ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಅತ್ಯವಶ್ಯಕ ವಸ್ತುಗಳ ಬೆಲೆ ಮೇಲೆ ರಾಜ್ಯಗಳು ನಿಗಾ ಇಡಬೇಕು: ಶ್ರೀ ಪಿಯೂಷ್ ಗೋಯಲ್


ಕೋವಿಡ್ ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಯಾವ ಗಿರಣಿ ಮಾಲೀಕರು, ಸಗಟು ಅಥವಾ ಚಿಲ್ಲರೆ ಮಾರಾಟಗಾರರು ಅಕ್ರಮ ದಾಸ್ತಾನು ಮಾಡಿಕೊಂಡರೆ ಅಂತಹವರ ವಿರುದ್ಧ ರಾಜ್ಯಗಳು  ಅತ್ಯವಶ್ಯಕ ವಸ್ತುಗಳ ಕಾಯಿದೆ ಜಾರಿಗೊಳಿಸಬೇಕು: ಶ್ರೀ ಪಿಯೂಷ್ ಗೋಯಲ್

ರಾಜ್ಯಗಳಲ್ಲಿ ಅತ್ಯವಶ್ಯಕ ವಸ್ತುಗಳ ಬೆಲೆ ಸ್ಥಿರ ಮತ್ತು ನ್ಯಾಯಯುತವಾಗಿ ಕಾಯ್ದುಕೊಳ್ಳಬೇಕೆಂಬ ಬಗ್ಗೆ ಪರಾಮರ್ಶೆ ನಡೆಸಿದ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪಡಿತರ ಸಚಿವರು

Posted On: 19 MAY 2021 6:26PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪಡಿತರ ಹಾಗೂ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಇಂದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯವಶ್ಯಕ ವಸ್ತುಗಳ ಬೆಲೆ ಮೇಲೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಗತ್ಯ ವಸ್ತುಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರುವುದನ್ನು ಖಾತ್ರಿಪಡಿಸಬೇಕು, ಮತ್ತು ಬೆಲೆಗಳು ಅನಿರೀಕ್ಷಿತ  ಏರಿಕೆಯಾಗದಂತೆ ಮತ್ತು ಬೆಲೆಗಳು ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಚಿವರು, ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಯಾವುದೇ ಗಿರಣಿ ಮಾಲಿಕರು ಸಗಟು ಅಥವಾ ಚಿಲ್ಲರೆ ಮಾರಾಟಗಾರರು ಅತ್ಯವಶ್ಯಕ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದರೆ ಅಂತಹವರ ವಿರುದ್ಧ ರಾಜ್ಯಗಳು ಅತ್ಯವಶ್ಯಕ ವಸ್ತುಗಳ ಕಾಯ್ದೆಯ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸಚಿವರು ಸೂಚಿಸಿದರು.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯವಶ್ಯಕ ವಸ್ತುಗಳ ಬೆಲೆ ಸ್ಥಿತಿಗತಿ ಕುರಿತು ಕೇಂದ್ರ ಸಚಿವರು ಪರಾಮರ್ಶೆ ನಡೆಸಿದರು.

ಗ್ರಾಹಕ ವ್ಯವಹಾರಗಳ ಸಚಿವಾಲಯ 34 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 157 ಕೇಂದ್ರಗಳಿಂದ ಬೆಲೆಗಳ ಸ್ಥಿತಿಗತಿ ಕುರಿತು ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಎಲ್ಲಾ 22 ಅತ್ಯವಶ್ಯಕ ವಸ್ತುಗಳು ವಿಶೇಷವಾಗಿ ದ್ವಿದಳ ಧಾನ್ಯಗಳು, ಎಣ್ಣೆ ಬೀಜಗಳು, ತರಕಾರಿ ಮತ್ತು ಹಾಲು ಇವುಗಳ ಬೆಲೆ ಬಗ್ಗೆ ನಿಗಾವಹಿಸುತ್ತವೆ ಎಂದು ನಿರೀಕ್ಷಿಸಲಾಗುತ್ತಿದೆ ಹಾಗೂ ಯಾವುದಾದರೂ ವಸ್ತುಗಳ ಬೆಲೆ ಅನಿರೀಕ್ಷಿತವಾಗಿ ಏರಿಕೆಯಾಗುವ ಸೂಚನೆಗಳು ಕಂಡುಬಂದರೆ ಅಂತಹ ಸಮಯದಲ್ಲಿ ಮಧ್ಯಪ್ರವೇಶ ಮಾಡಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಆಹಾರ ಉತ್ಪನ್ನಗಳು ಲಭ್ಯವಾಗುವುದನ್ನು ಖಾತ್ರಿಪಡಿಸಬೇಕಾಗಿದೆ.

ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಕೂಡ ಮೊನ್ನೆ ಎಲ್ಲ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ, ಅತ್ಯವಶ್ಯಕ ವಸ್ತುಗಳ ಬೆಲೆ ನ್ಯಾಯಯುತ ಮಟ್ಟದಲ್ಲಿ ಕಾಯ್ದುಕೊಳ್ಳುವ ಅಗತ್ಯತೆಯ ಬಗ್ಗೆ ಸೂಚಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಅಲ್ಲದೆ ಡಿಒಸಿಎ ಎಲ್ಲಾ ಗಿರಿಣಿ ಮಾಲಿಕರು, ವರ್ತಕರು, ಆಮದುದಾರರು ಇತ್ಯಾದಿ ಸೇರಿ ದಾಸ್ತಾನುಗಾರರಿಗೆ ತಮ್ಮಲ್ಲಿರುವ ದಾಸ್ತಾನುಗಳನ್ನು ಘೋಷಿಸುವಂತೆ ಹಾಗೂ ಬಗ್ಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪರಿಶೀಲಿಸುವಂತೆ ಸೂಚಿಸಲಾಗಿದೆ.

ಇತ್ತೀಚೆಗೆ ವಾಣಿಜ್ಯ ಇಲಾಖೆ ದ್ವಿದಳ ಧಾನ್ಯಗಳಿಗೆ ಸಂಬಂಧಿಸಿದಂತೆ ತನ್ನ ಆಮದು ನೀತಿಯನ್ನು ಬದಲಾಯಿಸಿದ್ದು, ಅವುಗಳ ಪೂರೈಕೆ ಸುಗಮಗೊಳಿಸಲಾಗಿದೆ. ಯಾವುದೇ ಸಮಯದಲ್ಲಿ ಯಾವುದೇ ಅತ್ಯವಶ್ಯಕ ವಸ್ತುಗಳ ಕೊರತೆಯಾಗದಂತೆ ಅಗತ್ಯ ಮುಂಗಡ ಯೋಜನೆಗಳನ್ನು ರೂಪಿಸಬೇಕು ಎಂದು ಸಚಿವರು ಹೇಳಿದರು.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರತಿ ವಾರ ದ್ವಿದಳ ಧಾನ್ಯಗಳ ಬೆಲೆಯ ಬಗ್ಗೆ ನಿಗಾವಹಿಸುವಂತೆ ಮನವಿ ಮಾಡಲಾಗಿದೆ. ಗಿರಣಿ ಮಾಲಿಕರು, ಸಗಟು ಮಾರಾಟಗಾರರು, ಆಮದುದಾರರ ವಿವರಗಳನ್ನು ಮತ್ತು ಅವರುಗಳು ಹೊಂದಿರುವ ಧಾನ್ಯಗಳ ದಾಸ್ತಾನು ವಿವರಗಳನ್ನು ನೀಡಲು ಆನ್ ಲೈನ್ ದತ್ತಾಂಶ ನಮೂನೆಯನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ. ದ್ವಿದಳ ಧಾನ್ಯಗಳು ಬೆಳೆಯುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸುಸ್ಥಿರ ರೀತಿಯಲ್ಲಿ ಖರೀದಿಗೆ ಸಹಕರಿಸುವಂತೆ ಮತ್ತು ದೀರ್ಘಾವಧಿಯ ಆಧಾರದಲ್ಲಿ ದ್ವಿದಳ ಧಾನ್ಯಗಳ ಬೆಳೆಯನ್ನು ಹೆಚ್ಚಾಗಿ ಬೆಳೆಯುವಂತೆ ರೈತರಿಗೆ ಪ್ರೋತ್ಸಾಹ  ನೀಡುವಂತೆ ಮನವಿ ಮಾಡಿರುವುದು ಇಲ್ಲಿ ಉಲ್ಲೇಖಾರ್ಹ.

***


(Release ID: 1720113) Visitor Counter : 167