ಜವಳಿ ಸಚಿವಾಲಯ

ಜವಳಿ ವಲಯದ ನೀತಿಗಳನ್ನು ಪರಾಮರ್ಶಿಸಿದ ಕೇಂದ್ರ ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್


ಎಂಎಸ್ ಎಂಇಗಳಿಗೆ ಒತ್ತು ಮತ್ತು ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ವಿಶೇಷ ಮಾದರಿ ಅಭಿವೃದ್ಧಿ ಅಗತ್ಯ

ಎಲ್ಲ ರಫ್ತು ಉತ್ತೇಜನಾ ಮಂಡಳಿಗಳ ಮೂಲಕ ರಫ್ತು ಪ್ರಮಾಣವನ್ನು ದುಪ್ಪಟ್ಟುಗೊಳಿಸಲು  ಪಾಲುದಾರರಿಗೆ ಶ್ರೀ ಪಿಯೂಷ್ ಗೋಯಲ್ ಕರೆ

ಕೈಗಾರಿಕೆಗೆ ಬೆಂಬಲ ನೀಡಲು ಹಣಕಾಸು ಯೋಜನೆಗಳ ಅಭಿವೃದ್ಧಿ; ಅವು ಸಬ್ಸಿಡಿ ಕೇಂದ್ರಿತವಾಗಿರಬಾರದು ಮತ್ತು ಅಂತಹ ಖಾತ್ರಿಗಳ ಮೂಲಕ ಬ್ಯಾಂಕ್ ಗಳಿಂದ ಸ್ಥಿರವಾದ ಸಾಲ ಹರಿಯುವಂತೆ ಶಕ್ತಗೊಳಿಸಬೇಕು: ಶ್ರೀ ಪಿಯೂಷ್ ಗೋಯಲ್

ಸಂಶೋಧನಾ ಒಕ್ಕೂಟಗಳು ಸರ್ಕಾರದ ಅನುದಾನವನ್ನು ಅವಲಂಬಿಸುವುದರ ಬದಲಿಗೆ ಸ್ವಾವಲಂಬಿಗಳಾಗಬೇಕು

ಪಾಶ್ಮಿನಾ ಉಣ್ಣೆಯನ್ನು ಅಂತಾರಾಷ್ಟ್ರೀಯ ಬ್ರಾಂಡ್ ಮಾಡುವ ಅಗತ್ಯವಿದೆ

Posted On: 10 JUL 2021 8:38PM by PIB Bengaluru

ಕೇಂದ್ರ ಜವಳಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಶ್ರೀ ಪಿಯೂಷ್ ಗೋಯಲ್ ಅವರು ಮುಂಬೈನಲ್ಲಿರುವ ಜವಳಿ ಆಯುಕ್ತಾಲಯದ ಕಚೇರಿಗೆ ಮೊದಲ ಭೇಟಿಯನ್ನು ನೀಡಿ, ಜವಳಿ ವಲಯದ ಯೋಜನೆಗಳು ಮತ್ತು ಅದರ ಪ್ರಗತಿ ಕುರಿತು ಪರಾಮರ್ಶಿಸಿದರು ಹಾಗೂ ನೀತಿಗಳ ಅನುಷ್ಠಾನವನ್ನು ತ್ವರಿತಗೊಳಿಸುವ ಕ್ರಮಗಳನ್ನು ಸಲಹೆ ಮಾಡಿದರು.

ಸಚಿವರು ಜವಳಿ ಆಯುಕ್ತಾಲಯ, ಜವಳಿ ಸಮಿತಿ, ಭಾರತೀಯ ಹತ್ತಿ ನಿಗಮ ನಿಯಮಿತ, ರಫ್ತು ಉತ್ತೇಜನಾ ಮಂಡಳಿಗಳು ಮತ್ತು ಜವಳಿ ಸಂಶೋಧನಾ ಸಂಸ್ಥೆಗಳು ಕೈಗೆತ್ತಿಕೊಂಡಿರುವ/ ಅನುಷ್ಠಾನಗೊಳಿಸುತ್ತಿರುವ ನಾನಾ ಯೋಜನೆಗಳು/ಚಟುವಟಿಕೆಗಳ ಕುರಿತು ಪರಾಮರ್ಶೆ ನಡೆಸಿದರು. ಜವಳಿ ಖಾತೆ ರಾಜ್ಯ ಸಚಿವರಾದ ಶ್ರೀಮತಿ ದರ್ಶನಾ ಜಾರ್ದೋಶ್ ಅವರೂ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಜವಳಿ ಕಾರ್ಯದರ್ಶಿ ಶ್ರೀ ಯು.ಪಿ. ಸಿಂಗ್, ಹೆಚ್ಚುವರಿ ಕಾರ್ಯದರ್ಶಿ ಶ್ರೀ ವಿ.ಕೆ. ಸಿಂಗ್ ಅವರು ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದರು.

ಸಂವಾದದ ವೇಳೆ ಸಚಿವರು ಸರ್ಕಾರದ ನಾನಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪೂರಕ ವಾತಾವರಣ ನಿರ್ಮಾಣಕ್ಕೆ ಸರ್ಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಮತ್ತು ನಿಕಟ ಸಂಬಂಧ ಅಗತ್ಯವಿದೆ. ಪ್ರತಿ ಯೋಜನೆಯ ವಿಶಾಲ ಉದ್ದೇಶವನ್ನು ಗಮನದಲ್ಲಿರಿಸಿಕೊಂಡು ಯಾಂತ್ರೀಕೃತ ರೀತಿಯಲ್ಲಿ ಸಬ್ಸಿಡಿ ಆಧರಿತ ಯೋಜನೆಗಳಡಿ ಸ್ವೀಕರಿಸಿರುವ ಅರ್ಜಿಗಳನ್ನು ಪಾರದರ್ಶಕ ರೀತಿಯಲ್ಲಿ ಅವುಗಳನ್ನು ಪರಿಶೀಲಿಸುವ ಕಾರ್ಯ ಮಾಡಬೇಕು. ಮೂಲಕ ಉದ್ಯಮ ಮತ್ತು ಕೈಗಾರಿಕೆಗಳ ವೈಯಕ್ತಿಕ ಸಂಪರ್ಕ ತೊಡೆದುಹಾಕಬೇಕು, ನಿರ್ದಿಷ್ಟ ಮಾನದಂಡವನ್ನು ಅಳವಡಿಸಿಕೊಳ್ಳಬೇಕು ಎಂದರು. ಎಂಎಸ್ಎಂಇಗಳಿಗೆ ವಿಶೇಷ ಅನುದಾನಗಳನ್ನು ನೀಡುವಾಗ ಅವುಗಳಿಗೆ ಕಾರಣಗಳನ್ನು ಉಲ್ಲೇಖಿಸಬೇಕು. ಟಿಯುಎಫ್ ಯೋಜನೆಯ ಪ್ರಗತಿಗೆ ವೇಗ ನೀಡಲು ಅವರು ಪ್ರಮುಖ ವಿಷಯಗಳ ಕುರಿತು ಸ್ಥೂಲ ವಿವರ ನೀಡಬೇಕು. ಬ್ಯಾಂಕುಗಳು ಸೇರಿದಂತೆ ಸಂಬಂಧಿಸಿದವರ ಜೊತೆ ಸಮಾಲೋಚನೆಗಳನ್ನು ನಡೆಸುವ ಮೂಲಕ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು. ಉದ್ಯಮಗಳು ಸಲ್ಲಿಸಬೇಕಾಗಿರುವ ಸಾಂಸ್ಥಿಕ ರಿಟರ್ನ್ಸ್ ನಮೂನೆಗಳನ್ನು ಸರಳೀಕರಣಗೊಳಿಸಬೇಕು ಎಂದು ಅವರು ಸಲಹೆ ಮಾಡಿದರು. ಜವಳಿ ಆಯುಕ್ತಾಲಯ ಮತ್ತು ಜವಳಿ ಸಮಿತಿಗಳ ಕಚೇರಿಯ ಮಾನವ ಸಂಪನ್ಮೂಲವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಒತ್ತು ನೀಡಬೇಕೆಂದು ಪ್ರತಿಪಾದಿಸಿದರು

ಸಚಿವರು ಹತ್ತಿ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಗಳನ್ನು ತೀವ್ರಗೊಳಿಸಬೇಕು ಎಂದು ಪ್ರತಿಪಾದಿಸಿದರು ಮತ್ತು ಕೃಷಿ ಮತ್ತು ರೈತರ ಕಲ್ಯಾಣದ ಜೊತೆ ಸೇರಿ ಅಗತ್ಯ ಉಪಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು. ಭಾರತೀಯ ಹತ್ತಿ ನಿಗಮ, ಮುದ್ರಾ ಸಾಲ ವಿಧಾನದ ಮೂಲಕ ಸ್ಥಾಪನೆಯಾದ ನವೋದ್ಯಮಗಳಿಂದ ಹತ್ತಿ ಬೆಳೆಯುವ ರೈತರಿಗೆ ಕಪಾಸ್ ಯಂತ್ರ ಒದಗಿಸುವ ಕಾರ್ಯ ಸಾಧ್ಯತೆಗಳ ಬಗ್ಗೆ ಪರಿಶೀಲಿಸಬೇಕು ಮತ್ತು ಸಣ್ಣ ಉದ್ದಿಮೆಗಳನ್ನು ಬೆಂಬಲಿಸಲು ವಿಶೇಷ ಮಾದರಿಯನ್ನು ಅಭಿವೃದ್ಧಿಪಡಿಸಬೇಕು ಎಂದರು. ಜವಳಿ ವಲಯದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಒತ್ತು ನೀಡಬೇಕೆಂದು ಶ್ರೀ ಗೋಯಲ್ ಪ್ರತಿಪಾದಿಸಿದರು ಹಾಗೂ ಅದಕ್ಕಾಗಿ ಕಾರ್ಯತಂತ್ರ ಯೋಜನೆಯನ್ನು ರೂಪಿಸಲು ಸಂಬಂಧಿಸಿದವರ ಜೊತೆ ಸಭೆಯನ್ನು ಏರ್ಪಾಡು ಮಾಡುವಂತೆ ಸಲಹೆ ಮಾಡಿದರು.

ರಫ್ತು ಉತ್ತೇಜನ ಮಂಡಳಿಗಳ ಚಟುವಟಿಕೆಗಳನ್ನು ಪರಾಮರ್ಶಿಸಿದ ಜವಳಿ ಸಚಿವರು, ದೇಶೀಯ ಆಧಾರಿತ ಸಮಗ್ರ ವ್ಯಾಪಾರ ಅಭಿವೃದ್ಧಿಗೆ ಉದ್ಯಮದ ಜೊತೆ ವಿಸ್ತೃತ ಸಮಾಲೋಚನೆ ನಡೆಸಬೇಕು ಎಂದು ಸಲಹೆ ಮಾಡಿದರು. ಅಲ್ಲದೆ ಉದ್ಯಮಕ್ಕೆ ಬೆಂಬಲ ನೀಡಲು ಅಗತ್ಯ ಹಣಕಾಸು ಯೋಜನೆಗಳನ್ನು ಅಭಿವೃದ್ಧಿಪಡಿಸಬೇಕು. ಅವುಗಳಲ್ಲಿ ಸಬ್ಸಿಡಿಗೆ ಒತ್ತು ನೀಡಬಾರದು ಮತ್ತು ಖಾತ್ರಿ ಮೂಲಕ ಬ್ಯಾಂಕುಗಳಿಂದ ಸ್ಥಿರ ಹಣಕಾಸು ಹರಿದು ಬರುವಂತಾಗಬೇಕು ಎಂದು ಸಚಿವರು ಹೇಳಿದರು.

ಭವಿಷ್ಯದ ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಅವುಗಳ ಪ್ರದರ್ಶನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಸಚಿವರು ಪ್ರತಿಪಾದಿಸಿದರು. ವ್ಯಾಗನ್ ಹೊದಿಕೆಗೆ ಬಳಸುವ ತಾಂತ್ರಿಕ ಜವಳಿಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು ಮತ್ತು ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ ಸಮರ್ಪಕವಾಗಿ ನಮ್ಮ ಸಾಮರ್ಥ್ಯಗಳು ಮತ್ತು ಮಾರುಕಟ್ಟೆಯ ಅಗತ್ಯತೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದರು. ಪಾಶ್ಮಿನಾ ಬ್ರಾಂಡ್ ಅನ್ನು ಅಂತಾರಾಷ್ಟ್ರೀಯ ಬ್ರಾಂಡ್ ಆಗಿ  ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು. ಅಲ್ಲದೆ ಜವಳಿ ಸಂಶೋಧನಾ ಒಕ್ಕೂಟಗಳು ಸರ್ಕಾರದ ಅನುದಾನವನ್ನು ಅವಲಂಬಿಸುವ ಬದಲಿಗೆ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಜವಳಿ ಸಚಿವಾಲಯ ಅತಿ ದೊಡ್ಡ ಉದ್ಯೋಗ ಸೃಷ್ಟಿಸುವ ಮತ್ತು ಅತಿ ದೊಡ್ಡ ರಫ್ತು ವಲಯವಾಗಿದೆ ಎಂದರು. ರೈತರ ಆದಾಯ ದುಪ್ಪಟ್ಟುಗೊಳಿಸುವ, ಯುವ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸ್ವಾವಲಂಬಿ ಮತ್ತು ಆತ್ಮಗೌರವದಿಂದ ಬಾಳ್ವೆ ನಡೆಸುವಂತಾಗಬೇಕು ಎಂಬ ಗೌರವಾನ್ವಿತ ಪ್ರಧಾನಮಂತ್ರಿ ಅವರ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ವಲಯ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ ಎಂದು ಅವರು ಹೇಳಿದರು.

***(Release ID: 1734593) Visitor Counter : 112