ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಮೂಲಸೌಕರ್ಯ, ಮಾನವಶಕ್ತಿ ಮತ್ತು ಇತರ ಸಂಪನ್ಮೂಲಗಳೊಂದಿಗೆ ಐದು ಚಲನಚಿತ್ರ ಮಾಧ್ಯಮ ಘಟಕಗಳ ವಿಲೀನಕ್ಕೆ ಸಂಪುಟದ ಅನುಮೋದನೆ

Posted On: 23 DEC 2020 4:49PM by PIB Bengaluru

ವರ್ಷಕ್ಕೆ 3000 ಕ್ಕೂ ಹೆಚ್ಚು ಚಲನಚಿತ್ರಗಳು ನಿರ್ಮಾಣವಾಗುತ್ತಿರುವ, ಖಾಸಗಿ ವಲಯ ನೇತೃತ್ವದ ಉದ್ಯಮವನ್ನು ಹೊಂದಿರುವ ವಿಶ್ವದಲ್ಲೇ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ದೇಶ ಭಾರತವಾಗಿದೆ. ಚಲನಚಿತ್ರ ಕ್ಷೇತ್ರವನ್ನು ಬೆಂಬಲಿಸುವ ಬದ್ಧತೆಯನ್ನು ಈಡೇರಿಸಲು, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ನಾಲ್ಕು ಚಲನಚಿತ್ರ ಮಾಧ್ಯಮ ಘಟಕಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ ವಿಲೀನ ಮಾಡಲು ಅನುಮೋದನೆ ನೀಡಿದೆ. ಅವುಗಳೆಂದರೆ ಚಲನಚಿತ್ರ ವಿಭಾಗ, ಚಲನಚಿತ್ರೋತ್ವವಗಳ ನಿರ್ದೇಶನಾಲಯ, ನ್ಯಾಷನಲ್ ಫಿಲ್ಮ್ ಆರ್ಕೈವ್ಸ್ ಆಫ್ ಇಂಡಿಯಾ ಮತ್ತು ಮಕ್ಕಳ ಚಲನಚಿತ್ರ ಸೊಸೈಟಿ. ಇವುಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ (ಎನ್ ಎಫ್ ಡಿ ಸಿ) ವಿಲೀನಗೊಳಿಸಲಾಗುವುದು. ಒಂದೇ ನಿಗಮದಡಿಯಲ್ಲಿ ಚಲನಚಿತ್ರ ಮಾಧ್ಯಮ ಘಟಕಗಳ ವಿಲೀನವು ಅವುಗಳ ಚಟುವಟಿಕೆಗಳು ಮತ್ತು ಸಂಪನ್ಮೂಲಗಳ ಸಂಯೋಜನೆ ಮತ್ತು ಉತ್ತಮ ಸಮನ್ವಯಕ್ಕೆ ಕಾರಣವಾಗುತ್ತದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನ ಕಚೇರಿಯಾದ ಚಲನಚಿತ್ರ ವಿಭಾಗವನ್ನು 1948 ರಲ್ಲಿ ಸ್ಥಾಪಿಸಲಾಯಿತು. ಮುಖ್ಯವಾಗಿ ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ಮತ್ತು ಭಾರತೀಯ ಇತಿಹಾಸದ ಸಿನಿಮೀಯ ದಾಖಲೆಗಾಗಿ ಸಾಕ್ಷ್ಯಚಿತ್ರಗಳು ಮತ್ತು ಸುದ್ದಿ ನಿಯತಕಾಲಿಕೆಗಳನ್ನು ತಯಾರಿಸಲು ಇದನ್ನು ಆರಂಭಿಸಲಾಯಿತು.

ಭಾರತ ಮಕ್ಕಳ ಚಲನಚಿತ್ರ ಸೊಸೈಟಿ ಸ್ವಾಯತ್ತ ಸಂಸ್ಥೆಯಾಗಿದ್ದು, ಮಕ್ಕಳು ಮತ್ತು ಯುವಜನರಿಗೆ ಚಲನಚಿತ್ರ ಮಾಧ್ಯಮದ ಮೂಲಕ ಮೌಲ್ಯಾಧಾರಿತ ಮನರಂಜನೆಯನ್ನು ಒದಗಿಸುವ ನಿರ್ದಿಷ್ಟ ಉದ್ದೇಶದಿಂದ ಸೊಸೈಟಿಗಳ ಕಾಯ್ದೆಯಡಿ 1955 ರಲ್ಲಿ ಸ್ಥಾಪಿಸಲಾಯಿತು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನ ಕಚೇರಿಯಾದ ನ್ಯಾಷನಲ್ ಫಿಲ್ಮ್ ಆರ್ಕೈವ್ಸ್ ಆಫ್ ಇಂಡಿಯಾವನ್ನು 1964 ರಲ್ಲಿ ಭಾರತೀಯ ಸಿನಿಮೀಯ ಪರಂಪರೆಯನ್ನು ಸಂರಕ್ಷಿಸುವ ಪ್ರಾಥಮಿಕ ಉದ್ದೇಶದಿಂದ ಸ್ಥಾಪಿಸಲಾಯಿತು.

ಭಾರತೀಯ ಚಲನಚಿತ್ರಗಳು ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸಲು 1973 ರಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನ ಕಚೇರಿಯಾಗಿ ಚಲನಚಿತ್ರೋತ್ಸವಗಳ ನಿರ್ದೇಶನಾಲಯವನ್ನು ಸ್ಥಾಪಿಸಲಾಯಿತು.

ಎನ್ಎಫ್ಡಿಸಿ ಕೇಂದ್ರದ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಭಾರತೀಯ ಚಲನಚಿತ್ರೋದ್ಯಮದ ಸಂಘಟಿತ, ಪರಿಣಾಮಕಾರಿ ಮತ್ತು ಸಮಗ್ರ ಅಭಿವೃದ್ಧಿಯನ್ನು ಯೋಜಿಸುವ ಮತ್ತು ಉತ್ತೇಜಿಸುವ ಪ್ರಾಥಮಿಕ ಉದ್ದೇಶದೊಂದಿಗೆ 1975 ರಲ್ಲಿ ಇದನ್ನು ಸ್ಥಾಪಿಸಲಾಯಿತು.

ಮಾಧ್ಯಮ ಘಟಕಗಳ ವಿಲೀನವನ್ನು ಅನುಮೋದಿಸಿದ ಕೇಂದ್ರ ಸಚಿವ ಸಂಪುಟವು, ಆಸ್ತಿ ಮತ್ತು ನೌಕರರ ವರ್ಗಾವಣೆಯ ಬಗ್ಗೆ ಸಲಹೆ ನೀಡಲು ಮತ್ತು ವಿಲೀನದ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ನಿರ್ವಹಣಾ ಸಲಹೆಗಾರ ಮತ್ತು ಕಾನೂನು ಸಲಹೆಗಾರರ ನೇಮಕವನ್ನೂ ಅನುಮೋದಿಸಿದೆ.

ಸಂಯೋಜನೆಯ ಕಾರ್ಯವನ್ನು ಕೈಗೊಳ್ಳುವಾಗ, ಸಂಬಂಧಪಟ್ಟ ಎಲ್ಲಾ ಮಾಧ್ಯಮ ಘಟಕಗಳ ನೌಕರರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ನೋಡಿಕೊಳ್ಳಲಾಗುತ್ತದೆ ಮತ್ತು ಯಾವುದೇ ಉದ್ಯೋಗಿಯನ್ನು ತೆಗೆದುಹಾಕಲಾಗುವುದಿಲ್ಲ.

ಚಲನಚಿತ್ರ ಮಾಧ್ಯಮ ಘಟಕಗಳ ವಿಲೀನದ ಪರಿಣಾಮವಾಗಿ, ಎನ್ಎಫ್ಡಿಸಿಯು, ಚಲನಚಿತ್ರದ ಪ್ರಚಾರ, ತಯಾರಿಕೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಒಂದೇ ಸಂಸ್ಥೆಯಾಗಿರುತ್ತದೆ. ಎಲ್ಲವೂ ಒಂದೇ ನಿರ್ವಹಣೆಯಲ್ಲಿರುತ್ತವೆ. ಒಟಿಟಿ ಪ್ಲಾಟ್ಫಾರ್ಮ್ಗಳ ಚಲನಚಿತ್ರಗಳು / ವಿಷಯ, ಮಕ್ಕಳ ವಿಷಯ, ಅನಿಮೇಷನ್, ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳು ಸೇರಿದಂತೆ ಎಲ್ಲಾ ಪ್ರಕಾರದ-ಚಲನಚಿತ್ರಗಳಲ್ಲಿ ಭಾರತೀಯ ಸಿನೆಮಾದ ಸಮತೋಲಿತ ಮತ್ತು ಕೇಂದ್ರೀಕೃತ ಅಭಿವೃದ್ಧಿಯನ್ನು ಖಚಿತಪಡಿಸುವುದು ಹೊಸ ಘಟಕದ ಉದ್ದೇಶವಾಗಿದೆ.

ಚಲನಚಿತ್ರ ಮಾಧ್ಯಮ ಘಟಕಗಳನ್ನು ಒಂದೇ ನಿಗಮದಡಿಯಲ್ಲಿ ವಿಲೀನಗೊಳಿಸುವುದರಿಂದ ವಿವಿಧ ಚಟುವಟಿಕೆಗಳ ನಡುವೆ ಸಮನ್ವಯ ಉಂಟಾಗುತ್ತದೆ. ಇದು ಚಟುವಟಿಕೆಗಳ ನಕಲನ್ನು ಕಡಿಮೆ ಮಾಡಲು ಮತ್ತು ಉಳಿತಾಯಕ್ಕೆ ಕಾರಣವಾಗುತ್ತದೆ.

***



(Release ID: 1683173) Visitor Counter : 135