ಗೃಹ ವ್ಯವಹಾರಗಳ ಸಚಿವಾಲಯ
ದೆಹಲಿಯಲ್ಲಿ ಕೋವಿಡ್-19 ಸನ್ನದ್ಧತೆಯನ್ನು ಪರಿಶೀಲಿಸಿದ ಕೇಂದ್ರ ಸಂಪುಟ ಕಾರ್ಯದರ್ಶಿ
Posted On:
02 MAY 2021 6:58PM by PIB Bengaluru
ಕೇಂದ್ರದ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಇಂದು ದೆಹಲಿಯ ಕೋವಿಡ್-19 ಸನ್ನದ್ಧತೆಯನ್ನು ಪರಿಶೀಲಿಸಿದರು. ದೆಹಲಿ ಎನ್ಸಿಟಿ ಸರ್ಕಾರದ (ಜಿಎನ್ಸಿಟಿಡಿ) ಅಧಿಕಾರಿಗಳು ಸಕ್ರಿಯ ಪ್ರಕರಣಗಳು, ಸಾವು ಮತ್ತು ಪಾಸಿಟಿವ್ ದರಗಳ ಇತ್ತೀಚಿನ ಪ್ರವೃತ್ತಿ; ವೈದ್ಯಕೀಯ ಮೂಲಸೌಕರ್ಯಗಳ ಲಭ್ಯತೆ ಮತ್ತು ವಿಸ್ತರಣಾ ಯೋಜನೆಗಳು; ಆಮ್ಲಜನಕದ ಲಭ್ಯತೆಯ ಸ್ಥಿತಿಗತಿ; ಮನೆ ಪ್ರತ್ಯೇಕವಾಸದ ಪ್ರಕ್ರಿಯೆ ಮತ್ತು ಸಹಾಯವಾಣಿ; ಆಂಬ್ಯುಲೆನ್ಸ್ ಸೇವೆಗಳು ಮತ್ತು ಪರೀಕ್ಷೆಗಳ ಬಗ್ಗೆ ಸಭೆಯಲ್ಲಿ ವಿವರ ನೀಡಿದರು. ಸಭೆಯಲ್ಲಿ ಗೃಹ ಕಾರ್ಯದರ್ಶಿ, ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪಾಲ್, ದೆಹಲಿಯ ಮುಖ್ಯ ಕಾರ್ಯದರ್ಶಿ ಮತ್ತು ಜಿಎನ್ಸಿಟಿಡಿಯ ಇತರ ಹಿರಿಯ ಅಧಿಕಾರಿಗಳು, ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ದೆಹಲಿ ಮಹಾನಗರ ಪಾಲಿಕೆಗಳ ಆಯುಕ್ತರು ಮತ್ತು ಎನ್ಡಿಎಂಸಿಯ ಅಧ್ಯಕ್ಷರು ಭಾಗವಹಿಸಿದ್ದರು.
ಕೋವಿಡ್ ಹಾಸಿಗೆಗಳು, ಐಸಿಯುಗಳು ಮತ್ತು ವೆಂಟಿಲೇಟರ್ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ದೆಹಲಿಯ ವೈದ್ಯಕೀಯ ಮೂಲಸೌಕರ್ಯವನ್ನು ತ್ವರಿತವಾಗಿ ಹೆಚ್ಚಿಸುವ ಅಗತ್ಯವನ್ನು ಸಂಪುಟ ಕಾರ್ಯದರ್ಶಿ ಒತ್ತಿ ಹೇಳಿದರು. ಕೋವಿಡ್ ಹಾಸಿಗೆಗಳು ಮತ್ತು ಇತರ ಸೌಲಭ್ಯಗಳು / ಔಷಧಿ ಲಭ್ಯತೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಾರ್ವಜನಿಕರಿಗೆ ವೆಬ್ಸೈಟ್ಗಳು / ಅಪ್ಲಿಕೇಶನ್ಗಳ ಮೂಲಕ ಲಭ್ಯವಾಗುವಂತೆ ಮಾಡಬೇಕು. ಅದರ ಆಧಾರದ ಮೇಲೆ ಅಂತಹ ಸೌಲಭ್ಯ / ಔಷಧಿಗಳ ಅಗತ್ಯವಿರುವ ಜನರು ಸರಿಯಾದ ಸ್ಥಳವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಅವರು ಸೂಚಿಸಿದರು. ಅಗತ್ಯವಿರುವ ಜನರಿಗೆ ಸಂಬಂಧಿತ ಕ್ಲಿನಿಕಲ್ ಮಾಹಿತಿಯನ್ನು ಒದಗಿಸಲು ಒಂದೇ ಸಹಾಯವಾಣಿಯನ್ನು ತೆರೆಯಬೇಕು ಮತ್ತು ಅದರ ಬಗ್ಗೆ ಪ್ರಚಾರ ನೀಡಬೇಕು. ಸಹಾಯವಾಣಿಯನ್ನು ಪ್ರತ್ಯೇಕ ಮತ್ತು ಉತ್ತಮ ಸಿಬ್ಬಂದಿಯ ಕಾಲ್ ಸೆಂಟರ್ ಮೂಲಕ ನಡೆಸಬೇಕು. ಸೂಕ್ತ ಸಮಯಕ್ಕೆ ಆಮ್ಲಜನಕದ ಲಭ್ಯತೆಯ ಕೊರತೆಯಿಂದ ಜನರು ತೊಂದರೆಗಳಗಾಗುತ್ತಿರುವ ಪ್ರಕರಣಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ತಮ್ಮ ಹಂಚಿಕೆಯ ಆಮ್ಲಜನಕವನ್ನು ಪಡೆದುಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ, ಲಭ್ಯವಿರುವ ಆಮ್ಲಜನಕವನ್ನು ಯಾವುದೇ ಸೋರಿಕೆಯಿಲ್ಲದೇ ತರ್ಕಬದ್ಧವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ವಿತರಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ದೆಹಲಿ ಸರ್ಕಾರವನ್ನು ಕೇಳಿಕೊಂಡರು. ಸಮರ್ಪಕ ವೈದ್ಯಕೀಯ ಮತ್ತು ಆರೋಗ್ಯ ವಲಯದ ಮಾನವ ಸಂಪನ್ಮೂಲಗಳನ್ನು ಕುರಿತಂತೆ ಮಾತನಾಡಿದ ಅವರು, ನಿವೃತ್ತ ವೈದ್ಯಕೀಯ ವೃತ್ತಿಪರರ ಸೇವೆಗಳನ್ನು ಬಳಸಿಕೊಳ್ಳಲು ಕಾರ್ಯವಿಧಾನಗಳನ್ನು ರೂಪಿಸುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿದರು. ಪರೀಕ್ಷಾ ಸೌಲಭ್ಯಗಳ ಮತ್ತಷ್ಟು ಹೆಚ್ಚಳವಾಗಬೇಕು ಮತ್ತು ಪರೀಕ್ಷಾ ಫಲಿತಾಂಶಗಳು ಸಮಯೋಚಿತವಾಗಿ ಲಭ್ಯವಾಗಬೇಕು ಎಂದು ಸಂಪುಟ ಕಾರ್ಯದರ್ಶಿ ತಿಳಿಸಿದರು.
ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಸಂಖ್ಯೆಯನ್ನು ಪ್ರತಿ ಆಸ್ಪತ್ರೆಯಲ್ಲಿಯೂ ಪ್ರದರ್ಶಿಸುವ ಪಾರದರ್ಶಕ ಎಲೆಕ್ಟ್ರಾನಿಕ್ ವಿಧಾನವನ್ನು ಮತ್ತೆ ಪ್ರಾರಂಭಿಸುವ ಅಗತ್ಯವನ್ನು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಒತ್ತಿ ಹೇಳಿದರು. ವಿವಿಧ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೌಲಭ್ಯಗಳಲ್ಲಿ ಆಮ್ಲಜನಕ ಲೆಕ್ಕಪರಿಶೋಧನಾ ಸಮಿತಿಗಳನ್ನು ರಚಿಸುವ ಅಗತ್ಯವನ್ನು ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಒತ್ತಿ ಹೇಳಿದರು.
ಪ್ರಸ್ತುತ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಒತ್ತಿ ಹೇಳಿದ ಡಾ.ವಿ.ಕೆ.ಪಾಲ್, ರಾಷ್ಟ್ರ ರಾಜಧಾನಿಯ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಸಣ್ಣ ನರ್ಸಿಂಗ್ ಹೋಂಗಳು ಮತ್ತು ಆಸ್ಪತ್ರೆಗಳನ್ನು ಬಳಸಿಕೊಳ್ಳುವಂತೆ ಶಿಫಾರಸು ಮಾಡಿದರು. ಶಿಷ್ಟಾಚಾರದ ಪ್ರಕಾರ ಹೋಟೆಲ್ ಮತ್ತು ಅಂತಹುದೇ ಸ್ಥಳಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಬೇಕೆಂದು ಅವರು ಸೂಚಿಸಿದರು. ದೆಹಲಿ ಸರ್ಕಾರದ 24x7 ಸಹಾಯವಾಣಿಗೆ ಪೂರಕವಾಗಿ, ಸುಮಾರು 50 ವೈದ್ಯರನ್ನು ವೈದ್ಯಕೀಯ ಸಮಾಲೋಚನೆಗಾಗಿ ಒದಗಿಸುವಂತೆ ದೆಹಲಿ ವೈದ್ಯಕೀಯ ಸಂಘವನ್ನು ಕೋರಬೇಕೆಂದು ಅವರು ಶಿಫಾರಸು ಮಾಡಿದರು. ಈ ವೈದ್ಯರು ಕೋವಿಡ್-19 ರೋಗಿಗಗಳಿಗೆ ಔಷಧಿಗಳು, ಆಮ್ಲಜನಕ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಸೌಲಭ್ಯಗಳ ಬಳಕೆಯ ಬಗ್ಗೆ ಮಾರ್ಗದರ್ಶನ ನೀಡಬಹುದು ಎಂದು ಅವರು ತಿಳಿಸಿದರು.
***
(Release ID: 1715578)
Visitor Counter : 275