ಸಂಸ್ಕೃತಿ ಸಚಿವಾಲಯ

ಕೋವಿಡ್-19: ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮಾರಂಭಗಳ ಆಯೋಜನೆಗೆ ಕೇಂದ್ರ ಸಂಸ್ಕೃತಿ ಸಚಿವಾಲಯದ ಮಾರ್ಗಸೂಚಿಗಳು

Posted On: 15 OCT 2020 6:56PM by PIB Bengaluru

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಕೋವಿಡ್-19 ನಿರ್ಬಂಧಗಳ ಸಡಿಲಿಕೆ -5 ಮಾರ್ಗಸೂಚಿಗಳು ಹಾಗೂ ದೇಶದ ಸೃಜನಾತ್ಮಕ ಉದ್ಯಮಗಳ ವಲಯದ ಸಹಭಾಗಿಗಳ ಸಲಹೆ ಸೂಚನೆಗಳನ್ನು ಸ್ವೀಕರಿಸಿರುವ ಕೇಂದ್ರ ಸಂಸ್ಕೃತಿ ಸಚಿವಾಲಯವು, ದೇಶಾದ್ಯಂತ ಸಾರ್ವಜನಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮಾರಂಭಗಳನ್ನು ಆಯೋಜಿಸಲು ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ದೇಶಾದ್ಯಂತ ಇರುವ ಚಿತ್ರಮಂದಿರಗಳು, ಪ್ರದರ್ಶನ ಕೇಂದ್ರಗಳು, ಮನರಂಜನಾ ಮತ್ತು ಸೃಜನಾತ್ಮಕ ಸಂಸ್ಥೆಗಳು, ಕಲಾವಿದರು ಮತ್ತು ಸಿಬ್ಬಂದಿ ಮತ್ತು ತೆರೆದ ಮತ್ತು ಮುಚ್ಚಿದ ಪ್ರದರ್ಶನ ಸಭಾಂಗಣಗಳನ್ನು ಬಾಡಿಗೆ ಅಥವಾ ಕರಾರಿಗೆ ಪಡೆಯುವ ಇತರೆ ಯಾವುದೇ ವ್ಯಕ್ತಿಗಳು ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು ಅಳವಡಿಕೊಳ್ಳಲು ಮಾರ್ಗಸೂಚಿಯಲ್ಲಿ ನಿಯಮಗಳನ್ನು ರೂಪಿಸಲಾಗಿದೆ. ಅಲ್ಲದೆ, ಕಲಾವಿದರು ಮತ್ತು ಸಿಬ್ಬಂದಿ, ಹಸಿರು ಕೊಠಡಿಗಳ ನಿರ್ವಹಣೆ, ಕಲಾ ವೇದಿಕೆಗಳ ನಿರ್ವಹಣೆ, ವೇಷಭೂಷಣ ಮತ್ತು ಅಲಂಕಾರಿಕಾ ಚಟುವಟಿಕೆ ಸ್ಥಳಗಳು ಮತ್ತು ಆಸನ ವ್ಯವಸ್ಥೆ ಇರುವ ಮುಕ್ತ ಬಯಲು ಮತ್ತು ವೇದಿಕೆಗಳ ಸ್ಯಾನಿಟೈಜೇಷನ್ ಕಡ್ಡಾಯ ಮಾಡಿ, ಸಮಗ್ರ ಮಾರ್ಗಸೂಚಿ ಹೊರಡಿಸಲಾಗಿದೆ.  

ಆದರೆ, ಕಂಟೈನ್‌ ಮೆಂಟ್ ವಲಯಗಳಲ್ಲಿ ಸಾಂಸ್ಕೃತಿಕ ಚಟುವಟಿಗಳಿಗೆ ಸಂಪೂರ್ಣ ನಿರ್ಬಂಧ ಮುಂದುವರಿಸಲಾಗಿದೆ. ಜತೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ನಿರ್ಬಂಧ ಕ್ರಮಗಳನ್ನು ವಿಧಿಸಲು ಅನುವು ಕಲ್ಪಿಸಲಾಗಿದೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಹೊರಡಿಸಿರುವ ಕೋವಿಡ್-19 ನಿರ್ವಹಣೆ ಮತ್ತು ಸಂಬಂಧಿಸಿದ ಮಾರ್ಗಸೂಚಿಗಳನ್ನು ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕಾರ್ಯಾಚರಣೆ ವೇಳೆ ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸಂಸ್ಕೃತಿ ಸಚಿವಾಲಯ ಸೂಚಿಸಿದೆ.

ಎಲ್ಲಾ ಮಾರ್ಗಸೂಚಿಗಳು ತಕ್ಷಣದಿಂದಲೇ ಜಾರಿಗೆ ಬರಬೇಕು. ಮುಂದಿನ ಆದೇಶದ ತನಕ ಇವುಗಳ ಪಾಲನೆ ಮುಂದುವರಿಯಬೇಕು ಎಂದು ಸೂಚಿಸಿದೆ.

ಕೊರೊನಾ ಸೋಂಕು ವಿಶ್ವದೆಲ್ಲೆಡೆ ಕಾಣಿಸಿಕೊಂಡ ನಂತರ ಜಾಗತಿಕ ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿತ್ತು. ಆದಾಗ್ಯೂ, ವಿಶ್ವಾದ್ಯಂತ ಸಾಂಸ್ಕೃತಿಕ ಚಟುವಟಿಕೆಗಳು ನಿಧಾನ ಗತಿಯಲ್ಲಿ ಪುನಾರಂಭವಾಗುತ್ತಿವೆ. ಸಾಂಸ್ಕೃತಿಕ ಸೇವೆಗಳನ್ನು ಒದಗಿಸುವ ಜನರು ಮತ್ತು ಸಂಘ ಸಂಸ್ಥೆಗಳನ್ನು ಮತ್ತು ಆಸಕ್ತರನ್ನು ಪ್ರೋತ್ಸಾಹಿಸುವ ಸಲುವಾಗಿ, ಭಾರತದಲ್ಲಿ ಸಮಗ್ರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.

ಕೇಂದ್ರ ಗೃಹ ಸಚಿವಾಲಯವು ಕೋವಿಡ್-19 ನಿರ್ಬಂಧ ತೆರವು ಮಾರ್ಗಸೂಚಿಗಳನ್ನು ಕಾಲ ಕಾಲಕ್ಕೆ ಜಾರಿ ಮಾಡುತ್ತಾ ಬಂದಿದೆ. ಕೇಂದ್ರ ಸರಕಾರ ಮತ್ತು ಇತರೆ ಎಲ್ಲಾ ಇಲಾಖೆಗಳಿಗೆ ಮಾರ್ಗಸೂಚಿಗಳನ್ನು ಅನ್ವಯಿಸುತ್ತಾ ಬಂದಿದೆ. ಜತೆಗೆ, ಕಂಟೆನ್ ಮೆಂಟ್ ವಲಯಗಳಲ್ಲಿ 2020 ಆಗಸ್ಟ್ 20 ನಿರ್ಬಂಧಗಳನ್ನು ಮುಂದುವರೆಸುತ್ತಾ ಅಧಿಸೂಚನೆ ಪ್ರಕಟಿಸುತ್ತಾ ಬಂದಿದೆ.

2020 ಸೆಪ್ಟೆಂಬರ್ 21ರಿಂದ ಅನ್ವಯವಾಗುವಂತೆ, ಕಂಟೇನ್ ಮೆಂಟ್ ವಲಯದ ಹೊರಗೆ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭೆ ಸಮಾರಂಭಗಳು ಮತ್ತು ಇತರೆ ಕಾರ್ಯಕ್ರಮಗಳಲ್ಲಿ  100ಕ್ಕಿಂತ ಹೆಚ್ಚಿನ ಜನರು ಪಾಲ್ಗೊಳ್ಳದಂತೆ ಮಿತಿ ಹೇರಲಾಗಿದೆ. ಜತೆಗೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸೇಷನ್ ಸೇರಿದಂತೆ ಕೋವಿಡ್-19 ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಕೇಂದ್ರ ಗೃಹ ಸಚಿವಾಲಯ 2020 ಸೆಪ್ಟೆಂಬರ್ 30ರಂದು ನಿರ್ಬಂಧ ತೆರವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅವು ಇದೀಗ ಜಾರಿಯಲ್ಲಿವೆ. ಅವುಗಳ ಕೆಲವೊಂದು ಭಾಗಗಳನ್ನು ಮತ್ತೆ ಇಲ್ಲಿ ನೀಡಲಾಗಿದೆ.

ಕಂಟೈನ್‌ ಮೆಂಟ್ ವಲಯದ ಹೊರಗೆ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭೆ ಸಮಾರಂಭಗಳು ಮತ್ತು ಇತರೆ ಕಾರ್ಯಕ್ರಮಗಳಲ್ಲಿ  100 ಜನರು ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ. ಜತೆಗೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸೇಷನ್ ಸೇರಿದಂತೆ ಕೋವಿಡ್-19 ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಕಂಟೈನ್‌ ಮೆಂಟ್ ವಲಯದ ಹೊರಗೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ 100ಕ್ಕಿಂತ ಹೆಚ್ಚಿನ ಜನರು ಭಾಗವಹಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೆಳಗಿನ ಷರತ್ತುಗಳಿಗೆ ಅನ್ವಯವಾಗುವಂತೆ ಅಕ್ಟೋಬರ್ 15ರಿಂದ ಜಾರಿಗೆ ಬರುವಂತೆ ಅನುಮತಿ ನೀಡಬಹುದು.

* ಮನರಂಜನ ಹಾಗು ಇತರೆ ಸಭಾಂಗಣ ಸಾಮರ್ಥ್ಯದ ಗರಿಷ್ಠ 50% ಜನರಿಗೆ ಅನುಮತಿ ನೀಡಬಹುದು. ಗರಿಷ್ಠ 200 ಜನರಿಗೆ ಅನುಮತಿ. ಮುಖಗವುಸು ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಥರ್ಮಲ್ ಸ್ಕ್ಯಾನಿಂಗ್ ಅವಕಾಶ, ಸ್ಯಾನಿಟೈಸರ್ ಮತ್ತು ಕೈ ತೊಳೆಯಲು ಅವಕಾಶ ಕಲ್ಪಿಸುವುದು ಕಡ್ಡಾಯ.

* ತೆರೆದ ಸ್ಥಳಗಳಲ್ಲಿ ಜಾಗದ ವಿಶಾಲತೆ ಆಧರಿಸಿ ಮುಖಗವುಸು ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಥರ್ಮಲ್ ಸ್ಕ್ಯಾನಿಂಗ್ ಅವಕಾಶ, ಸ್ಯಾನಿಟೈಸರ್ ಮತ್ತು ಕೈ ತೊಳೆಯಲು ಅವಕಾಶ ಕಲ್ಪಿಸಬೇಕು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡುವ ವಿನಾಯಿತಿಗಳನ್ನು ಸುವಿವರವಾಗಿ ಪ್ರಕಟಿಸಬೇಕು. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಕಾಲ ಕಾಲಕ್ಕೆ ಜಾರಿ ಮಾಡಬೇಕು.

***



(Release ID: 1665065) Visitor Counter : 216