ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಆರೋಗ್ಯ ಮತ್ತು ಶಿಕ್ಷಣ ಉಪಕರದಿಂದ ದೊರೆಯುವ ಹಣದಿಂದ, ಆರೋಗ್ಯ ಉದ್ದೇಶಕ್ಕಾಗಿ ‘ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ನಿಧಿ‘ ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ

Posted On: 10 MAR 2021 2:05PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ‘ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ನಿಧಿ’ (ಪಿ ಎಂ ಎಸ್ ಎಸ್ ಎನ್) ಸ್ಥಾಪನೆಗೆ ಅನುಮೋದನೆ ನೀಡಿದೆ. ‘ಹಣಕಾಸು ಕಾಯಿದೆ-2007’ರ ವಿಧಿ 136 ‘ಬಿ’ ಅಡಿಯಲ್ಲಿ ವಿಧಿಸಲಾಗುತ್ತಿರುವ ಆರೋಗ್ಯ ಮತ್ತು ಶಿಕ್ಷಣ ಉಪಕರದಿಂದ ಸಂಗ್ರಹವಾಗುವ ನಿಧಿಯಲ್ಲಿ ಆರೋಗ್ಯದ ಪಾಲಿನ ಮೊತ್ತವನ್ನು ಆರೋಗ್ಯ ಉದ್ದೇಶಕ್ಕೆ ಬಳಕೆ ಮಾಡಲು ಸ್ಥಾಪಿಸಲಾದ ಕಾಲಮಿತಿ ರಹಿತ (ಆ ಹಣಕಾಸು ವರ್ಷದಲ್ಲಿ ವೆಚ್ಚ ಮಾಡದಿದ್ದರೆ ಆರ್ಥಿಕ ವರ್ಷದ ಅಂತ್ಯಕ್ಕೆ ಗತಿಸಿಹೋಗದ-ನಾನ್‌ ಲ್ಯಾಪ್ಸಬಲ್‌) ಮೀಸಲು ನಿಧಿ ಇದಾಗಿದೆ.

‘ಪಿಎಂಎಸ್ಎಸ್ಎನ್’ನ ವೈಶಿಷ್ಟ್ಯಗಳು
1. ಸಾರ್ವಜನಿಕ ಖಾತೆಯಲ್ಲಿನ ಆರೋಗ್ಯ ಉದ್ದೇಶಕ್ಕಾಗಿ ಕಾಪಿಡಲಾದ ಕಾಲಮಿತಿ ರಹಿತ (ನಾನ್ ಲ್ಯಾಪ್ಸಬಲ್) ಮೀಸಲು ನಿಧಿ;
2. ಆರೋಗ್ಯ ಮತ್ತು ಶಿಕ್ಷಣ ಉಪಕರದ ಮೂಲಕ ಸಂಗ್ರಹವಾಗುವ ಮೊತ್ತದಲ್ಲಿ ಆರೋಗ್ಯ ಪಾಲಿನ ಹಣವು ‘ಪಿಎಂಎಸ್ಎಸ್ಎನ್’ಗೆ ಸಂದಾಯವಾಗುತ್ತದೆ.
3. ಇದರಲ್ಲಿ ಸಂಚಿತಗೊಂಡ ಹಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಗಳಿಗಾಗಿ ಬಳಸಿಕೊಳ್ಳಲಾಗುವುದು. ಅಂತಹ ಕೆಲವು ಯೋಜನೆಗಳನ್ನು ಹೆಸರಿಸುವುದಾದರೆ:
* ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ)
* ಆಯುಷ್ಮಾನ್ ಭಾರತ್- ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು (ಎಬಿ-ಹೆಚ್ ಡಬ್ಲ್ಯೂಸಿ)
* ರಾಷ್ಟ್ರೀಯ ಆರೋಗ್ಯ ಮಿಷನ್
* ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್ಎಸ್‌ವೈ
* ಆರೋಗ್ಯ ತುರ್ತು ಪರಿಸ್ಥಿತಿ ವೇಳೆ ತುರ್ತು ಮತ್ತು ವಿಪತ್ತು ಸನ್ನದ್ಧತೆ ಹಾಗೂ ಸ್ಪಂದನೆ
* ‘ಎಸ್‌ಡಿಜಿ’ಗಳು ಮತ್ತು ‘ರಾಷ್ಟ್ರೀಯ ಆರೋಗ್ಯ ನೀತಿ (ಎನ್‌ಹೆಚ್‌ಪಿ) 2017’ ಅಡಿಯಲ್ಲಿ ಹೊಂದಲಾದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ಕೈಗೊಳ್ಳುವ ಯಾವುದೇ ಯೋಜನೆ/ಕಾರ್ಯಕ್ರಮಗಳು.
4. ಪಿಎಂಎಸ್ಎಸ್ಎನ್ ಆಡಳಿತ ಮತ್ತು ನಿರ್ವಹಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ವಹಿಸಲಾಗಿದೆ.
5. ಯಾವುದೇ ಹಣಕಾಸು ವರ್ಷದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇಂತಹ ಯೋಜನೆಗಳಿಗೆ ಆರಂಭಿಕವಾಗಿ ‘ಪಿಎಂಎಸ್ಎಸ್ಎನ್’ನಿಂದ ಹಣವನ್ನು ವೆಚ್ಚ ಮಾಡಿ, ನಂತರ ಬಜೆಟ್ ಅನುದಾನದಿಂದ ಬಳಸಿಕೊಳ್ಳಲಾಗುವುದು.

ಅನುಕೂಲಗಳು:
ಈ ನಿಧಿಯ ಪ್ರಮುಖ ಅನುಕೂಲಗಳೆಂದರೆ: ಮೀಸಲು ನಿಧಿಯ ಹಿನ್ನೆಲೆಯಲ್ಲಿ ಸಾರ್ವತ್ರಿಕವಾಗಿ ಮತ್ತು ಕಡಿಮೆ ವೆಚ್ಚದಲ್ಲಿಆರೋಗ್ಯ ಸೇವೆಗಳ ಲಭ್ಯತೆ. ಇದು ಕಾಲಮಿತಿ ರಹಿತ ನಿಧಿಯಾಗಿರುವುದರಿಂದ ಹಣಕಾಸು ವರ್ಷ ಅಂತ್ಯಗೊಂಡಾಗ ಈ ನಿಧಿಯ ಮೊತ್ತವು ಗತಿಸಿಹೋಗುವುದಿಲ್ಲ.

ಹಿನ್ನೆಲೆ: ಅಭಿವೃದ್ಧಿ ಸಂಬಂಧಿತ ಲಾಭಗಳ ಹೆಚ್ಚಳಕ್ಕೆ ಆರೋಗ್ಯವು ಪ್ರಧಾನ ಅಂಶವಾಗಿದೆ. ಆರ್ಥಿಕ ದೃಷ್ಟಿಕೋನದಿಂದಲೂ, ಉತ್ತಮ ಆರೋಗ್ಯವು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಜೊತೆಗೆ, ಅಕಾಲಿಕ ಮರಣ, ಅಂಗವೈಕಲ್ಯ, ಅಕಾಲಿಕ ನಿವೃತ್ತಿಯಿಂದ ಉಂಟಾಗುವ ನಷ್ಟವನ್ನು ತಗ್ಗಿಸುತ್ತದೆ. ಆರೋಗ್ಯ ಮತ್ತು ಪೌಷ್ಟಿಕಾಂಶವು ಬೌದ್ಧಿಕ ಸಾಧನೆಗಳು ಉತ್ಪಾದಕತೆ ಹಾಗೂ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಆರೋಗ್ಯ ಸಂಬಂಧಿತ ಲಾಭಗಳು ಆರೋಗ್ಯ ವಲಯದಲ್ಲಿಸಾರ್ವಜನಿಕ ವೆಚ್ಚದ ಮೇಲೆ ಆಧರಿತವಾಗಿರುತ್ತವೆ. ಜನಸಂಖ್ಯೆಯ ಜೀವನಾವಧಿ ನಿರೀಕ್ಷೆಯು ಒಂದು ವರ್ಷ ಹೆಚ್ಚಳವಾದರೂ, ಜಿಡಿಪಿ ತಲಾದಾಯ ಶೇ. 4ರಷ್ಟು ಹೆಚ್ಚಾಗುತ್ತದೆ, ಆರೋಗ್ಯದಲ್ಲಿ ಹೂಡಿಕೆಯು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಅದರಲ್ಲೂ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಹೆಚ್ಚಳದ ಮೂಲಕ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸುತ್ತದೆ. 
2018ರ ಬಜೆಟ್ ಭಾಷಣದಲ್ಲಿ, ಆಯುಷ್ಮಾನ್ ಭಾರತ್ ಯೋಜನೆಯನ್ನು ಘೋಷಿಸಿದ ಹಣಕಾಸು ಸಚಿವರು, ಆಗ ಹಾಲಿ ಶೇ. 3ರಷ್ಟಿದ್ದ ಶಿಕ್ಷಣ ಉಪಕರದ ಸ್ಥಾನದಲ್ಲಿ ಶೇ. 4ರಷ್ಟು ಆರೋಗ್ಯ ಮತ್ತು ಶಿಕ್ಷಣ ಉಪಕರವನ್ನು ಘೋಷಿಸಿದ್ದರು.

***



(Release ID: 1704025) Visitor Counter : 127