ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಆರೋಗ್ಯ ಸಚಿವಾಲಯದಿಂದ 16 ರಾಜ್ಯಗಳ ಸಮುದಾಯ ರೇಡಿಯೋ ಕೇಂದ್ರಗಳಿಗೆ ಸಂವಹನ ಜಾಗೃತಿ ಕಾರ್ಯಾಗಾರ ಆಯೋಜನೆ


ಕೋವಿಡ್ ಲಸಿಕೀಕರಣ ಕುರಿತು ವಿನೂತನ ಕಾರ್ಯಕ್ರಮ ಹಾಗೂ ಕೋವಿಡ್ ಸೂಕ್ತ ನಡವಳಿಕೆ ಬಗ್ಗೆ ಜನಾಂದೋಲನ ರೂಪಿಸುವಂತೆ ಸಮುದಾಯ ರೇಡಿಯೋ ಕೇಂದ್ರಗಳಿಗೆ ಕರೆ

Posted On: 25 JUL 2021 1:02PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಯುನಿಸೆಫ್ ಸಹಯೋಗದೊಂದಿಗೆ 16 ರಾಜ್ಯಗಳ ಸಮುದಾಯ ರೇಡಿಯೋ ಕೇಂದ್ರಗಳ ಪ್ರತಿನಿಧಿಗಳಿಗೆ ಸಂವಹನ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಿತ್ತು.  ಕೋವಿಡ್ ಸೂಕ್ತ ನಡವಳಿಕೆ (ಸಿಎಬಿ) ಮತ್ತು ಕೋವಿಡ್ ಲಸಿಕೀಕರಣದ ಸುತ್ತಲಿನ ಮಿಥ್ಯೆಗಳನ್ನು ಹೋಗಲಾಡಿಸುವುದು ಮತ್ತು ವಿಶೇಷವಾಗಿ ದೇಶದ  ಕುಗ್ರಾಮ ಮತ್ತು ತಲುಪಲು ಕಷ್ಟಕರವಾದ ಪ್ರದೇಶಗಳಲ್ಲಿ ನೆಲೆಸಿರುವ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಅರ್ಥಪೂರ್ಣ ಜಾಗೃತಿ ಅಭಿಯಾನಗಳನ್ನು ರೂಪಿಸುವ ಕುರಿತು ವಿಷಯಾಧಾರಿತ ಗೋಷ್ಠಿಗಳಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು.

ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಲವ್ ಅಗರವಾಲ್ ಅವರು ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಜಂಟಿ ಕಾರ್ಯದರ್ಶಿ ತಮ್ಮ ಆರಂಭಿಕ ಭಾಷಣದಲ್ಲಿ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನದಲ್ಲಿ ಸಮುದಾಯ ರೇಡಿಯೋ ಕೇಂದ್ರಗಳು(ಸಿಆರ್ ಎಸ್) ನೀಡುತ್ತಿರುವ ಬೆಂಬಲದ ಕೊಡುಗೆಯನ್ನು ಶ್ಲಾಘಿಸಿದರು ಮತ್ತು ಸಿಆರ್ ಎಸ್ ಗಳು ಕೋವಿಡ್ ಲಸಿಕೀಕರಣ ಕುರಿತ ಮಾಹಿತಿ ಪೂರ್ಣ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವುದರಿಂದ ಸದ್ಯ ನಡೆಯುತ್ತಿರುವ ವಯಸ್ಕರ ಲಸಿಕಾ ಅಭಿಯಾನದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದು ಪ್ರತಿಫಲನಗೊಂಡಿದೆ ಎಂದರು.

ಪ್ರಾದೇಶಿಕ ಭಾಷೆಗಳಲ್ಲಿನ ಸಿಆರ್ ಎಸ್ ಕಾರ್ಯಕ್ರಮಗಳ ಗುರಿ ಕೋವಿಡ್ ಸೂಕ್ತ ನಡವಳಿಕೆ ಪ್ರಾಮುಖ್ಯತೆ, ಲಸಿಕೀಕರಣಕ್ಕೆ ಸಂಬಂಧಿಸಿದ ಮಿಥ್ಯೆ ಹಾಗೂ ತಪ್ಪು ಮಾಹಿತಿಗಳ ನಿವಾರಣೆ ಮಾಡಲು ಜಾಗೃತಿ ಮೂಡಿಸುವುದಕ್ಕೆ ಒತ್ತು ನೀಡಲಾಗಿತ್ತು ಮತ್ತು ಇದರಿಂದಾಗಿ ಲಸಿಕೀಕರಣದ ಬಗ್ಗೆ ಜಾಗೃತಿ ಹೆಚ್ಚಾಗಿ ಭಾರತದ ಬುಡಕಟ್ಟು ಜಿಲ್ಲೆಗಳಲ್ಲೂ ಲಸಿಕೀಕರಣ ಹೆಚ್ಚಾಗಲು ಕಾರಣವಾಗಿದೆ.  

ಸಮುದಾಯ ಆಧರಿತ ಸಕಾರಾತ್ಮಕ ಉಪಕ್ರಮಗಳು ಮತ್ತು ಮಾದರಿ ವ್ಯಕ್ತಿಗಳ ಮೂಲಕ ಅವುಗಳು ಯಾವ ವರ್ಗದ ಸಮುದಾಯವನ್ನು ಕೇಂದ್ರೀಕರಿಸಿವೆಯೋ ಅಂತಹವುಗಳಿಗೆ ಲಸಿಕೀಕರಣ ಬಲವರ್ಧನೆ ಕೈಗೆತ್ತಿಕೊಳ್ಳಬೇಕು ಎಂದು ಸಮುದಾಯ ರೇಡಿಯೋ ಕೇಂದ್ರಗಳಿಗೆ ಕರೆ ನೀಡಲಾಯಿತು. ಜೊತೆಗೆ ಕೋವಿಡ್ ಗೆ ಸಂಬಂಧಿಸಿದಂತೆ ಮಾನಸಿಕ ಆರೋಗ್ಯ ವಿಷಯಕ್ಕೂ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಲಾಯಿತು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿಷಯ ತಜ್ಞರನ್ನು ಒಳಗೊಂಡಂತೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಪೂರ್ಣ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸಾಮೂಹಿಕ ಹೊಣೆಗಾರಿಕೆ ಬಗ್ಗೆ ಬಲವಾಗಿ ಪ್ರತಿಪಾದಿಸಲಾಯಿತು.  

ಸೋಂಕಿನ ಎರಡನೇ ಅಲೆ ಇನ್ನೂ ಮುಗಿಯದ ಕಾರಣ ಶ್ರೋತೃಗಳಿಗೆ ಕೋವಿಡ್ ಸೂಕ್ತ ನಡವಳಿಕೆ ಕಡ್ಡಾಯ ಪಾಲನೆ ಅಗತ್ಯತೆ ಬಗ್ಗೆ ನಿರಂತರವಾಗಿ ನೆನಪು ಮಾಡಿಕೊಡಬೇಕು ಎಂದು ಸಿಆರ್ ಎಸ್ ಗಳಿಗೆ ಸೂಚಿಸಲಾಯಿತು. ಸಮಾಜ ಆರೋಗ್ಯ ನಿಯಮಗಳನ್ನು ನಿರ್ಲಕ್ಷಿಸಿದರೆ ಸದ್ಯದಲ್ಲೇ ವೈರಾಣು ಮತ್ತೆ ವಾಪಸಾಗುವ ಸಾಧ್ಯತೆ ಇದೆ ಹಾಗೂ ಕೋವಿಡ್ ಸುರಕ್ಷಿತ ಶಿಷ್ಟಾಚಾರದ ವಿರುದ್ಧ ಹೋರಾಟವನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ತಿಳಿಸಲಾಯಿತು. ಭಾಗವಹಿಸಿದ್ದ ಸಿಆರ್ ಎಸ್ ಪ್ರತಿನಿಧಿಗಳಿಗೆ ಸಮುದಾಯ ಮಾದರಿ ವ್ಯಕ್ತಿಗಳನ್ನು ಗುರುತಿಸುವ ಮತ್ತು ತಿಳಿಸಿಕೊಡುವ ಮೂಲಕ ಜನಾಂದೋಲನ ಮತ್ತು ವಿನೂತನ ಕಾರ್ಯಕ್ರಮಗಳನ್ನು ರೂಪಿಸುವಂತೆ ಉತ್ತೇಜಿಸಲಾಯಿತು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದವರು ಶ್ರೋತೃಗಳೊಂದಿಗಿನ ತಮ್ಮ ಸಂವಾದದ ಅನುಭವಗಳನ್ನು ಹಂಚಿಕೊಂಡರು ಮತ್ತು ಹೇಗೆ ಅವರ ಕೋವಿಡ್ ಲಸಿಕೆ ಕುರಿತ ಆತಂಕ ಮತ್ತು ಅನುಮಾನಗಳನ್ನು ನಿವಾರಿಸಿದರು ಹಾಗೂ ಲಸಿಕೆ ಪಡೆಯಲು ಉತ್ತೇಜಿಸಿದರು ಎಂಬ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು ಮತ್ತು ಆಯಾ ಪ್ರದೇಶಗಳಲ್ಲಿ ಖಚಿತ ಮಾಹಿತಿ ಜಾಲವನ್ನು ವಿಸ್ತರಿಸಲು ಅವರ ನಿರಂತರ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳು, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಪಿಐಬಿ, ಡಿಡಿ, ಎಐಆರ್ ಮತ್ತು ಎಐಆರ್ ಅಧಿಕಾರಿಗಳು ಹಾಗು ಯುನಿಸೆಫ್ ಅಧಿಕಾರಿಗಳು ಸಂವಾದ ಗೋಷ್ಠಿಯಲ್ಲಿ ಭಾಗವಹಿಸಿದ್ದರು.  

***


(Release ID: 1738917) Visitor Counter : 223