ಪ್ರಧಾನ ಮಂತ್ರಿಯವರ ಕಛೇರಿ

ತಮಿಳುನಾಡಿನ ಡಾ. ಎಂ.ಜಿ.ಆರ್. ವೈದ್ಯಕೀಯ ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಯಶಸ್ಸು ಎಂ.ಜಿ.ಆರ್. ಅವರ ಆತ್ಮವನ್ನು ಸಂತುಷ್ಟಗೊಳಿಸಿದೆ: ಪ್ರಧಾನಮಂತ್ರಿ

ಭಾರತೀಯ ವೈದ್ಯಕೀಯ ವೃತ್ತಿಪರರ ಬಗ್ಗೆ ಅಪಾರವಾದ ಗೌರವ ಮತ್ತು ಮೆಚ್ಚುಗೆ ಇದೆ: ಪ್ರಧಾನಮಂತ್ರಿ

ಸಾಂಕ್ರಾಮಿಕದ ಬಳಿಕ ವೈದ್ಯರ ಬಗೆಗಿನ ಗೌರವ ಹೆಚ್ಚಾಗಿದೆ:ಪ್ರಧಾನಮಂತ್ರಿ

ಸ್ವಾರ್ಥ ಮೀರಿದರೆ ನೀವು ನಿರ್ಭೀತರಾಗುತ್ತೀರಿ: ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ

Posted On: 26 FEB 2021 11:57AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡಿನ ಡಾ. ಎಂ.ಜಿ.ಆರ್. ವೈದ್ಯಕೀಯ ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಿದರು. 21000ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಮತ್ತು ಡಿಪ್ಲೋಮಾ ಪ್ರದಾನ ಮಾಡಲಾಯಿತು. ತಮಿಳುನಾಡಿನ ರಾಜ್ಯಪಾಲರಾದ ಶ್ರೀ ಬನ್ವಾರಿಲಾಲ್ ಪೂರೋಹಿತ್ ಈ ಸಂದರ್ಭದಲ್ಲಿ ಹಾಜರಿದ್ದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಪದವಿ ಮತ್ತು ಡಿಪ್ಲೊಮಾ ಪಡೆಯುತ್ತಿರುವವರ ಪೈಕಿ ಶೇ.70ಕ್ಕಿಂತ ಹೆಚ್ಚು ಮಹಿಳೆಯರು ಇರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಎಲ್ಲ ಪದವೀಧರರಿಗೂ ಅಭಿನಂದನೆ ಸಲ್ಲಿಸಿದ ಅವರು, ಮಹಿಳಾ ಅಭ್ಯರ್ಥಿಗಳಿಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ರಂಗದಲ್ಲಿ ಮಹಿಳೆಯರು ಮುಂಚೂಣಿಯಲ್ಲಿ ಸಾಗುವುದು ಸದಾ ವಿಶೇಷವಾಗಿರುತ್ತದೆ ಎಂದರು. ಇದು ಆದಾಗ, ಅದು ಹೆಮ್ಮೆ ಮತ್ತು ಸಂತಸದ ಕ್ಷಣವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಯಶಸ್ಸು ಮಹಾನ್ ಎಂ.ಜಿ.ಆರ್. ಅವರ ಆತ್ಮಕ್ಕೆ ಸಂತೃಪ್ತಿ ತಂದಿರುತ್ತದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಎಂಜಿಆರ್ ಅವರ ಆಡಳಿತವು ಬಡವರ ಬಗ್ಗೆ ಸಹಾನುಭೂತಿಯಿಂದ ಕೂಡಿತ್ತು ಎಂದು ಶ್ರೀ ಮೋದಿ ಸ್ಮರಿಸಿದರು. ಆರೋಗ್ಯ ಆರೈಕೆ, ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣ ವಿಷಯಗಳು ಅವರಿಗೆ ಪ್ರಿಯವಾದವುಳಾಗಿದ್ದವು. ಎಂಜಿಆರ್ ಅವರು ಜನಿಸಿದ ಶ್ರೀಲಂಕಾದಲ್ಲಿನ ನಮ್ಮ ತಮಿಳು ಸಹೋದರಿಯರು ಮತ್ತು ಸಹೋದರರಿಗಾಗಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದು ಭಾರತಕ್ಕೆ ಗೌರವದ ವಿಷಯವಾಗಿದೆ ಎಂದು ಅವರು ಹೇಳಿದರು. ಭಾರತದ ಆರ್ಥಿಕ ನೆರವಿನ ಆಂಬುಲೆನ್ಸ್ ಸೇವೆಯನ್ನು ಶ್ರೀಲಂಕಾದ ತಮಿಳು ಸಮುದಾಯ ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ ಎಂದರು. ತಮಿಳು ಸಮುದಾಯಕ್ಕೆ ಆರೋಗ್ಯ ಕ್ಷೇತ್ರದಲ್ಲಿನ ಈ ಪ್ರಯತ್ನಗಳು ಸಹ ಎಂ.ಜಿ.ಆರ್. ಆತ್ಮವನ್ನು ಸಂತುಷ್ಟಗೊಳಿಸುತ್ತವೆ ಎಂದರು.

ಭಾರತೀಯ ವೈದ್ಯಕೀಯ ವೃತ್ತಿಪರರು, ವಿಜ್ಞಾನಿಗಳು ಮತ್ತು ಔಷಧೀಯ ವೃತ್ತಿಪರರ ಬಗ್ಗೆ ಅಪಾರ ಮೆಚ್ಚುಗೆ ಮತ್ತು ಗೌರವವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ವಿಶ್ವಕ್ಕೆ ಔಷಧ ಮತ್ತು ಲಸಿಕೆಗಳನ್ನು ಉತ್ಪಾದಿಸುತ್ತಿದೆ ಎಂದು ಅವರು ಹೇಳಿದರು. ಕೋವಿಡ್-19 ರಲ್ಲಿ, ಭಾರತವು ವಿಶ್ವದ ಅತಿ ಕಡಿಮೆ ಸಾವಿನ ಪ್ರಮಾಣ ಮತ್ತು ಅತಿ ಹೆಚ್ಚು ಚೇತರಿಕೆ ಪ್ರಮಾಣವನ್ನು ಹೊಂದಿದೆ. ಭಾರತೀಯ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಹೊಸ ದೃಷ್ಟಿ, ಹೊಸ ಗೌರವ ಮತ್ತು ಹೊಸ ವಿಶ್ವಾಸಾರ್ಹತೆಯಿಂದ ನೋಡಲಾಗುತ್ತಿದೆ ಎಂದು ಅವರು ಹೇಳಿದರು. ಈ ಸಾಂಕ್ರಾಮಿಕದಿಂದ ಕಲಿಕೆಯು ಕ್ಷಯದಂತಹ ಇತರ ಕಾಯಿಲೆಗಳ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಇಡೀ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಸರ್ಕಾರ ಪರಿವರ್ತಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಷ್ಟ್ರೀಯ ವೈದ್ಯಕೀಯ ಆಯೋಗವು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಮಾನದಂಡಗಳನ್ನು ತರ್ಕಬದ್ಧಗೊಳಿಸುತ್ತದೆ, ಹೆಚ್ಚಿನ ಪಾರದರ್ಶಕತೆಯನ್ನು ತರುತ್ತಿದೆ ಮತ್ತು ಈ ವಲಯದಲ್ಲಿ ಮಾನವ ಸಂಪನ್ಮೂಲಗಳ ಗುಣಮಟ್ಟ ಮತ್ತು ಲಭ್ಯತೆಯನ್ನು ಸುಧಾರಿಸುತ್ತಿದೆ. ಕಳೆದ ಆರು ವರ್ಷಗಳಲ್ಲಿ ಎಂ.ಬಿ.ಬಿ.ಎಸ್. ಸೀಟುಗಳ ಸಂಖ್ಯೆ 30 ಸಾವಿರದಷ್ಟು ಹೆಚ್ಚಾಗಿದ್ದು, ಇದು 2014ರಿಂದ ಶೇ.50ಕ್ಕಿಂತ ಹೆಚ್ಚಾಗಿದೆ ಎಂದರು. ಪಿಜಿ ಸೀಟುಗಳ ಸಂಖ್ಯೆಯೂ 24 ಸಾವಿರದಷ್ಟು ಹೆಚ್ಚಾಗಿದ್ದು ಇದು 2014ರಿಂದೀಚೆಗೆ ಶೇ.80ರಷ್ಟು ಹೆಚ್ಚಳವಾಗಿದೆ, ದೇಶದಲ್ಲಿ ಕೇವಲ 6 ಎಮ್ಸ್ ಇದ್ದವು. ಕಳೆದ 6 ವರ್ಷಗಳಲ್ಲಿ 15ಕ್ಕೂ ಹೆಚ್ಚು ಏಮ್ಸ್ ಅನ್ನು ದೇಶದಲ್ಲಿ ಮಂಜೂರು ಮಾಡಲಾಗಿದೆ ಎಂದರು.

ತಮಿಳುನಾಡಿನ ಯಾವ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳು ಇಲ್ಲವೋ ಅಲ್ಲಿ, ನೂತನ 11 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಈ ವೈದ್ಯಕೀಯ ಕಾಲೇಜುಗಳಿಗೆ, ಭಾರತ ಸರ್ಕಾರ 2000 ಕೋಟಿ ರೂ.ಗೂ ಅಧಿಕ ಹಣ ನೀಡಲಿದೆ ಎಂದರು. ಬಜೆಟ್ ನಲ್ಲಿ ಪ್ರಕಟಿಸಲಾಗಿರುವ ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆ ರೋಗ ಪತ್ತೆ ಮತ್ತು ಚಿಕಿತ್ಸೆ ಹಾಗೂ ಹೊರಹೊಮ್ಮುವ ಕಾಯಿಲೆ ಗುಣಪಡಿಸಲು ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಹಂತದ ವೈದ್ಯಕೀಯ ಆರೈಕೆಯ ವ್ಯವಸ್ಥೆಗಳ ಸಾಮರ್ಥ್ಯ ಹೆಚ್ಚಿಸಲಿದೆ ಎಂದರು.

ನಮ್ಮ ದೇಶದಲ್ಲಿ ವೈದ್ಯರು ವೃತ್ತಿಪರರ ಪೈಕಿ ಅತ್ಯಂತ ಗೌರವಾನ್ವಿತರಾಗಿದ್ದಾರೆ, ಈ ಗೌರವ ಸಾಂಕ್ರಾಮಿಕದ ಬಳಿಕ ಮತ್ತಷ್ಟು ಹೆಚ್ಚಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. ಜನರಿಗೆ ನಿಮ್ಮ ವೃತ್ತಿಯ ಗಾಂಭೀರ್ಯದ ಅರಿವಿದೆ, ಹಲವು ಬಾರಿ ಅದು ಜೀವನ್ಮರಣದ ಪ್ರಶ್ನೆಯಾಗಿರುತ್ತದೆ, ಹೀಗಾಗಿ ಈ ಗೌರವವಿದೆ ಎಂದರು. ಗಂಭೀರವಾಗಿರುವುದು ಮತ್ತು ಗಂಭೀರವಾಗಿ ಕಾಣುವುದು ಎರಡೂ ವಿಭಿನ್ನ ವಿಷಯಗಳು ಎಂದ ಅವರು, ನಿಮ್ಮ ಹಾಸ್ಯಪ್ರಜ್ಞೆಯನ್ನು ಹಾಗೇ ಕಾಪಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಇದು ಅವರು ರೋಗಿಗಳನ್ನು ಹುರಿದುಂಬಿಸಲು ಮತ್ತು ಅವರ ಸ್ಥೈರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ರಾಷ್ಟ್ರದ ಸ್ವಾಸ್ಥ್ಯದ ಬಗ್ಗೆ ಕಾಳಜಿ ವಹಿಸಲು ತಮ್ಮ ಆರೋಗ್ಯ ಮತ್ತು ಸದೃಢತೆಯತ್ತ ಗಮನ ಹರಿಸಬೇಕೆಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅವರು ವಿದ್ಯಾರ್ಥಿಗಳಿಗೆ ಸ್ವಾರ್ಥ ಮೀರಿ ನಿಲ್ಲಲು ಕರೆ ನೀಡಿದರು ಮತ್ತು ಹಾಗೆ ಮಾಡುವುದರಿಂದ ಅವರು ನಿರ್ಭೀತರಾಗುತ್ತಾರೆ ಎಂದು ತಿಳಿಸಿದರು.

***



(Release ID: 1701084) Visitor Counter : 223