ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಜಾರ್ಖಂಡ್ ನಲ್ಲಿ 4 ಏಕಲವ್ಯ ಮಾದರಿ ವಸತಿ ಶಾಲೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಶ್ರೀ ಅರ್ಜುನ್ ಮುಂಡಾ
ಜಾರ್ಖಂಡ್ ನ ಎಲ್ಲ ಏಕಲವ್ಯ ಮಾದರಿ ಶಾಲೆಗಳಲ್ಲಿ ಬಿಲ್ಲುಗಾರಿಕೆ ಕ್ರೀಡಾಸೌಕರ್ಯವಿರಲಿದೆ : ಶ್ರೀ ಅರ್ಜುನ್ ಮುಂಡಾ
Posted On:
04 JUL 2021 5:31PM by PIB Bengaluru
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಅವರು ಜಾರ್ಖಂಡ್ ನ ಮೂರು ಜಿಲ್ಲೆಗಳಲ್ಲಿ 2021ರ ಜುಲೈ 3 ಮತ್ತು 4ರಂದು 5 ಏಕಲವ್ಯ ಮಾದರಿ ವಸತಿ ಶಾಲೆಗಳ (ಇಎಂಆರ್ ಎಸ್) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಶನಿವಾರ(ಜುಲೈ 3ರಂದು) ಶ್ರೀ ಅರ್ಜುನ್ ಮುಂಡ ಅವರು ಸರೈಕೆಲಾ - ಖಾರಸ್ವಾನ್ ಜಿಲ್ಲೆಯ ರಾಜನಗರ್ ಬ್ಲಾಕ್ ನಲ್ಲಿ ಮೊದಲ ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣಕ್ಕೆ ಛೈಬಾಸ ಲೋಕಸಭಾ ಕ್ಷೇತ್ರದ ಸಂಸದೆ ಶ್ರೀಮತಿ ಗೀತಾಕೊಡಾ, ಜಾರ್ಖಂಡ್ ಸರ್ಕಾರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶ್ರೀ ಛಂಪೈ ಸೊರೆನ್ ಮತ್ತು ಜಾರ್ಖಂಡ್ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಶ್ರೀ ಅರ್ಜುನ್ ಮುಂಡ ಅವರು ಶನಿವಾರ ಪಶ್ಚಿಮ ಸಿಂಘಬೂಮ್ ನ ಹಾತ್ ಗಮಹರಿಯಾ ಮತ್ತು ಮಜ್ ಗಾಂವ್ ಬ್ಲಾಕ್ ನಲ್ಲಿ ಏಕಲವ್ಯ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಬುಡಕಟ್ಟು ಯುವಜನರಿಗೆ ಉತ್ತಮ ಭವಿಷ್ಯ ಕಟ್ಟಿಕೊಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸಿರುವ ಶ್ರೀ ಅರ್ಜುನ್ ಮುಂಡಾ ಅವರು, ಜುಲೈ 4 ರಂದು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸಚಿವ ಶ್ರೀ ಛಂಪೈ ಸೊರೇನ್ ಮತ್ತು ಸ್ಥಳೀಯ ಸಂಸದರು ಮತ್ತು ಶಾಸಕರ ಸಮಕ್ಷಮದಲ್ಲಿ ಪೂರ್ವ ಸಿಂಘ್ ಭೂಮಿಯ ಗುರ್ಬಂಧ ಮತ್ತು ಧಾಲ್ ಭೂಮಗಢ್ ಬ್ಲಾಕ್ ಗಳಲ್ಲಿ ತಲಾ ಒಂದೊಂದು ಇಎಂಆರ್ ಎಸ್ ಗಳ ಸ್ಥಾಪನೆಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅರ್ಜುನ್ ಮುಂಡಾ ಅವರು, ಪರಿಶಿಷ್ಟ ಪಂಗಡ ಸಮುದಾಯದ ಸಬಲೀಕರಣ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರ ಕನಸನ್ನು ಹಂಚಿಕೊಂಡರು ಮತ್ತು ಅವರ ಸಬಲೀಕರಣ ನಿಟ್ಟಿನಲ್ಲಿ ಶಿಕ್ಷಣದ ಪಾತ್ರವನ್ನು ವಿವರಿಸಿದರು. ಇಎಂಆರ್ ಎಸ್ ಗಳ ನಿರ್ಮಾಣ ಕಾರ್ಯ ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಮತ್ತು ನಾವು ಮತ್ತೆ ಇಲ್ಲಿ ಉದ್ಘಾಟನಾ ಸಮಾರಂಭಕ್ಕೆ ಸೇರಲಿದ್ದೇವೆ ಎಂದು ಸಚಿವರು ಹೇಳಿದರು. ಇಎಂಆರ್ ಎಸ್ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ ಎಂದು ವಿವರಿಸಿದ ಅವರು, ಇಎಂಆರ್ ಎಸ್ ಗಳಲ್ಲಿನ ಶಿಕ್ಷಣದ ಮಟ್ಟ ಜವಹರ್ ನವೋದಯ ವಿದ್ಯಾಲಯಗಳಿಗೆ ಸಮನಾಗಿರುತ್ತದೆ ಎಂದು ಹೇಳಿದರು.
ಆ ಬಗ್ಗೆ ಹಚ್ಚಿನ ವಿವರಗಳನ್ನು ನೀಡಿದ ಶ್ರೀ ಅರ್ಜುನ್ ಮುಂಡಾ, ಇದು ಬುಡಕಟ್ಟು ಜನ ವಾಸಿಸುವ ಪ್ರದೇಶಗಳಲ್ಲಿ ಕೈಗೊಳ್ಳುತ್ತಿರುವ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿದ್ದು, ಈ ಪ್ರತಿಯೊಂದು ಶಾಲೆಗಳಲ್ಲಿ 480 ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ ಎಂದರು. ಗುಣಮಟ್ಟದ ಶಿಕ್ಷಣಕ್ಕೆ ಸಂಪೂರ್ಣ ಗಮನ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಎಲ್ಲ ಸೌಕರ್ಯಗಳನ್ನು ಒದಗಿಸಲಾಗುವುದು. ಭಾರತ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಈ ವೇಳೆ ಈ ಯೋಜನೆ ಬುಡಕಟ್ಟು ಜನರಿರುವ ಪ್ರದೇಶಗಳಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಲಿದೆ ಎಂದು ಸಚಿವರು ಹೇಳಿದರು. ಜಾರ್ಖಂಡ್ ನ ಎಲ್ಲ ಏಕಲವ್ಯ ಮಾದರಿ ಶಾಲೆಗಳಲ್ಲಿ ಬಿಲ್ಲುಗಾರಿಕೆ ಕ್ರೀಡಾ ಸೌಕರ್ಯವಿರಲಿದೆ ಎಂದು ಅವರು ವಿವರಿಸಿದರು.
ಭಾನುವಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀ ಅರ್ಜುನ್ ಮುಂಡಾ ಅವರು 2021-22ನೇ ವರ್ಷ ಭಾರತದ ಸ್ವಾತಂತ್ರ್ಯದ 75ನೇ ವರ್ಷವಾಗಿದ್ದು, ಅನುಮೋದನೆ ನೀಡಲಾಗಿರುವ ಎಲ್ಲ ಏಕಲವ್ಯ ಶಾಲೆಗಳು ಕಾರ್ಯಾರಂಭ ಮಾಡಲಿವೆ. 2047ರ ವೇಳೆಗೆ ಭಾರತ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವವನ್ನು ಆಚರಿಸಲಿದ್ದು, ಆ ವೇಳೆಗೆ ಏಕಲವ್ಯ ಶಾಲೆಗಳ ಮಾಜಿ ವಿದ್ಯಾರ್ಥಿಗಳು ಎಲ್ಲ ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ ಇರುತ್ತಾರೆ ಮತ್ತು ಆ ವೇಳೆಗೆ ಅವರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುತ್ತಾರೆ ಎಂದು ಹೇಳಿದರು.
ಏಕಲವ್ಯ ಮಾದರಿ ವಸತಿ ಶಾಲೆಗಳ ಕುರಿತ ಟಿಪ್ಪಣಿಗೆ ಇಲ್ಲಿ ಕ್ಲಿಕ್ ಮಾಡಿ
****
(Release ID: 1732752)
Visitor Counter : 263