ಈಶಾನ್ಯ ರಾಜ್ಯಗಳ ಅಭಿವೃಧ್ಧಿ ಸಚಿವಾಲಯ

ಎಲ್ಲ 8 ಈಶಾನ್ಯ ರಾಜ್ಯಗಳಿಗೆ ಸಮರ್ಥವಾಗಿ ಕೋವಿಡ್ -19 ಎರಡನೇ ಅಲೆಯ ವಿರುದ್ಧ ಹೋರಾಡಲು ಈಶಾನ್ಯ ವಲಯ ಅಭಿವೃದ್ಧಿ ಸಚಿವಾಲಯ ಸಕ್ರಿಯವಾಗಿ ನೆರವಾಗುತ್ತಿದೆ :ಕೇಂದ್ರ ಸಚಿವ ಡಾ. ಜಿತೇಂದ್ರಸಿಂಗ್


ಈಶಾನ್ಯದ ಆಸ್ಪತ್ರೆಗಳಲ್ಲಿ ತಡೆರಹಿತ ಆಕ್ಸಿಜನ್ ಪೂರೈಕೆಯನ್ನು ಖಾತ್ರಿಪಡಿಸಲು 8 ಆಕ್ಸಿಜನ್ ಸ್ಥಾವರ ಒದಗಿಸಲಿರುವ ಜಪಾನ್ ಮತ್ತು ಯುಎನ್.ಡಿ.ಪಿ.

Posted On: 11 MAY 2021 5:12PM by PIB Bengaluru

ಎಲ್ಲ 8 ಈಶಾನ್ಯ ರಾಜ್ಯಗಳಿಗೆ ಸಮರ್ಥವಾಗಿ ಕೋವಿಡ್ -19 ಎರಡನೇ ಅಲೆಯ ವಿರುದ್ಧ ಹೋರಾಡಲು ಈಶಾನ್ಯ ವಲಯ ಅಭಿವೃದ್ಧಿ ಸಚಿವಾಲಯ ಸಕ್ರಿಯವಾಗಿ ನೆರವಾಗುತ್ತಿದೆ ಎಂದು ಈಶಾನ್ಯ ವಲಯ ಅಭಿವೃದ್ಧಿ (ಡಿ..ಎನ್..ಆರ್.)ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವ, ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಈಶಾನ್ಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಕಾರ್ಯದರ್ಶಿಗಳು, ಯೋಜನಾ ಕಾರ್ಯದರ್ಶಿಗಳು ಮತ್ತು ಕೇಂದ್ರ ಸರ್ಕಾರದ ಕೋವಿಡ್ ಸಿದ್ಧತೆ ಕುರಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಜಿತೇಂದ್ರ ಸಿಂಗ್, ಈಶಾನ್ಯ ವಲಯದ ಆಸ್ಪತ್ರೆಗಳಲ್ಲಿ ಆಮ್ಲಜನಕದ ತಡೆರಹಿತ ಪೂರೈಕೆ ಖಾತ್ರಿಪಡಿಸಲು ಜಪಾನ್ ಮತ್ತು ಯು.ಎನ್.ಡಿ.ಪಿ. 8 ಆಕ್ಸಿಜನ್ ಉತ್ಪಾದನಾ ಸ್ಥಾವರ ಒದಗಿಸಲು ಕೈಜೋಡಿಸಿವೆ ಎಂದು ತಿಳಿಸಿದರು. ಈಶಾನ್ಯ ವಲಯದಾದ್ಯಂತ ಸ್ಥಾವರಗಳು 1300ಕ್ಕೂ ಹೆಚ್ಚು ಆಸ್ಪತ್ರೆಯ ಹಾಸಿಗೆಗಳಿಗೆ ಬೆಂಬಲ ನೀಡಲಿವೆ. ಭಾರತಕ್ಕೆ ಬರುತ್ತಿರುವ ವಿದೇಶಿ ನೆರವಿನಲ್ಲಿ ಈಶಾನ್ಯ ವಲಯ ತನ್ನ ನ್ಯಾಯಯುತ ಪಾಲನ್ನು ಪಡೆಯಲಿದೆ ಮತ್ತು ಕರೋನಾ ವಿರುದ್ಧದ ಹೋರಾಟದಲ್ಲಿ ಅವುಗಳನ್ನು ಹಿಂದೆ ಬೀಳಲು ಬಿಡುವುದಿಲ್ಲ, ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಡಾ.ಜಿತೇಂದ್ರ ಸಿಂಗ್ ಭರವಸೆ ನೀಡಿದರು.

ಕಳೆದ ವರ್ಷ 14 ಆರೋಗ್ಯ ಮತ್ತು ಕೋವಿಡ್ ಸಂಬಂಧಿತ ಯೋಜನೆಗಳಿಗೆ 369 ಕೋಟಿ ರೂ. ಹಣ ವಿತರಿಸಲಾಯಿತು ಮತ್ತು ಹೊಸ ಸಾಧನಗಳ ಖರೀದಿ ಸೇರಿದಂತೆ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ಗಣನೀಯವಾಗಿ ನೆರವು ನೀಡಲಾಯಿತು, ಈಗ ಎಲ್ಲ ರಾಜ್ಯಗಳೂ ಸಾಂಕ್ರಾಮಿಕದ ವಿರುದ್ಧ ಸೆಣಸಲು ಉತ್ತಮವಾಗಿ ಸಜ್ಜಾಗಿವೆ ಎಂದು ಡಾ.ಜಿತೇಂದ್ರ ಸಿಂಗ್ ತಿಳಿಸಿದರು.

ಮೊದಲ ಅಲೆಗಿಂತಲೂ ಈಗ ಎಲ್ಲ ರಾಜ್ಯಗಳೂ ಸಾಂಕ್ರಾಮಿಕ ರೋಗದಿಂದ ಹೆಚ್ಚು ತೀವ್ರವಾಗಿ ಬಾಧಿತವಾಗುತ್ತಿವೆ ಎಂಬ ಅಂಶವನ್ನು ಗಮನಿಸಿದ ಸಚಿವರು, ಆರೋಗ್ಯ ಸಂಬಂಧಿತ ಪ್ರಸ್ತಾಪಗಳನ್ನು ಬೇಗನೆ ಕಳುಹಿಸುವಂತೆ ಎಲ್ಲಾ ರಾಜ್ಯಗಳ ಸಚಿವರಿಗೆ ತಿಳಿಸಿದರು. ಅವುಗಳನ್ನು ಸಚಿವಾಲಯದಲ್ಲಿ ಆದ್ಯತೆಯ ಆಧಾರದ ಮೇಲೆ ಪ್ರಕ್ರಿಯೆಗೊಳಿಸುವ ಭರವಸೆ ನೀಡಿದರು. ಈಶಾನ್ಯ ರಾಜ್ಯಗಳ ಬೇಡಿಕೆಗಳನ್ನು ಈಡೇರಿಸಲು ಕೇಂದ್ರದಲ್ಲಿ ಆರೋಗ್ಯ, ರೈಲ್ವೆ ಮತ್ತು ಇತರ ಸಂಬಂಧಿತ ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸುವಂತೆ ಅವರು ಈಶಾನ್ಯ ವಲಯ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಹುತೇಕ ಎಲ್ಲ ರಾಜ್ಯಗಳೂ ಆಕ್ಸಿಜನ್, ಲಸಿಕೆ ಮತ್ತು ಅಗತ್ಯ ಔಷಧಗಳು ಅಂದರೆ ರೆಮಿಡಿಸಿವೀರ್ ಮೊದಲಾದವುಗಳ ಕೊರತೆಯ ಬಗ್ಗೆ ಧ್ವನಿ ಎತ್ತಿದ್ದು, ವಿಷಯದ ಬಗ್ಗೆ ತಾವು ಖುದ್ದು ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಸಮಾಲೋಚಿಸುವ ಭರವಸೆ ನೀಡಿದರು. ಕೋವಿಡ್ ವಿರುದ್ಧ ಹೋರಾಟಕ್ಕೆ ಆತಂಕವಲ್ಲ ಮುನ್ನೆಚ್ಚರಿಕೆ ಮುಖ್ಯ ಮಂತ್ರವಾಗಿದ್ದು, ಆಮ್ಲಜನಕ ಮತ್ತು ಅಗತ್ಯ ಔಷಧಗಳನ್ನು ಸಂಗ್ರಹಿಸಬೇಡಿ ಎಂದು ಸಚಿವರು ಇದೇ ವೇಳೆ ಜನರಿಗೆ ಮನವಿ ಮಾಡಿದರು. ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಲು ಯುವಜನರು, ನಾಗರಿಕ ಸಮಾಜ, ಧಾರ್ಮಿಕ ಮುಖಂಡರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ಒಗ್ಗೂಡಿಸುವ ಮೂಲಕ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಮುದಾಯ ನಿರ್ವಹಣೆಯ ಅಗತ್ಯವನ್ನು ಅವರು ಒತ್ತಿಹೇಳಿದರು.

ವಲಯದಾದ್ಯಂತ ಜಿಲ್ಲಾ ಆಸ್ಪತ್ರೆಗಳು, ಪರೀಕ್ಷಾ ಸೌಲಭ್ಯಗಳು, ಸಂಚಾರಿ ಪರೀಕ್ಷಾ ಪ್ರಯೋಗಾಲಯಗಳು, ಪ್ರಮುಖ ಸಾಧನಗಳು ಮತ್ತು ಆಮ್ಲಜನಕ ಸ್ಥಾವರ ಸ್ಥಾಪನೆ ಸೇರಿದಂತೆ ಆರೋಗ್ಯ ಸಂಬಂಧಿತ ಮೂಲಸೌಕರ್ಯ ಹೆಚ್ಚಿಸಲು ಈಶಾನ್ಯ ವಲಯ ಅಭಿವೃದ್ಧಿ ಸಚಿವಾಲಯದ ನಿಧಿಯನ್ನು ನ್ಯಾಯಯುತವಾಗಿ ಬಳಸಲಾಗುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಸಂತೃಪ್ತಿ ವ್ಯಕ್ತಪಡಿಸಿದರು. ಸಾಂಕ್ರಾಮಿಕಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ದೈನಿಕ ಆಧಾರದಲ್ಲಿ ಲೆಕ್ಕ ಇಡಲು ನಿಗಾ ಕೋಶವನ್ನು ಸ್ಥಾಪಿಸಲು ಎಲ್ಲ ರಾಜ್ಯಗಳೊಂದಿಗೆ ಸಹಯೋಗಕ್ಕಾಗಿ ಸ್ಥಳೀಯ ಸಂಪನ್ಮೂಲ ಸಂಸ್ಥೆಯಾಗಿ ಸಜ್ಜಾಗುವಂತೆ ಎನ್..ಸಿ.ಗೆ ಅವರು ಸೂಚನೆ ನೀಡಿದರು.

ಇದರ ಜೊತೆಗೆ ಕಳೆದ ವರ್ಷ ಲಾಕ್ ಡೌನ್ -1 ಆರಂಭದ ದಿನಗಳಲ್ಲಿ  ಈಶಾನ್ಯ ವಲಯ ಅಭಿವೃದ್ಧಿ ಸಚಿವಾಲಯ (ಡಿ..ಎನ್..ಆರ್.)  ಪೂರ್ವಭಾವಿಯಾಗಿ ಹೆಜ್ಜೆ ಇಟ್ಟಿತ್ತು ಮತ್ತು 25 ಕೋಟಿ ರೂ.ಗಳನ್ನು ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಪೂರ್ವಸಿದ್ಧತಾ ಕ್ರಮಗಳಿಗಾಗಿ ತೆಗೆದಿಟ್ಟಿತ್ತು ಎಂದು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವರು ತಿಳಿಸಿದರು.

***



(Release ID: 1718047) Visitor Counter : 211