ಕೃಷಿ ಸಚಿವಾಲಯ

ಭಾರತ-ಇಸ್ರೇಲ್ ಕೃಷಿ ಯೋಜನೆಯಡಿ ಕರ್ನಾಟಕದಲ್ಲಿ 3 ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ


ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಇಸ್ರೇಲಿ ಕೃಷಿ ತಂತ್ರಜ್ಞಾನ ಅಳವಡಿಕೆ

ಈ ಉತ್ಕೃಷ್ಟತಾ ಕೇಂದ್ರಗಳು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ - ಶ್ರೀ ನರೇಂದ್ರ ಸಿಂಗ್ ತೋಮರ್

Posted On: 16 JUN 2021 4:14PM by PIB Bengaluru

ತೋಟಗಾರಿಕೆ ಕ್ಷೇತ್ರದಲ್ಲಿ ಇಸ್ರೇಲಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು, ಭಾರತ-ಇಸ್ರೇಲ್ ಕೃಷಿ ಯೋಜನೆ (ಐಐಎಪಿ) ಅಡಿಯಲ್ಲಿ ಕರ್ನಾಟಕದಲ್ಲಿ ಸ್ಥಾಪಿಸಲಾದ 3 ಉತ್ಕೃಷ್ಟತಾ ಕೇಂದ್ರ (ಸಿಒಇ) ಗಳನ್ನು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್  ಜಂಟಿಯಾಗಿ ಉದ್ಘಾಟಿಸಿದರು.

ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಎಂ ಐ ಡಿ ಎಚ್ ವಿಭಾಗ ಮತ್ತು ಇಸ್ರೇಲ್‌ನ ಅಂತರರಾಷ್ಟ್ರೀಯ ಅಭಿವೃದ್ಧಿ ಸಹಕಾರ ಸಂಸ್ಥೆ – ಎಂ ಎ ಎಸ್ ಎಚ್ ಎ ವಿ ಇಸ್ರೇಲ್‌ನ ಅತಿದೊಡ್ಡ ಸರ್ಕಾರದಿಂದ ಸರ್ಕಾರದ (ಜಿ 2 ಜಿ) ಸಹಕಾರವನ್ನು ಮುನ್ನಡೆಸುತ್ತಿವೆ. ಭಾರತದಾದ್ಯಂತ 12 ರಾಜ್ಯಗಳಲ್ಲಿ 29 ಉತ್ಕೃಷ್ಟತಾ ಕೇಂದ್ರ (ಸಿಒಇ) ಗಳೊಂದಿಗೆ ಸುಧಾರಿತ ಇಸ್ರೇಲಿ ಕೃಷಿ- ತಂತ್ರಜ್ಞಾನವನ್ನು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಅಳವಡಿಸಿ ಅನುಷ್ಠಾನಗೊಳಿಸುತ್ತಿವೆ.

https://static.pib.gov.in/WriteReadData/userfiles/image/image001LIRL.jpg

 

ಈ 29 ಸಂಪೂರ್ಣ ಕಾರ್ಯಾಚರಣೆಯಲ್ಲಿರುವ ಸಿಒಇಗಳಲ್ಲಿ 3 ಕರ್ನಾಟಕದಲ್ಲಿವೆ.  ಮಾವು ಬೆಳೆಗೆ ಸಂಬಂಧಿಸಿದಂತೆ ಕೋಲಾರದಲ್ಲಿ, ದಾಳಿಂಬೆಗಾಗಿ ಬಾಗಲಕೋಟೆಯಲ್ಲಿ ಮತ್ತು ತರಕಾರಿಗಳಿಗೆ ಧಾರವಾಡದಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಉತ್ಕೃಷ್ಟತಾ ಕೇಂದ್ರಗಳು ಜ್ಞಾನವನ್ನು ಉತ್ಪಾದಿಸುತ್ತವೆ, ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸುತ್ತವೆ ಮತ್ತು ಅಧಿಕಾರಿಗಳು ಮತ್ತು ರೈತರಿಗೆ ತರಬೇತಿ ನೀಡುತ್ತವೆ.

ನವೀನ ತಂತ್ರಜ್ಞಾನಗಳನ್ನು ವರ್ಗಾಯಿಸಲು, ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆ, ಉತ್ಪಾದಕತೆ ಮತ್ತು ಗುಣಮಟ್ಟವನ್ನು ಸುಧಾರಿಸಲು ಹಾಗೂ ಸುಸ್ಥಿರತೆ ಸಾಧಿಸಲು ಕರ್ನಾಟಕದಲ್ಲಿ ಭಾರತ-ಇಸ್ರೇಲ್ ಕೃಷಿ ಯೋಜನೆ (ಐಐಎಪಿ) ಅಡಿಯಲ್ಲಿ ಈ ಉತ್ಕೃಷ್ಟತಾ ಕೇಂದ್ರ (ಸಿಒಇ) ಗಳನ್ನು ಸ್ಥಾಪಿಸಲು ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಿದ ಭಾರತ ಸರ್ಕಾರ ಮತ್ತು ಇಸ್ರೇಲ್ ದೇಶಕ್ಕೆ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಧನ್ಯವಾದ ತಿಳಿಸಿದರು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್, “ಈ ಕೇಂದ್ರಗಳು ಕರ್ನಾಟಕದ ಕೃಷಿಕ ಸಮುದಾಯಕ್ಕೆ ಇತ್ತೀಚಿನ ಇಸ್ರೇಲಿ ತಂತ್ರಜ್ಞಾನಗಳು ಲಭ್ಯವಾಗಲು ಸಹಾಯ ಮಾಡುತ್ತವೆ ಮತ್ತು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ” ಎಂದರು. ಈ ಸಿಒಇಗಳು ವಾರ್ಷಿಕವಾಗಿ 50,000 ಕಸಿ ಉತ್ಪಾದನೆ ಮತ್ತು 25 ಲಕ್ಷ ತರಕಾರಿ ಸಸಿಗಳ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿವೆ. ತೋಟಗಾರಿಕೆಯಲ್ಲಿ ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಜ್ಞಾನ ಪಡೆಯಲು ಸುಮಾರು 20,000 ರೈತರು ಈ ಸಿಒಇಗಳಿಗೆ ಭೇಟಿ ನೀಡಿದ್ದಾರೆ  ಎಂದು ಅವರು ತಿಳಿಸಿದರು.

ಕರ್ನಾಟಕದ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಶ್ರೀ ಆರ್. ಶಂಕರ್ ಮಾತನಾಡಿ,  “ಕರ್ನಾಟಕದಲ್ಲಿ ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಬೆಳೆ ಉತ್ಪಾದನೆ ಮತ್ತು ಕೊಯ್ಲಿನ ನಂತರದ ನಿರ್ವಹಣೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಇತ್ತೀಚಿನ ತಂತ್ರಜ್ಞಾನಗಳನ್ನು ರೈತರಿಗೆ ಒದಗಿಸಲು, ಭಾರತ ಸರ್ಕಾರವು ಇಸ್ರೇಲ್ ಸಹಯೋಗದೊಂದಿಗೆ ಕೋಲಾರದಲ್ಲಿ ಮಾವಿನ ಉತ್ಕೃಷ್ಟ ಕೇಂದ್ರ, ಬಾಗಲಕೋಟೆಯಲ್ಲಿ ದಾಳಿಂಬೆ ಮತ್ತು ಧಾರವಾಡದಲ್ಲಿ ತರಕಾರಿಗಳ ಉತ್ಕೃಷ್ಟ ಕೇಂದ್ರಗಳನ್ನು ಇಂಡೋ ಇಸ್ರೇಲ್ ಕೃಷಿ ಯೋಜನೆ (ಐಐಎಪಿ) ಅಡಿಯಲ್ಲಿ ಸ್ಥಾಪಿಸಲು ಸಹಾಯ ಮಾಡಿದೆ. ಈ ಕೇಂದ್ರಗಳು ಅಭಿವೃದ್ಧಿಪಡಿಸಿದ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಕರ್ನಾಟಕ ರೈತರು ಬಹಳ ಪ್ರಗತಿಪರರಾಗಿದ್ದಾರೆ. ಈ ಕೇಂದ್ರಗಳು ಉತ್ಪಾದನೆಯಲ್ಲಿ ಹೆಚ್ಚಳ, ಉತ್ಪಾದಕತೆಯ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತವೆ ” ಎಂದರು.

ಭಾರತದಲ್ಲಿನ ಇಸ್ರೇಲ್ ರಾಯಭಾರಿ ಡಾ.ರಾನ್ ಮಲ್ಕಾ ಅವರು ಮಾತನಾಡಿ, “ಇಂಡೋ-ಇಸ್ರೇಲಿ ಸಹಭಾಗಿತ್ವದ ಮಹತ್ವದ ಭಾಗವಾಗಿರುವ ಕೃಷಿಯಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಸಹಯೋಗ ಹೊಂದಲು ನಾವು ಹೆಮ್ಮೆ ಪಡುತ್ತೇವೆ ಮತ್ತು ಉತ್ಸುಕರಾಗಿದ್ದೇವೆ. ನಮ್ಮ ದೇಶಗಳ ನಡುವಿನ ಸಂಬಂಧಗಳು ಬಲಗೊಳ್ಳುತ್ತಿರುವ ಮತ್ತು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ನಾವು ಮೂರು ವಿಭಿನ್ನ ಕೇಂದ್ರಗಳನ್ನು ಉದ್ಘಾಟಿಸಿದ್ದೇವೆ. ಇದು ರಾಜ್ಯದ ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲಾಗಿದ್ದು, ಸ್ಥಳೀಯ ರೈತರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧೆಯ ಅವಕಾಶವನ್ನು ನೀಡುತ್ತದೆ. ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಇದು ಸಹಕಾರಿಯಾಗುತ್ತದೆ” ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಭಾರತ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜಯ್ ಅಗರ್ವಾಲ್, ಇಸ್ರೇಲಿ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು, ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು. ವರ್ಚುವಲ್ ಸಮಾರಂಭಕ್ಕೆ ಎಲ್ಲಾ ರಾಜ್ಯ ತೋಟಗಾರಿಕೆ ಮಿಷನ್‌ಗಳ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು.

****



(Release ID: 1727665) Visitor Counter : 368