ಹಣಕಾಸು ಸಚಿವಾಲಯ
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಡಿ ನಿರ್ವಹಣೆಯಲ್ಲಿರುವ ಸ್ವತ್ತಿನ ಮೌಲ್ಯ 6 ಟ್ರಿಲಿಯನ್ (6 ಲಕ್ಷ ಕೋಟಿ ರೂ.) ರೂಪಾಯಿ ಮಟ್ಟ ದಾಟಿದೆ
ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಯ ಚಂದಾದಾರರ ಕೊಡುಗೆಯಿಂದ ಪಿಂಚಣಿ ಸ್ವತ್ತು 6 ಟ್ರಿಲಿಯನ್ ರೂಪಾಯಿಗೆ ಏರಿಕೆ
8,791 ಕಾರ್ಪೊರೇಟ್ ಸಂಸ್ಥೆಗಳ ನೋಂದಣಿಯಿಂದ ರಾಷ್ಟ್ರೀಯ ಪಿಂಚಣಿ ಯೋಜನೆಗೆ 2021 ಮೇ 21ರ ವರೆಗೆ 11.53 ಲಕ್ಷ ಚಂದಾದಾರರ ಸೇರ್ಪಡೆ
ಅಟಲ್ ಪಿಂಚಣಿ ಯೋಜನೆಗೆ ಒಟ್ಟು 2.82 ಕೋಟಿ ಚಂದಾದಾರರ ನೋಂದಣಿ
Posted On:
26 MAY 2021 3:55PM by PIB Bengaluru
ನಿರ್ವಹಣೆಯಲ್ಲಿರುವ ಒಟ್ಟು ಸ್ವತ್ತಿನ ಮೌಲ್ಯ 6 ಲಕ್ಷ ಕೋಟಿ ರೂಪಾಯಿ ಅಂದರೆ 6 ಟ್ರಿಲಿಯನ್ ರೂಪಾಯಿ ಮಟ್ಟ ದಾಟಿ ಏರಿಕೆ ಕಂಡು ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ – ಪಿಎಫ್|ಆರ್|ಡಿಎ ಇಂದು ಪ್ರಕಟಿಸಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್|ಪಿಎಸ್) ಮತ್ತು ಅಟಲ್ ಪಿಂಚಣಿ ಯೋಜನೆ(ಎಪಿವೈ) ಆರಂಭವಾದ 13 ವರ್ಷಗಳ ನಂತರ ಈ ಬೃಹತ್ ಮೊತ್ತದ ಸ್ವತ್ತು ಪ್ರಾಧಿಕಾರದ ನಿರ್ವಹಣೆಯಲ್ಲಿದೆ. ಕೇವಲ 6 ತಿಂಗಳ ಅವಧಿಯಲ್ಲಿ 1 ಲಕ್ಷ ಕೋಟಿ ರೂಪಾಯಿ ಸ್ವತ್ತು ಕ್ರೋಡೀಕರಣವಾಗಿದೆ ಎಂದು ಅದು ತಿಳಿಸಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆಯ ಚಂದಾದಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಲೇ ಇದ್ದು, ಗಣನೀಯ ಪ್ರಗತಿ ಕಂಡುಬಂದಿದೆ. ಈ ಯೋಜನೆಗೆ 74.10 ಲಕ್ಷ ಸರಕಾರಿ ನೌಕರರು ನೋಂದಣಿ ಆಗಿದ್ದಾರೆ. ಸರಕಾರೇತರ ವಲಯದಿಂದ 28.37 ನೌಕರರು ಈ ಯೋಜನೆಗೆ ಸೇರ್ಪಡೆ ಆಗಿದ್ದಾರೆ. ಇದರೊಂದಿಗೆ ಪಿಎಫ್|ಆರ್|ಡಿಎಗೆ ನೋಂದಣಿ ಆಗಿರುವ ಒಟ್ಟು ಚಂದಾದಾರರ ನೆಲೆ ಅಥವಾ ಸಂಖ್ಯೆ ಇದೀಗ 4.28 ಕೋಟಿಗೆ ಹೆಚ್ಚಳವಾಗಿದೆ.
ಪಿಎಫ್|ಆರ್|ಡಿಎ ಅಧ್ಯಕ್ಷ ಶ್ರೀ ಸುಪ್ರತಿಮ್ ಬಂಡೋಪಾಧ್ಯಾಯ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ‘ನಿರ್ವಹಣೆಯಲ್ಲಿರುವ ಸ್ವತ್ತಿನ ಮೌಲ್ಯ 6 ಲಕ್ಷ ಕೋಟಿ ರೂ. ಗಡಿ ದಾಟಿ ಹೊಸ ಮೈಲಿಗಲ್ಲು ಸ್ಥಾಪಿಸಿರುವುದು ನಮಗೆ ಅತೀವ ಸಂಸತ ತಂದಿದೆ. ಕೇವಲ 7 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಅಂದರೆ 2020 ಅಕ್ಟೋಬರ್|ನಲ್ಲಿ ನಮ್ಮ ಸ್ವತ್ತಿನ ಮೌಲ್ಯ 5 ಲಕ್ಷ ಕೋಟಿ ರೂ. ಇತ್ತು. ಪಿಎಫ್|ಆರ್|ಡಿಎ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ನಂಬಿಕೆಯ ಚಂದಾದಾರರು ಇದ್ದಾರೆ ಎಂಬುದನ್ನು ಈ ಸಾಧನೆ ಬಿಂಬಿಸುತ್ತಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಕಾಲಘಟ್ಟದಲ್ಲಿ ಜನರು ತಮ್ಮ ಆರ್ಥಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿವೃತ್ತಿ ಯೋಜನೆಗೆ ಆದ್ಯತೆ ನೀಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ’ ಎಂದು ತಿಳಿಸಿದ್ದಾರೆ.
2021 ಮೇ 21ರ ವರೆಗೆ ಅನ್ವಯವಾಗುವಂತೆ, ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗೆ ಒಟ್ಟು 4.28 ಕೋಟಿ ಚಂದಾದಾರರು ನೋಂದಣಿ ಆಗಿದ್ದಾರೆ. ಇದರಿಂದ ಪ್ರಾಧಿಕಾರದ ನಿರ್ವಹಣೆಯಲ್ಲಿರುವ ಸ್ವತ್ತಿನ ಮೌಲ್ಯ 6 ಟ್ರಿಲಿಯನ್ ರೂಪಾಯಿ ಮಟ್ಟ ದಾಟಿದೆ.
ಪಿಎಫ್|ಆರ್|ಡಿಎ ಕುರಿತು
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಶಾಸನಬದ್ಧ ಸಂಸ್ಥೆಯಾಗಿದೆ. ಸಂಸತ್ತಿನಲ್ಲಿ ಕಾಯಿದೆ ರೂಪಿಸಿ, ಈ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಪಿಂಚಣಿ ನಿಧಿ, ಅಟಲ್ ಪಿಂಚಣಮಿ ನಿಧಿ ಸೇರಿದಂತೆ ಈ ಕಾಯಿದೆಗೆ ಅನ್ವಯವಾಗುವ ನಾನಾ ಪಿಂಚಣಿ ಯೋಜನೆಗಳ ನಿಯಂತ್ರಣ, ಉತ್ತೇಜನ ಮತ್ತು ಕ್ರಮಬದ್ಧ ಬೆಳವಣಿಗೆಯನ್ನು ಖಾತ್ರಿಪಡಿಸುವುದು ಪ್ರಾಧಿಕಾರದ ಗುರುತರ ಜವಾಬ್ದಾರಿಯಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಆರಂಭದಲ್ಲಿ ಕೇಂದ್ರ ಸರಕಾರಿ ನೌಕರರಿಗೆಂದೇ 2004 ಜನವರಿ 1ರಿಂದ ಅನ್ವಯವಾಗುವಂತೆ ಸ್ಥಾಪಿಸಲಾಯಿತು. ಆದರೆ ಕಾಲಾನುಕ್ರಮದಲ್ಲಿ ಈ ಯೋಜನೆಯನ್ನು ಬಹುತೇಕ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಹ ತನ್ನ ನೌಕರ ವರ್ಗಕ್ಕೆ ಅಳವಡಿಸಿಕೊಂಡವು. ಈ ಯೋಜನೆಯನ್ನು ತರುವಾಯ ಎಲ್ಲಾ ಭಾರತೀಯ ನಾಗರಿಕರಿಗೆ (ನಿವಾಸಿಗಳು, ಅನಿವಾಸಿ ಭಾರತೀಯರು ಮತ್ತು ಸಾಗರೋತ್ತರ ಭಾರತೀಯರು) ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಸ್ವಯಂಪ್ರೇರಿತ ಮನವಿಗಳ ಆಧಾರದಲ್ಲಿ ವಿಸ್ತರಿಸಲಾಗಿದೆ.
***
(Release ID: 1721955)
Visitor Counter : 396