ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
“ಕಾರ್ಯಶೀಲವಾಗಲು ಇದು ಸಕಾಲ”: ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯುಎಚ್ಒ)ಯ 149ನೇ ಕಾರ್ಯಕಾರಿ ಮಂಡಳಿಯ ವರ್ಚುವಲ್ ಸಭೆ ಉದ್ದೇಶಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಭಾಷಣ
ವಿಶ್ವ ಆರೋಗ್ಯ ಸಂಘಟನೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರ ಅವಧಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಡಾ. ಹರ್ಷವರ್ಧನ್
“ತಂಬಾಕು ನಿಯಂತ್ರಣದಲ್ಲಿ ನೈಜ ಚಾಂಪಿಯನ್ ಆಗಿ ಹೊರಹೊಮ್ಮಿದ ಡಾ. ಹರ್ಷವರ್ಧನ್” – ಮಹಾನಿರ್ದೇಶಕರು, ಡಬ್ಲ್ಯುಎಚ್ಒ
“ಭಾರತದ ಪುರಾತನ ತತ್ವ, ಸಿದ್ಧಾಂತವೆನಿಸಿರುವ ‘ವಸುದೈವ ಕುಟುಂಬಂ’ ಇಡೀ ವಿಶ್ವವನ್ನೇ ಒಂದು ಕುಟುಂಬದಂತೆ ಬೆಸೆದಿದೆ” – ಜಾಗತಿಕ ಆರೋಗ್ಯ ಆಡಳಿತದ ಹಿಂದಿರುವ ಮಾರ್ಗಸೂಚಿ ತತ್ವಗಳ ಕುರಿತು ಡಾ. ಹರ್ಷವರ್ಧನ್ ಪ್ರಶಂಸೆ
“ಬಲಹೀನರಾಗಿರುವ ಹಾಗೂ ದನಿ ಅಡಗಿರುವ ಜನರನ್ನು ಉಳಿಸಲು, ಕಗ್ಗತ್ತಲ ಈ ಕಾಲಘಟ್ಟದಲ್ಲಿ ಆಶಾವಾದದ ಬೆಳಕು ಕಾಣಲು, ನಾವೆಲ್ಲಾ ಈ ಸುಸಂದರ್ಭದಲ್ಲಿ ಎದ್ದು ನಿಲ್ಲಬೇಕು” – ಡಾ. ಹರ್ಷವರ್ಧನ್
“ಸಾಂಕ್ರಾಮಿಕ ಸೋಂಕಿನ ಎಲ್ಲಾ ಸಮಸ್ಯೆಗಳಿಗೆ ಮತ್ತು ಸವಾಲುಗಳಿಗೆ ಜಾಗತಿಕ ಒಗ್ಗಟ್ಟು ಮತ್ತು ಸಹಕಾರವು ಮೂಲಭೂತವಾಗಬೇಕು ಮತ್ತು ಇದು ಬಲಗೊಳ್ಳುವುದನ್ನು ಮುಂದುವರಿಸಬೇಕು”
Posted On:
02 JUN 2021 5:09PM by PIB Bengaluru
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಡಾ. ಹರ್ಷವರ್ಧನ್ ಅವರು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್ಒ)ಯ 149ನೇ ಕಾರ್ಯಕಾರಿ ಮಂಡಳಿಯ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿ ಭಾಷಣ ಮಾಡಿದರು. ದೆಹಲಿಯ ನಿರ್ಮಾಣ್ ಭವನದಲ್ಲಿ ಈ ಮಹತ್ವದ ವೀಡಿಯೊ ಕಾನ್ಫರೆನ್ಸ್ ಸಭೆ ಆಯೋಜಿಸಲಾಗಿತ್ತು. ಸಚಿವ ಶ್ರೀ ಡಾ. ಹರ್ಷವರ್ಧನ್ ಅವರು ವಿಶ್ವ ಆರೋಗ್ಯ ಸಂಘಟನೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷೀಯ ಅವಧಿಯನ್ನು ಇಂದು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಅಪ್ರತಿಮ ಧೈರ್ಯ ತೋರಿದ ವಿಶೇಷ ಮತ್ತು ಗೌರವಾನ್ವಿತ ಪುರುಷ ಮತ್ತು ಮಹಿಳಾ ವಾರಿಯರ್|ಗಳನ್ನು ನೆನಪು ಮಾಡಿಕೊಂಡ ಡಾ| ಹರ್ಷವರ್ಧನ್, ಅವರು ವಿಶ್ವಾದ್ಯಂತ ಕೋವಿಡ್ ವಾರಿಯರ್|ಗಳಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ, ಮಾನವತೆಯನ್ನು ಸಂರಕ್ಷಿಸಿದ್ದಾರೆ ಎಂದು ಶ್ಲಾಘಿಸಿದರು.
ಡಾ. ಹರ್ಷವರ್ಧನ್ ಭಾಷಣದ ಪ್ರಮುಖಾಂಶ ಇಂತಿದೆ:
ಮಿಶ್ರ ಭಾವನೆಗಳನ್ನು ಹೊರಹಾಕಲು ನನಗೆ ಇದು ಸುಸಂದರ್ಭ. ಒಂದು ಕಡೆ, ಈ ಪ್ರತಿಷ್ಠಿತ ಸಂಘಟನೆಗೆ ಸೇವೆ ಸಲ್ಲಿಸಲು ನನಗೆ ಸಿಕ್ಕ ಸದವಕಾಶದಿಂದ ನಾನು ಸಂತಸಗೊಂಡಿದ್ದೇನೆ ಮತ್ತು ಅದೃಷ್ಟವಂತನಾಗಿದ್ದೇನೆ. ಮತ್ತೊಂದು ಕಡೆ, ಈ ಸಂಘಟನೆಗೆ ಮಾಡುವ ಅಪಾರ ಕೆಲಸ ಇನ್ನೂ ಬಾಕಿ ಇರುವಾಗಲೇ ನಾನು ಇಲ್ಲಿಂದ ನಿರ್ಗಮಿಸುತ್ತಿದ್ದೇನೆ ಎಂಬುದನ್ನು ನೆನೆಸಿಕೊಂಡರೆ ಹೃದಯ ತುಂಬಿ ಬರುತ್ತಿದೆ. ಇಡೀ ಪೃಥ್ವಿಯೇ ಕೋವಿಡ್ ಸಾಂಕ್ರಾಮಿಕ ಸೋಂಕಿನ ಬಿಕ್ಕಟ್ಟಿನಿಂದ ನಲುಗುತ್ತಿರುವಾಗ ಮತ್ತು ಆರ್ಥಿಕ ಪ್ರಕ್ಷುಬ್ಧತೆ ಎದುರಾಗಿರುವ ಕಾಲಘಟ್ಟ ಮುಂದುವರಿದಿರುವಾಗ ನಾನು ಹೊರಹೋಗುತ್ತಿರುವುದು ಅತೀವ ಬೇಸರ ತಂದಿದೆ.
2020 ಮೇನಲ್ಲಿ ನನಗೆ ವಿಶ್ವ ಆರೋಗ್ಯ ಸಂಘಟನೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಹುದ್ದೆಯ ಗುರುತರ ಜವಾಬ್ದಾರಿ ವಹಿಸಲಾಯಿತು. ಡಬ್ಲ್ಯುಎಚ್ಒ ಕಾರ್ಯಕಾರಿ ಮಂಡಳಿಯ 147 ಮತ್ತು 148ನೇ ಅಧಿವೇಶನಗಳು ಮತ್ತು ಕೋವಿಡ್-19 ಸ್ಪಂದನೆಯ ವಿಶೇಷ ಅಧಿವೇಶನದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸರ್ವೋಚ್ಚ ಆಡಳಿತ ಮಂಡಳಿಯನ್ನು ಮುನ್ನಡೆಸಿದ್ದು ನಿಜಕ್ಕೂ ನನಗೆ ಸಂದ ಆದರ ಮತ್ತು ಗೌರವ ಎಂದು ನಾನು ಭಾವಿಸುತ್ತೇನೆ.
2021 ಮೇ 31ರಂದು ಜರುಗಿದ 74ನೇ ವಿಶ್ವ ಆರೋಗ್ಯ ಅಧಿವೇಶನದಲ್ಲಿ ಡಬ್ಲ್ಯುಎಚ್ಒ ಕಾರ್ಯಕಾರಿ ಮಂಡಳಿಯನ್ನು ಪ್ರತಿನಿಧಿಸಿದ್ದು ನನ್ನ ಪಾಲಿನ ಅದೃಷ್ಟವೇ ಸರಿ ಎಂದು ಭಾವಿಸಿದ್ದೇನೆ. ಇದರಿಂದ COVID-19 ಸ್ಪಂದನೆಯನ್ನು ಬಲಪಡಿಸಲು ಮತ್ತು ಮೂರು ಪಟ್ಟು ಬಿಲಿಯನ್ ಗುರಿಗಳು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಪ್ರಗತಿಯನ್ನು ವೇಗಗೊಳಿಸಲು ಇದು ಸಹಾಯ ಮಾಡುತ್ತದೆ ಎಂಬುದು ನನಗೆ ಖಚಿತವಾಗಿದೆ.
ಸಾಂಕ್ರಾಮಿಕ ಸೋಂಕಿನ ಕಾಲಘಟ್ಟದ ಪೂರ್ತಿ ಡಬ್ಲ್ಯುಎಚ್ಒ ಎಲ್ಲಾ ಸದಸ್ಯ ರಾಷ್ಟ್ರಗಳು ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿದ ಸದೃಢ ಬೆಂಬಲವನ್ನು ನಾನು ಶ್ಲಾಘಿಸುತ್ತೇನೆ. ನ್ಯಾಯ, ನೀತಿ ಮತ್ತು ಧರ್ಮದ ಮೌಲ್ಯಕ್ಕೆ ಸಂಪೂರ್ಣವಾಗಿ ಬದ್ಧವಾಗಿವೆ. ಎಲ್ಲರೂ ಸುರಕ್ಷಿತರಾಗುವ ತನಕ ಯಾರೊಬ್ಬರೂ ಸುರಕ್ಷಿತವಲ್ಲ ಎಂಬುದು ಸರಳ ಸತ್ಯವಾಗಿದೆ.
ಕೋವಿಡ್-19 ಪರೀಕ್ಷೆಗಳು, ಚಿಕಿತ್ಸೆಗಳು ಮತ್ತು ಲಸಿಕೆಗಳ ಅಭಿವೃದ್ಧಿ, ಉತ್ಪಾದನೆ ಮತ್ತು ಲಭ್ಯತೆಗೆ ಸಂಘಟಿತ ಮತ್ತು ಯಶಸ್ವಿ ಜಾಗತಿಕ ಸಹಯೋಗ ಸಿಕ್ಕಿದೆ. ಕೊವ್ಯಾಕ್ಸ್ ಸೌಲಭ್ಯದಿಂದ ಕೋವಿಡ್-19 ಲಸಿಕೆಗಳ ಸಮಾನ ಲಭ್ಯತೆಯನ್ನು ಖಾತ್ರಿಪಡಿಸಿದೆ. ಈ ಎಲ್ಲಾ ಸಂಘಟಿತ ಪ್ರಯತ್ನಗಳಲ್ಲಿ ಯಾರೊಬ್ಬರನ್ನೂ ಹಿಂದೆ ಉಳಿಯದಂತೆ ಬಿಡಬಾರದು ಎಂಬ ನಮ್ಮ ತತ್ವಗಳು ಇಲ್ಲಿ ಸಾಕಾರಗೊಂಡಿವೆ.
ಕೋವಿಡ್-19 ಔಷಧಗಳು ಮತ್ತು ಲಸಿಕೆಗಳು ಎಲ್ಲ ರಾಷ್ಟ್ರಗಳಿಗೂ ಸಮಾನವಾಗಿ ಸಿಗುವಂತೆ ವಿಶ್ವ ಆರೋಗ್ಯ ಅಧಿವೇಶನ ನೀಡಿದ ಬೆಂಬಲದಿಂದ ನಾನು ಸ್ಫೂರ್ತಿ ಹೊಂದಿದ್ದೇನೆ. ಸಾಂಕ್ರಾಮಿಕ ಸೋಂಕಿನ ಸ್ಪಂದನೆಯ ಎಲ್ಲಾ ಸಮಸ್ಯೆಗಳಿಗೆ ಜಾಗತಿಕ ಒಗ್ಗಟ್ಟು ಮತ್ತು ಸಹಕಾರವೇ ಮೂಲಭೂತವಾಗಿದೆ ಮತ್ತು ಇದು ಬಲಗೊಳ್ಳುವುದು ನಿರಂತರ ಮುಂದುವರಿಯಬೇಕು.
ಕ್ರಿಯಾಶೀಲವಾಗಲು ಇದು ಸಕಾಲ. ಮುಂದಿನ ಎರಡು ದಶಕಗಳ ಕಾಲನಮ್ಮ ಮುಂದೆ ಹಲವಾರು ಆರೋಗ್ಯ ಸವಾಲುಗಳಿವೆ ಎಂಬುದನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕಿದೆ. ಈ ಎಲ್ಲಾ ಸವಾಲುಗಳು ಹಂಚಿಕೆಯ ಅಥವಾ ಸಂಘಟಿತ ಸ್ಪಂದನೆಯನ್ನು ಒತ್ತಾಯಿಸುತ್ತಿವೆ ಅಥವಾ ನಿರೀಕ್ಷಿಸುತ್ತಿವೆ. ಹಂಚಿಕೆಯ ಬೆದರಿಕೆಗಳನ್ನು ಸಮರ್ಥವಾಗಿ ಹತ್ತಿಕ್ಕಬೇಕಾದರೆ ಹಂಚಿಕೆಯ ಜವಾಬ್ದಾರಿಗಳಿಂದಲೇ ಕಾರ್ಯೋನ್ಮುಖವಾಗಬೇಕು.ವಾಸ್ತವವಾಗಿ, ಇವೇ ವಿಶ್ವ ಆರೋಗ್ಯ ಸಂಘಟನೆಯ ಮೂಲತತ್ವಗಳಾಗಿವೆ. ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ, ಈಗಲೂ ಹೇಳಲು ಬಯಸುವುದೇನೆಂದರೆ, ಇವತ್ತಿನ ಬಹುದೊಡ್ಡ ಅಗತ್ಯವೇನೆಂದರೆ, ರಾಷ್ಟ್ರಗಳ ಹಂಚಿಕೆಯ ಆದರ್ಶವಾದ ಹೆಚ್ಚಿನ ಮಟ್ಟದ್ದಾಗಿರಬೇಕು.
ಇಂದಿನ ಭೀಕರ ಜಾಗತಿಕ ಬಿಕ್ಕಟ್ಟಿನಲ್ಲಿ, ಗಂಡಾಂತರಗಳ ನಿರ್ವಹಣೆ ಮತ್ತು ನಿಯಂತ್ರಣ ಎರಡಕ್ಕೂ ಜಾಗತಿಕ ಸಾರ್ವಜನಿಕ ಆರೋಗ್ಯದಲ್ಲಿ ಆಸಕ್ತಿ ಮತ್ತು ಹೂಡಿಕೆಯನ್ನು ಪುನರುಜ್ಜೀವಗೊಳಿಸಲು ಜಾಗತಿಕ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ.
ಶತಮಾನಗಳಿಂದ ಮನುಕುಲವನ್ನು ಬಾಧಿಸುತ್ತಿರುವ ಮಾರಕ ರೋಗಗಳ ನಿಯಂತ್ರಣಕ್ಕೆ ಹೆಚ್ಚಿನ ಬದ್ಧತೆ ಪ್ರದರ್ಶಿಸುವುದು ಪ್ರಮುಖ ಕಾರ್ಯವಾಗಿದೆ. ನಮ್ಮ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಮೂಲಕ ನಾವು ಪರಸ್ಪರ ಸಹಭಾಗಿತ್ವ ಹೊಂದುವ ಮೂಲಕ ಪ್ರತಿಕೂಲಗಳನ್ನು ಜಯಿಸಬೇಕಾಗಿದೆ.
ಆದಾಗ್ಯೂ, ವಿಶ್ವ ಆರೋಗ್ಯ ಸಂಘಟನೆ ಜಾಗತಿಕ ಆರೋಗ್ಯ ವಲಯದಲ್ಲಿ ಈಗಾಗಲೇ ಇಡೀ ವಿಶ್ವಕ್ಕೆ ವಿವೇಚನಾಯುಕ್ತ ನಾಯಕತ್ವವನ್ನು ಒದಗಿಸಿದೆ. ಈ ವಿಷಯದಲ್ಲಿ ಮತ್ತಷ್ಟು ಬದಲಾವಣೆ ತರಲು ಮತ್ತು ಅಗತ್ಯಗಳನ್ನು ಪೂರೈಸಲು ಸಾಕಷ್ಟು ಅವಕಾಶಗಳು ಸೃಷ್ಟಿಯಾಗಲಿವೆ. ಜಂಟಿ ಕ್ರಮ ಅಗತ್ಯವಿರುವ ಪಾಲುದಾರಿಕೆಯಲ್ಲಿ ತೊಡಗಿಸಿಕೊಳ್ಳುವುದು, ಸಂಶೋಧನಾ ಕಾರ್ಯಸೂಚಿ ರೂಪಿಸುವುದು ಮತ್ತು ಮೌಲ್ಯಯುತವಾದ ಜ್ಞಾನ ಪ್ರಸರಣವನ್ನು ಉತ್ತೇಜಿಸಲು ನಾವು ಮತ್ತಷ್ಟು ಆಕ್ರಮಣಶೀಲರಾಗಬೇಕಿದೆ.
ಪ್ರಸ್ತುತ ಸಾಂಕ್ರಾಮಿಕ ರೋಗ ಕಾಡುತ್ತಿರುವ ನಿರ್ಣಾಯಕ ಸಮಯದಲ್ಲಿ, ಕೈಗಾರಿಕಾ ಮತ್ತು ಉದ್ಯಮ ರಂಗವು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಅಂಟಿಕೊಳ್ಳುವ ಅಗತ್ಯವೂ ಇಲ್ಲ, ಅವಕಾಶವೂ ಇಲ್ಲ. ಕೆಲವೊಮ್ಮೆ, ಸಹಭಾಗಿತ್ವದ ಸಂಶೋಧನೆಗೆ ಹೆಚ್ಚಿನ ಇಚ್ಛೆ ಅಥವಾ ಒಲವು ತೋರುವುದಿಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಎಲ್ಲರಿಗೂ ಆರೋಗ್ಯ ಒದಗಿಸುವ ನಮ್ಮ ಗುರಿ ಸಾಧಿಸಬೇಕಾದರೆ ಕೈಗೆಟಕುವ ಬೆಲೆಗೆ ಎಲ್ಲರಿಗೂ ಆರೋಗ್ಯ ಸೇವೆ ಸಿಗಬೇಕು ಎಂಬುದೇ ಪ್ರಮುಖ ಚಾಲನಾ ಅಂಶವಾಗಿದೆ. ಡಬ್ಲ್ಯುಎಚ್ಒ, ವಿಶ್ವ ವಾಣಿಜ್ಯ ಸಂಸ್ಥೆ ಮತ್ತಿತರ ಸಂಘ ಸಂಸ್ಥೆಗಳ ಜತೆ ಕೈಜೋಡಿಸಿ ಪ್ರಮುಖ ಔಷಧಗಳು ಕೈಗೆಟುಕುವ ಬೆಲೆಗೆ ಲಭ್ಯವಾಗುವುದನ್ನು ಖಾತ್ರಿಪಡಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು.
ಜಾತಿ, ಜನಾಂಗ, ಧರ್ಮ, ರಾಜಕೀಯ ನಂಬಿಕೆ, ಆರ್ಥಿಕ ಅಥವಾ ಸಾಮಾಜಿಕ ಸ್ಥಿತಿಗತಿಯ ಭೇದಭಾವವಿಲ್ಲದೆ ಅತ್ಯುನ್ನತ ಗುಣಮಟ್ಟದ ಆರೋಗ್ಯದ ಆನಂದ ಹೊಂದುವುದು ಪ್ರತಿ ಮನುಷ್ಯನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ ಎಂಬ ತತ್ವದಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಸಾಂಕ್ರಾಮಿಕದ ಪ್ರಸ್ತುತ ಸಂದರ್ಭದಲ್ಲಿ, ಲಸಿಕೆಗಳ ಸಮಾನ ವಿತರಣೆಯು ನಮ್ಮ ಮುಂದಿರುವ ಬಹುದೊಡ್ಡ ಸವಾಲಾಗಿದೆ.
ಈ ನಿಟ್ಟಿನಲ್ಲಿ ನಾವೆಲ್ಲಾ ಬಲಹೀನರಾಗಿರುವ, ದನಿ ಅಡಗಿರುವ ಜನರನ್ನು ಉಳಿಸಲು, ಕಗ್ಗತ್ತಲ ಕಾಲಘಟ್ಟದಲ್ಲಿ ಆಶಾವಾದದ ಬೆಳಕು ಕಾಣಲು ವಿಶ್ವ ಆರೋಗ್ಯ ಸಂಘಟನೆಯಲ್ಲಿ ಈ ಸುಸಂದರ್ಭಕ್ಕಾಗಿ ಎದ್ದು ನಿಲ್ಲಬೇಕು. ಮುಕ್ತ ಸಹಯೋಗವನ್ನು ರೂಪಿಸಲು ಮತ್ತು ಜಗತ್ತು ಒಂದು ಎಂಬ ಮೂಲಭೂತ ಸತ್ಯವನ್ನು ಪುನರುಚ್ಚರಿಸಲು ಇದು ನಮಗೆಲ್ಲಾ ಸಿಕ್ಕಿರುವ ಒಂದು ಅವಕಾಶ ಮತ್ತು ಒಂದು ಕ್ಷಣವಾಗಿದೆ.
‘ವಸುದೈವ ಕುಟುಂಬಂ’ – ಅಂದರೆ ವಿಶ್ವವೇ ಒಂದು ಕುಟುಂಬವಿದ್ದಂತೆ ಎಂಬ ಭಾರತದ ಪುರಾತನ ತತ್ವ, ಸಿದ್ಧಾಂತವನ್ನು ಇಲ್ಲಿ ಎಲ್ಲರ ಗಮನಕ್ಕೆ ತರುತ್ತಿದ್ದೇನೆ.
ಹಾಗಾಗಿ, ನಾವೆಲ್ಲಾ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ದಕ್ಷತೆಯಿಂದ, ಪರಿಣಾಮಕಾರಿಯಾಗಿ ಮತ್ತು ಸ್ಪಂದನಾಶೀಲತೆಯಿಂದ ಸದಸ್ಯ ರಾಷ್ಟ್ರಗಳು, ಸಂಘಟನೆಗಳು ಮತ್ತು ಜಾಗತಿಕ ಸಮುದಾಯದ ಜತೆಗೂಡಿ ಪಾಲುದಾರರಾಗಿ ಕೆಲಸ ಮಾಡುವ ಬದ್ಧತೆ ಪ್ರದರ್ಶಿಸಬೇಕು.
ಆ ಮೂಲಭೂತ ನಂಬಿಕೆಯೇ ನಮ್ಮ ಮಾರ್ಗದರ್ಶಿ ಸೂತ್ರಗಳಾಗಿವೆ. ನಮ್ಮ ಆರೋಗ್ಯ ಲಸಿಕೆಗಳು ಬಡವರು ಹಾಗು ಬಲ್ಲಿದರು ಇಬ್ಬರಿಗೂ ತಲುಪಬೇಕು.
ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ನನ್ನ ಅಧಿಕಾರಾವಧಿಯು ಉತ್ತಮವಾಗಿ ಮತ್ತು ಬಹಳ ವೇಗವಾಗಿ ಹೋಗಿದೆ ಎಂದು ನಿಮ್ಮಲ್ಲಿ ಹಲವರು ಪ್ರತಿಕ್ರಿಯಿಸಿದ್ದೀರಿ. ಹೌದು, ಇದು ನನಗೆ ನಿಜಕ್ಕೂ ಗೌರವ ತಂದ ಅನುಭವವಾಗಿದೆ. ಇದು ನನಗೆ ದೃಢೀಕರಿಸಿದ ಅನುಭವವಾಗಿದೆ. ನನ್ನ ಉತ್ತರಾಧಿಕಾರಿಗೆ ಅಧಿಕಾರ ಹಸ್ತಾಂತರಿಸಲು ನಾನು ಎದುರು ನೋಡುತ್ತಿದ್ದೇನೆ.
ನೀವೆಲ್ಲರೂ ನನ್ನ ಮೇಲೆ ಇಟ್ಟಿದ್ದ ನಂಬಿಕೆಯಿಂದ ನಾನು ಗೌರವಿತನಾಗಿದ್ದೇನೆ. ಮನುಕುಲದ ಇತಿಹಾಸದ ಅತ್ಯಂತ ಪ್ರಕ್ಷುಬ್ಧ ಕಾಲಘಟ್ಟದಲ್ಲಿ ನಾನು ಕಾರ್ಯಕಾರಿ ಮಂಡಳಿಯ ಅಧ್ಯಕ್ಷನಾಗಿದ್ದೇನೆ ಎಂಬ ಗೌರವ ನನ್ನದಾಗಿದೆ. ಇನ್ನು ನಮ್ಮ ವಿಜ್ಞಾನಿಗಳು ಲಸಿಕೆ ಕಂಡುಹಿಡಿಯಲು ಅವಿರತ ಸಂಶೋಧನಾ ಕೆಲಸ ಮಾಡಿದ ವರ್ಷ. ಜೀವ ಉಳಿಸುವ ಕೋವಿಡ್-19 ಲಸಿಕೆಯನ್ನು ನಮಗೆ ನೀಡಲು ಅವರು ದಾಖಲೆಯ ವೇಗದಲ್ಲಿ ಸಾಗಿದರು.
ಸ್ನೇಹಿತರೇ, ಇದು ವಿಜ್ಞಾನದ ವರ್ಷವೂ ಆಗಿದೆ. ವಿಜ್ಞಾನ, ಪುರಾವೆಗಳು ಮತ್ತು ದತ್ತಾಂಶ ಕ್ಷೇತ್ರಗಳಲ್ಲಿ ಕೈಗೊಂಡಿರುವ ಆಧಾರಪೂರ್ವ ಅಥವಾ ಮಹತ್ವದ ನಿರ್ಧಾರಗಳಿಗೆ ಈ ವರ್ಷ ಹೆಚ್ಚಿನ ಮಹತ್ವವಿದೆ.
ವಿಶ್ವಾದ್ಯಂತ ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು ಕೋವಿಡ್-19 ನಿಯಂತ್ರಣಕ್ಕೆ ಮತ್ತು ಸೋಂಕಿತರ ರಕ್ಷಣೆಗಾಗಿ ಆಸ್ಪತ್ರೆಗಳಲ್ಲಿ ದೀರ್ಘಕಾಲ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸದಸ್ಯರನ್ನು ಸೋಂಕಿನಿಂದ ಪಾರು ಮಾಡಲು ಅವರು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕುಟುಂಬದಿಂದಲೇ ದೂರ ಉಳಿದು, ನೆಲಮಾಳಿಗೆಯಲ್ಲಿ ಅಥವಾ ಹೋಟೆಲ್ಗಳಲ್ಲಿ ವಿಶ್ರಾಂತಿ ಪಡೆಯುತ್ತಾ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹೊಸ ಲಸಿಕೆಗಳು ಮತ್ತು ಚಿಕಿತ್ಸೆ ಅಭಿವೃದ್ಧಿಪಡಿಸಲು ನಮ್ಮ ವಿಜ್ಞಾನಿಗಳು ಸಮಯಮೀರಿ ಕೆಲಸ ಮಾಡುತ್ತಿದ್ದಾರೆ. ಇವುಗಳ ಮಧ್ಯೆ, ನೀವೆಲ್ಲರೂ ಸುದ್ದಿ ಚಾನೆಲ್ಗಳಲ್ಲಿ ಹರಡುತ್ತಿರುವ ವದಂತಿ ಮತ್ತು ಅಂತ್ಯವಿಲ್ಲದ ಸುಳ್ಳು ನಿರೂಪಣೆಗಳನ್ನು ಸಹ ನೋಡುತ್ತಾ ಬಂದಿದ್ದೀರಿ. ಈ ಎಲ್ಲಾ ಬೆಳವಣಿಗೆಗಳ ನಡುವೆ ನಮ್ಮ ವೈದ್ಯರು ವೈದ್ಯಕೀಯ ಚಿಕಿತ್ಸೆಯನ್ನು ಮತ್ತೆ ತೆರೆಯುತ್ತಿದ್ದಾರೆ. ಆದ್ದರಿಂದ ನಮ್ಮ ರೋಗಿಗಳ ಮುಂದೂಡಲ್ಪಟ್ಟ ಆರೋಗ್ಯ ಅಗತ್ಯಗಳನ್ನು ನಾವು ಪೂರೈಸಬಹುದು. ಈ ಎಲ್ಲದರ ಮಧ್ಯೆ, ಲಕ್ಷಾಂತರ ಆರೋಗ್ಯ ಮತ್ತು ಮುಂಚೂಣಿ ಕೆಲಸಗಾರರು ಶಾಶ್ವತವಾಗಿ ಕಳೆದುಹೋಗಿದ್ದಾರೆ.
ಆದರೂ ನಾನು ನಂಬಿಕೆ ಇಟ್ಟುಕೊಂಡಿದ್ದೇನೆ. ಆದಾಗ್ಯೂ, ಆ ನಂಬಿಕೆಯೇ ನಮ್ಮ ಮೇಲಿದೆ.
ಈ ಸಂಕಷ್ಟದ ಸಮಯವನ್ನು ದಾಟಿ ಬಂದಿರುವ ನಿಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸಲು ನಾನಿಲ್ಲಿ ಬಯಸುತ್ತೇನೆ. ಈ ಕಠಿಣ ಸಮಯದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುವ ನಿಮ್ಮ ದೃಢ ನಿಶ್ಚಯ ಮತ್ತು ನಮ್ಯತೆ ಮುಂದುವರಿದಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ನಾವು ಮಾಡಿದ ನಿರ್ಧಾರಗಳನ್ನು ಹೆಚ್ಚಿಸಲು ನೀವೆಲ್ಲರೂ ಮಾಡಿದ ತ್ಯಾಗಗಳಿಗೆ ನಾನು ನಿಮ್ಮೆಲ್ಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ವಿಶ್ವ ಆರೋಗ್ಯ ಸಂಘಟನೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷನಾಗಿದ್ದ ನನ್ನ ಮೇಲೆ ನೀವೆಲ್ಲಾ ಇಟ್ಟಿದ್ದ ನಂಬಿಕೆ ಮತ್ತು ಪ್ರೀತಿ ವಿಶ್ವಾಸಗಳಿಗಾಗಿ ನಾನು ಮತ್ತೊಮ್ಮೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಕಾರ್ಯಕಾರಿ ಮಂಡಳಿಯ ಅಧಿವೇಶನಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಎಲ್ಲಾ ಉಪಾಧ್ಯಕ್ಷರು, ಮಹಾನಿರ್ದೇಶಕ ಡಾ. ಟೆಡ್ರೊಸ್, ಎಲ್ಲಾ ಪ್ರಾದೇಶಿಕ ನಿರ್ದೇಶಕರು, ವಿಶೇಷವಾಗಿ ಆಗ್ನೇಯ ಏಷ್ಯಾ ವಲಯದ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್ ಅವರ ಬೆಂಬಲವನ್ನು ನಾನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ. ಹೊರಹೋಗುವ ಸದಸ್ಯರನ್ನು ಒಳಗೊಂಡಂತೆ ಮಂಡಳಿಯ ಎಲ್ಲಾ ಸದಸ್ಯರ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ಮತ್ತು ನಾವು ಸಾಧಿಸಿದ ಎಲ್ಲವನ್ನು ಸಕ್ರಿಯಗೊಳಿಸಿದ್ದಕ್ಕಾಗಿ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ.
ಧನ್ಯವಾದಗಳು ಮತ್ತು ನಮಸ್ತೆ.
ಡಬ್ಲ್ಯುಎಚ್ಒ ಕಾರ್ಯನಿರ್ವಾಹಕ ಮಂಡಳಿಯ ನಿರ್ಗಮಿತ ಅಧ್ಯಕ್ಷ ಡಾ. ಹರ್ಷವರ್ಧನ್ ಅವರು ಜಾಗತಿಕ ಆರೋಗ್ಯಕ್ಕೆ ನೀಡಿರುವ ಪ್ರಮುಖ ನಾಯಕತ್ವವನ್ನು ಡಬ್ಲ್ಯುಎಚ್ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಭಿನಂದಿಸಿದರು. ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ತೋರಿರುವ ನಾಯಕತ್ವ ಮೆಚ್ಚಿ, ಟೆಡ್ರೊಸ್ ಅವರು ಡಾ. ಹರ್ಷವರ್ಧನ್ ಅವರಿಗೆ ಗವೆಲ್ ( ಸಣ್ಣ ಸುತ್ತಿಗೆ) ಅನ್ನು ಉಡುಗೊರೆಯಾಗಿ ನೀಡಿದರು. ಹರ್ಷವರ್ಧನ್ ಅವರು ಅಧ್ಯಕ್ಷರಾಗಿ ಅಧಿಕೃತ ಕೊಡುಗೆಗಳನ್ನು ನೀಡುವ ಜತೆಗೆ, ಹಲವಾರು ಕಾರ್ಯಕ್ರಮಗಳಲ್ಲಿ ವೈಯಕ್ತಿಕವಾಗಿ ಪಾಲ್ಗೊಳ್ಳುತ್ತಿದ್ದರು ಎಂದು ಟೆಡ್ರೊಸ್ ಶ್ಲಾಘಿಸಿದರು. ವಿಶ್ವ ಆರೋಗ್ಯ ಸಂಘಟನೆಯ ವಿಶೇಷ ಮಹಾನಿರ್ದೇಶಕರ ಪ್ರಶಸ್ತಿ ಸ್ವೀಕರಿಸಿದ್ದಕ್ಕಾಗಿ ಟೆಡ್ರೊಸ್ ಅವರು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರನ್ನು ಅಭಿನಂದಿಸಿದರು. ತಂಬಾಕು ನಿಯಂತ್ರಣಕ್ಕೆ ಹರ್ಷವರ್ಧನ್ ನೀಡಿರುವ ಕೊಡುಗೆಗಳನ್ನು ಶ್ಲಾಘಿಸಿದ ಟೆಡ್ರೊಸ್, ಹರ್ಷವರ್ಧನ್ ಅವರು ತಂಬಾಕು ನಿಯಂತ್ರಣದ ನೈಜ ಚಾಂಪಿಯನ್ ಆಗಿದ್ದಾರೆ. ಅವರು ತಂಬಾಕು ಉಗಿಯುವುದನ್ನು ನಿಲ್ಲಿಸುವುದರಿಂದ ಹಿಡಿದು ರಾಷ್ಟ್ರೀಯ ತಂಬಾಕು ವರ್ಜನೆ ದಿನ ಆರಂಭ ಹಾಗೂ ಇ-ಸಿಗರೇಟ್|ಗಳಿಗೆ ನಿರ್ಬಂಧ ಹಾಕಲು ಕೈಗೊಂಡಿರುವ ನಿಯಂತ್ರಣ ಕ್ರಮಗಳ ಜಾರಿಯ ತನಕ ತಂಬಾಕು ನಿಯಂತ್ರಣದ ಜಾಗತಿಕ ಪ್ರಯತ್ನಗಳನ್ನು ಮುನ್ನಡೆಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಕೀನ್ಯಾದ ಡಾ. ಪ್ಯಾಟ್ರಿಕ್ ಅಮೋಥ್ ಅವರು ವಿಶ್ವ ಆರೋಗ್ಯ ಸಂಘಟನೆಯ ಕಾರ್ಯಕಾರಿ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಿಶ್ವ ಆರೋಗ್ಯ ಸಂಘಟನೆಯ 149ನೇ ಕಾರ್ಯಕಾರಿ ಮಂಡಳಿಯ ವರ್ಚುವಲ್ ಸಭೆಯಲ್ಲಿ ಗೌರವಾನ್ವಿತ ಸದಸ್ಯರು, ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು, ಡಬ್ಲ್ಯುಎಚ್ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧನೊಮ್ ಘೇಬ್ರಿಯೆಸಸ್ ಮತ್ತು ಎಲ್ಲಾ ಪ್ರಾದೇಶಿಕ ನಿರ್ದೇಶಕರು ಭಾಗವಹಿಸಿದ್ದರು.
***
(Release ID: 1723922)
Visitor Counter : 482