ಕೃಷಿ ಸಚಿವಾಲಯ
2020-21ನೇ ಸಾಲಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇಬು ಖರೀದಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ವಿಸ್ತರಣೆಗೆ ಕೇಂದ್ರ ಸಂಪುಟ ಅನುಮೋದನೆ
Posted On:
21 OCT 2020 3:28PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2020-21ನೇ ಸಾಲಿನ ಪ್ರಸಕ್ತ ಹಂಗಾಮಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇಬು ಖರೀದಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ(ಎಂಐಎಸ್) ವಿಸ್ತರಣೆಗೆ ಅನುಮೋದನೆ ನೀಡಿದೆ. 2019-20ನೇ ಸಾಲಿನಲ್ಲಿ ಅಂದರೆ ಕಳೆದ ಋತುವಿನಲ್ಲಿ ಇದ್ದ ನಿಯಮ ಮತ್ತು ಷರತ್ತುಗಳು ಹಾಗೆಯೇ ಮುಂದುವರಿಯಲಿವೆ.
ಸೇಬು ಖರೀದಿಯನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆ ಅಂದರೆ ರಾಷ್ಟ್ರೀಯ ಕೃಷಿ ಉತ್ಪನ್ನಗಳ ಸಹಕಾರ ಮಾರುಕಟ್ಟೆ ಒಕ್ಕೂಟ ನಿಯಮಿತ(ನಾಫೆಡ್) ಮೂಲಕ ರಾಜ್ಯದ ನಿಯೋಜಿತ ಸಂಸ್ಥೆ ಅಂದರೆ ಯೋಜನೆ ಮತ್ತು ಮಾರುಕಟ್ಟೆ ನಿರ್ದೇಶನಾಲಯ, ಜಮ್ಮು ಮತ್ತು ಕಾಶ್ಮೀರದ ತೋಟಗಾರಿಕಾ ಇಲಾಖೆ, ಜಮ್ಮು ಮತ್ತು ಕಾಶ್ಮೀರ ತೋಟಗಾರಿಕಾ ಸಂಸ್ಕರಣಾ ಮತ್ತು ಮಾರುಕಟ್ಟೆ ಸಹಕಾರ ಸಂಸ್ಥೆ(ಜೆಕೆಎಚ್ ಪಿಎಂಸಿ) ನೇರವಾಗಿ ಜಮ್ಮು ಮತ್ತು ಕಾಶ್ಮೀರದ ರೈತರಿಂದ ಖರೀದಿಸಲಿವೆ ಮತ್ತು ಪಾವತಿಯನ್ನು ಸೇಬು ಬೆಳೆಗಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಪಾವತಿಸಲಾಗುವುದು. ಈ ಯೋಜನೆ ಮೂಲಕ 12 ಲಕ್ಷ ಮೆಟ್ರಿಕ್ ಟನ್ ಸೇಬುಗಳನ್ನು ಖರೀದಿಸಲಾಗುವುದು.
ಅಲ್ಲದೆ ಸರ್ಕಾರ ಈ ಕಾರ್ಯಾಚರಣೆಗಾಗಿ 2,500 ಕೋಟಿ ರೂ. ಸರ್ಕಾರದ ಖಾತ್ರಿಯನ್ನು ಬಳಸಿಕೊಳ್ಳಲು ನಾಫೆಡ್ ಗೆ ಅವಕಾಶ ಮಾಡಿಕೊಟ್ಟಿದೆ. ಈ ಕಾರ್ಯಾಚರಣೆಯಲ್ಲಿ ಯಾವುದೇ ನಷ್ಟವಾದರೆ ಅದನ್ನು ಕೇಂದ್ರ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ 50:50 ಅನುಪಾತದಲ್ಲಿ ಭರಿಸಬೇಕಾಗಿದೆ.
ಕಳೆದ ಋತುವಿನಲ್ಲಿ ಬೆಲೆ ನಿಗದಿಗೆ ರಚಿಸಲಾಗಿದ್ದ ದರ ನಿಗದಿ ಸಮಿತಿಯನ್ನು ಈ ಋತುಮಾನಕ್ಕೂ ನಾನಾ ದರ್ಜೆಯ ಮತ್ತು ನಾನಾ ವಿಧದ ಸೇಬುಗಳಿಗೆ ಬೆಲೆಯನ್ನು ನಿಗದಿಪಡಿಸಲು ಮುಂದುವರಿಸಲಾಗುವುದು. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ನಿಗದಿತ ಮಂಡಿಗಳಿಗೆ ಅಗತ್ಯ ಮೂಲಸೌಕರ್ಯವನ್ನು ಒದಗಿಸಿ ಕೊಡಬೇಕಿದೆ.
ಸುಗಮ ಮತ್ತು ನಿರಂತರ ಖರೀದಿ ಪ್ರಕ್ರಿಯೆ ಬಗ್ಗೆ ಮೇಲ್ವಿಚಾರಣೆ ನಡೆಸಲು ಕೇಂದ್ರ ಮಟ್ಟದಲ್ಲಿ ಕೇಂದ್ರ ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗುವುದು ಹಾಗೂ ಕೇಂದ್ರಾಡಳಿತ ಪ್ರದೇಶದ ಮಟ್ಟದಲ್ಲಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಯೋಜನೆ ಜಾರಿ ಮತ್ತು ಸಮನ್ವಯ ಸಮಿತಿಯನ್ನು ರಚಿಸಲಾಗಿದೆ.
ಭಾರತ ಸರ್ಕಾರದ ಈ ಪ್ರಕಟಣೆಯಿಂದಾಗಿ ಸೇಬು ಬೆಳೆಗಾರರಿಗೆ ಪರಿಣಾಮಕಾರಿ ಮಾರುಕಟ್ಟೆ ವೇದಿಕೆ ಲಭ್ಯವಾಗಲಿದೆ ಹಾಗೂ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳ ಸೃಷ್ಟಿಗೆ ನೆರವು ಲಭ್ಯವಾಗಲಿದೆ. ಅಲ್ಲದೆ ಸೇಬುಗಳಿಗೆ ಸ್ಪರ್ಧಾತ್ಮಕ ದರ ಖಾತ್ರಿಯಾಗುವುದಲ್ಲದೆ, ಒಟ್ಟಾರೆ ಜಮ್ಮು ಮತ್ತು ಕಾಶ್ಮೀರದ ರೈತರ ಆದಾಯ ವೃದ್ಧಿಯಾಗಲಿದೆ.
***
(Release ID: 1666453)
Visitor Counter : 159
Read this release in:
Telugu
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia