ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

'ಪಿಎಂ-ದಕ್ಷ್' ಪೋರ್ಟಲ್ ಮತ್ತು 'ಪಿಎಂ-ದಕ್ಷ್' ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಡಾ. ವೀರೇಂದ್ರ ಕುಮಾರ್


ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳು ಮತ್ತು ಸಫಾಯಿ ಕರ್ಮಚಾರಿಗಳಿಗೆ 'ಪಿಎಂ-ದಕ್ಷ್' ಪೋರ್ಟಲ್ ಮೂಲಕ, ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಒಂದೆಡೆ ಲಭ್ಯ

ಕಳೆದ ಐದು ವರ್ಷಗಳಲ್ಲಿ ನಿರ್ದಿಷ್ಟ ಗುರಿಯ ಗುಂಪಿನ 2,73,152 ಜನರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗಿದೆ

2021-22ನೇ ಸಾಲಿನಲ್ಲಿ, ನಿರ್ದಿಷ್ಟ ಗುರಿಯ ಗುಂಪುಗಳ ಸುಮಾರು 50,000 ಜನರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಒದಗಿಸುವ ಗುರಿ ಹೊಂದಲಾಗಿದೆ

Posted On: 07 AUG 2021 5:44PM by PIB Bengaluru

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವಿರೇಂದ್ರ ಕುಮಾರ್ ಅವರು ಎನ್.ಇ.ಜಿ.ಡಿ. ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ನಿರ್ದಿಷ್ಟ ಗುರಿಯ ಗುಂಪುಗಳಿಗೆ ಲಭ್ಯವಾಗುವಂತೆ ಮಾಡಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಭಿವೃದ್ಧಿಪಡಿಸಿರುವ 'ಪಿಎಂ-ದಕ್ಷ್' ಪೋರ್ಟಲ್ ಮತ್ತು 'ಪಿಎಂ-ದಕ್ಷ್' ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಪೋರ್ಟಲ್ ಮತ್ತು ಅಪ್ಲಿಕೇಶನ್ ಮೂಲಕ ನಿರ್ದಿಷ್ಟ ಗುರಿಯ ಗುಂಪುಗಳ ಯುವಕರು ಈಗ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳ ಪ್ರಯೋಜನಗಳನ್ನು ಹೆಚ್ಚು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತಿದೆ.

ಪ್ರಧಾನಮಂತ್ರಿ ದಕ್ಷ್ ಮತ್ತು ಕೌಶಲತಾ ಸಂಪನ್ನ ಹಿತಗ್ರಾಹಿ (ಪಿಎಂ-ದಕ್ಷ್) ಯೋಜನೆಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2020-21ನೇ ಸಾಲಿನಿಂದ ಜಾರಿಗೆ ತಂದಿದೆ.  ಈ ಯೋಜನೆಯಡಿ, ಅರ್ಹ ಗುರಿಯ ಗುಂಪಿಗೆ (1) ಉನ್ನತ ಕೌಶಲ್ಯ/ ಮರು ಕೌಶಲ್ಯ (2) ಅಲ್ಪಾವಧಿ ತರಬೇತಿ ಕಾರ್ಯಕ್ರಮ (3) ದೀರ್ಘಕಾಲೀನ ತರಬೇತಿ ಕಾರ್ಯಕ್ರಮ ಮತ್ತು (4) ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ (ಇಡಿಪಿ) ಕುರಿತು ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಒದಗಿಸಲಾಗುತ್ತಿದೆ. ಈ ತರಬೇತಿ ಕಾರ್ಯಕ್ರಮಗಳನ್ನು ಸರ್ಕಾರಿ ತರಬೇತಿ ಸಂಸ್ಥೆಗಳು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಸ್ಥಾಪಿಸಿರುವ ಘಟಕ ಕೌಶಲ ಮಂಡಳಿಗಳು ಮತ್ತು ಇತರ ವಿಶ್ವಾಸಾರ್ಹ ಸಂಸ್ಥೆಗಳ ಮೂಲಕ ಜಾರಿ ಮಾಡಲಾಗುತ್ತಿದೆ. 

ಈಗ, ಯಾವುದೇ ವ್ಯಕ್ತಿಯು 'ಪಿಎಂ-ದಕ್ಷ್' ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಕೌಶಲ್ಯ ಅಭಿವೃದ್ಧಿ ತರಬೇತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪಡೆಯಬಹುದು. ಅಲ್ಲದೆ, ಕೇವಲ ಒಂದು ಕ್ಲಿಕ್ ಮೂಲಕ, ಆತ/ಆಕೆ ಸಮೀಪದಲ್ಲೇ ನಡೆಯುತ್ತಿರುವ ಕೌಶಲ್ಯ ಅಭಿವೃದ್ಧಿ ತರಬೇತಿಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು ಮತ್ತು ಆಕೆ/ಆತ ಕೌಶಲ್ಯ ತರಬೇತಿಗಾಗಿ ಸುಲಭವಾಗಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಪಿಎಂ- ದಕ್ಷ್ ಪೋರ್ಟಲ್ http://pmdaksh.dosje.gov.in ನಲ್ಲಿ  ಲಭ್ಯವಿದ್ದರೆ, 'ಪಿಎಂ-ದಕ್ಷ್' ಮೊಬೈಲ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.
ಡಾ. ವೀರೇಂದ್ರ ಕುಮಾರ್ "ಇಂದು, ಸಾರ್ವಜನಿಕ ಬಳಕೆಗಾಗಿ ಈ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಅನ್ನು ಪ್ರಾರಂಭಿಸಲು ನಾನು ಹೆಮ್ಮೆ ಪಡುತ್ತೇನೆ. ಈ ಪೋರ್ಟಲ್ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾವುದೇ ಉಪಯುಕ್ತ ಮತ್ತು ಪ್ರಾಯೋಗಿಕತೆಯನ್ನು ಗಮನದಲ್ಲಿಟ್ಟುಕೊಂಡ ಸಲಹೆಗಳು ಬಂದರೆ, ಈ ಸಚಿವಾಲಯವು ಅಗತ್ಯ ಸುಧಾರಣೆಗಳನ್ನು ಮಾಡುತ್ತದೆ, ಇದರಿಂದ ಈ ಪೋರ್ಟಲ್ ನಿರ್ದಿಷ್ಟ ಗುರಿಯ ಗುಂಪುಗಳಿಗೆ ಹೆಚ್ಚು ಉಪಯುಕ್ತ ಮತ್ತು ಪ್ರಯೋಜನಕಾರಿಯಾಗಲಿದೆ, ಇದರಿಂದ ಅವರು ಕೌಶಲ್ಯ ಹೊಂದಲು ಮತ್ತು ಸ್ವಯಂ ಉದ್ಯೋಗ ಅಥವಾ ವೇತನ-ಉದ್ಯೋಗಕ್ಕೆ ಸಂಬಂಧಿಸಿದ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಲು ಸಾಧ್ಯವಾಗುತ್ತದೆ" ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವಿರೇಂದ್ರ ಕುಮಾರ್ ಹೇಳಿದ್ದಾರೆ.
ಈ ಪೋರ್ಟಲ್ ನ ಕೆಲವು ಮುಖ್ಯಾಂಶಗಳು ಈ ಕೆಳಗಿನಂತಿವೆ:
•    ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಮತ್ತು ಸಫಾಯಿ ಕರ್ಮಚಾರಿಗಳಿಗೆ ಒಂದೇ ಸ್ಥಳದಲ್ಲಿ ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಲಭ್ಯವಾಗುತ್ತವೆ.
•    ತರಬೇತಿ ಸಂಸ್ಥೆಗೆ ನೋಂದಾಯಿಸಲು ಸೌಲಭ್ಯ ಮತ್ತು ಅವರ ಆಸಕ್ತಿಯ ಕಾರ್ಯಕ್ರಮ.
•    ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಅಪೇಕ್ಷಿತ ದಾಖಲೆಗಳನ್ನು ಅಪ್ ಲೋಡ್ ಮಾಡುವ ಸೌಲಭ್ಯ.
•    ತರಬೇತಿ ಅವಧಿಯಲ್ಲಿ ತರಬೇತಿ ಪಡೆದವರ ಹಾಜರಾತಿಯನ್ನು ಮುಖ ಮತ್ತು ಕಣ್ಣಿನ ಸ್ಕ್ಯಾನಿಂಗ್ ಮೂಲಕ ನೋಂದಾಯಿಸುವ ಸೌಲಭ್ಯ.
•    ತರಬೇತಿಯ ಸಮಯದಲ್ಲಿ ಫೋಟೋ ಮತ್ತು ವೀಡಿಯೊ ಕ್ಲಿಪ್ ಮೂಲಕ ಸೌಲಭ್ಯದ ಮೇಲ್ವಿಚಾರಣೆ ಮಾಡುವುದು ಇತ್ಯಾದಿ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಮತ್ತು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ - ಮೂರು ಸರ್ವೋನ್ನತ ನಿಗಮಗಳು ಕಾರ್ಯನಿರ್ವಹಿಸುತ್ತಿವೆ. ಈ ನಿಗಮಗಳು ಸ್ವಯಂ ಉದ್ಯೋಗಕ್ಕಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಸಫಾಯಿ ಕರ್ಮಚಾರಿಗಳ ನಿರ್ದಿಷ್ಟ  ಗುರಿಯ ಗುಂಪುಗಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲಗಳನ್ನು ಒದಗಿಸುತ್ತಿವೆ. ಇದಲ್ಲದೆ, ಅವರು ಗುರಿಯ  ಗುಂಪುಗಳ ಕೌಶಲ್ಯ ಅಭಿವೃದ್ಧಿಗೆ ಉಚಿತ ತರಬೇತಿಯನ್ನು ಸಹ ಒದಗಿಸುತ್ತಿವೆ.
ಈ ನಿಗಮಗಳು ಸಾಲಗಳು ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿಗಳೆರಡರ ಮೂಲಕ ಗುರಿಯ ಗುಂಪುಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಮೂರು ಸರ್ವೋನ್ನತ ನಿಗಮಗಳು ಕಳೆದ ಐದು ವರ್ಷಗಳಲ್ಲಿ ಗುರಿಯ ಗುಂಪುಗಳ 2,73,152 ಜನರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಿವೆ, ಇದು ಸ್ವಯಂ ಉದ್ಯೋಗ ಮತ್ತು ವೇತನ - ಉದ್ಯೋಗದ ಮೂಲಕ ತಮ್ಮನ್ನು ಮತ್ತು ತಮ್ಮ ಕುಟುಂಬಗಳನ್ನು ಬೆಂಬಲಿಸಲು ಅನುವು ಮಾಡಿಕೊಟ್ಟಿದೆ. 2021-22ನೇ ವರ್ಷದಲ್ಲಿ, ಮೇಲಿನ ಮೂರು ಸರ್ವೋನ್ನತ ನಿಗಮಗಳ ಮೂಲಕ ಗುರಿಯ ಗುಂಪುಗಳ ಸುಮಾರು 50,000 ಜನರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ.

****



(Release ID: 1743684) Visitor Counter : 345