ಪರಿಸರ ಮತ್ತು ಅರಣ್ಯ ಸಚಿವಾಲಯ

ಚಿರತೆಗಳ ಸಂಖ್ಯೆ ಶೇ.60% ಹೆಚ್ಚಳ; ಭಾರತದಲ್ಲೀಗ 12,852 ಚಿರತೆಗಳು


ಹುಲಿ, ಸಿಂಹ ಮತ್ತು ಚಿರತೆಗಳ ಸಂತತಿ ಹೆಚ್ಚಳವು ವನ್ಯಜೀವಿಗಳು, ಪ್ರಾಣಿಸಂಕುಲ ಮತ್ತು ಜೀವವೈವಿಧ್ಯಗಳ ಸಂರಕ್ಷಣೆಯ ಸಾಕ್ಷಿಯಾಗಿದೆ: ಕೇಂದ್ರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್

Posted On: 21 DEC 2020 6:14PM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಶ್ರೀ ಪ್ರಕಾಶ್ ಜಾವಡೇಕರ್ ಅವರು ದೆಹಲಿಯಲ್ಲಿ ಚಿರತೆಗಳ ಸ್ಥಿತಿಗತಿ-ಅಸ್ತಿತ್ವ ಕುರಿತ ವರದಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಸಚಿವರು, ದೇಶಾದ್ಯಂತ ಕಳೆದ ಕೆಲವು ವರ್ಷಗಳಿಂದ ಹುಲಿ, ಸಿಂಹ ಮತ್ತು ಚಿರತೆಗಳ ಸಂತತಿ ಹೆಚ್ಚುತ್ತಿರುವುದು ವನ್ಯಜೀವಿಗಳು, ಪ್ರಾಣಿಸಂಕುಲ ಮತ್ತು ಜೀವವೈವಿಧ್ಯಗಳ ಸಂರಕ್ಷಣೆಗೆ ನಡೆಸುತ್ತಿರುವ ಪ್ರಯತ್ನಗಳನ್ನು ಸಾಕ್ಷೀಕರಿಸಿದೆ ಎಂದರು.

ಭಾರತದಲ್ಲೀಗ 12,852 ಚಿರತೆಗಳಿವೆ. 2014ರಲ್ಲಿ ನಡೆಸಿದ್ದ ಗಣತಿಯಲ್ಲಿ ದೇಶಾದ್ಯಂತ ಅಂದಾಜು 7,910 ಚಿರತೆಗಳಿರುವುದು ಪತ್ತೆಯಾಗಿತ್ತು. ಇದೀಗ ಅವುಗಳ ಸಂತತಿ 60%ಗಿಂತ ಹೆಚ್ಚಿಗೆ ಏರಿಕೆ ಕಂಡಿದೆ. ಮಧ್ಯಪ್ರದೇಶದಲ್ಲಿ ಗರಿಷ್ಠ 3,421, ಕರ್ನಾಟಕದಲ್ಲಿ 1,783 ಮತ್ತು ಮಹಾರಾಷ್ಟ್ರದಲ್ಲಿ 1,690 ಚಿರತೆಗಳು ಅರಣ್ಯ ಭಾಗಗಳಲ್ಲಿ ನೆಲೆಸಿವೆ ಎಂದರು.

ಭಾರತದಲ್ಲಿ ಹುಲಿಗಳ ಸಂರಕ್ಷಣೆಗೆ ಸರಕಾರ ಆದ್ಯತೆಯ ಗಮನ ನೀಡಿದೆ. ಪರಿಸರ ವ್ಯವಸ್ಥೆಯ ಮೇಲ್ವಿಚಾರಣೆಗೆ ಸರಕಾರ ನಡೆಸುತ್ತಿರುವರಕ್ಷಣಾತ್ಮಕ ಪಾತ್ರವನ್ನು ಇದು ತೋರುತ್ತಿದೆ. ಹುಲಿ, ಸಿಂಹಗಳ ಜತೆಗೆ, ಚಿರತೆಯಂತಹ ವನ್ಯಪ್ರಾಣಿ ಸಂಕುಲದ ಸಂರಕ್ಷಣೆಯ ಮೇಲೂ ಇದು ಬೆಳಕು ಚೆಲ್ಲಿದೆ ಎಂದು ಪ್ರಕಾಶ್ ಜಾವಡೇಕರ್ ಅವರು ತಿಳಿಸಿದರು.

ಭಾರತದ ವಿಶ್ವ ದಾಖಲೆಯ ಹುಲಿ ಸಮೀಕ್ಷೆಯು ದೇಶದಲ್ಲಿರುವ ಚಿರತೆಗಳ ಸಂಖ್ಯೆಯನ್ನು ಅಂದಾಜು ಮಾಡಿದೆ. ಹುಲಿಗಳ ಅರಣ್ಯ ವ್ಯಾಪ್ತಿಯಲ್ಲಿ ಚಿರತೆಗಳ ಸಂತತಿ 12,852ರಷ್ಟಿದೆ ಎಂದು ಪತ್ತೆ ಮಾಡಲಾಗಿದೆ (ಅಂದಾಜು 12,172-13,535). ಅವು ದಟ್ಟಾರಣ್ಯ, ಬಹುಬಳಕೆಯ ಅರಣ್ಯ ಪ್ರದೇಶಗಳು, ಹುಲ್ಲುಗಾವಲು ಮತ್ತು ಬೇಟೆಯಾಡಬಹುದಾದ ಸಮೃದ್ಧ ಸಂರಕ್ಷಿತ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ನಮೂನೆ(ಮಾದರಿ) ಗುರುತಿಸುವ ಸಾಫ್ಟ್ವೇರ್ ಬಳಸಿ ನಡೆಸಿದ ಛಾಯಾಗ್ರಹಣದಲ್ಲಿ ಒಟ್ಟು 51,337 ಚಿರತೆಗಳನ್ನು ಗುರುತಿಸಲಾಗಿದೆ. ಅದರಲ್ಲಿ 5,240 ವಯಸ್ಕ ಚಿರತೆಗಳು ಪತ್ತೆಯಾಗಿವೆ. ಆದರೆ, ಸಂಖ್ಯಾಶಾಸ್ತ್ರದ ವಿಶ್ಲೇಷಣೆ ಮೂಲಕ ನಡೆಸಿರುವ ಚಿರತೆಯ ಗಣತಿ ಪ್ರಕಾರ, ಹುಲಿಗಳ ವ್ಯಾಪ್ತಿಯಲ್ಲಿ 12,800 ಚಿರತೆಗಳಿವೆ ಎಂದು ಅಂದಾಜು ಮಾಡಲಾಗಿದೆ.

ಚಿರತೆಗಳು ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ನೆಲೆಸುತ್ತವೆ. ಹುಲಿಗಳು ನೆಲೆಸುವ ದಟ್ಟಾರಣ್ಯ ಪ್ರದೇಶಗಳೇ ಅವುಗಳ ಆವಾಸ ಸ್ಥಾನ. ಆದರೆ, ಕೆಲವು ಚಿರತೆಗಳು ಆಹಾರ, ನೀರಿಗಾಗಿ ಅರಣ್ಯೇತರ ಆವಾಸ ಸ್ಥಾನಗಳಲ್ಲಿ ಅಂದರೆ, ಕಾಫಿ ತೋಟ, ಚಹಾ ತೋಟ, ಗಿಡ ಗಂಟೆ ಬೆಳೆದಿರುವ ಬೆಟ್ಟ ಗುಡ್ಡ ಪ್ರದೇಶಗಳಲ್ಲೂ ಅವು ಕಾಣಸಿಗುತ್ತವೆ. ಅಲ್ಲದೆ, ಹಿಮಾಲಯದ ಶಿಖರ ಭಾಗಗಳು, ಶುಷ್ಕ ಭೂ ಪ್ರದೇಶಗಳು, ದೇಶದ ಈಶಾನ್ಯ ಭಾಗದ ಪ್ರದೇಶಗಳಲ್ಲಿ ಸಮೀಕ್ಷೆ ನಡೆದಿಲ್ಲ. ಹಾಗಾಗಿ, ಚಿರತೆಗಳ ಅಂದಾಜು ಗಣತಿಯಲ್ಲಿ ಪ್ರತಿ ಪ್ರದೇಶದ ಚಿರತೆಗಳ ಕನಿಷ್ಠ ಸಂಖ್ಯೆಯನ್ನು ಪರಿಗಣಿಸಬೇಕಿದೆ.

ಹುಲಿಗಳ ಸಂರಕ್ಷಣೆ ಮತ್ತು ಅವುಗಳ ಮೇಲ್ವಿಚಾರಣೆಯಿಂದ ಚಿರತೆ ಸೇರಿದಂತೆ ಇತರೆ ಪ್ರಾಣಿ ಸಂಕುಲ ಮತ್ತು ಸಂತತಿಗಳ ಸ್ಥಿತಿಗತಿ ಮತ್ತು ಅಸ್ತಿತ್ವ ಮೌಲ್ಯಮಾಪನ ಮಾಡಲು ಸಹಾಯಕವಾಗಿದೆರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ(ಡಬ್ಲ್ಯುಐಐ)ಗಳು ಅತಿ ಶೀಘ್ರವೇ ದೇಶದಲ್ಲಿರುವ ಇತರೆ ವನ್ಯಜೀವಿಗಳ ಸ್ಥಿತಿಗತಿ ಮತ್ತು ಅಸ್ತಿತ್ವ ಕುರಿತು ವರದಿ ಪ್ರಕಟಿಸಲಿವೆ.

ಪೂರ್ಣ ವರದಿ

***(Release ID: 1682628) Visitor Counter : 309