ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ನೂತನ ಕಾರ್ಮಿಕ ಸಂಹಿತೆಗಳು ಕೈಗಾರಿಕಾ ಸಾಮರಸ್ಯವನ್ನು ಉತ್ತೇಜಿಸುತ್ತವೆ, ಉತ್ಪಾದಕತೆಯನ್ನು ವೃದ್ಧಿಸುತ್ತವೆ ಮತ್ತು ಹೆಚ್ಚು ಉದ್ಯೋಗ ಸೃಷ್ಟಿಸುತ್ತವೆ: ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್


ನೂತನ ಕಾರ್ಮಿಕ ಸಂಹಿತೆಗಳು ದೇಶದಲ್ಲಿ ಶಾಂತಿಯುತ ಮತ್ತು ಸಾಮರಸ್ಯದ ಕಾರ್ಮಿಕ ಸಂಬಂಧಗಳನ್ನು ಖಚಿತಪಡಿಸುತ್ತವೆ: ಎಐಒಇ ಅಧ್ಯಕ್ಷರು


Posted On: 05 OCT 2020 6:55PM by PIB Bengaluru

ನೂತನ ಕಾರ್ಮಿಕ ಸಂಹಿತೆಗಳು ಕೈಗಾರಿಕಾ ಸಾಮರಸ್ಯ, ಅಧಿಕ ಉತ್ಪಾದಕತೆ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತವೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಇಂದು ಇಲ್ಲಿ ಹೇಳಿದರು.
ಎಫ್‌ಐಸಿಸಿಐನ ಅಂಗಸಂಸ್ಥೆಯಾದ ಎಐಒಇನ 86 ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ವೆಬಿನಾರ್ ಮೂಲಕ ಉದ್ದೇಶಿಸಿ ಮಾತನಾಡಿದ ಶ್ರೀ ಗಂಗ್ವಾರ್, “ಕಾರ್ಮಿಕ ಸಂಹಿತೆಗಳು ಒಂದು ನೋಂದಣಿ, ಒಂದು ಪರವಾನಗಿ ಮತ್ತು ಎಲ್ಲಾ ಕೋಡ್‌ಗಳಿಗೆ ಕಡಿಮೆ ರಿಟರ್ನ್ ಸಲ್ಲಿಕೆಯ ಜೊತೆಗೆ ಪಾರದರ್ಶಕ, ಉತ್ತರದಾಯಿತ್ವ ಮತ್ತು ಸರಳ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳುತ್ತವೆ. ಉದ್ಯೋಗಿಗಳಿಗೆ ನೆರವಾಗಲು ಮತ್ತು ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲು ನಾವು ಕಾರ್ಮಿಕ ಸಂಹಿತೆಗಳ ಮೂಲಕ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ” ಎಂದರು.
ಕಳೆದ 73 ವರ್ಷಗಳಲ್ಲಿ ಮೊದಲ ಬಾರಿಗೆ ದೇಶಕ್ಕೆ ಅವಶ್ಯಕವಿರುವ ಕಾರ್ಮಿಕ ಸುಧಾರಣೆಗಳನ್ನು ತರಲು ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಶ್ರೀ ಗಂಗ್ವಾರ್ ಹೇಳಿದರು. "ಈ ಸಂಹಿತೆಗಳನ್ನು ಅಂತಿಮಗೊಳಿಸುವ ಮೊದಲು ಉದ್ಯೋಗದಾತರು, ಕಾರ್ಮಿಕ ಸಂಘಟನೆಗಳು ಮತ್ತು ತಜ್ಞರು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಲಾಯಿತು" ಎಂದು ಅವರು ಹೇಳಿದರು.
ಹೊಸ ಕಾರ್ಮಿಕ ಸಂಹಿತೆಗಳ ಪ್ರಯೋಜನಗಳ ಬಗ್ಗೆ ಮಾತನಾಡಿದ ಶ್ರೀ ಗಂಗ್ವಾರ್, ಸಂಘಟಿತ, ಅಸಂಘಟಿತ ವಲಯದ ಸುಮಾರು 50 ಕೋಟಿ ಕಾರ್ಮಿಕರು ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಹೇಳಿದರು. "ನಿಗದಿತ ಅವಧಿಯ ಉದ್ಯೋಗವನ್ನು ಪರಿಚಯಿಸಲಾಗಿದೆ ಮತ್ತು ನಿಗದಿತ ಅವಧಿಯ ಉದ್ಯೋಗಿಗಳಿಗೆ ಸಾಮಾನ್ಯ ಉದ್ಯೋಗಿಗಳಂತೆಯೇ ಸೇವೆಗಳು ದೊರೆಯುತ್ತವೆ " ಎಂದು ಅವರು ಹೇಳಿದರು.
ಯಾವುದೇ ಘಟಕದಲ್ಲಿ ದಿಢೀರ್ ಮುಷ್ಕರ ನಡೆಸುವುದನ್ನು ತಡೆಗಟ್ಟಲು, ಐಆರ್ ಸಂಹಿತೆಯಲ್ಲಿ ಮುಷ್ಕರಕ್ಕೆ 14 ದಿನಗಳ ನೋಟಿಸ್ ಅನ್ನು ಪರಿಚಯಿಸಲಾಗಿದೆ ಎಂದು ಅವರು ಹೇಳಿದರು. "ಯಾವುದೇ ಸಂಸ್ಥೆಗಳ ಕಾರ್ಮಿಕರು ಮುಷ್ಕರವನ್ನು ಘೋಷಿಸುವ ಮೊದಲು 14 ದಿನಗಳ ನೋಟಿಸ್ ನೀಡಬೇಕಾಗುತ್ತದೆ. ಈ ಅವಧಿಯಲ್ಲಿ, ಕುಂದುಕೊರತೆಗಳನ್ನು ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಕಾಲಾವಕಾಶ ನೀಡಲು ಇದನ್ನು ಪರಿಚಯಿಸಲಾಗಿದೆ. ಮಾತುಕತೆಗಾಗಿ ಒಕ್ಕೂಟವನ್ನು ಸ್ಥಾಪಿಸುವ ಅವಕಾಶವೂ ಇರುತ್ತದೆ, ಅದು ಕಾರ್ಮಿಕರಿಗೆ ಮತ್ತು ಉದ್ಯಮಕ್ಕೆ ಸಹ ಪ್ರಯೋಜನವನ್ನು ನೀಡುತ್ತದೆ ”ಎಂದು ಶ್ರೀ ಗಂಗ್ವಾರ್ ಹೇಳಿದರು.
ಇನ್ಸ್ಪೆಕ್ಟರ್ ರಾಜ್ ವ್ಯವಸ್ಥೆಯನ್ನು ತೆಗೆದುಹಾಕಲು, "ಇನ್ಸ್ಪೆಕ್ಟರ್ ಅನ್ನು ಈಗ ಇನ್ಸ್ಪೆಕ್ಟರ್ ಕಮ್ ಫೆಸಿಲಿಟೇಟರ್ ಎಂದು ಕರೆಯಲಾಗುತ್ತದೆ. ಪಾರದರ್ಶಕತೆ, ಪರಿಣಾಮಕಾರಿತ್ವ ಮತ್ತು ಹೊಣೆಗಾರಿಕೆಯನ್ನು ತರಲು, ವೆಬ್ ಆಧಾರಿತ ತಪಾಸಣೆ ವ್ಯವಸ್ಥೆಯನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹೊಸ ಸಂಹಿತೆಗಳು ಕಾರ್ಮಿಕ ಕಾನೂನುಗಳನ್ನು ಸರಳಗೊಳಿಸುವುದಲ್ಲದೆ ವ್ಯವಹಾರವನ್ನೂ ಸುಲಭಗೊಳಿಸುತ್ತವೆ ”  ಎಂದು ಶ್ರೀ ಗಂಗ್ವಾರ್ ಹೇಳಿದರು.
ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಸರ್ಕಾರವು ಅಪರಾಧಗಳ ರಾಜಿ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತಿದೆ ಎಂದು ಸಚಿವರು ಹೇಳಿದರು. "ರಾಜಿ ಶುಲ್ಕದ ಮೂಲಕ ಸಂಗ್ರಹಿಸಿದ ಮೊತ್ತವನ್ನು ವಿಶೇಷ ಸಾಮಾಜಿಕ ಭದ್ರತಾ ನಿಧಿಗೆ ವರ್ಗಾಯಿಸಲಾಗುವುದು, ಇದು ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ" ಎಂದು ಅವರು ಹೇಳಿದರು.
ತ್ವರಿತ ನಿರ್ಧಾರ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, ಪರವಾನಗಿಗಳು, ಅನುಮೋದನೆಗಳು ಇತ್ಯಾದಿಗಳನ್ನು ಪಡೆಯಲು ‘ಡೀಮ್ಡ್ ಅನುಮೋದನೆ’ಯನ್ನೂ ಪರಿಚಯಿಸಲಾಗಿದೆ. “ಒಂದು ಖಚಿತವಾದ ಸಮಯದ ಚೌಕಟ್ಟನ್ನು ನಿಗದಿಪಡಿಸಲಾಗಿದೆ. ಒಂದು ವೇಳೆ ಪರವಾನಗಿ ನೀಡುವ ಪ್ರಾಧಿಕಾರವು ಅದನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ನೀಡದಿದ್ದರೆ ಕಂಪನಿಯು ‘ಡೀಮ್ಡ್ ಅನುಮೋದನೆ’ ಪಡೆಯುತ್ತದೆ” ಎಂದು ಶ್ರೀ ಗಂಗ್ವಾರ್ ಹೇಳಿದರು.
ಹೊಸ ಕಾರ್ಮಿಕ ಸಂಹಿತೆಗಳ ಯಶಸ್ಸು ಮುಖ್ಯವಾಗಿ ಅವಿಗಳ ಅನುಷ್ಠಾನ ತಂತ್ರ, ಸ್ಥಳೀಯ ಮತ್ತು ರಾಜ್ಯಗಳ ಸಂಸ್ಥೆಗಳ ಸಾಮರ್ಥ್ಯ ಮತ್ತು ಸಾಮಾಜಿಕ ಪಾಲುದಾರರ ಭಾಗವಹಿಸುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಐಎಲ್‌ಒ ನಿರ್ದೇಶಕ ಹಾಗೂ ದಕ್ಷಿಣ ಏಷ್ಯಾ ಮತ್ತು ಭಾರತದ ಡಿಡಬ್ಲ್ಯೂಟಿ ಶ್ರೀಮತಿ ಡಾಗ್ಮರ್ ವಾಲ್ಟರ್ ಹೇಳಿದರು. "ಕಾರ್ಮಿಕ ನೀತಿಗಳು ಮತ್ತು ಕಾನೂನುಗಳು ಕೆಲಸದ ಜಗತ್ತಿನಲ್ಲಿ ಬೆನ್ನೆಲುಬು, ಕಾರ್ಮಿಕರು ಮತ್ತು ಉದ್ಯೋಗದಾತರ ಹಿತಾಸಕ್ತಿಯನ್ನು ಇವುಗಳು ರಕ್ಷಿಸುತ್ತವೆ ಮತ್ತು ಉತ್ಪಾದಕತೆಗೆ ಅಗತ್ಯವಾದ ಸುರಕ್ಷಿತ ಮತ್ತು ಅನುಕೂಲಕರ ಕೆಲಸದ ವಾತಾವರಣವನ್ನು ಸೃಷ್ಟಿಸುತ್ತವೆ. ಕೋವಿಡ್-19 ನಂತರದ ಕಾರ್ಮಿಕ ಸುಧಾರಣೆಗಳು ಹೆಚ್ಚು ದುರ್ಬಲರನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿರುವ ಸುಸ್ಥಿರ ಪರಿಹಾರಗಳನ್ನು ಖಚಿತಪಡಿಸಿಕೊಳ್ಳಬೇಕು, ನ್ಯಾಯಸಮ್ಮತವಾದ ಮತ್ತು ಎಲ್ಲರನ್ನೂ ಒಳಗೊಂಡ ಸಮಾಜದ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಕ್ರಮಗಳು ನಮಗೆ ಬೇಕಾಗುತ್ತವೆ ”ಎಂದು ಅವರು ಹೇಳಿದರು.
ಭಾರತವು ಪ್ರಪಂಚಕ್ಕೆ ವೈವಿಧ್ಯತೆಯಲ್ಲಿ ಏಕತೆಗೆ ಸಂಕೇತವಾಗಿದೆ ಮತ್ತು ಅಪೇಕ್ಷಿತ ಸುಸ್ಥಿರ ಸುಧಾರಣೆಯನ್ನು ಸಾಧಿಸಲು ಇದು ಅತ್ಯುತ್ತಮವಾದ ಅನುಶಾಸನವಾಗಿದೆ, "ಸಾಂಕ್ರಾಮಿಕ ರೋಗವು ಉದ್ಯೋಗದಾತರು ಮತ್ತು ಕಾರ್ಮಿಕ ಸಂಘಟನೆಗಳ ನಡುವೆ ಸಾಮಾಜಿಕ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಸೂಚಿಸುತ್ತಿದೆ" ಎಂದು ಶ್ರೀಮತಿ ವಾಲ್ಟರ್ ಹೇಳಿದರು.
ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದ್ದಕ್ಕಾಗಿ ಸರ್ಕಾರವನ್ನು ಅಭಿನಂದಿಸಿದ ಎಐಒಇ ಅಧ್ಯಕ್ಷ ಶ್ರೀ ರೋಹಿತ್ ರೇಲನ್, ಇದು ನಮ್ಮ ದೇಶದಲ್ಲಿ ಶಾಂತಿಯುತ ಮತ್ತು ಸಾಮರಸ್ಯದ ಕಾರ್ಮಿಕ ಸಂಬಂಧಗಳ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಭಾರತದ ಬೃಹತ್ ಅನೌಪಚಾರಿಕ ವಲಯದ ಉದ್ಯೋಗಿಗಳನ್ನು ಔಪಚಾರಿಕ ವಲಯದ ವ್ಯಾಪ್ತಿಗೆ ತರಲು ಹೊಸ ಅವಕಾಶಗಳನ್ನು ತೆರೆಯುವುದರಿಂದ ಹೊಸ ಕಾರ್ಮಿಕ ಸುಧಾರಣೆಗಳನ್ನು ಎಐಒಇ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ. ಈ ಸಂಹಿತೆಗಳ ಅನುಷ್ಠಾನವು ಭಾರತಕ್ಕೆ ಸುಲಭ ವ್ಯವಹಾರದ ಶ್ರೇಯಾಂಕದಲ್ಲಿ ಮತ್ತಷ್ಟು ಮೇಲೇರಲು ಸಹಾಯ ಮಾಡುತ್ತದೆ ಎಂದು ನಮಗೆ ಭರವಸೆಯಿದೆ” ಎಂದು ಅವರು ಹೇಳಿದರು.
ಹೊಸ ಸಂಹಿತೆಗಳು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುತ್ತವೆ ಮತ್ತು ಅನೌಪಚಾರಿಕ ವಲಯದ ಉದ್ಯೋಗಿಗಳಿಗೆ ಔಪಚಾರಿಕ ವಲಯದ ಬಾಗಿಲು ತೆರೆಯುವುದರಿಂದ ಆರ್ಥಿಕತೆ ಪುನಶ್ಚೇತನಗೊಳಿಸಲು ಮತ್ತು ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಲು ಸಹಾಯ ಮಾಡುತ್ತದೆ ಎಂದು ಶ್ರೀ ರೇಲನ್ ಹೇಳಿದರು.
ಹೊಸ ಕಾರ್ಮಿಕ ಸಂಹಿತೆಗಳು ಖಂಡಿತವಾಗಿಯೂ ಹೂಡಿಕೆದಾರರಿಗೆ ಸಕಾರಾತ್ಮಕ ಸಂದೇಶವನ್ನು ರವಾನಿಸುತ್ತವೆ ಎಂದು ಎಐಒಇನ ಚುನಾಯಿತ ಅಧ್ಯಕ್ಷ ಶ್ರೀ ಶಿಶಿರ್ ಜೈಪುರಿಯಾ ಹೇಳಿದರು. "ಕಾರ್ಯಾಚರಣೆ ವಲಯಗಳಲ್ಲಿ ಸರ್ಕಾರವು ತಂದಿರುವ ಸುಧಾರಣೆಗಳು, ಅನುಸರಣಾ ವಿಷಯದಲ್ಲಿ ಐಸಿಟಿಯನ್ನು ಬಳಸುವುದರಿಂದ, ಅಧಿಕಾರಶಾಹಿಯ ಅಡಚಣೆಗಳು ಮತ್ತು ಅನಗತ್ಯ ಕಾಗದಪತ್ರಗಳ ಕೆಲಸವನ್ನು ಕಡಿಮೆ ಮಾಡುತ್ತದೆ. ಈ ಸುಧಾರಣೆಗಳು ಕೋವಿಡ್-19 ರ ಸಂದರ್ಭದಲ್ಲಿ ಉದ್ಯೋಗದಾತರಿಗೆ ಮತ್ತು ಉದ್ಯೋಗಿಗಳಿಗೆ ಸಹಾಯ ಮಾಡುವುದು ಮಾತ್ರವಲ್ಲ, ಕೋವಿಡ್ ನಂತರವೂ ಪ್ರಗತಿಪರ ಮತ್ತು ಪ್ರಸ್ತುತವೆಂಬುದು ಸಾಬೀತುಪಡಿಸಲಿವೆ” ಎಂದು ಅವರು ಹೇಳಿದರು.
ದೇಶದಲ್ಲಿ ಪ್ರಗತಿ ಮತ್ತು ಸಾಮಾಜಿಕ ಸಾಮರಸ್ಯದ ವಾತಾವರಣವನ್ನು ಕಾಪಾಡಿಕೊಳ್ಳಲು ಉದ್ಯೋಗದಾತರು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಾರೆ ಎಂದು ಶ್ರೀ ಜೈಪುರಿಯಾ ಸಚಿವರಿಗೆ ಭರವಸೆ ನೀಡಿದರು.

***(Release ID: 1661840) Visitor Counter : 190