ಪ್ರಧಾನ ಮಂತ್ರಿಯವರ ಕಛೇರಿ
ಶ್ರೀಮದ್ ಭಗವದ್ಗೀತಾದ ಶ್ಲೋಕಗಳ ಮೂಲಪ್ರತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
Posted On:
09 MAR 2021 8:35PM by PIB Bengaluru
ಕಾರ್ಯಕ್ರಮದಲ್ಲಿ ನನ್ನೊಂದಿಗೆ ಹಾಜರಿರುವ ಜಮ್ಮು ಮತ್ತು ಕಾಶ್ಮೀರದ ಉಪರಾಜ್ಯಪಾಲ ಶ್ರೀ ಮನೋಜ್ ಸಿನ್ಹಾ ಜೀ, ದರ್ಮರಥ್ ಟ್ರಸ್ಟಿನ ಅಧ್ಯಕ್ಷ ಟ್ರಸ್ಟೀ ಡಾ. ಕರಣ್ ಸಿಂಗ್ ಜೀ, ಇತರ ಎಲ್ಲಾ ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ!
ಇಂದು ನಾವು ಶ್ರೀಮದ್ ಭಗವದ್ಗೀತಾದ 11 ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದ್ದು, ಇದರೊಂದಿಗೆ ಒಟ್ಟು 20 ವಿಶ್ಲೇಷಣೆಗಳು ಬಂದಂತಾಗುತ್ತವೆ. ಈ ಪವಿತ್ರ ಕಾರ್ಯದ ಹಿಂದೆ ದುಡಿದ ಎಲ್ಲಾ ವಿದ್ವಾಂಸರನ್ನು ಮತ್ತು ಇತರರನ್ನು ಅವರ ಪರಿಶ್ರಮಕ್ಕಾಗಿ ನಾನು ಗೌರವಪೂರ್ವಕವಾಗಿ ವಂದಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ. ನೀವು ಇಂತಹ ಜ್ಞಾನದ ಬೃಹತ್ ಭಂಡಾರವನ್ನು ಇಂದಿನ ಯುವ ಜನತೆಗೆ ಮತ್ತು ಬರಲಿರುವ ತಲೆಮಾರುಗಳಿಗೆ ಲಭ್ಯವಾಗುವಂತೆ ರೂಪಿಸುವ ಮೂಲಕ ದೊಡ್ಡ ಕೆಲಸ ಮಾಡಿದ್ದೀರಿ.
ನಾನು ನಿರ್ದಿಷ್ಟವಾಗಿ ಡಾ. ಕರಣ್ ಸಿಂಗ್ ಜೀ ಅವರನ್ನು ಅಭಿನಂದಿಸುತ್ತೇನೆ. ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ಸಾಕಾರಗೊಂಡಿದೆ. ನಾನು ಅವರನ್ನು ಭೇಟಿಯಾದಾಗೆಲ್ಲಾ ಜ್ಞಾನದ ಮತ್ತು ಸಂಸ್ಕೃತಿಯ ತೊರೆಯೇ ಅವರಿಂದ ಹರಿಯುತ್ತಿರುತ್ತದೆ. ನೀವು ಇಂತಹ ವ್ಯಕ್ತಿಗಳನ್ನು ಬಹಳ ಅಪರೂಪಕ್ಕೆ ಕಾಣಬಹುದು. ಇಂದು ಬಹಳ ಪ್ರಶಸ್ತ ದಿನ ಯಾಕೆಂದರೆ ಕರಣ್ ಸಿಂಗ್ ಜೀ ಅವರ ಜನ್ಮದಿನ ಇಂದು. ಮತ್ತು ಇದು ಒಂದು ರೀತಿ ಅವರ 90 ವರ್ಷದ ಸಾಂಸ್ಕೃತಿಕ ಪಯಣ. ನಾನವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ನಾನು ನಿಮಗೆ ದೀರ್ಘ ಆಯುಷ್ಯ ಮತ್ತು ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ. ಭಾರತೀಯ ತತ್ವಶಾಸ್ತ್ರದ ಮೇಲೆ ಡಾ. ಕರಣ್ ಸಿಂಗ್ ಜೀ ಅವರ ಕೆಲಸ ಮತ್ತು ಈ ಪವಿತ್ರ ಕಾರ್ಯದಲ್ಲಿ ಅವರ ಅರ್ಪಣಾ ಭಾವ ಭಾರತೀಯ ಶಿಕ್ಷಣದ ಮೇಲೆ ಸ್ಪಷ್ಟವಾದ ಪ್ರಭಾವ ಬೀರಿದೆ. ನಿಮ್ಮ ಪ್ರಯತ್ನಗಳು ಜಮ್ಮು –ಕಾಶ್ಮೀರದ ಗುರುತಿಸುವಿಕೆಯನ್ನು ಪುನಶ್ಚೇತನಗೊಳಿಸಿವೆ, ಅದು ಶತಮಾನಗಳಿಂದ ಇಡೀ ಭಾರತದ ವಿಚಾರ ಸಂಪ್ರದಾಯವನ್ನು ಪ್ರಭಾವಿಸಿತ್ತು. ಕಾಶ್ಮೀರದ ಭಟ್ಟಾ ಭಾಸ್ಕರ, ಅಭಿನವಗುಪ್ತಾ ಮತ್ತು ಆನಂದವರ್ಧನ ಸಹಿತ ಸಂಖ್ಯಾತೀತ ವಿದ್ವಾಂಸರು ಗೀತಾದ ರಹಸ್ಯಗಳನ್ನು ನಮಗೆ ತೆರೆದು ತೋರಿದ್ದಾರೆ. ಇಂದು ಆ ಶ್ರೇಷ್ಟ ಸಂಪ್ರದಾಯ ಮತ್ತೊಮ್ಮೆ ದೇಶದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ಸಿದ್ದವಾಗಿದೆ. ಇದು ಕಾಶ್ಮೀರಕ್ಕೆ ಹೆಮ್ಮೆಯ ಸಂಗತಿ ಹಾಗು ಇಡೀ ದೇಶಕ್ಕೂ ಹೆಮ್ಮೆಯ ಸಂಗತಿ.
ಸ್ನೇಹಿತರೇ,
ಒಂದು ಪವಿತ್ರ ಧರ್ಮ ಗ್ರಂಥದ ಪ್ರತೀ ಪದ್ಯಕ್ಕೆ ಕೂಡಾ ಬಂದಿರುವ ವಿವಿಧ ವಿಶ್ಲೇಷಣೆಗಳು ಮತ್ತು ಹಲವು ಅನುಭಾವಿಗಳ ಅಭಿವ್ಯಕ್ತಿಗಳು ಗೀತಾದ ಆಳವನ್ನು ಸಂಕೇತಿಸುತ್ತವೆ. ಇದರ ಮೇಲೆ ಸಾವಿರಾರು ವಿದ್ವಾಂಸರು ತಮ್ಮ ಇಡೀ ಜೀವನವನ್ನೇ ವಿನಿಯೋಗಿಸಿದ್ದಾರೆ. ಇದು ಭಾರತದ ತಾತ್ವಿಕ ಸ್ವಾತಂತ್ರ್ಯದ ಮತ್ತು ಸಹಿಷ್ಣು ಮನೋಭಾವದ ಸಂಕೇತ. ಇದು ಪ್ರತಿಯೊಬ್ಬರೂ ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಕೆಲವರಿಗೆ ಗೀತಾ ಎಂದರೆ ಜ್ಞಾನದ ಸಂಪುಟ, ಇತರರಿಗೆ ಇದು “ಸಾಂಖ್ಯ”.ಧರ್ಮಗ್ರಂಥ. ಕೆಲವರಿಗೆ ಇದು ಯೋಗದ ಮೂಲ, ಇನ್ನು ಕೆಲವರಿಗೆ ಇದು ಕರ್ಮದ ಪಾಠ. ಈಗ ನಾನು ಗೀತಾವನ್ನು ನೋಡಿದಾಗ ಇದು ಅತೀಂದ್ರಿಯ ಮಾದರಿಯಂತೆ ಕಾಣುತ್ತದೆ. ನಾವು 11 ನೇ ಅಧ್ಯಾಯದಲ್ಲಿ मम देहे गुडाकेश यच्च अन्यत् द्रष्टुम इच्छसि। ಎಂಬುದನ್ನು ಕಾಣುತ್ತೇವೆ. ಇದರರ್ಥ ನಿನಗೆ ನನ್ನಲ್ಲಿ ಏನನ್ನು ಕಾಣಬೇಕೆಂದಿದೆಯೋ ಅದನ್ನು ನೀನು ಕಾಣಬಹುದು. ನೀನು ಪ್ರತೀ ಚಿಂತನೆಯನ್ನು ಮತ್ತು ಶಕ್ತಿಯನ್ನು ನೋಡಬಹುದು.
ಸ್ನೇಹಿತರೇ,
ಗೀತಾದ ಕಾಸ್ಮಿಕ್ ರೂಪ ನಮ್ಮ ದೇಶಕ್ಕೆ ಎಲ್ಲ ಸಂದರ್ಭಗಳಲ್ಲಿಯೂ ಮಾರ್ಗದರ್ಶನ ಮಾಡಿದೆ. ಮಹಾಭಾರತದಿಂದ ಹಿಡಿದು ಸ್ವಾತಂತ್ರ್ಯದ ಹೋರಾಟದವರೆಗೆ ಅದು ಪ್ರಭಾವ ಬೀರಿದೆ. ನೀವು ನೋಡಿ, ದೇಶವನ್ನು ಏಕತ್ರಗೊಳಿಸಿದ ಆದಿ ಶಂಕರಾಚಾರ್ಯರು ಗೀತಾವನ್ನು ಆಧ್ಯಾತ್ಮಿಕ ಪ್ರಜ್ಞೆಯಾಗಿ ನೋಡಿದರು. ರಾಮಾನುಜಾಚಾರ್ಯರಂತಹ ಸಂತರು ಗೀತಾವನ್ನು ಆಧ್ಯಾತ್ಮಿಕ ಜ್ಞಾನದ ಅಭಿವ್ಯಕ್ತಿಯಾಗಿ ವಿಶ್ಲೇಷಣೆ ಮಾಡಿದರು. ಸ್ವಾಮೀ ವಿವೇಕಾನಂದ ಜೀ ಅವರಿಗೆ ಗೀತಾವು ಅಚಲ ಶ್ರದ್ಧೆಯ ಮತ್ತು ಅಪರಿಮಿತ ವಿಶ್ವಾಸದ ಮೂಲ ಆಗಿತ್ತು. ಶ್ರೀ ಅರಬಿಂದೋ ಅವರಿಗೆ ಗೀತಾವು ಜ್ಞಾನ ಮತ್ತು ಮಾನವತೆಯ ನೈಜ ಸಂಕಲನವಾಗಿತ್ತು. ಗೀತಾವು ಮಹಾತ್ಮಾ ಗಾಂಧಿ ಅವರ ಕಷ್ಟದ ದಿನಗಳಲ್ಲಿ ಬೆಳಕು ಬೀರುವ ಸಾಧನವಾಗಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಶ ಭಕ್ತಿ ಮತ್ತು ಶೌರ್ಯಕ್ಕೆ ಪ್ರೇರಣೆ ನೀಡಿತ್ತು. ಬಾಲ ಗಂಗಾಧರ ತಿಲಕರು ವಿಶ್ಲೇಷಣೆ ಮಾಡಿದ ಗೀತಾದಿಂದಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಬಲ ಮತ್ತು ಶಕ್ತಿ ದಕ್ಕಿತು . ಈ ಪಟ್ಟಿ ಬಹಳ ದೊಡ್ಡದಿದೆ, ಹೇಳಲು ಹಲವಾರು ಗಂಟೆಗಳು ಕೂಡಾ ಸಾಕಾಗಲಾರವು. ಈಗ ದೇಶವು ಸ್ವಾತಂತ್ರ್ಯದ 75 ನೇ ವರ್ಷವನ್ನಾಚರಿಸುತ್ತಿರುವಾಗ, ನಾವೆಲ್ಲರೂ ಗೀತಾದ ಈ ಆಯಾಮವನ್ನು ದೇಶದೆದುರು ಮಂಡಿಸಬೇಕು. ನಾವು ಗೀತಾವು ಹೇಗೆ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ, ಸ್ವಾತಂತ್ರ್ಯ ಹೋರಾಟಗಾರರಿಗೆ ದೇಶಕ್ಕಾಗಿ ತ್ಯಾಗ ಮಾಡುವ ಧೈರ್ಯ ಮತ್ತು ಶಕ್ತಿಯನ್ನು ನೀಡಿತು ಹಾಗು ಗೀತಾವು ಹೇಗೆ ದೇಶವನ್ನು ಆಧ್ಯಾತ್ಮಿಕವಾಗಿ ಏಕೀಕೃತಗೊಳಿಸಿತು ಎಂಬುದನ್ನು ನಮ್ಮ ಯುವ ತಲೆಮಾರಿಗೆ ತಿಳಿಸಲು ನಾವು ಸಂಶೋಧನೆ ನಡೆಸಬೇಕು ಮತ್ತು ಬರೆಯಬೇಕು.
ಸ್ನೇಹಿತರೇ,
ಗೀತಾವು ಭಾರತೀಯ ಒಗ್ಗಟ್ಟಿನ ಪಠ್ಯ ಮತ್ತು ಸೌಹಾರ್ದತೆಯ ಸ್ಪೂರ್ತಿ, ಯಾಕೆಂದರೆ ಗೀತಾ ಹೇಳುತ್ತದೆ “समम् सर्वेषु भूतेषु तिष्ठन्तम् परमेश्वरम्’ ಅಂದರೆ, ದೇವರು ಎಲ್ಲಾ ಜೀವಿಗಳ ಹೃದಯದಲ್ಲಿ ನೆಲೆಸಿರುತ್ತಾನೆ. ಮನುಷ್ಯನು ದೇವರು. ಗೀತಾವು ನಮ್ಮ ಜ್ಞಾನದ ರೀತಿಯನ್ನು ಮತ್ತು ಸಂಶೋಧನೆಯನ್ನು ಸಂಕೇತಿಸುತ್ತದೆ, ಯಾಕೆಂದರೆ ಗೀತಾ ಹೇಳುತ್ತದೆ ‘न हि ज्ञानेन सदृशम् पवित्रम् इह विद्यते’ ಅಂದರೆ ಜ್ಞಾನಕ್ಕಿಂತ ಪವಿತ್ರವಾದುದು ಯಾವುದೂ ಇಲ್ಲ. ಗೀತಾವು ಭಾರತದ ವೈಜ್ಞಾನಿಕ ಪ್ರಖರತೆಯ ಶಕ್ತಿಯ ಮೂಲ ಕೂಡಾ. ಯಾಕೆಂದರೆ ಗೀತಾದಲ್ಲಿ ಬರೆಯಲಾಗಿದೆ ज्ञानम् विज्ञानम् सहितम् यत् ज्ञात्वा मोक्ष्यसे अशुभात्’ ಅಂದರೆ ಜ್ಞಾನ ಮತ್ತು ವಿಜ್ಞಾನದ ಸಂಗಮ ಇದ್ದಾಗ, ಎಲ್ಲಾ ಸಮಸ್ಯೆಗಳೂ ಬಗೆ ಹರಿಯುತ್ತವೆ. ಗೀತಾವು ಶತಮಾನಗಳಿಂದ ಕರ್ಮದ ಬಗ್ಗೆ ಭಾರತವು ಹೊಂದಿರುವ ದೈವಿಕ ಭಾವನೆಯನ್ನು ಸಂಕೇತಿಸುತ್ತದೆ. ಯಾಕೆಂದರೆ ಗೀತಾವು ಹೇಳುತ್ತದೆ ‘योगः कर्मसु कौशलम्’ ಅಂದರೆ ಭಕ್ತಿ ಎಂದರೆ ಕರ್ತವ್ಯಗಳನ್ನು ದಕ್ಷತೆಯಿಂದ ಮಾಡುವುದು.
ಸ್ನೇಹಿತರೇ,
ಗೀತಾವು ಧಾರ್ಮಿಕ ಕೃತಿ. ಅದು ‘न अनवाप्तम् अवाप्तव्यम् वर्त एव च कर्मणि’ ಎಂದು ಘಂಟಾಘೋಷವಾಗಿ ಹೇಳಿದೆ. ಅಂದರೆ, ದೇವರು ಎಲ್ಲಾ ಲಾಭ ಮತ್ತು ನಷ್ಟಗಳಿಂದ ಮತ್ತು ಅಸೆಗಳಿಂದ ಮುಕ್ತನಾಗಿರುವನು ಮತ್ತು ಕರ್ಮವಿಲ್ಲದೆ ಇರಲಾರನು. ಗೀತ ಹೇಳುತ್ತದೆ ಯಾರೇ ಆದರೂ ಕರ್ಮ ಮಾಡದೆ ಬದುಕುವುದು ಸಾಧ್ಯವಿಲ್ಲ. ನಾವು ಕರ್ಮದಿಂದ ಮುಕ್ತರಾಗಲಾರೆವು. ಈಗ ನಾವು ನಮ್ಮ ಕೃತ್ಯಗಳಿಗೆ ಯಾವ ದಿಕ್ಕು ನೀಡಬೇಕು ಎಂಬುದನ್ನು ನಿರ್ಧರಿಸುವುದು ನಮ್ಮ ಜವಾಬ್ದಾರಿ. ಗೀತಾವು ನಮಗೆ ದಾರಿಯನ್ನು ತೋರಿಸುತ್ತದೆ ಮತ್ತು ನಮ್ಮ ಮೇಲೆ ಯಾವುದನ್ನೂ ಹೇರುವುದಿಲ್ಲ. ಗೀತಾವು ಅರ್ಜುನನ ಮೇಲೂ ಯಾವುದೇ ಆದೇಶವನ್ನು ಜಾರಿ ಮಾಡುವುದಿಲ್ಲ.ಮತ್ತು ಈಗ ಡಾಕ್ಟರ್ (ಕರಣ ಸಿಂಗ್ ) ಸಾಹೇಬ್ ಹೇಳುತ್ತಿದ್ದರು ಗೀತಾ ಬೋಧಿಸುವುದಿಲ್ಲ ಎಂದು. ಇಡೀ ಗೀತೆಯನ್ನು ಬೋಧಿಸಿದ ಬಳಿಕ ಕೊನೆಯ ಅಧ್ಯಾಯದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಹೇಳುತ್ತಾರೆ ‘यथा इच्छसि तथा कुरु’. ಅಂದರೆ ನಾನು ಹೇಳಬೇಕಾದುದನ್ನು ಹೇಳಿದ್ದೇನೆ, ಈಗ ನೀನು ನಿನಗೆ ಸರಿ ಕಂಡದ್ದನ್ನು ಮಾಡು. ಶ್ರೀಕೃಷ್ಣನಂತಹ ಉದಾರವಾದಿ ಚಿಂತಕ ಬೇರೆ ಯಾರೂ ಇರಲಾರರು.ಕರ್ಮದಿಂದ ಮುಕ್ತಿ ಮತ್ತು ಚಿಂತನೆ ಭಾರತದ ಪ್ರಜಾಪ್ರಭುತ್ವದ ನೈಜ ಹೆಗ್ಗುರುತು. ನಮ್ಮ ಪ್ರಜಾಪ್ರಭುತ್ವ ನಮ್ಮ ಚಿಂತನೆಗೆ ಸ್ವಾತಂತ್ರ್ಯವನ್ನು ನೀಡುತ್ತದೆ, ಕೆಲಸದ ಸ್ವಾತಂತ್ರ್ಯ, ನಮ್ಮ ಜೀವನದ ಎಲ್ಲಾ ಹಂತಗಳಲ್ಲಿಯೂ ಸಮಾನ ಹಕ್ಕುಗಳನ್ನು ಒದಗಿಸುತ್ತದೆ. ನಾವು ಈ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನದ ಕಸ್ಟೋಡಿಯನ್ ಗಳಾಗಿರುವ ಪ್ರಜಾಸತ್ತಾತ್ಮಕ ಸಂಸ್ಥೆಗಳಿಂದ ಪಡೆಯುತ್ತೇವೆ. ಆದುದರಿಂದ ನಾವು ನಮ್ಮ ಹಕ್ಕುಗಳ ಬಗ್ಗೆ ಮಾತನಾಡುವಾಗ ನಾವು ನಮ್ಮ ಪ್ರಜಾಸತ್ತಾತ್ಮಕ ಕರ್ತವ್ಯಗಳನ್ನು ನೆನಪಿಸಿಕೊಳ್ಳಬೇಕು. ಇಂದು ಕೆಲವು ಜನರು ಸಾಂವಿಧಾನಿಕ ಸಂಸ್ಥೆಗಳು ಮತ್ತು ಅವುಗಳ ವಿಶ್ವಾಸಾರ್ಹತೆಯನ್ನು ಹೇಗೆ ಘಾಸಿಗೊಳಿಸಬಹುದು ಎಂಬುದನ್ನು ಚಿಂತಿಸುವುದರಲ್ಲಿಯೇ ವ್ಯಸ್ತರಾಗಿದ್ದಾರೆ!. ನಮ್ಮ ಸಂಸತ್ತಿನ ಮೇಲೆ, ನ್ಯಾಯಾಂಗದ ಮೇಲೆ, ಮತ್ತು ರಾಜಕೀಯ ಹಿತಾಸಕ್ತಿಗಳಿಗಾಗಿ ಸೇನೆಯ ಮೇಲೆ ಕೂಡಾ ದಾಳಿಯ ಯತ್ನಗಳು ನಡೆದಿವೆ. ಈ ರೀತಿಯ ವರ್ತನೆಯಿಂದ ದೇಶಕ್ಕೆ ಬಹಳಷ್ಟು ಹಾನಿಯಾಗಿದೆ. ಇಂತಹ ವ್ಯಕ್ತಿಗಳು ದೇಶದ ಮುಖ್ಯವಾಹಿನಿಯನ್ನು ಪ್ರತಿನಿಧಿಸುತ್ತಿಲ್ಲ ಎಂಬುದು ಬಹಳ ಸಮಾಧಾನದ ಸಂಗತಿ. ಇಂದು ದೇಶವು ತನ್ನ ಕರ್ತವ್ಯಗಳನ್ನು ನಿರ್ಧಾರಗಳನ್ನಾಗಿಸಿ ಮುನ್ನಡೆಯುತ್ತಿದೆ. ದೇಶವು ಇಂದು ಗ್ರಾಮಗಳಲ್ಲಿಯ ಜೀವನವನ್ನು, ಬಡವರ ಜೀವನವನ್ನು, ರೈತರು, ಕಾರ್ಮಿಕರು, ದಲಿತರು, ಹಿಂದುಳಿದವರ ಬದುಕನ್ನು ಬದಲಾಯಿಸಲು ಪ್ರಯತ್ನ ಮಾಡುತ್ತಿದೆ.ಮತ್ತು ಸಮಾಜದ ಪ್ರತಿಯೊಬ್ಬ ಅವಕಾಶ ವಂಚಿತ ವ್ಯಕ್ತಿಯ ಸೇವೆಯನ್ನು ಗೀತಾದಲ್ಲಿ ಹೇಳಿದ ಮಂತ್ರದಂತೆ “ಕರ್ಮ ಯೋಗ” ವನ್ನಾಗಿ ಮಾಡುತ್ತಿದೆ.
ಸ್ನೇಹಿತರೇ,
ಗೀತಾದ ಮೂಲಕ, ಭಾರತವು ಗಡಿಯಾಚೆಗಿನ ಇಡೀ ಮಾನವತೆಗೆ ಕಾಲಾತೀತವಾಗಿ ಸೇವೆಯನ್ನು ಮಾಡಿದೆ. ಗೀತಾವು ಇಡೀ ವಿಶ್ವಕ್ಕೆ, ಪ್ರತಿಯೊಬ್ಬ ಜೀವಿಗೆ ಶಾಸ್ತ್ರಗ್ರಂಥವಾಗಿದೆ. ಇದು ವಿಶ್ವದ ಬಹಳಷ್ಟು ಭಾಷೆಗಳಿಗೆ ಅನುವಾದವಾಗಿದೆ. ಬಹಳಷ್ಟು ದೇಶಗಳು ಇದರ ಮೇಲೆ ಸಂಶೋಧನೆ ಮಾಡುತ್ತಿವೆ. ಮತ್ತು ಜಗತ್ತಿನ ಹಲವಾರು ವಿದ್ವಾಂಸರು ಇದರೊಂದಿಗಿದ್ದಾರೆ. ಸ್ವಾರ್ಥ ರಹಿತ ಸೇವೆಯಂತಹ ಭಾರತದ ಆದರ್ಶಗಳನ್ನು ಜಗತ್ತಿಗೆ ಪರಿಚಯಿಸಿದ್ದು ಗೀತಾ. ಇಲ್ಲದಿದ್ದರೆ ಭಾರತದ ಸ್ವಾರ್ಥ ರಹಿತ ಸೇವೆ, ನಮ್ಮ ವಿಶ್ವ ಸಹೋದರತ್ವದ ಸ್ಪೂರ್ತಿ ಹಲವರಿಗೆ ಆಶ್ಚರ್ಯದ ಸಂಗತಿಯಾಗಿರುತ್ತಿತ್ತು.
ನೀವು ನೋಡಿ, ಕೊರೊನಾದಂತಹ ಜಾಗತಿಕ ಸಾಂಕ್ರಾಮಿಕ ಬಾಧಿಸುವಾಗ, ಇಡೀ ವಿಶ್ವಕ್ಕೆ ಈ ಹಾವಳಿಯ ಬಗ್ಗೆ ತಿಳಿದಿರಲಿಲ್ಲ. ಅದು ಗುರುತಿಲ್ಲದ ವೈರಿಯಾಗಿತ್ತು. ವಿಶ್ವವು ಸಿದ್ಧವಾಗಿರಲಿಲ್ಲ. ಮಾನವರು ಸಿದ್ಧರಾಗಿರಲಿಲ್ಲ ಮತ್ತು ಭಾರತಕ್ಕೂ ಇದೇ ಸ್ಥಿತಿ ಬಂದಿತ್ತು. ಆದರೆ ಭಾರತವು ಪರಿಸ್ಥಿತಿಯನ್ನು ನಿಭಾಯಿಸಿತು. ಜಗತ್ತಿಗೆ ಏನು ಸೇವೆ ನೀಡಬಹುದೋ, ಅದರಲ್ಲಿ ಭಾರತ ಹಿಂದೆ ಬೀಳಲಿಲ್ಲ. ಜಗತ್ತಿನಾದ್ಯಂತ ದೇಶಗಳಿಗೆ ಔಷಧಿ ಮತ್ತು ಅವಶ್ಯ ವಸ್ತುಗಳನ್ನು ಅದು ಒದಗಿಸಿತು. ಇಂದು, ಜಗತ್ತಿನಲ್ಲಿ ಹಲವು ದೇಶಗಳಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಅವಶ್ಯವಾದ ಸಂಪನ್ಮೂಲಗಳಿಲ್ಲ. ಭಾರತ ಆ ರಾಷ್ಟ್ರಗಳಿಗೆ ಲಸಿಕೆಯನ್ನು ಯಾವುದೇ ಶರತ್ತು ಇಲ್ಲದೆ ಒದಗಿಸಿದೆ. ಈ ಸೇವೆ ಅಲ್ಲಿನ ಜನತೆಗೆ ಸಂತೋಷದೊಂದಿಗೆ ಆಶ್ಚರ್ಯವನ್ನು ತಂದಿದೆ. ಅವರಿಗೆ ಇದೊಂದು ವಿಭಿನ್ನ ಅನುಭವ.
ಸ್ನೇಹಿತರೇ,
ಅದೇ ರೀತಿ, ಭಾರತವು ಬೇರೆ ಬೇರೆ ಭಾಗಗಳಲ್ಲಿ ಸಿಲುಕಿ ಹಾಕಿಕೊಂಡಿದ್ದ ವಿದೇಶೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಅವರವರ ದೇಶಗಳಿಗೆ ಕಳುಹಿಸಿಕೊಟ್ಟಿದೆ. ಭಾರತ ಇಲ್ಲಿ ಲಾಭ ಮತ್ತು ನಷ್ಟವನ್ನು ಲೆಕ್ಕ ಹಾಕಿಲ್ಲ. ಭಾರತವು ಮಾನವತೆಯ ಸೇವೆಯನ್ನು ಕರ್ಮ ಎಂದು ಭಾವಿಸಿ ಕರ್ತವ್ಯವನ್ನು ಮಾಡಿತು. ವಿಶ್ವದ ನಾಯಕರು ಭಾರತಕ್ಕೆ ಕರೆ ಮಾಡಿ ಭಾರತದ ಬೆಂಬಲ ಮತ್ತು ಸಹಾಯಕ್ಕಾಗಿ ಕೃತಜ್ಞತೆ ಸಲ್ಲಿಸಿದಾಗ, ನಾನು ಹೇಳುವುದು, ಭಾರತ ಇದು ಸಹಾಯ ಎಂದು ಭಾವಿಸುವುದಿಲ್ಲ, ಇದು ಭಾರತದ ಮೌಲ್ಯ ಎಂದು. ಭಾರತವು ಇದನ್ನು ದೊಡ್ಡಸ್ಥಿಕೆ ಎಂದು ಪರಿಗಣಿಸುವುದಿಲ್ಲ, ಆದರೆ ಮಾನವೀಯತೆ ಎಂದು ಪರಿಗಣಿಸುತ್ತದೆ. ಗೀತೆಯನ್ನು ಅನುಸರಿಸಿದಾಗ ಶತಮಾನಗಳಿಂದ ಮಾನವತೆಗೆ ಭಾರತ ಸಲ್ಲಿಸುತ್ತಿರುವ ಸ್ವಾರ್ಥರಹಿತ ಸೇವೆಯ ಸ್ಪೂರ್ತಿಯನ್ನು ಜಗತ್ತು ಅರಿಯುತ್ತದೆ. ಇದು ಗೀತಾ ನಮಗೆ ತಿಳಿಸಿಕೊಟ್ಟ ಸಂಗತಿ ‘कर्मणि एव अधिकारः ते मा फलेषु कदाचन’ ಅಂದರೆ ಯಾರೇ ಆದರೂ ಫಲಿತಾಂಶದ ಬಗ್ಗೆ ಚಿಂತಿಸದೆ ಸ್ವಾರ್ಥರಹಿತವಾಗಿ ಕೆಲಸ ಮಾಡಬೇಕು. ಗೀತಾವು ನಮಗೆ ತಿಳಿಸಿದೆ ಏನೆಂದರೆ ‘युक्तः कर्म फलं त्यक्त्वा शान्तिम् आप्नोति नैष्ठिकीम्’ ಇದರರ್ಥ ತನ್ನ ಕ್ರಿಯೆಯ ಫಲ ಏನು ಎಂಬುದರ ಬಗ್ಗೆ ಚಿಂತೆ ಮಾಡದೆ ಕರ್ತವ್ಯ ಮತ್ತು ಸೇವಾ ಮನೋಭಾವದಿಂದ ಕೆಲಸ ಮಾಡುವವನು ಆಂತರಿಕ ನೆಮ್ಮದಿಯನ್ನು ಹೊಂದಿರುತ್ತಾನೆ. ಇದು ಅತ್ಯಂತ ಶ್ರೇಷ್ಟವಾದ ಸಂತೋಷ ಮತ್ತು ಅತ್ಯಂತ ಶ್ರೇಷ್ಟವಾದ ಪ್ರಶಸ್ತಿ.
ಸ್ನೇಹಿತರೇ,
ಕೃಷ್ಣ ಭಗವಾನ್ ಮೂರು ಪ್ರವೃತ್ತಿಗಳನ್ನು ವಿವರಿಸಿದ್ದಾರೆ-ತಾಮಸ, ರಾಜಸ ಮತ್ತು ಸಾತ್ವಿಕ ಎಂದು ಗೀತಾದಲ್ಲಿ ಹೇಳಿದ್ದಾರೆ. ಗೀತಾದೊಂದಿಗೆ ಸಂಬಂಧ ಹೊಂದಿದ ಎಲ್ಲ ಜನರೂ ಇಲ್ಲಿ ನನ್ನೆದುರು ಇದ್ದಾರೆ. ಗೀತಾದ 17 ನೇ ಅಧ್ಯಾಯದಲ್ಲಿ ಈ ಬಗ್ಗೆ ಬಹಳಷ್ಟು ಶ್ಲೋಕಗಳು ಇರುವುದು ನಿಮ್ಮೆಲ್ಲರಿಗೂ ಗೊತ್ತಿದೆ.ನನ್ನ ಅನುಭವದ ಪ್ರಕಾರ ನಾವು ಈ ತಾಮಸ, ರಾಜಸ ಮತ್ತು ಸಾತ್ವಿಕ ಪ್ರವೃತ್ತಿಗಳನ್ನು ಸರಳವಾಗಿ ವಿವರಿಸುವುದಾದರೆ ಆಗ ತಾಮಸ ಎಂದರೆ ಇತರರಿಗೆ ಸೇರಿದ ಎಲ್ಲವೂ ತನಗೆ ಬೇಕು ಎಂಬುದು. ಇದು ಜಗತ್ತಿನಲ್ಲಿ ಯುದ್ಧಗಳಿಗೆ, ಕ್ಷೋಭೆ ಮತ್ತು ಒಳಸಂಚುಗಳಿಗೆ ಕಾರಣವಾಗುತ್ತದೆ. ನನ್ನದು ನನ್ನಲ್ಲಿ ಉಳಿಯಬೇಕು ಮತ್ತು ಇತರರಲ್ಲಿ ಇರುವುದು ಅವರಲ್ಲಿ ಇರಬೇಕು ಎನ್ನುವುದು ರಾಜಸ ಪ್ರವೃತ್ತಿ, ಇದು ಸಾಮಾನ್ಯ ವಿಶ್ವವ್ಯಾಪೀ ಚಿಂತನೆ. ಆದರೆ, ನಾನು ಏನು ಹೊಂದಿದ್ದೇನೋ ಅದು ಪ್ರತಿಯೊಬ್ಬರದೂ, ನನ್ನಲಿರುವ ಪ್ರತಿಯೊಂದೂ ಮಾನವ ಕುಲಕ್ಕೆ ಸೇರಿದ್ದು ಎಂಬುದು ಸಾತ್ವಿಕ ಪ್ರವೃತ್ತಿ. ಭಾರತವು ಸದಾ ತನ್ನ ಮಾನವೀಯ ಮೌಲ್ಯಗಳನ್ನು ರೂಪಿಸಿಕೊಂಡು ಬಂದಿದೆ ಮತ್ತು ಈ ಸಾತ್ವಿಕ ಪ್ರವೃತ್ತಿಯ ಅನ್ವಯ ಸಮಾಜದ ಗುಣಮಾನಕಗಳನ್ನು ರೂಪಿಸಿದೆ.
ನಮ್ಮ ಕುಟುಂಬಗಳಲ್ಲಿ ನಾವು ನಮ್ಮ ಮಕ್ಕಳಿಗೆ ಕಲಿಸಿಕೊಡುವ ಮೊದಲ ಸಂಗತಿ ಎಂದರೆ ನೀವು ಏನನ್ನು ಪಡೆಯುತ್ತೀರೋ ಅದನ್ನು ಪ್ರತಿಯೊಬ್ಬರ ಬಳಿ ಹಂಚಿಕೊಳ್ಳಿ ಮತ್ತು ಉಳಿದುದನ್ನು ನಿಮ್ಮಲ್ಲಿ ಇಟ್ಟುಕೊಳ್ಳಿ. ನಾವು ನಾನು, ನಮ್ಮದು, ನನಗೆ ಸೇರಿದ್ದು ಎಂಬುದರಲ್ಲಿ ನಂಬಿಕೆ ಇಟ್ಟಿಲ್ಲ ಬದಲು ಎಲ್ಲರದೂ ಎಂಬುದರಲ್ಲಿ ನಂಬಿಕೆ ಇಟ್ಟಿದ್ದೇವೆ. ಈ ಮೌಲ್ಯಗಳ ಕಾರಣದಿಂದಾಗಿ ಭಾರತವು ತನ್ನ ಸಂಪತ್ತು, ಜ್ಞಾನ ಮತ್ತು ಶೋಧನೆಗಳನ್ನು ಆರ್ಥಿಕ ನೆಲೆಯಲ್ಲಿ ಕಾಣಲಿಲ್ಲ. ಗಣಿತದ ಜ್ಞಾನ ಇರಲಿ, ಜವಳಿ, ಲೋಹವಿಜ್ಞಾನ, ವಿವಿಧ ರೀತಿಯ ವ್ಯಾಪಾರೋದ್ಯಮ ಅನುಭವಗಳಿರಲಿ ಅಥವಾ ಆಯುರ್ವೇದ ವಿಜ್ಞಾನ ಇರಲಿ, ನಾವು ಅವುಗಳನ್ನು ಮಾನವತೆಯ ಆಸ್ತಿ ಎಂದು ಪರಿಗಣಿಸಿದೆವು. ಆಧುನಿಕ ವೈದ್ಯ ವಿಜ್ಞಾನವು ಇಂದಿನ ರೂಪದಲ್ಲಿ ಅಭಿವೃದ್ಧಿ ಹೊಂದಿಲ್ಲದ ಕಾಲದಲ್ಲಿ ಶತಮಾನಗಳಿಂದ ಆಯುರ್ವೇದ ವಿಜ್ಞಾನ ಮಾನವತೆಗೆ ಸೇವೆ ಸಲ್ಲಿಸುತ್ತಾ ಬಂದಿದೆ. ಇಂದು ಕೂಡಾ ಜಗತ್ತು ಮತ್ತೆ ಗಿಡ ಮೂಲಿಕೆಗಳು ಮತ್ತು ನೈಸರ್ಗಿಕ ವಸ್ತುಗಳ ಬಗ್ಗೆ ಮಾತನಾಡುತ್ತಿದೆ. ಮತ್ತು ಚಿಕಿತ್ಸೆಗೆ ಬದಲು ರೋಗ ಬಾರದಂತೆ ತಡೆಯುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸುತ್ತಿದೆ. ವಿವಿಧ ದೇಶಗಳಲ್ಲಿ ಆಯುರ್ವೇದದ ಬಗ್ಗೆ ಸಂಶೋಧನೆಗಳು ನಡೆಯುತ್ತಿರುವಾಗ, ಭಾರತವು ಅದನ್ನು ಉತ್ತೇಜಿಸುತ್ತಿದೆ ಮತ್ತು ಸಹಾಯಹಸ್ತ ನೀಡುತ್ತಿದೆ. ಹಿಂದೆ ಕೂಡಾ ವಿದೇಶೀ ವಿದ್ಯಾರ್ಥಿಗಳು ನಮ್ಮ ಪ್ರಾಚೀನ ವಿಶ್ವವಿದ್ಯಾಲಯಗಳಿಗೆ ಬಂದಿದ್ದರು, ವಿದೇಶೀ ಪ್ರವಾಸಿಗರು ಬಂದಿದ್ದರು, ನಾವು ನಮ್ಮ ಜ್ಞಾನವನ್ನು ಹಂಚಿಕೊಂಡಿದ್ದೆವು, ವಿಜ್ಞಾನವನ್ನು ಸಾಕಷ್ಟು ಉದಾರವಾಗಿ ಪ್ರತಿಯೊಬ್ಬರ ಜೊತೆಗೂ ಹಂಚಿಕೊಂಡಿದ್ದೆವು. ನಾವು ಪ್ರಗತಿ ಸಾಧಿಸಿದಷ್ಟೂ , ಮಾನವರ ಪ್ರಗತಿಗೆ ಹೆಚ್ಚು ಹೆಚ್ಚು ಪ್ರಯತ್ನಗಳನ್ನು ನಾವು ಮಾಡುತ್ತಿರುತ್ತೇವೆ.
ಸ್ನೇಹಿತರೇ,
ನಮ್ಮ ಮೌಲ್ಯಗಳು ಮತ್ತು ನಮ್ಮ ಭೂತಕಾಲ ಮತ್ತೊಮ್ಮೆ ಆತ್ಮನಿರ್ಭರ ಭಾರತದ ನಿರ್ಧಾರವಾಗಿ ಮೂಡಿ ಬರುತ್ತಿದೆ. ಮತ್ತೊಮ್ಮೆ ಭಾರತವು ತನ್ನ ಸಾಮರ್ಥ್ಯವನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ, ಇದರಿಂದ ಇಡೀ ಜಗತ್ತಿನ ಪ್ರಗತಿಗೆ ಇನ್ನಷ್ಟು ವೇಗವಾಗಿ ಮತ್ತು ಮಾನವತೆಗೆ ಇನ್ನಷ್ಟು ಹೆಚ್ಚು ಸ್ಪಂದಿಸಲು ಸಾಧ್ಯವಾಗಲಿದೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತದ ಕೊಡುಗೆಯನ್ನು ವಿಶ್ವವು ಗಮನಿಸಿದೆ. ಇದು ಆತ್ಮನಿರ್ಭರ ಭಾರತಕ್ಕೆ ನೆರವಾಗಲಿದೆ ಮತ್ತು ಇಡೀ ಜಗತ್ತಿಗೆ ಸಮಗ್ರ ರೀತಿಯಲ್ಲಿ ಬಹಳ ದೊಡ್ಡ ಸಹಾಯವಾಗಲಿದೆ. ದೇಶಕ್ಕೀಗ ಗೀತಾದಲ್ಲಿ ವಿವರಿಸಿದಂತಹ ಸ್ವಾರ್ಥರಹಿತ ಜನರು ಈ ಗುರಿಗಳನ್ನು ಸಾಧಿಸುವುದಕ್ಕಾಗಿ ಬೇಕಾಗಿದ್ದಾರೆ. ಶತಮಾನಗಳ ಕತ್ತಲೆಯಿಂದ ನವಭಾರತದ ನವ ಸೂರ್ಯೋದಯವನ್ನು ಖಾತ್ರಿಗೊಳಿಸಲು ಮತ್ತು ಆತ್ಮ ನಿರ್ಭರ ಭಾರತಕ್ಕಾಗಿ, ನಾವು ನಮ್ಮ ಕರ್ತವ್ಯಗಳನ್ನು ಅರಿತುಕೊಳ್ಳುವ ಅಗತ್ಯವಿದೆ ಮತ್ತು ಅವುಗಳಿಗೆ ಬದ್ಧರಾಗಿರಬೇಕಾಗಿದೆ.
ಕೃಷ್ಣ ಭಗವಾನ್ ಅರ್ಜುನನಿಗೆ ಹೇಳಿದಂತೆ : ‘क्षुद्रम् हृदय दौर्बल्यम् त्यक्तवा उत्तिष्ठ परंतप’ ಅಂದರೆ ಸಣ್ಣದಾಗಿ ಚಿಂತಿಸುವುದನ್ನು, ಸಣ್ಣ ಮನಸ್ಸನ್ನು ಮತ್ತು ಆಂತರ್ಯದ ದೌರ್ಬಲ್ಯವನ್ನು ಹಿಂದಿಕ್ಕಿ ಎದ್ದು ನಿಲ್ಲು. ಇದನ್ನು ಬೋಧಿಸುವಾಗ ಕೃಷ್ಣ ಭಗವಾನ್ ಅರ್ಜುನನನ್ನು ಗೀತಾದಲ್ಲಿ “ಭಾರತ್” ಎಂದು ಕರೆಯುತ್ತಾರೆ. ಗೀತಾದ ಈ ಉಲ್ಲೇಖವೇ ಇಂದು ನಮ್ಮ ದೇಶವನ್ನು ಗುರುತಿಸುತ್ತದೆ. ನಮ್ಮ 130 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತದೆ. ಇಂದು ಈ ಕರೆಗೆ ಸಂಬಂಧಿಸಿ ಹೊಸ ಜಾಗೃತಿ ಮೂಡುತ್ತಿದೆ. ಇಂದು ಜಗತ್ತು ಹೊಸ ದೃಷ್ಟಿಕೋನ ಮತ್ತು ಗೌರವದಿಂದ ಭಾರತದತ್ತ ನೋಡುತ್ತಿದೆ. ನಾವು ಈ ಬದಲಾವಣೆಯನ್ನು ಭಾರತದ ಗುರುತಿಸುವಿಕೆಗೆ ಮತ್ತು ವಿಜ್ಞಾನದ ತುತ್ತತುದಿಗೆ ಕೊಂಡೊಯ್ಯಬೇಕು. ನಾವೆಲ್ಲರೂ ಒಗ್ಗೂಡಿ ಈ ಗುರಿಗಳನ್ನು ಸಾಧಿಸುತ್ತೇವೆ ಎಂಬ ಬಗ್ಗೆ ನನಗೆ ಭರವಸೆ ಇದೆ. ಸ್ವಾತಂತ್ರ್ಯದ 75 ನೇ ವರ್ಷವು ದೇಶಕ್ಕೆ ಹೊಸ ಭವಿಷ್ಯವನ್ನು ಆರಂಭಿಸಲು ಆಧಾರವಾಗಲಿದೆ.
ನಾನು ಮತ್ತೊಮ್ಮೆ ಡಾ. ಸಾಹೇಬ್ ಅವರನ್ನು, ಈ ಟ್ರಸ್ಟನ್ನು ನಡೆಸುತ್ತಿರುವ ಎಲ್ಲಾ ಗಣ್ಯರನ್ನು ಮತ್ತು ಈ ಕೆಲಸದ ಹಿಂದೆ ಅಪಾರ ಶ್ರಮ ಹಾಕಿದವರನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಇಂತಹ ಪುಸ್ತಕಗಳನ್ನು ಪರಾಮರ್ಶನ ಗ್ರಂಥವಾಗಿ ಬಳಸುವ ಜನರಿಗೆ ಇದರಿಂದ ಬಹಳ ಉಪಯೋಗವಾಗಲಿದೆ ಎಂಬ ಬಗ್ಗೆ ನನಗೆ ಭರವಸೆ ಇದೆ. ನೀವು ಬಹಳ ಅಮೂಲ್ಯ ಸಂಪತ್ತನ್ನು ನೀಡಿದ್ದೀರಿ. ಯುದ್ಧದ ಕರೆಯ ನಡುವೆ ಯುದ್ಧಭೂಮಿಯಲ್ಲಿ ರಚಿತವಾದ ಮೊದಲ ಪುಸ್ತಕ ಇದು ಎಂಬುದನ್ನು ನಾನು ಒಪ್ಪುತ್ತೇನೆ. ಇದನ್ನು ವಿಜಯ ಅಥವಾ ಸೋಲು ಮನೆ ಬಾಗಿಲನ್ನು ತಟ್ಟುತ್ತಿರುವಾಗ ಬೋಧಿಸಲಾಯಿತು. ಇಂತಹ ಪ್ರತಿಕೂಲ ಮತ್ತು ವ್ಯಾಕುಲದ ಪರಿಸ್ಥಿತಿಯಲ್ಲಿ ಮೂಡಿ ಬಂದಂತಹ ಪವಿತ್ರ ತತ್ವಜ್ಞಾನದ ಮಕರಂದ ಇದಲ್ಲದೆ ಬೇರೇನೂ ಅಲ್ಲ. ಮುಂದಿನ ಜನಾಂಗಕ್ಕಾಗಿ ಗೀತಾದ ಜ್ಞಾನವನ್ನು ಭಾಷೆಯಲ್ಲಿ ಮತ್ತು ಅವರ ತಿಳುವಳಿಕೆಯ ಮಾದರಿಯಲ್ಲಿ ಪಡೆದುಕೊಳ್ಳುವುದು ಪ್ರತೀ ತಲೆಮಾರಿನ ಕರ್ತವ್ಯ. ಡಾ. ಕರಣ್ ಸಿಂಗ್ ಜೀ ಮತ್ತು ಅವರ ಇಡೀ ಕುಟುಂಬ, ಅವರ ದೊಡ್ಡ ಪರಂಪರೆ ಇದನ್ನು ಜೀವಂತವಾಗಿರಿಸಿದೆ. ಮುಂದಿನ ಜನಾಂಗ ಕೂಡಾ ಇದನ್ನು ಜೀವಂತವಾಗಿರಿಸುತ್ತದೆ. ನಾವು ಡಾಕ್ಟರ್ ಕರಣ್ ಸಿಂಗ್ ಜೀ ಅವರ ಸೇವೆಯನ್ನು ಸದಾ ನೆನೆಯುತ್ತೇವೆ. ನಾನು ಈ ಬೃಹತ್ ಕಾರ್ಯಕ್ಕಾಗಿ ಅವರಿಗೆ ಗೌರವದಿಂದ ನಮಿಸುತ್ತೇನೆ. ಅವರು ವಯಸ್ಸಿನಲ್ಲಿ ಹಿರಿಯರು, ಸಾರ್ವಜನಿಕ ಜೀವನದಲ್ಲಿಯೂ ಹಿರಿಯರು, ಅವರ ಆಶೀರ್ವಾದಗಳು ನಮ್ಮೊಂದಿಗೆ ಇರುತ್ತವೆ. ನಾವು ಈ ಆದರ್ಶಗಳೊಂದಿಗೆ ದೇಶಕ್ಕಾಗಿ ಏನಾದರೊಂದು ಕೆಲಸ ಮಾಡುವುದನ್ನು ಮುಂದುವರೆಸಿಕೊಂಡು ಹೋಗಬೇಕು.
ಬಹಳ ಧನ್ಯವಾದಗಳು!
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ, ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
(Release ID: 1704792)
Visitor Counter : 211
Read this release in:
Tamil
,
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Telugu
,
Malayalam