ಗೃಹ ವ್ಯವಹಾರಗಳ ಸಚಿವಾಲಯ

ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರ ಅಧ್ಯಕ್ಷತೆಯಲ್ಲಿ ‘ಯಾಸ್’ ಚಂಡಮಾರುತದ ಪೂರ್ವಸಿದ್ಧತೆಯ ಪರಿಶೀಲನೆಗೆ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್‌ಸಿಎಂಸಿ) ಸಭೆ

Posted On: 22 MAY 2021 6:33PM by PIB Bengaluru

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುತ್ತಿರುವ “ಯಾಸ್” ಚಂಡಮಾರುತ ಎದುರಿಸುವ ಸಿದ್ಧತೆ ಕುರಿತು ಕೇಂದ್ರ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬ ನೇತೃತ್ವದಲ್ಲಿ ಕೇಂದ್ರ/ ರಾಜ್ಯ ಸರ್ಕಾರಗಳ ಸಚಿವಾಲಯಗಳು/ ಸಂಸ್ಥೆಗಳೊಂದಿಗೆ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ [ಎನ್.ಸಿ.ಎಂ.ಡಿ] ಯ ಸಭೆ ನಡೆಯಿತು.

ಹವಾಮಾನ ಇಲಾಖೆಯ ಮಹಾ ನಿರ್ದೇಶಕರು [ಐಎಂಡಿ] ಚಂಡಮಾರುತದ ಇತ್ತೀಚಿನ ಸ್ಥಿತಿ ಗತಿ ಕುರಿತು ಸಮಿತಿಗೆ ಮಾಹಿತಿ ನೀಡಿದರು. ಮೇ 26 ರ ಸಂಜೆ ವೇಳೆಗೆ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾಗೆ ಹೊಂದಿಕೊಂಡಿರುವ ಪ್ರದೇಶಗಳಿಗೆ ತಲುಪಲಿದೆ. ಗಾಳಿಯ ವೇಗ 155 ಕಿಲೋಮೀಟರ್ ನಿಂದ 165 ಕಿಲೋಮೀಟರ್ ಇರಲಿದ್ದು, ಜತೆಗೆ ಭಾರೀ ಮಳೆ ಮತ್ತು ಈ ರಾಜ್ಯಗಳ ಕರಾವಳಿ ಭಾಗದ ಸಮುದ್ರದಲ್ಲಿ ಚಂಡಮಾರುತ ಉಲ್ಬಣಗೊಳ್ಳಲಿದೆ. ಎಂದು ವಿವರಿಸಿದರು.

ಚಂಡ ಮಾರುತ ಎದುರಿಸಲು ಸಮಿತಿ ಕೈಗೊಂಡಿರುವ ಸನ್ನದ್ಧತೆಯ ಕ್ರಮಗಳಿಗೆ ಈ ರಾಜ್ಯಗಳ ಮುಖ್ಯಕಾರ್ಯದರ್ಶಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಳ ಬಾಗಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವ, ಅಗತ್ಯ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಸಂಗ್ರಹಣೆ, ಕುಡಿಯುವ ನೀರು ಮತ್ತು ಇತರೆ ಅಗತ್ಯ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಮತ್ತು ವಿದ್ಯುತ್, ದೂರ ಸಂಪರ್ಕ ಮತ್ತಿತರೆ ಅಗತ್ಯ ಸೇವೆಗಳನ್ನು ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

65 ಎನ್.ಡಿ.ಆರ್.ಎಫ್ ತಂಡಗಳನ್ನು ನಿಯೋಜನೆಗೊಳಿಸಲು ವ್ಯವಸ್ಥೆ ಮಾಡಿದ್ದು, ಇನ್ನೂ 20 ತಂಡಗಳಿಗೆ ಸಿದ್ಧವಾಗಿರುವಂತೆ ಸೂಚಿಸಲಾಗಿದೆ. ಸೇನೆ, ನೌಕೆ ಮತ್ತು ಕರಾವಳಿ ಕಾವಲು ಪಡೆಯ ರಕ್ಷಣೆ ಮತ್ತು ಪರಿಹಾರ ತಂಡಗಳು ಹಡಗು ಮತ್ತು ವಿಮಾನಗಳೊಂದಿಗೆ ಸಿದ್ಧವಾಗಿದ್ದು, ಇವುಗಳನ್ನು ನಿಯೋಜಿಸಲಾಗುತ್ತಿದೆ.

ದೇಶಾದ್ಯಂತ ಕೋವಿಡ್ ಸೋಂಕಿತರಿಗೆ ಆಮ್ಲಜನಕ ಪೂರೈಕೆ ಮತ್ತು ಉತ್ಪಾದನೆಯನ್ನು ಖಚಿತಪಡಿಸಿಕೊಳ‍್ಳುವ, ಕೋವಿಡ್ ಆರೈಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳು ತಡೆರಹಿತವಾಗಿ ಕಾರ್ಯನಿರ್ವಹಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಸ್ಥೆಗಳ ಸನ್ನದ್ಧತೆಯನ್ನು ಪರಿಶೀಲಿಸಲಾಗಿದೆ. ಎಲ್ಲಾ ಕ್ರಮಗಳನ್ನು ಸಕಾಲದಲ್ಲಿ ಕೈಗೊಂಡು ಜೀವಗಳನ್ನು ರಕ್ಷಿಸಬೇಕು ಮತ್ತು ಆಸ್ತಿ ಹಾನಿಯನ್ನು ಕಡಿಮೆಗೊಳಿಸಬೇಕು. ಚಂಡಮಾರುತದಿಂದ ಪ್ರಭಾವಿತವಾಗಿರುವ ಪ್ರದೇಶಗಳಿಂದ ಆದಷ್ಟು ಬೇಗ ಜನತೆಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಜತೆಗೆ ಎಲ್ಲಾ ದೋಣಿಗಳು, ಹಡಗುಗಳನ್ನು ತೀರಕ್ಕೆ ಹಿಂತಿರುಗುವುದನ್ನು ಖಾತ್ರಿಪಡಿಸಿಕೊಂಡರೆ ಪ್ರಾಣಹಾನಿಯನ್ನು ಶೂನ್ಯಕ್ಕೆ ಇಳಿಸಲು ಸಾಧ್ಯವಾಗುತ್ತದೆ. 

ಕೋವಿಡ್ ಸೋಂಕಿತರ ಸುರಕ್ಷತೆಯನ್ನು ಖಾತರಿಪಡಿಸಬೇಕು ಮತ್ತು ಕೋವಿಡ್ ಆಸ್ಪತ್ರೆಗಳು ಯಾವುದೇ ಅಡೆತಡೆ ಇಲ್ಲದೇ ಕಾರ್ಯನಿರ್ವಹಿಸಬೇಕು. ಚಂಡಮಾರುತದಿಂದ ಬಾಧಿತವಾಗಿರುವ ಪ್ರದೇಶಗಳಿಂದ ದೇಶದ ಇತರೆ ಭಾಗಗಳಿಗೆ ಆಮ್ಲಜನಕ ಪೂರೈಕೆಗೆ ಅಡಚಣೆಯಾಗಬಾರದು ಮತ್ತು ಆಮ್ಲಜನಕ ಉತ್ಪಾದನೆ ಮತ್ತು ಸಾಗಾಟಕ್ಕೆ ತೊಂದರೆಯಾಗಬಾರದು ಎಂದು ಶ‍್ರೀ ಗೌಬ ಒತ್ತಿ ಹೇಳಿದರು.

ವಿದ್ಯುತ್, ದೂರ ಸಂಪರ್ಕ ಮತ್ತು ಇತರೆ ಪ್ರಮುಖ ಸೇವೆಗಳನ್ನು ಪುನರ್ ಸ್ಥಾಪಿಸಲು ಬೇಕಾದ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸಂಬಂಧಪಟ್ಟ ಸಂಸ್ಥೆಗಳು ನಿಕಟ ಮತ್ತು ಸಮನ್ವಯದಿಂದ ಕೆಲಸ ಮಾಡಬೇಕು. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೇಳುವ ಎಲ್ಲಾ ಮನವಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಪಾಂಡಿಚೆರಿಯ ಮುಖ್ಯ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು. ಕೇಂದ್ರ ಗೃಹ, ಇಂಧನ, ಬಂದರು,  ದೂರಸಂಪರ್ಕ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ನಾಗರಿಕ ವಿಮಾನಯಾನ, ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಗಳು, ರೈಲ್ವೆ ಮಂಡಳಿ ಅಧ್ಯಕ್ಷರು, ಎನ್.ಡಿ.ಎಂ.ಎ ಸದಸ್ಯ ಕಾರ್ಯದರ್ಶಿ, ಕರಾವಳಿ ಕಾವಲು ಪಡೆಯ ಐಡಿಎಸ್ ಮತ್ತು ಡಿಜಿಗಳು, ಎನ್.ಡಿ.ಆರ್.ಎಫ್ ಮತ್ತು ಐಎಂಡಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

***



(Release ID: 1720988) Visitor Counter : 265