ಪ್ರಧಾನ ಮಂತ್ರಿಯವರ ಕಛೇರಿ

ಭಾರತ ಸಾಗರಯಾನ ಶೃಂಗಸಭೆ 2021 ಉದ್ಘಾಟಿಸಿದ ಪ್ರಧಾನಿ


ಸಾಗರಯಾನ ವಲಯದಲ್ಲಿ ಪ್ರಗತಿಯ ಬಗ್ಗೆ ಭಾರತ ಗಂಭೀರ ಚಿಂತನೆ ನಡೆಸಿದೆ ಮತ್ತು ವಿಶ್ವದ ಪ್ರಮುಖ ʻನೀಲ ಆರ್ಥಿಕತೆʼಯಾಗಿ ಭಾರತ ಹೊರಹೊಮ್ಮುತ್ತಿದೆ

2030ರ ವೇಳೆಗೆ 23 ಜಲಮಾರ್ಗಗಳನ್ನು ಕಾರ್ಯಾಚರಣೆಗೊಳಿಸುವ ಗುರಿಯನ್ನು ಭಾರತ ಹೊಂದಿದೆ

ಹಡಗು ಮತ್ತು ಜಲಸಾರಿಗೆ ಸಚಿವಾಲಯವು 2.25 ಲಕ್ಷ ಕೋಟಿ ರೂ. ಹೂಡಿಕೆ ಸಾಮರ್ಥ್ಯವಿರುವ  400 ಹೂಡಿಕೆಯೋಗ್ಯ ಯೋಜನೆಗಳ ಪಟ್ಟಿಯನ್ನು ಸಿದ್ಧಪಡಿಸಿದೆ

ಸರಕಾ ಹಿಂದೆಂದೂ ಕಾಣದ ರೀತಿಯಲ್ಲಿ ಜಲಮಾರ್ಗಗಳಲ್ಲಿ ಹೂಡಿಕೆ ಮಾಡುತ್ತಿದೆ: ಪ್ರಧಾನಿ

Posted On: 02 MAR 2021 12:27PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ʻಭಾರತ ಸಾಗರಯಾನ ಶೃಂಗಸಭೆ-2021’ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಇಂದು ಚಾಲನೆ ನೀಡಿದರು. ಸಂದರ್ಭದಲ್ಲಿ ಡೆನ್ಮಾರ್ಕ್‌ನ ಸಾರಿಗೆ ಸಚಿವ ಬೆನ್ನಿ ಎಂಗ್ಲೆಬ್ರೆಕ್ಟ್‌, ಗುಜರಾತ್ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಶ್ರೀ ಮನ್ಸುಖ್ ಮಾಂಡವಿಯಾ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಅವರು ಭಾರತಕ್ಕೆ ಬಂದು, ಭಾರತದ ಅಭಿವೃದ್ಧಿ ಪಥದಲ್ಲಿ ಪಾಲುದಾರರಾಗುವಂತೆ ವಿಶ್ವ ಸಮುದಾಯಕ್ಕೆ ಕರೆ ನೀಡಿದರು. ಭಾರತವು ಸಾಗರಯಾನ ವಲಯದಲ್ಲಿ ಬೆಳೆಯುವ ಮತ್ತು ವಿಶ್ವದ ಪ್ರಮುಖ ʻನೀಲಿ ಆರ್ಥಿಕತೆʼಯಾಗಿ ಹೊರಹೊಮ್ಮುವ ಬಗ್ಗೆ ಬಹಳ ಗಂಭೀರವಾಗಿ ಯೋಚಿಸುತ್ತಿದೆ. ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಸುಧಾರಣಾ ಪ್ರಯಾಣಕ್ಕೆ ಉತ್ತೇಜಿಸುವುದರ ಮೂಲಕ ʻಆತ್ಮನಿರ್ಭರ ಭಾರತ್‌ʼ ಕನಸನ್ನು ಮತ್ತಷ್ಟು ಬಲಗೊಳಿಸುವ ಗುರಿಯನ್ನು ಭಾರತವು ಹೊಂದಿದೆ ಎಂದು ಅವರು ಹೇಳಿದರು.

ಇಡೀ ವಲಯವನ್ನು ತುಂಡುತುಂಡಾಗಿ ಪರಿಗಣಿಸುವ ಬದಲು, ಅಖಂಡವಾಗಿ ನೋಡುವತ್ತ ಗಮನ ಹರಿಸಲಾಗುವುದು. 2014ರಲ್ಲಿ 870 ದಶಲಕ್ಷ ಟನ್‌ನಷ್ಟಿದ್ದ ಪ್ರಮುಖ ಬಂದರುಗಳ ಸಾಮರ್ಥ್ಯವನ್ನು ಈಗ 1,550 ದಶಲಕ್ಷ ಟನ್‌ಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರುಭಾರತದ ಬಂದರುಗಳು ಈಗ  ʻನೇರ ಬಂದರಿಗೆ ತಲುಪಿಸುವುದುʼ, ʻನೇರ ಬಂದರು ಪ್ರವೇಶʼ ಮತ್ತು ಸುಲಭ ಡೇಟಾ ಹರಿವಿಗಾಗಿ ʻಉನ್ನತೀಕರಿಸಿದ ಪೋರ್ಟ್ ಕಮ್ಯುನಿಟಿ ಸಿಸ್ಟಮ್ʼ (ಪಿಸಿಎಸ್) ನಂತಹ ವ್ಯವಸ್ಥೆಗಳನ್ನು ಹೊಂದಿವೆ. ನಮ್ಮ ಬಂದರುಗಳು ಒಳಬರುವ ಮತ್ತು ಹೊರಹೋಗುವ ಸರಕುಗಳ ಕಾಯುವ ಅವಧಿಯನ್ನು ಕಡಿಮೆಮಾಡಿವೆ. ವಿಶ್ವ ದರ್ಜೆಯ ಮೂಲಸೌಕರ್ಯವುಳ್ಳ ಮೆಗಾ ಬಂದರುಗಳನ್ನು ವಧವನ್, ಪಾರದೀಪ್ ಮತ್ತು ಕಾಂಡ್ಲಾದ ದೀನದಯಾಳ್ ಬಂದರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ನಮ್ಮ ಸರಕಾರ ಹಿಂದೆಂದೂ ಕಾಣದ ರೀತಿಯಲ್ಲಿ ಜಲ ಮಾರ್ಗಗಳಲ್ಲಿ ಹೂಡಿಕೆ ಮಾಡುತ್ತಿದೆ. ದೇಶೀಯ ಜಲಮಾರ್ಗಗಳು ಸರಕು ಸಾಗಣೆಗೆ ಅಗ್ಗದ ಮತ್ತು ಪರಿಸರ ಸ್ನೇಹಿ ಮಾರ್ಗಗಳಾಗಿವೆ. 2030 ವೇಳೆಗೆ 23 ಜಲಮಾರ್ಗಗಳನ್ನು ಕಾರ್ಯಗತಗೊಳಿಸುವ ಗುರಿ ಹೊಂದಿದ್ದೇವೆ,ʼʼ ಎಂದು ಹೇಳಿದರು. ಭಾರತ ತನ್ನ ವಿಶಾಲ ಕರಾವಳಿಯುದ್ದಕ್ಕೂ 189 ಲೈಟ್‌ಹೌಸ್‌ಗಳನ್ನು ಹೊಂದಿದೆ. “78 ಲೈಟ್‌ಹೌಸ್‌ಗಳ ಪಕ್ಕದ ಜಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಜನೆಯನ್ನು ನಾವು ರೂಪಿಸಿದ್ದೇವೆ. ಅಸ್ತಿತ್ವದಲ್ಲಿರುವ ಲೈಟ್‌ಹೌಸ್‌ಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ವಿಶಿಷ್ಟ ಕಡಲ ಪ್ರವಾಸೋದ್ಯಮದ ಹೆಗ್ಗುರುತುಗಳಾಗಿ ಅಭಿವೃದ್ಧಿಪಡಿಸುವುದು ಉಪಕ್ರಮದ ಮುಖ್ಯ ಉದ್ದೇಶವಾಗಿದೆ," ಎಂದು ಶ್ರೀ ಮೋದಿ ಹೇಳಿದರು. ಕೊಚ್ಚಿ, ಮುಂಬೈ, ಗುಜರಾತ್ ಮತ್ತು ಗೋವಾಗಳಂತಹ ಪ್ರಮುಖ ರಾಜ್ಯಗಳು ಮತ್ತು ನಗರಗಳಲ್ಲಿ ನಗರ ಜಲಸಾರಿಗೆ ವ್ಯವಸ್ಥೆಯನ್ನು ಆರಂಭಿಸಲು ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಘೋಷಿಸಿದರು.

ಹಡಗುಗಾರಿಕೆ ಸಚಿವಾಲಯವನ್ನು ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯ ಎಂದು ಮರುನಾಮಕರಣ ಮಾಡುವ ಮೂಲಕ ಸರಕಾರ ಇತ್ತೀಚೆಗೆ ಸಚಿವಾಲಯದ ವ್ಯಾಪ್ತಿಯನ್ನು ವಿಸ್ತರಿಸಿದೆ. ಮೂಲಕ ಕೆಲಸ-ಕಾರ್ಯಗಳು ಸಮಗ್ರ ಮಟ್ಟದಲ್ಲಿ ಸಾಗಲು ಅನುವು ಮಾಡಿಕೊಡಲಾಗಿದೆ ಎಂದು ಪ್ರಧಾನಿ ಹೇಳಿದರು. ದೇಶೀಯ ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಮಾರುಕಟ್ಟೆಗಳತ್ತಲೂ ಕೇಂದ್ರ ಸರಕಾರ ಗಮನ ಹರಿಸುತ್ತಿದೆ. ದೇಶೀಯ ಹಡಗು ನಿರ್ಮಾಣವನ್ನು ಉತ್ತೇಜಿಸಲು ಭಾರತೀಯ ಹಡಗುಕಟ್ಟೆಗಳಿಗಾಗಿ ʻಹಡಗು ನಿರ್ಮಾಣ ಹಣಕಾಸು ನೆರವು ನೀತಿʼಗೆ ಅನುಮೋದನೆ ನೀಡಲಾಗಿದೆ ಎಂದರು.

ಬಂದರು ಮತ್ತು ಜಲಸಾರಿಗೆ ಸಚಿವಾಲಯವು 400 ಹೂಡಿಕೆಯೋಗ್ಯ ಯೋಜನೆಗಳ ಪಟ್ಟಿಯನ್ನು ತಯಾರಿಸಿದೆ. ಯೋಜನೆಗಳು 31 ಶತಕೋಟಿ ಡಾಲರ್ ಅಥವಾ 2.25 ಲಕ್ಷ ಕೋಟಿ ರೂಹೂಡಿಕೆ ಸಾಮರ್ಥ್ಯವನ್ನು ಹೊಂದಿವೆ. ʻಭಾರತ ಸಾಗರಯಾನ ದೃಷ್ಟಿಕೋನ 2030ʼ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಇದು ಸರಕಾರದ ಆದ್ಯತೆಗಳನ್ನು ಸೂಚಿಸುತ್ತದೆ ಎಂದು ವಿವರಿಸಿದರು.

ʻಸಾಗರ-ಮಂಥನ್: ವಾಣಿಜ್ಯ ನೌಕಾಪಡೆ ಕ್ಷೇತ್ರ ಜಾಗೃತಿ ಕೇಂದ್ರʼ ಕೂಡ ಇಂದು ಉದ್ಘಾಟನೆಗೊಂಡಿದೆ. ಸಾಗರಯಾನ ಸುರಕ್ಷತೆ, ಶೋಧ ಮತ್ತು ರಕ್ಷಣಾ ಸಾಮರ್ಥ್ಯ, ಭದ್ರತೆ ಮತ್ತು ಸಾಗರ ಪರಿಸರ ಸಂರಕ್ಷಣೆಯನ್ನು ಹೆಚ್ಚಿಸುವ ಮಾಹಿತಿ ವ್ಯವಸ್ಥೆ ಇದಾಗಿದೆ.

ಬಂದರು ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ 2016ರಲ್ಲಿ ʻಸಾಗರಮಾಲಾʼ ಯೋಜನೆಯನ್ನು ಸರಕಾರ ಘೋಷಿಸಿದೆ. ಯೋಜನೆಯ ಭಾಗವಾಗಿ 2015ರಿಂದ 2035 ಅವಧಿಯಲ್ಲಿ ಅನುಷ್ಠಾನಗೊಳಿಸಲು 82 ಶತಕೋಟಿ ಅಮೆರಿಕನ್ ಡಾಲರ್ ಅಥವಾ 6 ಲಕ್ಷ ಕೋಟಿ ರೂ.ಗಳ ವೆಚ್ಚದಲ್ಲಿ 574ಕ್ಕೂ ಹೆಚ್ಚು ಯೋಜನೆಗಳನ್ನು ಗುರುತಿಸಲಾಗಿದೆ. 2022 ವೇಳೆಗೆ ಭಾರತದ ಎರಡೂ ಕರಾವಳಿಗಳಲ್ಲಿ ಹಡಗು ದುರಸ್ತಿ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. 'ತ್ಯಾಜ್ಯದಿಂದ ಸಂಪತ್ತು' ಸೃಷ್ಟಿಸುವ ಸಲುವಾಗಿ ದೇಶೀಯ ನೌಕೆಯ ಮರುಬಳಕೆ ಉದ್ಯಮವನ್ನು ಉತ್ತೇಜಿಸಲಾಗುವುದು. ಭಾರತವು ʻಹಡಗುಗಳ ಮರುಬಳಕೆ ಕಾಯಿದೆ, 2019ʼ ಅನ್ನು ಜಾರಿಗೆ ತಂದಿದ್ದು, ʻಹಾಂಕಾಂಗ್ ಅಂತಾರಾಷ್ಟ್ರೀಯ ಒಪ್ಪಂದʼಕ್ಕೆ ಒಪ್ಪಿಗೆ ನೀಡಿದೆ.

ನಮ್ಮ ಅತ್ಯುತ್ತಮ ಕಾರ್ಯವಿಧಾನಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವ ಮತ್ತು ಜಗತ್ತಿನ ಅತ್ಯುತ್ತಮ ಕಾರ್ಯವಿಧಾನಗಳನ್ನು ಕಲಿಯುವ ಮುಕ್ತತೆಯನ್ನು ಸಹ ಪ್ರಧಾನಿ ವ್ಯಕ್ತಪಡಿಸಿದರು. ʻಬಿಮ್ಸ್ಟೆಕ್‌ʼ(BIMSTEC) ಮತ್ತು ʻಐಒಆರ್́ (IOR) ರಾಷ್ಟ್ರಗಳ ಜೊತೆಗಿನ ವ್ಯಾಪಾರ, ಆರ್ಥಿಕ ಸಂಬಂಧಗಳತ್ತ ಗಮನ ಮುಂದುವರಿಸಿರುವ ಭಾರತ, ಮೂಲಸೌಕರ್ಯಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಮತ್ತು 2026 ಒಳಗಾಗಿ ಪರಸ್ಪರ ಒಪ್ಪಂದಗಳಿಗೆ ಅನುವು ಮಾಡಿಕೊಡಲು ಯೋಜಿಸಿದೆ ಎಂದು ಅವರು ಹೇಳಿದರು.

ದ್ವೀಪಗಳ ಮೂಲಸೌಕರ್ಯ ಮತ್ತು ಪರಿಸರ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಪ್ರಧಾನಿ ಹೇಳಿದರು. ಸಾಗರಯಾನ ವಲಯದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸಲು ಸರಕಾರ ಉತ್ಸುಕವಾಗಿದೆ. ದೇಶದ ಎಲ್ಲಾ ಪ್ರಮುಖ ಬಂದರುಗಳಲ್ಲಿ ಸೌರ ಮತ್ತು ಪವನ ಆಧಾರಿತ ವಿದ್ಯುತ್ ವ್ಯವಸ್ಥೆಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. 2030 ವೇಳೆಗೆ ಭಾರತದ ಬಂದರುಗಳಲ್ಲಿ

ನವೀಕರಿಸಬಹುದಾದ ಇಂಧನದ ಬಳಕೆಯ ಪ್ರಮಾಣವನ್ನು ಒಟ್ಟು ಇಂಧನ ಬಳಕೆಯ ಶೇ. 60ಕ್ಕಿಂತಲೂ ಅಧಿಕ ಮಟ್ಟಕ್ಕೆ ಹೆಚ್ಚಿಸಲು ಮತ್ತು ಮೂರು ಹಂತಗಳಲ್ಲಿ ಇದನ್ನು ಸಾಧಿಸುವ ಗುರಿಯನ್ನು ಸರಕಾರ ಹೊಂದಿದೆ ಎಂದರು.

ಜಾಗತಿಕ ಹೂಡಿಕೆದಾರರನ್ನು ಕುರಿತು "ಭಾರತದ ಸುದೀರ್ಘ ಕರಾವಳಿಯು ನಿಮಗಾಗಿ ಕಾಯುತ್ತಿದೆ. ಕಠಿಣ ಶ್ರಮಜೀವಿಗಳಾದ ಭಾರತದ ಜನರು ನಿಮಗಾಗಿ ಕಾಯುತ್ತಿದ್ದಾರೆ. ನಮ್ಮ ಬಂದರುಗಳಲ್ಲಿ ಹೂಡಿಕೆ ಮಾಡಿ. ನಮ್ಮ ಜನರ ಮೇಲೆ ಹೂಡಿಕೆ ಮಾಡಿ. ಭಾರತ ನಿಮ್ಮ ಆದ್ಯತೆಯ ವ್ಯಾಪಾರ ತಾಣವಾಗಲಿ. ಭಾರತದ ಬಂದರುಗಳು ನಿಮ್ಮ ವ್ಯಾಪಾರ ಮತ್ತು ವಾಣಿಜ್ಯದ ಬಂದರುಗಳಾಗಲು ಅವಕಾಶ ಮಾಡಿಕೊಡಿ." ಎಂದು ಕರೆ ನೀಡುವ ಮೂಲಕ ಪ್ರಧಾನಿ ಮಾತು ಮುಗಿಸಿದರು.

***



(Release ID: 1701930) Visitor Counter : 248