ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಸಾಮಾಜಿಕ ಭದ್ರತೆ 2020ರ ಕುರಿತು ಕೇಂದ್ರ ಕಾರ್ಮಿಕ ಸಚಿವಾಲಯದ ಕರಡು ನಿಯಮಗಳ ಅಧಿಸೂಚನೆ

Posted On: 15 NOV 2020 1:51PM by PIB Bengaluru

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸಾಮಾಜಿಕ ಭದ್ರತೆ 2020 ಕುರಿತ ಸಂಹಿತೆ ಅಡಿಯಲ್ಲಿ 13.11.2020ರಂದು ಕರಡು ನಿಯಮಗಳ ಅಧಿಸೂಚನೆ ಹೊರಡಿಸಿದ್ದು, ಬಾಧ್ಯಸ್ಥರುಗಳಿಂದ ಸಲಹೆ ಮತ್ತು ಆಕ್ಷೇಪಗಳು ಏನಾದರೂ ಇದ್ದಲ್ಲಿ ಸಲ್ಲಿಸುವಂತೆ ಆಹ್ವಾನಿಸಿದೆ. ಅಂಥ ಸಲಹೆ ಮತ್ತು ಆಕ್ಷೇಪಣೆಗಳನ್ನು ಕರಡು ನಿಯಮಗಳು ಅಧಿಸೂಚನೆ ಆದ ದಿನಾಂಕದಿಂದ 45 ದಿನಗಳ ಒಳಗಾಗಿ ಸಲ್ಲಿಸಬೇಕಾಗುತ್ತದೆ.
ನೌಕರರ ಭವಿಷ್ಯ ನಿಧಿ, ನೌಕರರ ರಾಜ್ಯ ವಿಮಾ ನಿಗಮ, ಗ್ರಾಚ್ಯುಟಿ, ಹೆರಿಗೆ ಪ್ರಯೋಜನಗಳು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಂಬಂಧಿಸಿದಂತೆ ಸಾಮಾಜಿಕ ಭದ್ರತೆ ಮತ್ತು ಉಪಕರ, ಅಸಂಘಟಿತ ಕಾರ್ಮಿಕರು, ಗಿಗ್ ಕಾರ್ಮಿಕರು ಮತ್ತು ಪ್ಲಾಟ್ ಫಾರಂ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕುರಿತಂತೆ ಸಾಮಾಜಿಕ ಭದ್ರತೆ ಸಂಹಿತೆ 2020 ರಲ್ಲಿನ ನಿಬಂಧನೆಗಳ ಕಾರ್ಯಾಚರಣೆಗೆ ಕರಡು ನಿಯಮಗಳು ಅವಕಾಶ ಒದಗಿಸುತ್ತವೆ.

ಕೇಂದ್ರ ಸರ್ಕಾರದ ಪೋರ್ಟಲ್‌ ನಲ್ಲಿ ಅಸಂಘಟಿತ ಕಾರ್ಮಿಕರು, ಗಿಗ್ ಕಾರ್ಮಿಕರು ಮತ್ತು ಪ್ಲಾಟ್‌ ಫಾರ್ಮ್ ಕೆಲಸಗಾರರಿಂದ ಸ್ವಯಂ ನೋಂದಣಿ ಸೇರಿದಂತೆ ಆಧಾರ್ ಆಧಾರಿತ ನೋಂದಣಿಗೆ ಕರಡು ನಿಯಮಗಳು ಅವಕಾಶ ನೀಡುತ್ತವೆ. ಅಂತಹ ಪೋರ್ಟಲ್ ಅಭಿವೃದ್ಧಿಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಈಗಾಗಲೇ ಕ್ರಮ ಕೈಗೊಂಡಿದೆ. ಸಂಹಿತೆಯಡಿಯಲ್ಲಿ ರೂಪಿಸಲಾದ ಯಾವುದೇ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಯಾವುದೇ ಪ್ರಯೋಜನವನ್ನು ಪಡೆಯಲು, ಯೋಜನೆಯಲ್ಲಿ ನಿರ್ದಿಷ್ಟಪಡಿಸಿದ ವಿವರಗಳೊಂದಿಗೆ ಅಸಂಘಟಿತ ಕಾರ್ಮಿಕರು ಅಥವಾ ಗಿಗ್ ಕಾರ್ಮಿಕರು ಅಥವಾ ಪ್ಲಾಟ್‌ ಫಾರ್ಮ್ ಕಾರ್ಮಿಕರು ಪೋರ್ಟಲ್‌ ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಥವಾ ರಾಜ್ಯ ಕಲ್ಯಾಣ ಮಂಡಳಿಯ ನಿಗದಿತ ಪೋರ್ಟಲ್‌ ನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಆಧಾರ್ ಆಧಾರಿತ ನೋಂದಣಿಗೆ ಈ ನಿಯಮಗಳು ಮತ್ತಷ್ಟು ಅವಕಾಶ ನೀಡುತ್ತವೆ. ಕಟ್ಟಡ ಕೆಲಸಗಾರರು ಒಂದು ರಾಜ್ಯದಿಂದ ಇನ್ನೊಂದಕ್ಕೆ ವಲಸೆ ಹೋದಾಗ ಅವರು ಪ್ರಸ್ತುತ ಕೆಲಸ ಮಾಡುತ್ತಿರುವ ರಾಜ್ಯದಲ್ಲಿ ಪ್ರಯೋಜನಗಳನ್ನು ಪಡೆಯಲು  ಅರ್ಹರಾಗಿರುತ್ತಾರೆ ಮತ್ತು ಅಂತಹ ಕೆಲಸಗಾರರಿಗೆ ಪ್ರಯೋಜನಗಳನ್ನು ಒದಗಿಸುವುದು ಆ ರಾಜ್ಯದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಜವಾಬ್ದಾರಿಯಾಗಿರುತ್ತದೆ.

ನಿಗದಿತ ಅವಧಿಯ ಉದ್ಯೋಗದಲ್ಲಿರುವ ನೌಕರನಿಗೆ ಗ್ರ್ಯಾಚುಟಿ ಬಗ್ಗೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. 

ವ್ಯವಹಾರ ಚಟುವಟಿಕೆಗಳನ್ನು ಮುಚ್ಚುವ ಸಂದರ್ಭದಲ್ಲಿ ನೋಂದಣಿಯನ್ನು ರದ್ದುಗೊಳಿಸುವುದು ಸೇರಿದಂತೆ ಸ್ಥಾಪನೆಗಳಿಗೆ ಒಂದು ಎಲೆಕ್ಟ್ರಾನಿಕ್ ನೋಂದಣಿಗೆ ನಿಯಮಗಳು ಅವಕಾಶ ನೀಡುತ್ತವೆ.

ಸ್ಥಾಪನೆಯೊಂದು ಇಪಿಎಫ್‌.ಒ ಮತ್ತು ಇಎಸ್‌.ಐಸಿ ವ್ಯಾಪ್ತಿಯಿಂದ ನಿರ್ಗಮಿಸುವ ಕುರಿತ ವಿಧಾನ ಮತ್ತು ಷರತ್ತುಗಳ ಬಗ್ಗೆಯೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಸಂಬಂಧಿಸಿದಂತೆ ಉಪಕರದ ಸ್ವಯಂ ನಿರ್ಧರಣೆ ಮತ್ತು ಪಾವತಿಸುವ ವಿಧಾನವನ್ನು ನಿಯಮಗಳಲ್ಲಿ ವಿವರಿಸಲಾಗಿದೆ. ಸ್ವಯಂ ನಿರ್ಧರಣೆ ಉದ್ದೇಶಕ್ಕಾಗಿ, ಉದ್ಯೋಗದಾತನು ರಾಜ್ಯ ಲೋಕೋಪಯೋಗಿ ಇಲಾಖೆ ಅಥವಾ ಕೇಂದ್ರ ಲೋಕೋಪಯೋಗಿ ಇಲಾಖೆ ನಿರ್ದಿಷ್ಟಪಡಿಸಿದ ದರಗಳ ಪ್ರಕಾರ ಅಥವಾ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಿದ ರಿಟರ್ನ್ ಅಥವಾ ದಾಖಲೆಗಳ ಆಧಾರದ ಮೇಲೆ ನಿರ್ಮಾಣ ವೆಚ್ಚವನ್ನು ಲೆಕ್ಕ ಹಾಕಬೇಕಾಗುತ್ತದೆ.

ಇಂಥ ಉಪಕರಗಳ ಪಾವತಿಯಲ್ಲಿನ ವಿಳಂಬಕ್ಕೆ ಬಡ್ಡಿ ದರವನ್ನು ತಿಂಗಳಿಗೆ ಅಥವಾ ತಿಂಗಳ ಭಾಗಕ್ಕೆ ಶೇ.2ರಿಂದ ಶೇ.1ಕ್ಕೆ ಇಳಿಸಲಾಗಿದೆ.  ಹಾಲಿ ಇರುವ ನಿಯಮಗಳ ಪ್ರಕಾರ, ನಿರ್ಧರಣೆ ಅಧಿಕಾರಿಗೆ ನಿರ್ಮಾಣ ಸ್ಥಳದಿಂದ ಯಾವುದೇ ವಸ್ತು ಅಥವಾ ಯಂತ್ರೋಪಕರಣ ತೆಗೆಯದಂತೆ ಅಥವಾ ಅಲುಗಾಡಿಸದಂತೆ ನಿರ್ದೇಶಿರುವ ಅಧಿಕಾರ ಇರುತ್ತದೆ. ನಿರ್ಮಾಣ ಕಾರ್ಯವನ್ನು ಅನಿರ್ದಿಷ್ಟವಾಗಿ ನಿಲ್ಲಿಸುವ ಅಂತಹ ಅಧಿಕಾರವನ್ನು ಕರಡು ನಿಯಮಗಳಲ್ಲಿ ಹಿಂಪಡೆಯಲಾಗಿದೆ. ಇದಲ್ಲದೆ, ಕರಡು ನಿಯಮಗಳ ಪ್ರಕಾರ, ನಿರ್ಧರಣೆ ಮಾಡುವ ಅಧಿಕಾರಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯ ಕಾರ್ಯದರ್ಶಿಯ ಪೂರ್ವಾನುಮತಿಯೊಂದಿಗೆ ಮಾತ್ರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಬಹುದಾಗಿರುತ್ತದೆ.

ಸ್ವಯಂ ನಿರ್ಧರಣೆ ಮೂಲಕ ಅಗ್ರಿಗೇಟರುಗಳು ಪಾವತಿಸುವ ವಂತಿಗೆ ವಿಧಾನವನ್ನೂ ನಿಯಮದಲ್ಲಿ ಒದಗಿಸಲಾಗಿದೆ.
For Draft Notification of Rules (Hindi & English) under Code on Social Security please click on the Link


***



(Release ID: 1673024) Visitor Counter : 273