ಪ್ರಧಾನ ಮಂತ್ರಿಯವರ ಕಛೇರಿ
80ನೇ ಅಖಿಲ ಭಾರತ ಅಧ್ಯಕ್ಷೀಯ ಅಧಿಕಾರಿಗಳ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಷಣ
Posted On:
26 NOV 2020 5:38PM by PIB Bengaluru
ನಮಸ್ಕಾರ,
ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ ಜೀ, ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಜೀ, ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ್ ಜೋಶೀ ಜೀ, ರಾಜ್ಯ ಸಭಾ ಉಪ ಸಭಾಪತಿ ಶ್ರೀ ಹರಿವಂಶ ಜೀ, ಸಂಸದೀಯ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ಅರ್ಜುನ್ ಮೇಘಾವಾಲ್ ಜೀ, ಗುಜರಾತ್ ವಿಧಾನ ಸಭಾ ಸ್ಪೀಕರ್ ಶ್ರೀ ರಾಜೇಂದ್ರ ತ್ರಿವೇದಿ ಜೀ, ದೇಶದ ವಿವಿಧ ಶಾಸಕಾಂಗಗಳ ಅಧ್ಯಕ್ಷೀಯ ಅಧಿಕಾರಿಗಳೇ, ಇತರ ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ.
ನರ್ಮದಾ ನದಿ ದಂಡೆಯ ಮೇಲೆ ಮತ್ತು ಸರ್ದಾರ್ ಪಟೇಲ್ ಜೀ ಅವರ ಸಾಮೀಪ್ಯದಲ್ಲಿ ಎರಡು ಪ್ರಮುಖ ಸಂದರ್ಭಗಳ ಸಂಗಮವಾಗಿದೆ. ಸಂವಿಧಾನ ದಿನದಂದು ನನ್ನೆಲ್ಲಾ ಭಾರತೀಯ ಸಹವರ್ತಿಗಳಿಗೆ ಶುಭಾಶಯಗಳು. ನಮ್ಮ ಸಂವಿಧಾನವನ್ನು ರೂಪಿಸಲು ದುಡಿದ ಆ ಎಲ್ಲಾ ಮಹಿಳೆಯರು ಮತ್ತು ಮಹನೀಯರಿಗೆ ನಾವು ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ. ಇಂದು ಸಂವಿಧಾನ ದಿನ ಮತ್ತು ಸಂವಿಧಾನವನ್ನು ರಕ್ಷಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುವ ಅಧ್ಯಕ್ಷೀಯ ಅಧಿಕಾರಿಗಳ ಸಮ್ಮೇಳನವೂ ನಡೆಯುತ್ತಿದೆ. ಈ ವರ್ಷ ಅಧ್ಯಕ್ಷೀಯ ಅಧಿಕಾರಿಗಳ ಸಮ್ಮೇಳನದ ಶತಮಾನೋತ್ಸವ ವರ್ಷ ಕೂಡಾ. ನಿಮಗೆ ಈ ಪ್ರಮುಖ ಮೈಲಿಗಲ್ಲಿನ ಸಂದರ್ಭಕ್ಕಾಗಿ ಬಹಳ ಬಹಳ ಶುಭ ಕಾಮನೆಗಳು.
ಸ್ನೇಹಿತರೇ,
ಡಾ. ರಾಜೇಂದ್ರ ಪ್ರಸಾದ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಸಹಿತ ಘಟನಾ ಸಭೆಯ ಎಲ್ಲಾ ಪ್ರಮುಖ ಸದಸ್ಯರಿಗೆ ವಂದನೆ ಸಲ್ಲಿಸಬೇಕಾದ ದಿನವಿದು. ಯಾಕೆಂದರೆ ದೇಶವಾಸಿಗಳಿಗೆ ಅವರ ಅವಿರತ ಪ್ರಯತ್ನಗಳ ಮೂಲಕ ಸಂವಿಧಾನ ಸಿಕ್ಕಿದೆ. ಇಂದು ಪ್ರೇರಣೆಗಾಗಿ ಪೂಜ್ಯ ಬಾಪು ಮತ್ತು ಬದ್ಧತೆಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಶಿರಬಾಗಿ ವಂದನೆ ಸಲ್ಲಿಸಬೇಕಾದ ದಿನವಿದು. ಇಂತಹ ಹಲವಾರು ದೂರದರ್ಶಿತ್ವದ ನಾಯಕರು ಹೊಸ ಸ್ವತಂತ್ರ ಭಾರತವನ್ನು ನಿರ್ಮಾಣ ಮಾಡಲು ಭದ್ರವಾದ ನೆಲೆಗಟ್ಟನ್ನು ಹಾಕಿದರು. ಐದು ವರ್ಷಗಳ ಹಿಂದೆ ನವೆಂಬರ್ 26 ರಂದು ಸಂವಿಧಾನ ದಿನವನ್ನು ಆಚರಿಸಲು ನಿರ್ಧಾರವನ್ನು ಕೈಗೊಳ್ಳಲಾಯಿತು, ದೇಶವು ಇಂತಹ ಪ್ರಯತ್ನಗಳ ಬಗ್ಗೆ ಅರಿವನ್ನು ಹೊಂದಿರಬೇಕು ಎಂಬ ಕಾರಣದಿಂದ ಇದನ್ನು ಕೈಗೊಳ್ಳಲಾಯಿತು. ನಮ್ಮ ಪ್ರಜಾಪ್ರಭುತ್ವದ ಈ ಪ್ರಮುಖ ಕಾರ್ಯಕ್ರಮಕ್ಕಾಗಿ ನಾನು ಇಡೀ ದೇಶವನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ಇಂದಿನ ದಿನಾಂಕ ದೇಶದ ಮೇಲೆ ನಡೆದ ಅತ್ಯಂತ ದೊಡ್ಡ ಭಯೋತ್ಪಾದಕ ದಾಳಿಯ ಜೊತೆಗೂ ಬೆಸೆದುಕೊಂಡಿದೆ. 2008ರಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಮುಂಬಯಿಯ ಮೇಲೆ ದಾಳಿ ಮಾಡಿದರು. ಈ ದಾಳಿಯಲ್ಲಿ ಹಲವಾರು ಮಂದಿ ಮೃತಪಟ್ಟರು. ವಿವಿಧ ದೇಶಗಳ ಜನರೂ ಮೃತಪಟ್ಟರು. ಮುಂಬಯಿ ದಾಳಿಯಲ್ಲಿ ಮೃತರಾದ ಎಲ್ಲರಿಗೂ ನಾನು ಶೃದ್ಧಾಪೂರ್ವಕ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಈ ದಾಳಿಯಲ್ಲಿ ಹಲವು ಮಂದಿ ಧೈರ್ಯಶಾಲೀ ಪೊಲೀಸ್ ಸಿಬ್ಬಂದಿಗಳೂ ಹುತಾತ್ಮರಾದರು. ಅವರಿಗೂ ನಾನು ಶೃದ್ಧಾಪೂರ್ವಕ ಗೌರವ ಸಲ್ಲಿಸುತ್ತೇನೆ. ಭಾರತವು ಮುಂಬಯಿ ದಾಳಿಯ ಗಾಯಗಳನ್ನು ಮರೆಯಲಾರದು. ಈಗ ಇಂದಿನ ಭಾರತ ಭಯೋತ್ಪಾದನೆಯ ಜೊತೆ ಹೊಸ ನೀತಿಯೊಂದಿಗೆ , ಹೊಸ ರೀತಿಯಲ್ಲಿ ಹೋರಾಡುತ್ತಿದೆ. ಭಾರತದ ರಕ್ಷಣೆಗೆ ಸರ್ವಸಿದ್ಧತೆಯಲ್ಲಿರುವ ನಮ್ಮ ಭದ್ರತಾ ಪಡೆಗಳನ್ನು ನಾನು ಶ್ಲಾಘಿಸುತ್ತೇನೆ. ಮುಂಬಯಿ ದಾಳಿಯಂತಹ ಒಳಸಂಚುಗಳನ್ನು ವಿಫಲಗೊಳಿಸಲು, ತಡೆಯಲು ಮತ್ತು ಭಯೋತ್ಪಾದನೆಗೆ ಸೂಕ್ತ ಉತ್ತರ ಕೊಡಲು ಅವು ನಿರಂತರ ಕಾರ್ಯನಿರತವಾಗಿವೆ.
ಸ್ನೇಹಿತರೇ,
ಅಧ್ಯಕ್ಷೀಯ ಅಧಿಕಾರಿಗಳಾಗಿ ನೀವು ನಮ್ಮ ಪ್ರಜಾಪ್ರಭುತ್ವದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದೀರಿ. ನೀವೆಲ್ಲಾ ಅಧ್ಯಕ್ಷೀಯ ಅಧಿಕಾರಿಗಳು ಸಂವಿಧಾನ ಮತ್ತು ದೇಶದ ಜನಸಾಮಾನ್ಯನ ನಡುವೆ ಕಾನೂನು ರೂಪಕರಾಗಿ ಪ್ರಮುಖ ಸೇತುವೆಯಾಗಿದ್ದೀರಿ. ಶಾಸಕರಾಗಿ, ನೀವು ಸದನಗಳ ಸ್ಪೀಕರ್ ಆಗಿದ್ದೀರಿ. ಆದುದರಿಂದ ನೀವು ನಮ್ಮ ಸಂವಿಧಾನದ ಮೂರು ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಡುವೆ ಉತ್ತಮ ಸೌಹಾರ್ದತೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಬಲ್ಲಿರಿ. ಈ ಸಮ್ಮೇಳನದಲ್ಲಿ ನೀವಿದನ್ನು ವಿವರವಾಗಿ ಚರ್ಚಿಸಿದ್ದೀರಿ. ಸಂವಿಧಾನವನ್ನು ರಕ್ಷಿಸುವಲ್ಲಿ ನ್ಯಾಯಾಂಗಕ್ಕೆ ತನ್ನದೇ ಆದ ಪಾತ್ರವಿದೆ, ಆದರೆ ಸ್ಪೀಕರ್ ಅವರು ಕಾನೂನು ರೂಪಕರ ಮುಖ. ಆದುದರಿಂದ ಸ್ಪೀಕರ್ ಸಂವಿಧಾನ ಸುರಕ್ಷಾ ವಲಯದ ಮೊದಲ ಪಹರೆದಾರರು ಕೂಡಾ.
ಸ್ನೇಹಿತರೇ,
ಸಂವಿಧಾನದ ಮೂರು ಅಂಗಗಳ ಪಾತ್ರ ಸಹಿತ ಅಲಂಕಾರದವರೆಗೆ ಎಲ್ಲವನ್ನೂ ಸಂವಿಧಾನದಲ್ಲಿಯೇ ವಿವರಿಸಲಾಗಿದೆ. 1970 ರ ದಶಕದಲ್ಲಿ ಅಧಿಕಾರದ ಪ್ರತ್ಯೇಕತೆಯನ್ನು ದುರ್ಬಲಗೊಳಿಸಲು ಪ್ರಯತ್ನವೊಂದು ಹೇಗೆ ನಡೆಯಿತು ಎಂಬುದನ್ನು ನಾವು ನೋಡಿದ್ದೇವೆ. ಆದರೆ ದೇಶವು ಸಂವಿಧಾನದಿಂದಲೇ ಇದಕ್ಕೆ ಪರಿಹಾರವನ್ನು ಪಡೆಯಿತು. ವಸ್ತುಸ್ಥಿತಿ ಎಂದರೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಇದರಿಂದ ಕಲಿತುಕೊಂಡು ಮುನ್ನಡೆದವು. ಆ ಕಲಿಕೆ ಇಂದಿಗೆ ಕೂಡಾ ಪ್ರಸ್ತುತವಾಗಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಸಮನ್ವಯವನ್ನು ಉತ್ತಮಪಡಿಸಲು ಕಳೆದ 6-7 ವರ್ಷಗಳಲ್ಲಿ ಪ್ರಯತ್ನಗಳು ನಡೆದಿವೆ.
ಸ್ನೇಹಿತರೇ,
ಇಂತಹ ಪ್ರಯತ್ನಗಳು ಸಾರ್ವಜನಿಕ ವಿಶ್ವಾಸದ ಮೇಲೆ ಬಹಳ ದೊಡ್ಡ ಪರಿಣಾಮವನ್ನುಂಟು ಮಾಡುತ್ತವೆ. ಅತ್ಯಂತ ಕಠಿಣ ಸಮಯದಲ್ಲಿಯೂ ಈ ಮೂರು ಅಂಗ ಸಂಸ್ಥೆಗಳ ಮೇಲೆ ಜನರ ನಂಬಿಕೆ, ವಿಶ್ವಾಸ ಮುಂದುವರಿಯುತ್ತದೆ. ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ನಾವು ಇದರ ಅನುಭವವನ್ನು ಪಡೆದಿದ್ದೇವೆ. ಈ ಪಕ್ವತೆಗೆ ಮುಖ್ಯ ಕಾರಣಗಳು, ಭಾರತದ 130 ಕೋಟಿ ಜನ ಈ ಪಕ್ವತೆಯನ್ನು ತೋರ್ಪಡಿಸಲು ಮುಖ್ಯ ಕಾರಣಗಳು ಸಂವಿಧಾನದ ಮೂರು ಅಂಗಗಳಲ್ಲಿ ಎಲ್ಲರಿಗೂ ಇರುವ ನಂಬಿಕೆ ಮತ್ತು ವಿಶ್ವಾಸ. ಈ ನಂಬಿಕೆ, ವಿಶ್ವಾಸವನ್ನು ವೃದ್ಧಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ರಾಷ್ಟ್ರದ ಹಿತಾಸಕ್ತಿಗಾಗಿ, ಆತ್ಮನಿರ್ಭರ ಭಾರತ ಮತ್ತು ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಹೊಸ ಶಾಸನಗಳಿಗೆ ಸಂಸತ್ತಿನ ಸರ್ವಸಿದ್ಧತೆಯ ಚುರುಕುತನ ಮತ್ತು ಬದ್ಧತೆ ಅಭೂತಪೂರ್ವವಾದುದು. ಸಂಸತ್ತಿನ ಉಭಯ ಸದನಗಳೂ ನಿಗದಿತ ಸಮಯವನ್ನು ಮೀರಿ ಕಾರ್ಯನಿರ್ವಹಿಸಿದವು. ವೇತನ ಕಡಿತದಂತಹ ಕ್ರಮಗಳಿಗೆ ಒಪ್ಪುವ ಮೂಲಕ ಸಂಸತ್ ಪಟುಗಳು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಹಲವು ರಾಜ್ಯಗಳ ಶಾಸಕರು ಅವರ ವೇತನದ ಭಾಗವನ್ನು ನೀಡುವ ಮೂಲಕ ಕೊರೊನಾ ವಿರುದ್ಧದ ಸಮರಕ್ಕೆ ಕೊಡುಗೆ ನೀಡಿದರು. ಈ ಎಲ್ಲಾ ಪ್ರಯತ್ನಗಳನ್ನು ನಾನು ಕೊಂಡಾಡುತ್ತೇನೆ. ಕೋವಿಡ್ ಸಮಯದಲ್ಲಿ, ಈ ಕ್ರಮಗಳು ಸಾರ್ವಜನಿಕ ವಿಶ್ವಾಸವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವು.
ಸ್ನೇಹಿತರೇ,
ಕೊರೊನಾ ಅವಧಿಯಲ್ಲಿ ನಮ್ಮ ಚುನಾವಣಾ ವ್ಯವಸ್ಥೆಯ ಶಕ್ತಿಯನ್ನೂ ವಿಶ್ವವು ನೋಡುವಂತಾಯಿತು. ಬೃಹತ್ ಪ್ರಮಾಣದಲ್ಲಿ ಚುನಾವಣೆಗಳು, ಸಕಾಲದಲ್ಲಿ ಫಲಿತಾಂಶ, ಸುಸೂತ್ರವಾಗಿ ಹೊಸ ಸರಕಾರಗಳ ರಚನೆ ಸುಲಭದ ಸಂಗತಿಯಲ್ಲ. ನಮ್ಮ ಸಂವಿಧಾನದಿಂದ ನಾವು ಪಡೆದ ಶಕ್ತಿ ಬಹಳ ಕಷ್ಟದ ಕೆಲಸವನ್ನೂ ಸುಲಭಸಾಧ್ಯ ಮಾಡುತ್ತದೆ. ನಮ್ಮ ಸಂವಿಧಾನ 21 ನೇ ಶತಮಾನದಲ್ಲಿ ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಮೀರಿ, ನಮಗೆ ನಿರಂತರ ಮಾರ್ಗದರ್ಶನ ಮಾಡುತ್ತಿರುವಂತೆ ನೋಡಿಕೊಳ್ಳುವುದು ಮತ್ತು ಹೊಸ ತಲೆಮಾರಿನ ಜೊತೆ ಇರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.
ಸಂವಿಧಾನವು ಅದರ 75 ನೇ ವರ್ಷದತ್ತ ಸಾಗುತ್ತಿದೆ. ಅದೇ ರೀತಿ ಸ್ವತಂತ್ರ ಭಾರತ ಕೂಡಾ 75 ನೇ ವರ್ಷದತ್ತ ಸಾಗುತ್ತಿದೆ. ಕಾಲದ ಅವಶ್ಯಕತೆಗಳಿಗೆ ಅನುಗುಣವಾಗಿ ವ್ಯವಸ್ಥೆಗಳು ಅನುಕೂಲಕರವಾಗಿರುವಂತೆ ಮಾಡಲು ಅವಶ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಬದ್ಧತೆಯ ಭಾವದೊಂದಿಗೆ ನಾವು ಕೆಲಸ ಮಾಡಬೇಕಾಗುತ್ತದೆ. ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆ ನಿರ್ಧಾರಗಳನ್ನು ಅನುಷ್ಟಾನಕ್ಕೆ ತರಲು ಶಾಸಕಾಂಗ, ಕಾರ್ಯಾಂಗ, ಮತ್ತು ನ್ಯಾಯಾಂಗಗಳು ಉತ್ತಮ ಸೌಹಾರ್ದತೆಯೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ನಮ್ಮ ಪ್ರತೀ ನಿರ್ಧಾರಗಳಿಗೆ ರಾಷ್ತ್ರೀಯ ಹಿತಾಸಕ್ತಿಗಳು ಮಾನದಂಡಗಳಾಗಿರಬೇಕು. ರಾಷ್ಟ್ರೀಯ ಹಿತಾಸಕ್ತಿಗೆ ಗರಿಷ್ಟ ಆದ್ಯತೆ ದೊರೆಯಬೇಕು.
ರಾಷ್ಟ್ರೀಯ ಹಿತಾಸಕ್ತಿ, ಸಾರ್ವಜನಿಕ ಹಿತಾಸಕ್ತಿಯನ್ನು ಮೀರಿ ರಾಜಕೀಯ ಕೆಲಸ ಮಾಡಿದರೆ ನಾವು ಅದಕ್ಕೆ ಶುಲ್ಕ ತೆರಬೇಕಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟಿರಬೇಕಾಗುತ್ತದೆ. ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯಲ್ಲಿ ಚಿಂತನೆ ಮಾಡತೊಡಗಿದರೆ ಪರಿಸ್ಥಿತಿ ಏನಾಗಬಹುದು ?. ಸರ್ದಾರ್ ಸರೋವರ ಅಣೆಕಟ್ಟು ಇದಕ್ಕೆ ದೊಡ್ಡ ಉದಾಹರಣೆ.
ಸ್ನೇಹಿತರೇ,
ಕೇವಾಡಿಯಾ ಪ್ರವಾಸದಲ್ಲಿ ನೀವೆಲ್ಲರೂ ಸರ್ದಾರ್ ಸರೋವರ ಅಣೆಕಟ್ಟೆಯ ವಿಸ್ತಾರ, ವೈಭವ ಮತ್ತು ಅದರ ಶಕ್ತಿಯನ್ನು ನೋಡಿರುತ್ತೀರಿ. ಆದರೆ ಅಣೆಕಟ್ಟಿನ ಕಾಮಗಾರಿ ವರ್ಷಗಳಿಂದ ಸ್ಥಗಿತಗೊಂಡಿತ್ತು. ಸ್ವಾತಂತ್ರ್ಯದ ಬಳಿಕದ ಕೆಲವೇ ವರ್ಷಗಳಲ್ಲಿ ಈ ಯೋಜನೆ ಆರಂಭಗೊಂಡಿತ್ತು, ಆದರೆ ಅದು ಸ್ವಾತಂತ್ರ್ಯದ 75 ನೇ ವರ್ಷ ಹತ್ತಿರ ಬರುವಾಗ ಕೆಲವೇ ವರ್ಷಗಳಿಗೆ ಮೊದಲು ಪೂರ್ಣಗೊಂಡಿತು. ಸಾರ್ವಜನಿಕ ಹಿತಾಸಕ್ತಿಯ ಇಂತಹ ದೊಡ್ಡ ಯೋಜನೆ ಸಂವಿಧಾನದ ದುರ್ಬಳಕೆ ಮತ್ತು ಅಡೆತಡೆ ಪ್ರಯತ್ನಗಳ ಮೂಲಕ ಇಷ್ಟೊಂದು ವರ್ಷಗಳ ಕಾಲ ಅನುಷ್ಟಾನಕ್ಕೆ ಬರಲಿಲ್ಲ.
ಇಂದು, ಗುಜರಾತಿನ ಜೊತೆ ಮಧ್ಯಪ್ರದೇಶದ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಜನತೆ ಈ ಅಣೆಕಟ್ಟಿನಿಂದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈ ಅಣೆಕಟ್ಟು ಗುಜರಾತಿನ 10 ಲಕ್ಷ ಹೆಕ್ಟೇರ್ ಭೂಮಿಗೆ ಮತ್ತು ರಾಜಸ್ಥಾನದ 2.5 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಖಾತ್ರಿಪಡಿಸುತ್ತಿದೆ. ಸರ್ದಾರ್ ಸರೋವರ ಅಣೆಕಟ್ಟಿನಿಂದಾಗಿ ಗುಜರಾತಿನ 9,000 ಕ್ಕೂ ಅಧಿಕ ಗ್ರಾಮಗಳಿಗೆ ಮತ್ತು ರಾಜಸ್ಥಾನ ಹಾಗು ಗುಜರಾತಿನ ಇತರ ಹಲವಾರು ಸಣ್ಣ ಅಥವಾ ದೊಡ್ಡ ನಗರಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ.
ಅಲ್ಲಿ ನೀರಿನ ಪ್ರಸ್ತಾಪವಾಗಿರುವುದರಿಂದ ಕೆಲವು ಹೊಸ ವಿಷಯಗಳು ನನಗೆ ನೆನಪಿಗೆ ಬಂದವು. ನರ್ಮದಾದ ನೀರು ಹಲವಾರು ವಿವಾದಗಳಿಗೆ ಈಡಾಗಿತ್ತು. ಹಲವಾರು ಕಠಿಣ ಸವಾಲುಗಳನ್ನು ಎದುರಿಸಿ ಇದಕ್ಕೆ ಪರಿಹಾರ ರೂಪಿಸಿದ ಬಳಿಕ ನೀರು ರಾಜಸ್ಥಾನಕ್ಕೆ ತಲುಪಿತ್ತು. ಭೈರಾನ್ ಸಿಂಗ್ ಶೆಖಾವತ್ ಜೀ ಮತ್ತು ಜಸ್ವಂತ್ ಸಿಂಗ್ ಜೀ ಅವರು ನಾನು ಗಾಂಧೀನಗರದಲ್ಲಿದ್ದಾಗ ಭೇಟಿಯಾಗಲು ಬಂದರು. ನಾನು ಅವರಿಗೆ ಭೇಟಿಯ ಉದ್ದೇಶದ ಬಗ್ಗೆ ಕೇಳಿದೆ. ಅವರು ಅದನ್ನು ವೈಯಕ್ತಿಕವಾಗಿ ತಿಳಿಸುವುದಾಗಿ ಹೇಳಿದರು. ಅವರು ಬಂದಾಗ ನನಗೆ ಶುಭಾಶಯ ಹೇಳಿದರು ಮತ್ತು ಆಶೀರ್ವದಿಸಿದರು. ಇಷ್ಟೊಂದು ಪ್ರೀತಿ ಮತ್ತು ಭಾವನಾತ್ಮಕತೆ ಬಗ್ಗೆ ನಾನು ಕಾರಣವೇನು ಎಂದು ಕೇಳಿದೆ. ಕೆಲವು ಹನಿ ನೀರಿಗಾಗಿ ಹಲವು ಯುದ್ದಗಳು ನಡೆದ ಇತಿಹಾಸದ ಸಾಕ್ಷಿ ಇದೆ, ಮತ್ತು ಎರಡು ಕುಟುಂಬಗಳು ಬೇರೆ ಬೇರೆಯಾದ ಸಾಕ್ಷಿ ಇದೆ. ನಾವು ನಿಮ್ಮನ್ನು ಭೇಟಿಯಾಗಲು ಇಲ್ಲಿ ಬಂದಿದ್ದೇವೆ ಯಾಕೆಂದರೆ ನರ್ಮದಾ ನದಿ ನೀರು ಗುಜರಾತಿನಿಂದ ಯಾವುದೇ ಹೋರಾಟ, ಜಗಳ ಇಲ್ಲದೆ ರಾಜಸ್ಥಾನದ ಭೂಮಿಗೆ ತಲುಪಿದೆ, ಇದು ನಮಗೆ ಹೆಮ್ಮೆಯ ಮತ್ತು ಸಂಭ್ರಮದ ಸಂಗತಿ ಎಂಬುದಾಗಿ ಅವರು ಹೇಳಿದರು. ಈಗ ನೋಡಿ, ಇಂತಹ ಕೆಲಸ ಈ ಮೊದಲು ಆಗಿದೆಯೇ.. ಇಂದಿನ ಸಂಗತಿ ತೆಗೆದುಕೊಳ್ಳಿ, ಈ ಅಣೆಕಟ್ಟಿನಲ್ಲಿ ಉತ್ಪಾದನೆಯಾದ ವಿದ್ಯುತ್ ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರಗಳಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.
ಸ್ನೇಹಿತರೇ,
ಇದನ್ನು ಹಲವಾರು ವರ್ಷಗಳ ಹಿಂದೆಯೇ ಮಾಡಬಹುದಾಗಿತ್ತು. ಸಾರ್ವಜನಿಕ ಕಲ್ಯಾಣ ಮತ್ತು ಅಭಿವೃದ್ಧಿಗೆ ಗರಿಷ್ಟ ಆದ್ಯತೆ ನೀಡುವ ಮನೋಸ್ಥಿತಿ, ಧೋರಣೆ ಇದ್ದಿದ್ದರೆ, ಈ ಮೊದಲೇ ಈ ಪ್ರಯೋಜನಗಳನ್ನು ಪಡೆಯಬಹುದಿತ್ತು. ಆದರೆ ವರ್ಷಗಳ ಕಾಲ ಜನತೆಗೆ ಈ ಸವಲತ್ತುಗಳನ್ನು ನಿರಾಕರಿಸಲಾಗಿತ್ತು. ಮತ್ತು ಇದನ್ನು ಮಾಡಿದವರಿಗೆ ಪಶ್ಚಾತ್ತಾಪವೂ ಇರಲಿಲ್ಲ. ಇಂತಹ ಬೃಹತ್ ರಾಷ್ಟ್ರೀಯ ನಷ್ಟಕ್ಕೆ ಮತ್ತು ಅಣೆಕಟ್ಟಿನ ಹೆಚ್ಚುತ್ತಿರುವ ವೆಚ್ಚಕ್ಕೆ ಕಾರಣರಾದವರಿಗೆ ವಿಷಾದದ ಲವಲೇಶವೂ ಇರಲಿಲ್ಲ. ನಾವು ಈ ಮನಸ್ಥಿತಿಯಿಂದ ದೇಶವನ್ನು ಹೊರತರಬೇಕು.
ಸ್ನೇಹಿತರೇ,
ಸರ್ದಾರ್ ಪಟೇಲ್ ಜೀ ಅವರ ಬೃಹತ್ ಪ್ರತಿಮೆಗೆ ಭೇಟಿ ನೀಡಿದಾಗ, ನಿಮ್ಮಲ್ಲಿ ಹೊಸ ಶಕ್ತಿ ಪ್ರವಹಿಸುತ್ತಿರುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ನಿಮಗೆ ಪ್ರೇರಣೆ ಕೂಡಾ ಲಭಿಸಿರಬಹುದು. ವಿಶ್ವದ ಅತ್ಯಂತ ಬೃಹತ್ ಪ್ರತಿಮೆ, ಏಕತಾ ಪ್ರತಿಮೆ, ಅದು ಪ್ರತಿಯೊಬ್ಬ ಬಾರತೀಯರ ಹೆಮ್ಮೆ, ಗೌರವವನ್ನು ಎತ್ತರಿಸಿದೆ. ಸರ್ದಾರ್ ಪಟೇಲ್ ಪ್ರತಿಮೆಯನ್ನು ನಿರ್ಮಿಸುವಾಗ, ಅವರು ಜನಸಂಘದ ಅಥವಾ ಭಾರತೀಯ ಜನತಾ ಪಕ್ಷದ ಸದಸ್ಯರಾಗಿರಲಿಲ್ಲ. ಅಲ್ಲಿ ರಾಜಕೀಯ ಪಕ್ಷಪಾತ ಇರಲಿಲ್ಲ. ಸದನದಲ್ಲಿ ಏಕತೆಯ ಭಾವನೆ ಇರುವುದು ಅಗತ್ಯವಾಗಿತ್ತು. ದೇಶದಲ್ಲಿ ಕೂಡಾ ಏಕತೆಯ ಭಾವನೆ ಇರುವುದು ಅವಶ್ಯವಾಗಿತ್ತು. ಸರ್ದಾರ್ ಸಾಹೇಬರ ಈ ಸ್ಮಾರಕದಲ್ಲಿ ರಾಜಕೀಯ ಪಕ್ಷಪಾತ ಇರಲಿಲ್ಲ ಎನ್ನುವುದಕ್ಕೆ ಇದು ಒಂದು ಜೀವಂತ ಉದಾಹರಣೆ. ದೇಶ ಮತ್ತು ದೇಶದ ಘನತೆ, ಗೌರವಗಳಿಗಿಂತ ಯಾವುದೂ ದೊಡ್ಡದಲ್ಲ.
2018 ರಲ್ಲಿ ಏಕತಾ ಪ್ರತಿಮೆ ಅನಾವರಣಗೊಂಡ ಬಳಿಕ ಸುಮಾರು 46 ಲಕ್ಷ ಜನರು ಸರ್ದಾರ್ ಸಾಹೇಬರಿಗೆ ತಮ್ಮ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದಾರೆ ಎಂದರೆ ನೀವು ಕಲ್ಪಿಸಿಕೊಳ್ಳಿ. ಕೊರೊನಾ ಕಾರಣದಿಂದಾಗಿ ಪ್ರತಿಮೆಗೆ ಭೇಟಿಯನ್ನು 7 ತಿಂಗಳುಗಳ ಕಾಲ ಸಾರ್ವಜನಿಕರಿಗೆ ಮುಚ್ಚಿರದಿದ್ದರೆ, ಈ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು. ನರ್ಮದಾ ಮಾತೆಯ ಆಶೀರ್ವಾದದೊಂದಿಗೆ, ಈ ಏಕತಾ ಪ್ರತಿಮೆಯಿಂದಾಗಿ ಕೇವಾಡಿಯಾ ಪಟ್ಟಣ ಭಾರತದ ಅತ್ಯಂತ ಪ್ರಭಾವಶಾಲಿಯಾದ ಪಟ್ಟಣವಾಗಿ ಬೆಳೆಯುವ ತುರುಸಿನ ಸ್ಪರ್ಧೆಯಲ್ಲಿದೆ. ರಾಜ್ಯಪಾಲರಾದ ಶ್ರೀ ಆಚಾರ್ಯ ಅವರು ವಿವರಿಸಿದಂತೆ ಕೆಲ ವರ್ಷಗಳಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತಿವೆ. ಯಾವುದೇ ಕೆಲಸ ಮಾಡುವಾಗ ಅಭಿವೃದ್ಧಿ ಮತ್ತು ಕರ್ತವ್ಯಗಳಿಗೆ ಗರಿಷ್ಟ ಆದ್ಯತೆ ನೀಡಿದರೆ ಫಲಿತಾಂಶಗಳು ಬರತೊಡಗುತ್ತವೆ.
ಈ ಎರಡು ದಿನಗಳಲ್ಲಿ, ನೀವು ಹಲವಾರು ಸಂಸ್ಥೆಗಳಿಗೆ ಸೇರಿದ ಹಲವಾರು ಮಾರ್ಗದರ್ಶಕರನ್ನು ಮತ್ತು ಜನರನ್ನು ಭೇಟಿಯಾಗಿರಬಹುದು. ಈ ಪ್ರದೇಶದ ಯುವ ಪುತ್ರರು ಮತ್ತು ಪುತ್ರಿಯರು, ಬುಡಕಟ್ಟು ಕುಟುಂಬಗಳ ಪುತ್ರಿಯರು ಏನನ್ನಾದರೂ ವಿವರಿಸುವಾಗ ಖಚಿತವಾದ ಶಬ್ದಗಳನ್ನು ಬಳಸುತ್ತಿರುವುದನ್ನು ನೀವು ಗಮನಿಸಿರಬಹುದು. ಈ ಸಾಮರ್ಥ್ಯ ದೇಶದಲ್ಲಿದೆ ಮತ್ತು ನಮ್ಮ ಗ್ರಾಮಗಳಲ್ಲಿಯೂ ಇದೆ. ಸ್ವಲ್ಪ ಬೂದಿ ತೆಗೆದರೆ ಅದು ಪ್ರಜ್ವಲಿಸುತ್ತದೆ. ಇದನ್ನು ನೀವು ನೋಡಿರಬಹುದು. ಸ್ನೇಹಿತರೇ, ಅಭಿವೃದ್ಧಿ ಕಾರ್ಯಗಳು ಬುಡಕಟ್ಟು ಸಹೋದರರಲ್ಲಿ ಮತ್ತು ಸಹೋದರಿಯರಲ್ಲಿ ಹೊಸ ವಿಶ್ವಾಸ, ಭರವಸೆ ಮೂಡಿಸಿವೆ.
ಸ್ನೇಹಿತರೇ,
ಸಂವಿಧಾನವು ಪ್ರತೀ ನಾಗರಿಕರ ಸ್ವಾಭಿಮಾನ ಮತ್ತು ವಿಶ್ವಾಸ ವೃದ್ಧಿಯನ್ನು ಅಪೇಕ್ಷಿಸುತ್ತದೆ. ಮತ್ತು ಆ ನಿಟ್ಟಿನಲ್ಲಿ ನಾವೂ ದೃಢ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಾವು ನಮ್ಮ ಕರ್ತವ್ಯಗಳನ್ನು ನಮ್ಮ ಹಕ್ಕುಗಳ ಮೂಲವಾಗಿ ಅಂಗೀಕರಿಸಿದಾಗ ಮತ್ತು ನಮ್ಮ ಕರ್ತವ್ಯಗಳಿಗೆ ಗರಿಷ್ಟ ಆದ್ಯತೆ ನೀಡಿದಾಗ ಅದು ಸಾಧ್ಯವಾಗುತ್ತದೆ. ಸಂವಿಧಾನವು ಕರ್ತವ್ಯಗಳತ್ತ ಗರಿಷ್ಟ ಒತ್ತು ನೀಡಿದೆ. ಆದರೆ ಇದನ್ನು ಈ ಮೊದಲು ಮರೆತುಬಿಡಲಾಗಿತ್ತು. ಪ್ರತಿಯೊಬ್ಬರೂ, ಅವರು ಸಾಮಾನ್ಯ ನಾಗರಿಕರಾಗಿರಲಿ, ಸಿಬ್ಬಂದಿಯಾಗಿರಲಿ, ಸಾರ್ವಜನಿಕ ಪ್ರತಿನಿಧಿಯಾಗಿರಲಿ, ಅಥವಾ ನ್ಯಾಯಾಂಗ ವ್ಯವಸ್ಥೆಯ ಜೊತೆಯಲ್ಲಿರುವ ವ್ಯಕ್ತಿಯಾಗಲಿ, ಯಾವುದೇ ಸಂಘಟನೆಯಲ್ಲಿ ಅವರು ತಮ್ಮ ಕರ್ತವ್ಯಗಳನ್ನು ಪಾಲಿಸುವಲ್ಲಿ ಆದ್ಯತೆ ನೀಡಬೇಕು. ಮತ್ತು ನಮ್ಮ ಸ್ಪೀಕರ್ ಬಿರ್ಲಾ ಜೀ ಕರ್ತವ್ಯಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ.
ಸ್ನೇಹಿತರೇ,
ನಮ್ಮ ಸಂವಿಧಾನವು ಹಲವಾರು ವಿಶೇಷ ಸಂಗತಿಗಳನ್ನು ಒಳಗೊಂಡಿದೆ. ಆದರೆ ಒಂದು ಅತಿ ವಿಶೇಷ ಎಂದರೆ ಅಲ್ಲಿ ಕರ್ತವ್ಯಕ್ಕೆ ಮಹತ್ವ ನೀಡಲಾಗಿದೆ. ಮಹಾತ್ಮಾ ಗಾಂಧೀಜಿ ಅವರೇ ಇದರ ಬಗೆ ಬಹಳ ಆಸಕ್ತಿ ಹೊಂದಿದ್ದರು. ಅವರು ಹಕ್ಕುಗಳು ಮತ್ತು ಕರ್ತವ್ಯಗಳ ನಡುವೆ ನಿಕಟ ಸಂಬಂಧ ಇರುವುದನ್ನು ಮನಗಂಡಿದ್ದರು. ಒಮ್ಮೆ ನಾವು ನಮ್ಮ ಕರ್ತವ್ಯಗಳನ್ನು ನಿಭಾಯಿಸಿದರೆ, ಹಕ್ಕುಗಳು ಸುರಕ್ಷಿತವಾಗಿರುತ್ತವೆ.
ಸ್ನೇಹಿತರೇ,
ಈಗ, ನಮ್ಮ ಪ್ರಯತ್ನಗಳು ಸಂವಿಧಾನದ ಬಗೆಗೆ ಜನಸಾಮಾನ್ಯರ ತಿಳುವಳಿಕೆ ಹೆಚ್ಚು ಸಮಗ್ರವಾಗಿರುವಂತೆ ಮಾಡುವ ನಿಟ್ಟಿನಲ್ಲಿವೆ. ಆದುದರಿಂದ, ಸಂವಿಧಾನವನ್ನು ಅರಿತುಕೊಳ್ಳುವುದು ಮತ್ತು ತಿಳಿದುಕೊಳ್ಳುವುದು ಬಹಳ ಅವಶ್ಯ. ಈಗಿನ ದಿನಮಾನಗಳಲ್ಲಿ ನಾವು ಕೆ.ವೈ.ಸಿ. ಯ ಬಗ್ಗೆ ಕೇಳುತ್ತಿದ್ದೇವೆ. ಇದು ಅತ್ಯಂತ ಸಾಮಾನ್ಯವಾಗಿದೆ ಮತ್ತು ಪ್ರತಿಯೊಬ್ಬರೂ ಅದರ ಬಗ್ಗೆ ತಿಳಿದುಕೊಂಡಿದ್ದಾರೆ. ಕೆ.ವೈ.ಸಿ. ಎಂದರೆ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ ಎಂಬುದಾಗಿದೆ. ಡಿಜಿಟಲ್ ಭದ್ರತೆಯಲ್ಲಿ ಇದು ಬಹಳ ಮುಖ್ಯ ಸಂಗತಿ. ಅದೇ ರೀತಿ, ಕೆ.ವೈ.ಸಿ. ಹೊಸ ಮಾದರಿಯಲ್ಲಿ ನಿಮ್ಮ ಸಂವಿಧಾನವನ್ನು ತಿಳಿದುಕೊಳ್ಳಿ ಎಂಬುದಾಗಬೇಕು. ಇದು ನಮ್ಮ ಸಾಂವಿಧಾನಿಕ ರಕ್ಷಣಾ ಕವಚವನ್ನು ಬಲಪಡಿಸಬಲ್ಲದು. ಆದುದರಿಂದ, ನಾನು ಭವಿಷ್ಯದ ತಲೆಮಾರುಗಳಿಗಾಗಿ ಸಂವಿಧಾನದ ಬಗ್ಗೆ ಸುಸ್ಥಿರ ಜಾಗೃತಿ ಆಂದೋಲನ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಭಾವಿಸುತ್ತೇನೆ. ನಾವು ನಮ್ಮ ಹೊಸ ತಲೆಮಾರುಗಳಿಗೆ ಇದನ್ನು ನಿಕಟವಾಗಿ ಪರಿಚಯಿಸಿಕೊಡಬೇಕಾಗಿದೆ. ವಿಶೇಷವಾಗಿ ಶಾಲೆ, ಕಾಲೇಜುಗಳಲ್ಲಿ ಈ ಕೆಲಸ ನಡೆಯಬೇಕಾಗಿದೆ.
ನಾನು ನಿಮ್ಮೆಲ್ಲರನ್ನೂ ಕೇಳಿಕೊಳ್ಳುವುದೇನೆಂದರೆ, ನಮ್ಮ ಸಂವಿಧಾನವನ್ನು ನಮ್ಮ ಯುವಜನರಲ್ಲಿ ಹೆಚ್ಚು ಜನಪ್ರಿಯಗೊಳಿಸಲು ಉಪಕ್ರಮಗಳನ್ನು ಕೈಗೊಳ್ಳಬೇಕು ಎಂಬುದಾಗಿ. ಅದನ್ನೂ ನವೀನ ವಿಧಾನಗಳ ಮೂಲಕ ಮಾಡಬೇಕು.
ಸ್ನೇಹಿತರೇ,
ಸಾಂವಿಧಾನಿಕ ಮತ್ತು ಕಾನೂನು ಭಾಷೆಯ ಜೊತೆ ನಾವು ಬಹಳ ದೊಡ್ಡ ಸಮಸ್ಯೆಯನ್ನು ಹೊಂದಿದ್ದೇವೆ. ಅದು ಯಾರಿಗಾಗಿದೆಯೋ ಅವರಿಗೆ ಇದನ್ನು ಅರ್ಥೈಸಿಕೊಳ್ಳಲು ಕಷ್ಟ. ಅದು ಕಠಿಣ ಶಬ್ದಗಳು, ಧೀರ್ಘ ವಾಕ್ಯಗಳು, ದೊಡ್ಡ ಪ್ಯಾರಾಗಳು, ನಿಬಂಧನೆಗಳು, ಉಪ ನಿಬಂಧನೆಗಳು ಇತ್ಯಾದಿಗಳನ್ನು ಒಳಗೊಂಡು ಕಠಿಣ ಜಾಲವಾಗಿ ಹೋಗಿದೆ. ನಮ್ಮ ಕಾನೂನು ಭಾಷೆಯು ಸಾಮಾನ್ಯ ಮನುಷ್ಯ ಕೂಡಾ ಅರ್ಥೈಸಿಕೊಳ್ಳುವಷ್ಟು ಸರಳವಾಗಿರಬೇಕು. ಭಾರತೀಯರಾದ ನಾವು ನಮಗೆ ಸಂವಿಧಾನವನ್ನು ರೂಪಿಸಿಕೊಂಡಿದ್ದೇವೆ. ಆದುದರಿಂದ ನಾವು ಸಾಮಾನ್ಯ ನಾಗರಿಕರು ಕೂಡಾ ಎಲ್ಲಾ ನಿರ್ಧಾರಗಳು ಮತ್ತು ಕಾನೂನುಗಳ ಜೊತೆ ಸಂಪರ್ಕಿಸಲ್ಪಟ್ಟಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
ಅಧ್ಯಕ್ಷೀಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಬಹಳ ಭರವಸೆಯ ಸಹಾಯ ಮಾಡಬಲ್ಲರು. ಅದೇ ರೀತಿ, ಈ ಕಾಲಕ್ಕೆ ತಕ್ಕುದಲ್ಲದ ಕಾನೂನುಗಳನ್ನು ತೆಗೆದು ಹಾಕುವ ಪ್ರಕ್ರಿಯೆಯನ್ನೂ ಸರಳಗೊಳಿಸಬೇಕು. ನಮ್ಮ ಗೌರವಾನ್ವಿತ ಹರಿವಂಶ ಜೀ ಅವರು ಈ ನಿಟ್ಟಿನಲ್ಲಿ ಹಲವು ಉತ್ತಮ ಉದಾಹರಣೆಗಳನ್ನು ನೀಡಿದ್ದಾರೆ. ಈ ಕಾನೂನುಗಳು ಜೀವನವನ್ನು ಸುಲಭಗೊಳಿಸುವುದಕ್ಕೆ ಬದಲಾಗಿ ಅಡ್ಡಿ ಆತಂಕಗಳನ್ನು ಉಂಟು ಮಾಡುತ್ತವೆ. ಕಳೆದ ಕೆಲವು ವರ್ಷಗಳಲ್ಲಿ, ಇಂತಹ ನೂರಾರು ಕಾನೂನುಗಳನ್ನು ತೆಗೆದುಹಾಕಲಾಗಿದೆ. ಆದರೆ ನಾವು ಹಳೆಯ ಕಾನೂನುಗಳನ್ನು ತೆಗೆದು ಹಾಕುವ ಸ್ವಯಂಚಾಲಿತ ಪ್ರಕ್ರಿಯೆಯೊಂದನ್ನು ಹೊಂದುವುದು ಸಾಧ್ಯವಿಲ್ಲವೇ?.
ಕೆಲವು ಕಾನೂನುಗಳಲ್ಲಿ ಅಸ್ತಮಾನದ ವ್ಯವಸ್ಥೆಯನ್ನು ಈಗ ಅಳವಡಿಸಿಕೊಳ್ಳಲಾಗಿದೆ. ಈಗ ವಿನಿಯೋಗ ಕಾಯ್ದೆಯಲ್ಲಿ ಮತ್ತು ಇತರ ಕೆಲವು ಕಾಯ್ದೆಗಳಲ್ಲಿ ವ್ಯಾಪ್ತಿಯನ್ನು ವಿಸ್ತರಿಸಲು ಪರಿಶೀಲನೆ ನಡೆಸಲಾಗುತ್ತಿದೆ. ನಾನು ಸಲಹೆ ಮಾಡುವುದೇನೆಂದರೆ ರಾಜ್ಯ ಶಾಸಕಾಂಗಗಳು ಹಳೆಯ ನಿರುಪಯುಕ್ತ ಕಾಯ್ದೆಗಳನ್ನು ಶಾಸನ ಪುಸ್ತಕದಿಂದ ತೆಗೆದು ಹಾಕಲು ಪ್ರಕ್ರಿಯಾತ್ಮಕ ಆವಶ್ಯಕತೆಗಳನ್ನು ಪೂರೈಸುವ ವ್ಯವಸ್ಥೆಯನ್ನು ಪರಿಗಣಿಸಬಹುದಾಗಿದೆ ಎಂಬುದು. ಇದು ಕಾನೂನು ಕುರಿತ ಗೊಂದಲವನ್ನು ಕಡಿಮೆ ಮಾಡುವುದಲ್ಲದೆ, ಅವು ಸಾಮಾನ್ಯ ನಾಗರಿಕರ ಮನವೊಲಿಸುತ್ತವೆ.
ಸ್ನೇಹಿತರೇ,
ಅಲ್ಲಿ ಇನ್ನೊಂದು ಮುಖ್ಯ ವಿಷಯವಿದೆ ಮತ್ತು ಅದು ಚುನಾವಣೆಗಳದ್ದು. ಒಂದು ರಾಷ್ಟ್ರ, ಒಂದು ಚುನಾವಣೆ ಬರೇ ಚರ್ಚೆಯ ವಿಷಯವಲ್ಲ. ಬದಲು ಅದು ಭಾರತದ ಆವಶ್ಯಕತೆ. ಪ್ರತೀ ಕೆಲವು ತಿಂಗಳಿಗೊಮ್ಮೆ ಭಾರತದ ಯಾವುದಾದರೊಂದು ಭಾಗದಲ್ಲಿ ಚುನಾವಣೆಗಳು ನಡೆಯುತ್ತಿರುತ್ತವೆ. ನಿಮಗೆ ಇದು ಚೆನ್ನಾಗಿ ಗೊತ್ತಿದೆ- ಇದರಿಂದ ಅಭಿವೃದ್ಧಿಗೆ ತೊಂದರೆಯಾಗುತ್ತದೆ. ಆದುದರಿಂದ ಒಂದು ದೇಶ, ಒಂದು ಚುನಾವಣೆ ಅವಶ್ಯಕತೆಯ ಬಗ್ಗೆ ಆಳವಾದ ಅಧ್ಯಯನ ಮತ್ತು ಚರ್ಚೆ ನಡೆಯಬೇಕಾಗಿದೆ. ಅಧ್ಯಕ್ಷೀಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಬಹುದು ಮತ್ತು ಮುಂಚೂಣಿ ನಾಯಕತ್ವ ವಹಿಸಬಹುದು. ಇದರ ಜೊತೆಗೆ ನಾವು ಲೋಕ ಸಭಾ, ರಾಜ್ಯ ವಿಧಾನ ಸಭೆ ಮತ್ತು ಸ್ಥಳೀಯಾಡಳಿತ ಚುನಾವಣೆಗಳಿಗೆ ಸಾಮಾನ್ಯ ಮತದಾರರ ಪಟ್ಟಿಯನ್ನು ತಯಾರಿಸುವ ಬಗ್ಗೆ ಹಾದಿಯನ್ನು ಅನ್ವೇಷಿಸಬೇಕಾಗಿದೆ. ಇಂದು ವಿವಿಧ ಚುನಾವಣೆಗಳಿಗೆ ಬೇರೆ ಬೇರೆ ಮತದಾರರ ಪಟ್ಟಿಗಳಿವೆ. ನಾವು ಯಾಕೆ ಅಷ್ಟೊಂದು ಹಣ ಮತ್ತು ಸಮಯವನ್ನು ಪೋಲು ಮಾಡಬೇಕು?. ಈಗ ಮತದಾನದ ವಯಸ್ಸನ್ನು ಎಲ್ಲರಿಗೂ 18 ವರ್ಷಕ್ಕಿಂತ ಮೇಲ್ಪಟ್ಟು ಎಂದು ನಿರ್ಧರಿಸಿ ಆಗಿದೆ. ಅಲ್ಲಿ ವಿವಿಧ ಮತದಾರರ ಪಟ್ಟಿಯ ಅಗತ್ಯ ಇಲ್ಲ.
ಸ್ನೇಹಿತರೇ,
ಸಂಸತ್ತು ಮತ್ತು ಕೆಲವು ರಾಜ್ಯಗಳ ವಿಧಾನಸಭೆಗಳನ್ನು ಡಿಜಿಟಲೀಕರಣ ಮಾಡಲು ಕೆಲವು ಪ್ರಯತ್ನಗಳನ್ನು ಮಾಡಲಾಗಿದೆ, ಆದರೆ ಈಗ ಸಂಪೂರ್ಣ ಡಿಜಿಟಲೀಕರಣದ ಕಾಲ ಬಂದಿದೆ. ನೀವು ಅಧ್ಯಕ್ಷೀಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಂಡರೆ ನಮ್ಮ ಶಾಸಕರು ಮತ್ತು ಸಂಸತ್ ಸದಸ್ಯರು ತಂತ್ರಜ್ಞಾನವನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಾರೆ ಎಂಬುದು ನನಗೆ ಖಾತ್ರಿ ಇದೆ. ಸ್ವಾತಂತ್ರ್ಯದ 75 ನೇ ವರ್ಷಾಚರಣೆಯನ್ನು ಗಮನದಲ್ಲಿಟ್ಟುಕೊಂಡು ನೀವು ಕಾಲಮಿತಿಯನ್ನು ನಿಗದಿ ಮಾಡಬಹುದೇ?. ನೀವು ಗುರಿಯನ್ನು ನಿಗದಿಗೊಳಿಸಿ ಇಲ್ಲಿಂದ ಹೋಗಬಹುದೇ?
ಸ್ನೇಹಿತರೇ,
ಇಂದು, ಎಲ್ಲಾ ರಾಜ್ಯ ಶಾಸಕಾಂಗಗಳು ದತ್ತಾಂಶ ಹಂಚಿಕೆಯ ನಿಟ್ಟಿನಲ್ಲಿ ಮುಂದುವರಿಯಬೇಕಾದ ಅಗತ್ಯವಿದೆ. ಇದರಿಂದ ದೇಶದಲ್ಲಿ ಕೇಂದ್ರೀಯ ದತ್ತಾಂಶ ನೆಲೆ ಲಭ್ಯವಾದಂತಾಗುತ್ತದೆ. ಎಲ್ಲಾ ಸದನಗಳ ಕಾರ್ಯವೈಖರಿಯ ಬಗ್ಗೆ ಸಾಮಾನ್ಯ ನಾಗರಿಕರಿಗೆ ಮತ್ತು ದೇಶದಲ್ಲಿಯ ಎಲ್ಲಾ ಸದನಗಳಿಗೆ ಸಕಾಲದಲ್ಲಿ ವಿವರ ಲಭ್ಯವಾಗಬೇಕು. ಇದಕ್ಕಾಗಿ ಆಧುನಿಕ ಡಿಜಿಟಲ್ ವೇದಿಕೆ –ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನನ್ನು ಈಗಾಗಲೇ ಅಭಿವೃದ್ಧಿ ಮಾಡಲಾಗಿದೆ. ಈ ಯೋಜನೆಯನ್ನು ತಾವು ಆದಷ್ಟು ಬೇಗ ಬಳಸಿಕೊಳ್ಳಬೇಕು ಎಂದು ನಾನು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಾವು ತಂತ್ರಜ್ಞಾನ ಬಳಕೆ ಬಗ್ಗೆ ಮತ್ತು ನಮ್ಮ ಕಾರ್ಯಚಟುವಟಿಕೆಗಳಲ್ಲಿ ಕಾಗದ ರಹಿತ ಸಂಸ್ಕೃತಿಯನ್ನು ಜಾರಿಗೆ ತರಲು ಹೆಚ್ಚು ಒತ್ತು ಕೊಡಬೇಕು.
ಸ್ನೇಹಿತರೇ,
ದೇಶಕ್ಕೆ ಸಂವಿಧಾನವನ್ನು ಹಸ್ತಾಂತರಿಸುವಾಗ, ಘಟನಾ ಸಭೆಯು ಭವಿಷ್ಯದ ಭಾರತದಲ್ಲಿ ಹಲವು ಸಂಗತಿಗಳನ್ನು ಸಂಪ್ರದಾಯಗಳಂತೆ ಸ್ಥಾಪಿಸಲ್ಪಡಬೇಕು ಎಂಬ ಬಗ್ಗೆ ಅವಿರೋಧವಾದವಾದ ನಿಲುವನ್ನು ವ್ಯಕ್ತಪಡಿಸಿತ್ತು. ಘಟನಾ ಸಭೆಯು ಹೊಸ ತಲೆಮಾರು ಅವರೊಂದಿಗೆ ಹೊಸ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಇಚ್ಛೆಯನ್ನು ಹೊಂದಿತ್ತು. ನಮ್ಮ ಸಂವಿಧಾನ ನಿರ್ಮಾತೃಗಳ ಈ ಸ್ಪೂರ್ತಿಯ ಬಗ್ಗೆ ನಾವು ಸೂಕ್ತ ಗಮನವನ್ನು ಹರಿಸಬೇಕು ಮತ್ತು ಅದನ್ನು ಜೋಪಾನ ಮಾಡಬೇಕು. ಅಧ್ಯಕ್ಷೀಯ ಅಧಿಕಾರಿಗಳಾಗಿ, ನೀವು ಯಾವೆಲ್ಲ ಹೊಸ ಸಂಗತಿಗಳನ್ನು ಮಾಡಬಹುದು, ಯಾವ ಹೊಸ ನೀತಿಯನ್ನು ನೀವು ಸೇರ್ಪಡೆ ಮಾಡಬಹುದು, ಮತ್ತು ಈ ದಿಕ್ಕಿನಲ್ಲಿ ನೀವು ಏನನ್ನಾದರೂ ಕೊಡುಗೆಯಾಗಿ ನೀಡಿದರೆ, ದೇಶದ ಪ್ರಜಾಪ್ರಭುತ್ವ ಹೊಸ ಶಕ್ತಿಯನ್ನು ಪಡೆಯುತ್ತದೆ.
ಶಾಸಕಾಂಗದ ಚರ್ಚೆಗಳಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನು ಹೇಗೆ ಹೆಚ್ಚಿಸಬಹುದು, ಇವತ್ತಿನ ಯುವ ಜನಾಂಗವನ್ನು ಹೇಗೆ ಒಳಗೊಳಿಸಿಕೊಳ್ಳಬಹುದು, ಈ ಎಲ್ಲಾ ಬಗೆಗೂ ಚಿಂತನೆ ಮಾಡಬಹುದು. ಈಗ ಜನರು ಪ್ರೇಕ್ಷಕರ ಗ್ಯಾಲರಿಗೆ ಬರುತ್ತಾರೆ. ಅವರೂ ಚರ್ಚೆಗಳನ್ನು ನೋಡುತ್ತಾರೆ, ಆದರೆ ಈ ಪ್ರಕ್ರಿಯೆಯನ್ನು ಇನ್ನಷ್ಟು ಯೋಜನಾ ಬದ್ಧವಾಗಿ ಮಾಡಬಹುದು. ಜನರು ಒಂದು ನಿರ್ದಿಷ್ಟ ವಿಷಯದ ಬಗ್ಗೆ ಆಸಕ್ತರಾಗಿದ್ದರೆ, ಅವರು ಆ ಕುರಿತ ಚರ್ಚೆಯನ್ನು ನೋಡುವಂತಾದರೆ ಆಗ ಅದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ಉದಾಹರಣೆಗೆ, ವಿದ್ಯಾರ್ಥಿಗಳು, ಶಿಕ್ಷಕರು, ಮತ್ತು ವಿಶ್ವವಿದ್ಯಾಲಯದ ಜನರನ್ನು ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಚರ್ಚೆ ಇರುವಾಗ ನೋಡಲು ಕರೆಯಬಹುದು. ಅದೇ ರೀತಿ ಸಾಮಾಜಿಕ ಕಳಕಳಿಯ ವಿಷಯಗಳಿರುವಾಗ , ಆ ಬಗ್ಗೆ ಕಾಳಜಿ ಇರುವ ಗುಂಪನ್ನು ಕರೆಯಬಹುದು. ಮಹಿಳೆಯರನ್ನು ಅವರಿಗೆ ಸಂಬಂಧಿಸಿದ ವಿಷಯ ಇರುವಾಗ ಕರೆಯಬಹುದು.
ಅದೇ ರೀತಿ ನಾವು ಇದನ್ನು ಕಾಲೇಜುಗಳಲ್ಲಿ ಅಣಕು ಸಂಸತ್ತನ್ನು ಆಯೋಜಿಸುವ ಮೂಲಕ ಬಹಳ ದೊಡ್ಡ ಪ್ರಮಾಣದಲ್ಲಿ ಪ್ರಚುರಪಡಿಸಬಹುದು. ಮತ್ತು ಅದರ ಜೊತೆ ಸಂಪರ್ಕ ಸ್ಥಾಪಿಸಿಕೊಳ್ಳಲು ಸಾಧ್ಯವಿದೆ. ಸುಮ್ಮನೆ ಕಲ್ಪಿಸಿಕೊಳ್ಳಿ, ಅಲ್ಲಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಸಂಸತ್ತು ಇದ್ದರೆ, ಮತ್ತು ಅವರೇ ಅದನ್ನು ಸಂಘಟಿಸುವಂತಾದರೆ, ವಿದ್ಯಾರ್ಥಿಗಳು ಪ್ರೇರಣೆ ಪಡೆಯುತ್ತಾರೆ ಮಾತ್ರವಲ್ಲ, ಬಹಳಷ್ಟು ಹೊಸತನ್ನು ಕಲಿಯುತ್ತಾರೆ. ಇವು ನನ್ನ ಸಲಹೆಗಳು ಮಾತ್ರ. ನಿಮ್ಮಲ್ಲಿ ಹಿರಿತನವಿದೆ ಮತ್ತು ಅನುಭವವೂ ಇದೆ. ಇಂತಹ ಪ್ರಯತ್ನಗಳ ಮೂಲಕ, ನಮ್ಮ ಶಾಸಕಾಂಗ ವ್ಯವಸ್ಥೆಯಲ್ಲಿ ಜನರ ವಿಶ್ವಾಸ ಇನ್ನಷ್ಟು ಬಲಪಡುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.
ಮತ್ತೊಮ್ಮೆ, ನಾನು ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದುದಕ್ಕಾಗಿ ಗೌರವಾನ್ವಿತ ಸ್ಪೀಕರ್ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಾನು ಸಲಹೆ ಮಾತ್ರ ಕೊಟ್ಟಿದ್ದೆ. ಮತ್ತು ಸ್ಪೀಕರ್ ಅವರು ಈ ಸಮ್ಮೇಳನವನ್ನು ಕೇವಾಡಿಯಾದಲ್ಲಿ ಸಂಘಟಿಸಿದರು. ಗುಜರಾತಿನ ಜನರಿಂದ ನಿಮಗೆ ಯಾವುದೇ ಆತಿಥ್ಯದ ಕೊರತೆ ಆಗಿರಲಾರದು ಎಂಬ ಬಗ್ಗೆ ನನಗೆ ಖಾತ್ರಿ ಇದೆ, ಯಾಕೆಂದರೆ ಅವರು ಅದರಲ್ಲಿ ಬಹಳ ಪ್ರಸಿದ್ದರು. ಈ ಪ್ರತಿಮೆಯನ್ನು ನೋಡಿದ ಬಳಿಕ ಕೆಲವು ಉತ್ತಮ ಚಿಂತನೆಗಳು ನಿಮ್ಮಲ್ಲಿ ಮೂಡಬಹುದು. ಆದರೆ ಇಂತಹ ಚಿಂತನೆಗಳು ಕಾರ್ಯಾನುಷ್ಟಾನಗೊಂಡರೆ ಮಾತ್ರ , ಆಗ ಅದರಿಂದ ಈ ವಲಯದ ಅಭಿವೃದ್ಧಿಗೆ ಉಪಯೋಗವಾಗುತ್ತದೆ. ನಮ್ಮೆಲ್ಲರ ಕಾಣಿಕೆಯಿಂದ ಇದು ಈಗ ಇಡೀ ದೇಶಕ್ಕೆ ವೈಭವದ ಆಕರ್ಷಣೀಯ ಸ್ಥಳವಾಗಿ ರೂಪುಗೊಂಡಿದೆ. ಇದರ ತಿರುಳು ನಿಮಗೆ ನೆನಪಿರಬಹುದು, ಬಾರತದ ಆರು ಲಕ್ಷ ಗ್ರಾಮಗಳ ರೈತರ ಸಲಕರಣೆಗಳನ್ನು ಬಳಸಿ ಇದನ್ನು ರೂಪಿಸಲಾಗಿದೆ. ಆ ಸಲಕರಣೆಗಳು ರೈತರು ತಮ್ಮ ಕೃಷಿ ಕ್ಷೇತ್ರಗಳಲ್ಲಿ, ಗದ್ದೆಗಳಲ್ಲಿ ಬಳಸುವಂತಹವು. ಅವುಗಳನ್ನು ಕರಗಿಸಿ ಕಬ್ಬಿಣವನ್ನಾಗಿ ಮಾಡಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ರೀತಿಯಲ್ಲಿ ಭಾರತದ ಪ್ರತೀ ಗ್ರಾಮವೂ, ಪ್ರತಿಯೊಬ್ಬ ರೈತರೂ ಈ ಪ್ರತಿಮೆಯ ಜೊತೆ ಸಂಬಂಧ ಹೊಂದಿದ್ದಾರೆ.
ಸ್ನೇಹಿತರೇ,
ಈ ಆಶಯದೊಂದಿಗೆ ನರ್ಮದಾ ಜೀ ಮತ್ತು ಸರ್ದಾರ ಸಾಹೇಬ್ ಜೊತೆಗಿನ ಸಾನಿಧ್ಯದಲ್ಲಿ ನಿಮ್ಮ ಪ್ರವಾಸ, ನಿಮಗೆ ನಿರಂತರ ಪ್ರೇರಣೆ ನೀಡಲಿ. ಬಹಳ ಬಹಳ ಧನ್ಯವಾದಗಳು!!
ತುಂಬಾ ತುಂಬಾ ಧನ್ಯವಾದಗಳು!!
ಶುಭಾಶಯಗಳು.
***
(Release ID: 1677301)
Visitor Counter : 307
Read this release in:
Marathi
,
Punjabi
,
Gujarati
,
Odia
,
Tamil
,
Telugu
,
Assamese
,
Bengali
,
Manipuri
,
English
,
Urdu
,
Hindi
,
Malayalam