ಕೃಷಿ ಸಚಿವಾಲಯ

ಪ್ರಧಾನ ಮಂತ್ರಿ-ಕಿಸಾನ್ ಅಡಿಯಲ್ಲಿ ಪ್ರಧಾನ ಮಂತ್ರಿ ಅವರಿಂದ 8ನೇ ಕಂತಿನ ಹಣಕಾಸು ಪ್ರಯೋಜನಗಳ ಬಿಡುಗಡೆ


ಇದೇ ಮೊದಲ ಬಾರಿಗೆ, ಪಶ್ಚಿಮ ಬಂಗಾಳದ ರೈತರಿಗೂ ಈ ಯೋಜನೆಯಿಂದ ಲಾಭ

ಈ ವರ್ಷ ಎಂ.ಎಸ್.ಪಿ.ಯಲ್ಲಿ ಗೋಧಿ ಖರೀದಿಯಲ್ಲಿ ಹೊಸ ದಾಖಲೆ

ಸರಕಾರವು ಕೋವಿಡ್ -19 ರ ವಿರುದ್ಧ ಎಲ್ಲಾ ಇಚ್ಛಾಶಕ್ತಿಯನ್ನು ಕ್ರೋಡೀಕರಿಸಿಕೊಂಡು ಹೋರಾಡುತ್ತಿದೆ

ಗ್ರಾಮಸ್ಥರು, ಬಡವರು ಮತ್ತು ರೈತರಿಗೆ ಆದ್ಯತೆ ನೀಡಿದುದಕ್ಕಾಗಿ ಪ್ರಧಾನ ಮಂತ್ರಿ ಅವರಿಗೆ ಕೇಂದ್ರ ಕೃಷಿ ಸಚಿವರ ಕೃತಜ್ಞತೆ

Posted On: 14 MAY 2021 4:13PM by PIB Bengaluru

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿ.ಎಂ.-ಕಿಸಾನ್) ಯೋಜನೆ ಅಡಿಯಲ್ಲಿ 8 ನೇ ಕಂತಿನಲ್ಲಿ 2,06,67,75,66,000  ರೂ.ಗಳ ಹಣಕಾಸು ಪ್ರಯೋಜನಗಳನ್ನು 9,50,67,601 ಫಲಾನುಭವಿ ರೈತರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮೂಲಕ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ಫಲಾನುಭವಿ ರೈತರ ಜೊತೆ ಸಂವಾದ ನಡೆಸಿದರು. ಕೇಂದ್ರ ಕೃಷಿ ಸಚಿವರು ಉಪಸ್ಥಿತರಿದ್ದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿ.ಎಂ. ಕಿಸಾನ್) ಯೋಜನೆಯ ಫಲಾನುಭವಿಗಳ ಜೊತೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದ ಪ್ರಧಾನ ಮಂತ್ರಿ ಅವರು ಉತ್ತರ ಪ್ರದೇಶದ  ಉನ್ನಾವೋನಲ್ಲಿರುವ  ಅರವಿಂದ್ ಅವರು ತಮ್ಮ ವಲಯದ ಯುವ ಕೃಷಿಕರಿಗೆ ಸಾವಯವ ಕೃಷಿಯ ಬಗ್ಗೆ ಹಾಗು ನವೀನ ಕೃಷಿ ತಂತ್ರಗಳ ಬಗ್ಗೆ ತರಬೇತಿ ನೀಡುತ್ತಿರುವುದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕಾರ್ ನಿಕೋಬಾರ್ ನಲ್ಲಿಯ ಪ್ಯಾಟ್ರಿಕ್ ಅವರು ಬೃಹತ್ ಪ್ರಮಾಣದಲ್ಲಿ ಸಾವಯವ ಕೃಷಿ ಕೈಗೊಂಡಿರುವುದಕ್ಕಾಗಿ ಅವರನ್ನು ಶ್ಲಾಘಿಸಿದರು. ತಮ್ಮ ವಲಯದ 170 ಕ್ಕೂ ಅಧಿಕ ಆದಿವಾಸಿ ರೈತರಿಗೆ ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ  ಆಂಧ್ರ ಪ್ರದೇಶದ ಅನಂತಪುರದ ಎನ್. ವೆನ್ನೂರಮ ಅವರು ಕೈಗೊಂಡ ಪ್ರಯತ್ನಗಳನ್ನೂ ಪ್ರಧಾನ ಮಂತ್ರಿ ಅವರು ಕೊಂಡಾಡಿದರು. ಮೇಘಾಲಯದ ರೆವಿಸ್ಟಾರ್ ಅವರನ್ನು ಶುಂಠಿ ಹುಡಿ, ಅರಸಿನಗಳಂತಹ ಸಾಂಬಾರ ಪದಾರ್ಥಗಳನ್ನು ತಯಾರಿಸುತ್ತಿರುವುದಕ್ಕಾಗಿ ಶ್ಲಾಘಿಸಿದರು. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿಯ ಖುರ್ಷಿದ್ ಅಹ್ಮದ್ ಅವರು ದೊಣ್ಣೆ ಮೆಣಸು, ಹಸಿರು ಮೆಣಸು ಮತ್ತು ಸೌತೆಕಾಯಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಸುತ್ತಿದ್ದು, ಅವರ ಜೊತೆ ಪ್ರಧಾನ ಮಂತ್ರಿ ಸಂವಾದ ನಡೆಸಿದರು. ತಮ್ಮ ಅನುಭವ ಹಂಚಿಕೊಂಡ ಮಹಾರಾಷ್ಟ್ರದ ಲಾತೂರಿನ ಬಾಳಾಸಾಹೇಬ್ ನರಾರೆ ಅವರು ಕಿಸಾನ್ ಕ್ರೆಡಿಟ್ ಕಾರ್ಡ್ ತನಗೆ ಬ್ಯಾಂಕುಗಳಿಂದ ಸಾಲ ಪಡೆಯಲು ಹೇಗೆ ಸಹಾಯ ಮಾಡಿತು ಮತ್ತು ಕೃಷಿ ಉತ್ಪನ್ನ ಹೆಚ್ಚಳಕ್ಕೆ ಹೇಗೆ ಸಹಾಯ ಮಾಡಿತು ಎಂಬುದರ ಬಗ್ಗೆ ವಿವರಿಸಿದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ರೈತರು ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದರು. ಜಾಗತಿಕ ಸಾಂಕ್ರಾಮಿಕದ ಕಠಿಣ ಪರಿಸ್ಥಿತಿಯಲ್ಲೂ ಆಹಾರ ಧಾನ್ಯಗಳು ಮತ್ತು ತೋಟಗಾರಿಕಾ ಬೆಳೆಗಳನ್ನು ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಮಾಡಿರುವ ರೈತರ ಪ್ರಯತ್ನಗಳನ್ನು ಕೊಂಡಾಡಿದರು. ಸರಕಾರ ಕೂಡಾ ಪ್ರತೀ ವರ್ಷ ಎಂ.ಎಸ್.ಪಿ. ಅಡಿಯಲ್ಲಿ ಖರೀದಿ ಮಾಡುವುದರಲ್ಲಿ ದಾಖಲೆ ಮಾಡುತ್ತಿದೆ ಎಂದರು. ಎಂ.ಎಸ್.ಪಿ.ಯಲ್ಲಿ ಭತ್ತ ಖರೀದಿ ಹೊಸ ದಾಖಲೆ ಸ್ಥಾಪಿಸಿದೆ.ಮತ್ತು ಈಗ ಎಂ.ಎಸ್.ಪಿ.ಯಲ್ಲಿ ಗೋಧಿ ಖರೀದಿ ಕೂಡಾ ಹೊಸ ದಾಖಲೆ ಸ್ಥಾಪಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವರ್ಷ ಇದುವರೆಗೆ 10 ಶೇಕಡಾದಷ್ಟು ಹೆಚ್ಚು ಗೋಧಿಯನ್ನು ಎಂ.ಎಸ್.ಪಿ.ಯಲ್ಲಿ ಖರೀದಿಸಲಾಗಿದೆ. ಇದುವರೆಗೆ ಸುಮಾರು 58,000 ಕೋ.ರೂ.ಗಳನ್ನು ಗೋಧಿ ಖರೀದಿಗೆ ಖರ್ಚು ಮಾಡಲಾಗಿದ್ದು, ಅದು ನೇರವಾಗಿ ರೈತರ ಖಾತೆಗೆ ಸೇರಿದೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.

ಸರಕಾರವು ಕೃಷಿಗೆ ಹೊಸ ಆಯ್ಕೆಯ ಅವಕಾಶಗಳನ್ನು ಮತ್ತು ಹೊಸ ಪರಿಹಾರಗಳನ್ನು ಒದಗಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ನುಡಿದ ಪ್ರಧಾನ ಮಂತ್ರಿ ಅವರು ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿರುವುದು ಕೂಡಾ ಇಂತಹ ಪ್ರಯತ್ನಗಳಲ್ಲಿ ಒಂದು ಎಂದರು. ಸಾವಯವ ಕೃಷಿ ಹೆಚ್ಚು ಲಾಭವನ್ನು ತರುತ್ತದೆ ಮತ್ತು ಅದನ್ನೀಗ ದೇಶಾದ್ಯಂತ ಯುವ ಕೃಷಿಕರು ಅನುಸರಣೆ ಮಾಡುತ್ತಿದ್ದಾರೆ ಎಂದರು. ಈಗ ಗಂಗಾ ನದಿಯ ಎರಡೂ ದಂಡೆಗಳಲ್ಲಿಯೂ 5 ಕಿಲೋ ಮೀಟರ್ ತ್ರಿಜ್ಯ ವ್ಯಾಪ್ತಿಯಲ್ಲಿ ಸಾವಯವ ಕೃಷಿಯನ್ನು ಮಾಡಲಾಗುತ್ತಿದೆ, ಇದರಿಂದ ಗಂಗೆ ಸ್ವಚ್ಛವಾಗಿ ಉಳಿಯುವಂತಾಗಿದೆ ಎಂದರು.

ಚಾಲ್ತಿಯಲ್ಲಿರುವ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಲ್ಲಿ, ಕಿಸಾನ್ ಕಾರ್ಡಿನ ಅಂತಿಮ ಗಡುವನ್ನು ವಿಸ್ತರಿಸಲಾಗಿದೆ ಮತ್ತು ಕಂತುಗಳನ್ನು ಈಗ ಜೂನ್ 30 ರೊಳಗೆ ನವೀಕರಿಸಬಹುದು. ಇತ್ತೀಚಿನ ವರ್ಷಗಳಲ್ಲಿ 2 ಕೋಟಿಗೂ ಅಧಿಕ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಲಾಗಿದೆ ಎಂದೂ ಅವರು ಹೇಳಿದರು

ಶತಮಾನಕ್ಕೊಮ್ಮೆ ಬರುವ ಜಾಗತಿಕ ಸಾಂಕ್ರಾಮಿಕ ಜಗತ್ತಿಗೆ ಸವಾಲು ಹಾಕುತ್ತಿದೆ, ಅದು ನಮ್ಮೆದುರು ಇರುವ ಕಣ್ಣಿಗೆ ಕಾಣಲಾರದ ವೈರಿಯಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಸರಕಾರವು ಕೋವಿಡ್ -19 ವಿರುದ್ಧ ಸರ್ವ ಶಕ್ತಿಯನ್ನೂ ಕ್ರೋಡೀಕರಿಸಿ ಹೋರಾಟ ಮಾಡುತ್ತಿದೆ ಮತ್ತು ಸಂದರ್ಭದಲ್ಲಿ ದೇಶದ ನೋವನ್ನು ನಿವಾರಿಸಲು ಸರಕಾರದ ಪ್ರತೀ ಇಲಾಖೆಯೂ ರಾತ್ರಿ ಹಗಲು ಕೆಲಸ ಮಾಡುವಂತೆ ಖಾತ್ರಿಪಡಿಸುತ್ತಿದೆ ಎಂದೂ ಅವರು ಹೇಳಿದರು.

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಒಗ್ಗೂಡಿ  ಹೆಚ್ಚು ಹೆಚ್ಚು ದೇಶವಾಸಿಗಳು ತ್ವರಿತವಾಗಿ ಲಸಿಕಾಕರಣಕ್ಕೆ ಒಳಗಾಗುವಂತೆ ಮಾಡಲು ಸತತ ಪ್ರಯತ್ನಗಳನ್ನು ಮಾಡುತ್ತಿವೆ ಎಂದೂ ಪ್ರಧಾನ ಮಂತ್ರಿ ಹೇಳಿದರು. ಇದುವರೆಗೆ ಸುಮಾರು 18 ಕೋಟಿ ಲಸಿಕೆ ಡೋಸ್ ಗಳನ್ನು ದೇಶಾದ್ಯಂತ ನೀಡಲಾಗಿದೆ. ದೇಶಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆಗಳನ್ನು ನೀಡಲಾಗುತ್ತಿದೆ ಎಂದೂ ಅವರು ಹೇಳಿದರು. ಪ್ರತಿಯೊಬ್ಬರೂ ಲಸಿಕೆಗಾಗಿ ನೊಂದಾಯಿಸಿಕೊಳ್ಳುವಂತೆ ಮನವಿ ಮಾಡಿದ ಪ್ರಧಾನ ಮಂತ್ರಿ ಅವರು ಎಲ್ಲಾ ಸಂದರ್ಭಗಳಲ್ಲಿಯೂ ಕೋವಿಡ್ ಸಮುಚಿತ ವರ್ತನೆಯನ್ನು ಖಾತ್ರಿಪಡಿಸಬೇಕು ಎಂದೂ ಹೇಳಿದರು. ಲಸಿಕೆಯು ಕೊರೊನಾ ವಿರುದ್ಧ ರಕ್ಷಣೆ ನೀಡುವ ಪ್ರಮುಖ ಸಾಧನವಾಗಿರುತ್ತದೆ ಮತ್ತು ಅದು ಗಂಭೀರ ಪ್ರಮಾಣದ ಅನಾರೋಗ್ಯದ ಅಪಾಯದಿಂದ ಪಾರು ಮಾಡುತ್ತದೆ ಎಂದೂ ಹೇಳಿದರು.

ಕಠಿಣ ಸಮಯದಲ್ಲಿ ಆಮ್ಲಜನಕ ಪೂರೈಕೆಯನ್ನು ಖಾತ್ರಿಪಡಿಸಲು ಸಶಸ್ತ್ರ ಪಡೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರತವಾಗಿವೆ ಎಂದೂ ಪ್ರಧಾನ ಮಂತ್ರಿ ಹೇಳಿದರು. ರೈಲ್ವೇಯು ಕೂಡಾ ಆಮ್ಲಜನಕ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸುತ್ತಿದೆ. ದೇಶದ ಔಷಧಿ ತಯಾರಿಕಾ ವಲಯ ಬೃಹತ್ ಪ್ರಮಾಣದಲ್ಲಿ ಔಷಧಿಗಳನ್ನು ಉತ್ಪಾದಿಸಿ ಪೂರೈಕೆ ಮಾಡುತ್ತಿದೆ ಎಂದ ಪ್ರಧಾನ ಮಂತ್ರಿ ಅವರು ಔಷಧಿಗಳ ಮತ್ತು ವೈದ್ಯಕೀಯ ಪೂರೈಕೆಗಳ ಕಾಳಸಂತೆಯನ್ನು ತಡೆಯಲು ಕಠಿಣ ಕಾನೂನುಗಳನ್ನು ಖಾತ್ರಿಪಡಿಸಬೇಕು ಎಂದೂ ರಾಜ್ಯ ಸರಕಾರಗಳನ್ನು ಕೋರಿದರು.

ಭಾರತವು ಕಠಿಣ ಸಂದರ್ಭಗಳಲ್ಲಿ ಭರವಸೆ ಕಳೆದುಕೊಳ್ಳುವ ದೇಶವಲ್ಲ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಸವಾಲನ್ನು ಶಕ್ತಿ ಮತ್ತು ಅರ್ಪಣಾಭಾವದಿಂದ ಎದುರಿಸಿ ಗೆಲ್ಲಬಹುದು ಎಂದೂ ಅಭಿಪ್ರಾಯಪಟ್ಟರು. ಕೋವಿಡ್ -19 ಗ್ರಾಮೀಣ ಪ್ರದೇಶಗಳಲ್ಲೂ ಹರಡುವ ಸಾಧ್ಯತೆಯ ಬಗ್ಗೆ ಎಚ್ಚರಿಸಿದ ಅವರು ಗ್ರಾಮ ಪಂಚಾಯತ್ ಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಸೂಕ್ತ ಜಾಗೃತಿಯನ್ನು ಮೂಡಿಸಬೇಕು ಮತ್ತು ನೈರ್ಮಲ್ಯವನ್ನು ಖಾತ್ರಿಪಡಿಸಬೇಕು ಎಂದೂ ನುಡಿದರು.

ಸಂದರ್ಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಮಾತನಾಡಿ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಅವರ ಪ್ರಯತ್ನಗಳು ಸದಾ ಜಾರಿಯಲ್ಲಿರುತ್ತವೆ, ಜೀವನ ಶೈಲಿ ಸುಧಾರಣೆ, ಮತ್ತು ರೈತರ ಆದಾಯ ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಅವರ ಪ್ರಯತ್ನಗಳು ಸಾಗುತ್ತಿವೆ ಎಂದರು. ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೃಷಿ ವಲಯಕ್ಕೆ ಆದಾಯ ಕೇಂದ್ರಿತ ನೀತಿಗಳನ್ನು ರೂಪಿಸಲಾಗುತ್ತಿದೆ ಎಂದವರು ಹೇಳಿದರು. ಪ್ರಧಾನ ಮಂತ್ರಿ ಕಿಸಾನ್ ಯೋಜನಾವನ್ನು ಅತ್ಯಂತ ಸಮಗ್ರ ಯೋಜನೆ ಎಂದು ಬಣ್ಣಿಸಿದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಗ್ರಾಮಸ್ಥರು, ಬಡವರು ಮತ್ತು ಕೃಷಿಕರ ಮೇಲೆ ಗಮನ ಕೇಂದ್ರೀಕರಿಸಿದುದಕ್ಕಾಗಿ ಮತ್ತು ಪಿ.ಎಂ. ಕಿಸಾನ್ ಯೋಜನೆ ಅಡಿಯಲ್ಲಿ ಸುಮಾರು 9.5 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ  20 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ವರ್ಗಾಯಿಸಿದುದಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.ಕೃಷಿ ಸಚಿವಾಲಯವು ಪಿ.ಎಂ. ಕಿಸಾನ್ ಯೋಜನೆ ಅಡಿಯಲ್ಲಿ 100% ಸಾಧನೆ ಮಾಡಲು ಸರ್ವ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದೂ ಸಚಿವರು ಹೇಳಿದರು.

ಕೃಷಿಕ ಫಲಾನುಭವಿಗಳ ರಾಜ್ಯವಾರು ಪಟ್ಟಿ ಮತ್ತು ವರ್ಗಾಯಿಸಲಾದ ಮೊತ್ತ ಕೆಳಗಿನಂತಿದೆ:

***



(Release ID: 1718897) Visitor Counter : 278