ನೀತಿ ಆಯೋಗ

ನೀತಿ ಆಯೋಗ ಮತ್ತು ಪಿರಾಮಲ್ ಫೌಂಡೇಷನ್ ವತಿಯಿಂದ 112 ಅಪೇಕ್ಷಿತ ಜಿಲ್ಲೆಗಳಲ್ಲಿ ‘ಸುರಕ್ಷಿತ್ ಹಮ್ ಸುರಕ್ಷಿತ್ ತುಮ್ ‘ ಅಭಿಯಾನ ಆರಂಭ


ಅಭಿಯಾನದಡಿ 20 ಲಕ್ಷ ಜನರಿಗೆ ಕೋವಿಡ್ ಹೋಮ್ ಕೇರ್ ಬೆಂಬಲ

Posted On: 08 JUN 2021 3:40PM by PIB Bengaluru

112 ಅಪೇಕ್ಷಿತ ಜಿಲ್ಲೆಗಳಲ್ಲಿ ಸೌಮ್ಯ ಸ್ವರೂಪದ ಸೋಂಕು ಇರುವ ಅಥವಾ ಸೋಂಕಿನ ಗುಣಲಕ್ಷಣಗಳಿಲ್ಲದಿದ್ದರೂ ಸಹ ಸೋಂಕಿಗೆ ಒಳಗಾಗಿರುವ ಕೋವಿಡ್-19 ರೋಗಿಗಳಿಗೆ ಹೋಮ್ ಕೇರ್ ಬೆಂಬಲ ನೀಡಲು  ನೀತಿ ಆಯೋಗ ಮತ್ತು ಪಿರಾಮಲ್ ಫೌಂಡೇಷನ್ ಇಂದು  ‘ಸುರಕ್ಷಿತ್ ಹಮ್ ಸುರಕ್ಷಿತ್ ತುಮ್’ ಅಭಿಯಾನವನ್ನು ಆರಂಭಿಸಿವೆ.

ಈ ಅಭಿಯಾನವು ವಿಶೇಷ ಉಪಕ್ರಮದ ಭಾಗವಾಗಿದ್ದು, ಅದರಲ್ಲಿ ಅಪೇಕ್ಷಿತ ಜಿಲ್ಲೆಗಳ ಸಹಭಾಗಿತ್ವದಲ್ಲಿ ಸ್ಥಳೀಯ ನಾಯಕರು, ನಾಗರಿಕ ಸಮಾಜ ಮತ್ತು ಸ್ವಯಂಸೇವಕರು ಜಿಲ್ಲಾಡಳಿತದೊಂದಿಗೆ ಆಶೋತ್ತರ ಜಿಲ್ಲೆಗಳ ಕಾರ್ಯಕ್ರಮದಲ್ಲಿ ಗುರುತಿಸಲಾದ ಪ್ರಮುಖ ವಲಯಗಳ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯನಿರ್ವಹಿಸಲಿದ್ದಾರೆ.

          ಸುರಕ್ಷಿತ್ ಹಮ್ ಸುರಕ್ಷಿತ್ ತುಮ್ ಅಭಿಯಾನವನ್ನು ಸುಮಾರು 1000 ಸ್ಥಳೀಯ ಸರ್ಕಾರೇತರ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಕೈಗೊಳ್ಳಲಾಗುತ್ತಿದ್ದು ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ನೇತೃತ್ವ ವಹಿಸಲಿದ್ದು, ರೋಗಿಗಳ ಜೊತೆ ಸಂಪರ್ಕ ಸಾಧಿಸಲು ಸುಮಾರು ಒಂದು ಲಕ್ಷ ಸ್ವಯಂ ಸೇವಕರಿಗೆ ತರಬೇತಿ ನೀಡಲಿದ್ದಾರೆ. ಪಿರಾಮಲ್ ಫೌಂಡೇಷನ್, ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳೊಂದಿಗೆ  ಕಾರ್ಯನಿರ್ವಹಿಸುತ್ತಾ, ಎನ್ ಜಿಒಗಳು ಮತ್ತು ಸ್ವಯಂಸೇವಕರಿಗೆ ತರಬೇತಿ ನೀಡಲು ಬೆಂಬಲ ನೀಡಲಿದೆ.

ಅಭಿಯಾನಕ್ಕೆ ಚಾಲನೆ ನೀಡಿದ ವೇಳೆ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಮಾತನಾಡಿ, ಸುರಕ್ಷಿತ್ ಹಮ್ ಸುರಕ್ಷಿತ್ ತುಮ್ ಅಭಿಯಾನ ಮಹತ್ವದ ಉಪಕ್ರಮವಾಗಿದ್ದು, ಕೋವಿಡ್-19ನಿಂದ ಆಗುತ್ತಿರುವ ಪರಿಣಾಮಗಳನ್ನು ಎದುರಿಸಲು ಅಪೇಕ್ಷಿತ ಜಿಲ್ಲೆಗಳಲ್ಲಿ ಭಾರತದ ಬಡ ಸಮುದಾಯಕ್ಕೆ  ದೀರ್ಘಾವಧಿಯಲ್ಲಿ ಮತ್ತು ತಕ್ಷಣದ ಅವಶ್ಯಕತೆಗೆ ಸ್ಪಂದಿಸಲು ನೆರವಾಗಲಿದೆ ಎಂದರು.

       ಈ ಅಭಿಯಾನ ಶೇ.70ರಷ್ಟು ಕೋವಿಡ್ ಪ್ರಕರಣಗಳನ್ನು ಮನೆಗಳಲ್ಲೇ ನಿರ್ವಹಿಸಲು ಜಿಲ್ಲಾಡಳಿತವನ್ನು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಮತ್ತು ಇದರಿಂದ ಆರೋಗ್ಯ ವ್ಯವಸ್ಥೆ ಮೇಲಿನ ಹೊರೆ ತಗ್ಗಲಿದೆ ಮತ್ತು ಜನರಲ್ಲಿ ಸೋಂಕು ಹರಡುವ ಭೀತಿಯೂ ತಗ್ಗಲಿದೆ. ಈ ಅಭಿಯಾನ ಈ ಜಿಲ್ಲೆಗಳಿಗೆ ಪೂರೈಕೆಯಾಗುವ ಆಕ್ಸಿಜನ್ ಸಾಂದ್ರಕಗಳ ಸಮರ್ಪಕ ಬಳಕೆಗೆ ನಾಗರಿಕರಲ್ಲಿ ಸಾಮರ್ಥ್ಯವೃದ್ಧಿಗೆ ಸಹಕಾರಿಯಾಗಲಿದೆ.

          ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಯನ್ನು ಆಧರಿಸಿ ಬಾಧಿತರಿಗೆ ಮನೆಯಲ್ಲೇ ಆರೈಕೆ ಬೆಂಬಲ ನೀಡುವ ಕಾರ್ಯಕ್ಕೆ ಸರ್ಕಾರೇತರ ಸಂಸ್ಥೆಗಳು, ಸ್ಥಳೀಯ ಸ್ವಯಂಸೇವಕರನ್ನು ಒಗ್ಗೂಡಿಸಲಿವೆ. ಕೋವಿಡ್ ಶಿಷ್ಟಾಚಾರಗಳ ಪಾಲನೆ, ಮಾನಸಿಕ ಮತ್ತು ಸಾಮಾಜಿಕ ಬೆಂಬಲ ಮತ್ತು ಆಡಳಿತ ನೀಡುವ ತಾಜಾ ಮಾಹಿತಿಗಳನ್ನು ಸಕಾಲಕ್ಕೆ ರೋಗಿಗಳಿಗೆ ತಲುಪಿಸಲು ಪ್ರತಿಯೊಬ್ಬ ಸ್ವಯಂಸೇವಕರಿಗೆ 20 ಬಾಧಿತ ಕುಟುಂಬಗಳಿಗೆ ನೆರವು ನೀಡುವಂತೆ ತರಬೇತಿ ನೀಡಲಾಗುವುದು.  

          “ಸೇವೆಗೆ ಬೆಲೆ ನೀಡುವ ಪಿರಾಮಲ್ ಫೌಂಡೇಷನ್ ತತ್ವಕ್ಕೆ ಅನುಗುಣವಾಗಿ, 112 ಆಶೋತ್ತರ ಜಿಲ್ಲೆಗಳ ಪ್ರತಿಯೊಬ್ಬ ಬಾಧಿತ ವ್ಯಕ್ತಿಗಳನ್ನು ತಲುಪುವುದು ನಮ್ಮ ಗುರಿಯಾಗಿದೆ. ನಾವು ಎಲ್ಲಾ ಭಾಗೀದಾರರು – ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ಸಮುದಾಯಗಳು ಮತ್ತು ಇತರರು ಜಂಟಿಯಾಗಿ ಕೈಜೋಡಿಸಬೇಕು ಮತ್ತು ಆಶೋತ್ತರ ಜಿಲ್ಲೆಗಳ ಸಹಭಾಗಿತ್ವದಲ್ಲಿ ಈ ಸೇವಾ ಉಪಕ್ರಮವನ್ನು ಒದಗಿಸಲು ನೆರವು ನೀಡಬೇಕು ಎಂದು ಕೋರುತ್ತೇವೆ” ಎಂದು ಪಿರಾಮಲ್ ಬಳಗದ ಅಧ್ಯಕ್ಷ ಅಜಯ್ ಪಿರಾಮಲ್ ಹೇಳಿದ್ದಾರೆ. 

****



(Release ID: 1725408) Visitor Counter : 274