ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಬೃಹತ್ ಮತ್ತು ವೈದ್ಯಕೀಯ ಸಾಧನಗಳಿಗಾಗಿ ಉತ್ಪಾದಕತೆ ಆಧರಿತ ಸಹಾಯಧನ (ಪಿಎಲ್ಐ) ಯೋಜನೆಯ ಕಾರ್ಯಾಗಾರ ಉದ್ದೇಶಿಸಿ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವರ ಭಾಷಣ
Posted On:
20 APR 2021 5:57PM by PIB Bengaluru
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಸದಾನಂದ ಗೌಡ ಅವರು ಬೃಹತ್ ಔಷಧ ಮತ್ತು ವೈದ್ಯಕೀಯ ಸಾಧನಗಳಿಗಾಗಿ ʻಉತ್ಪಾದಕತೆ ಆಧರಿತ ಸಹಾಯಧನʼ (ಪಿಎಲ್ಐ) ಯೋಜನೆಯಡಿ ಆಯ್ದ ಅರ್ಜಿದಾರರ ಕಾರ್ಯಾಗಾರವನ್ನು ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ನೀತಿ ಆಯೋಗದ ಸಿಇಓ ಶ್ರೀ ಅಮಿತಾಬ್ ಕಾಂತ್, ಕಾರ್ಯದರ್ಶಿಗಳಾದ (ಔಷಧ) ಶ್ರೀಮತಿ ಎಸ್. ಅಪರ್ಣಾ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸದಾನಂದ ಗೌಡ ಅವರು, ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸುವಲ್ಲಿ ಔಷಧ ಮತ್ತು ವೈದ್ಯಕೀಯ ಸಾಧನ ವಲಯಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಿದರು. ಕೋವಿಡ್-19 ಸಾಂಕ್ರಾಮಿಕವು ವಿಶ್ವದ ಗಮನವನ್ನು ಭಾರತದತ್ತ ಸೆಳೆದಿದೆ. ಜೊತೆಗೆ, ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ಜಾಗತಿಕ ಮಟ್ಟದ ನಂಬಿಕಸ್ಥ ಪೂರೈಕೆದಾರನಾಗಿ ಅಗತ್ಯ ಸಮಯದಲ್ಲಿ ಸೇವೆಗೆ ಸನ್ನದ್ಧವಾಗುವ ಭಾರತದ ಸಾಮರ್ಥ್ಯವನ್ನು ವಿಶ್ವವು ಗುರುತಿಸಿದೆ ಎಂದು ಅವರು ಹೇಳಿದರು. ಭಾರತವನ್ನು ವೈದ್ಯಕೀಯ ಸಾಧನಗಳು ಮತ್ತು ರೋಗ ನಿರ್ಣಯಶಾಸ್ತ್ರದ (ಡೈಯಾಗ್ನೊಸ್ಟಿಕ್ಸ್) ಪ್ರಮುಖ ಕೇಂದ್ರ ಎಂದು ಅವರು ಬಣ್ಣಿಸಿದರು. ಭಾರತವು ತನ್ನ ಔಷಧ ಉತ್ಪನ್ನಗಳೊಂದಿಗೆ 200ಕ್ಕೂ ಹೆಚ್ಚು ದೇಶಗಳಿಗೆ ಸೇವೆ ಸಲ್ಲಿಸುತ್ತಿದೆ. ಭಾರತವು ಕೇವಲ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನು ಮಾತ್ರವಲ್ಲದೆ 'ಮೇಡ್ ಫಾರ್ ದಿ ವರ್ಲ್ಡ್' (ಜಗತ್ತಿಗಾಗಿ ತಯಾರಿಸಿದ) ಉತ್ಪನ್ನಗಳನ್ನು ಸಹ ತಯಾರಿಸಬಲ್ಲದು ಎಂಬ ವಿಶ್ವಾಸವನ್ನು ಮೂಡಿಸಿದೆ ಎಂದು ಅವರು ಹೇಳಿದರು.
ಕೋವಿಡ್-19 ಸಾಂಕ್ರಾಮಿಕವು ಔಷಧ ವಲಯದಲ್ಲಿ ಪೂರೈಕೆ ಸರಪಳಿಯ ಜಾಗತಿಕ ದೌರ್ಬಲ್ಯಗಳನ್ನು ಬೆಳಕಿಗೆ ತಂದಿದೆ ಎಂದು ಒತ್ತಿ ಹೇಳಿದ ಅವರು, ಔಷಧಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ʻಉತ್ಪಾದಕತೆ ಆಧರಿತ ಪ್ರೋತ್ಸಾಹ ಧನʼ ಯೋಜನೆಯನ್ನು ಔಷಧ ಇಲಾಖೆ ಪ್ರಾರಂಭಿಸಿತು ಎಂದರು. ಇದರ ಭಾಗವಾಗಿ, 6 ವರ್ಷಗಳಲ್ಲಿ 53 ʻಎಪಿಐʼ (ಸಕ್ರಿಯ ಔಷಧ ಕಚ್ಚಾವಸ್ತು) ಉತ್ಪಾದನೆಗೆ ₹6,940 ಕೋಟಿ ರೂ. ನಿಧಿಯನ್ನು ಮೀಸಲಿರಿಸಲಾಗಿದೆ. ಸಾಂಕ್ರಾಮಿಕ ರೋಗವು ಔಷಧಗಳ ಅಡಿಪಾಯವೆನಿಸಿದ ʻಎಪಿಐʼಗಳು ಮತ್ತು ʻಕೆಎಸ್ಎಂʼ(ಕೀ ಸ್ಟಾರ್ಟಿಂಗ್ ಮೆಟೀರಿಯಲ್) ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವ ಅವಕಾಶಗಳನ್ನೂ ತೆರೆದಿಟ್ಟಿದೆ ಎಂದು ಅವರು ಹೇಳಿದರು. ಫಾರ್ಮಾ ಮತ್ತು ವೈದ್ಯಕೀಯ ಸಾಧನ ವಲಯಕ್ಕೆ ʻಪಿಎಲ್ಐʼ ಯೋಜನೆಯಿಂದಾಗಿ ಔಷಧ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಒದಗಿಸಲು ಮತ್ತು ಅವುಗಳ ಲಭ್ಯತೆ ಹೆಚ್ಚಿಸಲು ನೆರವಾಗಲಿದೆ ಎಂದು ಹೇಳಿದರು.
ಪಿಎಲ್ಐ ಅಡಿಯಲ್ಲಿ ಅನುಮೋದನೆ ಪಡೆದ ಕಂಪನಿಗಳು ಸಾಧ್ಯವಾದಷ್ಟು ಬೇಗ ತಮ್ಮ ಉತ್ಪಾದನೆಯನ್ನು ಪ್ರಾರಂಭಿಸಬೇಕೆಂದು ಅವರು ಕರೆ ನೀಡಿದರು. ಉತ್ಪಾದನೆ ಎಷ್ಟು ಬೇಗ ಪ್ರಾರಂಭವಾಗುತ್ತದೆಯೋ ಅಷ್ಟು ತ್ವರಿತವಾಗಿ ಭಾರತವು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಸ್ಪರ್ಧಾತ್ಮಕ ದರದಲ್ಲಿ ಔಷಧ ಮತ್ತು ವೈದ್ಯಕೀಯ ಸಾಧನಗಳ ಉತ್ಪನ್ನಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ಕಾರ್ಯಾಗಾರವು ವಿಪುಲ ಅವಕಾಶಗಳು, ಅನನ್ಯ ಒಳನೋಟಗಳು ಮತ್ತು ಫಲಪ್ರದ ಚರ್ಚೆಗೆ ಅವಕಾಶಗಳನ್ನು ತೆರೆದಿಡುತ್ತದೆ. ಆ ಮೂಲಕ ಉದ್ಯಮದ ಪ್ರಗತಿ, ಹೊಸಶೋಧ ಮತ್ತು ಯಶಸ್ಸಿಗೆ ಹಾದಿಯನ್ನು ರೂಪಿಸುತ್ತದೆ. ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಔಷಧಗಳು ಮತ್ತು ವೈದ್ಯಕೀಯ ಸಾಧನಗಳು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಮ್ಮ ಗುರಿಯನ್ನು ತಲುಪಲು ಅನುವು ಮಾಡಿಕೊಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀ ಅಮಿತಾಬ್ ಕಾಂತ್ ಅವರು ಮಾತನಾಡಿ, "ಪಿಎಲ್ಐ ಯೋಜನೆಯು ಭಾರತೀಯ ಔಷಧ ಮತ್ತು ವೈದ್ಯಕೀಯ ಸಾಧನಗಳ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುವ ನಿರೀಕ್ಷೆಯಿದೆ,ʼʼ ಎಂದರು. ಜೊತೆಗೆ ಮೂಲ ಸಾಮರ್ಥ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಆಕರ್ಷಿಸಲು; ದಕ್ಷತೆಯನ್ನು ಕಾಯ್ದುಕೊಳ್ಳಲು; ರಫ್ತು ಹೆಚ್ಚಳಕ್ಕೆ ಮತ್ತು ಭಾರತವನ್ನು ಜಾಗತಿಕ ಪೂರೈಕೆ ಸರಪಳಿಯ ಅವಿಭಾಜ್ಯ ಅಂಗವಾಗಿಸಲು ಈ ಯೋಜನೆ ನೆರವಾಗುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು.
***
(Release ID: 1713229)
Visitor Counter : 253