ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ʻಮಿಷನ್ ಕೋವಿಡ್ ಸುರಕ್ಷಾʼ ಯೋಜನೆ ಅಡಿಯಲ್ಲಿ ಕೋವಾಕ್ಸಿನ್ ಉತ್ಪಾದನಾ ಸಾಮರ್ಥ್ಯದ ಹೆಚ್ಚಳ

Posted On: 16 APR 2021 5:01PM by PIB Bengaluru

ದೇಶೀಯವಾಗಿ ಕೋವಿಡ್ ಲಸಿಕೆಗಳ ಅಭಿವೃದ್ಧಿ ಮತ್ತು ಉತ್ಪಾದನೆಯ ವೇಗವರ್ಧನೆಗಾಗಿ ʻಆತ್ಮನಿರ್ಭರ ಭಾರತ್ 3.0ʼ ಅಡಿಯಲ್ಲಿ ʻಮಿಷನ್ ಕೋವಿಡ್ ಸುರಕ್ಷಾʼ ಯೋಜನೆಯನ್ನು ಭಾರತ ಸರಕಾರ ಘೋಷಿಸಿದೆ. ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. 

ಈ ಯೋಜನೆ ಅಡಿಯಲ್ಲಿ, ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು ಉತ್ಪಾದನೆ ಹೆಚ್ಚಳಕ್ಕಾಗಿ ಲಸಿಕೆ ತಯಾರಿಕಾ ಘಟಕಗಳಿಗೆ ಅನುದಾನದ ರೂಪದಲ್ಲಿ ಹಣಕಾಸಿನ ನೆರವು ನೀಡುತ್ತಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ಲಸಿಕೆಯ ಪ್ರಸ್ತುತ ಉತ್ಪಾದನಾ ಸಾಮರ್ಥ್ಯವನ್ನು 2021ರ ಮೇ-ಜೂನ್ ವೇಳೆಗೆ ದ್ವಿಗುಣಗೊಳಿಸಲಾಗುವುದು ಮತ್ತು ನಂತರ ಜುಲೈ - ಆಗಸ್ಟ್ 2021ರ ವೇಳೆಗೆ ಸುಮಾರು 6-7 ಪಟ್ಟು ಹೆಚ್ಚಿಸಲಾಗುವುದು. ಅಂದರೆ 2021ರ ಏಪ್ರಿಲ್‌ನಲ್ಲಿ 1 ಕೋಟಿಯಷ್ಟಿರುವ ಲಸಿಕೆ ಉತ್ಪಾದನಾ ಪ್ರಮಾಣವನ್ನು ಜುಲೈ- ಆಗಸ್ಟ್ ವೇಳೆಗೆ 6-7 ಕೋಟಿಗೆ ಹೆಚ್ಚಿಸಲಾಗುವುದು. ಈ ಉತ್ಪಾದನಾ ಪ್ರಮಾಣ ಸೆಪ್ಟೆಂಬರ್ 2021ರ ವೇಳೆಗೆ ಮಾಸಿಕ ಸುಮಾರು 10 ಕೋಟಿ ಡೋಸ್ ಗಳಿಗೆ ತಲುಪುವ ನಿರೀಕ್ಷೆಯಿದೆ.

ಕೆಲವು ವಾರಗಳ ಹಿಂದೆ, ಸಚಿವ ತಂಡಗಳು ಭಾರತದ 2 ಮುಖ್ಯ ಲಸಿಕೆ ತಯಾರಕರ ತಾಣಗಳಿಗೆ ಭೇಟಿ ನೀಡಿ, ಉತ್ಪಾದನೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಕುರಿತು ತಮ್ಮ ಮಾಹಿತಿ ಪಡೆದಿವೆ. ಈ ಅವಧಿಯಲ್ಲಿ, ಲಸಿಕೆ ತಯಾರಕರೊಂದಿಗೆ ಚರ್ಚಿಸಲಾಗುತ್ತಿರುವ ಯೋಜನೆಗಳ ಕುರಿತು ವ್ಯಾಪಕ ಪರಿಶೀಲನೆಗಳು ಮತ್ತು ಕಾರ್ಯಸಾಧ್ಯತಾ ಅಧ್ಯಯನಗಳು ನಡೆದಿವೆ.

ಈ ಸಾಮರ್ಥ್ಯ ವರ್ಧನೆ ಯೋಜನೆಯ ಭಾಗವಾಗಿ, ಅಗತ್ಯ ಮೂಲಸೌಕರ್ಯ ಮತ್ತು ತಂತ್ರಜ್ಞಾನ ನವೀಕರಣದೊಂದಿಗೆ ಹೈದರಾಬಾದ್ ನ ʻಭಾರತ್ ಬಯೋಟೆಕ್ ಲಿಮಿಟೆಡ್ʼ ಮತ್ತು ಇತರ ಸಾರ್ವಜನಿಕ ವಲಯದ ಸಂಸ್ಥೆಗಳ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಭಾರತ್ ಬಯೋಟೆಕ್‌ನ ಹೊಸ ಬೆಂಗಳೂರು ಘಟಕಕ್ಕೆ ಭಾರತ ಸರಕಾರದಿಂದ ಅನುದಾನ ರೂಪದಲ್ಲಿ ಸುಮಾರು 65 ಕೋಟಿ ರೂ.ಗಳ ಹಣಕಾಸಿನ ನೆರವು ನೀಡಲಾಗುತ್ತಿದ್ದು, ಲಸಿಕೆ ಉತ್ಪಾದನೆ ಹೆಚ್ಚಳಕ್ಕಾಗಿ ಈ ಘಟಕದ ಗುರಿಯನ್ನು ಪುನಾರಚನೆ ಮಾಡಲಾಗುತ್ತಿದೆ.

ಲಸಿಕೆ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು 3 ಸಾರ್ವಜನಿಕ ವಲಯದ ಕಂಪನಿಗಳಿಗೆ ಸಹ ನೆರವು ನೀಡಲಾಗುತ್ತಿದೆ.

• ʻಹಾಫ್ಕೈನ್ ಬಯೋಫಾರ್ಮಾಸ್ಯುಟಿಕಲ್ ಕಾರ್ಪೊರೇಶನ್ ಲಿಮಿಟೆಡ್ʼ, ಮುಂಬೈ - ಇದು ಮಹಾರಾಷ್ಟ್ರ ಸರಕಾರದ ಅಡಿಯಲ್ಲಿರುವ ರಾಜ್ಯ ಸಾರ್ವಜನಿಕ ವಲಯದ ಉದ್ದಿಮೆಯಾಗಿದೆ. ಈ ಘಟಕವನ್ನು ಉತ್ಪಾದನೆಗೆ ಸಜ್ಜುಗೊಳಿಸಲು ಭಾರತ ಸರಕಾರದಿಂದ ಅನುದಾನದ ರೂಪದಲ್ಲಿ ಸುಮಾರು 65 ಕೋಟಿ ರೂ.ಗಳ ಹಣಕಾಸಿನ ನೆರವು ನೀಡಲಾಗುವುದು. ಈ ಕಾರ್ಯವನ್ನು ಪೂರ್ಣಗೊಳಿಸಲು ʻಹಾಫ್ಕೈನ್ ಬಯೋಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ʼ ಸುಮಾರು 12 ತಿಂಗಳ ಕಾಲಾವಕಾಶ ಕೇಳಿತ್ತು. ಆದರೆ, ತುರ್ತಾಗಿ 6 ತಿಂಗಳಲ್ಲೇ ಕೆಲಸವನ್ನು ಪೂರ್ಣಗೊಳಿಸಲು ಕೇಂದ್ರ ಸರಕಾರ ಸಂಸ್ಥೆಗೆ ಸೂಚಿಸಿದೆ. ಈ ಘಟಕವು ಒಮ್ಮೆ ಕಾರ್ಯಾರಂಭ ಮಾಡಿದ ನಂತರ ತಿಂಗಳಿಗೆ 20 ದಶಲಕ್ಷ ಡೋಸ್ ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರಲಿದೆ. 

• ರಾಷ್ಟ್ರೀಯ ಡೈರಿ ಡೆವಲಪ್‌ಮೆಂಟ್ ಬೋರ್ಡ್ ಅಡಿಯ, ಹೈದರಾಬಾದ್ನ ʻಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ʼ (ಐಐಎಲ್), ಮತ್ತು ಬುಲಂದ್ಶಹರ್ನಲ್ಲಿರುವ ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಅಡಿಯ ʻಭಾರತ್ ಇಮ್ಯುನೊಲಾಜಿಕಲ್ಸ್ ಅಂಡ್ ಬಯೋಲಾಜಿಕಲ್ಸ್ ಲಿಮಿಟೆಡ್ (ಬಿಬಿಸಿಒಎಲ್)ʼ ಸಂಸ್ಥೆಗಳಿಗೂ 2021ರ ಆಗಸ್ಟ್ - ಸೆಪ್ಟೆಂಬರ್ ವೇಳೆಗೆ ತಿಂಗಳಿಗೆ 10-15 ದಶಲಕ್ಷ ಡೋಸ್ ತಯಾರಿಕೆಗೆ ಘಟಕಗಳನ್ನು ಸ್ಜುಗೊಳಿಸಲು ಭಾರತ ಸರಕಾರ ನೆರವನ್ನು ಒದಗಿಸಿದೆ.

***


(Release ID: 1712311) Visitor Counter : 324