ಪ್ರಧಾನ ಮಂತ್ರಿಯವರ ಕಛೇರಿ
ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ 100 ರೂ. ವಿಶೇಷ ನಾಣ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ
Posted On:
12 OCT 2020 2:01PM by PIB Bengaluru
ನಮಸ್ಕಾರ !
ಕೇಂದ್ರ ಸಂಪುಟದ ನನ್ನೆಲ್ಲಾ ಸಹೋದ್ಯೋಗಿಗಳೇ , ವಿವಿಧ ರಾಜ್ಯಗಳ ರಾಜ್ಯಪಾಲರೇ, ಮುಖ್ಯಮಂತ್ರಿಗಳೇ, ದೇಶಾದ್ಯಂತ ಮತ್ತು ವಿಶ್ವದಾದ್ಯಂತ ಇರುವ ರಾಜಮಾತಾ ವಿಜಯ ರಾಜೇ ಸಿಂಧ್ಯಾ ಅವರ ಅಭಿಮಾನಿಗಳೇ, ಕುಟುಂಬದ ಸದಸ್ಯರೇ ಮತ್ತು ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ.
ಇಂದು ಈ ಕಾರ್ಯಕ್ರಮಕ್ಕೆ ಬರುವುದಕ್ಕೆ ಮುಂಚೆ , ನಾನು ವಿಜಯ ರಾಜೇ ಸಿಂಧ್ಯಾ ಅವರ ಜೀವನ ಚರಿತ್ರೆಯನ್ನು ನೋಡುತ್ತಿದ್ದೆ. ಕೆಲವು ಪುಟಗಳನ್ನು ನಾನು ತಿರುವಿ ಹಾಕಿದೆ. ಅದರಲ್ಲಿ ಏಕತಾ ಯಾತ್ರೆಯ ಅಧ್ಯಾಯವೊಂದಿತ್ತು. ಅದರಲ್ಲಿ ಅವರು ನನ್ನನ್ನು ಗುಜರಾತಿನ ಯುವ ನಾಯಕ ನರೇಂದ್ರ ಮೋದಿ ಎಂದು ಪರಿಚಯಿಸಿದ್ದರು.
ಹಲವಾರು ವರ್ಷಗಳ ಬಳಿಕ , ಅದೇ ನರೇಂದ್ರ ಈಗ ಅವರ ಹಲವಾರು ನೆನಪುಗಳೊಂದಿಗೆ ದೇಶದ ಪ್ರಧಾನ ಸೇವಕನಾಗಿ ನಿಮ್ಮೆದುರು ಇದ್ದಾನೆ. ನಿಮಗೆ ಗೊತ್ತಿರಬೇಕು, ಕನ್ಯಾಕುಮಾರಿಯಿಂದ ಕಾಶ್ಮೀರ ಯಾತ್ರಾವನ್ನು ಡಾ. ಮುರಳಿ ಮನೋಹರ ಜೋಶೀಜಿ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿತ್ತು. ನಾನು ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದೆ.
ರಾಜಮಾತಾ ಜೀ ಅವರು ಆ ಕಾರ್ಯಕ್ರಮಕ್ಕಾಗಿ ಕನ್ಯಾಕುಮಾರಿಗೆ ಬಂದಿದ್ದರು. ಮತ್ತು ನಾವು ಶ್ರೀನಗರಕ್ಕೆ ಹೊರಡುವಾಗ , ಅವರು ನಮ್ಮನ್ನು ಬೀಳ್ಕೊಡಲು ಶ್ರೀನಗರಕ್ಕೆ ಬಂದಿದ್ದರು. ಮತ್ತು ಅವರು ಸತತವಾಗಿ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು. ಆಗ ನಮ್ಮ ಕನಸು ಲಾಲ್ ಚೌಕದಲ್ಲಿ ಧ್ವಜ ಹಾರಿಸುವುದಾಗಿತ್ತು. ಸಂವಿಧಾನದ ವಿಧಿ 370 ನ್ನು ತೆಗೆದು ಹಾಕಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ರಾಜಮಾತಾ ಜೀ ಅವರು ಯಾತ್ರೆಯನ್ನು ಬೀಳ್ಕೊಟ್ಟರು. ಕನಸು ನನಸಾಯಿತು. ನಾನು ಪುಸ್ತಕದ ಮೇಲೆ ಕಣ್ಣಾಡಿಸುವಾಗ ಅವರು ಒಂದು ಕಡೆ ಬರೆದಿದ್ದರು- “ ಈ ದೇಹ ಒಂದು ದಿನ ಇಲ್ಲುಳಿಯಲಿದೆ; ಆತ್ಮ ಎಲ್ಲಿಂದ ಬಂದಿದೆಯೋ ಅಲ್ಲಿಗೆ ಹೋಗಲಿದೆ.. ಒಂದು ನಿರ್ವಾತದಿಂದ ಇನ್ನೊಂದು ನಿರ್ವಾತದೆಡೆಗೆ . ನೆನಪುಗಳು ಉಳಿಯುತ್ತವೆ. ನಾನು ಈ ನೆನಪುಗಳನ್ನು ನಾನು ಇಲ್ಲಿ ಯಾರೊಂದಿಗೆ ಸಂಪರ್ಕ ಹೊಂದಿದ್ದೇನೆಯೋ ಅವರಿಗಾಗಿ ಬಿಟ್ಟು ಹೋಗಲಿದ್ದೇನೆ. “
ಇಂದು ರಾಜಮಾತಾ ಜೀ ಎಲ್ಲೇ ಇರಲಿ , ಅವರು ನಮ್ಮನ್ನು ನೋಡುತ್ತಿದ್ದಾರೆ ಮತ್ತು ಆಶೀರ್ವದಿಸುತ್ತಿದ್ದಾರೆ. ಅವರೊಂದಿಗಿದ್ದ, ಅವರು ಸಂಪರ್ಕ ಹೊಂದಿದ್ದವರು ಇದ್ದಾರೆ, ಅವರಲ್ಲಿ ಕೆಲವರು ಈ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿ , ಇಲ್ಲಿ ಹಾಜರಿದ್ದಾರೆ. ಮತ್ತು ಈ ಸಂದರ್ಭವನ್ನು ದೇಶದ ವಿವಿಧ ಭಾಗಗಳಲ್ಲಿ ವರ್ಚುವಲ್ ಮಾದರಿಯಲ್ಲಿ ಆಚರಿಸಲಾಗುತ್ತಿದೆ.
ನಮ್ಮಲ್ಲಿ ಬಹುತೇಕ ಮಂದಿ ಅವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು ಮತ್ತು ಅವರಿಂದ ಉಪಕಾರವನ್ನು ಪಡೆದಿದ್ದವರು ಹಾಗು ವಾತ್ಸಲ್ಯವನ್ನು ಅನುಭವಿಸಿದವರು. ಇಂದು ಅವರ ಕುಟುಂಬದವರು ಮತ್ತು ಬಂಧುಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದಾರೆ, ಅದರೆ ನಾವೆಲ್ಲರೂ , ಪ್ರತೀಯೊಬ್ಬ ನಾಗರಿಕನೂ ಅವರ ಕುಟುಂಬದವರಾಗಿದ್ದೇವೆ. ರಾಜಮಾತಾ ಜೀ ಇದನ್ನು ಕೂಡಾ ಹೇಳುತ್ತಿದ್ದರು “ನಾನು ಓರ್ವ ಮಗನ ತಾಯಿ ಮಾತ್ರವಲ್ಲ, ನಾನು ಸಾವಿರಾರು ಮಕ್ಕಳ ತಾಯಿ. ಮತ್ತು ನಾನು ಅವರ ಪ್ರೀತಿಯಲ್ಲಿ ಮುಳುಗಿದ್ದೇನೆ. “ ಎಂಬುದಾಗಿ. ನಾವೆಲ್ಲರೂ ಅವರ ಪುತ್ರರು ಮತ್ತು ಪುತ್ರಿಯರು, ಅವರ ಕುಟುಂಬದವರು.
ಆದುದರಿಂದ , ರಾಜಮಾತಾ ವಿಜಯ ರಾಜೇ ಸಿಂಧಿಯಾ ಜಿ ಅವರ ಸ್ಮರಣಾರ್ಥ 100 ರೂಪಾಯಿಗಳ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡುವ ಅವಕಾಶ ನನಗೆ ದೊರಕಿರುವುದು ನನ್ನ ದೊಡ್ಡ ಭಾಗ್ಯವಾಗಿದೆ. ಇಂದು ನಾನು ಬಹಳ ನಿರ್ಬಂಧಿಸಲ್ಪಟ್ಟಿದ್ದೇನೆ ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ಕೊರೊನಾ ಜಾಗತಿಕ ಸಾಂಕ್ರಾಮಿಕ ಇಲ್ಲದಿದ್ದರೆ , ಇದು ದೊಡ್ಡ ಸಮಾರಂಭವಾಗುತ್ತಿತ್ತು. ಆದರೆ ನಾನು ರಾಜಮಾತಾ ಜೀ ಅವರ ಸಂಪರ್ಕದಲ್ಲಿ ಹೆಚ್ಚು ಹೆಚ್ಚು ಇರುತ್ತಿರುವಂತೆ ನಾನು ನಂಬುವುದೇನೆಂದರೆ ಕಾರ್ಯಕ್ರಮವು ಖಚಿತವಾಗಿಯೂ ಅದ್ದೂರಿಯಾಗುವುದಕ್ಕೆ ಬದಲು ದೈವೀಕವಾಗಿರುತ್ತಿತ್ತು. ಅದರಲ್ಲಿ ಪಾವಿತ್ರ್ಯತೆ ಇದೆ.
ಸ್ನೇಹಿತರೇ, ರಾಜಮಾತಾ ವಿಜಯ ರಾಜೇ ಸಿಂಧಿಯಾ ಅವರು ಕಳೆದ ಶತಮಾನದಲ್ಲಿ ಭಾರತಕ್ಕೆ ದಿಕ್ಕು ದಿಶೆ ತೋರಿದ ಕೆಲವೇ ವ್ಯಕ್ತಿಗಳಲ್ಲಿ ಸೇರಿದ್ದರು. ರಾಜಮಾತಾಜಿ ಅವರು ವಾತ್ಸಲ್ಯಮಯಿ ಮಾತ್ರವಲ್ಲ, ಅವರು ನಿರ್ಧಾರ ಕೈಗೊಳ್ಳುವ ನಾಯಕರಾಗಿದ್ದರು. ಮತ್ತು ಕೌಶಲ್ಯ ಭರಿತ ಆಡಳಿತಗಾರರಾಗಿದ್ದರು. ಅವರು ಸ್ವಾತಂತ್ರ್ಯ ಚಳವಳಿಯಿಂದ ಆರಂಭಗೊಂಡು ಸ್ವಾತಂತ್ರ್ಯೋತ್ತರ ಭಾರತದ ಹಲವು ದಶಕಗಳ ಭಾರತೀಯ ರಾಜಕಾರಣದ ಪ್ರತೀ ಪ್ರಮುಖ ಹಂತಗಳನ್ನು ಸಾಕ್ಷೀಕರಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶೀ ಉಡುಪುಗಳನ್ನು ಸುಡುವುದರಿಂದ ಹಿಡಿದು ತುರ್ತು ಸ್ಥಿತಿಯವರೆಗೆ ಮತ್ತು ರಾಮ ದೇವಾಲಯ ಚಳವಳಿಯವರೆಗೆ ರಾಜಮಾತಾ ಅವರ ಅನುಭವ ವ್ಯಾಪಕವಾಗಿ ಬೆಳೆದು ಬಂದಿತ್ತು.
ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ನಾವೆಲ್ಲರೂ ಅವರನ್ನು ಬಹಳ ಚೆನ್ನಾಗಿ ಬಲ್ಲೆವು ಮತ್ತು ಅವರಿಗೆ ಸಂಬಂಧಿಸಿದ ಎಲ್ಲವೂ ನಮಗೆ ತಿಳಿದಿತ್ತು. ಆದರೆ ಬಹಳ ಮುಖ್ಯವಾದುದೆಂದರೆ ದೇಶದ ಈಗಿನ ತಲೆಮಾರು ಕೂಡಾ ಅವರನ್ನು ತಿಳಿದುಕೊಂಡಿದೆ , ಪ್ರೇರಣೆ ಪಡೆಯುತ್ತಿದೆ ಮತ್ತು ಅವರ ಜೀವನ ಗಾಥೆಯಿಂದ ಹಾಗು ರಾಜಮಾತಾ ಅವರ ಬದುಕಿನ ಸಂದೇಶಗಳಿಂದ ಕಲಿಯುತ್ತಿದೆ. ಆದುದರಿಂದ ಅವರನ್ನು ಮತ್ತು ಅವರ ಅನುಭವಗಳನ್ನು ಪದೇ ಪದೇ ಪ್ರಸ್ತಾಪಿಸುವುದು ಅವಶ್ಯ . ಕೆಲವು ದಿನಗಳ ಹಿಂದೆ ಅವರ ವಾತ್ಸಲ್ಯವನ್ನು ನಾನು ’ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ವಿವರವಾಗಿ ಚರ್ಚಿಸಿದ್ದೆ.
ಮದುವೆಗೆ ಮೊದಲು ರಾಜಮಾತಾ ಜಿ ಅವರು ಯಾವುದೇ ರಾಜಕುಟುಂಬಕ್ಕೆ ಸೇರಿದವರಲ್ಲ. , ಅವರು ಸಾಮಾನ್ಯ ಕುಟುಂಬದಿಂದ ಬಂದವರು. ಆದರೆ ಮದುವೆಯ ಬಳಿಕ , ಅವರು ಪ್ರತಿಯೊಬ್ಬರನ್ನೂ ತಮ್ಮವರನ್ನಾಗಿ ಮಾಡಿಕೊಂಡರು ಮತ್ತು ಸಾರ್ವಜನಿಕ ಸೇವೆಗೆ ಮತ್ತು ರಾಜ್ಯದ ಜವಾಬ್ದಾರಿಗೆ ನಿರ್ದಿಷ್ಟ ಕುಟುಂಬದಲ್ಲಿ ಜನಿಸುವುದು ಅವಶ್ಯ ಅಲ್ಲ ಎಂಬ ಪಾಠವನ್ನು ಹೇಳಿಕೊಟ್ಟರು.
ಯಾವುದೇ ಸಾಮಾನ್ಯ ವ್ಯಕ್ತಿ , ಅರ್ಹತೆ ಇದ್ದರೆ , ಪ್ರತಿಭೆ ಇದ್ದರೆ, ಸೇವಾ ಮನೋಭಾವ ಹೊಂದಿದ್ದರೆ ಅಧಿಕಾರವನ್ನು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೇವೆಯ ಮಾಧ್ಯಮವನ್ನಾಗಿಸಬಹುದು ಎಂಬುದಕ್ಕೆ ಉದಾಹರಣೆಯಾದರು. ಕಲ್ಪಿಸಿಕೊಳ್ಳಿ ಅವರಲ್ಲಿ ಅಧಿಕಾರವಿತ್ತು, ಸಂಪತ್ತು ಇತ್ತು; ಇವೆಲ್ಲಕ್ಕಿಂತ ಮಿಗಿಲಾಗಿ ರಾಜಮಾತಾ ಅವರಲ್ಲಿ ಸಂಸ್ಕೃತಿಯ, ಸೇವೆಯ ಮತ್ತು ವಾತ್ಸಲ್ಯದ ಪರಂಪರೆ ಇತ್ತು.
ನಾವು ಅವರ ಚಿಂತನೆ ಮತ್ತು ಆದರ್ಶಗಳನ್ನು ಅವರ ಜೀವನದ ಪ್ರತೀ ಹಂತದಲ್ಲಿಯೂ ಕಾಣಬಹುದು. ಅಂತಹ ದೊಡ್ಡ ರಾಜ ಕುಟುಂಬದ ಮುಖ್ಯಸ್ಥರಾಗಿ , ಅವರು ಸಾವಿರಾರು ಸಿಬ್ಬಂದಿಗಳನ್ನು ಹೊಂದಿದ್ದರು, ಬೃಹತ್ ಅರಮನೆಗಳು ಮತ್ತು ಎಲ್ಲಾ ಸವಲತ್ತುಗಳು ಅವರಿಗಿದ್ದವು, ಆದರೆ ಅವರು ತಮ್ಮ ಜೀವನವನ್ನು ಸಾಮಾನ್ಯರು ಮತ್ತು ಹಳ್ಳಿಗಳ ಬಡ ಜನರ ನಡುವೆ ಕಳೆದರು ಹಾಗು ಅವರಿಗಾಗಿ ಜೀವನವನ್ನು ಮುಡಿಪಾಗಿಟ್ಟರು.
ರಾಜಮಾತಾ ಸಾರ್ವಜನಿಕ ವ್ಯಕ್ತಿಗಳಿಗೆ ಸಾರ್ವಜನಿಕ ಸೇವೆ ಬಹಳ ಮುಖ್ಯ, ರಾಜ್ಯದ ಅಧಿಕಾರ ಅಲ್ಲ ಎಂಬುದನ್ನು ಸಾಬೀತು ಮಾಡಿದ್ದರು. ಅವರು ರಾಣಿಯಾಗಿದ್ದರು ಮತ್ತು ರಾಜ ಪರಂಪರೆಗೆ ಸೇರಿದವರಾಗಿದ್ದರು. ಆದರೆ ಅವರು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟ ಮಾಡಿದರು. ಅವರು ತಮ್ಮ ಜೀವನದ ಪ್ರಮುಖ ಭಾಗವನ್ನು ಜೈಲಿನಲ್ಲಿ ಕಳೆದರು.
ತುರ್ತುಪರಿಸ್ಥಿತಿಯಲ್ಲಿ ಅವರು ಅನುಭವಿಸಿದ ಕಠಿಣ ಪರಿಸ್ಥಿತಿಗೆ ನಮ್ಮಲ್ಲಿನ ಬಹಳ ಮಂದಿ ಸಾಕ್ಷಿಗಳಾಗಿದ್ದೇವೆ. ಅವರು ತಮ್ಮ ಪುತ್ರಿಗೆ ತಿಹಾರ ಜೈಲಿನಿಂದ ಪತ್ರಗಳನ್ನು ಬರೆಯುತ್ತಿದ್ದರು. ಬಹುಷಃ ಉಷಾ ರಾಜೇ ಜೀ, ವಸುಂಧರಾ ರಾಜೇ ಜೀ, ಅಥವಾ ಯಶೋಧರಾ ರಾಜೇ ಜೀ ಅವರಿಗೆ ಆ ಪತ್ರಗಳ ವಿಷಯ ಗೊತ್ತಿರಬಹುದು.
ರಾಜಮಾತಾ ಬರೆದುದರಲ್ಲಿ ದೊಡ್ಡ ಪಾಠಗಳಿದ್ದವು. ಅವರು ಬರೆದಿದ್ದರು_ “ ನಮ್ಮ ಭವಿಷ್ಯದ ತಲೆಮಾರುಗಳನ್ನು ಪ್ರೇರೇಪಿಸಲು , ಅವರು ಸವಾಲುಗಳೊಂದಿಗೆ ಬದುಕಲು , ನಾವು ಇಂದು ಪ್ರತಿಕೂಲ ಪರಿಸ್ಥಿತಿಯನ್ನು ತಾಳ್ಮೆಯಿಂದ ಎದುರಿಸಬೇಕು” ಎಂದು.
ರಾಜಮಾತಾ ಅವರು ತಮ್ಮ ವರ್ತಮಾನವನ್ನು ರಾಷ್ಟ್ರದ ಭವಿಷ್ಯಕ್ಕಾಗಿ ಸಮರ್ಪಿಸಿದ್ದರು. ಅವರು ತಮ್ಮೆಲ್ಲಾ ಸಂತೋಷವನ್ನು ದೇಶದ ಭವಿಷ್ಯದ ತಲೆಮಾರುಗಳಿಗಾಗಿ ತ್ಯಾಗ ಮಾಡಿದ್ದರು. ರಾಜಮಾತಾ ಅವರು ಸ್ಥಾನ-ಮಾನಗಳಿಗಾಗಲೀ, ಪ್ರತಿಷ್ಟೆಗಾಗಲೀ ಆಶಯಪಟ್ಟವರಲ್ಲ, ಅದಕ್ಕಾಗಿ ರಾಜಕೀಯವನ್ನು ಆಯ್ಕೆ ಮಾಡಿಕೊಂಡವರೂ ಅಲ್ಲ.
ಅವರಿಗೆ ಸ್ಥಾನ ಮಾನಗಳು ಬಂದ ಅನೇಕ ಸಂದರ್ಭಗಳಿವೆ. ಅವರದನ್ನು ನಮ್ರವಾಗಿ ನಿರಾಕರಿಸಿದ್ದರು. ಒಮ್ಮೆ ಅಟಲ್ ಬಿಹಾರಿ ವಾಜಪೇಯಿ ಜೀ ಮತ್ತು ಲಾಲ್ ಕೃಷ್ಣ ಆಡ್ವಾಣಿ ಜೀ ಅವರು ಜನ ಸಂಘದ ಅಧ್ಯಕ್ಷರಾಗುವಂತೆ ಕೋರಿದ್ದರು, ಆದರೆ ಅವರು ಜನ ಸಂಘದ ಕಾರ್ಯಕರ್ತೆಯಾಗಿ ಸೇವೆ ಮಾಡುವುದನ್ನು ಅಂಗೀಕರಿಸಿದರು.
ಅಧಿಕಾರದ ಯಾವುದೇ ಸ್ಥಾನ ಮಾನವನ್ನು ಬಯಸಿದ್ದರೆ ಅದನ್ನು ಪಡೆಯುವುದು ರಾಜಮಾತಾ ಜಿ ಅವರಿಗೆ ಕಷ್ಟವೇನಿರಲಿಲ್ಲ. ಆದರೆ ಅವರು ಹಳ್ಳಿಗಳಲ್ಲಿಯ ಬಡವರ ಜೊತೆ ಬದುಕುವ ಮೂಲಕ ಬಡವರ ಸೇವೆ ಮಾಡುವುದನ್ನು ಆಯ್ಕೆ ಮಾಡಿಕೊಂಡರು.
ಸ್ನೇಹಿತರೇ, ರಾಜಮಾತಾ ಅವರ ಜೀವನದ ಪ್ರತಿಯೊಂದು ವಿಷಯಗಳಿಂದಲೂ ನಾವು ಹಲವಾರು ಸಂಗತಿಗಳನ್ನು ತಿಳಿಯಬಹುದು. ಅವರೊಂದಿಗಿದ್ದ ಜನರು ಅವರ ಬದುಕಿನ ಬಗ್ಗೆ ಮತ್ತು ಜೀವನದಲ್ಲಾದ ಘಟನೆಗಳ ಬಗ್ಗೆ ಹಲವಾರು ಕಥೆಗಳನ್ನು ಹೇಳುತ್ತಾರೆ.
ಏಕತಾ ಯಾತ್ರಾಕ್ಕೆ ಸಂಬಂಧಿಸಿ ಅಲ್ಲಿ ಇನ್ನೊಂದು ಕಥೆ ಇದೆ. ಅವರು ಜಮ್ಮುವಿನಲ್ಲಿದ್ದಾಗ ಅವರೊಂದಿಗೆ ಇಬ್ಬರು ಹೊಸ ಕಾರ್ಯಕರ್ತರಿದ್ದರು. ಕೆಲವೊಮ್ಮೆ ರಾಜಮಾತಾ ಅವರು ಕಾರ್ಯಕರ್ತರ ಹೆಸರುಗಳನ್ನು ಮರೆತುಬಿಡುತ್ತಿದ್ದರು. ಅವರು ಆಗಾಗ ಮೊದಲ ಕಾರ್ಯಕರ್ತನನ್ನು ಆತನ ಹೆಸರು ಗೋಲು ಎಂದಾಗಿದೆಯೇ ಎಂದು ಕೇಳುತ್ತಿದ್ದರು ಮತ್ತು ಇನ್ನೊಬ್ಬ ಕಾರ್ಯಕರ್ತನ ಹೆಸರು ಏನು ಎಂದು ಕೇಳುತ್ತಿದ್ದರು ?. ಅವರು ತಮ್ಮ ಅತ್ಯಂತ ಕಿರಿಯ ಸಹೋದ್ಯೋಗಿಗಳನ್ನು ಅವರ ಹೆಸರಿನಿಂದ ಗುರುತಿಸಲು ಇಷ್ಟಪಡುತ್ತಿದ್ದರು. ಹಲವರು ಅವರಿಗೆ ಹೆಸರುಗಳ ಬಗ್ಗೆ ಯಾಕಿಷ್ಟು ಕಾಳಜಿ ವಹಿಸುತ್ತೀರಿ ಎಂದು ಕೇಳುತ್ತಿದ್ದರು. ಅವರು ಯಾರನ್ನಾದರೂ ಕರೆಯಬಹುದಾಗಿತ್ತು.. ಆದರೆ ರಾಜಮಾತಾ ಅವರು ಹೇಳುತ್ತಿದ್ದರು ನನ್ನ ಸಹಚರರಾಗಿರುವವರನ್ನು, ನನಗೆ ಸಹಾಯ ಮಾಡುವವರನ್ನು ಗುರುತಿಸದಿರುವುದು ತಮಗೆ ಸರಿ ಎನಿಸುವುದಿಲ್ಲ ಎಂದು.
ನೀವು ಸಾರ್ವಜನಿಕ ಜೀವನದಲ್ಲಿದ್ದರೆ , ನೀವು ಯಾವ ಪಕ್ಷಕ್ಕೆ ಸೇರಿದವರಾಗಿದ್ದರೂ ಚಿಂತಿಲ್ಲ, ಸಾಮಾನ್ಯ ಕಾರ್ಯಕರ್ತರ ಬಗ್ಗೆ ನಾವೆಲ್ಲರೂ ಈ ಭಾವನೆಯನ್ನು ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ. ಅಲ್ಲಿ ಗೌರವ ಇರಬೇಕು ಮತ್ತು ಅಲ್ಲಿ ಹೆಮ್ಮೆ ಇರಬಾರದು ಎಂಬುದನ್ನು ಅನುಷ್ಟಾನದ ಮೂಲಕ ಅವರು ನಮಗೆ ರಾಜಕೀಯದ ಮೂಲ ಮಂತ್ರವನ್ನು ತೋರಿಸಿಕೊಟ್ಟರು.
ಸ್ನೇಹಿತರೇ, ರಾಜಮಾತಾ ಅವರು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರು. ಅವರು ಆಧ್ಯಾತ್ಮಿಕತೆಯತ್ತ ಸಾಗಿದ್ದರು. ಆಧ್ಯಾತ್ಮ, ಆರಾಧನೆ, ಭಕ್ತಿ ಅವರ ಒಳಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದವು. ಅವರು ದೇವರನ್ನು ಪೂಜಿಸುವಾಗ ಅಲ್ಲಿ ಅವರ ಪೂಜಾ ಸ್ಥಳದಲ್ಲಿ ಭಾರತ ಮಾತಾ ಚಿತ್ರವಿರುತ್ತಿತ್ತು. ಭಾರತ ಮಾತಾ ಆರಾಧನೆ ಅವರಿಗೆ ಅಷ್ಟೇ ಸಮಾನ ನಂಬಿಕೆಯ ವಿಷಯವಾಗಿತ್ತು.
ಒಮ್ಮೆ ನನ್ನ ಗೆಳೆಯರು ಅವರಿಗೆ ಸಂಬಂಧಿಸಿದ ಘಟನೆಯನ್ನು ನನಗೆ ಹೇಳಿದರು. ಮತ್ತು ನಾನದನ್ನು ನೆನಪು ಮಾಡಿಕೊಳ್ಳುವಾಗ ನಾನು ಆಲೋಚಿಸುತ್ತೇನೆ ನಾನದನ್ನು ನಿಮಗೆ ಹೇಳಬೇಕು ಎಂದು. ಒಮ್ಮೆ ಅವರು ಪಕ್ಷದ ಕೆಲಸಕ್ಕಾಗಿ ಮಥುರಾಕ್ಕೆ ಹೋಗಿದ್ದರು. ಸ್ವಾಭಾವಿಕವಾಗಿ , ರಾಜಮಾತಾ ಅವರು ಬಂಕೆಬಿಹಾರಿ ಜೀ ಅವರಿಗೆ ತಮ್ಮ ಪ್ರಣಾಮಗಳನ್ನು ಸಲ್ಲಿಸಿದರು. ಬಂಕೆಬಿಹಾರಿ ಜೀ ದೇವಾಲಯದಲ್ಲಿ ಅವರು ಯಾವ ನಿರ್ಣಾಯಕ , ಸಂಕೀರ್ಣ ಪ್ರಾರ್ಥನೆ ಸಲ್ಲಿಸಿದರು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಕೃಷ್ಣ ದೇವರನ್ನು ಪ್ರಾರ್ಥಿಸುವಾಗ ಅವರು ಹೇಳುತ್ತಿದ್ದ ಮಾತುಗಳಿಂದ ನಮಗೆ ರಾಜಮಾತಾ ಅವರ ಜೀವನವನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಅವರು ಬಹಳ ಭಕ್ತಿಯಿಂದ ಕೃಷ್ಣ ದೇವರೆದುರು ನಿಲ್ಲುತ್ತಿದ್ದರು. ಅವರ ಆಧ್ಯಾತ್ಮಿಕ ಪ್ರಜ್ಞೆ ಜಾಗೃತಗೊಳ್ಳುತ್ತಿತ್ತು ಮತ್ತು ಕೃಷ್ಣ ದೇವರ ಎದುರು ಅವರೇನು ಬೇಡಿಕೊಳ್ಳುತ್ತಿದ್ದರು ? . ಅವರು ಹೇಳುತ್ತಿದ್ದರು- ’ಓ ಕೃಷ್ಣ , ಭಾರತದ ಎಲ್ಲಾ ಮಹಿಳೆಯರು ಮತ್ತು ಪುರುಷರು ಮತ್ತೊಮ್ಮೆ ಜಾಗೃತರಾಗುವಂತೆ ನೀನು ಕೊಳಲನ್ನೂದು “
ನೀವು ಯೋಚಿಸಿ, ಅವರು ತಮಗಾಗಿ ಏನನ್ನೂ ಕೇಳುತ್ತಿರಲಿಲ್ಲ. ಅವರು ಏನನ್ನು ಬೇಡುತ್ತಿದ್ದರೂ ಅದು ದೇಶಕ್ಕಾಗಿ , ಜನಸಾಮಾನ್ಯರಿಗಾಗಿ ಮತ್ತು ಅದೂ ಅವರು ಬೇಡುತ್ತಿದ್ದುದು ಪ್ರಜ್ಞೆಯ ಜಾಗೃತಿಯನ್ನು . ಅವರು ಏನೇನು ಮಾಡಿದ್ದಾರೋ, ಅದೆಲ್ಲವನ್ನೂ ಅವರು ದೇಶಕ್ಕಾಗಿ ಮಾಡಿದರು. ಅವರಿಗೆ ಜಾಗೃತ ದೇಶ ಮತ್ತು ಅದರ ಪ್ರಜೆಗಳು ಏನೆಲ್ಲಾ ಮಾಡಬಲ್ಲರು ಎಂಬುದು ಗೊತ್ತಿತ್ತು.
ನಾವಿಂದು ರಾಜಮಾತಾ ಜೀ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ. , ಭಾರತದ ನಾಗರಿಕರಲ್ಲಿ ಜಾಗೃತಿ ಮೂಡಬೇಕೆಂಬ ಅವರ ಆಶಯ, ಬಂಕಿಬಿಹಾರಿಗೆ ಸಲ್ಲಿಸಿದ ಪ್ರಾರ್ಥನೆ ಸಾಕಾರಗೊಂಡಿದೆ.
ಹಲವಾರು ವರ್ಷಗಳಲ್ಲಿ ದೇಶದಲ್ಲಾದ ಹಲವಾರು ಬದಲಾವಣೆಗಳು , ಹಲವು ಆಂದೋಲನಗಳು ಮತ್ತು ಯೋಜನೆಗಳು ಜನರಲ್ಲಿ ಮೂಡಿರುವ ಅರಿವು ಮತ್ತು ಜನಾಂದೋಲನಗಳಿಂದಾಗಿ ಯಶಸ್ವಿಯಾಗಿವೆ. ರಾಜಮಾತಾ ಅವರ ಆಶೀರ್ವಾದದೊಂದಿಗೆ ದೇಶವು ಅಭಿವೃದ್ಧಿಯ ಪಥದಲ್ಲಿ ಮುಂದೆ ಸಾಗುತ್ತಿದೆ. ಗ್ರಾಮಗಳು, ಬಡವರು, ಶೋಷಿತರು, ಅವಕಾಶ ವಂಚಿತರು ಮತ್ತು ಮಹಿಳೆಯರು ಇಂದು ದೇಶದ ಪ್ರಥಮಾದ್ಯತೆಯಾಗಿದ್ದಾರೆ.
ಅವರು ಇದನ್ನು ವಿಶೇಷವಾಗಿ ಮಹಿಳಾ ಶಕ್ತಿಯ ವಿಷಯವಾಗಿ ಹೇಳುತ್ತಿದ್ದರು—“ ತೊಟ್ಟಿಲು ತೂಗುವ ಕೈಗಳು ಜಗತ್ತನ್ನು ಆಳಬಲ್ಲವು “ ಎನ್ನುತ್ತಿದ್ದರು ಅವರು. ಇಂದು ಭಾರತದ ಮಹಿಳಾ ಶಕ್ತಿ ಪ್ರತೀ ಕ್ಷೇತ್ರದಲ್ಲಿಯೂ ನಾಯಕತ್ವ ವಹಿಸಿ ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ. ಇಂದು ಭಾರತದ ಪುತ್ರಿಯರು ಯುದ್ದ ವಿಮಾನಗಳನ್ನು ಹಾರಿಸುತ್ತಿದ್ದಾರೆ ಮತ್ತು ನೌಕಾ ದಳದಲ್ಲಿ ಯುದ್ದ ಸೇವೆಯನ್ನು ಮಾಡುತ್ತಿದ್ದಾರೆ. ದೇಶವು ರಾಜಮಾತಾ ಅವರ ಧೋರಣೆಯನ್ನು ಮತ್ತು ಮಹಿಳಾ ಸಶಕ್ತೀಕರಣದ ನೆಲೆಯಲ್ಲಿ ಅವರ ಪ್ರಯತ್ನಗಳನ್ನು ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿ ಮಾಡುವ ಮೂಲಕ ಇನ್ನಷ್ಟು ಬಲಪಡಿಸಿದೆ.
ದೇಶದ ಸಾರ್ವಭೌಮತ್ವ ಮತ್ತು ಏಕತೆಯ ನಿಟ್ಟಿನಲ್ಲಿ ಅವರ ಹೋರಾಟದ ಫಲಿತಾಂಶಗಳನ್ನು ನಾವು ನೋಡಬಹುದು. ಸಂವಿಧಾನದ ವಿಧಿ 370 ನ್ನು ರದ್ದು ಮಾಡಬೇಕು ಎಂಬ ಅವರ ದೊಡ್ಡ ಕನಸು ಈಗ ಈಡೇರಿದೆ. ಮತ್ತು ಅವರು ಹೋರಾಟ ಮಾಡಿದ ರಾಮಜನ್ಮಭೂಮಿ ದೇವಾಲಯಕ್ಕೆ ಸಂಬಂಧಿಸಿದ ಅವರ ಕನಸೂ ಅವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಈಡೇರಿರುವುದು ಬಹಳ ಕಾಕತಾಳೀಯವಾದ ಸಂಗತಿಯಾಗಿದೆ.
ಮತ್ತು ಈಗ ಅಲ್ಲಿ ರಾಮ ಜನ್ಮಭೂಮಿಯ ಪ್ರಸ್ತಾಪವಿದೆ, ಆಡ್ವಾಣಿ ಅವರು ಸೋಮನಾಥದಿಂದ ಅಯೋಧ್ಯಾಕ್ಕೆ ತಮ್ಮ ಯಾತ್ರೆ ಆರಂಭಿಸಿದಾಗ ರಾಜಮಾತಾ ಅವರು ಅದರ ಭಾಗವಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿತ್ತು. ರಾಜಮಾತಾ ಜೀ ಕೂಡಾ ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಬೇಕು ಎಂಬ ಆಶಯವನ್ನು ಹೊಂದಿದ್ದರು. ಆದರೆ ಆಗ ನವರಾತ್ರಿಯ ಸಮಯವಾಗಿತ್ತು ಮತ್ತು ರಾಜಮಾತಾ ಅವರು ಈ ಹಬ್ಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕಾಗಿತ್ತು. ಮತ್ತು ಇದಕ್ಕಾಗಿ ಅವರು ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಳ್ಳುವವರೆಗೆ ಅವರ ನಿವಾಸವನ್ನು ಬಿಡುವಂತಿರಲಿಲ್ಲ.
ಹೀಗೆ, ನಾನು ರಾಜಮಾತಾ ಸಾಹೇಬ್ ಅವರಲ್ಲೊಮ್ಮೆ ಮಾತನಾಡುವಾಗ ಅವರು ನಾನು ಬರುವುದಕ್ಕೆ ಸಾಧ್ಯವಾಗಲಾರದು, ಆದರೆ ಖಂಡಿತವಾಗಿ ಬರುತ್ತೇನೆ ಎಂದಿದ್ದರು. ಅವರಿಗೆ ನಾನು ದಾರಿಯೊಂದನ್ನು ಹುಡುಕುವಂತೆ ಕೋರಿದೆ. ತಾನು ಗ್ವಾಲಿಯರ್ ಬಿಟ್ಟು ನವರಾತ್ರಿ ಅವಧಿಯನ್ನು ಸೋಮನಾಥದಲ್ಲಿ ಕಳೆಯುವುದಾಗಿ ಹೇಳಿದರು. “ನಾನು ಅಲ್ಲಿ ನವರಾತ್ರಿ ಆಚರಿಸುತ್ತೇನೆ ಮತ್ತು ಈ ರಥ ಯಾತ್ರಾ ಆರಂಭವಾಗುವಾಗ , ಆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆ “ ಎಂದವರು ಹೇಳಿದರು.
ರಾಜಮಾತಾ ಅವರ ಉಪವಾಸ ಬಹಳ ಕಷ್ಟಕರವಾಗಿರುತ್ತಿತ್ತು. ನಾನು ಆಗ ರಾಜಕೀಯಕ್ಕೆ ಸೇರಿದ್ದೆಯಷ್ಟೇ. ನಾನಾಗ ಓರ್ವ ಕಾರ್ಯಕರ್ತನಾಗಿ ವ್ಯವಸ್ಥೆಗಳ ಮೇಲುಸ್ತುವಾರಿ ಮಾಡುತ್ತಿದ್ದೆ. ರಾಜಮಾತಾ ಸಾಹೇಬ್ ಅವರ ಸೋಮನಾಥ ವಾಸ್ತವ್ಯದ ಅವಧಿಯಲ್ಲಿ ವ್ಯವಸ್ಥೆಗಳನ್ನು ಮಾಡುವ ಜವಾಬ್ದಾರಿ ನಾನು ನಿಭಾಯಿಸಿದ್ದೆ. ನಾನು ರಾಜಮಾತಾ ಸಾಹೇಬ್ ಅವರ ಜೊತೆ ನಿಕಟ ಸಂಪರ್ಕ ಹೊಂದುವ ಅವಕಾಶವನ್ನು ಈ ಸಂದರ್ಭ ಒದಗಿಸಿತು. ಬಳಿಕ ನಾನು ಅವರ ಆರಾಧನೆ , ನವರಾತ್ರಿಯ ಧಾರ್ಮಿಕ ವಿಧಿ ವಿಧಾನಗಳು ಪೂರ್ಣವಾಗಿ ಅಯೋಧ್ಯಾ ರಥ ಯಾತ್ರಾ ಮತ್ತು ರಾಮ ದೇವಾಲಯಕ್ಕಾಗಿ ಅರ್ಪಿಸಲ್ಪಟ್ಟದ್ದನ್ನು ನೋಡಿದೆ. ನಾನು ಇದನ್ನೆಲ್ಲ ನನ್ನ ಕಣ್ಣುಗಳಿಂದ ನೋಡಿದ್ದೇನೆ.
ಸ್ನೇಹಿತರೇ, , ನಾವು ರಾಜಮಾತಾ ವಿಜಯ ರಾಜೇ ಸಿಂಧಿಯಾ ಜೀ ಅವರ ಕನಸುಗಳನ್ನು ನನಸು ಮಾಡಲು ಅದೇ ವೇಗದಲ್ಲಿ ಸಾಗಬೇಕಾಗಿದೆ. ಬಲಿಷ್ಟ ಮತ್ತು ಭದ್ರ ಮತ್ತು ಸಮೃದ್ಧ ಭಾರತ ಅವರ ಕನಸಾಗಿತ್ತು. ನಾವು ಆತ್ಮ ನಿರ್ಭರ ಭಾರತವನ್ನು ಯಶಸ್ವಿಗೊಳಿಸುವ ಮೂಲಕ ಅವರ ಕನಸುಗಳನ್ನು ಸಾಕಾರಗೊಳಿಸಲಿದ್ದೇವೆ. ರಾಜಮಾತಾ ಅವರ ಪ್ರೇರಣೆ ಮತ್ತು ಆಶೀರ್ವಾದಗಳು ನಮ್ಮೊಂದಿಗಿವೆ.
ಈ ಶುಭ ಹಾರೈಕೆಗಳೊಂದಿಗೆ , ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ. ರಾಜಮಾತಾ ಸಾಹೀಬ್ ಅವರು ತಮ್ಮ ಬದುಕನ್ನು ಹೇಗೆ ಬದುಕಿದರು.. ಕಲ್ಪಿಸಿಕೊಳ್ಳಿ, ಇಂದು ಯಾರಾದರೊಬ್ಬರು ತಹಶೀಲ್ ನ ಮುಖ್ಯಸ್ಥರಾದರೆ ಅವರ ಗತ್ತು ಗೈರತ್ತುಗಳನ್ನು ನೋಡಿ. ರಾಜಮಾತಾ ಇಂತಹ ದೊಡ್ಡ ಪರಂಪರೆಯ ಭಾಗವಾಗಿದ್ದರೂ , ಅಧಿಕಾರ, ಆಸ್ತಿ ಹೊಂದಿದ್ದರೂ, ಅವರು ಬಹಳ ನಮ್ರತೆಯಿಂದಿದ್ದರು. ಅವರ ವಿವೇಚನೆ ಮತ್ತು ಬೆಳವಣಿಗೆ ಬಹಳ ಪ್ರೇರಣಾದಾಯಕವಾದುದಾಗಿದೆ.
ನಾವು ಈ ವಿಷಯಗಳನ್ನು ನಮ್ಮ ಹೊಸ ತಲೆಮಾರಿನ ಜೊತೆ ಚರ್ಚಿಸೋಣ. ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟ ವಿಷಯ ಅಲ್ಲ. ಆದರೆ ಭವಿಷ್ಯದ ಜನಾಂಗಗಳಿಗೆ ಸೇರಿದ್ದು. ರಾಜಮಾತಾ ಜೀ ಅವರ ಗೌರವಾರ್ಥ ಈ ನಾಣ್ಯವನ್ನು ನಮಗೆ ದೇಶದೆದುರು ಮಂಡಿಸಲು ಭಾರತ ಸರಕಾರಕ್ಕೆ ವಿಶೇಷ ಹೆಮ್ಮೆ ಇದೆ. .
ನಾನು ಮತ್ತೊಮ್ಮೆ ರಾಜಮಾತಾ ಜಿ ಅವರಿಗೆ ಅತ್ಯಂತ ಗೌರವಾದರಗಳೊಂದಿಗೆ ನಮಿಸಿ ಮಾತು ಮುಗಿಸುತ್ತೇನೆ.
ಬಹಳ ಬಹಳ ಧನ್ಯವಾದಗಳು
***
(Release ID: 1664262)
Visitor Counter : 259
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam