಮದಲ್ಲಿ ಆವಿಷ್ಕಾರ ಪ್ರಕ್ರಿಯೆಯು ಹೆಚ್ಚಿನ ಮಟ್ಟದ ಅಪಾಯ ಮತ್ತು ದುಬಾರಿ ಹೂಡಿಕೆಗಳನ್ನು ಒಳಗೊಂಡಿರುತ್ತದೆ ಎಂಬ ವಿಷಯದ ಬಗ್ಗೆ ಗಮನ ಸೆಳೆದ ಅವರು, ಉದ್ಯಮ ಮತ್ತು ಸಂಶೋಧಕರ ನಡುವಿನ ಸಕ್ರಿಯ ಸಹಯೋಗದ ಮೂಲಕ ಈ ಪ್ರಕ್ರಿಯೆಯನ್ನು ವೇಗಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು. ವೈಮಾನಿಕ ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಂಶೋಧನೆಗಾಗಿ ಅತ್ಯಂತ ಪ್ರತಿಭಾವಂತರನ್ನು ಆಕರ್ಷಿಸುವ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ನಾಯ್ಡು ಅವರು, ಶೈಕ್ಷಣಿಕ ಮತ್ತು ಉದ್ಯಮದ ನಡುವೆ ಸಮನ್ವಯಕ್ಕಾಗಿ 'ಏರೋಸ್ಪೇಸ್ ಹಬ್' ಅಭಿವೃದ್ಧಿಪಡಿಸಲು ಕರೆ ನೀಡಿದರು. "ಇದು ಸಂಶೋಧನೆಯನ್ನು ಉತ್ತೇಜಿಸುತ್ತದೆ ಮತ್ತು ಈ ಪ್ರಮುಖ ವಲಯದಲ್ಲಿ ಕೌಶಲ್ಯ ಕೊರತೆಯ ಸಮಸ್ಯೆಯನ್ನು ಪರಿಹರಿಸುತ್ತದೆ," ಎಂದರು.
ಇದಕ್ಕೂ ಮುನ್ನ, ಉಪರಾಷ್ಟ್ರಪತಿಯವರು ʻಎಚ್ಎಎಲ್ʼನ ಲಘು ಯುದ್ಧ ವಿಮಾನ (ಎಲ್‌ಸಿಎ) ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದರು. ಈ ಅತ್ಯಾಧುನಿಕ ಯುದ್ಧ ವಿಮಾನವನ್ನು ನಿರ್ಮಿಸಿದ್ದಕ್ಕಾಗಿ ಎಡಿಎ ಮತ್ತು ಎಚ್ಎಎಲ್ ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸಲು 4+ ಪೀಳಿಗೆಯ ವಿಮಾನವು ಪ್ರಬಲ ವೇದಿಕೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಸುಧಾರಿತ ಲಘು ಹೆಲಿಕಾಪ್ಟರ್ ಧ್ರುವ್, ಲಘು ಯುದ್ಧ ಹೆಲಿಕಾಪ್ಟರ್ ಮತ್ತು ಚೀತಾ/ಚೇತಕ್ ಹೆಲಿಕಾಪ್ಟರ್‌ಗಳ ಸ್ಥಾನವನ್ನು ತುಂಬಲಿರುವ ಬಹು ಉಪಯೋಗಿ ಲಘು ಹೆಲಿಕಾಪ್ಟರ್‌ಗಳನ್ನು ಪ್ರದರ್ಶಿಸಿದ ʻಎಚ್ಎಎಲ್ʼನ ಹೆಲಿಕಾಪ್ಟರ್ ಘಟಕದ ಬಗ್ಗೆ ಉಪರಾಷ್ಟ್ರಪತಿಯವರು ಅಷ್ಟೇ ಪ್ರಭಾವಿತರಾದರು.
ರಾಷ್ಟ್ರೀಯ ಭದ್ರತೆಗೆ ಎಚ್ಎಎಲ್ ಮತ್ತು ಡಿಆರ್‌ಡಿಒ ಪ್ರಯೋಗಾಲಯಗಳ ಮೇರು ಕೊಡುಗೆಯನ್ನು ಉಪರಾಷ್ಟ್ರಪತಿ ಶ್ಲಾಘಿಸಿದರು. ಇದೇ ವೇಳೆ, ʻಎಲ್‌ಸಿಎ ಎಂಕೆ-2ʼ, ಸುಧಾರಿತ ಮಧ್ಯಮ ಯುದ್ಧ ವಿಮಾನ (ಎಎಂಸಿಎ) ಮತ್ತು ಅವಳಿ-ಎಂಜಿನ್ ಡೆಕ್
ಆಧರಿತ ಯುದ್ಧ ವಿಮಾನʼ (ಟಿಇಡಿಬಿಎಫ್) ದಂತಹ ಹೆಚ್ಚು ಶಕ್ತಿಶಾಲಿ ವಿಮಾನಗಳ ವಿನ್ಯಾಸದೊಂದಿಗೆ, ಭಾರತವು ಇನ್ನು ಮುಂದೆ ತನ್ನ ಯುದ್ಧ ವಿಮಾನದ ಅಗತ್ಯಗಳಿಗೆ ಇತರ ದೇಶಗಳ ಮೇಲೆ ಅವಲಂಬಿತವಾಗಬೇಕಾಗಿಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ʻಎಚ್ಎಎಲ್‌ನ ಬೆಳವಣಿಗೆಯು ಭಾರತದಲ್ಲಿ ವೈಮಾನಿಕ ಉದ್ಯಮದ ಬೆಳವಣಿಯೊಂದಿಗೆ ಅನ್ವರ್ಥವಾಗಿದೆ ಎಂದು ಹೇಳಿದ ಅವರು, 'ಸಮರ್ಥ್ ಔರ್ ಸಕ್ಷಮ್ ಭಾರತ್' (ಶಕ್ತಿಶಾಲಿ ಮತ್ತು ಸಮರ್ಥ ಭಾರತ) ಸೃಷ್ಟಿಗೆ ರಕ್ಷಣೆ ಮತ್ತು ವೈಮಾನಿಕ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಮುಖ್ಯ ಎಂದು ಪುನರುಚ್ಚರಿಸಿದರು. ʻಎಚ್‌ಎಎಲ್ʼ ಘಟಕಗಳಿಗೆ ಭೇಟಿ ನೀಡಿದ ನಂತರ ಭಾರತದ ಸಂಶೋಧನಾ ಸಾಮರ್ಥ್ಯದ ಬಗ್ಗೆ ಹೆಮ್ಮೆ ಹಾಗೂ ಭರವಸೆ ಇಮ್ಮಡಿಯಾಗಿದೆ ಎಂದು ಅವರು ಹೇಳಿದರು.
ಮುಂಬರುವ 'ಉತ್ಪಾದನೆಯ ಡಿಜಿಟಲೀಕರಣ'ದ ಬಗ್ಗೆ ಗಮನ ಸೆಳೆದ ಅವರು, ಇದು ವೈಮಾನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಆಳವಾದ ಬದಲಾವಣೆಗಳನ್ನು ತರಲಿದೆ ಎಂದು ಹೇಳಿದರು. ಇದೇ ವೇಳೆ, ಉದ್ಯಮ 4.0ಗೆ ಹೊಂದಿಕೊಳ್ಳುವಂತೆ ʻಎಚ್ಎಎಲ್ʼಗೆ ಸಲಹೆ ನೀಡಿದರು. ವಾಯುಯಾನ ಕ್ಷೇತ್ರದಲ್ಲಿ ಎಚ್ಎಎಲ್ ಜಾಗತಿಕ ಸಂಸ್ಥೆಯಾಗಿ ಹೊರಹೊಮ್ಮಲು ಗ್ರಾಹಕರ ತೃಪ್ತಿಯನ್ನು ಖಾತರಿಪಡಿಸಬೇಕಾದ ಮಹತ್ವವನ್ನು ಉಪ ರಾಷ್ಟ್ರಪತಿಗಳು ಒತ್ತಿ ಹೇಳಿದರು.
ಮನುಕುಲ ಎದುರಿಸುತ್ತಿರುವ ವಿವಿಧ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಅನ್ವೇಷಣೆಯ ಶಕ್ತಿಯನ್ನು ಅನಾವರಣಗೊಳಿಸುವ ಅಗತ್ಯವನ್ನು ಗುರುತಿಸಿದ ಶ್ರೀ ನಾಯ್ಡು ಅವರು, ನಮ್ಮ ಆರ್ಥಿಕ ಅಭಿವೃದ್ಧಿ ಕಾರ್ಯಸೂಚಿಯು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹೆಚ್ಚು ಸಮಗ್ರ, ಪ್ರಾದೇಶಿಕ ಸಮತೋಲನ ಒಳಗೊಂಡ ಮತ್ತು ಪರಿಸರ ಸ್ನೇಹಿಯಾಗಿರಬೇಕು ಎಂದು ಒತ್ತಿ ಹೇಳಿದರು.
ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಎಚ್ಎಎಲ್ ಅಧ್ಯಕ್ಷ ಶ್ರೀ ಆರ್. ಮಾಧವನ್ ಮತ್ತು ಎಚ್ಎಎಲ್ ಮತ್ತು ಎಡಿಎಯ ಹಿರಿಯ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಭಾಷಣದ ಪೂರ್ಣ ಪಠ್ಯ ಈ ಕೆಳಗಿನಂತಿದೆ -
"ಇಂದು ಎಚ್‌ಎಎಲ್ ಕುಟುಂಬದೊಂದಿಗೆ ಇಲ್ಲಿ ಸೇರಿರುವುದು ನನಗೆ ಸಂತೋಷತಂದಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಕಳೆದ 80 ವರ್ಷಗಳಲ್ಲಿ, ನಮ್ಮ ರಾಷ್ಟ್ರದ ಭದ್ರತೆ, ಸುರಕ್ಷತೆ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ʻಎಚ್ಎಎಲ್ʼನ ಬೆಳವಣಿಗೆಯು ಭಾರತದಲ್ಲಿ ವೈಮಾನಿಕ ತಂತ್ರಜ್ಞಾನ ಉದ್ಯಮದ ಬೆಳವಣಿಗೆಗೆ ಅನ್ವರ್ಥವಾಗಿದೆ.
ಇಲ್ಲಿ ಹಾಜರಿರುವ ʻಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿʼ(ಎಡಿಎ) ವಿಜ್ಞಾನಿಗಳನ್ನು ನಾನು ಸ್ವಾಗತಿಸಲು ಬಯಸುತ್ತೇನೆ. ʻತೇಜಸ್ʼ ಲಘು ಯುದ್ಧ ವಿಮಾನದ(ಎಲ್‌ಸಿಎ) ವಿನ್ಯಾಸದ ನೇತೃತ್ವವನ್ನು ʻಎಡಿಎʼ ವಹಿಸಿದೆ. ಈತ ಅದು ʻಎಚ್ಎಎಲ್ʼನಲ್ಲಿ ಉತ್ಪಾದನೆಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಸುಧಾರಿತ ಯುದ್ಧ ವಿಮಾನ ಮತ್ತು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಅದರ ಅತ್ಯಾಧುನಿಕ ತಂತ್ರಜ್ಞಾನಗಳು ಮುಂಬರುವ ವರ್ಷಗಳಲ್ಲಿ ಯುದ್ಧ ವಿಮಾನದಲ್ಲಿ ʻಆತ್ಮ ನಿರ್ಭರ್ʼ ಸಾಧನೆಗೆ ದೇಶಕ್ಕೆ ಸಹಾಯಕವಾಗಲಿವೆ.
ಇದು ನನ್ನ ಚೊಚ್ಚಲ ಎಚ್ಎಎಲ್ ಭೇಟಿ. ಭಾರತದ ವೈಮಾನಿಕ ತಂತ್ರಜ್ಞಾನ ಕ್ಷೇತ್ರಕ್ಕೆ ರೆಕ್ಕೆ ಬಂದ ಮತ್ತು ಆ ರೆಕ್ಕೆಗಳೊಂದಿಗೆ ಹೊಸ ಎತ್ತರಗಳನ್ನು ಅನ್ವೇಷಿಸುತ್ತಾ ಸಾಗಿರುವ ಸ್ಥಳದಲ್ಲಿ ನಿಮ್ಮನ್ನು ಭೇಟಿಯಾಗಲು ನನಗೆ ಸಂತೋಷವಾಗಿದೆ. ಬೆಂಗಳೂರು ಇಂದು ದೇಶದ ವಾಯುಯಾನದ ರಾಜಧಾನಿ ಎಂದು ಪರಿಗಣಿಸಲ್ಪಟ್ಟಿದೆ. ಈ ಬಿರುದು ಬರಲು ಕಾರಣವೆಂದರೆ, ಈ ಬೆಟ್ಟಗಳು ಹಾಗೂ ಕಣಿವೆಗಳ ಸುತ್ತಲೂ ಇರುವಂತಹ ಮಹಾನ್ ಕನಸುಗಾರರು ಭಾರತೀಯ ವಾಯುಯಾನದ ತಮ್ಮ ದೃಷ್ಟಿಕೋನಕ್ಕೆ ಒಂದು ಆಕಾರ ಮತ್ತು ರೂಪುರೇಷೆಯನ್ನು ನೀಡಿದರು. ನಿರ್ಣಾಯಕವಾದ ವೈಮಾನಿಕ ತಂತ್ರಜ್ಞಾನ ಮತ್ತು ರಕ್ಷಣಾ ವಲಯದಲ್ಲಿ ಭಾರತದ ಸ್ವಾವಲಂಬನೆಗೆ ʻಎಚ್ಎಎಲ್ʼನ ಶ್ರೀಮಂತ ಕೊಡುಗೆಯನ್ನು ಸಂಭ್ರಮಿಸುವ ಸಂದರ್ಭದಲ್ಲಿ ನಿಮ್ಮೆಲ್ಲ ಜೊತೆ ಸೇರಲು ನನಗೆ ಅಪಾರ ಸಂತೋಷವಾಗಿದೆ.
ಪ್ರಿಯ ಸಹೋದರಿಯರೇ ಮತ್ತು ಸಹೋದರರೇ,
ಇಂದು ಭಾರತವು ಅತ್ಯಾಧುನಿಕ ಬಾಹ್ಯಾಕಾಶ ಉಡಾವಣಾ ವಾಹನಗಳು, ಕ್ಷಿಪಣಿಗಳು, ವಿಮಾನಗಳು ಮತ್ತು ಇತರ ರಕ್ಷಣಾ ಉಪಕರಣಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ವಿರೋಧಾಭಾಸವೆಂದರೆ ನಾವು ಇನ್ನೂ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರರಲ್ಲಿ ಒಬ್ಬರಾಗಿದ್ದೇವೆ. ಇದು ಬದಲಾಗಬೇಕಾಗಿದೆ ಮತ್ತು ನಿರ್ಣಾಯಕ ತಂತ್ರಜ್ಞಾನಗಳ ದೇಶೀಯ ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಹೆಚ್ಚಿಸಬೇಕಿದೆ.
ಇಂದು ನಾವು ಅತ್ಯಂತ ಸಂಕೀರ್ಣವಾದ ಭೌಗೋಳಿಕ-ರಾಜಕೀಯ ವಾತಾವರಣದಲ್ಲಿ ಅನೇಕ ಭದ್ರತಾ ಸವಾಲುಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಯೋಧರು ಮತ್ತು ಭದ್ರತಾ ಪಡೆಗಳು ಭದ್ರತೆಗೆ ಸಂಬಂಧಿಸಿದಂತೆ ಅತ್ಯಂತ ಕಠಿಣ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಅವರು ಸದಾ ತಮ್ಮ ದಾರಿಯಲ್ಲಿ ಬರುವ ಎಲ್ಲಾ ಸವಾಲುಗಳನ್ನು ಅನುಕರಣೀಯ ವೃತ್ತಿಪರತೆ, ಶೌರ್ಯ ಮತ್ತು ಬದ್ಧತೆಯೊಂದಿಗೆ ದಿಟ್ಟವಾಗಿ ಎದುರಿಸಿದ್ದಾರೆ. ಯಾವುದೇ ಸವಾಲನ್ನು ಎದುರಿಸಲು ಮತ್ತು ಯಾವುದೇ ಭದ್ರತಾ ಅಪಾಯವನ್ನು ದೃಢವಾಗಿ ಹಿಮ್ಮೆಟ್ಟಿಸಲು ನಮ್ಮ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದು ಖಾತರಿಪಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ, ʻಸಮರ್ಥ್ ಔರ್ ಸಕ್ಷಮ್ ಭಾರತ್ʼ ರೂಪಿಸಲು ರಕ್ಷಣೆ ಮತ್ತು ವೈಮಾನಿಕ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯು ಅತ್ಯಂತ ಮಹತ್ವದ್ದಾಗಿದೆ.
ʻಆತ್ಮನಿರ್ಭರ್ ಭಾರತ್ ಯೋಜನೆʼ ಅಡಿಯಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ದೇಶೀಯತೆ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸಲು ಸರಕಾರ ಹಲವಾರು ನೀತಿ ಉಪಕ್ರಮಗಳು ಮತ್ತು ಸುಧಾರಣೆಗಳನ್ನು ಕೈಗೊಂಡಿದೆ. 2025ರ ವೇಳೆಗೆ ವೈಮಾನಿಕ ತಂತ್ರಜ್ಞಾನ ಮತ್ತು ರಕ್ಷಣಾ ವಲಯದಲ್ಲಿ 5 ಶತಕೋಟಿ ಡಾಲರ್ (ಅಮೆರಿಕನ್ ಡಾಲರ್) ರಫ್ತು ಸೇರಿದಂತೆ ಒಟ್ಟು 25 ಶತಕೋಟಿ ಡಾಲರ್ (ಅಮೆರಿಕನ್ ಡಾಲರ್) ವಹಿವಾಟು ಸಾಧಿಸುವ ಗುರಿಯೊಂದಿಗೆ ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿಯ ಕರಡನ್ನು ಕಳೆದ ವರ್ಷ ಬಿಡುಗಡೆ ಮಾಡಲಾಯಿತು. ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ಮೂಲಕ, ಆವಿಷ್ಕಾರವನ್ನು ಪುರಸ್ಕರಿಸುವ ಮೂಲಕ ಮತ್ತು ಭಾರತೀಯ ʻಐಪಿʼ ಮಾಲೀಕತ್ವದ ಸೃಷ್ಟಿಗೆ ಪ್ರೋತ್ಸಾಹನೀಡುವ ಮೂಲಕ ಭಾರತವನ್ನು ರಕ್ಷಣಾ ವಲಯದ ಅಗ್ರಗಣ್ಯ ರಾಷ್ಟ್ರಗಳ ಸಾಲಿಗೆ ಕೊಂಡೊಯ್ಯಲು ನೀಲನಕ್ಷೆಯನ್ನು ಈ ನೀತಿಯು ಮುಂದಿಡುತ್ತದೆ.
ಹೂಡಿಕೆಯ ಹರಿವನ್ನು ಸಲೀಸಾಗಿಸಲು, ಸರಕಾರವು ಸ್ವಯಂಚಾಲಿತ ಮಾರ್ಗದ ಮೂಲಕ ರಕ್ಷಣಾ ವಲಯದಲ್ಲಿ ಶೇ.74ರವರೆಗೆ ಮತ್ತು ಸರಕಾರಿ ಮಾರ್ಗದ ಮೂಲಕ ಶೇ.100ರವರೆಗೆ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮಿತಿಯನ್ನು ಹೆಚ್ಚಿಸಿದೆ. ಗಮನಾರ್ಹ ವಿಷಯವೆಂದರೆ, ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಎರಡು ರಕ್ಷಣಾ ಕಾರಿಡಾರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ರಕ್ಷಣಾ ವಲಯದಲ್ಲಿ ದೇಶೀಯತೆಯನ್ನು ಉತ್ತೇಜಿಸಲು ಮಹತ್ವದ ಹೆಜ್ಜೆಯೆಂಬಂತೆ, ರಕ್ಷಣಾ ಸಚಿವಾಲಯವು 2020ರಲ್ಲಿ 101 ವಸ್ತುಗಳ 'ಮೊದಲ ಧನಾತ್ಮಕ ದೇಶೀಯ ಉತ್ಪನ್ನಗಳ ಪಟ್ಟಿ'ಯ ಅಧಿಸೂಚನೆ ಹೊರಡಿಸಿದೆ. ಮತ್ತು ಈ ವರ್ಷ 108 ವಸ್ತುಗಳ '2ನೇ ಧನಾತ್ಮಕ ದೇಶೀಯ ಉತ್ಪನ್ನಗಳ ಪಟ್ಟಿʼಯ ಅಧಿಸೂಚನೆ ಹೊರಡಿಸಿದೆ. ಇದರ ಅನುಷ್ಠಾನಕ್ಕಾಗಿ ಆಮದಿನ ಮೇಲೆ ನಿರ್ಬಂಧ ಹೇರಲಾಗುತ್ತದೆ. ಇದು ಭಾರತೀಯ ರಕ್ಷಣಾ ಉದ್ಯಮಕ್ಕೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
ಪ್ರಿಯ ಸ್ನೇಹಿತರೇ,
ಭಾರತೀಯ ವೈಮಾನಿಕ ತಂತ್ರಜ್ಞಾನ ಮತ್ತು ರಕ್ಷಣಾ ಮಾರುಕಟ್ಟೆಯು 2030ರ ವೇಳೆಗೆ 70 ಶತಕೋಟಿ ಡಾಲರ್ (ಅಮೆರಿಕನ್ ಡಾಲರ್) ತಲುಪಲಿದೆ ಎಂದು ಅಂದಾಜಿಸಲಾಗಿದೆ, ಇದು ನಮ್ಮ ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಸರಕಾರ ನೀಡಿದ ಒತ್ತಿನಿಂದ ಪ್ರೇರಿತವಾಗಿದೆ. ವೈಮಾನಿಕ ತಂತ್ರಜ್ಞಾನ ಉದ್ಯಮದಲ್ಲಿ ಸಂಶೋಧನೆ ಪ್ರಕ್ರಿಯೆಯು ದೀರ್ಘಾವಧಿಯಲ್ಲಿ ದೊಡ್ಡ ಮಟ್ಟದ ಅಪಾಯ ಮತ್ತು ಭಾರಿ ಹೂಡಿಕೆಗಳನ್ನು ಒಳಗೊಂಡಿರುತ್ತದೆ ಎಂಬುದು ನಿಜವಷ್ಟೇ. ಉದ್ಯಮ ಮತ್ತು ಸಂಶೋಧಕರ ನಡುವಿನ ಸಕ್ರಿಯ ಸಹಯೋಗದ ಮೂಲಕ ಈ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡಬಹುದು.
ನಿಮಗೀಗಾಗಲೇ ತಿಳಿದಿರುವಂತೆ, ಭಾರತದಲ್ಲಿ ಪ್ರತಿಭೆಗಳಿಗೆ ಬರವಿಲ್ಲ. ಈ ಪ್ರತಿಭೆಗಳನ್ನು ಬೇಗನೆ ಗುರುತಿಸುವುದು ಮತ್ತು ಸರಿಯಾದ ರೀತಿಯಲ್ಲಿ ತರಬೇತುಗೊಳಿಸುವುದು ಅಗತ್ಯವಾಗಿದೆ. ದೇಶದ ಶ್ರೇಷ್ಠ ಮತ್ತು ಪ್ರತಿಭಾವಂತ ವ್ಯಕ್ತಿಗಳು ವೈಮಾನಿಕ ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ತೊಡಗುವಂತೆ ಖಾತರಿಪಡಿಸಿಕೊಳ್ಳಬೇಕು. ಈ ಪ್ರಮುಖ ವಲಯದಲ್ಲಿ ಕೌಶಲ್ಯ ಕೊರತೆಯ ಸಮಸ್ಯೆಯನ್ನು ನೀಗಿಸಲು ಹಾಗೂ ಸಂಶೋಧನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶೈಕ್ಷಣಿಕ ವಲಯ ಮತ್ತು ಉದ್ಯಮದ ನಡುವೆ ಸಮನ್ವಯ ಏರ್ಪಡಿಸುವುದು ಹಾಗೂ ಆ ಮೂಲಕ 'ಏರೋಸ್ಪೇಸ್ ಹಬ್' ಅಭಿವೃದ್ಧಿಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ನೀತಿ ನಿರೂಪಕರು ಗಮನ ಹರಿಸಬೇಕಾದ ಮತ್ತೊಂದು ಅಂಶವೆಂದರೆ ಫಲಪ್ರದ ಫಲಿತಾಂಶಗಳಿಗಾಗಿ ರಕ್ಷಣಾ ಯೋಜನೆಗಳಲ್ಲಿ ಖಾಸಗಿ ಪಾಲುದಾರರನ್ನು ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಜಾಗತಿಕವಾಗಿ ಅತ್ಯುತ್ತಮ ಉತ್ಪನ್ನಗಳೊಂದಿಗೆ ಹೋಲಿಸಬಹುದಾದ ಸ್ಪರ್ಧಾತ್ಮಕ ಉತ್ಪನ್ನಗಳನ್ನು ನಾವು ಅಭಿವೃದ್ಧಿಪಡಿಸಬೇಕೆಂದರೆ ವ್ಯೂಹಾತ್ಮಕ ಪಾಲುದಾರಿಕೆ, ತಂತ್ರಜ್ಞಾನ ಹಂಚಿಕೆ ಮತ್ತು ಒಂದು ತಂಡವಾಗಿ ಕೆಲಸ ಮಾಡುವ ಕಾರ್ಯವಿಧಾನದ ಮೇಲೆ ಅವಲಂಬನೆ ಅತ್ಯಗತ್ಯವಾಗಿದೆ.
ಇತ್ತೀಚೆಗೆ ಭಾರತೀಯ ವಾಯುಪಡೆ 83 ತೇಜಸ್ ಯುದ್ಧ ವಿಮಾನಗಳ ಖರೀದಿಗೆ ಬೇಡಿಕೆ ಇರಿಸಿದೆ ಮತ್ತು ಈ ಖರೀದಿಯಲ್ಲಿ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳು(ಎಂಎಸ್‌ಎಂಇ) ಸೇರಿದಂತೆ ಸುಮಾರು 500 ಭಾರತೀಯ ಕಂಪನಿಗಳು `ಎಚ್ಎಎಲ್’ನೊಂದಿಗೆ ಕೆಲಸ ಮಾಡುತ್ತವೆ ಎಂದು ನಾನು ತಿಳಿಯಲ್ಪಟ್ಟೆ. ಇದೊಂದು ಪ್ರಶಂಸನೀಯ ಉಪಕ್ರಮ. ಇದು ವೆಚ್ಚ-ಪರಿಣಾಮಕಾರಿ ಮಾತ್ರವಲ್ಲದೆ, ಉತ್ಪಾದನಾ ಸಮಯದ ಗಡುವನ್ನು ಪೂರೈಸಲು ಸಹಾಯ ಮಾಡುತ್ತದೆ. ಇಂತಹ ಬೃಹತ್ ಸಹಯೋಗದ ಉಪಕ್ರಮಗಳು ಭಾರತೀಯ ವೈಮಾನಿಕ ತಂತ್ರಜ್ಞಾನ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ʻಆತ್ಮನಿರ್ಭರ-ಸ್ವಾವಲಂಬಿʼಯಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ. ಎಚ್ಎಎಲ್ ಇದರಲ್ಲಿ ಮುಂದಾಳತ್ವ ವಹಿಸುತ್ತಿದೆ ಮತ್ತು ಇದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.
ನಾನು ಈಗಷ್ಟೇ ತೇಜಸ್ ಲಘು ಯುದ್ಧ ವಿಮಾನ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಬಂದೆ. ʻಎಡಿಎʼ ಮತ್ತು ʻಎಚ್ಎಎಲ್ʼನಲ್ಲಿ ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರುಗಳ ಹಲವು ವರ್ಷಗಳ ಏಕಾಗ್ರತೆಯ ಕಠಿಣ ಪರಿಶ್ರಮದ ಫಲಿತಾಂಶವಾದ ಈ ಸುಂದರ ವಿಮಾನವನ್ನು ನೋಡಿ ನನಗೆ ಸಂತೋಷವಾಯಿತು. ಅತ್ಯಾಧುನಿಕ ಆಧುನಿಕ 4+ ಪೀಳಿಗೆಯ ಯುದ್ಧ ವಿಮಾನವು ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸಲು ಪ್ರಬಲ ವೇದಿಕೆಯಾಗಲಿದೆ ಎಂದು ನನಗೆ ವಿಶ್ವಾಸವಿದೆ.
ʻಎಚ್‌ಎಎಲ್ʼನ ಹೆಲಿಕಾಪ್ಟರ್ ಘಟಕವೂ ಅಷ್ಟೇ ಪ್ರಭಾವಶಾಲಿಯಾಗಿದೆ ಎಂದು ನಾನು ಗಮನಿಸಿದೆ. ಸುಧಾರಿತ ಲಘು ಹೆಲಿಕಾಪ್ಟರ್ - ʻಧ್ರುವ್ʼ ಪ್ರಸ್ತುತ ಭಾರತೀಯ ಸಶಸ್ತ್ರ ಪಡೆಗಳ ಪ್ರಧಾನ ವಾಹನವಾಗಿದೆ. ಎಚ್ಎಎಲ್ ಲಘು ಯುದ್ಧ ಹೆಲಿಕಾಪ್ಟರ್ ಅನ್ನೂ ತಯಾರಿಸುತ್ತಿದ್ದು, ಉತ್ಪಾದನಾ ಹಂತವನ್ನು ತಲುಪಿದೆ; ಜೊತೆಗೆ ಹಳೆಯ ಚೀತಾ/ಚೇತಕ್ ಹೆಲಿಕಾಪ್ಟರ್‌ಗಳ ಸ್ಥಾನವನ್ನು ತುಂಬುವ ಬಹು ಬಳಕೆ ಲಘು ಹೆಲಿಕಾಪ್ಟರ್ ಅನ್ನೂ ಎಚ್‌ಎಎಲ್ ಎಂದು ತಿಳಿದು ನನಗೆ ಸಂತೋಷವಾಗಿದೆ.
ʻಎಚ್ಎಎಲ್ʼ ಪ್ರಾರಂಭವಾದಾಗಿನಿಂದ 4,230 ವಿಮಾನಗಳನ್ನು ಉತ್ಪಾದಿಸಿದೆ ಮತ್ತು 11,730 ಕ್ಕೂ ಹೆಚ್ಚು ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನವೀಕರಿಸಿದೆ ಎಂದು ನಾನು ತಿಳಿಯಲ್ಪಟ್ಟೆ. ಪ್ರಸ್ತುತ, ಭಾರತೀಯ ರಕ್ಷಣಾ ಸೇವೆಗಳ ಬಳಕೆಯಲ್ಲಿರುವ ಒಟ್ಟು ವಿಮಾನಗಳ ಪೈಕಿ ಸುಮಾರು 61%ರಷ್ಟನ್ನು ʻಎಚ್ಎಎಲ್ʼ ಪೂರೈಸಿದೆ ಮತ್ತು ಎಲ್ಲಾ ವಿಮಾನ/ಹೆಲಿಕಾಪ್ಟರ್‌ಗಳಿ ಪೈಕಿ 75%ರಷ್ಟಕ್ಕೆ ಬೆಂಬಲ ಒದಗಿಸುತ್ತಿದೆ. ಇದು ರಾಷ್ಟ್ರೀಯ ಭದ್ರತೆಗೆ ನಿಮ್ಮ ಅಪಾರ ಕೊಡುಗೆಯನ್ನು ತೋರಿಸುತ್ತದೆ; ಇದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.
ಇಂದು ʻಎಡಿಎʼ, ಎಚ್ಎಎಲ್ ಜೊತೆ ಸೇರಿ ಭಾರತೀಯ ವಾಯುಪಡೆಗಾಗಿ ಲಘು ಯುದ್ಧ ವಿಮಾನ ʻಎಂಕೆ-2ʼ ಮತ್ತು ಸುಧಾರಿತ ಮಧ್ಯಮ ಯುದ್ಧ ವಿಮಾನ (ಎಎಂಸಿಎ) ಹಾಗೂ ಭಾರತೀಯ ನೌಕಾಪಡೆಗಾಗಿ ಅವಳಿ-ಎಂಜಿನ್ ಡೆಕ್ ಆಧಾರಿತ ಯುದ್ಧ ವಿಮಾನದಂತಹ (ಟಿಇಡಿಬಿಎಫ್) ಮತ್ತಷ್ಟು ಶಕ್ತಿಶಾಲಿ ವಿಮಾನಗಳನ್ನು ವಿನ್ಯಾಸಗೊಳಿಸುತ್ತಿದೆ. ಈ ವಿಮಾನಗಳ ಪ್ರಮುಖ ತಂತ್ರಜ್ಞಾನಗಳನ್ನು ʻಡಿಆರ್‌ಡಿಒʼ ಪ್ರಯೋಗಾಲಯಗಳು ಮತ್ತು ಇತರ ವೈಜ್ಞಾನಿಕ ಸಂಸ್ಥೆಗಳು ದೇಶಾದ್ಯಂತ ಅಭಿವೃದ್ಧಿಪಡಿಸುತ್ತಿವೆ. ಈ ವಿಮಾನಗಳ ಅಭಿವೃದ್ಧಿಯೊಂದಿಗೆ, ಮುಂದಿನ ದಶಕದ ವೇಳೆಗೆ, ಭಾರತವು ತನ್ನ ಯುದ್ಧ ವಿಮಾನದ ಅಗತ್ಯಗಳನ್ನು ಪೂರೈಸಲು ಇನ್ನು ಮುಂದೆ ಇತರ ರಾಷ್ಟ್ರಗಳ ಮೇಲೆ ಅವಲಂಬಿತವಾಗಬೇಕಾಗಿಲ್ಲ ಎಂಬ ವಿಶ್ವಾಸ ನನಗಿದೆ.
ಪ್ರಿಯ ಸಹೋದರಿಯರೇ ಮತ್ತು ಸಹೋದರರೇ,
ನಮ್ಮ ದೇಶದ ನಿಜವಾದ ಶಕ್ತಿಯು ನಮ್ಮ ರಾಷ್ಟ್ರ ಪ್ರಜ್ಞೆಯಿಂದ ಬರುತ್ತದೆ ಎಂಬ ನನ್ನ ಮಾತನ್ನು ನೀವು ಒಪ್ಪುತ್ತೀರಿ. ಕೋವಿಡ್-19 ಸಾಂಕ್ರಾಮಿಕದಿಂದ ಜೀವ ಮತ್ತು ಜೀವನೋಪಾಯಗಳಿಗೆ ಬಲವಾದ ಹೊಡೆತ ಬಿದ್ದಿದೆ. ಈ ಸ್ಥಿತಿಯಿಂದ ನಮ್ಮ ಆರ್ಥಿಕತೆಯ ದಿಕ್ಕನ್ನು ಮತ್ತೆ ಪ್ರಗತಿಯ ಹಳಿಯತ್ತ ಹೊರಳಿಸಬೇಕಿದೆ. ನಾವು ನಮ್ಮ ಕೈಗಾರಿಕಾ ಮತ್ತು ಉತ್ಪಾದನಾ ನೆಲೆಯನ್ನು ಅಭಿವೃದ್ಧಿಪಡಿಸಬೇಕಾಗಿದೆ. ಜೊತೆಗೆ ಭಾರತದಲ್ಲಿ ಸಂಶೋಧನೆಯ ಶಕ್ತಿಯನ್ನು ಅನಾವರಣಗೊಳಿಸಬೇಕು. ಇದರಿಂದ ನಮ್ಮ ಬೃಹತ್ ಸವಾಲುಗಳಿಗೆ ವಿನೂತನ ಪರಿಹಾರಗಳನ್ನು ಕಂಡುಕೊಳ್ಳಬಹುದು. ನಮ್ಮ ಆರ್ಥಿಕ ಅಭಿವೃದ್ಧಿ ಕಾರ್ಯಸೂಚಿಯು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮಗ್ರ, ಪ್ರಾದೇಶಿಕ ಸಮತೋಲನ ಒಳಗೊಂಡ ಮತ್ತು ಪರಿಸರ ಸ್ನೇಹಿ ಆಗಿರಬೇಕು.
ಕೋವಿಡ್-19 ಸಾಂಕ್ರಾಮಿಕವು ಜಾಗತಿಕವಾಗಿ ಜೀವನವನ್ನು ಹೈರಾಣಾಗಿಸಿದೆ. ಜೀವನ ಮತ್ತು ಆರ್ಥಿಕತೆಯ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಈ ಸಾಂಕ್ರಾಮಿಕದ ಸಮಯದಲ್ಲಿ ʻಎಚ್ಎಎಲ್ʼ ಸುಮಾರು 100 ಉದ್ಯೋಗಿಗಳನ್ನು ಕಳೆದುಕೊಂಡಿದೆ ಎಂದು ತಿಳಿಯಲ್ಪಟ್ಟೆ. ಮೃತರ ಕುಟುಂಬ ಸದಸ್ಯರಿಗೆ ಸಹಾಯ ಮಾಡಲು ʻಎಚ್‌ಎಎಲ್ʼ ಆರ್ಥಿಕ ನೆರವು ಯೋಜನೆಯನ್ನು ರೂಪಿಸಿದೆ ಎಂದು ತಿಳಿದು ಸಮಾಧಾನವಾಯಿತು. 'ಹಂಚಿಕೊಳ್ಳಿ ಮತ್ತು ಕಾಳಜಿವಹಿಸಿ' ಎಂಬ ಈ ಪರಿಕಲ್ಪನೆಯು ನಮ್ಮ ಪ್ರಾಚೀನ ನಾಗರಿಕತೆಯ ತಿರುಳಿನಲ್ಲಿದೆ.
ನಾನು ʻಎಚ್ಎಎಲ್ʼನ ಸಾಧನೆಗಳನ್ನು ನೋಡಿದಾಗ, ಅತ್ಯಂತ ವಿಶೇಷವೆನಿಸಿದ ನಿಮ್ಮ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಲು ಅಗತ್ಯವಾದ ಎಲ್ಲಾ ಗುಣಲಕ್ಷಣಗಳನ್ನು ನೀವು ಹೊಂದಿದ್ದೀರಿ ಎಂಬ ವಿಶ್ವಾಸ ನನಗೆ ಮೂಡಿದೆ. ಆದಾಗ್ಯೂ, ಈ ಜಾಗತೀಕರಣ ಮತ್ತು ಸ್ಪರ್ಧಾತ್ಮಕ ಕ್ಷೇತ್ರದ ಸವಾಲುಗಳನ್ನು ಎದುರಿಸಲು ನಮ್ಮ ಮುಂದಿರುವ ಏಕೈಕ ಮಾರ್ಗವೆಂದರೆ ಅದು ಅತ್ಯಾಧುನಿಕ ಹಾಗೂ ಉನ್ನತ ಮಟ್ಟದ ತಂತ್ರಜ್ಞಾನಗಳನ್ನು ಅಭಿವೃದ್ಧಿ. ಈ ನಿಟ್ಟಿನಲ್ಲಿ ʻಎಚ್‌ಎಎಲ್ʼ ಮುಂದುವರಿಯಬೇಕಾದ ಅಗತ್ಯವನ್ನು ನಾನು ಮತ್ತೊಮ್ಮೆ ಒತ್ತಿ ಹೇಳಲು ಬಯಸುತ್ತೇನೆ. ಭಾರತ ಸರಕಾರದ "ಮೇಕ್ ಇನ್ ಇಂಡಿಯಾ" ಉಪಕ್ರಮವನ್ನು ಬೆಂಬಲಿಸಲು ಹೊಸ ಉತ್ಪನ್ನಗಳು ಮತ್ತು ಉತ್ಪನ್ನ ವರ್ಧನೆಗಳನ್ನು ಅಭಿವೃದ್ಧಿಪಡಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ.
ಭವಿಷ್ಯದಲ್ಲಿ ಭಾರತವನ್ನು ವೈಮಾನಿಕ ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರದ ಶಕ್ತಿ ಕೇಂದ್ರವಾಗಿ ಹೊರಹೊಮ್ಮುವಲ್ಲಿ ದೇಶೀಯ ಉತ್ಪನ್ನಗಳು ಪ್ರಮುಖ ಪಾತ್ರ ವಹಿಸಲಿವೆ. ನಾವು ಭಾರತವನ್ನು ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದಷ್ಟೇ ಅಲ್ಲ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ರಫ್ತು ಕೇಂದ್ರವಾಗಿ ಭಾರತ ಹೊರಹೊಮ್ಮಬೇಕೆಂದು ಆಶಿಸಬೇಕು.
ದೇಶದ ಅನೇಕ ಡಿಆರ್‌ಡಿಒ ಪ್ರಯೋಗಾಲಯಗಳು ʻಎಚ್‌ಎಎಲ್ʼನೊಂದಿಗೆ ಉತ್ಪಾದನೆ ಹಾಗೂ ಅಭಿವೃದ್ಧಿ ಪಾಲುದಾರರಾಗಿ ವೈಮಾನಿಕ ತಂತ್ರಜ್ಞಾನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿವೆ. ಇವುಗಳಲ್ಲಿ ಅತ್ಯಾಧುನಿಕ ರಾಡಾರ್‌ಗಳು, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು, ಮಾನವರಹಿತ ವೈಮಾನಿಕ ವೇದಿಕೆಗಳು ಮುಂತಾದವು ಇದರಲ್ಲಿ ಸೇರಿವೆ. ನಾವು ಉತ್ಪನ್ನಗಳನ್ನು ತಯಾರಿಸುವ ಮತ್ತು ನಿರ್ವಹಿಸುವ ವಿಧಾನದಲ್ಲಿ ಆಳವಾದ ಬದಲಾವಣೆಗಳಿಗೆ ಸಾಕ್ಷಿಯಾಗಲಿರುವ, ಭವಿಷ್ಯದ 'ಉತ್ಪಾದನೆಯ ಡಿಜಿಟಲೀಕರಣ'ದ ಬಗ್ಗೆ ನಾನು ಗಮನಸೆಳೆಯಲು ಬಯಸುತ್ತೇನೆ. ʻಇಂಟರ್ನೆಟ್ ಆಫ್ ಥಿಂಗ್ಸ್ʼ, ʻ3ಡಿ ಪ್ರಿಂಟಿಂಗ್ʼ ಮತ್ತು ʻಬಿಗ್ ಡೇಟಾʼದ ಆಗಮನದ ವೇಳೆ ಅವುಗಳಿಗೆ ಸಜ್ಜಾದ ರೀತಿಯಲ್ಲೇ ʻಉದ್ಯಮ 4.0ʼಗೆ ನೀವು ಸಜ್ಜಾಗಬೇಕು ಮತ್ತು ಹೊಂದಿಕೊಳ್ಳಬೇಕು.
ವಾಯುಯಾನ ಕ್ಷೇತ್ರದಲ್ಲಿ ಜಾಗತಿಕ ಸಂಸ್ಥೆಯಾಗಿ ಗುರುತಿಸಲ್ಪಡಬೇಕೆಂಬ ನಿಮ್ಮ ಗುರಿಯನ್ನು ಸಾಧಿಸಲು ಗ್ರಾಹಕರ ತೃಪ್ತಿ ನಿರ್ಣಾಯಕ ಎಂಬುದು ನನ್ನ ನಂಬಿಕೆಯಾಗಿದೆ. ಗ್ರಾಹಕರ ಸಂತೋಷವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವುದರಿಂದ ಹಿಡಿದು ಉತ್ಪಾದನೆ, ವಿತರಣೆಯವರೆಗಿನ ಪ್ರತಿಯೊಂದು ಅಂಶವನ್ನೂ ಸಾಬೀತಾದ ಅತ್ಯುತ್ತಮ ಪ್ರಕ್ರಿಯೆಗಳು ಹಾಗೂ ಗುಣಮಟ್ಟದ ಪರಿಶೀಲನೆಗಳ ಮೂಲಕ ಸುವ್ಯವಸ್ಥಿತಗೊಳಿಸಬೇಕು.
ಇಂತಹ ಅದ್ಭುತ ಪ್ರದರ್ಶನವನ್ನು ಏರ್ಪಡಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ಟೀಮ್ ʻಎಚ್ಎಎಲ್ʼ ಮತ್ತು ʻಎಡಿಎʼಗೆ ಅಭಿನಂದನೆಗಳನ್ನು ತಿಳಿಸಲು ಬಯಸುತ್ತೇನೆ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ!
ಧನ್ಯವಾದಗಳು!
ಜೈ ಹಿಂದ್! "
***
(Release ID: 1747712)
Visitor Counter : 389