ಪರಿಸರ ಮತ್ತು ಅರಣ್ಯ ಸಚಿವಾಲಯ

ಹೈಡ್ರೋಫ್ಲೋರೋಕಾರ್ಬನ್ ಗಳ ಹಂತವನ್ನು ಕಡಿಮೆ ಮಾಡಲು ಓಝೋನ್ ಪದರ ಕ್ಷೀಣಿಸುವ ವಸ್ತುಗಳ ಕುರಿತಾದ ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ಕಿಗಾಲಿ ತಿದ್ದುಪಡಿಯನ್ನು ಅನುಮೋದಿಸಲು ಸಚಿವ ಸಂಪುಟ ಒಪ್ಪಿಗೆ


2023ರ ವೇಳೆಗೆ ಎಲ್ಲ ಪಾಲುದಾರರೊಂದಿಗೆ ಅಗತ್ಯ ಸಮಾಲೋಚನೆ ನಂತರ ಹಂತ ಹಂತವಾಗಿ ಹೈಡ್ರೋಫ್ಲೋರೋಕಾರ್ಬನ್ ಗಳನ್ನು ತಗ್ಗಿಸಲು ರಾಷ್ಟ್ರೀಯ ಕಾರ್ಯತಂತ್ರ

Posted On: 18 AUG 2021 4:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದಲ್ಲಿ ಹೈಡ್ರೋಫ್ಲೋರೋಕಾರ್ಬನ್ (ಎಚ್ ಎಫ್ ಸಿ) ಗಳನ್ನು ಹಂತ ಹಂತವಾಗಿ ತೊಡೆದುಹಾಕಲು ಓಝೋನ್ ಪದರವನ್ನು ತಗ್ಗಿಸುವ ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ಕಿಗಾಲಿ ತಿದ್ದುಪಡಿಗೆ ಅನುಮೋದನೆ ನೀಡಲು ಒಪ್ಪಿಗೆ ನೀಡಿದೆ. 2016 ಅಕ್ಟೋಬರ್ ನಲ್ಲಿ ರವಾಂಡದ ಕಿಗಾಲಿಯಲ್ಲಿ ನಡೆದ 28ನೇ ಸಭೆಯಲ್ಲಿ ಎಲ್ಲ ಪಾಲುದಾರರೂ ಸಹ ಮಾಂಟ್ರಿಯಲ್ ಶಿಷ್ಟಾಚಾರವನ್ನು ಅಳವಡಿಸಿಕೊಂಡಿದ್ದವು.

ಪ್ರಯೋಜನಗಳು:

  1. ಎಚ್ ಎಫ್ ಸಿ ಹಂತ ಹಂತವಾಗಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ಸಾಧ್ಯತೆ ಇದೆ, ಹವಾಮಾನ ವೈಪರೀತ್ಯವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಜನರಿಗೆ ಅನುಕೂಲವಾಗುತ್ತದೆ,
  2. ಹೈಡ್ರೋಫ್ಲೋರೋಕಾರ್ಬನ್ ಉತ್ಪಾದನೆ ಮತ್ತು ಬಳಕೆ ಮಾಡುವ ಉದ್ಯಮವು ಒಪ್ಪಿರುವ ವೇಳಾಪಟ್ಟಿಯ ಪ್ರಕಾರ  ಹೈಡ್ರೋಫ್ಲೋರೋಕಾರ್ಬನ್ ಗಳನ್ನು ಹಂತ ಹಂತವಾಗಿ ಎಚ್ ಎಫ್ ಸಿ ರಹಿತ ಮತ್ತು ಕಡಿಮೆ ಜಾಗತಿಕ ತಾಪಮಾನ ಉಂಟು ಮಾಡುವ ತಂತ್ರಜ್ಞಾನಗಳಿಗೆ ಪರಿವರ್ತಿಸುತ್ತದೆ.

ಅನುಷ್ಠಾನನ ಕಾರ್ಯತಂತ್ರ ಮತ್ತು ಗುರಿಗಳು:

  1. 2023 ವೇಳೆಗೆ ಎಲ್ಲ ಪಾಲುದಾರರೊಂದಿಗೆ ಸಮಾಲೋಚನೆ ನಂತರ ಭಾರತಕ್ಕೆ ಅನ್ವಯವಾಗುವ ಹಂತವಾರು ವೇಳಾಪಟ್ಟಿಯ ಪ್ರಕಾರ ಹೈಡ್ರೋಫ್ಲೋರೋಕಾರ್ಬನ್ ಗಳನ್ನು ಹಂತ ಹಂತವಾಗಿ ತಗ್ಗಿಸುವ ರಾಷ್ಟ್ರೀಯ ಕಾರ್ಯತಂತ್ರವನ್ನು ಅಭಿವೃದ್ಧಿಗೊಳಿಸಲಾಗುವುದು.
  2. ಕಿಗಾಲಿ ತಿದ್ದುಪಡಿಗಳ ಅನುಸರಣೆಯಲ್ಲಿ ಖಾತ್ರಿಪಡಿಸಲು ಹೈಡ್ರೋಫ್ಲೋರೋಕಾರ್ಬನ್ ಗಳ ಉತ್ಪಾದನೆ ಮತ್ತು ಬಳಕೆಗೆ ಸೂಕ್ತ ನಿಯಂತ್ರಣವನ್ನು ಹೊಂದಲು ಜಾರಿಯಲ್ಲಿರುವ ಕಾನೂನುಗಳ ತಿದ್ದುಪಡಿಯನ್ನು, ಓಝೋನ್ ಕ್ಷೀಣಿಸುವ ವಸ್ತುಗಳು (ನಿಬಂಧನೆ ಮತ್ತು ನಿಯಂತ್ರಣ) ನಿಯಮಗಳನ್ನು 2024 ಮಧ್ಯದ ವೇಳೆಗೆ ತಿದ್ದುಪಡಿ ಮಾಡಲಾಗುವುದು.

ಉದ್ಯೋಗ ಸೃಷ್ಟಿ ಸಾಧ್ಯತೆ ಸೇರಿದಂತೆ ಪ್ರಮುಖ ಪರಿಣಾಮಗಳು:

  1. ಹಂತ ಹಂತವಾಗಿ ಹೈಡ್ರೋಫ್ಲೋರೋಕಾರ್ಬನ್ ತಗ್ಗಿಸುವುದರಿಂದ ಹಸಿರು ಮನೆ ಅನಿಲಗಳಿಗೆ ಸಮನಾದ 105 ಮಿಲಿಯನ್ ಟನ್ ಗಳಷ್ಟು ಇಂಗಾಲ ಹೊರಸೂಸುವಿಕೆ ತಡೆಯಲು 2100 ವೇಳೆಗೆ ಜಾಗತಿಕ ತಾಪಮಾನ ಏರಿಕೆಯು 0.5 ಡಿಗ್ರಿ ಸೆಲ್ಷಿಯಸ್ ವರೆಗೆ ತಲುಪಲು ಸಹಾಯ ಮಾಡುತ್ತದೆ ಮತ್ತು ಓಝೋನ್ ಪದರ ರಕ್ಷಣೆ ಮುಂದುವರಿಸುವ ನಿರೀಕ್ಷೆ ಇದೆ.
  2. ಕಿಗಾಲಿ ತಿದ್ದುಪಡಿಯಂತೆ ಎಚ್ ಎಫ್ ಸಿ ಕಡಿತಗೊಳಿಸುವುದನ್ನು ಅನುಷ್ಠಾನಗೊಳಿಸುವುದರಿಂದ ಕಡಿಮೆ ಜಾಗತಿಕ ತಾಪಮಾನದ ಸಾಮರ್ಥ್ಯ ಮತ್ತು ಶಕ್ತಿ ಸಮರ್ಥ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಇಂಗಾಲ ಹೊರಸೂಸುವಿಕೆ ಕಡಿತದಿಂದ ಹವಾಮಾನಕ್ಕೂ ಸಹ ಲಾಭವಾಗಲಿದೆ.
  3. ಹಂತ ಹಂತವಾಗಿ ಎಚ್ ಎಫ್ ಸಿ ಕಡಿತ ಜಾರಿ ಭಾರತ ಸರ್ಕಾರದ ಎಲ್ಲ ಯೋಜನೆಗಳು ಮತ್ತು ಚಾಲ್ತಿಯಲ್ಲಿರುವ ಕಾರ್ಯಕ್ರಮಗಳ ಜೊತೆ ಸಮನ್ವಯಗೊಳಿಸಲಾಗುವುದು, ಇದರಿಂದಾಗಿ ಪರಿಸರ ಲಾಭದ ಜೊತೆ ಆರ್ಥಿಕ ಆಧಾರಿತ ಸಾಮಾಜಿಕ ಸಹ ಪ್ರಯೋಜನಗಳನ್ನೂ ಸಹ ಗರಿಷ್ಠ ಪ್ರಮಾಣದಲ್ಲಿ ಪಡೆಯಬಹುದಾಗಿದೆ.
  4. ಈಗಾಗಲೇ ಒಪ್ಪಿಕೊಂಡಿರುವ ಎಚ್ ಎಫ್ ಸಿ ಕಡಿತದ ವೇಳಾಪಟ್ಟಿಯಂತೆ ಉದ್ಯಮವು ಕಡಿಮೆ ಜಾಗತಿಕ ತಾಪಮಾನದ ಸಂಭಾವ್ಯ ಪರ್ಯಾಯಗಳಿಗೆ ಪರಿವರ್ತನೆಗೊಳ್ಳಲು ದೇಶೀಯ ಉಪಕರಣಗಳ ತಯಾರಿಕೆ ಮತ್ತು ಪರ್ಯಾಯ, ಎಚ್ ಎಫ್ ಸಿ ರಹಿತ ಕಡಿಮೆ ಜಾಗತಿಕ ತಾಪಮಾನ ಉಂಟು ಮಾಡುವ ಸಂಭಾವ್ಯ ರಾಸಾಯನಿಕಗಳಿಗೆ ಅವಕಾಶವಿರುತ್ತದೆ. ಅಲ್ಲದೆ, ಹೊಸ ಪೀಳಿಗೆಯ ಪರ್ಯಾಯ ಶೈತ್ಯಾಕಾರಕಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳಿಗಾಗಿ ದೇಶೀಯ ನಾವಿನ್ಯತೆಯನ್ನು ಉತ್ತೇಜಿಸಲು ಅವಕಾಶಗಳಿವೆ.

ವಿವರಗಳು:

  1. ಕಿಗಾಲಿ ತಿದ್ದುಪಡಿಯ ಪ್ರಕಾರ, ಮಾಂಟ್ರಿಯಲ್ ಶಿಷ್ಟಾಚಾರದಂತೆ ಎಲ್ಲ ಪಾಲುದಾರ ರಾಷ್ಟ್ರಗಳು ಸಾಮಾನ್ಯವಾಗಿ ಎಚ್ ಎಫ್ ಸಿಗಳೆಂದು ಕರೆಯುವ ಹೈಡ್ರೋಫ್ಲೋರೋಕಾರ್ಬನ್ ಗಳ ಉತ್ಪಾದನೆ ಮತ್ತು ಬಳಕೆಯನ್ನು ಹಂತ ಹಂತವಾಗಿ ಕಡಿತಗೊಳಿಸಬೇಕಾಗಿದೆ.
  2. ಹೈಡ್ರೋಫ್ಲೋರೋಕಾರ್ಬನ್ ಗಳನ್ನು ಹೈಡ್ರೋಫ್ಲೋರೋಕಾರ್ಬನ್ ಗಳಿಗೆ (ಎಚ್ ಎಫ್ ಸಿ) ಪರ್ಯಾಯವಾಗಿ ಓಝೋನ್ ಅಲ್ಲದ ವಸ್ತುವನ್ನಾಗಿ ಪರಿಚಯಿಸಲಾಗಿತ್ತು. ಆದರೆ ಎಚ್ ಎಫ್ ಸಿ ಓಝೋನ್ ಪದರವನ್ನು ತಗ್ಗಿಸದಿದ್ದರೂ ಅವು, 12ರಿಂದ 14ಸಾವಿರ ವರೆಗಿನ ಜಾಗತಿಕ ತಾಪಮಾನವನ್ನು ಹೆಚ್ಚಿಸುವಂತಹ ಸಾಮರ್ಥ್ಯವನ್ನು ಹೊಂದಿವೆ, ಇವು ಹವಾಮಾನದ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ.
  3. ಎಚ್ ಎಫ್ ಸಿಗಳ ಬಳಕೆಯಲ್ಲಿನ ಬೆಳವಣಿಗೆಯನ್ನು ಗುರುತಿಸಿ, ವಿಶೇಷವಾಗಿ ರೆಫ್ರಿಜರೇಟರ್ ಮತ್ತು ಹವಾನಿಯಂತ್ರಣ ವಲಯದ ಪಾಲುದಾರರು ಮಾಂಟ್ರಿಯಲ್ ಶಿಷ್ಟಾಚಾರದಡಿ ರವಾಂಡದ ಕಿಗಾಲಿಯಲ್ಲಿ 2016 ಅಕ್ಟೋಬರ್ ನಲ್ಲಿ ನಡೆದ 18ನೇ ಪಾರ್ಟಿಸ್ ಆಫ್ ಮೀಟಿಂಗ್ (ಎಂಒಪಿ)ಯಲ್ಲಿ ಎಚ್ ಎಫ್ ಸಿಗಳನ್ನು ನಿಯಂತ್ರಿತ ವಸ್ತುಗಳ ಪಟ್ಟಿಗೆ ಸೇರಿಸಲು ಒಪ್ಪಂದ ಮಾಡಿಕೊಳ್ಳಲಾಯಿತು ಮತ್ತು 2040 ಅಂತ್ಯದ ವೇಳೆಗೆ ಅವುಗಳನ್ನು ಕ್ರಮೇಣ ಶೇ.80ರಿಂದ 85ಕ್ಕೆ ಕಡಿತಗೊಳಿಸುವ ವೇಳಾಪಟ್ಟಿಗೆ ಅನುಮೋದಿಸಲಾಯಿತು.
  4. ಭಾರತವು ತನ್ನ ಎಚ್ ಎಫ್ ಸಿಗಳ ನಾಲ್ಕು ಹಂತಗಳಲ್ಲಿ 2032 ನಂತರ ಕಡಿತಗೊಳಿಸುತ್ತದೆ, 2032 ವೇಳೆಗೆ ಶೇ.10, 2037ರವೇಳೆಗೆ ಶೇ.20 ಮತ್ತು 2042 ವೇಳೆಗೆ ಶೇ.30 ಮತ್ತು 2047 ವೇಳೆಗೆ ಶೇ.80ರಷ್ಟು ಕಡಿತ ಮಾಡಲಿದೆ.
  5. ಕಿಗಾಲಿ ತಿದ್ದುಪಡಿಗೆ ಮುಂಚಿತವಾಗಿ ಮಾಡಿಕೊಂಡ ಮಾಂಟ್ರಿಯಲ್ ಶಿಷ್ಟಾಚಾರದ ಎಲ್ಲ ತಿದ್ದುಪಡಿಗಳು ಮತ್ತು ಹೊಂದಾಣಿಕೆಗಳು  ಸಾರ್ವತ್ರಿಕ ಬೆಂಬಲವನ್ನು ಹೊಂದಿವೆ.

ಹಿನ್ನೆಲೆ:

  1. ಓಝೋನ್ ಪದರದ ಸವಕಳಿಗೆ ಕಾರಣವಾಗುವ ವಸ್ತುಗಳನ್ನು ಒಳಗೊಂಡ ಮಾಂಟ್ರಿಯಲ್ ಶಿಷ್ಟಾಚಾರ, ಓಝೋನ್ ಪದರ ರಕ್ಷಣೆಗೆ ಅಂತಾರಾಷ್ಟ್ರೀಯ ಪರಿಸರ ಒಪ್ಪಂದವಾಗಿದೆ. ಓಝೋನ್ ಖಾಲಿಯಾಗುವ ವಸ್ತುಗಳು (ಓಡಿಎಸ್) ಮಾನವ ನಿರ್ಮಿತ ರಾಸಾಯನಿಕಗಳ ಉತ್ಪಾದನೆ ಮತ್ತು ಬಳಕೆಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲಿವೆ. ವಾಯುಮಂಡಲದ ಓಝೋನ್ ಪದರವು ಮನುಷ್ಯರನ್ನು ರಕ್ಷಿಸುತ್ತದೆ ಮತ್ತು ಸೂರ್ಯನಿಂದ ನೇರಳಾತೀತ ವಿಕರಣದ ಹಾನಿ ಪರಿಸರ ಮೇಲಾಗುವುದನ್ನು ತಡೆಯುತ್ತದೆ.
  2. 1992 ಜೂನ್ 19ರಂದು ಭಾರತವು ಓಝೋನ್ ಪದರವನ್ನು ಸವೆಸುವ ಪದಾರ್ಥಗಳ ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ಸಹಿ ಹಾಕಿತು ಮತ್ತು ಅಲ್ಲಿಂದೀಚೆಗೆ ಮಾಂಟ್ರಿಯಲ್ ಶಿಷ್ಟಾಚಾರದ ಎಲ್ಲ ತಿದ್ದುಪಡಿಗಳನ್ನು ಅನುಮೋದಿಸಿದೆ. ಸಚಿವ ಸಂಪುಟದ ಸದ್ಯದ ಅನುಮೋದನೆ ಹೊರತಾಗಿಯೂ ಭಾರತವು ಹೈಡ್ರೋಫ್ಲೋರೋಕಾರ್ಬನ್ ಗಳನ್ನು ಹಂತ ಹಂತವಾಗಿ ಕಡಿತಗೊಳಿಸಲು ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ಕಿಗಾಲಿ ತಿದ್ದುಪಡಿಯನ್ನು ಅನುಮೋದಿಸುತ್ತದೆ.
  3. ಮಾಂಟ್ರಿಯಲ್ ಶಿಷ್ಟಾಚಾರದ ವೇಳಾಪಟ್ಟಿಯ ಪ್ರಕಾರ ಓಝೋನ್ ಪದರ ಸವಕಳಿ ಮಾಡುವ ಎಲ್ಲ ವಸ್ತುಗಳನ್ನು ಹಂತ ಹಂತವಾಗಿ ತೆಗೆದುಹಾಕುವ ಎಲ್ಲ ಗುರಿಗಳನ್ನು ಭಾರತ ಯಶಸ್ವಿಯಾಗಿ ಸಾಧಿಸಲಿದೆ.

***



(Release ID: 1747053) Visitor Counter : 314