ಕೃಷಿ ಸಚಿವಾಲಯ
ಭಾರತದಲ್ಲಿ ಬೇಸಿಗೆ ಬೆಳೆ ಬೆಳೆಯುವ ಪ್ರದೇಶ ಏರಿಕೆ ಪ್ರವೃತ್ತಿ
ಕಳೆದ ವರ್ಷಕ್ಕೆ ಹೋಲಿಸಿದರೆ ಬೇಸಿಗೆ ಬಿತ್ತನೆ ಶೇ.21.5 ರಷ್ಟು ಹೆಚ್ಚಳ
ದ್ವಿದಳ ಧಾನ್ಯ ಬಿತ್ತನೆ 6.45 ಲಕ್ಷ ಹೆಕ್ಟೇರ್ ನಿಂದ 12.75 ಲಕ್ಷ ಹೆಕ್ಟೇರ್ ಗೆ ಏರಿಕೆ; ಶೇ.100ರಷ್ಟು ಹೆಚ್ಚಳ ದಾಖಲು
ಎಣ್ಣೆ ಬೀಜಗಳು ಮತ್ತು ಭತ್ತದ ಬಿತ್ತನೆ ಸುಮಾರು ಶೇ.16ರಷ್ಟು ಹೆಚ್ಚಳ
ಬೇಸಿಗೆ ಬೆಳೆಗಳಿಂದ ಹೆಚ್ಚುವರಿ ಆದಾಯ ದೊರಕುವುದಲ್ಲದೆ, ಮಣ್ಣಿನ ಆರೋಗ್ಯ ಸುಧಾರಿಸುವ ಮೂಲಕ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
Posted On:
23 APR 2021 1:18PM by PIB Bengaluru
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವ್ಯವಸ್ಥಿತ ಯೋಜನೆ ಮತ್ತು ಸಂಘಟಿತ ಪ್ರಯತ್ನಗಳ ಪರಿಣಾಮ ಮತ್ತು ರೈತರ ಪರಿಶ್ರಮದಿಂದಾಗಿ ಸತತ ಎರಡನೇ ವರ್ಷವೂ ದೇಶದಲ್ಲಿ ಬೇಸಿಗೆ ಬೆಳೆ ಬಿತ್ತನೆ ಪ್ರದೇಶ ಹೆಚ್ಚಳ ಪ್ರವೃತ್ತಿ ಕಂಡುಬಂದಿದೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ದ್ವಿದಳ ಧಾನ್ಯಗಳು, ಬೇಳೆ-ಕಾಳು ಮತ್ತು ಸಿರಿ ಧಾನ್ಯಗಳು ಮತ್ತು ಎಣ್ಣೆಬೀಜಗಳು ಸೇರಿದಂತೆ ಬೇಸಿಗೆ ಬೆಳೆಗಳ ವೈಜ್ಞಾನಿಕ ಬಿತ್ತನೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, 2021ರ ಏಪ್ರಿಲ್ 23ರ ವರೆಗೆ ದೇಶದಲ್ಲಿ ಶೇ. 21.5ರಷ್ಟು ಬೇಸಿಗೆ ಬೆಳೆ ಬಿತ್ತನೆ ಪ್ರದೇಶ ಹೆಚ್ಚಾಗಿದೆ. ಈ ವರ್ಷ ಒಟ್ಟು ಬೇಸಿಗೆ ಬೆಳೆ ಪ್ರದೇಶ 73.76 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 60.67 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಕಾರ್ಯ ನಡೆದಿತ್ತು.
ದ್ವಿದಳ ಧಾನ್ಯಗಳ ಬಿತ್ತನೆ ಪ್ರದೇಶದಲ್ಲಿ ಗಮನಾರ್ಹ ಏರಿಕೆಯಾಗಿದೆ. 2021ರ ಏಪ್ರಿಲ್ 23ರ ವರೆಗೆ ದ್ವಿದಳ ಧಾನ್ಯಗಳ ಬಿತ್ತನೆ ಪ್ರದೇಶ 6.45 ಲಕ್ಷ ಹೆಕ್ಟೇರ್ ನಿಂದ 12.75 ಲಕ್ಷ ಹೆಕ್ಟೇರ್ ಗೆ ಏರಿಕೆಯಾಗಿದ್ದು, ಒಟ್ಟಾರೆ ಸುಮಾರು ಶೇ.100ರಷ್ಟು ಹೆಚ್ಚಳ ಕಂಡುಬಂದಿದೆ. ಪ್ರಮುಖವಾಗಿ ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮಬಂಗಾಳ, ಉತ್ತರ ಪ್ರದೇಶ, ಗುಜರಾತ್, ಬಿಹಾರ, ಛತ್ತೀಸ್ ಗಢ, ಮಹಾರಾಷ್ಟ್ರ, ಕರ್ನಾಟಕ ಮತ್ತಿತರ ರಾಜ್ಯಗಳಲ್ಲಿ ಬಿತ್ತನೆ ಪ್ರದೇಶ ಹೆಚ್ಚಾಗಿದೆ.
ಎಣ್ಣೆ ಬೀಜಗಳ ಬಿತ್ತನೆ ಪ್ರದೇಶ 9.03 ಲಕ್ಷ ಹೆಕ್ಟೇರ್ ಪ್ರದೇಶದಿಂದ 10.45 ಲಕ್ಷ ಹೆಕ್ಟೇರ್ ಗೆ ಹೆಚ್ಚಳವಾಗಿದೆ ಅಂದರೆ ಸುಮಾರು ಶೇ.18ರಷ್ಟು ಹೆಚ್ಚಳವಾದಂತಾಗಿದೆ. ಪಶ್ಚಿಮಬಂಗಾಳ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ಛತ್ತೀಸ್ ಗಢ ಮತ್ತಿತರ ರಾಜ್ಯಗಳಲ್ಲಿ ಈ ಬಿತ್ತನೆ ಪ್ರದೇಶ ಹೆಚ್ಚಳವಾಗಿರುವುದು ವರದಿಯಾಗಿದೆ.
ಭತ್ತದ ಬಿತ್ತನೆ 33.82 ಲಕ್ಷ ಹೆಕ್ಟೇರ್ ನಿಂದ 39.10 ಲಕ್ಷ ಹೆಕ್ಟೇರ್ ಗೆ ಹೆಚ್ಚಳವಾಗಿದೆ. ಇದು ಶೇ.16ರಷ್ಟು ಏರಿಕೆಯಾದಂತಾಗಿದೆ. ಹಿಂಗಾರು ಭತ್ತದ ಬೆಳೆ ಪಶ್ಚಿಮಬಂಗಾಳ, ತೆಲಂಗಾಣ, ಕರ್ನಾಟಕ, ಅಸ್ಸಾಂ, ಆಂಧ್ರಪ್ರದೇಶ, ಒಡಿಶಾ, ಛತ್ತೀಸ್ ಗಢ, ತಮಿಳುನಾಡು, ಬಿಹಾರ ಮತ್ತಿತರ ರಾಜ್ಯಗಳಲ್ಲಿ ಹೆಚ್ಚಾಗಿ ಬಿತ್ತನೆಯಾಗಿರುವುದು ವರದಿಯಾಗಿದೆ.
ಬೇಸಿಗೆ ಬೆಳೆ ಬಿತ್ತನೆ ಕಾರ್ಯ ಮೇ ಮೊದಲನೇ ವಾರದ ವೇಳೆಗೆ ಸಂಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಒಟ್ಟಾರೆ ಬಿತ್ತನೆ ಪ್ರದೇಶ ಗಣನೀಯವಾಗಿ ಏರಿಕೆಯಾಗಿದೆ. ಬೇಸಿಗೆ ಬೆಳೆ ಕೇವಲ ಹೆಚ್ಚುವರಿ ಆದಾಯ ಒದಗಿಸುವುದಷ್ಟೇ ಅಲ್ಲ, ಉದ್ಯೋಗಾವಕಾಶಗಳನ್ನೂ ಸಹ ಸೃಷ್ಟಿಸುತ್ತದೆ. ಬೇಸಿಗೆ ಬೆಳೆಯಿಂದ ಆಗುವ ಮತ್ತೊಂದು ಪ್ರಮುಖ ಲಾಭವೆಂದರೆ ವಿಶೇಷವಾಗಿ ದ್ವಿದಳ ಧಾನ್ಯಗಳ ಬೆಳೆಗಳ ಮೂಲಕ ಮಣ್ಣಿನ ಆರೋಗ್ಯ ಸುಧಾರಿಸಲಿದೆ.
ಬಹುತೇಕ ಎಲ್ಲ ಜಲಾಶಯಗಳಲ್ಲಿ ಉತ್ತೇಜನಕಾರಿ ನೀರಿನ ಮಟ್ಟ ಇರುವುದು ಹಿಂಗಾರು ಬೆಳೆ ಹಾಗೂ ಬೇಸಿಗೆ ಬೆಳೆ ರಕ್ಷಣೆಗೆ ಸಹಾಯಕವಾಗಿದೆ. ಒಟ್ಟಾರೆ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ಇಳುವರಿ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ.
ಭಾರತದಲ್ಲಿ ಮಣ್ಣಿನ ತೇವಾಂಶ ಮತ್ತು ಇತರೆ ಹವಾಗುಣದ ಸ್ಥಿತಿಗತಿ ಆಧರಿಸಿ ಬೇಸಿಗೆ/ ಜೈದ್ ಬೆಳೆಯನ್ನು ಬೆಳೆಯುವ ಪದ್ಧತಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ವಿಶೇಷವಾಗಿ ಹೆಚ್ಚುವರಿ ದೇಶೀಯ ಆಹಾರಧಾನ್ಯಗಳ ಅಗತ್ಯತೆ ಮತ್ತು ಜಾನುವಾರುಗಳಿಗೆ ಮೇವು ಒದಗಿಸಲು ಈ ಬೆಳೆಗಳನ್ನು ಬೆಳೆಯಲಾಗುವುದು. ಕೆಲವು ರಾಜ್ಯಗಳಲ್ಲಿ ನೀರಿನ ಲಭ್ಯತೆ ಆಧರಿಸಿ ಗೃಹ ಬಳಕೆಗೆ ಬೇಸಿಗೆಯಲ್ಲಿ ಭತ್ತದ ಬೆಳೆಯನ್ನೂ ಸಹ ರೈತರು ಬೆಳೆಯುತ್ತಾರೆ. ವೈಜ್ಞಾನಿಕ ಬಿತ್ತನೆ ವಿಧಾನಗಳನ್ನು ಬಳಸಿ, ರೈತರು ಸಂಸ್ಕರಿಸಿದ ಬೀಜಗಳನ್ನು ಬಿತ್ತೆನೆ ಮಾಡುವ ಮೂಲಕ ಬೇಸಿಗೆಯಲ್ಲಿ ಬೆಳೆಯಲಾರಂಭಿಸಿದ್ದಾರೆ. ರೈತರು ಕಟಾವಿನ ನಂತರ ಅಧಿಕ ಇಳುವರಿ ನೀಡುವ ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದು, ಅದಕ್ಕೆ ಹೆಚ್ಚುವರಿ ತಂತ್ರಜ್ಞಾನಗಳನ್ನು ಬಳಸಲಾಗುವುದು. ಅದರಿಂದ ಅಧಿಕ ಉತ್ಪಾದನೆ ಮತ್ತು ಆರ್ಥಿಕವಾಗಿ ಲಾಭವಾಗುತ್ತದೆ.
2021ರ ಜನವರಿಯಲ್ಲಿ ಮಾರ್ಗಸೂಚಿ ಅಭಿವೃದ್ಧಿಪಡಿಸುವ ಸಲುವಾಗಿ ಜೈದ್ ರಾಷ್ಟ್ರೀಯ ಸಮಾವೇಶ ನಡೆಯಿತು. ಅಲ್ಲಿ ರಾಜ್ಯಗಳೊಂದಿಗೆ ಸವಾಲುಗಳು, ಸಂಭವನೀಯತೆಗಳು ಮತ್ತು ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಲಾಯಿತು. ಆನಂತರ ಉತ್ಪಾದನೆಯನ್ನು ಗರಿಷ್ಠಗೊಳಿಸಲು ಸಕಾಲದಲ್ಲಿ ಬೀಜ ಮತ್ತು ರಸಗೊಬ್ಬರ ಸಂಗ್ರಹ ಮತ್ತಿತರ ಅಗತ್ಯತೆಗಳನ್ನು ಲಭ್ಯವಾಗುವಂತೆ ಮಾಡುವುದರ ಜೊತೆಗೆ ಅಗತ್ಯ ಸಿಬ್ಬಂದಿ ನಿಯೋಜಿಸುವುದನ್ನು ಖಾತ್ರಿಪಡಿಸಲಾಯಿತು. ತಾಂತ್ರಿಕ ಬೆಂಬಲಕ್ಕಾಗಿ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳು (ಎಸ್ಎಯುಎಸ್) ಮತ್ತು ಕೃಷಿ ವಿಜ್ಞಾನ ಕೇಂದ್ರಗಳು(ಕೆವಿಕೆಗಳ) ನಿಕಟ ಸಮನ್ವಯವನ್ನು ಖಾತ್ರಿಪಡಿಸಲಾಯಿತು. ಇವು ತಳಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿವೆ.
***
(Release ID: 1713647)
Visitor Counter : 511