ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಮೂರು ಐತಿಹಾಸಿಕ ಕಾರ್ಮಿಕ ಮಸೂದೆಗಳಿಗೆ ಲೋಕಸಭೆಯ ಅಂಗೀಕಾರ


ಕಾರ್ಮಿಕ ಮಸೂದೆ, ಕಾರ್ಮಿಕ ಕಲ್ಯಾಣದ ‘ಮಹತ್ವದ ಬದಲಾವಣೆ’ ಗಳನ್ನು ವಿವರಿಸಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಶ್ರೀ ಸಂತೋಷ್ ಗಂಗ್ವಾರ್

ಸಂಘಟಿತ, ಅಸಂಘಟಿತ ಮತ್ತು ಸ್ವಯಂ ಉದ್ಯೋಗದ 50 ಕೋಟಿ ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಒದಗಿಸುವ ಹೊಸ ಕಾರ್ಮಿಕ ಮಸೂದೆಗಳು

ಇಎಸ್ಐಸಿ ಮತ್ತು ಇಪಿಎಫ್ಒನ ಸಾಮಾಜಿಕ ಭದ್ರತಾ ಜಾಲ, ಎಲ್ಲಾ ಕಾರ್ಮಿಕರಿಗೆ ಮತ್ತು ಸ್ವಯಂ ಉದ್ಯೋಗಿಗಳಿಗೆ ಮುಕ್ತ

ಜಿಐಜಿ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರೊಂದಿಗೆ 40 ಕೋಟಿ ಅಸಂಘಟಿತ ಕಾರ್ಮಿಕರಿಗಾಗಿ “ಸಾಮಾಜಿಕ ಭದ್ರತಾ ನಿಧಿ”ಸ್ಥಾಪನೆ ಮತ್ತು ಸಾರ್ವತ್ರಿಕ ಸಾಮಾಜಿಕ ಭದ್ರತೆ ವ್ಯಾಪ್ತಿ ವಿಸ್ತರಿಸಲು ಸಹಕಾರಿ

ಮಹಿಳಾ ಕಾರ್ಮಿಕರಿಗೂ ಪುರುಷರಷ್ಟೇ ಸಮಾನ ವೇತನ

ನಿಯಮಿತ ನೌಕರರಂತೆಯೇ ಸ್ಥಿರ ಅವಧಿಯ ಉದ್ಯೋಗಿಗಳಿಗೂ ಅದೇ ಸೇವಾ ಸ್ಥಿತಿ, ಗ್ರ್ಯಾಚ್ಯುಟಿ, ರಜೆ ಮತ್ತು ಸಾಮಾಜಿಕ ಭದ್ರತೆ

ಅಪಘಾತದ ಸಂದರ್ಭದಲ್ಲಿ ಇತರ ಬಾಕಿಗಳೊಂದಿಗೆ ಶೇ.50 ರಷ್ಟು ದಂಡವು ಕಾರ್ಮಿಕರಿಗೆ ಸಂದಾಯ

ಅಂತರರಾಷ್ಟ್ರೀಯ ಮಟ್ಟದ ಸುರಕ್ಷತಾ ವಾತಾವರಣವನ್ನು ಒದಗಿಸಲು “ರಾಷ್ಟ್ರೀಯ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಮಂಡಳಿ”ಯನ್ನು ಸ್ಥಾಪಿಸಲಾಗುವುದು



ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ ಮಾದ್ಯಮವನ್ನು ಸೇರಿಸಲು ಕಾರ್ಯನಿರತ ಪತ್ರಕರ್ತರ ವ್ಯಾಖ್ಯಾನ

ಜಿಐಜಿ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರೊಂದಿಗೆ ತೋಟದ ಕಾರ್ಮಿಕರು ಸಹ ಇಎಸ್‌ಐಸ

Posted On: 22 SEP 2020 8:16PM by PIB Bengaluru

ಲೋಕಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಶ್ರೀ ಸಂತೋಷ್ ಗಂಗ್ವಾರ್ ಅವರು, ದೇಶದ ಐತಿಹಾಸಿಕ ಕಾರ್ಮಿಕ ಸುಧಾರಣೆಗಳಿಗಾಗಿ ಸದನದಲ್ಲಿ ಮಂಡಿಸಲಾದ ಮೂರು ಮಸೂದೆಗಳು ದೇಶದಲ್ಲಿ 50 ಕೋಟಿಗೂ ಹೆಚ್ಚು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರನ್ನು ಒಳಗೊಂಡ ಕಾರ್ಮಿಕ ಕಲ್ಯಾಣ ಸುಧಾರಣೆಗಳಲ್ಲಿ ಮಹತ್ವದ ಬದಲಾವಣೆ ತರಲಿವೆ ಎಂದು ಹೇಳಿದ್ದಾರೆ. ಇದು ಜಿಐಜಿ, ಪ್ಲಾಟ್‌ಫಾರ್ಮ್ ಮತ್ತು ಸ್ವಯಂ ಉದ್ಯೋಗ ಕ್ಷೇತ್ರದಲ್ಲಿರುವವರಿಗೂ ಸಹ ಸಾಮಾಜಿಕ ಭದ್ರತೆಯ ಬಾಗಿಲುಗಳನ್ನು ತೆರೆಯುತ್ತದೆ ಎಂದು ತಿಳಿಸಿದರು.

ಇಂದು ಲೋಕಸಭೆಯಲ್ಲಿ ಅಂಗೀಕಾರಗೊಂಡ ಮೂರು ಮಸೂದೆಗಳು (i) ಕೈಗಾರಿಕಾ ಸಂಬಂಧಗಳ ಸಂಹಿತೆ, 2020 (ii) ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಪರಿಸ್ಥಿತಿಗಳ ಸಂಹಿತೆ, 2020 ಮತ್ತು (iii) ಸಾಮಾಜಿಕ ಭದ್ರತಾ ಸಂಹಿತೆ, 2020. ಈ ಮಸೂದೆಗಳು ಕಳೆದ 73 ವರ್ಷಗಳಿಂದ ಮಾಡಲಾಗದ ಹಾಗೂ ದೇಶದಲ್ಲಿ ಹೆಚ್ಚು ಅಗತ್ಯವಿದ್ದ ಕಾರ್ಮಿಕ ಕಲ್ಯಾಣ ಸುಧಾರಣೆಗಳನ್ನು ತರಲು ಸರ್ಕಾರದ ಬದ್ಧತೆಯ ಭಾಗವಾಗಿವೆ. ಕಳೆದ 6 ವರ್ಷಗಳಲ್ಲಿ, ಎಲ್ಲಾ ಪಾಲುದಾರರೊಂದಿಗೆ ಅಂದರೆ ಕಾರ್ಮಿಕ ಸಂಘಟನೆಗಳು, ಉದ್ಯೋಗದಾತರು, ರಾಜ್ಯ ಸರ್ಕಾರಗಳು ಮತ್ತು ಕಾರ್ಮಿಕ ವಲಯದ ತಜ್ಞರೊಂದಿಗೆ ಹಲವು ಸಮಾಲೋಚನೆಗಳನ್ನು ನಡೆಸಲಾಯಿತು, ಇದರಲ್ಲಿ ಒಂಭತ್ತು ತ್ರಿಪಕ್ಷೀಯ ಸಮಾಲೋಚನೆಗಳು, ನಾಲ್ಕು ಉಪಸಮಿತಿ ಸಭೆಗಳು ಮತ್ತು ಹತ್ತು ಪ್ರಾದೇಶಿಕ ಸಮಾವೇಶಗಳು, ಹತ್ತು ಅಂತರ ಸಚಿವಾಲಯದ ಸಮಾಲೋಚನೆಗಳು ಮತ್ತು ನಾಗರಿಕರ ಅಭಿಪ್ರಾಯಗಳು ಸೇರಿವೆ.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕ್ರಿಯಾತ್ಮಕ ನಾಯಕತ್ವದಲ್ಲಿ ಈ ಸರ್ಕಾರವು 2014 ರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸುಗಳನ್ನು ಈಡೇರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಮತ್ತು ‘ಶ್ರಮೇವ್ ಜಯತೆ’ಮತ್ತು ‘ಸತ್ಯಮೇವ ಜಯತೆ’ಗಳಿಗೆ ಸಮಾನ ಪ್ರಾಮುಖ್ಯತೆ ನೀಡಿದೆ ಎಂದು ಶ್ರೀ ಗಂಗ್ವಾರ್ ಹೇಳಿದರು. ಸದ್ಯದ ಕೋವಿಡ್ -19 ಸಾಂಕ್ರಾಮಿಕ ರೋಗದ ಸಂದರ್ಭ ಸೇರಿದಂತೆ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಇತರ ಕಲ್ಯಾಣ ಕ್ರಮಗಳನ್ನು ಒದಗಿಸಲು ನನ್ನ ಸಚಿವಾಲಯವು ದಣಿವರಿಯದೆ ಕಾರ್ಯನಿರ್ವಹಿಸುತ್ತಿದೆ. ನಮ್ಮ ದೂರದೃಷ್ಟಿಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆಡಳಿತವು ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದೆ ಮತ್ತು ನಮ್ಮ ಸಹೋದರಿಯರಿಗೆ ಮಾತೃತ್ವ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸುವುದು, ಪ್ರಧಾನ ಮಂತ್ರಿ ಪ್ರೊತ್ಸಾಹನ್ ರೊಜ್ಗಾರ್ ಯೋಜನೆಯಡಿ ಮಹಿಳೆಯರಿಗೆ ಗಣಿಗಳಲ್ಲಿ ಕೆಲಸ ಮಾಡಲು ಅವಕಾಶ ನೀಡುವುದು ಮುಂತಾದ ಅನೇಕ ಕಲ್ಯಾಣ ಕ್ರಮಗಳನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಔಪಚಾರಿಕ ಉದ್ಯೋಗವು ಇಪಿಎಫ್‌ಒ ಮತ್ತು ಕಲ್ಯಾಣ ಯೋಜನೆಗಳಲ್ಲಿ ಪೋರ್ಟಬಿಲಿಟಿ ಮತ್ತು ನಮ್ಮ ಸಹ ನಾಗರಿಕರಿಗೆ ಇಎಸ್‌ಐಸಿ ಸೌಲಭ್ಯಗಳ ವಿಸ್ತರಣೆಯನ್ನು ಹೆಚ್ಚಿಸಿದೆ ಎಂದು ಅವರು ತಿಳಿಸಿದರು.

ಲೋಕಸಭಾ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಕಾರ್ಮಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಸೂದೆಗಳು ದೇಶದ ಸಮಗ್ರ ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಳ್ಳುತ್ತವೆ ಎಂದು ಹೇಳಿದರು. ಕಾರ್ಮಿಕರ ಬಗ್ಗೆ ಇರುವ ಅನೇಕ ಕಾನೂನುಗಳಿಂದಾಗಿ ಅವರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ, ಇದು ಕಾರ್ಯವಿಧಾನದ ಸಂಕೀರ್ಣತೆಗಳನ್ನು ಒಳಗೊಂಡಿರುತ್ತದೆ ಮತ್ತು ವಿವಿಧ ಕಲ್ಯಾಣ ಮತ್ತು ಸುರಕ್ಷತಾ ನಿಬಂಧನೆಗಳ ಅನುಷ್ಠಾನಕ್ಕೆ ಅಡ್ಡಿಯಾಗುತ್ತದೆ ಎಂದು ಅವರು ಹೇಳಿದರು. 29 ಕಾರ್ಮಿಕ ಕಾನೂನುಗಳನ್ನು ಸರಳ, ಪಾರದರ್ಶಕವಾದ ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು. ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿ, ವೇತನ ಸಂಹಿತೆಯನ್ನು ಈಗಾಗಲೇ ಸಂಸತ್ತು ಅಂಗೀಕರಿಸಿದೆ ಮತ್ತು ಇದು ಈಗಾಗಲೇ ಕಾನೂನಾಗಿದೆ. ಎಲ್ಲಾ ಕಾರ್ಮಿಕ ಕಾನೂನುಗಳನ್ನು (29) ನಾಲ್ಕು ಕಾರ್ಮಿಕ ಸಂಹಿತೆ ಗಳಾಗಿ ಒಂದುಗೂಡಿಸಲಾಗಿದೆ:

ಸಂಹಿತೆಯ ಹೆಸರು

ಸಂಯೋಜಿತ ಕಾನೂನುಗಳ ಸಂಖ್ಯೆ ಮತ್ತು ಹೆಸರು

ವೇತನ ಸಂಹಿತೆ

4 ಕಾನೂನುಗಳು -

i. ವೇತನ ಪಾವತಿ ಕಾಯ್ದೆ, 1936

ii. ಕನಿಷ್ಠ ವೇತನ ಕಾಯ್ದೆ, 1948

iii. ಬೋನಸ್ ಪಾವತಿ ಕಾಯಿದೆ, 1965

iv. ಸಮಾನ ಸಂಭಾವನೆ ಕಾಯ್ದೆ, 1976

ಐಆರ್ ಸಂಹಿತೆ

3 ಕಾನೂನುಗಳು -

i. ಕಾರ್ಮಿಕ ಸಂಘಟನೆಗಳ ಕಾಯ್ದೆ, 1926

ii. ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯ್ದೆ, 1946

iii. ಕೈಗಾರಿಕಾ ವಿವಾದ ಕಾಯ್ದೆ, 1947

ಒಎಸ್ಎಚ್ ಸಂಹಿತೆ

13 ಕಾನೂನುಗಳು -

i. ಕಾರ್ಖಾನೆಗಳ ಕಾಯ್ದೆ, 1948

ii. ಪ್ಲಾಂಟೇಶನ್ ಕಾರ್ಮಿಕರ ಕಾಯ್ದೆ, 1951

iii. ಗಣಿ ಕಾಯ್ದೆ, 1952

iv. ಕಾರ್ಯನಿರತ ಪತ್ರಕರ್ತರು ಮತ್ತು ಇತರ ಪತ್ರಿಕೆ ನೌಕರರು (ಸೇವೆಯ ಷರತ್ತುಗಳು) ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1955

v. ಕಾರ್ಯನಿರತ ಪತ್ರಕರ್ತರು (ವೇತನ ನಿಗದಿ) ಕಾಯ್ದೆ, 1958

vi. ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆ, 1961

vii. ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗದ ಷರತ್ತುಗಳು) ಕಾಯ್ದೆ, 1966

viii. ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯ್ದೆ, 1970

ix. ಮಾರಾಟ ಉತ್ತೇಜನಾ ನೌಕರರ (ಸೇವೆಯ ಷರತ್ತುಗಳು) ಕಾಯ್ದೆ, 1976

X. ಅಂತರ-ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ಮತ್ತು ಸೇವೆಯ ಷರತ್ತುಗಳ ನಿಯಂತ್ರಣ) ಕಾಯ್ದೆ, 1979

xi. ಸಿನಿಮಾ ಕೆಲಸಗಾರರು ಮತ್ತು ಸಿನೆಮಾ ಥಿಯೇಟರ್ ಕೆಲಸಗಾರರ (ಉದ್ಯೋಗ ನಿಯಂತ್ರಣ) ಕಾಯ್ದೆ, 1981

xii. ಡಾಕ್ ವರ್ಕರ್ಸ್ (ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ) ಕಾಯ್ದೆ, 1986

xiii. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಸೇವೆಯ ಷರತ್ತುಗಳ ನಿಯಂತ್ರಣ) ಕಾಯ್ದೆ, 1996

ಸಾಮಾಜಿಕ ಭದ್ರತೆ ಸಂಹಿತೆ

9 ಕಾನೂನುಗಳು -

i. ನೌಕರರ ಪರಿಹಾರ ಕಾಯ್ದೆ, 1923

ii. ನೌಕರರ ರಾಜ್ಯ ವಿಮಾ ಕಾಯ್ದೆ, 1948

iii. ನೌಕರರ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1952

iv. ಉದ್ಯೋಗ ವಿನಿಮಯ ಕೇಂದ್ರಗಳು (ಖಾಲಿ ಹುದ್ದೆಗಳ ಕಡ್ಡಾಯ ಅಧಿಸೂಚನೆ) ಕಾಯ್ದೆ, 1959

v. ಹೆರಿಗೆ ಪ್ರಯೋಜನ ಕಾಯ್ದೆ, 1961

vi. ಪಾವತಿ ಗ್ರಾಚ್ಯುಟಿ ಆಕ್ಟ್, 1972

vii. ಸಿನಿಮಾ ಕೆಲಸಗಾರರ ಕಲ್ಯಾಣ ನಿಧಿ ಕಾಯ್ದೆ, 1981

viii. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ, 1996

ix. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ, 2008

ಒಟ್ಟು

29

2014 ರಿಂದ ಈಗಾಗಲೇ 12 ಕಾರ್ಮಿಕ ಕಾಯಿದೆಗಳನ್ನು ರದ್ದುಪಡಿಸಲಾಗಿದೆ.

ಹೊಸ ಕಾರ್ಮಿಕ ಸಂಹಿತೆಗಳ ಪ್ರಯೋಜನಗಳನ್ನು ವಿವರಿಸಿದ ಶ್ರೀ ಗಂಗ್ವಾರ್ ಅವರು ದೇಶದ ಸಂಪೂರ್ಣ ಕಾರ್ಮಿಕರು ಈಗ ವಿವಿಧ ಸಂಹಿತೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸದನಕ್ಕೆ ತಿಳಿಸಿದರು. ಲೋಕಸಭೆಯಿಂದ ಅಂಗೀಕರಿಸಲ್ಪಟ್ಟ 3 ಸಂಹಿತೆ ಗಳ ಪ್ರಮುಖ ಲಕ್ಷಣಗಳನ್ನು ಸಚಿವರು ವಿವರಿಸಿದರು,

ಅವು ಹೀಗಿವೆ:-

() ಸಾಮಾಜಿಕ ಭದ್ರತಾ ಸಂಹಿತೆ, 2020

ಇಎಸ್ಐಸಿಯ ವ್ಯಾಪ್ತಿಯ ವಿಸ್ತರಣೆ: ಗರಿಷ್ಠ ಕಾರ್ಮಿಕರಿಗೆ ಇಎಸ್ಐಸಿ ಅಡಿಯಲ್ಲಿ ಆರೋಗ್ಯ ಭದ್ರತೆಯ ಹಕ್ಕನ್ನು ಒದಗಿಸಲು ಪ್ರಯತ್ನಿಸಲಾಗಿದೆ: -

(ಎ)       ಎಲ್ಲಾ 740 ಜಿಲ್ಲೆಗಳಲ್ಲಿ ಈಗ ಇಎಸ್ಐಸಿ ಸೌಲಭ್ಯವನ್ನು ಒದಗಿಸಲಾಗುವುದು. ಪ್ರಸ್ತುತ, 566 ಜಿಲ್ಲೆಗಳಲ್ಲಿ ಮಾತ್ರ ಈ ಸೌಲಭ್ಯವನ್ನು ನೀಡಲಾಗುತ್ತಿದೆ.

(ಬಿ)       ಅಪಾಯಕಾರಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಂಸ್ಥೆಗಳು ಅದರಲ್ಲಿ ಒಬ್ಬನೇ ಕೆಲಸಗಾರ ಕೆಲಸ ಮಾಡುತ್ತಿದ್ದರೂ ಸಹ ಇಎಸ್ಐಸಿಯೊಂದಿಗೆ ಕಡ್ಡಾಯವಾಗಿ ನೋಂದಣಿಯಾಗಲೇಬೇಕು.  

(ಸಿ)       ಅಸಂಘಟಿತ ವಲಯ ಮತ್ತು ಜಿಐಜಿ ಕಾರ್ಮಿಕರನ್ನು ಇಎಸ್ಐಸಿಯೊಂದಿಗೆ ಜೋಡಿಸುವ ಯೋಜನೆಯನ್ನು ರೂಪಿಸಲು ಅವಕಾಶ.

(ಡಿ)       ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಜೋಡಿಸುವ ಆಯ್ಕೆಯನ್ನು ತೋಟಗಳ ಮಾಲೀಕರಿಗೆ ನೀಡಲಾಗುತ್ತಿದೆ.

(ಇ)       ಹತ್ತಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಿಗೆ ಇಎಸ್ಐಸಿ ಸದಸ್ಯರಾಗುವ ಆಯ್ಕೆಯನ್ನು ಸಹ ನೀಡಲಾಗುತ್ತಿದೆ.

ಇಪಿಎಫ್ ವ್ಯಾಪ್ತಿಯ ವಿಸ್ತರಣೆ:

(ಎ)       20 ಕಾರ್ಮಿಕರನ್ನು ಹೊಂದಿರುವ ಎಲ್ಲಾ ಸಂಸ್ಥೆಗಳಿಗೂ ಇಪಿಎಫ್‌ಒ ವ್ಯಾಪ್ತಿ ಅನ್ವಯವಾಗುತ್ತದೆ. ಪ್ರಸ್ತುತ, ಇದು ಷೆಡ್ಯೂಲ್ ನಲ್ಲಿ ಸೇರಿಸಲಾದ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ.

(ಬಿ)       20 ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಿಗೆ ಇಪಿಎಫ್‌ಒಗೆ ಸೇರ್ಪಡೆಗೊಳ್ಳುವ ಆಯ್ಕೆಯನ್ನು ಸಹ ನೀಡಲಾಗುತ್ತಿದೆ.

(ಸಿ)       ಇಪಿಎಫ್‌ಒ ಅಡಿಯಲ್ಲಿ ‘ಸ್ವಯಂ ಉದ್ಯೋಗಿ’ವರ್ಗಕ್ಕೆ ಬರುವ ಅಥವಾ ಬೇರೆ ಯಾವುದೇ ವರ್ಗಕ್ಕೆ ಸೇರುವ ಕಾರ್ಮಿಕರನ್ನು ಕರೆತರಲು ಯೋಜನೆಗಳನ್ನು ರೂಪಿಸಲಾಗುವುದು.

  • ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಒದಗಿಸಲು ವಿವಿಧ ಯೋಜನೆಗಳನ್ನು ರೂಪಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಗಳನ್ನು ಕಾರ್ಯಗತಗೊಳಿಸಲು “ಸಾಮಾಜಿಕ ಭದ್ರತಾ ನಿಧಿಯನ್ನು” ರಚಿಸಲಾಗುತ್ತದೆ.
  • "ಪ್ಲಾಟ್‌ಫಾರ್ಮ್ ಕೆಲಸಗಾರರು ಅಥವಾ ಜಿಐಜಿ ಕೆಲಸಗಾರ” ರಂತಹ ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ರೂಪಿಸಲಾದ ಹೊಸ ರೀತಿಯ ಉದ್ಯೋಗಗಳನ್ನು ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ತರುವ ಕೆಲಸವನ್ನು ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ ಮಾಡಲಾಗಿದೆ. ಈ ವರ್ಗದ ಕಾರ್ಮಿಕರನ್ನು ಸಾಮಾಜಿಕ ಭದ್ರತೆಗೆ ಒಳಪಡಿಸುವ ಅಭೂತಪೂರ್ವ ಹೆಜ್ಜೆ ಇಟ್ಟ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ.
  • ನಿಗದಿತ ಅವಧಿಯ ಉದ್ಯೋಗಿಗಳಿಗೆ ಗ್ರಾಚ್ಯುಟಿಗಾಗಿ ಅವಕಾಶ ಕಲ್ಪಿಸಲಾಗಿದೆ ಮತ್ತು ಇದಕ್ಕಾಗಿ ಕನಿಷ್ಠ ಸೇವಾ ಅವಧಿಗೆ ಯಾವುದೇ ಷರತ್ತು ಇರುವುದಿಲ್ಲ. ಮೊದಲ ಬಾರಿಗೆ, ಒಪ್ಪಂದದ ಮೇಲೆ ನಿಗದಿತ ಅವಧಿಗೆ ಕೆಲಸ ಮಾಡುವ ಉದ್ಯೋಗಿಗೆ ನಿಯಮಿತ ನೌಕರನಂತೆ ಸಾಮಾಜಿಕ ಭದ್ರತೆಯ ಹಕ್ಕನ್ನು ನೀಡಲಾಗಿದೆ.
  • ಅಸಂಘಟಿತ ವಲಯದ ಕಾರ್ಮಿಕರಿಗಾಗಿ ರಾಷ್ಟ್ರೀಯ ದತ್ತಾಂಶ ಸಂಗ್ರಹ ಮಾಡುವ ಉದ್ದೇಶದಿಂದ, ಈ ಎಲ್ಲ ಕಾರ್ಮಿಕರ ನೋಂದಣಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಮಾಡಲಾಗುವುದು ಮತ್ತು ಈ ನೋಂದಣಿಯನ್ನು ಸ್ವಯಂ ಪ್ರಮಾಣೀಕರಣದ ಆಧಾರದ ಮೇಲೆ ಸರಳ ಕಾರ್ಯವಿಧಾನದ ಮೂಲಕ ಮಾಡಲಾಗುತ್ತದೆ. ಅಸಂಘಟಿತ ವಲಯದ ಫಲಾನುಭವಿಗಳಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳನ್ನು ವಿಸ್ತರಿಸಲು ಇದು ಅನುಕೂಲವಾಗಲಿದೆ. ಈ ದತ್ತಾಂಶದ ಸಹಾಯದಿಂದ ಅಸಂಘಟಿತ ವಲಯದ ಕಾರ್ಮಿಕರು ಸಾಮಾಜಿಕ ಭದ್ರತೆಯ ‘ಉದ್ದೇಶಿತ ವಿತರಣೆಯನ್ನು’ ಪಡೆಯಲು ಸಾಧ್ಯವಾಗುತ್ತದೆ.
  • ಉದ್ಯೋಗ ಪಡೆಯಲು ಪ್ರಮುಖವಾಗಿ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯುವುದು. ಈ ಗುರಿಯೊಂದಿಗೆ, 20 ಅಥವಾ ಹೆಚ್ಚಿನ ಕಾರ್ಮಿಕರನ್ನು ಹೊಂದಿರುವ ಎಲ್ಲಾ ಸಂಸ್ಥೆಗಳಿಗೆ ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ಕೆಲಸದ ಬಗ್ಗೆ ವರದಿ ಮಾಡುವುದು ಕಡ್ಡಾಯವಾಗಿದೆ. ಈ ಮಾಹಿತಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಒದಗಿಸಲಾಗುವುದು.

(ಬಿ) ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020

  • ನಿರ್ದಿಷ್ಟ ವಯಸ್ಸಿಗಿಂತ ಹೆಚ್ಚಿನ ವಯಸ್ಸಾದ ಕಾರ್ಮಿಕರಿಗೆ ಉದ್ಯೋಗದಾತರಿಂದ ವರ್ಷಕ್ಕೊಮ್ಮೆ ಉಚಿತ ಆರೋಗ್ಯ ತಪಾಸಣೆ.
  • ಕಾರ್ಮಿಕರಿಗೆ ಮೊದಲ ಬಾರಿಗೆ ನೇಮಕಾತಿ ಪತ್ರವನ್ನು ಪಡೆಯಲು ಕಾನೂನಿನ ಹಕ್ಕು.
  • ಸಿನಿಮಾ ಕೆಲಸಗಾರರನ್ನು ಆಡಿಯೊ ವಿಷುಯಲ್ ವರ್ಕರ್ ಎಂದು ಗೊತ್ತುಪಡಿಸಲಾಗಿದೆ, ಇದರಿಂದಾಗಿ ಹೆಚ್ಚು ಕಾರ್ಮಿಕರು ಒ ಎಸ್ ಎಚ್ ಕೋಡ್‌ನ ವ್ಯಾಪ್ತಿಗೆ ಬರುತ್ತಾರೆ. ಈ ಮೊದಲು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಕಲಾವಿದರಿಗೆ ಮಾತ್ರ ಈ ಭದ್ರತೆಯನ್ನು ನೀಡಲಾಗುತ್ತಿತ್ತು.

(ಸಿ) ಕೈಗಾರಿಕಾ ಸಂಬಂಧಗಳ ಸಂಹಿತೆ, 2020

ಕಾರ್ಮಿಕರ ವಿವಾದಗಳನ್ನು ತ್ವರಿತವಾಗಿ ಪರಿಹರಿಸಲು ಸರ್ಕಾರ ಮಾಡಿರುವ ಪ್ರಯತ್ನಗಳು:

(ಎ)       ಕೈಗಾರಿಕಾ ನ್ಯಾಯಮಂಡಳಿಯಲ್ಲಿ ಒಬ್ಬ ಸದಸ್ಯರ ಬದಲು ಇಬ್ಬರು ಸದಸ್ಯರಿಗೆ ಅವಕಾಶ. ಇದರಿಂದ ಒಬ್ಬ ಸದಸ್ಯರ ಅನುಪಸ್ಥಿತಿಯಲ್ಲಿಯೂ ಕೆಲಸ ಸರಾಗವಾಗಿ ನಡೆಯಬಹುದು.

(ಬಿ)       ರಾಜಿ ಸಂಧಾನ ಹಂತದಲ್ಲಿ ವಿವಾದ ಬಗೆಹರಿಯದಿದ್ದಲ್ಲಿ ವಿಷಯವನ್ನು ನೇರವಾಗಿ ನ್ಯಾಯಮಂಡಳಿಗೆ ಕೊಂಡೊಯ್ಯುವ ಅವಕಾಶ. ಪ್ರಸ್ತುತ, ಈ ಪ್ರಕರಣವನ್ನು ಸರ್ಕಾರವು ನ್ಯಾಯಮಂಡಳಿಗೆ ಉಲ್ಲೇಖಿಸಬೇಕು.

(ಸಿ)       ನ್ಯಾಯಮಂಡಳಿಯ ತೀರ್ಪಿನ 30 ದಿನಗಳಲ್ಲಿ ತೀರ್ಪು ಅನುಷ್ಠಾನ.

(ಡಿ)       ಸ್ಥಿರ ಅವಧಿಯ ಉದ್ಯೋಗವನ್ನು ಪಡೆಯುವ ಕಾರ್ಮಿಕರು, ಗುತ್ತಿಗೆ ಕಾರ್ಮಿಕರ ಬದಲು ಸ್ಥಿರ ಅವಧಿಯ ಉದ್ಯೋಗದ ಆಯ್ಕೆಯನ್ನು ಪಡೆಯುತ್ತಾರೆ. ಇದರ ಅಡಿಯಲ್ಲಿ, ಅವರು ಕೆಲಸದ ಸಮಯ, ಸಂಬಳ, ಸಾಮಾಜಿಕ ಭದ್ರತೆ ಮತ್ತು ನಿಯಮಿತ ಉದ್ಯೋಗಿಗಳಂತಹ ಇತರ ಕಲ್ಯಾಣ ಸೌಲಭ್ಯಗಳ ಪ್ರಯೋಜನಗಳನ್ನು ಪಡೆಯುತ್ತಾರೆ.

(ಇ)       ಕಾರ್ಮಿಕ ಸಂಘಟನೆಗಳ ಉತ್ತಮ ಮತ್ತು ಪರಿಣಾಮಕಾರಿ ಭಾಗವಹಿಸುವಿಕೆಯ ಉದ್ದೇಶದಿಂದ, ಯಾವುದೇ ವಿವಾದದ ಬಗ್ಗೆ ಮಾತುಕತೆ ನಡೆಸಲು “ನೆಗೋಷಿಯೇಟಿಂಗ್ ಯೂನಿಯನ್” ಮತ್ತು “ನೆಗೋಷಿಯೇಟಿಂಗ್ ಕೌನ್ಸಿಲ್”ಗೆ ಅವಕಾಶ ಕಲ್ಪಿಸಲಾಗಿದೆ. ಈ ಮಾನ್ಯತೆಯನ್ನು ನೀಡುವುದರೊಂದಿಗೆ, ಮಾತುಕತೆಯ ಮೂಲಕ ವಿವಾದಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ ಮತ್ತು ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ.

(ಎಫ್)   ಕಾರ್ಮಿಕ ಸಂಘಗಳ ನಡುವೆ ಉದ್ಭವಿಸುವ ವಿವಾದಗಳನ್ನು ಪರಿಹರಿಸಲು ನ್ಯಾಯಮಂಡಳಿಗೆ ಹೋಗಲು ವ್ಯವಸ್ಥೆ ಮಾಡಲಾಗಿದೆ.

(ಜಿ)       ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾರ್ಮಿಕ ಸಂಘಗಳಿಗೆ ಮಾನ್ಯತೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಮಾನ್ಯತೆಯನ್ನು ಕಾರ್ಮಿಕ ಕಾನೂನುಗಳಲ್ಲಿ ಮೊದಲ ಬಾರಿಗೆ ನೀಡಲಾಗಿದೆ ಮತ್ತು ಈ ಮಾನ್ಯತೆಯ ನಂತರ, ಕಾರ್ಮಿಕ ಸಂಘಗಳು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಹೆಚ್ಚು ದೃಢವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಸಾಧ್ಯವಾಗುತ್ತದೆ.

(ಎಚ್)   ಮೊದಲ ಬಾರಿಗೆ ಮರು ಕೌಶಲ್ಯ ನಿಧಿಗೆ ಅವಕಾಶ ಕಲ್ಪಿಸಲಾಗಿದೆ. ಉದ್ಯೋಗದಿಂದ ವಜಾಗೊಂಡ ಕಾರ್ಮಿಕರನ್ನು ಪುನಃ ಕೌಶಲ್ಯಗೊಳಿಸುವುದು ಇದರ ಉದ್ದೇಶವಾಗಿದೆ, ಇದರಿಂದಾಗಿ ಅವರು ಸುಲಭವಾಗಿ ಮತ್ತೆ ಉದ್ಯೋಗವನ್ನು ಪಡೆಯಬಹುದು. ಇದಕ್ಕಾಗಿ ಕಾರ್ಮಿಕರಿಗೆ 45 ದಿನಗಳ ಅವಧಿಯಲ್ಲಿ 15 ದಿನಗಳ ಸಂಬಳ ನೀಡಲಾಗುವುದು.

ವಲಸೆ ಕಾರ್ಮಿಕರ ವ್ಯಾಖ್ಯಾನವನ್ನು ನಾವು ವಿಸ್ತರಿಸಿದ್ದೇವೆ ಎಂದು ಶ್ರೀ ಗಂಗ್ವಾರ್ ಹೇಳಿದರು, ಇದರಿಂದಾಗಿ ವಲಸೆ ಕಾರ್ಮಿಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸ್ವಂತವಾಗಿ ಹೋಗಬಹುದಾಗಿದೆ ಮತ್ತು ಬೇರೆ ರಾಜ್ಯದ ಉದ್ಯೋಗದಾತರಿಂದ ನೇಮಕಗೊಂಡಿರುವ ವಲಸೆ ಕಾರ್ಮಿಕರನ್ನು ಸಹ ಒಎಸ್ಹೆಚ್ ಕೋಡ್ ವ್ಯಾಪ್ತಿಗೆ ತರಬಹುದು. ಪ್ರಸ್ತುತ, ಗುತ್ತಿಗೆದಾರರ ಮೂಲಕ ಕರೆತಂದ ವಲಸೆ ಕಾರ್ಮಿಕರು ಮಾತ್ರ ಈ ನಿಬಂಧನೆಗಳ ಲಾಭ ಪಡೆಯುತ್ತಿದ್ದಾರೆ.

ಕಾರ್ಮಿಕ ಸಂಹಿತೆಗಳ ಪ್ರಯೋಜನಗಳನ್ನು ಸಚಿವರು ಕೆಳಗಿನಂತೆ ವಿವರಿಸಿದರು:

  • ವಲಸೆ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಸಹಾಯವಾಣಿಯ ಕಡ್ಡಾಯ ಸೌಲಭ್ಯ.
  • ವಲಸೆ ಕಾರ್ಮಿಕರ ರಾಷ್ಟ್ರೀಯ ದತ್ತಾಂಶ ಸಂಗ್ರಹ.
  • 240 ದಿನಗಳ ಬದಲು 180 ದಿನಗಳವರೆಗೆ ಕೆಲಸ ಮಾಡಿದ ನಂತರ ಕೆಲಸ ಮಾಡಿದ ಪ್ರತಿ 20 ದಿನಗಳಿಗೊಮ್ಮೆ ಒಂದು ದಿನದ ರಜೆ ಸಂಗ್ರಹಿಸಲು ಅವಕಾಶವಿದೆ.
  • ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರಿಗೆ ಸಮಾನತೆ: ಮಹಿಳೆಯರಿಗೆ ಪ್ರತಿಯೊಂದು ವಲಯದಲ್ಲೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುಮತಿ ನೀಡಬೇಕಾಗಿರುತ್ತದೆ, ಆದರೆ ಉದ್ಯೋಗದಾತರು ಅವರ ಭದ್ರತೆಯ ವ್ಯವಸ್ಥೆ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮೊದಲು ಮಹಿಳೆಯರ ಒಪ್ಪಿಗೆಯನ್ನು ಪಡೆಯಬೇಕು.
  • ಕೆಲಸದ ಸ್ಥಳದಲ್ಲಿ ಅಪಘಾತದಿಂದಾಗಿ ಕೆಲಸಗಾರನ ಸಾವು ಸಂಭವಿಸಿದಾಗ ಅಥವಾ ಕಾರ್ಮಿಕ ಗಾಯಗೊಂಡರೆ, ದಂಡದ ಕನಿಷ್ಠ ಶೇ.50 ಪಾಲನ್ನು ನೀಡಲಾಗುತ್ತದೆ. ಈ ಮೊತ್ತವು ನೌಕರರ ಪರಿಹಾರದ ಜೊತೆಗೆ ಇರುತ್ತದೆ.
  • “ಸಾಮಾಜಿಕ ಭದ್ರತಾ ನಿಧಿ”ಯು ಜಿಐಜಿ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರೊಂದಿಗೆ 40 ಕೋಟಿ ಅಸಂಘಟಿತ ಕಾರ್ಮಿಕರನ್ನು ಸಾರ್ವತ್ರಿಕ ಸಾಮಾಜಿಕ ಭದ್ರತೆ ವ್ಯಾಪ್ತಿಗೆ ತರಲು ಸಹಾಯ ಮಾಡುತ್ತದೆ
  • ಪುರುಷ ಕಾರ್ಮಿಕರಿಗೆ ಸಮಾನವಾಗಿ ಮಹಿಳಾ ಕಾರ್ಮಿಕರಿಗೆ ವೇತನ.
  • ವೃತ್ತಿಪರ ಸುರಕ್ಷತೆ ಮತ್ತು ಆರೋಗ್ಯ ಸಂಹಿತೆಯು ಈಗ ಐಟಿ ಮತ್ತು ಸೇವಾ ವಲಯದ ಕಾರ್ಮಿಕರನ್ನು ಒಳಗೊಳ್ಳಬಹುದು.
  • ಮುಷ್ಕರಕ್ಕೆ 14 ದಿನಗಳ ಸೂಚನೆ ನೀಡಬೇಕು. ಇದರಿಂದ ಈ ಅವಧಿಯಲ್ಲಿ ಸೌಹಾರ್ದಯುತ ಪರಿಹಾರವು ಹೊರಬರಬಹುದು.
  • "ವಿಳಂಬ ನ್ಯಾಯ, ನ್ಯಾಯವನ್ನು ನಿರಾಕರಿಸಿದಂತೆ" ಎಂಬುದನ್ನು ತಪ್ಪಿಸಲು ಕಾರ್ಮಿಕ ನ್ಯಾಯಮಂಡಳಿಗಳು ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಉತ್ತಮ ಕಾರ್ಯವಿಧಾನದ ಪ್ರಸ್ತಾವನೆ.
  • ಹೆಚ್ಚಿನ ಉತ್ಪಾದಕತೆ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕೈಗಾರಿಕಾ ಸಂಬಂಧಗಳ ಸಾಮರಸ್ಯವನ್ನು ಉತ್ತೇಜಿಸುವ ಸಂಹಿತೆಗಳು.
  • ನೋಂದಣಿಯ ಅಗತ್ಯವನ್ನು ಎಂಟರಿಂದ ಕೇವಲ ಒಂದಕ್ಕೆ ತಗ್ಗಿಸುವ ಪಾರದರ್ಶಕ, ಉತ್ತರದಾಯಿ ಮತ್ತು ಸರಳವಾದ ಕಾರ್ಯವಿಧಾನವನ್ನು ಸ್ಥಾಪಿಸುವ ಕಾರ್ಮಿಕ ಸಂಹಿತೆಗಳು; ಈ ಮೊದಲು ಬೇರೆ ಬೇರೆ ಕಾನೂನುಗಳ ಅಡಿಯಲ್ಲಿ ಇದ್ದ ಮೂರು ನಾಲ್ಕು ಮಂದಿಗೆ ಅಗತ್ಯವಿದ್ದ ಪರವಾನಗಿಯು ಈಗ ಒಬ್ಬರಿಗೆ ಇದ್ದರೆ ಸಾಕಾಗುತ್ತದೆ.
  • ಇನ್ಸ್ಪೆಕ್ಟರ್ ಅನ್ನು ಈಗ ಇನ್ಸ್ಪೆಕ್ಟರ್ - ಕಮ್- ಫೆಸಿಲಿಟೇಟರ್ ಎಂದು ಮಾಡಲಾಗುವುದು ಮತ್ತು ಇನ್ಸ್ಪೆಕ್ಟರ್ ರಾಜ್ ವ್ಯವಸ್ಥೆಯನ್ನು ತೆಗೆದುಹಾಕಲು ಯಾದೃಚ್ಚಿಕ, ವೆಬ್ ಆಧಾರಿತ ತಪಾಸಣೆ ವ್ಯವಸ್ಥೆಯನ್ನು ಪರಿಚಯಿಸಲಾಗುವುದು
  • ತಡೆಯ ಕ್ರಮಗಳಾಗಿ ದಂಡಗಳು ಅನೇಕ ಪಟ್ಟು ಹೆಚ್ಚಾಗುತ್ತವೆ.

ಹಲವಾರು ವರ್ಷಗಳಿಂದ ಬದಲಾಗುತ್ತಿರುವ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಕಾರ್ಮಿಕ ಕಾನೂನುಗಳ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ರೂಪಿಸಲಾಗಿದೆ. ಇದರಿಂದಾಗಿ ದೇಶವು ಬೆಳವಣಿಗೆಯ ಪಥದಲ್ಲಿ ವೇಗವಾಗಿ ಸಾಗುತ್ತದೆ ಎಂದು ಶ್ರೀ ಗಂಗ್ವಾರ್ ಒತ್ತಿಹೇಳಿದ್ದಾರೆ. ಇವುಗಳೊಂದಿಗೆ ದೇಶದಲ್ಲಿ ಶಾಂತಿಯುತ ಮತ್ತು ಸಾಮರಸ್ಯದ ಕೈಗಾರಿಕಾ ಸಂಬಂಧಗಳನ್ನು ಉತ್ತೇಜಿಸಲಾಗುವುದು. ಇದು ಉದ್ಯಮ, ಉದ್ಯೋಗ, ಆದಾಯ, ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಕಾರಣವಾಗುತ್ತದೆ ಮತ್ತು ಕಾರ್ಮಿಕರಿಗೆ ಹೆಚ್ಚಿನ ಆದಾಯವನ್ನು ನೀಡುತ್ತದೆ. ದೇಶದ ಈ ಮಹತ್ವದ ಸುಧಾರಣೆಗಳು ವಿದೇಶಿ ನೇರ ಹೂಡಿಕೆ ಮತ್ತು ಉದ್ಯಮಿಗಳಿಂದ ದೇಶೀಯ ಹೂಡಿಕೆಯನ್ನು ಆಕರ್ಷಿಸಲು ಸಹಾಯ ಮಾಡುತ್ತವೆ. ದೇಶದಲ್ಲಿ ‘ಇನ್ಸ್‌ಪೆಕ್ಟರ್ ರಾಜ್’ಅನ್ನು ಕೊನೆಗೊಂಡು ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ತರುತ್ತದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಶ್ರೀ ಸಂತೋಷ್ ಗಂಗ್ವಾರ್ ಹೇಳಿದರು. "ಭಾರತವು ವಿಶ್ವದ ನೆಚ್ಚಿನ ಹೂಡಿಕೆಯ ತಾಣವಾಗಲಿದೆ" ಎಂದೂ ಸಚಿವರು ಹೇಳಿದರು.

***



(Release ID: 1658132) Visitor Counter : 3032