ಪ್ರಧಾನ ಮಂತ್ರಿಯವರ ಕಛೇರಿ
ಜಿನಾಚಾರ್ಯ ಶ್ರೀ ವಿಜಯ ವಲ್ಲಭ ಸುರೀಶ್ವರ್ ಜಿ ಮಹಾರಾಜ್ ಅವರ 151ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ‘ಶಾಂತಿ ಪ್ರತಿಮೆ’ ಅನಾವರಣಗೊಳಿಸಿದ ವೇಳೆ ಪ್ರಧಾನಮಂತ್ರಿ ಅವರು ಮಾಡಿದ ಭಾಷಣ
Posted On:
16 NOV 2020 3:55PM by PIB Bengaluru
ನಮಸ್ಕಾರ!
ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಗಚಾಧಿಪತಿ ಜಿನಾಚಾರ್ಯ ಶ್ರೀ ವಿಜಯ ನಿತ್ಯಾನಂದ ಸುರೀಶ್ವರ್ ಜಿ, ಆಚಾರ್ಯ ಶ್ರೀ ವಿಜಯ ಚಿದಾನಂದ ಸೂರಿ ಜಿ, ಆಚಾರ್ಯ ಶ್ರೀ ಜಯಾನಂದ ಸೂರಿ ಜಿ, ಈ ಶ್ರೇಷ್ಠ ಉತ್ಸವದ ಮಾರ್ಗದರ್ಶಕ ಶಕ್ತಿ ಮುನಿಶ್ರೀ ಮೋಕ್ಷಾನಂದ ವಿಜಯ್ ಜಿ, ಶ್ರೀ ಅಶೋಕ್ ಜೈನ್ ಜಿ, ಶ್ರೀ ಸುಧೀರ್ ಮೆಹ್ತಾ ಜಿ, ಶ್ರೀ ರಾಜಕುಮಾರ್ ಜಿ, ಶ್ರೀ ಗೀಸುಲಾಲ್ ಜಿ ಮತ್ತು ಆಚಾರ್ಯ ಶ್ರೀ ವಿಜಯ ವಲ್ಲಭ ಸೂರಿ ಜಿ ಅವರ ಅನುಯಾಯಿಗಳೇ. ಪಂಜಾಬ್ ಕೇಸರಿ ಆಚಾರ್ಯ ಶ್ರೀ ವಿಜಯ ವಲ್ಲಭ ಸೂರಿ ಜಿ, ಅವರ 151ನೇ ಹುಟ್ಟುಹಬ್ಬದ ಈ ವೈಭವದ ಆಚರಣೆ ವೇಳೆ ನಾನು ಎಲ್ಲರಿಗೂ ಶುಭಾಶಯಗಳನ್ನು ಕೋರಲು ಬಯಸುತ್ತೇನೆ.
ಈ ಹೊಸ ವರ್ಷ ಆಧ್ಯಾತ್ಮಿಕ ಸೆಳೆವು ಪಸರಿಸುವ ಪ್ರೇರಣೆಯ ವರ್ಷ. ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದ ಮತ್ತು ನಿಮ್ಮೆಲ್ಲರಿಂದ ಆಶೀರ್ವಾದ ಸ್ವೀಕರಿಸುತ್ತಿರುವುದು ಕೂಡ ನನ್ನ ಸೌಭಾಗ್ಯವಾಗಿದೆ. ಶ್ರೀ ಮಹಾವೀರ ಸ್ವಾಮೀಜಿಯ ಅಹಿಂಸಾ, ಬಹುತ್ವ ಮತ್ತು ನಿರ್ಮೋಹ, ಇವುಗಳನ್ನು ಈ ಜನ್ಮ ವಾರ್ಷಿಕೋತ್ಸವದ ವೇಳೆ ಪ್ರತಿಪಾದಿಸಲಾಗುತ್ತಿದ್ದು, ಗುರು ವಲ್ಲಭರ ಸಂದೇಶ ಜನಸಾಮಾನ್ಯರಿಗೆ ತಲುಪಿಸಲಾಗುತ್ತಿದೆ. ನಾನು ಇಂತಹ ವೈಭವದ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಗಚಾಧಿಪತಿ ಆಚಾರ್ಯ ಶ್ರೀಮದ್ ವಿಜಯ ನಿತ್ಯಾನಂದ ಸೂರಿ ಜಿ ಅವರ ಪ್ರಯತ್ನಕ್ಕಾಗಿ ಅಭಿನಂದಿಸುತ್ತೇನೆ. ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತಿರುವುದು ಮತ್ತು ವಡೋದರ ಹಾಗೂ ಛೋಟಾ ಉದಯಪುರದ ಕ್ವಾಂತ್ ಗ್ರಾಮದಿಂದ ನಿಮ್ಮ ಆಶೀರ್ವಾದ ಪಡೆಯುತ್ತಿರುವುದು ನನ್ನ ಸೌಭಾಗ್ಯ.
ಇಂದು ಮತ್ತೊಮ್ಮೆ ನಿಮ್ಮೊಡನೆ ಇರುವ ಅವಕಾಶ ಲಭಿಸಿದ್ದು, ಇದನ್ನು ನಾನು ನನ್ನ ಸೌಭಾಗ್ಯ ಎಂದು ಪರಿಗಣಿಸುತ್ತೇನೆ. ಸಂತ ಆಚಾರ್ಯ ಶ್ರೀಮದ್ ವಿಜಯ ನಿತ್ಯಾನಂದ ಸುರೀಶ್ವರ್ ಜಿ ಮಹಾರಾಜ್ ಅವರು, ಗುಜರಾತ್ ನ ನೆಲ ಇಬ್ಬರು ವಲ್ಲಭರಿಗೆ ಜನ್ಮ ನೀಡಿದೆ ಎಂದು ಈಗಷ್ಟೇ ಉಲ್ಲೇಖಿಸಿದರು. ಒಂದು ರಾಜಕೀಯ ವಲಯ ಸರ್ದಾರ್ ವಲ್ಲಭಭಾಯ್ ಪಟೇಲ್ ಮತ್ತು ಇನ್ನೊಬ್ಬರು ಆಧ್ಯಾತ್ಮಿಕ ವಲಯದ ಜಿನಾಚಾರ್ಯ ವಿಜಯ ವಲ್ಲಭ ಸುರೀಶ್ವರ್ ಜಿ ಮಹಾರಾಜ್, ನಾನು ಈ ಇಬ್ಬರು ಶ್ರೇಷ್ಠ ವ್ಯಕ್ತಿಗಳನ್ನು ಒಂದೇ ಸಮನಾಗಿ ನೋಡುತ್ತೇನೆ. ಈ ಇಬ್ಬರೂ ಸಹ ಭಾರತದ ಏಕತೆ ಮತ್ತು ಸಹೋದರತ್ವಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯ್ ಪಟೇಲರ ‘ಏಕತಾ ಪ್ರತಿಮೆ’ಯನ್ನು ಅನಾವರಣಗೊಳಿಸುವ ಸೌಭಾಗ್ಯ ನನಗೆ ದೊರೆತಿತ್ತು. ಇಂದು ಜಿನಾಚಾರ್ಯ ವಿಜಯ ವಲ್ಲಭ ಜಿ ಅವರ ‘ಶಾಂತಿ ಪ್ರತಿಮೆ’ಯನ್ನು ಅನಾವರಣಗೊಳಿಸುವ ಸದಾವಕಾಶವೂ ದೊರೆತಿದೆ.
ಸಹ ಸಂತರೇ,
ಭಾರತ ಸದಾ ಮಾನವೀಯತೆ, ಶಾಂತಿ, ಅಹಿಂಸೆ ಮತ್ತು ಸೋದರತ್ವವನ್ನು ಇಡೀ ಜಗತ್ತಿಗೆ ತೋರಿಸಿದೆ. ಭಾರತದ ಈ ಸಂದೇಶಗಳು ವಿಶ್ವಕ್ಕೆ ಪ್ರೇರಣೆ ನೀಡಿವೆ. ಇದೀಗ ವಿಶ್ವ ಮತ್ತೊಮ್ಮೆ ಭಾರತದ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದೆ. ನನಗೆ ನಂಬಿಕೆ ಇದೆ. ‘ಈ ಶಾಂತಿಯ ಪ್ರತಿಮೆ’ ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಸೇವೆಗೆ ಸ್ಫೂರ್ತಿಯನ್ನು ನೀಡಲಿದೆ.
ಮಿತ್ರರೇ,
ಆಚಾರ್ಯ ವಿಜಯ ವಲ್ಲಭ ಜಿ ಅವರು ಹೀಗೆ ಹೇಳುತ್ತಿದ್ದರು - “धर्म कोई तटबंधों में बंधा सरोवर नहीं है, बल्कि एक बहती धारा है जो सबको समान रूप से उपलब्ध होनी चाहिए”
ಧರ್ಮವು ಒಡ್ಡುಗಳಲ್ಲಿ ಕಟ್ಟಲ್ಪಟ್ಟ ಕೊಳವಲ್ಲ. ಅಂದರೆ ಹರಿಯುವ ಝರಿ, ಎಲ್ಲರಿಗೂ ಸಮಾನವಾಗಿ ದೊರಕುತ್ತದೆ. ಅವರ ಸಂದೇಶ ಇಡೀ ವಿಶ್ವಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಅವರ ಜೀವನದ ವಿವರಗಳನ್ನು ಮತ್ತೆ ಮತ್ತೆ ಮಾತಾಡಬೇಕಿದೆ ಹಾಗೂ ಅವರ ಜೀವನ ಸಿದ್ಧಾಂತವನ್ನು ಪುನರುಚ್ಚಾರ ಮಾಡಬೇಕಿದೆ. ಅವರು ತತ್ವಜ್ಞಾನಿ ಮತ್ತು ಸಮಾಜ ಸುಧಾರಕರು ಆಗಿದ್ದರು. ಅವರು ದೂರದೃಷ್ಟಿಯುಳ್ಳವರು ಮತ್ತು ಸಾರ್ವಜನಿಕ ಸೇವಕರೂ ಆಗಿದ್ದರು. ಅವರು ತುಳಸಿದಾಸ, ಆನಂದಘಾನ್ ಮತ್ತು ಮೀರಾ ಅವರಂತೆ ದೇವರಂತಹ ಕವಿಯೂ ಆಗಿದ್ದರು ಹಾಗೂ ಆಧುನಿಕ ಭಾರತ ನಿರ್ಮಾಣದ ದೂರದೃಷ್ಟಿಯನ್ನು ಹೊಂದಿದ್ದರು. ಆದ್ದರಿಂದ ಅವರ ಸಂದೇಶ ಅತ್ಯಂತ ಪ್ರಮುಖವಾದುದಾಗಿದೆ. ಅವರ ಬೋಧನೆಗಳು ಮತ್ತು ಅವುಗಳ ಸಾರ ನಮ್ಮ ಹೊಸ ಪೀಳಿಗೆಗೂ ತಲುಪಬೇಕಿದೆ.
ಮಿತ್ರರೇ,
ನೀವು ಭಾರತದ ಇತಿಹಾಸವನ್ನು ಗಮನಿಸಿದರೆ, ಭಾರತಕ್ಕೆ ಯಾವಾಗ ಆಂತರಿಕ ಬೆಳಕು ಬೇಕಾಗುತ್ತದೋ ಅಂತಹ ಸಂದರ್ಭಗಳಲ್ಲೆಲ್ಲಾ ಸಂತರ ಪರಂಪರೆಯ ಯಾರಾದರೋಬ್ಬರು ಆ ಸಂದರ್ಭಕ್ಕೆ ಹುಟ್ಟಿಕೊಂಡಿದ್ದು ಎದ್ದುನಿಂತದ್ದು ನಮ್ಮ ಅನುಭವಕ್ಕೆ ಬಂದಿದೆ. ದೇಶದಲ್ಲಿ ಪ್ರತಿಯೊಂದು ಅವಧಿಯಲ್ಲೂ ಶ್ರೇಷ್ಠ ಸಂತರು ಇದ್ದಾರೆ. ಅವರು ಆಯಾ ಕಾಲಕ್ಕೆ ತಕ್ಕಂತೆ ಸಮಾಜಕ್ಕೆ ದಿಕ್ಸೂಚಿಯನ್ನು ನೀಡಿದ್ದಾರೆ. ಆಚಾರ್ಯ ವಿಜಯ ವಲ್ಲಭ ಜಿ ಅವರು ಕೂಡ ಅಂತಹ ಸಂತರು. ಗುಲಾಮಗಿರಿ ಅವಧಿಯಲ್ಲಿ ಅವರು, ಬರಿಗಾಲಿನಲ್ಲಿ ದೇಶದ ನಗರ ಪಟ್ಟಣಗಳಿಗೆ ಭೇಟಿ ನೀಡಿ, ದೇಶದ ಅಸ್ಮಿತೆಯನ್ನು ಜಾಗೃತಗೊಳಿಸಲು ಪ್ರಯತ್ನಿಸಿದ್ದರು. ಇಂದು ನಾವು 75ನೇ ಸ್ವಾತಂತ್ರ್ಯೋತ್ಸವದತ್ತ ಸಾಗುತ್ತಿದ್ದೇವೆ. ನಾವು ಸ್ವಾತಂತ್ರ್ಯ ಸಂಗ್ರಾಮದ ಒಂದು ಆಯಾಮವನ್ನು ಗಮನಿಸುತ್ತಿದ್ದೇವೆ. ಒಂದಲ್ಲಾ ಒಂದು ರೀತಿಯಲ್ಲಿ ಅಥವಾ ವಿಶ್ವದ ಮುಂದೆ ನಮ್ಮ ಕಣ್ಣುಗಳು ಮತ್ತು ಕಿವಿಗಳ ಮೂಲಕ ಗಮನಿಸುತ್ತಿದ್ದೇವೆ, ಆದರೆ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಕ್ತಿ ಚಳವಳಿ ಆರಂಭವೇ ಭದ್ರ ಬುನಾದಿ ಹಾಕಿತ್ತು ಎಂಬುದನ್ನು ನಾವು ಸದಾ ಸ್ಮರಿಸುತ್ತೇವೆ. ಸಂತರು, ಮಹಂತರು, ಋಷಿ ಮುನಿಗಳು ಮತ್ತು ಆಚಾರ್ಯರು ಜನಸಾಮಾನ್ಯರ ಅಂತಃಪ್ರಜ್ಞೆಯನ್ನು ಭಕ್ತಿ ಚಳವಳಿಯ ಮೂಲಕ ದೇಶದ ಮೂಲೆ ಮೂಲೆಗಳಲ್ಲಿ ಜಾಗೃತಗೊಳಿಸಿದರು.
ಸ್ವಾತಂತ್ರ್ಯ ಸಂಗ್ರಾಮಕ್ಕೆ ಭದ್ರ ಬುನಾದಿಯನ್ನು ಸಜ್ಜುಗೊಳಿಸಲಾಯಿತು ಮತ್ತು ಅದು ಹೆಚ್ಚಿನ ಶಕ್ತಿಯನ್ನು ನೀಡಿತು. ಇದರ ಹಿಂದೆ ದೇಶದ ಹಲವು ಸಾಧು ಸಂತರು ಇದ್ದರು, ಅವರಲ್ಲಿ ವಲ್ಲಭ ಗುರು ಕೂಡ ಒಬ್ಬರಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಭೂಮಿಕೆ ಸಿದ್ಧಪಡಿಸುವ ಕಾರ್ಯದಲ್ಲಿ ಗುರು ವಲ್ಲಭರ ಬಹುದೊಡ್ಡ ಕೊಡುಗೆ ಇದೆ. ಆದರೆ 21ನೇ ಶತಮಾನದಲ್ಲಿ ಇಂದು ನಾನು ಎಲ್ಲ ಆಚಾರ್ಯರು, ಸಂತರು ಮತ್ತು ಕಥಾ ನಿರೂಪಕರನ್ನು ಭಕ್ತಿ ಚಳವಳಿಯ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೆಂಬಲ ನೀಡಿದ್ದಂತೆ ಇದೀಗ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಸಿದ್ಧಪಡಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡುತ್ತೇನೆ. ನೀವು ಎಲ್ಲೇ ಹೋದರು, ಎಲ್ಲೇ ನಿಮ್ಮ ಅನುಯಾಯಿಗಳ ಜೊತೆ ಅಥವಾ ಸಹ ಸಂತರ ಜೊತೆ ಮಾತನಾಡಿದರೂ, ಅಂತಹ ಸಂದರ್ಭಗಳಲ್ಲಿ ನೀವು ದೇಶದ ಪ್ರತಿಯೊಬ್ಬ ಜನರಿಗೂ ಸದಾ ‘ವೋಕಲ್ ಫಾರ್ ಲೋಕಲ್’ ಸಂದೇಶವನ್ನು ನೀಡಬೇಕೆಂದು ಮನವಿ ಮಾಡುತ್ತೇನೆ.
ನಮ್ಮ ಕಥಾ ನಿರೂಪಕರು, ಆಚಾರ್ಯರು ಮತ್ತು ಸಂತರು, ಸ್ವಾತಂತ್ರ್ಯ ಸಂಗ್ರಾಮದ ವೇಳೆ ಮಾಡಿದಂತೆ ಹೆಚ್ಚಿನ ಪ್ರಮಾಣದಲ್ಲಿ ಸಂದೇಶವನ್ನು ಪಸರಿಸುವ ಮೂಲಕ ನೀವು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ತಳಹದಿ ಹಾಕುವ ಕಾರ್ಯಕ್ಕೆ ಸಹಾಯ ಮಾಡಬೇಕಿದೆ ಮತ್ತು ಓರ್ವ ಪ್ರಧಾನ ಸೇವಕನಾಗಿ ಇದು ಎಲ್ಲ ಸಂತರಲ್ಲಿ ನಾನು ಮಾಡಿಕೊಳ್ಳುತ್ತಿರುವ ವಿನಮ್ರ ಮನವಿಯಾಗಿದ್ದು, ಇದಕ್ಕಾಗಿ ಎಲ್ಲರೂ ಮುಂದೆ ಬನ್ನಿ. ಈ ಶ್ರೇಷ್ಠ ಜನರಿಂದ ಸಾಕಷ್ಟು ಜನರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆ ಪಡೆದರು. ಪಂಡಿತ್ ಮದನ ಮೋಹನ್ ಮಾಳವೀಯ ಮತ್ತು ಮುರಾರ್ಜಿ ಭಾಯ್ ದೇಸಾಯಿ ಸೇರಿದಂತೆ ಹಲವು ಸಾರ್ವಜನಿಕ ನಾಯಕರು ಇವರ ಮಾರ್ಗದರ್ಶನಕ್ಕಾಗಿ ಭೇಟಿ ನೀಡುತ್ತಿದ್ದರು. ಅವರೆಲ್ಲಾ ಭಾರತದ ಸ್ವಾತಂತ್ರ್ಯದ ಕನಸು ಕಂಡವರು ಮತ್ತು ಸ್ವತಂತ್ರ ಭಾರತ ಹೇಗಿರಬೇಕು ಎಂಬ ಕಲ್ಪನೆಯನ್ನು ರೂಪಿಸಿದವರು. ಅವರು ವಿಶೇಷವಾಗಿ ಸ್ವದೇಶಿ ಮತ್ತು ಆತ್ಮನಿರ್ಭರ ಭಾರತಕ್ಕೆ ಆಗ್ರಹಿಸಿದ್ದರು. ಅವರು ಜೀವನದುದ್ದಕ್ಕೂ ಖಾದಿಯನ್ನು ಧರಿಸಿದ್ದರು. ಸ್ವದೇಶಿ ಚಿಂತನೆಯನ್ನು ಪಾಲನೆ ಮಾಡಿದರು ಮತ್ತು ಸ್ವದೇಶಿ ಪ್ರತಿಜ್ಞೆಯನ್ನು ಸ್ವೀಕರಿಸಿದ್ದರು. ಆಚಾರ್ಯ ವಿಜಯ ವಲ್ಲಭ ಜಿ ಅವರ ಪ್ರಯತ್ನಗಳು ಹೇಗೆ ಸಂತರ ಮಾತುಗಳು ದೀರ್ಘಕಾಲ ಮತ್ತು ಅಮರವಾಗಿರುತ್ತವೆ ಎಂಬುದಕ್ಕೆ ನೇರ ಉದಾಹರಣೆಯಾಗಿದೆ. ಸ್ವಾತಂತ್ರ್ಯಕ್ಕೂ ಮುನ್ನ ಅವರು ಕಂಡಿದ್ದ ದೇಶದ ಬಗೆಗಿನ ಕನಸು ಇಂದು ‘ಆತ್ಮ ನಿರ್ಭರ ಭಾರತ’ ಅಭಿಯಾನದ ಮೂಲಕ ಸಾಕಾರಗೊಳ್ಳುತ್ತಿದೆ.
ಮಿತ್ರರೇ,
ಶ್ರೇಷ್ಠ ವ್ಯಕ್ತಿಗಳ ಮತ್ತು ಸಂತರ ಮಾತುಗಳು ಅವಿಸ್ಮರಣೀಯ ಏಕೆಂದರೆ ಅವರು ಏನು ಬೋಧಿಸುತ್ತಿದ್ದರೋ ಅದನ್ನೇ ಪಾಲಿಸುತ್ತಿದ್ದರು. ಆಚಾರ್ಯ ವಿಜಯ ವಲ್ಲಭ ಜಿ ಹೀಗೆ ಹೇಳುತ್ತಿದ್ದರು. -- “साधु महात्माओं का कर्तव्य केवल अपनी आत्मा के कल्याण करने में ही समाप्त नहीं होता”। “उनका यह भी कर्तव्य है कि वह अज्ञान, कलह, बेकारी, विषमता, अंधश्रद्धा, आलस, व्यसन और बुरे रीति रिवाजों, जिनसे समाज के हजारों लोग पीड़ित हो रहे हैं उनके नाश के लिए सदा प्रयत्न करें” (ಈ ಶ್ರೇಷ್ಠ ಜನರು ಮತ್ತು ಸಂತರ ಮಾತುಗಳು ಅಮರವಾಗಿದ್ದವು, ಕಾರಣ ಅವರು ಏನು ಬೋಧಿಸುತ್ತಿದ್ದರೋ ಅವುಗಳನ್ನೇ ಪಾಲಿಸುತ್ತಿದ್ದರು. ಆಚಾರ್ಯ ವಿಜಯ ವಲ್ಲಭ ಜಿ ಅವರು, ಹೀಗೆ ಹೇಳುತ್ತಿದ್ದರು. “ಸಂತರ ಕರ್ತವ್ಯ ತಮ್ಮ ಆತ್ಮಗಳ ಕಲ್ಯಾಣಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಅವರ ಕರ್ತವ್ಯ ಅಜ್ಞಾನದ ನಿವಾರಣೆ, ನಿರುದ್ಯೋಗ, ಮೂಢನಂಬಿಕೆ, ಸೋಮಾರಿತನ, ಅಸಹಜತೆಗಳನ್ನು, ಚಟ ಮತ್ತು ಕೆಟ್ಟ ಸಂಪ್ರದಾಯಗಳನ್ನು ಹೋಗಲಾಡಿಸುವುದು. ಸಹಸ್ರಾರು ವರ್ಷಗಳಿಂದ ಸಮಾಜ ಇವುಗಳನ್ನು ಎದುರಿಸುತ್ತಿವೆ) ತಮ್ಮ ಸಾಮಾಜಿಕ ತತ್ವಶಾಸ್ತ್ರದಿಂದ ಪ್ರೇರಿತರಾಗಿ ಇಂದು ಹಲವು ಯುವಕರು ಸಮಾಜ ಸೇವೆಗೆ ಸೇರ್ಪಡೆಗೊಂಡು ಸೇವೆಗೈಯುವ ಪಣ ತೊಡುತ್ತಿದ್ದಾರೆ. ಸಹ ಸಂತರು ಕೂಡ ಸೇವೆ, ಶಿಕ್ಷಣ ಮತ್ತು ಸ್ವಯಂ ಅವಲಂಬನೆ ಮತ್ತಿತರ ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದು, ಇವು ಆಚಾರ್ಯ ಶ್ರೀ ಅವರ ಹೃದಯಕ್ಕೆ ಹತ್ತಿರವಾದ ಕ್ರಮಗಳು. ಗುಲಾಮಗಿರಿ ಅವಧಿಯ ಸವಾಲುಗಳ ನಡುವೆಯೇ ಅವರು, ಎಲ್ಲೆಡೆ ಶಿಕ್ಷಣವನ್ನು ಬೋಧಿಸಿದರು ಮತ್ತು ಗುರುಕುಲ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರು. ಅವರು “घर-घर विद्या दीप जले” (ಪ್ರತಿಯೊಂದು ಮನೆಯಲ್ಲೂ ಶಿಕ್ಷಣದ ಬೆಳಕು ಮೂಡಬೇಕು) ಗೆ ಕರೆ ನೀಡಿದರು. ಆದರೆ ಅವರು ಬ್ರಿಟೀಷರು ಸಿದ್ಧಪಡಿಸಿದ ಶಿಕ್ಷಣ ಪದ್ಧತಿ, ಭಾರತದ ಸ್ವಾತಂತ್ರ್ಯ ಮತ್ತು ಪ್ರಗತಿಗೆ ಯಾವುದೇ ರೀತಿಯಲ್ಲಿ ಸಹಕಾರಿಯಾಗುವುದಿಲ್ಲ ಎಂಬುದನ್ನು ಅರಿತಿದ್ದರು.
ಆದ್ದರಿಂದ ಭಾರತೀಯತೆಯ ಸ್ವಾದವನ್ನು ನೀಡಿದ್ದರು ಮತ್ತು ಮಹಾತ್ಮ ಗಾಂಧಿ ಗುಜರಾತ್ ವಿದ್ಯಾಪೀಠದ ಮಾದರಿಯ ಕನಸು ಕಂಡಂತೆ, ಅವರು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ, ಭಾರತೀಯ ಶಿಕ್ಷಣವನ್ನು ನೀಡಲು ಮುಂದಾಗಿದ್ದರು. ಈ ಕನಸನ್ನು ಗುರು ವಲ್ಲಭರೂ ಕಂಡಿದ್ದರು. ಒಂದು ರೀತಿಯಲ್ಲಿ ಆಚಾರ್ಯ ವಿಜಯ ವಲ್ಲಭ ಜಿ ಅವರು, ಶಿಕ್ಷಣ ಕ್ಷೇತ್ರದಲ್ಲಿ ಭಾರತೀಯ ಸ್ವಾವಲಂಬನೆಗೆ ಆಂದೋಲನ ಆರಂಭಿಸಿದ್ದರು. ಅವರು ಪಂಜಾಬ್, ರಾಜಸ್ಥಾನ್, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರತೀಯ ಪರಂಪರೆಯ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಇಂದು ದೇಶದಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ಅವರ ಕೃಪೆಯಿಂದ ಅತ್ಯುತ್ತಮವಾಗಿ ನಡೆಯುತ್ತಿವೆ.
ಮಿತ್ರರೇ,
ಇಂದು ಆಚಾರ್ಯ ಜಿ ಅವರ ಈ ಶಿಕ್ಷಣ ಸಂಸ್ಥೆಗಳು ಬೃಹದಾಕಾರವಾಗಿ ಬೆಳೆದಿವೆ. ಅವು ಭಾರತೀಯ ಮೌಲ್ಯಗಳ ಶಾಲೆಗಳ ರೂಪದಲ್ಲಿ ದೇಶಕ್ಕೆ ಸೇವೆಯನ್ನು ಸಲ್ಲಿಸುತ್ತಿವೆ. 100 ವರ್ಷಗಳ ಅವಧಿಯಲ್ಲಿ ಈ ಸಂಸ್ಥೆಗಳಿಂದ ಹಲವು ಪ್ರತಿಭಾವಂತರು ಶಿಕ್ಷಣ ಪಡೆದು ಹೊರ ಬಂದಿದ್ದಾರೆ. ಹಲವು ಕೈಗಾರಿಕೋದ್ಯಮಿಗಳು, ಮುಖ್ಯ ನ್ಯಾಯಮೂರ್ತಿಗಳು, ವೈದ್ಯರು ಮತ್ತು ಇಂಜಿನಿಯರ್ ಗಳು, ಈ ಸಂಸ್ಥೆಗಳಿಂದ ತೇರ್ಗಡೆಯಾಗಿ ಹೊರಬಂದಿದ್ದು, ಅವರು ದೇಶಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ. ಈ ಸಂಸ್ಥೆಗಳ ಬಗ್ಗೆ ಹೇಳಬಹುದಾದ ಮತ್ತೊಂದು ಪ್ರಮುಖ ಅಂಶವೆಂದರೆ ಅದು ಮಹಿಳಾ ಶಿಕ್ಷಣ. ಈ ಸಂಸ್ಥೆಗಳಲ್ಲಿ ಮಹಿಳಾ ಶಿಕ್ಷಣವನ್ನು ಅಳವಡಿಸಿಕೊಳ್ಳುವ ಮೂಲಕ ಮಹಿಳಾ ಶಿಕ್ಷಣ ವಲಯದಲ್ಲಿ ದೇಶಕ್ಕೆ ಗಮನಾರ್ಹ ಕೊಡುಗೆ ನೀಡಿವೆ. ಕಠಿಣ ಸಮಯದಲ್ಲೂ ಸಹ ಅವರು ಮಹಿಳಾ ಶಿಕ್ಷಣವನ್ನು ಪೋಷಿಸಿದರು. ಅವರು ಹಲವು ಯುವತಿಯರ ಗೃಹಗಳನ್ನು ಸ್ಥಾಪಿಸಿ, ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿ ಜೊತೆ ಅವರು ಸೇರುವಂತೆ ಮಾಡಿದರು. ಆಚಾರ್ಯ ವಿಜಯ ವಲ್ಲಭ ಜಿ ಅವರು, ಜೈನ ಮಹಿಳಾ ಧರ್ಮ ಗುರುಗಳಿಂದ ಬೋಧನೆ ಸಂಪ್ರದಾಯವನ್ನು ಆರಂಭಿಸಿದರು. ಇದರ ಹಿಂದಿನ ಸಂದೇಶವೆಂದರೆ ಮಹಿಳೆಯರು ಸಮಾಜದಲ್ಲಿ ಸಮಾನರಾಗಿರಬೇಕು ಮತ್ತು ಶಿಕ್ಷಣ ಪಡೆಯಬೇಕು ಎಂಬುದು. ಬೇಧ-ಭಾವ ಪದ್ಧತಿಗಳನ್ನು ಕೊನೆಗಾಣಿಸಬೇಕು ಎಂಬುದಾಗಿತ್ತು. ಇಂದು ಆ ನಿಟ್ಟಿನಲ್ಲಿ ದೇಶದಲ್ಲಿ ಹಲವು ಬದಲಾವಣೆಗಳಾಗಿರುವುದನ್ನು ನೀವು ಕಾಣಬಹುದು. ದೇಶದಲ್ಲಿ ತ್ರಿವಳಿ ತಲಾಖ್ ನಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಕಾನೂನು ಜಾರಿಗೊಳಿಸಲಾಗಿದೆ. ಹಲವು ವಲಯಗಳನ್ನು ಮಹಿಳೆಯರಿಗೆ ಮುಕ್ತಗೊಳಿಸಲಾಗಿದೆ. ಅವರು ಹಿಂದೆ ನಿಷೇಧಸಿದ್ದ ಕೆಲಸಗಳನ್ನೂ ಸಹ ಮಾಡಬಹುದಾಗಿದೆ. ಇದೀಗ ದೇಶದ ಹೆಣ್ಣು ಮಕ್ಕಳು ತಮ್ಮ ಶೌರ್ಯವನ್ನು ಸಶಸ್ತ್ರ ಪಡೆಗಳಲ್ಲೂ ಕೂಡ ಪ್ರದರ್ಶಿಸಲು ಅವಕಾಶ ಲಭ್ಯವಾಗುತ್ತಿದೆ. ಅಲ್ಲದೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶಾದ್ಯಂತ ಜಾರಿಗೊಳಿಸಲಾಗುತ್ತಿದೆ. ಆ ನೀತಿ ಭಾರತದ ಸನ್ನಿವೇಶದಲ್ಲಿ ಶಿಕ್ಷಣವನ್ನು ಆಧುನೀಕರಣಗೊಳಿಸುತ್ತದೆ ಮತ್ತು ಮಹಿಳೆಯರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ.
ಮಿತ್ರರೇ,
ಆಚಾರ್ಯ ವಿಜಯ ವಲ್ಲಭ ಜಿ ಅವರು, ದೇಶದ ಬಗೆಗಿನ ಕರ್ತವ್ಯಗಳನ್ನು ನಿರ್ಲಕ್ಷಿಸಬಾರದು, ಅವುಗಳನ್ನು ಪಾಲಿಸಬೇಕು ಎಂದು ಹೇಳುತ್ತಿದ್ದರು. ಅಲ್ಲದೆ ಅವರು ತಮ್ಮ ಜೀವನದಲ್ಲಿ ‘ಏಕ ಭಾರತ್ ಶ್ರೇಷ್ಠ ಭಾರತ್’ ಮಂತ್ರ ಪಠಿಸುತ್ತಿದ್ದರು. ಮಾನವೀಯತೆಯ ಸತ್ಯವನ್ನು ಅನುಸರಿಸುತ್ತಿದ್ದ ಅವರು, ಜಾತಿ, ಬಣ್ಣ ಮತ್ತು ಸಮುದಾಯ ಇದ್ಯಾವುದನ್ನೂ ಪರಿಗಣಿಸುತ್ತಿರಲಿಲ್ಲ. ಸರ್ವರ ಅಭಿವೃದ್ಧಿಗಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಸಮಾಜದ ದಕ್ಷ ವರ್ಗಕ್ಕೆ ಪ್ರೇರಣೆ ನೀಡಿ ಅವರು ಸಮಾಜದ ತಳಹಂತದಲ್ಲಿದ್ದ ಜನರ ಅಭಿವೃದ್ಧಿಗೆ ಸೇವೆ ಸಲ್ಲಿಸುವಂತೆ ಸ್ಫೂರ್ತಿ ತುಂಬಿದ್ದರು. ಮಹಾತ್ಮ ಗಾಂಧಿ ಏನು ಬೋಧಿಸುತ್ತಿದ್ದರೋ ಗುರು ವಿಜಯ ವಲ್ಲಭ ಜಿ ಅವರು ಅದನ್ನು ಅಕ್ಞರಶಃ ಪಾಲಿಸುತ್ತಿದ್ದರು. ಅವರು ಬಡವರಲ್ಲಿ ಕಡುಬಡವರಿಗೆ ಮೂಲಸೌಕರ್ಯಗಳನ್ನು ಖಾತ್ರಿಪಡಿಸಲು ಹೋರಾಡುತ್ತಿದ್ದರು. ಅವರಿಂದ ಸ್ಫೂರ್ತಿ ಪಡೆದ ಪರಿಣಾಮಗಳನ್ನು ಕಾಣಬಹುದಾಗಿದೆ. ಅವರಿಂದ ಸ್ಫೂರ್ತಿ ಪಡೆದು, ಹಲವು ರಾಜ್ಯಗಳಲ್ಲಿ ಬಡವರಿಗಾಗಿ ಮನೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ ಮತ್ತು ಅವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ. ಇಂದು ಆತ್ಮವಲ್ಲಭ ಟ್ರಸ್ಟ್, ಬಡ ಮಕ್ಕಳ ಭವಿಷ್ಯದ ಹೊಣೆಗಾರಿಕೆಯನ್ನು ವಹಿಸಿಕೊಂಡು ಅಂತಹ ತಾಯಂದಿರುವ ಮತ್ತು ಸಹೋದರಿಯರನ್ನು ಉಳಿಸಲು ಸಹಾಯ ಮಾಡುತ್ತಿದೆ ಮತ್ತು ಬಡ ಅನಾರೋಗ್ಯ ಕುಟುಂಬಗಳಿಗೆ ಚಿಕಿತ್ಸೆಯನ್ನು ನೀಡುತ್ತಿದೆ.
ಮಿತ್ರರೇ,
ಆಚಾರ್ಯ ವಿಜಯ ವಲ್ಲಭ ಜಿ ಅವರ ಜೀವನವಿಡೀ ಸಹಾನುಭೂತಿ ಹೊಂದಿದ್ದರು ಮತ್ತು ಎಲ್ಲರನ್ನೂ ಪ್ರೀತಿಸುತ್ತಿದ್ದರು. ಆದ್ದರಿಂದ ದೇಶದಲ್ಲಿ ಅವರ ಆಶೀರ್ವಾದದಿಂದ ಹಲವು ಆಸ್ಪತ್ರೆಗಳು ಮತ್ತು ಗೋ-ಶಾಲೆಗಳು ನಡೆಯುತ್ತಿವೆ. ಈ ಸಂಸ್ಥೆಗಳು ಭಾರತದ ಪುರಾಣಗಾಥೆಯನ್ನು ಪ್ರತಿಬಿಂಬಿಸುತ್ತವೆ. ಇವು ಭಾರತೀಯ ಮತ್ತು ಭಾರತೀಯ ಮೌಲ್ಯಗಳ ಹೆಗ್ಗುರುತುಗಳಾಗಿವೆ.
ಮಿತ್ರರೇ,
ಇಂದು ಮಾನವೀಯ ಮೌಲ್ಯಗಳಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ ಆಚಾರ್ಯ ವಿಜಯ ವಲ್ಲಭ ಜಿ ಅವರ ತತ್ವಗಳನ್ನು ಪುನಃ ಪ್ರಚುರಗೊಳಿಸುವ ಅಗತ್ಯವಿದೆ. ಕೊರೊನಾದ ಈ ಸಾಂಕ್ರಾಮಿಕ ಕಷ್ಟಕರ ಸಂದರ್ಭದಲ್ಲಿ ನಮ್ಮ ಸೇವಾ ಸ್ಫೂರ್ತಿ ಮತ್ತು ಐಕ್ಯತೆಗೆ ಪ್ರೇರಣೆಯಾಗಲಿದೆ. ಆದರೆ ನನಗೆ ದೇಶದಲ್ಲಿ ಇದು ಪಾಲನೆಯಾಗುತ್ತಿರುವ ಬಗ್ಗೆ ತೃಪ್ತಿ ಇದೆ. ಬಡವರ ಕಲ್ಯಾಣವನ್ನು ದೇಶದಲ್ಲಿ ಜೀವಂತವಾಗಿಟ್ಟಿರುವುದೇ ಅಲ್ಲದೆ, ವಿಶ್ವದ ಎದುರು ಒಂದು ಮಾದರಿ ಉದಾಹರಣೆಯನ್ನು ನೀಡಲಾಗಿದೆ.
ಮಿತ್ರರೇ,
ಆಚಾರ್ಯ ವಿಜಯ ವಲ್ಲಭ ಸೂರಿ ಜಿ ಅವರು ಹೀಗೆ ಹೇಳುತ್ತಿದ್ದರು – “ಮಾನವೀಯತೆಗೆ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಧರ್ಮವಾಗಬೇಕು” ಎಂದು ನಾವು ಈ ಮಂತ್ರವನ್ನು ಅಳವಡಿಸಿಕೊಂಡಿದ್ದೇವೆ ಮತ್ತು ಮುನ್ನಡೆಯತ್ತಿದ್ದೇವೆ. ನಮ್ಮ ಪ್ರತಿಯೊಂದು ಕಾರ್ಯಗಳಲ್ಲೂ ನಾವು ದೇಶಕ್ಕೆ ಹೇಗೆ ಲಾಭವಾಗುತ್ತದೆ ಮತ್ತು ಹೇಗೆ ದೇಶದ ಬಡವರಿಗೆ ಪ್ರಯೋಜನವಾಗುತ್ತದೆ ಎಂಬುದನ್ನು ಯೋಚಿಸಬೇಕು. ಆರಂಭದಲ್ಲಿ ನಾನು ಹೇಳಿದಂತೆ ‘ವೋಕಲ್ ಫಾರ್ ಲೋಕಲ್’ ಇದಕ್ಕೆ ಬಹುದೊಡ್ಡ ಮಾಧ್ಯಮವಾಗಿದೆ ಮತ್ತು ಸಂತರು ಇದನ್ನು ಮುನ್ನಡೆಸಬೇಕು. ಸಂತರು, ಮಹಂತರು ಮತ್ತು ಮುನಿಗಳು ಈ ಮಂತ್ರವನ್ನು ಮುಂದೆ ಕೊಂಡೊಯ್ಯಬೇಕು. ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಸ್ಥಳೀಯ ಆರ್ಥಿಕತೆಗೆ ದೇಶ ಬೆಂಬಲ ನೀಡಿದ ನೀತಿ ಅಪೂರ್ವವಾದುದು. ಪ್ರತಿಯೊಂದು ಹಬ್ಬಗಳು ನಿಜಕ್ಕೂ ಹೊಸ ಶಕ್ತಿಯನ್ನು ನೀಡುತ್ತಿವೆ. ನಾವು ಭವಿಷ್ಯದಲ್ಲೂ ಇದೇ ಮನೋಭಾವವನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಆಚಾರ್ಯ ವಿಜಯ ವಲ್ಲಭ ಜಿ ಅವರ 151ನೇ ಜನ್ಮ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ನಾವು ಅವರು ತಮ್ಮ ಜೀವನದುದ್ದಕ್ಕೂ ಪಾಲಿಸಿದ ತತ್ವಗಳನ್ನು ಬದ್ಧತೆಯಿಂದ ಹಾಗೂ ಪ್ರಾಮಾಣಿಕವಾಗಿ ಮುಂದುವರಿಸಿಕೊಂಡು ಹೋಗುವ ಸಂಕಲ್ಪ ಮಾಡೋಣ. ಒಟ್ಟಾಗಿ ಭಾರತವನ್ನು ನಾವು ಆರ್ಥಿಕವಾಗಿ ಅಷ್ಟೇ ಅಲ್ಲದೆ ಆದರ್ಶವಾಗಿಯೂ ಸ್ವಯಂ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡೋಣ. ಈ ಸಂಕಲ್ಪದೊಂದಿಗೆ ನಿಮ್ಮೆಲ್ಲರಿಗೂ ಶುಭಾಶಯಗಳು. ಆರೋಗ್ಯದಿಂದಿರಿ, ಸಂತೋಷದಿಂದಿರಿ. ಎಲ್ಲ ಆಚಾರ್ಯರು ಮತ್ತು ಸಂತರಿಗೆ ನನ್ನ ಕೃತಜ್ಞತೆಗಳು. ಈ ಪವಿತ್ರ ಸಂದರ್ಭದಲ್ಲಿ ನನಗೆ ನಿಮ್ಮೊಡನಿರುವ ಅವಕಾಶ ಲಭಿಸಿದ್ದಕ್ಕಾಗಿ ನಾನು ಆಭಾರಿಯಾಗಿರುತ್ತೇನೆ. ಎಲ್ಲಾ ಸಂತರು, ಮಹಂತರು, ಆಚಾರ್ಯರಿಗೆ ಶುಭಾಶಯಗಳನ್ನು ಕೋರುತ್ತಾ ನಾನು ಭಾಷಣವನ್ನು ಮುಕ್ತಾಯಗೊಳಿಸುತ್ತಿದ್ದೇನೆ.
ತುಂಬಾ ತುಂಬಾ ಧನ್ಯವಾದಗಳು
ದೃಢೀಕೃತ ಹೇಳಿಕೆ (ಡಿಸ್ಕೈಮರ್ ): ಇದು ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಸಂಕ್ಷಿಪ್ತ ಅನುವಾದ. ಅವರ ಮೂಲ ಭಾಷಣ ಹಿಂದಿ ಭಾಷೆಯಲ್ಲಿತ್ತು.
***
(Release ID: 1673628)
Visitor Counter : 224
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam