ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಪಿಎಂ ಸ್ವನಿಧಿ ಯೋಜನೆಯಡಿ ರಸ್ತೆ ಬದಿ ಆಹಾರ ಮಾರಾಟಗಾರರನ್ನು ಆನ್‌ಲೈನ್‌ನಲ್ಲಿ ಜೋಡಿಸಲು ಜೊಮಾಟೊ ಜೊತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸಹಯೋಗ


ಪಿಎಂ ಸ್ವನಿಧಿ ಸೆ ಸಮೃದ್ಧಿ ಮೊಬೈಲ್ ಆ್ಯಪ್ ಬಿಡುಗಡೆ

ಯೋಜನೆಯ ಫಲಾನುಭವಿಗಳು ಮತ್ತು ಅವರ ಕುಟುಂಬಗಳ ಸಾಮಾಜಿಕ-ಆರ್ಥಿಕ ವಿವರಗಳ ಸಂಗ್ರಹಕ್ಕೆ ಮೊಬೈಲ್ ಅಪ್ಲಿಕೇಶನ್

ರಸ್ತೆ ಬದಿ ಮಾರಾಟಗಾರರಿಗೆ ಹೆಚ್ಚಿನ ಆದಾಯದ ಅವಕಾಶಗಳು

ಪ್ರಾಯೋಗಿಕವಾಗಿ 6 ನಗರಗಳಲ್ಲಿ 300 ಮಾರಾಟಗಾರರೊಂದಿಗೆ ಕಾರ್ಯಕ್ರಮ ಅನುಷ್ಠಾನ

Posted On: 04 FEB 2021 7:47PM by PIB Bengaluru

ಪ್ರಧಾನ ಮಂತ್ರಿ ರಸ್ತೆ ಬದಿ ಮಾರಾಟಗಾರರ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಯ ಭಾಗವಾಗಿ, ಆಹಾರವನ್ನು ಆದೇಶಿಸಲು ಮತ್ತು ತಲುಪಿಸಲು ರಸ್ತೆ ಬದಿ ಆಹಾರ ಮಾರಾಟಗಾರರಿಗೆ ಅದರ ಆಹಾರ-ತಂತ್ರಜ್ಞಾನ ವೇದಿಕೆಯಲ್ಲಿ ಅವಕಾಶ ಕಲ್ಪಿಸಲು ದೇಶದ ಅತಿದೊಡ್ಡ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಜೊಮಾಟೊ ಜೊತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ  ಒಪ್ಪಂದ ಮಾಡಿಕೊಂಡಿದೆ. ಇದು ರಸ್ತೆ ಬದಿ ಆಹಾರ ಮಾರಾಟಗಾರರು ಸಾವಿರಾರು ಗ್ರಾಹಕರೊಂದಿಗೆ ಆನ್‌ಲೈನ್ ಪ್ರವೇಶ ಒದಗಿಸುತ್ತದೆ ಮತ್ತು ಈ ಮಾರಾಟಗಾರರು ತಮ್ಮ ವ್ಯವಹಾರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಪಿಎಂ ಸ್ವನಿಧಿ ಫಲಾನುಭವಿಗಳು ಮತ್ತು ಅವರ ಕುಟುಂಬಗಳ ಸಾಮಾಜಿಕ-ಆರ್ಥಿಕ ವಿವರಗಳನ್ನು ಸಂಗ್ರಹಿಸಲು ಹಾಗೂ ವಿವಿಧ ಕೇಂದ್ರ ಸರ್ಕಾರದ ಯೋಜನೆಗಳೊಂದಿಗೆ ಅವರನ್ನು ಜೋಡಿಸಲು ಪಿಎಂ ಸ್ವನಿಧಿ ಸೆ ಸಮೃದ್ಧಿ- ಆ್ಯಪ್ ಬಿಡುಗಡೆ ಮಾಡಲಾಗಿದೆ.

ಜೊಮಾಟೊ ಜೊತೆಗಿನ ಒಪ್ಪಂದವನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಮತ್ತು ಜೊಮಾಟೊದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮೋಹಿತ್ ಸರ್ದಾನಾ, ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ಶ್ರೀ ದುರ್ಗಾ ಶಂಕರ್ ಮಿಶ್ರಾ ಮತ್ತು ಜೊಮಾಟೊ ಮತ್ತು ಸಚಿವಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ವಿನಿಮಯ ಮಾಡಿಕೊಳ್ಳಲಾಯಿತು. ಬಿಹಾರ, ಚತ್ತೀಸ್‌ಗ ಢ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್‌ನ ರಾಜ್ಯ-ಮಿಷನ್ ನಿರ್ದೇಶಕರು ಮತ್ತು ಭೋಪಾಲ್, ಲೂಧಿಯಾನ, ನಾಗ್ಪುರ, ಪಾಟ್ನಾ, ರಾಯ್‌ಪುರ, ವಡೋದರಾ ನಗರ ಪಾಲಿಕೆಗಳ ಕಮಿಷನರ್‌ಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕೋವಿಡ್ -19 ಸಾಂಕ್ರಾಮಿಕದ ಕಾರಣದಿಂದಾಗಿ ಗ್ರಾಹಕರು ಹೊರಗೆ ಹೋಗದಂತೆ ಮತ್ತು ದೈಹಿಕ ಅಂತರದ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಈ ಸನ್ನಿವೇಶದಲ್ಲಿ, ರಸ್ತೆ ಬದಿ ಆಹಾರ ಮಾರಾಟಗಾರರು ಅವರ ವ್ಯವಹಾರವನ್ನು ವೃದ್ಧಿಸಲು ನೆರವಾಗುವ ತಂತ್ರಜ್ಞಾನ ಶಕ್ತಗೊಂಡ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಂಪರ್ಕಿಸುವುದು ಮುಖ್ಯವಾಗಿದೆ, ಇದರಿಂದಾಗಿ ಅವರಿಗೆ ಆರ್ಥಿಕವಾಗಿ ಲಾಭವಾಗುತ್ತದೆ.

ಈ ರೀತಿಯ ಮೊದಲ ಉಪಕ್ರಮವೊಂದರಲ್ಲಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 2020 ರ ಅಕ್ಟೋಬರ್ 5 ರಂದು ಸ್ವಿಗ್ಗಿ ಜೊತೆ ಒಪ್ಪಂದ ಮಾಡಿಕೊಂಡಿದೆ ಮತ್ತು ಈಗ ರಸ್ತೆ ಬದಿ ಆಹಾರ ಮಾರಾಟಗಾರರನ್ನು ಡಿಜಿಟಲ್ ತಂತ್ರಜ್ಞಾನದೊಂದಿಗೆ ಸಬಲೀಕರಣಗೊಳಿಸಲು ಮತ್ತು ಜನಪ್ರಿಯ ಆಹಾರದ ಸರಬರಾಜು ವೇದಿಕೆಗಳಲ್ಲಿ ಅವರಿಗೆ ಅವಕಾಶ ಕಲ್ಪಿಸುವ ಮೂಲಕ ಹೆಚ್ಚಿನ ಆದಾಯ ಗಳಿಸುವ ಅವಕಾಶಗಳನ್ನು ಒದಗಿಸಲು ಜೊಮಾಟೊ ಜೊತೆ ಕೈಜೋಡಿಸುತ್ತಿದೆ. ಈ ಉಪಕ್ರಮಕ್ಕೆ ಅಗತ್ಯವಾದ ಪೂರ್ವಾಪೇಕ್ಷಿತ ನಿಯಮಗಳನ್ನು ಪೂರೈಸಲು ಬೀದಿ ಬದಿ ಆಹಾರ ಮಾರಾಟಗಾರರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಲು ನಗರಪಾಲಿಕೆಗಳು, ಎಫ್‌ಎಸ್‌ಎಐ, ಜೊಮಾಟೊ ಮತ್ತು ಜಿಎಸ್‌ಟಿ ಅಧಿಕಾರಿಗಳು ಸೇರಿದಂತೆ ಪ್ರಮುಖ ಪಾಲುದಾರರೊಂದಿಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸಮನ್ವಯ ಸಾಧಿಸಿದೆ.

ಒಪ್ಪಂದದ ಅಂಗವಾಗಿ ಈ ಕಾರ್ಯಕ್ರಮವನ್ನು ಆರಂಭದಲ್ಲಿ, ಆರು ನಗರಗಳಲ್ಲಿ 300 ಮಾರಾಟಗಾರರನ್ನು ಜೊಮಾಟೊ ಪ್ಲಾಟ್‌ಫಾರ್ಮ್‌ ಮೂಲಕ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುವುದು. ಆ ನಗರಗಳೆಂದರೆ, ಭೋಪಾಲ್, ಲೂಧಿಯಾನ, ನಾಗ್ಪುರ, ಪಾಟ್ನಾ, ರಾಯ್ಪುರ, ವಡೋದರಾ. ರಸ್ತೆ ಬದಿ ಮಾರಾಟಗಾರರಿಗೆ ಪ್ಯಾನ್ ಮತ್ತು ಎಫ್‌ಎಸ್‌ಎಐ ನೋಂದಣಿ, ತಂತ್ರಜ್ಞಾನ / ಪಾಲುದಾರ ಅಪ್ಲಿಕೇಶನ್ ಬಳಕೆಯ ತರಬೇತಿ, ಮೆನು ಡಿಜಿಟಲೀಕರಣ ಮತ್ತು ಬೆಲೆ ನಿಗದಿ, ನೈರ್ಮಲ್ಯ ಮತ್ತು ಪ್ಯಾಕೇಜಿಂಗ್ ಕುರಿತು ಸಹಾಯ ಮಾಡಲಾಗುವುದು. ಪ್ರಯೋಗಿಕ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಜೊಮಾಟೊ ಈ ಉಪಕ್ರಮವನ್ನು ದೇಶಾದ್ಯಂತ ಹಂತ ಹಂತವಾಗಿ ವಿಸ್ತರಿಸಲು ಯೋಜಿಸಿವೆ.

ಅಧಿಕಾರಿಗಳು ಮನೆ ಮನೆ ಮಾಹಿತಿ ಸಂಗ್ರಹ ಮಾಡಲು ಪಿಎಂ ಸ್ವನಿಧಿ ಸೆ ಸಮೃದ್ಧಿ ಮೊಬೈಲ್ ಅಪ್ಲಿಕೇಶನ್ ಅನ್ನು ಇಂದು ಬಿಡುಗಡೆ ಮಾಡಲಾಯಿತು. ಪಿಎಂ ಸ್ವನಿಧಿ ಯೋಜನೆಯ ಹೆಚ್ಚುವರಿ ಅಂಶವಾಗಿ 2021 ರ ಜನವರಿ 4 ರಂದು 125 ಆಯ್ದ ನಗರಗಳಲ್ಲಿ ಪಿಎಂ ಸ್ವನಿಧಿ ಫಲಾನುಭವಿಗಳು ಮತ್ತು ಅವರ ಕುಟುಂಬಗಳ ಸಾಮಾಜಿಕ-ಆರ್ಥಿಕ ವಿವರಗಳನ್ನು ಸಂಗ್ರಹಣೆಯನ್ನು ಸಚಿವಾಲಯ ಪ್ರಾರಂಭಿಸಿದೆ. ಈ ಮೊಬೈಲ್ ಅಪ್ಲಿಕೇಶನ್ Google Play ಸ್ಟೋರ್ ನಲ್ಲಿ ಲಭ್ಯವಿದೆ. ಯಾವುದೇ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಸಹ ಸಾಮಾಜಿಕ-ಆರ್ಥಿಕ ಪ್ರೊಫೈಲಿಂಗ್ ಚಟುವಟಿಕೆಯನ್ನು ನಡೆಸಲು ಯುಎಲ್ಬಿ ಕ್ಷೇತ್ರ ಕಾರ್ಯಕರ್ತರಿಗೆ ಅಪ್ಲಿಕೇಶನ್ ಅನುವು ಮಾಡಿಕೊಡುತ್ತದೆ. ಭಾರತದ ಗುಣಮಟ್ಟ ಮಂಡಳಿ ಈ ಕಾರ್ಯಕ್ರಮ ಅನುಷ್ಠಾನದ ಪಾಲುದಾರ ಸಂಸ್ಥೆಯಾಗಿದೆ. ಈ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲು ಸಹ ಸಚಿವಾಲಯದ ಜೊತೆ ಸಹಯೋಗ ಮಾಡಿಕೊಂಡಿದೆ.

ಪಿಎಂ ಸ್ವನಿಧಿ ಫಲಾನುಭವಿಗಳು ಮತ್ತು ಅವರ ಕುಟುಂಬಗಳ ಸಾಮಾಜಿಕ-ಆರ್ಥಿಕ ವಿವರಗಳನ್ನು ಸಂಗ್ರಹಿಸುವುದು, ಕೇಂದ್ರದ ವಿವಿಧ ಕಲ್ಯಾಣ ಯೋಜನೆಗಳಿಗೆ ಅವರ ಸಂಭಾವ್ಯ ಅರ್ಹತೆಯನ್ನು ನಿರ್ಣಯಿಸುವುದು ಮತ್ತು ಈ ಯೋಜನೆಗಳೊಂದಿಗೆ ಸಂಪರ್ಕವನ್ನು ಸುಲಭಗೊಳಿಸುವುದು, ಅವರ ಸಮಗ್ರ ಅಭಿವೃದ್ಧಿ ಮತ್ತು ಸಾಮಾಜಿಕ-ಆರ್ಥಿಕ ಉನ್ನತಿಯ ಉದ್ದೇಶವನ್ನು ಈ ಕಾರ್ಯಕ್ರಮವು ಹೊಂದಿದೆ. ಫೆಬ್ರವರಿ 4, 2021 ರವರೆಗೆ, 95,000 ಕ್ಕೂ ಹೆಚ್ಚು ಪಿಎಂಸ್ವನಿಧಿ ಫಲಾನುಭವಿಗಳು ಮತ್ತು ಅವರ 50, 000 ಕುಟುಂಬ ಸದಸ್ಯರ ಡೇಟಾ ಸಂಗ್ರಹಣೆ ಮಾಡಲಾಗಿದೆ. ಪಿಎಂ ಸ್ವನಿಧಿ ಫಲಾನುಭವಿಗಳು ಮತ್ತು ಅವರ ಕುಟುಂಬಗಳನ್ನು ಕೇಂದ್ರದ ಅರ್ಹ ಯೋಜನೆಗಳಿಗೆ ಸಂಪರ್ಕಿಸಲು ಅನುಕೂಲವಾಗುವಂತೆ ಆಯ್ದ ನಗರಗಳಲ್ಲಿ (2021 ಫೆಬ್ರವರಿ 1 ರಿಂದ 6 ರವರೆಗೆ) ಮೊದಲ ಹಂತದ ಶಿಬಿರಗಳು ನಡೆಯುತ್ತಿವೆ.

ಕೋವಿಡ್ -19 ಲಾಕ್‌ಡೌನ್‌ನಿಂದಾಗಿ ಹಾನಿಗೊಳಗಾದ ತಮ್ಮ ಜೀವನೋಪಾಯವನ್ನು ಪುನರಾರಂಭಿಸಲು ಬೀದಿ ಬದಿ ವ್ಯಾಪಾರಿಗಳಿಗೆ ಕೈಗೆಟುಕುವ ಮೂಲ ಬಂಡವಾಳ ಸಾಲವನ್ನು ಒದಗಿಸುವುದಕ್ಕಾಗಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಜೂನ್ 01, 2020 ರಿಂದ ಪಿಎಂ ಸ್ವನಿಧಿ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಅರೆ ನಗರ / ಗ್ರಾಮೀಣ ಪ್ರದೇಶಗಳು ಸೇರಿದಂತೆ ನಗರ ಪ್ರದೇಶಗಳಲ್ಲಿ 2020 ರ ಮಾರ್ಚ್ 24 ರಂದು ಅಥವಾ ಅದಕ್ಕೂ ಮೊದಲು ಮಾರಾಟ ಮಾಡುತ್ತಿದ್ದ 50 ಲಕ್ಷಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿಗೆ ಈ ಯೋಜನೆ ಲಾಭವನ್ನು ನೀಡುತ್ತದೆ. ಯೋಜನೆಯಡಿ, ಮಾರಾಟಗಾರರು ರೂ. 10,000, ಮೇಲಾಧಾರ ಮುಕ್ತ ಮೂಲಬಂಡವಾಳ ಸಾಲವನ್ನು ಒಂದು ವರ್ಷದ ಅವದಿಗೆ ಪಡೆಯಬಹುದು. ಸಾಲದ ನಿಗದಿತ/ ತ್ವರಿತ ಮರುಪಾವತಿಯ ಮೇಲೆ, ತ್ರೈಮಾಸಿಕ ಆಧಾರದ ಮೇಲೆ ವಾರ್ಷಿಕ ಶೇ. 7 ಬಡ್ಡಿ ಸಹಾಯಧನವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಸಾಲದ ತ್ವರಿತ ಮರುಪಾವತಿಗೆ ಯಾವುದೇ ದಂಡವಿರುವುದಿಲ್ಲ. ಈ ಯೋಜನೆಯಡಿ ಡಿಜಿಟಲ್ ವಹಿವಾಟುಗಳನ್ನು ಪ್ರೋತ್ಸಾಹಿಸಲು ವಾರ್ಷಿಕ 1,200 ರೂ ಕ್ಯಾಶ್-ಬ್ಯಾಕ್ ಪ್ರೋತ್ಸಾಹಕವನ್ನು ನೀಡಲಾಗುತ್ತದೆ. ಸಾಲದ ನಿಗದಿತ/ ತ್ವರಿತ ಮರುಪಾವತಿಯ ಮೇಲೆ ವರ್ಧಿತ ಸಾಲ ಮಿತಿಯ ಸೌಲಭ್ಯವನ್ನು ಪಡೆದುಕೊಳ್ಳುವ ಮೂಲಕ ಬೀದಿಬದಿ ವ್ಯಾಪಾರಿಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ  ತಮ್ಮ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಬಹುದು.

ಫೆಬ್ರವರಿ 4, 2020 ರವರೆಗೆ, ಪಿಎಂ ಸ್ವನಿಧಿ ಯೋಜನೆಯಡಿ 36.40 ಲಕ್ಷ ಸಾಲ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 18.80 ಲಕ್ಷಕ್ಕೂ ಹೆಚ್ಚು ಸಾಲಗಳನ್ನು ಮಂಜೂರು ಮಾಡಲಾಗಿದೆ ಮತ್ತು 14.04 ಲಕ್ಷ ಅರ್ಜಿಗಳಿಗೆ ಸಾಲಗಳನ್ನು ವಿತರಿಸಲಾಗಿದೆ.

***



(Release ID: 1695428) Visitor Counter : 171