ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಟೋಕಿಯೋಗೆ ತೆರಳುತ್ತಿರುವ ಭಾರತೀಯ ಆಟಗಾರರನ್ನು ಹುರಿದುಂಬಿಸುವ ಅಧಿಕೃತ ಗೀತೆಯನ್ನು ವರ್ಚುವಲ್ ಮೂಲಕ ಬಿಡುಗಡೆ ಮಾಡಿದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್

Posted On: 14 JUL 2021 7:29PM by PIB Bengaluru

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಟೋಕಿಯೋಗೆ ತೆರಳುತ್ತಿರುವ ಭಾರತೀಯ ಕ್ರೀಡಾಪಟುಗಳನ್ನು ಹುರಿದುಂಬಿಸುವ ಅಧಿಕೃತ ಗೀತೆಯನ್ನು ಬುಧವಾರ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ಶ್ರೀ ನಿಶಿತ್ ಪ್ರಮಾಣಿಕ್, ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಶ್ರೀ ನರೇಂದ್ರ ಬಾತ್ರಾ, ಐ.ಓ.ಎ. ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೀವ್ ಮೆಹ್ತಾ, ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕ ಶ್ರೀ ಸಂದೀಪ್ ಪ್ರಧಾನ್ ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಯೋಜನೆಯ ಸಿಇಓ ಕಮಾಂಡರ್ ರಾಜ್ ಗೋಪಾಲನ್ ಪಾಲ್ಗೊಂಡಿದ್ದರು. ‘ಹಿಂದೂಸ್ತಾನಿ ವೇ’ ಶೀರ್ಷಿಕೆಯ ಗೀತೆಯನ್ನು ಯುವ ಪಾಪ್ ಗಾಯಕಿ ಅನನ್ಯಾ ಬಿರ್ಲಾ ಹಾಡಿದ್ದು, ಹೆಸರಾಂತ ಭಾರತೀಯ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಗೀತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸಂಕಷ್ಟದ ಸಮಯದಲ್ಲೂ ಒಗ್ಗೂಡಿ ಸಂಪೂರ್ಣ ಉತ್ಸಾಹದೊಂದಿಗೆ ಯೋಜನೆ ಕಾರ್ಯಗತಗೊಳಿಸಿದ ಕಲಾವಿದರನ್ನು ಶ್ರೀ ಅನುರಾಗ್ ಠಾಕೂರ್ ಅಭಿನಂದಿಸಿದರು. “ನಾನು ಎ.ಆರ್. ರೆಹಮಾನ್ ಮತ್ತು ಅನನ್ಯಾ ಬಿರ್ಲಾ ಅವರಿಗೆ ಈ ಗೀತಗಾಯನಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ. ಅವರು ಅತ್ಯಂತ ಉತ್ಸಾಹದಿಂದ ಈ ಗೀತೆಯನ್ನು ರೂಪಿಸಿದ್ದಾರೆ, ಕೋವಿಡ್ 19 ಸಾಂಕ್ರಾಮಿಕದ ಕಾಲದಲ್ಲಿ ಪರಸ್ಪರ ಭೇಟಿಯಾಗಲು ಸಾಧ್ಯವಾಗದ ಸನ್ನಿವೇಶದಲ್ಲಿ ಇದನ್ನು ಮಾಡುವುದಕ್ಕೆ ಸಾಕಷ್ಟು ಉತ್ಸಾಹ ಬೇಕಾಗುತ್ತದೆ. ನೀವು ಆಸಕ್ತಿಯಿಂದ ಟೀಮ್ ಇಂಡಿಯಾಕ್ಕಾಗಿ ಮತ್ತು ಚಿಯರ್ ಫಾರ್ ಇಂಡಿಯಾ- ಭಾರತವನ್ನು ಹುರಿದುಂಬಿಸಲು ಈ ಗೀತೆಯನ್ನು ಮಾಡಿದ್ದೀರಿ. ನಾನು ಪ್ರತಿಯೊಬ್ಬರಿಗೂ ಈ ಗಿತೆಯನ್ನು ಎಷ್ಟು ಸಾಧ್ಯವೋ ಅಷ್ಟು ಶೇರ್ ಮಾಡುವಂತೆ ಕೋರುತ್ತೇನೆ” ಎಂದು ಶ್ರೀ ಠಾಕೂರ್ ತಿಳಿಸಿದರು.

 

 

 

ಶ್ರೀ ನಿಶಿತ್ ಪ್ರಾಮಾಣಿಕ್, ಟೋಕಿಯೋ ಒಲಿಂಪಿಕ್ ಗೆ ತೆರಳುವ ಭಾರತೀಯ ಆಟಗಾರರಿಗೆ ಪ್ರೋತ್ಸಾಹ ನೀಡಲು ಎಲ್ಲ ಸಾಧ್ಯ ಕ್ರಮಗಳನ್ನು ಕೈಗೊಳ್ಳಬೇಕೆಂಬ ಶ್ರೀ ನರೇಂದ್ರ ಮೋದಿ ಅವರ ಕರೆಗೆ ಈ ಗೀತೆ ಮತ್ತೊಂದು ಉತ್ತೇಜನದ ಕ್ರಮವಾಗಿದೆ ಎಂದರು. “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟೋಕಿಯೋಗೆ ತೆರಳುತ್ತಿರುವ ನಮ್ಮ ಅಥ್ಲೀಟ್ ಗಳಿಗೆ #Cheer4India ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ದೇಶ ಹೃತ್ಫೂರ್ವಕವಾಗಿ ಈ ಕರೆಗೆ ಏಕತೆ ಮತ್ತು ಬೆಂಬಲವನ್ನು ನೀಡಲು ಮುಂದೆ ಬಂದಿದೆ. ಸಂಗೀತ ಲೋಕದ ದಿಗ್ಗಜ ಎ.ಆರ್. ರೆಹಮಾನ್ ಮತ್ತು ಯುವ ಗಾಯಕಿ ಅನನ್ಯಾ ಬಿರ್ಲಾ ಈ ಅದ್ಭುತ ಗೀತೆಯನ್ನು ರೂಪಿಸಿದ್ದಾರೆ” ಎಂದು ಶ್ರೀ ಪ್ರಮಾಣಿಕ್ ತಿಳಿಸಿದ್ದಾರೆ. 

***



(Release ID: 1735798) Visitor Counter : 184