ಪ್ರಧಾನ ಮಂತ್ರಿಯವರ ಕಛೇರಿ
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಚೌರಿ ಚೌರಾ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಷಣ
Posted On:
04 FEB 2021 2:47PM by PIB Bengaluru
ನಾನು ಗೋರಖ್ ಪುರಕ್ಕೆ ಶಿರಬಾಗಿ ನಮಿಸುತ್ತೇನೆ, ಇದು ಶಿವ ಅವತರಿಸಿದ ಸ್ಥಳ. ದೇವ್ರಾಹ ಬಾಬಾ ಅವರ ಆಶೀರ್ವಾದದಿಂದ ಈ ಜಿಲ್ಲೆ ಉತ್ತಮವಾಗಿ ಪ್ರಗತಿ ಹೊಂದುತ್ತಿದೆ. ದೇವ್ರಾಹ ಬಾಬಾ ಅವರ ಕ್ಷೇತವಾದ ಇಲ್ಲಿ ಇಂದು ಚೌರಿ ಚೌರಾದ ಶ್ರೇಷ್ಟ ಜನರನ್ನು ನಾನು ಸ್ವಾಗತಿಸುತ್ತೇನೆ ಮತ್ತು ಅವರೆದುರು ಶಿರಬಾಗಿ ನಮಿಸುತ್ತೇನೆ.
ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಜೀ, ಖ್ಯಾತಿವೆತ್ತ, ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ, ಉತ್ತರ ಪ್ರದೇಶ ಸರಕಾರದ ಸಚಿವರೇ, ಸಂಸತ್ ಸದಸ್ಯರೇ, ಶಾಸಕರೇ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ನನ್ನ ಸಹೋದರರೇ ಮತ್ತು ಸಹೋದರಿಯರೇ. ಚೌರಿ ಚೌರಾದ ಪವಿತ್ರ ಭೂಮಿಯಲ್ಲಿ ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದವರಿಗೆ ಮತ್ತು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದವರಿಗೆ ನಾನು ಗೌರವದ ನಮನವನ್ನು ಸಲ್ಲಿಸುತ್ತೇನೆ ಮತ್ತು ಶಿರಬಾಗಿ ನಮಿಸುತ್ತೇನೆ. ಹುತಾತ್ಮರಾದವರ ಸಂಬಂಧಿಗಳು ಮತ್ತು ವಿವಿಧ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರು ಇದರಲ್ಲಿ ಭಾಗವಹಿಸಿದ್ದಾರೆ. ಹಲವು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳು ಇಂದು ಆನ್ ಲೈನ್ ಮೂಲಕ ಜೋಡಿಸಲ್ಪಟ್ಟಿದ್ದಾರೆ. ನಾನು ನಿಮ್ಮೆಲ್ಲರನ್ನೂ ಗೌರವದಿಂದ ಸ್ವಾಗತಿಸುತ್ತೇನೆ.
ಸ್ನೇಹಿತರೇ,
ನೂರು ವರ್ಷಗಳ ಹಿಂದೆ ಚೌರಿ ಚೌರಾದಲ್ಲಿ ಏನು ನಡೆಯಿತೋ ಅದು ಬರೇ ಅಗ್ನಿಸ್ಪರ್ಶ ಅಥವಾ ಬರೇ ಪೊಲೀಸ್ ಠಾಣೆಗೆ ಅಗ್ನಿ ಸ್ಪರ್ಶ ಮಾಡಿದ ಘಟನೆ ಮಾತ್ರವಲ್ಲ. ಚೌರಿ ಚೌರಾದ ಸಂದೇಶ ಬಹಳ ಬೃಹತ್ತಾದುದು ಮತ್ತು ಎಲ್ಲರನ್ನೂ ಒಳಗೊಳ್ಳುವಂತಹದ್ದು. ಹಲವಾರು ಕಾರಣಗಳಿಂದಾಗಿ , ಚೌರಿ ಚೌರಾಕ್ಕೆ ಬಂದಾಗ ಅದನ್ನು ಸಣ್ಣ ಅಗ್ನಿ ಸ್ಪರ್ಶ ಎಂದು ಪರಿಭಾವಿಸಲಾಗುತ್ತದೆ. ಆದರೆ ಈ ಅಗ್ನಿಸ್ಪರ್ಶ ಯಾವ ಸಂದರ್ಭದಲ್ಲಿ ಮತ್ತು ಯಾವ ಕಾರಣಕ್ಕೆ ನಡೆಯಿತು ಎಂಬುದೂ ಅಷ್ಟೇ ಮುಖ್ಯ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದು ಮಾತ್ರವಲ್ಲ, ಜನರ ಹೃದಯದಲ್ಲಿಯೂ ಅಗ್ನಿ ಜ್ವಲಿಸುತ್ತಿತ್ತು. ಇಂದು ದೇಶದ ಇತಿಹಾಸದಲ್ಲಿ ಚೌರಿ ಚೌರಾದ ಚಾರಿತ್ರಿಕ ಹೋರಾಟಕ್ಕೆ ನೀಡಲಾದ ಸ್ಥಾನ ಮಾನ ಬಹಳ ಶ್ಲಾಘನೀಯವಾದುದು. ಇದಕ್ಕಾಗಿ ನಾನು ಯೋಗೀ ಜೀ ಮತ್ತು ಅವರ ಇಡೀಯ ತಂಡವನ್ನು ಅಭಿನಂದಿಸುತ್ತೇನೆ. ಚೌರಿ ಚೌರಾದ ಶತಮಾನೋತ್ಸವದ ಅಂಗವಾಗಿ ಇಂದು ಅಂಚೆ ಚೀಟಿಯನ್ನು ಹೊರಡಿಸಲಾಗಿದೆ. ಇಂದಿನಿಂದ ಆರಂಭಗೊಂಡು ಇಡೀ ವರ್ಷ ಕಾರ್ಯಕ್ರಮಗಳು ನಡೆಯಲಿವೆ. ಇದೇ ವೇಳೆ ಚೌರಿ ಚೌರಾದ ಜೊತೆ ನಮ್ಮ ಪ್ರತೀ ಗ್ರಾಮಗಳ, ಪ್ರತೀ ಪ್ರಾದೇಶಿಕ ವಲಯಗಳ ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಕೂಡಾ ಸ್ಮರಿಸಿಕೊಳ್ಳಬೇಕಾಗುತ್ತದೆ. ಈ ವರ್ಷ ದೇಶವು ತನ್ನ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಕಾಲಿಡುತ್ತಿರುವಾಗ, ಇಂತಹ ಕಾರ್ಯಕ್ರಮ ನಡೆಯುವುದು ಹೆಚ್ಚು ಪ್ರಸ್ತುತ.
ಸ್ನೇಹಿತರೇ,
ಚೌರಿ ಚೌರಾವು ಈ ದೇಶದ ಸಾಮಾನ್ಯ ಜನತೆಯ ಸ್ವಯಂಪ್ರೇರಿತ ಹೋರಾಟ. ದುರದೃಷ್ಟವಶಾತ್, ಚೌರಿ ಚೌರಾದ ಹುತಾತ್ಮರ ಬಗ್ಗೆ ವಿವರವಾದ ಚರ್ಚೆ ಆಗಿಲ್ಲ. ಈ ಹುತಾತ್ಮರಿಗೆ ಮತ್ತು ಕ್ರಾಂತಿಕಾರಿಗಳಿಗೆ ಚರಿತ್ರೆಯ ಪುಟಗಳಲ್ಲಿ ಸಾಕಷ್ಟು ಪ್ರಾಮುಖ್ಯತೆ ದೊರೆತಿಲ್ಲ, ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಸುರಿಸಿದ ರಕ್ತ ನಮ್ಮ ದೇಶದ ಮಣ್ಣಿನಲ್ಲಿದೆ ಎಂಬುದು ಖಚಿತ. ಅದು ನಮಗೆ ಸದಾ ಸ್ಪೂರ್ತಿ ನೀಡುತ್ತದೆ.ಅವರು ಬೇರೆ ಬೇರೆ ಹಳ್ಳಿಗಳಿಗೆ ಸೇರಿದವರು, ವಿವಿಧ ವಯೋಮಾನದವರು, ವಿವಿಧ ಸಾಮಾಜಿಕ ಹಿನ್ನೆಲೆಯಿಂದ ಬಂದವರು. ಆದರೆ ಅವರೆಲ್ಲ ಒಗ್ಗೂಡಿದಾಗ ಮಾತೆ ಭಾರತಿಯ ಧೀರ ಮಕ್ಕಳು. ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಒಂದೇ ಘಟನೆಯಲ್ಲಿ 19 ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದ ಪ್ರಕರಣಗಳು ಬಹಳ ವಿರಳ. ಬ್ರಿಟಿಶ್ ಸಾಮ್ರಾಜ್ಯ ನೂರಾರು ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದೆ, ಆದರೆ 150 ಮಂದಿ ಬಾಬಾ ರಾಘವದಾಸ್ ಮತ್ತು ಮಹಾಮಾನಾ ಮಾಳವೀಯ ಜೀ ಅವರ ಪ್ರಯತ್ನಗಳ ಫಲವಾಗಿ ಗಲ್ಲು ಶಿಕ್ಷೆಯಿಂದ ಪಾರಾದರು. ಆದುದರಿಂದ ಇಂದು ಬಾಬಾ ರಾಘವದಾಸ್ ಮತ್ತು ಮಹಾಮಾನ ಮದನ್ ಮೋಹನ್ ಮಾಳವೀಯ ಜೀ ಅವರಿಗೂ ಗೌರವ ಸಲ್ಲಬೇಕಾದ ದಿನ.
ಸ್ನೇಹಿತರೇ,
ಸ್ಪರ್ಧೆಗಳ ಮೂಲಕ ಈ ಇಡೀ ಆಂದೋಲನದಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನತೆಯನ್ನು ತೊಡಗಿಸಿಕೊಂಡಿರುವುದು ನನಗೆ ಸಂತೋಷ ತಂದಿದೆ. ನಮ್ಮ ಯುವಜನತೆ ಅವುಗಳನ್ನು ಅಧ್ಯಯನ ಮಾಡಿದಾಗ ಚರಿತ್ರೆಯ ಹಲವಾರು ಬಹಿರಂಗವಾಗದ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ, ಭಾರತ ಸರಕಾರದ ಶಿಕ್ಷಣ ಸಚಿವಾಲಯವು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಸ್ವಾತಂತ್ರ್ಯ ಹೋರಾಟದ ಘಟನೆಗಳ ಬಗ್ಗೆ ಪುಸ್ತಕಗಳನ್ನು ಬರೆಯುವಂತೆ, ಪ್ರಬಂಧಗಳನ್ನು ಬರೆಯುವಂತೆ ಯುವ ಬರಹಗಾರರಿಗೆ ಆಹ್ವಾನ ನೀಡಿದೆ. ಚೌರಿ ಚೌರಾದ ಅನೇಕ ಧೀರ ಸ್ವಾತಂತ್ರ್ಯ ಹೋರಾಟಗಾರರ ಜೀವನದ ಬಗ್ಗೆ ನೀವು ದೇಶದೆದುರು ಪ್ರಸ್ತುತಪಡಿಸಬಹುದಾಗಿದೆ. ಚೌರಿ ಚೌರಾದ ಶತಮಾನೋತ್ಸವದ ಈ ಕಾರ್ಯಕ್ರಮಗಳನ್ನು ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಹಾಗು ಸ್ವಾವಲಂಬನೆ ಜೊತೆ ಜೋಡಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಪ್ರಯತ್ನಗಳು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ನಮ್ಮ ಶ್ರದ್ಧಾಂಜಲಿಯಾಗಬಲ್ಲವು. ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ ಮತ್ತು ಉತ್ತರ ಪ್ರದೇಶ ಸರಕಾರವನ್ನು ಈ ಕಾರ್ಯಕ್ರಮಕ್ಕಾಗಿ ಅಭಿನಂದಿಸುತ್ತೇನೆ.
ಸ್ನೇಹಿತರೇ,
ಗುಲಾಮಗಿರಿಯ ಬಂಧನದಿಂದ ಕಳಚಿಕೊಳ್ಳುವಲ್ಲಿ ನೆರವಾದ ಸಾಮೂಹಿಕ ಶಕ್ತಿಯೇ ಭಾರತವನ್ನು ಜಗತ್ತಿನ ಬೃಹತ್ ಶಕ್ತಿಯನ್ನಾಗಿಸುತ್ತದೆ. ಈ ಸಾಮೂಹಿಕ ಶಕ್ತಿ ಆತ್ಮ ನಿರ್ಭರ ಭಾರತ ಆಂದೋಲನದ ತಳಹದಿ. ದೇಶದ 130 ಕೋಟಿ ಜನರಿಗಾಗಿ ಮತ್ತು ಇಡೀ ಜಾಗತಿಕ ಕುಟುಂಬಕ್ಕಾಗಿ ನಾವು ದೇಶವನ್ನು ಸ್ವಾವಲಂಬಿಯಾಗಿಸುತ್ತಿದ್ದೇವೆ. ಕಲ್ಪಿಸಿಕೊಳ್ಳಿ, ಈ ಕೊರೊನಾ ಅವಧಿಯಲ್ಲಿ, ಭಾರತವು ಅವಶ್ಯ ಔಷಧಿಗಳನ್ನು 150 ಕ್ಕೂ ಅಧಿಕ ದೇಶಗಳ ನಾಗರಿಕರಿಗೆ ಕಳುಹಿಸಿರುವಾಗ, ವಿಶ್ವದ ವಿವಿಧೆಡೆಯಲ್ಲಿದ್ದ 5 ಮಿಲಿಯನ್ ಗೂ ಅಧಿಕ ಭಾರತೀಯರನ್ನು ಸ್ಥಳಾಂತರಿಸಿರುವಾಗ, ಭಾರತವು ವಿವಿಧ ದೇಶಗಳ ಸಾವಿರಾರು ನಾಗರಿಕರನ್ನು ಅವರವರ ದೇಶಗಳಿಗೆ ಸುರಕ್ಷಿತವಾಗಿ ಕಳುಹಿಸಿಕೊಟ್ಟಿರುವಾಗ, ಮತ್ತು ಭಾರತವು ಇಂದು ತಾನೇ ಕೊರೊನಾ ಲಸಿಕೆಯನ್ನು ತಯಾರಿಸುತ್ತಿರುವಾಗ, ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದಾಗ ತ್ವರಿತಗತಿಯಿಂದ ಲಸಿಕಾ ಕಾರ್ಯಕ್ರಮ ನಡೆಸುತ್ತಿರುವಾಗ, ಮಾನವ ಜೀವ ರಕ್ಷಣೆಯನ್ನು ಆದ್ಯತೆಯಾಗಿರಿಸಿ ಭಾರತವು ಜಗತ್ತಿನ ರಾಷ್ಟ್ರಗಳಿಗೆ ಲಸಿಕೆಯನ್ನು ಒದಗಿಸುತ್ತಿರುವಾಗ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಆತ್ಮಗಳು ಹೆಮ್ಮೆ ಅನುಭವಿಸುತ್ತಿರಬಹುದು.
ಸ್ನೇಹಿತರೇ,
ಈ ಆಂದೋಲನವನ್ನು ಯಶಸ್ವಿಗೊಳಿಸಲು ಅಭೂತಪೂರ್ವ ಪ್ರಯತ್ನಗಳು ಅವಶ್ಯವಿವೆ. ಈ ದೃಢ ಪ್ರಯತ್ನಗಳ ಹೊಳಹು ಈ ವರ್ಷದ ಬಜೆಟಿನಲ್ಲಿ ಪ್ರತಿಫಲಿಸಲ್ಪಟ್ಟಿದೆ. ಕೊರೊನಾ ಅವಧಿಯಲ್ಲಿ ದೇಶವು ಎದುರಿಸಿದ ಸವಾಲುಗಳಿಗೆ ಈ ಬಜೆಟ್ ಹೊಸ ಪ್ರಚೋದನೆಯನ್ನು ನೀಡಲಿದೆ. ಸ್ನೇಹಿತರೇ, ಬಜೆಟಿಗೆ ಮೊದಲು ಬಹಳಷ್ಟು ಮಂದಿ ಖ್ಯಾತನಾಮರು ದೇಶವು ಬಹಳ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ, ಸರಕಾರ ತೆರಿಗೆಗಳನ್ನು ಹೆಚ್ಚಿಸಬೇಕು ಎಂದು ಹೇಳುತ್ತಿದ್ದರು. ದೇಶದ ಸಾಮಾನ್ಯ ನಾಗರಿಕರ ಮೇಲೆ ತೆರಿಗೆ ಹೊರೆ ಹೆಚ್ಚುತ್ತದೆ, ಹೊಸ ತೆರಿಗೆಗಳ ಜಾರಿಯಾಗುತ್ತದೆ ಎನ್ನುತ್ತಿದ್ದರು. ಆದರೆ ದೇಶವಾಸಿಗಳ ಮೇಲೆ ಯಾವುದೇ ಹೊರೆಯನ್ನು ಹಾಕಲಾಗಿಲ್ಲ. ಬದಲು, ಸರಕಾರವು ದೇಶವನ್ನು ತ್ವರಿತವಾಗಿ ಮುಂದಕ್ಕೆ ಕೊಂಡೊಯ್ಯಲು ಹೆಚ್ಚು ಹೆಚ್ಚು ಹಣ ಖರ್ಚು ಮಾಡಲು ನಿರ್ಧರಿಸಿದೆ. ಅಗಲವಾದ ರಸ್ತೆ ನಿರ್ಮಾಣಕ್ಕೆ, ನಿಮ್ಮ ಹಳ್ಳಿಗಳನ್ನು ನಗರಗಳ ಜೊತೆ ಸಂಪರ್ಕಿಸಲು , ಮಾರುಕಟ್ಟೆ, ಮಂಡಿಗಳನ್ನು ಸಂಪರ್ಕಿಸಲು, ಸೇತುವೆಗಳನ್ನು ನಿರ್ಮಾಣ ಮಾಡಲು, ರೈಲ್ವೇ ಹಳಿಗಳನ್ನು ಹಾಕಲು, ಹೊಸ ರೈಲುಗಳನ್ನು ಮತ್ತು ಬಸ್ಸುಗಳನ್ನು ಓಡಿಸಲು ಹಣ ಖರ್ಚು ಮಾಡಲಾಗುತ್ತದೆ. ಉತ್ತಮ ಶಿಕ್ಷಣ ಒದಗಿಸಲು ಮತ್ತು ಯುವ ಜನತೆಗೆ ಹೆಚ್ಚು ಅವಕಾಶಗಳನ್ನು ನಿರ್ಮಾಣ ಮಾಡಲು ಹಲವಾರು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮತ್ತು ಸ್ನೇಹಿತರೇ, ಈ ಕೆಲಸಗಳನ್ನು ಮಾಡುವವರಿಗೆ ಅವಶ್ಯಕತೆಗಳೂ ಇರುತ್ತವೆ. ಸರಕಾರವು ಮೂಲಸೌಕರ್ಯಗಳ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡಿದಂತೆ, ದೇಶದಲ್ಲಿಯ ಲಕ್ಷಾಂತರ ಯುವಜನರಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ ಮತ್ತು ಅಲ್ಲಿ ಆದಾಯದ ಹೊಸ ಅವಕಾಶಗಳೂ ಇರುತ್ತವೆ.
ಸ್ನೇಹಿತರೇ,
ಹಲವಾರು ದಶಕಗಳಿಂದ ನಮ್ಮ ದೇಶದಲ್ಲಿ ಬಜೆಟ್ ಯಾರದಾದರೂ ಹೆಸರಿನಲ್ಲಿ ಯೋಜನೆಗಳನ್ನು ಘೋಷಿಸುವುದಕ್ಕೆ ಸೀಮಿತಗೊಳ್ಳುತ್ತಿತ್ತು. ಬಜೆಟ್ ಮತ ಬ್ಯಾಂಕ್ ಲೆಕ್ಕಾಚಾರದ ಒಂದು ಬಹಿ-ಖಾತಾ (ಪುಸ್ತಕ) ದಂತಾಗಿತ್ತು. ನೀವು ನಿಮ್ಮ ಮನೆ ಖರ್ಚಿಗೆ ಸಂಬಂಧಿಸಿ ನಿಮ್ಮ ಈಗಿನ ಮತ್ತು ಮುಂದಿನ ಜವಾಬ್ದಾರಿಗಳಿಗೆ ಅನುಗುಣವಾಗಿ ಲೆಕ್ಕಾಚಾರವನ್ನು ಮಾಡುತ್ತೀರಿ. ಆದರೆ ಈ ಮೊದಲಿನ ಸರಕಾರಗಳ ಬಜೆಟ್ ಈಡೇರಿಸಲಾಗದ ಯೋಜನೆಗಳ ಘೋಷಣೆಗಳನ್ನು ಒಳಗೊಂಡಿರುತ್ತಿತ್ತು. ಈಗ ದೇಶವು ಆ ಮನಸ್ಥಿತಿಯನ್ನು ಮತ್ತು ಧೋರಣೆ, ನಿಲುವನ್ನು ಬದಲು ಮಾಡಿದೆ.
ಸ್ನೇಹಿತರೇ,
ಕೊರೊನಾ ಅವಧಿಯಲ್ಲಿ ಈ ಜಾಗತಿಕ ಸಾಂಕ್ರಾಮಿಕದ ಜೊತೆ ಭಾರತ ನಡೆಸಿದ ಹೋರಾಟ ಇಂದು ಜಗತ್ತಿನಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ. ಜಗತ್ತಿನ ಹಲವು ದೇಶಗಳು ನಮ್ಮ ಲಸಿಕಾ ಕಾರ್ಯಕ್ರಮದಿಂದ ಕಲಿಯತೊಡಗಿವೆ. ಈಗ ಸಣ್ಣ ಸಣ್ಣ ಆರೋಗ್ಯ ಸಮಸ್ಯೆಗಳಿಗಾಗಿ ಜನರು ನಗರಗಳಿಗೆ ಧಾವಿಸದಂತೆ ಮಾಡಲು ಪ್ರತೀ ಗ್ರಾಮ ಮತ್ತು ಪಟ್ಟಣಗಳಲ್ಲಿ ನಗರಗಳಲ್ಲಿ ಇರುವಂತಹಾ ಚಿಕಿತ್ಸಾ ವ್ಯವಸ್ಥೆಯನ್ನು ರೂಪಿಸುವುದು ದೇಶದ ಉದ್ದೇಶವಾಗಿದೆ. ಅಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿರುವುದು ಮಾತ್ರವಲ್ಲ, ನಗರಗಳಲ್ಲಿ ಕೂಡಾ ಚಿಕಿತ್ಸೆ ಪಡೆಯಲು ತೊಂದರೆಯಾಗದಂತೆ ವ್ಯವಸ್ಥೆ ರೂಪಿಸಲಾಗಿದೆ. ಇದುವರೆಗೆ ನೀವು ಪ್ರಮುಖ ಪರೀಕ್ಷೆಗೆ ಒಳಗಾಗಬೇಕಾದರೆ, ನೀವು ನಿಮ್ಮ ಗ್ರಾಮದಿಂದ ಗೋರಕ್ ಪುರಕ್ಕೆ ಹೋಗಬೇಕಾಗುತ್ತಿತ್ತು. ಅಥವಾ ಕೆಲವೊಮ್ಮೆ ಲಕ್ನೋಗೆ ಇಲ್ಲವೇ ಬನಾರಸ್ ಗೆ ಹೋಗಬೇಕಾಗುತ್ತಿತ್ತು. ಇನ್ನು ಮುಂದೆ, ಎಲ್ಲಾ ಜಿಲ್ಲೆಗಳಲ್ಲೂ ಆಧುನಿಕ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತದೆ. ಪರೀಕ್ಷೆಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಮಾಡಲಾಗುತ್ತದೆ. ಆಗ ನಿಮಗೆ ಈ ಕಷ್ಟಗಳು ಇರುವುದಿಲ್ಲ. ಆದುದರಿಂದ, ಬಜೆಟಿನಲ್ಲಿ ಆರೋಗ್ಯ ವಲಯಕ್ಕೆ ದೊಡ್ಡ ಮೊತ್ತವನ್ನು ಒದಗಿಸಲಾಗಿದೆ.
ಸ್ನೇಹಿತರೇ,
ನಮ್ಮ ದೇಶದ ಪ್ರಗತಿಯಲ್ಲಿ ರೈತರಿಗೆ ಬಹಳ ದೊಡ್ಡ ಪಾಲಿದೆ. ಚೌರಿ ಚೌರಾ ಘಟನೆಯಲ್ಲಿಯೂ ರೈತರ ಬಹಳ ದೊಡ್ಡ ಪಾತ್ರವಿದೆ. ಕಳೆದ ಆರು ವರ್ಷಗಳಲ್ಲಿ ರೈತರ ಅಭ್ಯುದಯಕ್ಕಾಗಿ ನಿರಂತರ ಪ್ರಯತ್ನಗಳನ್ನು ಮಾಡಲಾಗಿದೆ. ಆ ಮೂಲಕ ಅವರನ್ನು ಸ್ವಾವಲಂಬಿಯಾಗಿಸುವ ಪ್ರಯತ್ನ ಮಾಡಲಾಗಿದೆ. ದೇಶವು ಇದರ ಫಲಿತಾಂಶವನ್ನು ಕೊರೊನಾ ಅವಧಿಯಲ್ಲಿ ನೋಡಿದೆ. ಜಾಗತಿಕ ಸಾಂಕ್ರಾಮಿಕ ಸವಾಲುಗಳ ನಡುವೆಯೂ ನಮ್ಮ ಕೃಷಿ ವಲಯ ದೃಢವಾಗಿ ಬೆಳೆದಿದೆ. ಮತ್ತು ರೈತರು ದಾಖಲೆ ಪ್ರಮಾಣದಲ್ಲಿ ಉತ್ಪಾದನೆಗಳನ್ನು ಮಾಡಿದ್ದಾರೆ. ನಮ್ಮ ರೈತರು ಸಶಕ್ತರಾದರೆ, ಕೃಷಿ ವಲಯದಲ್ಲಿ ಬೆಳವಣಿಗೆ ಇನ್ನಷ್ಟು ತ್ವರಿತಗೊಳ್ಳುತ್ತದೆ. ಈ ಬಜೆಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ್ತೆ ಒಂದು ಸಾವಿರ ಮಂಡಿಗಳನ್ನು ಇ-ನಾಮ್ ಜೊತೆ ಸಂಪರ್ಕಿಸಲಾಗುವುದು, ಇದರಿಂದ ಇವು ರೈತರಿಗೆ ಲಾಭ ತರುವ ಮಾರುಕಟ್ಟೆಗಳಾಗುತ್ತವೆ. ಆ ಮೂಲಕ, ಈಗ ರೈತರು ಮಂಡಿಗೆ ಹೋದಾಗ ಅವರಿಗೆ ಉತ್ಪಾದನೆಗಳನ್ನು ಮಾರಾಟ ಮಾಡುವುದು ಸುಲಭವಾಗಲಿದೆ. ಅವರು ಈಗ ತಮಗೆ ಇಷ್ಟ ಬಂದಲ್ಲಿ ಉತ್ಪಾದನೆಗಳನ್ನು ಮಾರಾಟ ಮಾಡಬಹುದಾಗಿದೆ.
ಇದೇ ವೇಳೆ, ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ನಿಧಿಯನ್ನು 40,000 ಕೋ.ರೂ.ಗಳಿಗೆ ಹೆಚ್ಚಿಸಲಾಗಿದೆ. ಇದು ಕೂಡಾ ರೈತರಿಗೆ ನೇರ ಲಾಭ ತರಲಿದೆ. ಈ ಎಲ್ಲಾ ನಿರ್ಧಾರಗಳೂ ನಮ್ಮ ರೈತರನ್ನು ಸ್ವಾವಲಂಬಿಯಾಗಿಸುತ್ತವೆ ಮತ್ತು ಕೃಷಿಯನ್ನು ಲಾಭದಾಯಕ ವ್ಯಾಪಾರವನ್ನಾಗಿಸುತ್ತವೆ. ಕೇಂದ್ರ ಸರಕಾರವು ಉತ್ತರ ಪ್ರದೇಶದಲ್ಲಿ ಆರಂಭಿಸಿದ ಪ್ರಧಾನ ಮಂತ್ರಿ ಸ್ವಾಮಿತ್ವ ಯೋಜನಾವು ದೇಶದಲ್ಲಿ ಗ್ರಾಮಗಳ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರವನ್ನು ವಹಿಸಲಿದೆ. ಈ ಯೋಜನೆ ಅಡಿಯಲ್ಲಿ ಗ್ರಾಮಗಳ ಭೂಮಿಯ ಮತ್ತು ಮನೆಗಳ ಮಾಲಕತ್ವದ ಹಕ್ಕು ಗ್ರಾಮಗಳ ಜನರಿಗೆ ಲಭಿಸಲಿದೆ. ಭೂಮಿ ಮತ್ತು ಮನೆಗಳಿಗೆ ಸಂಬಂಧಿಸಿ ಕಾನೂನು ಪತ್ರಗಳು ಇದ್ದಾಗ, ಅವುಗಳ ಮೌಲ್ಯ ಹೆಚ್ಚಾಗುವುದು ಮಾತ್ರವಲ್ಲ ಜನರಿಗೆ ಕೂಡಾ ಸುಲಭವಾಗಿ ಬ್ಯಾಂಕುಗಳಿಂದ ಸಾಲ ಪಡೆಯಲು ಸಾಧ್ಯವಾಗುತ್ತದೆ. ಗ್ರಾಮಸ್ಥರ ಭೂಮಿ ಮತ್ತು ಮನೆಗಳ ಮೇಲೆ ಯಾರೊಬ್ಬರಿಗೂ ಕೆಟ್ಟ ದೃಷ್ಟಿ ಹಾಕಲು ಸಾಧ್ಯವಾಗುವುದಿಲ್ಲ. ಇದರಿಂದ ದೇಶದ ಸಣ್ಣ ರೈತರಿಗೆ ಮತ್ತು ಗ್ರಾಮಗಳ ಬಡ ಕುಟುಂಬಗಳಿಗೆ ಬಹಳ ದೊಡ್ದ ಪ್ರಯೋಜನವಾಗಲಿದೆ.
ಸ್ನೇಹಿತರೇ,
ಈ ಪ್ರಯತ್ನಗಳು ಇಂದು ದೇಶದ ಪ್ರತಿಷ್ಟೆಯನ್ನು, ಇಮೇಜನ್ನು ಹೇಗೆ ಬದಲು ಮಾಡುತ್ತಿವೆ ಎಂಬುದಕ್ಕೆ ಗೋರಖ್ ಪುರವೇ ಒಂದು ಉದಾಹರಣೆ. ಕ್ರಾಂತಿಕಾರಿಗಳು ಮತ್ತು ಹುತಾತ್ಮರ ನಾಡಾದ ಇಲ್ಲಿ ಈ ಮೊದಲು ಪರಿಸ್ಥಿತಿ ಏನಾಗಿತ್ತು?. ಕಾರ್ಖಾನೆಗಳು ಬಾಗಿಲು ಮುಚ್ಚುತ್ತಿದ್ದವು, ರಸ್ತೆಗಳು ಚಿಂತಾಜನಕವಾಗಿದ್ದವು, ಆಸ್ಪತ್ರೆಗಳು ರೋಗಗ್ರಸ್ತವಾಗಿದ್ದವು. ಆದರೆ ಈಗ ಗೋರಖ್ ಪುರ ರಸಗೊಬ್ಬರ ಕಾರ್ಖಾನೆ ಮತ್ತೆ ಆರಂಭವಾಗುತ್ತಿದೆ. ಇದರಿಂದ ರೈತರಿಗೆ ಪ್ರಯೋಜನವಾಗಲಿದೆ ಮತ್ತು ಯುವ ಜನತೆಗೆ ಉದ್ಯೋಗ ದೊರೆಯಲಿದೆ. ಈಗ, ಎ.ಐ.ಐ.ಎಂ.ಎಸ್. ಕೂಡಾ ಗೋರಖ್ ಪುರಕ್ಕೆ ಬರುತ್ತಿದೆ. ಇಲ್ಲಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಸಾವಿರಾರು ಮಕ್ಕಳ ಜೀವವನ್ನು ಉಳಿಸುತ್ತಿದೆ. ಕಳೆದ ಹಲವಾರು ದಶಕಗಳಿಂದ ಮೆದುಳು ಜ್ವರ, ಯೋಗೀಜಿ ಈ ಮೊದಲು ಹೇಳಿದಂತೆ ಮಕ್ಕಳ ಜೀವವನ್ನು ನುಂಗುತ್ತಿತ್ತು. ಆದರೆ ಯೋಗೀ ಜೀ ಅವರ ನೇತೃತ್ವದಲ್ಲಿ ಗೋರಖ್ ಪುರದ ಜನತೆ ಮಾಡಿದ ಕಾರ್ಯವನ್ನು ಈಗ ವಿಶ್ವದ ಪ್ರಮುಖ ಸಂಸ್ಥೆಯೇ ಮೆಚ್ಚುತ್ತಿದೆ. ಈಗ ಹೊಸ ವೈದ್ಯಕೀಯ ಕಾಲೇಜುಗಳನ್ನು ದೇವೋರಿಯಾ, ಕುಶಿನಗರ್, ಬಸ್ತಿ, ಮಹಾರಾಜಗಂಜ್ ಮತ್ತು ಸಿದ್ಧಾರ್ಥನಗರ್ ಗಳಲ್ಲಿ ತೆರೆಯಲಾಗುತ್ತಿದೆ.
ಸ್ನೇಹಿತರೇ,
ಈ ಮೊದಲು, ಪೂರ್ವಾಂಚಲದಲ್ಲಿ ಇನ್ನೊಂದು ಪ್ರಮುಖ ಸಮಸ್ಯೆ ಇತ್ತು. ನೀವು ನೆನಪಿಸಿಕೊಳ್ಳಬಹುದು, ಯಾರಾದರೊಬ್ಬರು 50 ಕಿಲೋ ಮೀಟರ್ ದೂರ ಸಾಗಬೇಕಿದ್ದರೆ ಅವರು ಮೂರರಿಂದ ನಾಲ್ಕು ಗಂಟೆ ಮೊದಲು ಹೊರಡಬೇಕಿತ್ತು. ಆದರೆ ಇಂದು ಚತುಷ್ಪಥ ಮತ್ತು ಷಟ್ಪಥ ರಸ್ತೆಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಅಷ್ಟು ಮಾತ್ರವಲ್ಲ, ಗೋರಖ್ ಪುರದಿಂದ ಎಂಟು ನಗರಗಳಿಗೆ ವಿಮಾನ ಸೌಲಭ್ಯ ಇದೆ. ಕುಶಿನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.
ಸ್ನೇಹಿತರೇ,
ಈ ಬೆಳವಣಿಗೆಗೆಳು, ಅಭಿವೃದ್ಧಿಗಳು, ಸ್ವಾವಲಂಬನೆಗಾಗಿ ತರಲಾದ ಬದಲಾವಣೆಗಳು ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರಿಗೂ ದೇಶದ ಗೌರವದ ಶ್ರದ್ಧಾಂಜಲಿ. ಇಂದು, ನಾವು ಚೌರಿ ಚೌರಾದ ಶತಮಾನೋತ್ಸವವನ್ನು ಆಚರಿಸುತ್ತಿರುವಾಗ, ನಾವು ಈ ಬದಲಾವಣೆಗಳನ್ನು ಸಾಮೂಹಿಕ ಸಹಭಾಗಿತ್ವದ ಜೊತೆ ಮುನ್ನಡೆಸುವ ನಿರ್ಧಾರವನ್ನು ಕೈಗೊಳ್ಳಬೇಕು. ದೇಶದ ಏಕತೆ ನಮ್ಮ ಮೊದಲ ಆದ್ಯತೆ ಎಂಬುದನ್ನು ಮತ್ತು ದೇಶದ ಘನತೆ ನಮಗೆ ಬಹಳ ಶ್ರೇಷ್ಟವಾದುದು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ಸ್ಪೂರ್ತಿಯೊಂದಿಗೆ, ನಾವು ಪ್ರತಿಯೊಬ್ಬ ದೇಶವಾಸಿಯೊಂದಿಗೆ ಮುನ್ನಡೆಯಬೇಕು. ನನಗೆ ಖಚಿತವಿದೆ, ನವ ಭಾರತ ನಿರ್ಮಾಣ ಮಾಡುವ ನಿರ್ಧಾರದೊಂದಿಗೆ ನಾವು ಕೈಗೊಂಡ ಪ್ರಯಾಣ ಪೂರ್ಣಗೊಳ್ಳುತ್ತದೆ ಎಂಬುದು.
ಹುತಾತ್ಮರ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ, ನಾನು ಮತ್ತೊಮ್ಮೆ ಕೇಳಿಕೊಳ್ಳುವುದೇನೆಂದರೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅವರನ್ನು ಮರೆಯಬೇಡಿ. ಅವರು ಹುತಾತ್ಮರಾದುದರಿಂದ ನಾವು ಸ್ವತಂತ್ರರಾಗಿದ್ದೇವೆ. ಅವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ, ತಮ್ಮ ಕನಸುಗಳನ್ನು ಅದುಮಿಟ್ಟು, ಜೀವ ತ್ಯಾಗ ಮಾಡಿದ್ದಾರೆ. ನಾವು ಸಾಯಬೇಕಾಗಿಲ್ಲ, ಆದರೆ ನಾವು ಕನಿಷ್ಟ ದೇಶಕ್ಕಾಗಿ ಬದುಕುವ ನಿರ್ಧಾರ ಕೈಗೊಳ್ಳಬೇಕು. ಅವರು ದೇಶಕ್ಕಾಗಿ ಸಾಯುವಂತಹ ಅದೃಷ್ಟ ಮಾಡಿದ್ದರು; ನಮಗೆ ದೇಶಕ್ಕಾಗಿ ಬದುಕುವ ಅದೃಷ್ಟ ಲಭಿಸಿದೆ. ಚೌರಿ ಚೌರಾದ ಹುತಾತ್ಮರನ್ನು ಸ್ಮರಿಸುತ್ತಾ, ಈ ಶತಮಾನೋತ್ಸವ ವರ್ಷ ನಮಗೆ ನಿರ್ಧಾರಗಳ ವರ್ಷವಾಗಲಿ, ನಮ್ಮ ಕನಸುಗಳನ್ನು ನನಸು ಮಾಡುವ ವರ್ಷವಾಗಲಿ. ಜನತೆಯ ಒಳಿತಿಗಾಗಿರುವ ಅವಕಾಶವಾಗಲಿ. ಆಗ ಮಾತ್ರ ಈ ಹುತಾತ್ಮರ ನೂರು ವರ್ಷಗಳು ನಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಅವಕಾಶವಾಗಲಿದೆ ಮತ್ತು ಅವರು ಹುತಾತ್ಮರಾದ ಘಟನೆ ನಮಗೆ ಪ್ರೇರಣೆಯ ಮೂಲವಾಗಲಿದೆ.
ಈ ಸ್ಪೂರ್ತಿಯೊಂದಿಗೆ, ನಾನು ನಿಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಘೋಷಣೆ: ಈ ಪಠ್ಯವು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರವಾಗಿದೆ. ಮೂಲ ಭಾಷಣವು ಹಿಂದಿಯಲ್ಲಿದೆ.
***
(Release ID: 1696046)
Visitor Counter : 241
Read this release in:
Bengali
,
Gujarati
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Odia
,
Tamil
,
Telugu
,
Malayalam