ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಕೋವಿಡ್-19 ಸಾಂಕ್ರಾಮಿಕದಿಂದ ಬಾಧಿತವಾದ ಮಕ್ಕಳಿಗೆ ಸಂವೇದನಾ ಮೂಲಕ ಟೆಲಿ ಮಾರ್ಗದರ್ಶನ

Posted On: 17 MAY 2021 7:31PM by PIB Bengaluru

          ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ತೊಂದರೆಗೀಡಾದ ಮಕ್ಕಳಿಗೆ ಭಾವನಾತ್ಮಕ ಬೆಂಬಲ ನೀಡಲು ಮತ್ತು ಮಾನಸಿಕ ಪ್ರಥಮ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್ ಸಿಪಿಸಿಆರ್) ಸಂವೇದನಾ (ಭಾವನಾತ್ಮಕ ಅಭಿವೃದ್ಧಿ ಮತ್ತು ಅಗತ್ಯ ಸ್ವೀಕಾರದ ಮೂಲಕ ಮಾನಸಿಕ ಆರೋಗ್ಯ ದುರ್ಬಲವಾಗದಂತೆ ಸೂಕ್ಷ್ಮವಾಗಿ ಕ್ರಿಯಾಶೀಲಗೊಳಿಸುವುದು) ಉಚಿತ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಬಾಧಿತ ಮಕ್ಕಳಿಗೆ ಮಾನಸಿಕ, ಸಾಮಾಜಿಕ ಬೆಂಬಲ ಒದಗಿಸುವುದು ಇದರ ಉದ್ದೇಶ. ಕೋವಿಡ್ -19ಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ಮಾನಸಿಕ ವಿಷಯಗಳ ಕುರಿತು ನಾನಾ ಟೆಲಿ ಮಾರ್ಗದರ್ಶನ ಕಾರ್ಯತಂತ್ರಗಳನ್ನು ಬಳಸಿ ನಿಮ್ಹಾನ್ಸ್ ನ ಮಕ್ಕಳ ಮತ್ತು ಹದಿಹರೆಯದ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಶೇಖರ್ ಶೇಷಾದ್ರಿ ಮತ್ತು ಅವರ ತಂಡದ ಮಾರ್ಗದರ್ಶನದಲ್ಲಿ ಅರ್ಹ ತಜ್ಞರು, ಸಲಹೆಗಾರರು/ ಮನಃಶಾಸ್ತ್ರಜ್ಞರ ಜಾಲದ ಮೂಲಕ ಟೆಲಿ ಮಾರ್ಗದರ್ಶನ ನೀಡಲಾಗುವುದು.

          ಸಂವೇದನಾ ಟೆಲಿ ಮಾರ್ಗದರ್ಶನ ಸೇವೆಯನ್ನು ಸಾಂಕ್ರಾಮಿಕದ ಸಮಯದಲ್ಲಿ ಮಕ್ಕಳ ಒತ್ತಡ, ಆತಂಕ, ಭಯ ಹಾಗೂ ಇನ್ನಿತರ ಸಮಸ್ಯೆಗಳನ್ನು ಎದುರಿಸಿ ಮಾನಸಿಕ ಬೆಂಬಲ ನೀಡಲಾಗುವುದು. ಈ ಸೇವೆ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಯವರೆಗೆ ಉಚಿತ ಸಹಾಯವಾಣಿ ಸಂಖ್ಯೆ 1800-121-2830 ನಲ್ಲಿ ಲಭ್ಯವಿದೆ. ಈ ಸೇವೆ ವಿಶೇಷವಾಗಿ ಮಕ್ಕಳಿಗೆ ಯಾರು ಮಾತನಾಡಲು ಬಯಸುತ್ತಾರೋ ಮತ್ತು ಯಾರಿಗೆ ಮಾರ್ಗದರ್ಶನ ಅಗತ್ಯವಿದೆಯೋ ಅಂತವರಿಗಾಗಿ ರೂಪಿಸಲಾಗಿದೆ. ಒಂದು ವೇಳೆ ಮಕ್ಕಳ ಪೋಷಕರು/ಪಾಲಕರು ಸಂವೇದನಾ ಸಂಖ್ಯೆ 1800-121-2830ಗೆ ಕರೆ ಮಾಡಿದರೆ ಅವರು ಸುರಕ್ಷಿತ ವಾತಾವರಣದಲ್ಲಿ ವೃತ್ತಿಪರ ಮಾರ್ಗದರ್ಶಕರೊಂದಿಗೆ ಮಾತನಾಡಬಹುದು. ಮಕ್ಕಳಿಗೆ ಮೂರು ವರ್ಗದಡಿ ಟೆಲಿ ಮಾರ್ಗದರ್ಶನವನ್ನು ನೀಡಲಾಗುವುದು.

  1. ಕ್ವಾರಂಟೈನ್/ಐಸೋಲೇಷನ್/ಕೋವಿಡ್ ಆರೈಕೆ ಕೇಂದ್ರದಲ್ಲಿರುವ ಮಕ್ಕಳು.
  2. ಪಾಲಕರು ಅಥವಾ ಕುಟುಂಬದ ಸದಸ್ಯರು ಮತ್ತು ಬಂಧುಗಳು ಕೋವಿಡ್ ಪಾಸಿಟಿವ್ ಹೊಂದಿದ್ದರೆ ಅಂತಹವರ ಮಕ್ಕಳು.
  3. ಕೋವಿಡ್-19 ಸಾಂಕ್ರಾಮಿಕದಿಂದಾಗಿ ತಂದೆ-ತಾಯಿಯನ್ನು ಕಳೆದುಕೊಂಡಿರುವ ಮಕ್ಕಳು.

          ಈ ಉಚಿತ ಟೆಲಿ ಕೌನ್ಸಲಿಂಗ್ ತಮಿಳು, ತೆಲುಗು, ಕನ್ನಡ, ಒರಿಯಾ, ಮರಾಠಿ, ಗುಜರಾತಿ, ಬೆಂಗಾಲಿ ಇತ್ಯಾದಿ ನಾನಾ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದ್ದು, ದೇಶಾದ್ಯಂತ ಎಲ್ಲಾ ಮಕ್ಕಳಿಗೂ ಸೇವೆ ಒದಗಿಸಲಾಗುವುದು. ಈ ಸೇವೆಯನ್ನು ಸೆಪ್ಟೆಂಬರ್ 2020ರಲ್ಲಿ ಆರಂಭಿಸಲಾಗಿತ್ತು ಮತ್ತು ಕೋವಿಡ್-19 ಸಾಂಕ್ರಾಮಿಕದ ಸಂಕಷ್ಟದ ಸಮಯದಲ್ಲಿ ಮಕ್ಕಳ ನೆರವಿಗಾಗಿ ಮುಂದುವರಿಸಲಾಗಿದೆ.

          ಎನ್ ಸಿಪಿಸಿಆರ್ ಸಾಂವಿಧಾನಿಕ ಸಂಸ್ಥೆಯಾಗಿದ್ದು ಇದು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತದೆ.

 

                                                                                  ***(Release ID: 1719457) Visitor Counter : 162