ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಹೊಸ ಕೊರೊನಾ ಪ್ರಕರಣಗಳ ಹಠಾತ್ ಹೆಚ್ಚಳ ಹಿನ್ನೆಲೆ; ಕೇರಳಕ್ಕೆ ಉನ್ನತ ಮಟ್ಟದ ತಂಡ ರವಾನಿಸಲು ಕೇಂದ್ರದ ನಿರ್ಧಾರ


ಕೋವಿಡ್-19 ನಿರ್ವಹಣೆಗೆ ಪರಿಣಾಮಕಾರಿಯಾಗಿ ಸಾರ್ವಜನಿಕ ಆರೋಗ್ಯ ಕಾಪಾಡಲು ಕೇರಳ ಸರ್ಕಾರಕ್ಕೆ ಬೆಂಬಲ ನೀಡಲಿದೆ ಕೇಂದ್ರದ ತಂಡ

Posted On: 29 JUL 2021 10:44AM by PIB Bengaluru

ಕೇರಳ ರಾಜ್ಯದಲ್ಲಿ ದಿನೇದಿನೆ ಹೊಸ ಕೋವಿಡ್-19 ಪ್ರಕರಣಗಳು ಹಠಾತ್ತನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಉನ್ನತ ಮಟ್ಟದ ಬಹುಶಿಸ್ತೀಯ ತಂಡವನ್ನು ಅತಿ ಶೀಘ್ರವೇ ರವಾನಿಸಲು ನಿರ್ಧಾರ ಕೈಗೊಂಡಿದೆ. ಕೇರಳದಲ್ಲಿ ಕೊರೊನಾ ಹೊಸ ಪ್ರಕರಣಗಳ ನಿರ್ವಹಣೆಗೆ ಪರಿಣಾಮಕಾರಿಯಾಗಿ ಸಾರ್ವಜನಿಕ ಆರೋಗ್ಯ ಕಾಪಾಡಲು ತಂಡವು ಕೇರಳ ರಾಜ್ಯ ಸರ್ಕಾರ ಮತ್ತು ಅಲ್ಲಿನ ಆರೋಗ್ಯ ಸಂಸ್ಥೆಗಳಿಗೆ ನೆರವು, ಬೆಂಬಲ ಮತ್ತು ಸಲಹೆ ಸೂಚನೆ ನೀಡಲಿದೆ.

ಆರು ಉನ್ನತಾಧಿಕಾರಿಗಳಿರುವ ತಂಡವು ಕೇರಳಕ್ಕೆ ಸದ್ಯದಲ್ಲೇ ಭೇಟಿ ನೀಡಲಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್|ಸಿಡಿಸಿ) ನಿರ್ದೇಶಕ ಡಾ. ಎಸ್.ಕೆ. ಸಿಂಗ್ ನೇತೃತ್ವದ ತಂಡವು ಜುಲೈ 30ರಂದು ಕೇರಳಕ್ಕೆ ತೆರಳಲಿದ್ದು, ಕೊರೊನಾ ಸೋಂಕು ಹೆಚ್ಚುತ್ತಿರುವ ರಾಜ್ಯಗಳಿಗೆ ಭೇಟಿ ನೀಡಿ, ನಿಯಂತ್ರಣ ಕ್ರಮಗಳನ್ನು ಸೂಚಿಸಲಿದೆ.

ಕೇಂದ್ರದ ಉನ್ನಾಧಿಕಾರಿಗಳ ತಂಡವು ಕೇರಳದ ಆರೋಗ್ಯ ಇಲಾಖೆಗಳ ಜತೆ ನಿಕಟವಾಗಿ ಕೆಲಸ ಮಾಡಲಿದೆ. ಅಲ್ಲಿ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಪರಿಸ್ಥಿತಿಗಳ ಕುರಿತು ಪರಾಮರ್ಶೆ ನಡೆಸಿ, ಸಮಗ್ರ ಮಾಹಿತಿ ಕಲೆ ಹಾಕಿ, ಸಾರ್ವಜನಿಕ ಆರೋಗ್ಯ ಕಾಪಾಡಲು ಅಗತ್ಯವಾದ ಎಲ್ಲಾ ಸಲಹೆ ಸೂಚನೆ ಒಳಗೊಂಡ ಶಿಫಾರಸು ಮಾಡಲಿದೆ.

ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 1.54 ಲಕ್ಷಕ್ಕೆ ಏರಿಕೆಯಾಗಿದೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಕೇರಳ ರಾಜ್ಯವೊಂದರಲ್ಲೇ 37.1% ಪ್ರಮಾಣ ವರದಿಯಾಗಿದೆ. ಕಳೆದ 7 ದಿನಗಳಿಂದ ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ದೈನಂದಿನ 1.41% ಪ್ರಮಾಣದಲ್ಲಿ ಹೆಚ್ಚುತ್ತಿದೆ. ದೈನಂದಿನ ಸರಾಸರಿ 17,443 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಕೇರಳದಲ್ಲಿ ಒಟ್ಟಾರೆ ಪಾಸಿಟಿವಿಟಿ ದರ (ಹೊಸ ಸೋಂಕಿತರು) 12.93%  ಏರಿಕೆ ಕಾಣುತ್ತಿದೆ, ವಾರದ ಪಾಸಿಟಿವಿಟಿ ದರ 11.97% ಗೆ ಏರಿಕೆಯಾಗಿದೆ. ಆರು ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ದರ 10% ಗಿಂತ ಹೆಚ್ಚಿಗೆ ಇದೆ.

***



(Release ID: 1740245) Visitor Counter : 256