ಪರಿಸರ ಮತ್ತು ಅರಣ್ಯ ಸಚಿವಾಲಯ
ಭಾರತದ ಇನ್ನೂ ನಾಲ್ಕು ತಾಣಗಳನ್ನು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶಗಳಾಗಿ ಗುರುತಿಸಿ ರಾಮ್ಸರ್ ಪಟ್ಟಿಗೆ ಸೇರಿಸಲಾಗಿದೆ
ಪರಿಸರದ ಬಗ್ಗೆ ಪ್ರಧಾನಮಂತ್ರಿಯವರ ಕಳಕಳಿಯೇ ಭಾರತವು ತನ್ನ ಜೌಗು ಪ್ರದೇಶಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಕಾರಣವಾಗಿದೆ: ಶ್ರೀ ಭೂಪೇಂದರ್ ಯಾದವ್
Posted On:
14 AUG 2021 9:14AM by PIB Bengaluru
ಭಾರತದ ಇನ್ನೂ ನಾಲ್ಕು ಜೌಗು ಪ್ರದೇಶಗಳು ʻರಾಮ್ಸರ್ʼ ಸಚಿವಾಲಯದಿಂದ ʻರಾಮ್ಸರ್ ತಾಣʼಗಳಾಗಿ ಮಾನ್ಯತೆ ಪಡೆದಿವೆ. ಈ ತಾಣಗಳೆಂದರೆ ಗುಜರಾತ್‌ನ ಥೋಲ್ ಮತ್ತು ವಾಧ್ವಾನಾ ಹಾಗೂ ಹರಿಯಾಣದ ಸುಲ್ತಾನ್‌ಪುರ ಮತ್ತು ಭಿಂದಾವಾಸ್. ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಕೇಂದ್ರ ಪರಿಸರ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು, ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪರಿಸರದ ಬಗ್ಗೆ ವಹಿಸುತ್ತಿರುವ ವಿಶೇಷ ಕಾಳಜಿಯೇ ಭಾರತವು ತನ್ನ ಜೌಗು ಪ್ರದೇಶಗಳ ಬಗ್ಗೆ ಹೆಚ್ಚಿನ ಆಸ್ತೆ ತಳೆಯಲು ಕಾರಣ ಎಂದು ಹೇಳಿದ್ದಾರೆ.
ಇದರೊಂದಿಗೆ, ಭಾರತದಲ್ಲಿ ರಾಮ್ಸರ್ ತಾಣಗಳ ಸಂಖ್ಯೆ 46ಕ್ಕೆ ತಲುಪಿದೆ. ಈ ತಾಣಗಳಿಂದ ಆವರಿಸಲ್ಪಟ್ಟ ಮೇಲ್ಮೈ ಭೂಪ್ರದೇಶವು ಈಗ 1,083,322 ಹೆಕ್ಟೇರ್ ಆಗಿದೆ. ಹರಿಯಾಣ ತನ್ನ ಮೊದಲ `ರಾಮ್ಸರ್’ ತಾಣವನ್ನು ಪಡೆದಿದೆ. ಗುಜರಾತ್ 2012ರಲ್ಲಿ ಘೋಷಿಸಲಾದ ನಲ್‌ಸರೋವರದ ನಂತರ ಇನ್ನೂ ಮೂರು ಇಂತಹ ತಾಣಗಳನ್ನು ಪಡೆದಿದೆ. "ಜಾಗತಿಕ ಜೀವ ವೈವಿಧ್ಯತೆಯ ಸಂರಕ್ಷಣೆ ಹಾಗೂ ಮಾನವ ಜೀವ ಸಂಕುಲಕ್ಕೆ ಪ್ರಧಾನ ಅಗತ್ಯವೆನಿಸಿರುವ ಜೌಗು ಪ್ರದೇಶಗಳ ಅಂತರರಾಷ್ಟ್ರೀಯ ಜಾಲವನ್ನು ಅಭಿವೃದ್ಧಿಪಡಿಸುವುದು ಮತ್ತು ನಿರ್ವಹಿಸುವುದು ರಾಮ್ಸರ್ ಪಟ್ಟಿಯ ಉದ್ದೇಶಗಳಲ್ಲಿ ಒಂದಾಗಿದೆ."
ಜೌಗು ಪ್ರದೇಶಗಳು ಆಹಾರ, ನೀರು, ನಾರು, ಅಂತರ್ಜಲ ಮರುಪೂರಣ, ನೀರಿನ ಶುದ್ಧೀಕರಣ, ಪ್ರವಾಹ ನಿಯಂತ್ರಣ, ಮಣ್ಣಿನ ಸವಕಳಿ ನಿಯಂತ್ರಣ ಮತ್ತು ಹವಾಮಾನ ನಿಯಂತ್ರಣದಂತಹ ಪ್ರಮುಖ ಸಂಪನ್ಮೂಲಗಳು ಮತ್ತು ಪರಿಸರ ವ್ಯವಸ್ಥೆ ಸೇವೆಗಳನ್ನು ಒದಗಿಸುತ್ತವೆ. ವಾಸ್ತವವಾಗಿ, ಅವು ನೀರಿನ ಪ್ರಮುಖ ಮೂಲವಾಗಿವೆ. ನಮ್ಮ ಸಿಹಿನೀರಿನ ಪ್ರಧಾನ ಮೂಲವೂ ಈ ಜೌಗು ಪ್ರದೇಶಗಳೇ ಆಗಿವೆ. ಇವು ಮಳೆಯ ನೀರನ್ನು ಇಂಗಿಸಿ ಅಂತರ್ಜಲವನ್ನು ಮರುಪೂರಣ ಮಾಡುತ್ತವೆ.
ಹರಿಯಾಣದ ಅತಿದೊಡ್ಡ ಜೌಗು ಪ್ರದೇಶವಾದ ಭಿಂದಾವಾಸ್ ವನ್ಯಜೀವಿ ಅಭಯಾರಣ್ಯವು ಮಾನವ ನಿರ್ಮಿತ ಸಿಹಿನೀರಿನ ಜೌಗು ಪ್ರದೇಶವಾಗಿದೆ. 250ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ವರ್ಷವಿಡೀ ಅಭಯಾರಣ್ಯವನ್ನು ವಿಶ್ರಾಂತಿ ಮತ್ತು ಸಂತಾನೋತ್ಪತ್ತಿ ತಾಣವಾಗಿ ಬಳಸುತ್ತವೆ. ಅಳಿವಿನಂಚಿನಲ್ಲಿರುವ ಈಜಿಪ್ಟಿನ ರಣಹದ್ದು, ಸ್ಟೆಪ್ಪಿ ಈಗಲ್, ಪಲ್ಲಾಸ್‌ನ ಮತ್ಸ್ಯ ಹದ್ದು ಮತ್ತು ಕಪ್ಪು ಹೊಟ್ಟೆಯ ಟೆರ್ನ್ (ಕಡಲಕಾಗೆ) ಸೇರಿದಂತೆ ಜಾಗತಿಕವಾಗಿ ಅಪಾಯಕ್ಕೆ ಸಿಲುಕಿರುವ ಹತ್ತಕ್ಕೂ ಹೆಚ್ಚು ಪ್ರಭೇದಗಳನ್ನು ಈ ತಾಣವು ರಕ್ಷಿಸುತ್ತಿದೆ.
ಹರಿಯಾಣದ ಸುಲ್ತಾನ್‌ಪುರ ರಾಷ್ಟ್ರೀಯ ಉದ್ಯಾನವು 220 ಕ್ಕೂ ಹೆಚ್ಚು ಪ್ರಭೇದಗಳ ನೆಲೆಯಾಗಿದೆ. ಚಳಿಗಾಲದ ವಲಸೆ ಹಕ್ಕಿಗಳು ಮತ್ತು ಸ್ಥಳೀಯ ವಲಸೆ ಜಲಪಕ್ಷಿಗಳನ್ನು ಅವುಗಳ ಜೀವನ ಚಕ್ರಗಳ ನಿರ್ಣಾಯಕ ಹಂತಗಳಲ್ಲಿ ಇದು ರಕ್ಷಿಸುತ್ತದೆ. ಇವುಗಳಲ್ಲಿ ಹತ್ತಕ್ಕೂ ಹೆಚ್ಚು ಜಾಗತಿಕವಾಗಿ ಅಪಾಯಕ್ಕೆ ಸಿಲುಕಿವೆ. ಇವುಗಳಲ್ಲಿ ತೀರಾ ಅಳಿವಿನಂಚಿನಲ್ಲಿರುವ ಲ್ಯಾಪ್ವಿಂಗ್ ಮತ್ತು ಅಳಿವಿನಂಚಿನಲ್ಲಿರುವ ಈಜಿಪ್ಟಿನ ರಣಹದ್ದು, ಸಾಕರ್ ರಣಹದ್ದು, ಪಲ್ಲಾಸ್‌ನ ಮತ್ಸ್ಯ ಹದ್ದು ಮತ್ತು ಕಪ್ಪು-ಹೊಟ್ಟೆಯ ಟರ್ನ್ (ಕಡಲ ಕಾಗೆ) ಸೇರಿವೆ.
ಗುಜರಾತ್‌ನ ಥೋಲ್ ಸರೋವರ ವನ್ಯಜೀವಿ ಅಭಯಾರಣ್ಯವು ಮಧ್ಯ ಏಷ್ಯಾದ ಹಕ್ಕಿಗಳ ವಲಸೆ ಪಥದಲ್ಲಿದೆ (ಫ್ಲೈವೇ) ಮತ್ತು ಇಲ್ಲಿ 320ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಕಾಣಬಹುದು. ಈ ಜೌಗು ಪ್ರದೇಶವು 30ಕ್ಕೂ ಹೆಚ್ಚು ಅಪಾಯದಲ್ಲಿರುವ ಜಲ ಪಕ್ಷಿಗಳ ಪ್ರಭೇದಗಳನ್ನು ರಕ್ಷಿಸುತ್ತದೆ. ಉದಾಹರಣೆಗೆ ತೀರಾ ಅಳಿವಿನಂಚಿನಲ್ಲಿರುವ ಬಿಳಿ-ಪೃಷ್ಠದ ಹದ್ದು, ಲ್ಯಾಪ್ವಿಂಗ್ ಮತ್ತು ಸರಸ್ ಕೊಕ್ಕರೆ, ಕಾಮನ್ ಪೊಚಾರ್ಡ್ (ಯೂರೋಪಿನ ಬಾತುಕೋಳಿ) ಮತ್ತು ಪಾರ್ಶ್ವ ಬಿಳಿ ಮುಂಭಾಗದ ಹೆಬ್ಬಾತು (ಲೆಸ್ಸರ್ ವೈಟ್-ಫ್ರಂಟ್ಡ್ ಗೂಸ್).
ಗುಜರಾತ್‌ನ ವಾಧ್ವಾನಾ ಜೌಗು ಪ್ರದೇಶವು ಮಧ್ಯ ಏಷ್ಯಾದ ಪಕ್ಷಿಗಳ ವಲಸೆ ಪಥದಲ್ಲಿ ಸಾಗುವ 80ಕ್ಕೂ ಹೆಚ್ಚು ಪ್ರಭೇದಗಳು ಸೇರಿದಂತೆ ವಲಸೆ ಜಲಪಕ್ಷಿಗಳಿಗೆ ಚಳಿಗಾಲದಲ್ಲಿ ನೆಲೆ ಒದಗಿಸುವ ಹಿನ್ನೆಲೆಯಲ್ಲಿ ಪಕ್ಷಿಜೀವನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದಿದೆ. ಅವುಗಳಲ್ಲಿ ಅಳಿವಿನಂಚಿನಲ್ಲಿರುವ ಪಲ್ಲಾಸ್‌ನ ಮತ್ಸ್ಯ-ಹದ್ದು, ಕಾಮನ್ ಪೋಚಾರ್ಡ್(ಯೂರೋಪಿನ ಬಾತುಕೋಳಿ) ಮತ್ತು ಅಪಾಯದಲ್ಲಿರುವ ಡಾಲ್ಮೇಷಿಯಾ ಪೆಲಿಕನ್ (ಹೆಜ್ಜಾರ್ಲೆ), ಬೂದು ತಲೆಯ ಮತ್ಸ್ಯ-ಹದ್ದು ಮತ್ತು ಫೆರ್ರುಜಿನಸ್ ಬಾತುಕೋಳಿಯಂತಹ ಕೆಲವು ಅಳಿವಿನಂಚಿನಲ್ಲಿರುವ ಪ್ರಬೇಧಗಳು ಸೇರಿವೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈ ತಾಣಗಳ ವಿವೇಚನಾಯುತ ಬಳಕೆಯನ್ನು ಖಾತರಿಪಡಿಸಿಕೊಳ್ಳಲು ರಾಜ್ಯ ಜೌಗುಭೂಮಿ ಪ್ರಾಧಿಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ.
***
(Release ID: 1745790)
Visitor Counter : 956