ಹಣಕಾಸು ಸಚಿವಾಲಯ

2021ರ ಏಪ್ರಿಲ್ 6 ರಂದು ಬ್ರಿಕ್ಸ್ ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ ಗಳ ಮೊದಲ ಸಭೆಯ ಆತಿಥ್ಯವಹಿಸಿದ ಭಾರತ

Posted On: 06 APR 2021 6:31PM by PIB Bengaluru

 ಭಾರತ 2021ರ ಏಪ್ರಿಲ್ 6 ರಂದು ಬ್ರಿಕ್ಸ್ ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ ಗಳ ಮೊದಲ ವರ್ಚುವಲ್ ಸಭೆಯ ಆತಿಥ್ಯ ವಹಿಸಿತ್ತು. ಸಭೆಯ ಜಂಟಿ ಅಧ್ಯಕ್ಷತೆಯನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಶ್ರೀ ಶಕ್ತಿಕಾಂತ್ ದಾಸ್ ವಹಿಸಿದ್ದರು. ಬ್ರಿಕ್ಸ್ ರಾಷ್ಟ್ರಗಳ ಕೇಂದ್ರ ಬ್ಯಾಂಕ್ ಗವರ್ನರ್ ಗಳು ಹಾಗೂ ಹಣಕಾಸು ಸಚಿವರುಗಳು ಸಭೆಯಲ್ಲಿ ಭಾಗವಹಿಸಿದ್ದರು.   

2021ರಲ್ಲಿ ಬ್ರಿಕ್ಸ್ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ನಿರಂತರ, ಸಮಗ್ರ ಮತ್ತು ಸಹಮತದ ಆಧಾರದಲ್ಲಿ ಅಂತರ ಬ್ರಿಕ್ಸ್ ಸಹಕಾರವನ್ನು ಬಲವರ್ಧನೆಗೊಳಿಸುವುದಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.   

 ಭಾರತ 2021ರಲ್ಲಿ ಅಧ್ಯಕ್ಷತೆ ವಹಿಸಿಕೊಂಡ ನಂತರ ನಡೆಸುತ್ತಿರುವ ಬ್ರಿಕ್ಸ್ ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ ಗಳ ಮೊದಲ ಸಭೆ ಇದಾಗಿದೆ. ಬ್ರಿಕ್ಸ್ ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ ಗಳು ಭಾರತ 2021ಕ್ಕೆ ನಿಗದಿಪಡಿಸಿರುವ ಹಣಕಾಸು ಸಹಕಾರ ಕಾರ್ಯಸೂಚಿಯ ಬಗ್ಗೆ ಚರ್ಚಿಸಿದರು. ಅದೆಂದರೆ ಜಾಗತಿಕ ಆರ್ಥಿಕ ಆಯಾಮ ಮತ್ತು ಕೋವಿಡ್-19 ಸಾಂಕ್ರಾಮಿಕಕ್ಕೆ ಪ್ರತಿಸ್ಪಂದನೆ, ನ್ಯೂ ಡೆವಲಪ್ಮೆಂಟ್ ಬ್ಯಾಂಕ್(ಎನ್ ಡಿಬಿ) ಚಟುವಟಿಕೆಗಳು, ಸಾಮಾಜಿಕ ಮೂಲಸೌಕರ್ಯ ಹಣಕಾಸು ಮತ್ತು ಡಿಜಿಟಲ್ ತಂತ್ರಜ್ಞಾನಗಳ ಬಳಕೆ, ಸುಂಕಕ್ಕೆ ಸಂಬಂಧಿಸಿದ ಸಹಕಾರ, ಐಎಂಎಫ್ ಸುಧಾರಣೆಗಳು, ಎಸ್ಎಂಇಗಳಿಗೆ ಫಿಂಟೆಕ್ ಮತ್ತು ಹಣಕಾಸು ಸೇರ್ಪಡೆ, ಬ್ರಿಕ್ಸ್ ಕ್ಷಿಪ್ರ ಮಾಹಿತಿ ಭದ್ರತಾ ಮಾರ್ಗ ಹಾಗೂ ಬ್ರಿಕ್ಸ್ ಬಾಂಡ್ ನಿಧಿ ಇವು ಸೇರಿವೆ. 2021ಕ್ಕೆ ಬ್ರಿಕ್ಸ್ ನ ಆದ್ಯತೆಗಳು ಮತ್ತು ಕಾರ್ಯಸೂಚಿಯ ಕುರಿತು ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಾತನಾಡಿ, ವಿಶೇಷವಾಗಿ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಮತ್ತು ಸಾಮಾನ್ಯವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಬ್ರಿಕ್ಸ್ ರಾಷ್ಟ್ರಗಳ ಆಶೋತ್ತರಗಳು ಮತ್ತು ಅಗತ್ಯಗಳನ್ನು ಪ್ರತಿಬಿಂಬಿಸುವ ಫಲಿತಾಂಶಗಳನ್ನು ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸಬೇಕು ಎಂದರು.  

ನೀತಿ ಬೆಂಬಲ ಮತ್ತು ಅಂತಾರಾಷ್ಟ್ರೀಯ ಸಮನ್ವಯತೆ ಹೆಚ್ಚಳದ ಮೂಲಕ ಕೋವಿಡ್-19 ಬಿಕ್ಕಟ್ಟು ಎದುರಿಸಲು ಬ್ರಿಕ್ಸ್ ಪ್ರತಿಸ್ಪಂದಿಸಿದ ಪ್ರಾಮುಖ್ಯ ಕುರಿತು ಹಣಕಾಸು ಸಚಿವರು ಒತ್ತಿ ಹೇಳಿದರು. ಭಾರತದಲ್ಲಿ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನ ಪ್ರಗತಿಯಲ್ಲಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಭಾರತ 84 ದೇಶಗಳಿಗೆ 64.5 ಮಿಲಿಯನ್ ಲಸಿಕೆಗಳನ್ನು ಪೂರೈಸಿದೆ ಎಂದು ಅವರು ಹೇಳಿದರು. ಸಾಮಾಜಿಕ ಮೂಲಸೌಕರ್ಯದ ಪ್ರಾಮುಖ್ಯ ಕುರಿತು ಮತ್ತು ಡಿಜಿಟಲ್ ತಂತ್ರಜ್ಞಾನದ ಬಳಕೆ ಕುರಿತು ಅವರು ಮಾತನಾಡಿದರು. ಖಾಸಗಿ ವಲಯದೊಂದಿಗೆ ಭಾಗಿದಾರಿಕೆ ಮಾಡಿಕೊಳ್ಳುವ ಕುರಿತ ಅಂಶಗಳ  ಕುರಿತು ಮಾತನಾಡಿದ ಅವರು, ವಿನೂತನ ಹಣಕಾಸು ಮಾದರಿಗಳನ್ನು ಅನ್ವೇಷಿಸಬೇಕು ಎಂದರು. ಪ್ರಧಾನಮಂತ್ರಿಗಳ ಆರೋಗ್ಯ ವಿಮಾ ಯೋಜನೆ, ಆರೋಗ್ಯ ರಕ್ಷಣಾ ಮೂಲಸೌಕರ್ಯ ಹೂಡಿಕೆ ವಲಯದಲ್ಲಿ ಪ್ರಮುಖ ಖಾಸಗಿ ಹೂಡಿಕೆಯನ್ನು ಆಕರ್ಷಿಸುವಲ್ಲಿ ಉತ್ತಮ ಫಲಿತಾಂಶ ಆಧರಿತ ಮಾದರಿಯಾಗಿದೆ. ಆ ಮೂಲಕ ಸಮಾಜದ ದುರ್ಬಲವರ್ಗದ ಪ್ರಜೆಗಳಿಗೆ ಉತ್ತಮ ಆರೋಗ್ಯ ರಕ್ಷಣಾ ಸೇವೆಗಳ ವಿಸ್ತರಣೆಯನ್ನು ಖಾತ್ರಿಪಡಿಸಿದೆ ಎಂದರು.  

 ಹಣಕಾಸು ಸಚಿವರು 2021ರ ಅವಧಿಯಲ್ಲಿ ನ್ಯೂ ಡೆವಲಪ್ ಮೆಂಟ್ ಬ್ಯಾಂಕ್ ನಿಂದ ಕೈಗೊಳ್ಳಲಿರುವ ವಿಷಯವಾರು ಆದ್ಯತೆಗಳ ಕುರಿತು ಹಾಗೂ ಸದಸ್ಯತ್ವ ವಿಸ್ತರಣೆ ವಿಚಾರ ಕುರಿತು ಮಾತನಾಡಿದರು. ಅಲ್ಲದೆ ಐಎಂಎಫ್ ನಲ್ಲಿ ಕೋಟಾ ಮರು ಪರಿಶೀಲನೆ ಕುರಿತಂತೆ ನಡೆಯಲಿರುವ 16ನೇ ಸಭೆಯ ವಿಷಯಗಳ ಕುರಿತು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಹೆಚ್ಚಿನ ಸಮನ್ವಯ ಅಗತ್ಯವಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.

****(Release ID: 1709998) Visitor Counter : 253