ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಮಲೇರಿಯಾ ಮುಕ್ತ ದೆಹಲಿಯತ್ತ: ದೆಹಲಿಯಲ್ಲಿ ರೋಗವಾಹಕ ಕಾಯಿಲೆಗಳ ನಿಯಂತ್ರಣ ಮತ್ತು ತಡೆಗೆ ಸಂಬಂಧಿಸಿದ ಸಿದ್ಧತೆಗಳ ಪರಿಶೀಲನೆ ನಡೆಸಿದ ಡಾ. ಹರ್ಷವರ್ಧನ್


ಮಲೇರಿಯಾವನ್ನು ಅಧಿಸೂಚಿತ ಕಾಯಿಲೆಯೆಂದು ಪರಿಗಣಿಸಲು ಸಲಹೆ

ಕೋವಿಡ್ -19 ನಡುವೆ ರೋಗವಾಹಕ ನಿಯಂತ್ರಣಕ್ಕೆ ಮಾರ್ಗಸೂಚಿಗಳ ಕುರಿತು ಚರ್ಚೆ

" ಮಲೇರಿಯಾದ ಅಸ್ವಸ್ಥತೆಯಲ್ಲಿ ಶೇ. 83.34ರಷ್ಟು ಮತ್ತು ಮಲೇರಿಯಾ ಮರಣ ಪ್ರಮಾಣದಲ್ಲಿ ಶೇ. 92ರಷ್ಟು ಇಳಿಕೆ ಸಾಧಿಸಿರುವ ಭಾರತದ ಸಾಧನೆಯನ್ನು ಗುರುತಿಸಿದ ಡಬ್ಲ್ಯು.ಎಚ್.ಓ. "

"ವಿಬಿಡಿಗಳಿಗೆ ಪರಿಣಾಮಕಾರಿ ಅಂತರ-ವಲಯ ವಿಧಾನಳ ಅಗತ್ಯವಿದೆ, ಆರೋಗ್ಯ ಮತ್ತು ಆರೋಗ್ಯೇತರ ಕ್ಷೇತ್ರಗಳು (ಸರ್ಕಾರಿ ಮತ್ತು ಖಾಸಗಿ ಎರಡೂ), ಸರ್ಕಾರೇತರ ಸಂಸ್ಥೆಗಳು (ಎನ್‌.ಜಿ.ಒ.ಗಳು) ಮತ್ತು ಸ್ಥಳೀಯ ಸಮುದಾಯಗಳ ನಡುವೆ ನಿಕಟ ಸಹಯೋಗ ಮತ್ತು ಸಹಭಾಗಿತ್ವದ ಅಗತ್ಯವಿರುತ್ತದೆ"

Posted On: 29 JUN 2021 4:34PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರಿಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ, ಲೆಫ್ಟಿನೆಂಟ್ ಗೌರ್ನರ್ ಶ್ರೀ ಅನಿಲ್ ಬೈಜಾಲ್ ಮತ್ತು ಗೃಹ ಸಚಿವ (ದೆಹಲಿ) ಶ್ರೀ ಸತ್ಯೇಂದ್ರ ಜೈನ್ ಅವರು ಮೂರು ನಗರ ಪಾಲಿಕೆಗಳ ಮೇಯರ್ ಗಳಾದ – ಶ್ರೀ ರಾಜಾ ಇಕ್ಬಾಲ್ ಸಿಂಗ್ (ಉತ್ತರ ದೆಹಲಿ ನಗರ ಪಾಲಿಕೆ), ಶ್ರೀ ಮುಖೇಶ್ ಸೂರ್ಯನ್ (ದಕ್ಷಿಣ ದೆಹಲಿ ನಗರಪಾಲಿಕೆ), ಶ್ರೀ ಶ್ಯಾಮ್ ಸುಂದರ್ ಅಗರ್ವಾಲ್ (ಪೂರ್ವ ದೆಹಲಿ ನಗರ ಪಾಲಿಕೆ) ಮತ್ತು ನವ ದೆಹಲಿ ಮುನಿಸಿಪಲ್ ಕೌನ್ಸಿಲ್ ನ ಅಧ್ಯಕ್ಷ ಶ್ರೀ ನರೇಶ್ ಕುಮಾರ್ ಅವರ ಸಮ್ಮುಖದಲ್ಲಿ, ಕೇಂದ್ರಾಡಳಿತ ಪ್ರದೇಶ ದೆಹಲಿಯ ರೋಗವಾಹಕ ಕಾಯಿಲೆ (ವಿಬಿಡಿ)ಗಳ ನಿಯಂತ್ರಣ ಮತ್ತು ತಡೆ ಕುರಿತ ಸನ್ನದ್ಧತೆಯ ಪರಾಮರ್ಶೆ ನಡೆಸಿದರು.

ಸಭೆಯ ಮುಖ್ಯ ಗಮನ 2022ರ ಹೊತ್ತಿಗೆ ದೆಹಲಿಯಿಂದ ಮಲೇರಿಯಾವನ್ನು ನಿರ್ಮೂಲನೆ ಮಾಡುವುದಕ್ಕೆ ಸನ್ನದ್ಧವಾಗುವುದಾಗಿತ್ತು. ಮಲೇರಿಯಾವನ್ನು  ಅಧಿಸೂಚಿತ ಕಾಯಿಲೆಯನ್ನಾಗಿ ಪರಿಗಣಿಸುವ ಅಗತ್ಯವನ್ನು ಡಾ. ಹರ್ಷವರ್ಧನ್ ಒತ್ತಿಹೇಳಿದರು, ಇದರಿಂದ ಮಲೇರಿಯಾದ ಪ್ರತಿಯೊಂದು ಪ್ರಕರಣವನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಮತ್ತು ಸೋಂಕು ಹರಡುವಿಕೆಯನ್ನು ಗುರುತಿಸಬಹುದಾಗಿದೆ. ಕಳೆದ ವರ್ಷ ಸಹ ಕೇಂದ್ರಾಡಳಿತ ಪ್ರದೇಶ ಸರ್ಕಾರದೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.

ಮಲೇರಿಯಾ ನಿರ್ಮೂಲನೆಗೆ ದೆಹಲಿ ಪ್ರವರ್ಗ 1 ರಾಜ್ಯವಾಗಿದೆ ಎಂದು ಎಲ್ಲರಿಗೂ ನೆನಪಿಸಿದ, ಡಾ. ಹರ್ಷವರ್ಧನ್, "ದೆಹಲಿ ಮೂಲತಃ 2020ರಲ್ಲಿ ಮಲೇರಿಯಾವನ್ನು ನಿರ್ಮೂಲನೆ ಮಾಡಲು ಯೋಜಿಸಲಾಗಿತ್ತು. ಈಗ ಗಡುವನ್ನು 2022ಕ್ಕೆ ಬದಲಾಯಿಸಲಾಗಿದೆ." ಎಂದರು.

ದೆಹಲಿಯಲ್ಲಿ ಮಲೇರಿಯಾವನ್ನು ಅಧಿಸೂಚಿತ ಕಾಯಿಲೆಯಾಗಿ ಪರಿಗಣಿಸುವ ನಿರ್ಣಾಯಕ ಕ್ರಮದ ಬಗ್ಗೆ ಅವರು ವಿವರಿಸಿ, “ಆಸ್ಪತ್ರೆಗಳಿಂದ ನೈಜ ದತ್ತಾಂಶವನ್ನು ಪಡೆದುಕೊಳ್ಳುವುದು ಮತ್ತು ಸೋಂಕಿನ ಪ್ರದೇಶಗಳಲ್ಲಿ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು, ನಿರ್ಮೂಲನೆ ಸಾಧಿಸಲು ನಿರ್ಣಾಯಕವಾಗಿದೆ. ಸಮಯೋಚಿತ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಮಲೇರಿಯಾ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಯ ನಿಖರತೆಗೆ ಖಾಸಗಿ ವಲಯದಿಂದ ನಿಯಮಿತವಾಗಿ ವರದಿ ಮಾಡುವುದು ಅವಶ್ಯಕ. ಇದಲ್ಲದೆ, ನಾವು ಮಲೇರಿಯಾ ನಿರ್ಮೂಲನೆ ಕಡೆಗೆ ಸಾಗುತ್ತಿರುವಾಗ, ಎಲ್ಲಾ ಜ್ವರದ ಪ್ರಕರಣಗಳಲ್ಲಿ ಶೇ.10ರಷ್ಟು ಮಲೇರಿಯಾ ಪರೀಕ್ಷಿಸಬೇಕು, ಆಗ ಯಾವುದೇ ಮಲೇರಿಯಾ ಪ್ರಕರಣ ಪತ್ತೆಯಾಗದೆ ತಪ್ಪಿಸಿಕೊಳ್ಳುವುದಿಲ್ಲ.” ಎಂದರು.  ಹಾಜರಿದ್ದ ಆಡಳಿತಗಾರರನ್ನು ಉತ್ತೇಜಿಸಲು, "2000 ಮತ್ತು 2019ರ ನಡುವೆ ಮಲೇರಿಯಾ ಕಾಯಿಲೆಗಳಲ್ಲಿ ಶೇ.83.34 ಮತ್ತು ಮಲೇರಿಯಾ ಮರಣ ಪ್ರಮಾಣದಲ್ಲಿ ಶೇ.92ರಷ್ಟು ಇಳಿಕೆ ಸಾಧಿಸಿರುವ ಭಾರತದ ಸಾಧನೆಯನ್ನು ಡಬ್ಲ್ಯು.ಎಚ್.ಓ. ಗುರುತಿಸಿದೆ" ಎಂದು ಕೇಂದ್ರ ಸಚಿವರು ಹೇಳಿದರು.

ವಿಬಿಡಿ ನಿಯಂತ್ರಣ ಕಾರ್ಯಕ್ರಮದ ಮುಖ್ಯ ಅಂಶ,  ರೋಗ ನಿರ್ಮೂಲನೆ ಮತ್ತು ಹರಡುವಿಕೆ ಹಾಗೂ ಏಕಾಏಕಿ ಅಪಾಯವನ್ನು ಕಡಿಮೆ ಮಾಡಲು ರೋಗ ವಾಹಕ ಜೀವಿಗಳ ಕಟ್ಟುನಿಟ್ಟಿನ ನಿಯಂತ್ರಣವಾಗಿದೆ ಎಂದು ಡಾ. ಹರ್ಷವರ್ಧನ್ ಹೇಳಿದರು, “ಡೆಂಗ್ಯೂ ಮತ್ತು ಚಿಕೂನ್‌ ಗುನ್ಯಾ ವಿರುದ್ಧ ಯಾವುದೇ ಪರಿಣಾಮಕಾರಿ ಔಷಧ ಅಥವಾ ಲಸಿಕೆ ಇನ್ನೂ ಲಭ್ಯವಿಲ್ಲ, ಆದ್ದರಿಂದ ರೋಗವಾಹಕಗಳಾದ ಸೊಳ್ಳೆಗಳ ನಿಗ್ರಹಕ್ಕೆ ಮುಖ್ಯವಾಗಿ ಗಮನಹರಿಸಲಾಗಿದೆ. ಕೋವಿಡ್ -19 ನಿಯಂತ್ರಣ  ಚಟುವಟಿಕೆ ಜೊತೆಗೆ ಏಕಕಾಲದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆವಾಸಸ್ಥಾನಗಳಲ್ಲಿ ಮೊಟ್ಟೆ (ಲಾರ್ವಾ)ಗಳನ್ನು ನಿಯಂತ್ರಣವನ್ನು ಕೈಗೊಳ್ಳಲಾಗಿದೆ. ಕೋವಿಡ್ -19 ರೋಗಿಗಳು ಇರುವ ಆಸ್ಪತ್ರೆ ಮತ್ತು ಮನೆಯಲ್ಲಿ ಕ್ವಾರಂಟೈನ್ ಆಗಿರುವೆಡೆ ಅಥವಾ ಇತರ ಸ್ಥಳಗಳಲ್ಲಿ ಹೊಗೆಸಿಂಪರಣೆಯಿಂದ ಉಸಿರಾಟದ ಸಮಸ್ಯೆ ಅನುಭವ ಆಗಬಹುದು.”

ಲಾರ್ವಾ ತಿನ್ನುವ ಮೀನುಗಳಾದ ಗ್ಯಾಂಬುಸಿಯಾ ಮತ್ತು ಗುಪ್ಪಿಗಳ ಬಿಡುವುದು ಭರವಸೆಯ ಫಲಿತಾಂಶಗಳನ್ನು ನೀಡಿದೆ ಎಂದು ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ಅವರಿಗೆ ವಿವರಿಸಿದರು. ಈ ಸ್ಥಳಗಳಲ್ಲಿ ರೋಗವಾಹಕಗಳ ಸಂತಾನೋತ್ಪತ್ತಿ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಪರೀಕ್ಷಿಸಲು ಹಾಜರಿದ್ದ ನಗರಸಭೆ ಅಧಿಕಾರಿಗಳಿಗೆ ಅವರು ಸಲಹೆ ನೀಡಿದರು.

ರೋಗವಾಹಕಗಳಿಂದ ಹರಡುವ ಕಾಯಿಲೆಗಳ ವಿರುದ್ಧ ಯೋಜಿತ ಸಿದ್ಧತೆಯ ಬಗ್ಗೆ ಸಮಗ್ರವಾಗಿ ವಿವರಿಸಲಾಯಿತು:

·        ಎಲ್ಲಾ ಆಸ್ಪತ್ರೆಗಳಲ್ಲೂ ಡೆಂಗ್ಯೂ, ಚಿಕೂನ್‌ ಗುನ್ಯಾ ಮತ್ತು ಮಲೇರಿಯಾ ಪ್ರಕರಣಗಳ ರೋಗ ಪತ್ತೆಗೆ ಸಾಕಷ್ಟು ಪ್ರಮಾಣದ ಪರೀಕ್ಷಾ ಕಿಟ್‌ ಗಳು ಲಭ್ಯವಾಗಬೇಕು.

·        ಎಲ್ಲಾ ಆಸ್ಪತ್ರೆಗಳು ಡೆಂಗ್ಯೂ ಪ್ರಸರಣದ ಸಾಧ್ಯತೆ ತಡೆ ಯೋಜನೆಯೊಂದಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಮುಂಚಿತವಾಗಿ ಎಚ್ಚರಿಕೆ ನೀಡಲು ಮಾದರಿಗಳ ನಿಯಮಿತ ಪರೀಕ್ಷೆಯನ್ನು ಖಾತ್ರಿಪಡಿಸಿಕೊಳ್ಳಬೇಕು.

·        ಸಾಕಷ್ಟು ರಕ್ತದ ಘಟಕಗಳೊಂದಿಗೆ ಸಿದ್ಧವಾಗಿರಲು ರಕ್ತನಿಧಿಗಳನ್ನು ಎಚ್ಚರಿಸಬೇಕು.

·        ವಿಬಿಡಿಗಳಲ್ಲಿನ ವೈದ್ಯರು ಮತ್ತು ಪ್ರಯೋಗಾಲಯಗಳನ್ನು ಸಂವೇದನೆಗೊಳಿಸಲು ಸಹ ಕ್ರಮ ಕೈಗೊಳ್ಳಬೇಕು.

·        ಉಪಕರಣಗಳು ಮತ್ತು ಕೀಟನಾಶಕಗಳನ್ನು ಒಳಗೊಂಡಂತೆ ರೋಗವಾಹಕ ನಿಯಂತ್ರಣಕ್ಕಾಗಿ ಸಾಗಾಟವನ್ನು ಎಲ್ಲಾ ಹಂತದಲ್ಲೂ ಖಚಿತಪಡಿಸಿಕೊಳ್ಳಬೇಕು.

ರೋಗವಾಹಕ ನಿಯಂತ್ರಣ ಕಾರ್ಯಕ್ರಮದಲ್ಲಿ ಸಕ್ರಿಯ ಮತ್ತು ಪರಿಣಾಮಕಾರಿ ಕೊಡುಗೆಗಾಗಿ ಸಮುದಾಯ ಸಬಲೀಕರಣದ ಬಗ್ಗೆ ಡಾ. ಹರ್ಷವರ್ಧನ್ ಒತ್ತಿ ಹೇಳಿದರು ಮತ್ತು ಅದರಿಂದ ಸಮಯೋಚಿತ ಹಾಗೂ ಸೂಕ್ತ ಕ್ರಮ ತೆಗೆದುಕೊಳ್ಳಬಹುದೆಂದರು. ವಿಬಿಡಿಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಅಂತರ-ವಲಯ ವಿಧಾನದ ಅವಶ್ಯಕತೆಯಿದ್ದು, ಆರೋಗ್ಯ ಮತ್ತು ಆರೋಗ್ಯೇತರ ವಲಯಗಳು (ಸರ್ಕಾರಿ ಮತ್ತು ಖಾಸಗಿ), ಸರ್ಕಾರೇತರ ಸಂಸ್ಥೆಗಳು (ಎನ್‌.ಜಿ.ಒ) ಮತ್ತು ಸ್ಥಳೀಯ ಸಮುದಾಯಗಳ ನಡುವೆ ನಿಕಟ ಸಹಯೋಗ ಮತ್ತು ಸಹಭಾಗಿತ್ವದ ಅಗತ್ಯವಿರುತ್ತದೆ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು. ಕೋವಿಡ್ -19 ನಡುವೆಯೂ ಸಾವು ಮತ್ತು ಅಸ್ವಸ್ಥತೆಯನ್ನು ತಡೆಯುವ ನಿಟ್ಟಿನಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ಮತ್ತು ಮಲೇರಿಯಾ ತಡೆಗೆ ಸಂಘಟಿತ ಮತ್ತು ಸಂಯೋಜಿತ ರೀತಿಯಲ್ಲಿ ಶ್ರಮಿಸಲು ಸಹಯೋಗಿ ಸಂಸ್ಥೆಗಳಿಗೆ ಅವರು ಆಹ್ವಾನ ನೀಡಿದರು.

ಶ್ರೀ ಅಶ್ವಿನಿ ಕುಮಾರ್ ಚೌಬೆ, “ರೋಗವಾಹಕಗಳು ಸಂತಾನೋತ್ಪತ್ತಿ ಮಾಡುವ ತಾಣಗಳ ನಿರ್ಮೂಲನೆಯು ವಿಬಿಡಿಗಳಿಗೆ ಸಾರ್ವಜನಿಕ ಆರೋಗ್ಯ ಸ್ಪಂದನೆಯ ಸ್ತಂಭವನ್ನು ರೂಪಿಸಲಿದ್ದು, ಬಹು ಮಾಧ್ಯಮ ಐಇಸಿ ಪ್ರಚಾರದ ಮೂಲಕ ಸಮುದಾಯ ತೊಡಗಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು..” ಎಂದರು. ದೆಹಲಿಯಲ್ಲಿ ಮಲೇರಿಯಾ ಮುಕ್ತಗೊಳಿಸುವುದು ದೇಶದ ಹಿರಿಮೆಗೆ ಮತ್ತೊಂದು ಗರಿ ಆಗಲಿದೆ ಎಂದರು.

ಲೆಫ್ಟಿನೆಂಟ್ ಗೌರ್ನರ್  ಶ್ರೀ ಅನಿಲ್ ಬೈಜಾಲ್ ಮಲೇರಿಯಾವನ್ನು ಅಧಿಸೂಚಿತ ಕಾಯಿಲೆ ಎಂದು ಪರಿಗಣಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅಧಿಸೂಚಿಸುವ ಭರವಸೆ ನೀಡಿದರು.

ವಿಬಿಡಿಗಳನ್ನು ತಡೆಗಟ್ಟಲು ಆಡಳಿತ ಕೈಗೊಂಡಿರುವ ಮಹತ್ವದ ಪ್ರಯತ್ನಗಳ ಬಗ್ಗೆ ಮಾಹಿತಿ ನೀಡಿದ ಶ್ರೀ ಅನಿಲ್ ಭೈಜಾಲ್: “ಕೋವಿಡ್ ಸಮಯದಲ್ಲಿ ಮಲೇರಿಯಾ, ಡೆಂಗ್ಯೂ ಅಥವಾ ಚಿಕುನ್‌ ಗುನ್ಯಾ ಹರಡಿದರೆ ತಡೆದುಕೊಳ್ಳಲು ಶಕ್ತರಾಗಿಲ್ಲ. ಮೂರೂ ನಗರಪಾಲಿಕೆಗಳನ್ನು ಸಜ್ಜುಗೊಳಿಸಲಾಗಿದೆ. ಅವರು ತಮ್ಮ ಪ್ರದೇಶಗಳಲ್ಲಿ ರೋಗವಾಹಕಗಳನ್ನು ನಿಯಂತ್ರಿಸುವ ಕ್ರಮಕ್ಕೆ ಮುಂದಾಗುತ್ತಾರೆ. ರೋಗ ವಾಹಕ ನಿಯಂತ್ರಣದ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಿ, ಅವರ ಮೂಲಕ ಪಾಲಕರಿಗೆ ಅರಿವು ಮೂಡಿಸುವ ಮೂಲಕ ಈ ಹಿಂದೆ ಒಂದು ದೊಡ್ಡ ಯಶಸ್ಸನ್ನು ಸಾಧಿಸಲಾಗಿತ್ತು, ಈ ಐಇಸಿ ವಿಷಯವನ್ನು ಅವರ ಆನ್‌ ಲೈನ್ ಶಿಕ್ಷಣದಲ್ಲಿ ಸೇರಿಸಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ.” ಎಂದರು.

ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್, ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ರೇಖಾ ಶುಕ್ಲಾ, ಡಿಜಿಎಚ್.ಎಸ್. ಡಾ. ಸುನೀಲ್ ಕುಮಾರ್, ಎನ್.ಸಿ.ಡಿ.ಸಿ.ಯ ನಿರ್ದೇಶಕ ಡಾ. ಸುಜೀತ್ ಸಿಂಗ್, ಎನ್.ವಿ.ಬಿ.ಡಿ.ಸಿ.ಪಿ.ಯ ನಿರ್ದೇಶಕ ಡಾ. ನೀರಜ್ ಧಿಂಗ್ರಾ ಮತ್ತು ನಾಲ್ಕು ಕೇಂದ್ರ ಸರ್ಕಾರದ ಆಸ್ಪತ್ರೆಗಳ ನಿರ್ದೇಶಕರು/ವೈದ್ಯಕೀಯ ಸೂಪರಿಂಟೆಂಡೆಂಟ್ ಗಳಾದ – ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ, ಆರ್.ಎಂ.ಎಲ್. ಆಸ್ಪತ್ರೆಯ  ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ರಾಣಾ ಎ.ಕೆ. ಸಿಂಗ್, ಸಫ್ದರ್ ಜಂಗ್ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಎಸ್.ವಿ. ಆರ್ಯಾ, ಮತ್ತು ಎಲ್.ಎಚ್.ಎಂ.ಸಿ. ನಿರ್ದೇಶಕ ಡಾ. ಅಪರ್ಣಾ ಅಗರ್ವಾಲ್ ಅವರೊಂದಿಗೆ  ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ದೆಹಲಿ ಎನ್.ಸಿ.ಟಿ.ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಧಾನ ಕಾರ್ಯದರ್ಶಿ ಶ್ರೀ ವಿಕ್ರಮ್ ದೇವ್ ದತ್ ಅವರು ಆಯುಕ್ತರು ಮತ್ತು ಉತ್ತರ, ದಕ್ಷಿಣ ಮತ್ತು ಪೂರ್ವ ಮುನಿಸಿಪಲ್ ಕಾರ್ಪೊರೇಷನ್ ಗಳ ವೈದ್ಯಾಧಿಕಾರಿಗಳು, ದೆಹಲಿಯ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು  ವಿಬಿಡಿಗಳಿಗೆ ಸಮರ್ಪಿತವಾದ ದೆಹಲಿ ಆಸ್ಪತ್ರೆಗಳ ಮುಖ್ಯಸ್ಥರು/ವೈದ್ಯಕೀಯ ಸೂಪರಿಂಟೆಂಡ್ ಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

***


(Release ID: 1731368) Visitor Counter : 305