ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಸಚಿವಾಲಯದ ವೃಕ್ಷಾರೋಪಣ ಅಭಿಯಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದ ಚಾಲನೆ
Posted On:
23 JUL 2020 6:19PM by PIB Bengaluru
ಕಲ್ಲಿದ್ದಲು ಸಚಿವಾಲಯದ ವೃಕ್ಷಾರೋಪಣ ಅಭಿಯಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದ ಚಾಲನೆ
ಪ್ರಧಾನಮಂತ್ರಿಗಳ ಆತ್ಮನಿರ್ಭರ್ ಭಾರತದ ಕನಸು ನನಸು ಮಾಡುವ ಗುರಿ, ಭಾರತ ಶೂನ್ಯ ಕಲ್ಲಿದ್ದಲು ಆಮದಿನತ್ತ
ಲೋಕಮಾನ್ಯ ಬಾಲಗಂಗಾಧರ ತಿಲಕ್ ಮತ್ತು ಚಂದ್ರಶೇಖರ ಆಜಾದ್ ಅವರ ಜಯಂತಿಗಳಂದು ವೃಕ್ಷಾರೋಪಣ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ - ಶ್ರೀ ಅಮಿತ್ ಷಾ
ಲೋಕಮಾನ್ಯ ತಿಲಕ್ ಮತ್ತು ಚಂದ್ರಶೇಖರ ಆಜಾದ್ ನೆನಪಿನಲ್ಲಿ ಜೈವಿಕ ಪಾರ್ಕ್ ಮತ್ತು ಪ್ರವಾಸೋದ್ಯಮ ಸ್ಥಳಗಳಿಗೆ ಅವರ ಹೆಸರಿಡುವಂತೆ ಕಲ್ಲಿದ್ದಲು ಸಚಿವಾಲಯಕ್ಕೆ ಸೂಚನೆ
ಹತ್ತು ರಾಜ್ಯಗಳ 38 ಜಿಲ್ಲೆಗಳಲ್ಲಿ ಹರಡಿರುವ 130ಕ್ಕೂ ಅಧಿಕ ಸ್ಥಳಗಳಲ್ಲಿ ಸಸಿನೆಡುವ ಕಾರ್ಯಕ್ರಮ ಹಾಕಿಕೊಂಡಿರುವುದಕ್ಕೆ ಕಲ್ಲಿದ್ದಲು ಸಚಿವಾಲಯಕ್ಕೆ ಅಭಿನಂದನೆ ಸಲ್ಲಿಸಿದ ಕೇಂದ್ರ ಗೃಹ ಸಚಿವರು
2013-14ರಲ್ಲಿ 565 ಮೆಟ್ರಿಕ್ ಟನ್ ಇದ್ದ ಕಚ್ಚಾ ಕಲ್ಲಿದ್ದಲು ಉತ್ಪಾದನೆ 2019-20ನೇ ಸಾಲಿನಲ್ಲಿ 729 ಮಿಲಿಯನ್ ಟನ್ ಗೆ ಏರಿಕೆ: ಕೇಂದ್ರ ಕಲ್ಲಿದ್ದಲು ಸಚಿವರು
ಕೇಂದ್ರ ಗೃಹ ಸಚಿವ ಅಮಿತ್ ಷಾ, ಕಲ್ಲಿದ್ದಲು ಸಚಿವಾಲಯ ಕೈಗೊಂಡಿರುವ ಸಸಿನೆಡುವ ಅಭಿಯಾನ “ವೃಕ್ಷಾರೋಪಣ ಅಭಿಯಾನ”ಕ್ಕೆ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ್ ಜೋಷಿ ಅವರ ಸಮಕ್ಷಮದಲ್ಲಿ ದೆಹಲಿಯಲ್ಲಿ ಇಂದು ಚಾಲನೆ ನೀಡಿದರು. ತಮ್ಮ ನಿವಾಸದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವರು, ಅಭಿಯಾನಕ್ಕೆ ಚಾಲನೆ ನೀಡಿ, ಆರು ಜೈವಿಕ ಪಾರ್ಕ್ ಗಳು ಮತ್ತು ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹತ್ತು ಕಲ್ಲಿದ್ದಲು ಮತ್ತು ಗಣಿ ನಿಕ್ಷೇಪಗಳಿರುವ ರಾಜ್ಯಗಳ 38 ಜಿಲ್ಲೆಗಳಲ್ಲಿನ 130 ಸ್ಥಳಗಳಲ್ಲಿ ಈ ಸಸಿ ನೆಡುವ ಆಂದೋಲನ ನಡೆಯಿತು. ಶ್ರೀ ಅಮಿತ್ ಷಾ ಅವರು, “ಹತ್ತು ರಾಜ್ಯಗಳ 38 ಜಿಲ್ಲೆಗಳಲ್ಲಿ ಹರಡಿರುವ 130ಕ್ಕೂ ಅಧಿಕ ಸ್ಥಳಗಳಲ್ಲಿ ಸಸಿ ನೆಡುವ ಅಭಿಯಾನ ಹಾಕಿಕೊಂಡಿರುವುದಕ್ಕಾಗಿ ಕಲ್ಲಿದ್ದಲು ಸಚಿವಾಲಯವನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು.
ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ಜೈನ್, ಕಲ್ಲಿದ್ದಲು ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಬಿ.ಪಿ.ಪಾಟಿ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 160 ಜಾಗಗಳಿಂದ ಸುಮಾರು 32,000 ಜನರನ್ನು ವರ್ಚುಯಲ್ ರೂಪದಲ್ಲಿ ಕಾರ್ಯಕ್ರಮಕ್ಕೆ ಸಂಪರ್ಕ ಸಾಧಿಸಲಾಗಿತ್ತು. ಸಂಸದರು, ಶಾಸಕರು, ರಾಜ್ಯ ಸರ್ಕಾರಗಳ ಅಧಿಕಾರಿಗಳು ಸೇರಿದಂತೆ 300ಕ್ಕೂ ಅಧಿಕ ಗಣ್ಯರು ವರ್ಚುಯಲ್ ರೂಪದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರು, ಹವಾಮಾನ ವೈಪರೀತ್ಯ ಇಡೀ ವಿಶ್ವದ ಮೇಲೆ ಗಂಭೀರ ಪರಿಣಾಮ ಬೀರಿದೆ. ಆ ಬಿಕ್ಕಟ್ಟಿಗೆ ಹಸಿರೀಕರಣ ಒಂದೇ ಪರಿಹಾರ ಎಂದರು. ನಮ್ಮ ಸಂಸ್ಕೃತಿಯಲ್ಲಿ ಯಾರೊಬ್ಬರೂ ಪ್ರಕೃತಿಯನ್ನು ನಾಶಮಾಡಬಾರದು. ಅದರ ಬದಲಿಗೆ ಪ್ರಕೃತಿಯನ್ನು ಬೆಂಬಲಿಸಬೇಕು ಎಂಬುದನ್ನು ಬಲವಾಗಿ ಪ್ರತಿಪಾದಿಸಲಾಗಿದೆ ಎಂದರು.
“ಭಾರತೀಯ ಸಂಸ್ಕೃತಿಯ ಮೂಲಮಂತ್ರವೆಂದರೆ ನಾವು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಳ್ಳಬೇಕು ಮತ್ತು ಅವುಗಳ ಮೇಲೆ ದೌರ್ಜನ್ಯ ಅಥವಾ ನಾಶಮಾಡುವಂತಿಲ್ಲ ಎಂಬುದಾಗಿದೆ. ನಾವು ನಮ್ಮ ಸ್ವಾರ್ಥಕ್ಕಾಗಿ ಆ ತತ್ವವನ್ನು ನಿರ್ಲಕ್ಷಿಸಿದ್ದೇವೆ. ಇದರಿಂದಾಗಿ ಓಜೋನ್ ಪದರ ಹಾಳಾಗುತ್ತಿದ್ದು, ಓಜೋನ್ ರಂಧ್ರ ಸೃಷ್ಟಿಯಾಗುತ್ತಿದೆ ಮತ್ತು ಅದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ ಮತ್ತು ಹವಾಮಾನ ವೈಪರೀತ್ಯ ಉಂಟಾಗುತ್ತಿದೆ ಎಂದರು. ಇದಕ್ಕೆ ಒಂದೇ ಒಂದು ಪರಿಹಾರವಿದೆ ಮತ್ತು ಪುರಾಣದಲ್ಲಿ ನಮ್ಮ ಋಷಿಮುನಿಗಳು ಉಲ್ಲೇಖಿಸಿರುವಂತೆ ಮರಗಳು ಮನುಷ್ಯನ ಅತ್ಯುತ್ತಮ ಮಿತ್ರ ಮತ್ತು ಹಸಿರೀಕರಣದಿಂದ ಮಾತ್ರ ಈ ಬಿಕ್ಕಟ್ಟಿನಿಂದ ಹೊರಬರಬಹುದಾಗಿದೆ. ಮರಗಳು ನಮಗೆ ಜೀವ ಉಳಿಸುವ ಆಮ್ಲಜನಕವನ್ನು ನೀಡುತ್ತವೆ ಹಾಗೂ ಕಾರ್ಬನ್ ಫುಟ್ ಪ್ರಿಂಟ್ ಅನ್ನು ತಗ್ಗಿಸುತ್ತವೆ ಮತ್ತು ಓಜೋನ್ ಪದರವನ್ನು ಸಂರಕ್ಷಿಸುತ್ತದೆ” ಎಂದು ಶ್ರೀ ಅಮಿತ್ ಷಾ ಹೇಳಿದರು.
ಕಲ್ಲಿದ್ದಲು ವಲಯ ಇಂದು ಹೆಚ್ಚುತ್ತಿರುವ ಕಲ್ಲಿದ್ದಲು ಬೇಡಿಕೆಯನ್ನು ಪೂರೈಸುವುದು ಮಾತ್ರವಲ್ಲದೆ, ಪರಿಸರ ಸ್ಥಿರತೆ ಕಾಯ್ದುಕೊಳ್ಳಲೂ ಕೂಡ ಸಮಾನ ಅವಕಾಶ ನೀಡುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರ ಅರಣ್ಯೀಕರಣ ಮತ್ತು ಪರಿಸರ ಸಂರಕ್ಷಣೆ ಉತ್ತೇಜನಕ್ಕೆ ಹಲವು ಕಲ್ಲಿದ್ದಲು ನಿಕ್ಷೇಪ ಪ್ರದೇಶಗಳಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಪ್ರಧಾನಮಂತ್ರಿ ಅವರು, ಗಣಿ ಪ್ರದೇಶಗಳ ಅಭಿವೃದ್ಧಿಗೆ 39,000 ಕೋಟಿ ರೂ.ಗಳ ಆವರ್ತ ನಿಧಿಯೊಂದಿಗೆ ಜಿಲ್ಲಾ ಖನಿಜ ನಿಧಿಯನ್ನು ಸ್ಥಾಪಿಸಿದ್ದಾರೆ ಮತ್ತು ಅದರಿಂದ 35,000 ಸಣ್ಣ ಪ್ರಮಾಣದ ಯೋಜನೆಗಳು ಪೂರ್ಣಗೊಂಡಿವೆ ಎಂದು ಶ್ರೀ ಅಮಿತ್ ಷಾ ಹೇಳಿದರು. ಕಲ್ಲಿದ್ದಲು ವಲಯ ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ಥಂಬವಾಗಿದೆ. ಮುಂದಿನ ದಿನಗಳಲ್ಲಿ ತನ್ನ ಮಹತ್ವ ಉಳಿಸಿ ಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಅವರ ನಾಯಕತ್ವದಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿ ‘ಉದ್ಯಮಕ್ಕೆ ಪೂರಕ ವಾತಾವರಣ’ ನಿರ್ಮಿಸಲು ಕಲ್ಲಿದ್ದಲು ಸಚಿವಾಲಯ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಶ್ರೀ ಅಮಿತ್ ಷಾ ಹೇಳಿದರು. ಪ್ರಧಾನಮಂತ್ರಿ ಅವರ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಪೂರಕವಾಗಿ ಭಾರತ ಕಲ್ಲಿದ್ದಲು ಆಮದನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಸಾಗಿದೆ. ಸರ್ಕಾರ ಅತ್ಯಂತ ಮಹತ್ವಾಕಾಂಕ್ಷೆಯ 2023-24ರ ವೇಳೆಗೆ ವಾರ್ಷಿಕ ಒಂದು ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ಗುರಿಯನ್ನು ಹೊಂದಿದೆ.
“ಕಲ್ಲಿದ್ದಲು ವಲಯದ ಸಾರ್ವಜನಿಕ ಉದ್ದಿಮೆಗಳು - ಪಿಎಸ್ ಯು ಮತ್ತು ಗಣಿಗಳ ಕಂಪನಿಗಳು ಉತ್ಪಾದನೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಂಡಿವೆ. ಅವರು 2020-24ರ ಅವಧಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯಡಿ 1,25,000 ಕೋಟಿ ರೂ. ಹೂಡಿಕೆಯೊಂದಿಗೆ 534 ಯೋಜನೆಗಳನ್ನು ಈಗಾಗಲೇ ಗುರುತಿಸಿದ್ದಾರೆ” ಎಂದು ಹೇಳಿದ್ದಾರೆ.
ಇಂದು ಚಾಲನೆ ನೀಡಲಾಗಿರುವ ಸಸಿ ನೆಡುವ ಕಾರ್ಯಕ್ರಮಕ್ಕೆ ಮತ್ತೊಂದು ಮಹತ್ವವಿದೆ. ಅದೆಂದರೆ ರಾಷ್ಟ್ರದ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಲೋಕಮಾನ್ಯ ಬಾಲಗಂಗಾಧರ ತಿಲಕ್ ಮತ್ತು ಚಂದ್ರಶೇಖರ್ ಆಜಾದ್ ಅವರ ಜಯಂತಿ ಎಂದು ಶ್ರೀ ಅಮಿತ್ ಷಾ ಹೇಳಿದರು.
“ಲೋಕಮಾನ್ಯ ತಿಲಕರು ಸ್ವಾತಂತ್ರ್ಯಕ್ಕಾಗಿ ‘ಸ್ವಾತಂತ್ರ್ಯ ನನ್ನ ಜನ್ಮ ಸಿದ್ಧ ಹಕ್ಕು’ ಎಂಬ ಮಂತ್ರವನ್ನು ನೀಡಿದ್ದರು. ಅದು ಇಂದಿಗೂ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಭಾರತದ ಪುನರುಜ್ಜೀವನಕ್ಕೆ ಅವರು ಸ್ಫೂರ್ತಿಯಾಗಿದ್ದಾರೆ. ಆಜಾದ್ ಭಾರತದ ಪುತ್ರನಾಗಿದ್ದು, ಅವರೂ ಎಂದಿಗೂ ತಲೆಬಾಗಲಿಲ್ಲ ಮತ್ತು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಹಲವು ಯುವಕರಿಗೆ ಸ್ಫೂರ್ತಿದಾಯಕವಾಗಿದ್ದರು” ಎಂದು ಹೇಳಿದರು. ಲೋಕಮಾನ್ಯ ತಿಲಕ್ ಮತ್ತು ಚಂದ್ರಶೇಖರ ಆಜಾದ್ ಅವರ ಹೆಸರನ್ನು ಜೈವಿಕ ಪಾರ್ಕ್ ಮತ್ತು ಪ್ರವಾಸೋದ್ಯಮ ಸ್ಥಳಗಳಿಗೆ ಇಡುವಂತೆ ಶ್ರೀ ಅಮಿತ್ ಷಾ, ಕಲ್ಲಿದ್ದಲು ಸಚಿವಾಲಯಕ್ಕೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ್ ಜೋಷಿ ಅವರು, ಅರಣ್ಯ ಸಂರಕ್ಷಣೆ ಹಾಗೂ ರಕ್ಷಣೆ ಉದ್ದೇಶದಿಂದ ಇಂದು ಹತ್ತು ರಾಜ್ಯಗಳ 38 ಜಿಲ್ಲೆಗಳಲ್ಲಿ 600 ಎಕರೆ ಪ್ರದೇಶದಲ್ಲಿ 6 ಲಕ್ಷ ವೃಕ್ಷಗಳನ್ನು ನೆಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸ್ಥಳೀಯ ಜನರಿಗೆ ಹೆಚ್ಚುವರಿಯಾಗಿ 5 ಲಕ್ಷ ಗಿಡಗಳನ್ನು ವಿತರಿಸಲಾಗುವುದು ಎಂದರು. ಇದರಲ್ಲಿ 5 ಜೈವಿಕ ಪಾರ್ಕ್ ಗಳ ಅಭಿವೃದ್ಧಿ, ಒಂದು ಸಾಲ್ ಪ್ಲಾಂಟೇಶನ್ ---- ಯೋಜನೆ ಒಳಗೊಂಡಿದ್ದು, ಒಟ್ಟು 27.60 ಕೋಟಿ ರೂ. ವ್ಯಯವಾಗುತ್ತಿದೆ ಎಂದರು.
ಅಖಿಲ ಭಾರತ ಕಚ್ಚಾ ಕಲ್ಲಿದ್ದಲು ಉತ್ಪಾದನೆ 2013-14ರಲ್ಲಿ 565 ಮಿಲಿಯನ್ ಟನ್ ಇತ್ತು. ಅದು 2019-20ರಲ್ಲಿ 729 ಮಿಲಿಯನ್ ಟನ್ ಗೆ ಏರಿಕೆಯಾಗಿದೆ. ಇದರಿಂದಾಗಿ ಒಟ್ಟು 163 ಮಿಲಿಯನ್ ಟನ್ ಉತ್ಪಾದನೆ ಹೆಚ್ಚಳವಾಗಿದ್ದು, ಕಳೆದ ಐದು ವರ್ಷಗಳಲ್ಲಿ 73 ಮಿಲಿಯನ್ ಟನ್ ಉತ್ಪಾದನೆ ಹೆಚ್ಚಳವಾಗಿದೆ ಎಂದು ಶ್ರೀ ಪ್ರಹ್ಲಾದ್ ಜೋಷಿ ತಿಳಿಸಿದರು. ಅವರು 2023-24ರ ವೇಳೆಗೆ ಒಂದು ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಭಾರತೀಯ ಕಲ್ಲಿದ್ದಲು ನಿಗಮ ಹಾಕಿಕೊಂಡಿದೆ. ಇದರಿಂದಾಗಿ ಬೇಡಿಕೆ – ಪೂರೈಕೆ ನಡುವಿನ ಅಂತರ ಪ್ರಮುಖವಾಗಿ ತಗ್ಗಲಿದೆ. ಎಸ್ ಸಿಸಿಎಲ್, ಎನ್ಎಲ್ ಸಿಐಎಲ್ ಮತ್ತು ಇತರೆ ಗಣಿ ಕಂಪನಿಗಳು ದೇಶೀಯ ಕಲ್ಲಿದ್ದಲು ಪೂರೈಕೆ ವೃದ್ಧಿಗೆ ನೆರವಾಗಲು ಹೆಚ್ಚಿನ ಪ್ರಗತಿ ಸಾಧಿಸುವುದು ಮತ್ತು ಕೊಡುಗೆ ನೀಡುವುದು ಅತ್ಯಗತ್ಯವಾಗಿದೆ.
ಆತ್ಮನಿರ್ಭರ ಭಾರತ ಯೋಜನೆ ಅಡಿಯಲ್ಲಿ ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಸ್ವಾವಲಂಬಿಯನ್ನಾಗಿ ರೂಪಿಸುವ ಗುರಿ ಹೊಂದಲಾಗಿದ್ದು, ಆ ನಿಟ್ಟಿನಲ್ಲಿ ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಎಂದು ಶ್ರೀ ಪ್ರಹ್ಲಾದ್ ಜೋಷಿ ಹೇಳಿದರು. ಕಲ್ಲಿದ್ದಲು ವಲಯವನ್ನು ಬಂಡವಾಳ ಹೂಡಿಕೆಗೆ ಮುಕ್ತಗೊಳಿಸಿರುವುದರಿಂದ ಆಧುನಿಕ ತಂತ್ರಜ್ಞಾನ ಮತ್ತು ಹೂಡಿಕೆಯೊಂದಿಗೆ ಜಾಗತಿಕ ಕಂಪನಿಗಳು ಬಂಡವಾಳ ಹೂಡಿಕೆಗೆ ಮುಂದಾಗಲಿವೆ ಮತ್ತು ಇದರಿಂದ ಭಾರತ ಜಾಗತಿಕ ಕಂಪನಿಗಳ ಜೊತೆ ನಿಕಟ ಬಾಂಧವ್ಯ ಸಾಧಿಸಲು ಸಹಕಾರಿಯಾಗಲಿದೆ ಎಂದರು.
ಕಲ್ಲಿದ್ದಲು ವಲಯದಲ್ಲಿ ಪರಿಸರ ಸಂರಕ್ಷಣೆ ಕುರಿತಂತೆ ಮಾತನಾಡಿದ ಶ್ರೀ ಜೋಷಿ ಅವರು, 2019-20ನೇ ಹಣಕಾಸು ವರ್ಷದ ವರೆಗೆ ಕಲ್ಲಿದ್ದಲು ಮತ್ತು ಲಿಗ್ನೈಟ್ ಪಿಎಸ್ ಯುಗಳಲ್ಲಿ ಸುಮಾರು 157 ಮಿಲಿಯನ್ ಗಿಡಗಳನ್ನು ನೆಡುವ ಮೂಲಕ ಒಟ್ಟು 25,000 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಕೈಗೊಳ್ಳಲಾಗಿದೆ ಎಂದರು. ಕಲ್ಲಿದ್ದಲು ಮತ್ತು ಲಿಗ್ನೈಟ್ ಪಿಎಸ್ ಯುಗಳು ಹೊಸ ಜೈವಿಕ ಪಾರ್ಕ್ ಗಳ ಅಭಿವೃದ್ಧಿ, ಹಾಲಿ ಇರುವ ಜೈವಿಕ ಪಾರ್ಕ್ ಗಳ ವಿಸ್ತರಣೆ ಮತ್ತು ದೇಶಾದ್ಯಂತ 15 ಪ್ರವಾಸೋದ್ಯಮ ತಾಣಗಳಲ್ಲಿ ಪರಿಸರ ಸಂರಕ್ಷಣೆಗೆ 2023-24ರ ವರೆಗೆ ಸುಮಾರು 50 ಕೋಟಿ ರೂ.ಗಳನ್ನು ವೆಚ್ಚ ಮಾಡಲು ಯೋಜನೆಯನ್ನು ರೂಪಿಸಿವೆ ಎಂದರು.
ಕಲ್ಲಿದ್ದಲು ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ಜೈನ್ ಅವರು, ಜೈವಿಕ ಪಾರ್ಕ್ ಗಳು ಮತ್ತು ಪ್ರವಾಸೋದ್ಯಮ ಪಾರ್ಕ್ ಗಳನ್ನು ಆಯಾ ಪ್ರದೇಶದ ಜನರ ಯೋಗಕ್ಷೇಮದ ಅಗತ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಕಲ್ಲಿದ್ದಲು ಸಚಿವಾಲಯದಡಿ ಬರುವ ಪಿಎಸ್ ಯುಗಳು ಅಭಿವೃದ್ಧಿಗೊಳಿಸುತ್ತಿವೆ. ಪರಿಸರ ಸಂರಕ್ಷಣೆ ಹಾಗೂ ರಕ್ಷಣೆಯ ಬದ್ಧತೆಯನ್ನೂ ಮುಂದುವರಿಸಿಕೊಂಡು ಕಲ್ಲಿದ್ದಲು ಮತ್ತು ಲಿಗ್ನೈಟ್ ಪಿಎಸ್ ಯುಗಳಾದ ಭಾರತೀಯ ಕಲ್ಲಿದ್ದಲು ನಿಗಮ(ಸಿಐಎಲ್), ಸಿಂಗರೇಣೀ ಕೊಲ್ಲಾರೀಸ್ ಕಂಪನಿ ಲಿಮಿಟೆಡ್(ಎಸ್ ಸಿಸಿಎಲ್) ಮತ್ತು ಎನ್ ಎಲ್ ಸಿ ಇಂಡಿಯಾ ಲಿಮಿಟೆಡ್, ಇವು ಕಲ್ಲಿದ್ದಲು ಸಚಿವಾಲಯದ(ಎಂಒಸಿ) ಅಡಿ ಬರುತ್ತಿದ್ದು, ಇವು ವೃಕ್ಷಾರೋಪಣ ಅಭಿಯಾನದಡಿ ಬೃಹತ್ ಸಸಿ ನೆಡುವ ಆಂದೋಲನವನ್ನು ಕೈಗೊಂಡಿವೆ. ಕಲ್ಲಿದ್ದಲು ಮತ್ತು ಲಿಗ್ನೈಟ್ ಪಿಎಸ್ ಯುಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 70 ಕೋಟಿ ರೂ. ವೆಚ್ಚದಲ್ಲಿ 1,789 ಹೆಕ್ಟೇರ್ ಭೂ ಪ್ರದೇಶದಲ್ಲಿ 40 ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡಲು ಯೋಜನೆಯನ್ನು ಹಾಕಿಕೊಂಡಿವೆ. ಅಲ್ಲದೆ ಪ್ರಸಕ್ತ ಹಣಕಾಸು ವರ್ಷ ಈ ಕಂಪನಿಗಳು ಹೆಚ್ಚುವರಿಯಾಗಿ 20 ಲಕ್ಷ ಸಸಿಗಳನ್ನು ವಿತರಣೆ ಮಾಡಲಿವೆ.
ಜೈವಿಕ ಪಾರ್ಕ್ ಗಳು/ ಪ್ರವಾಸೋದ್ಯಮ ತಾಣಗಳ ವಿವರ
ಎರಡು ಜೈವಿಕ ಪಾರ್ಕ್ ಗಳು ಇಂದು ಎರಡು ಜೈವಿಕ ಪಾರ್ಕ್ ಗಳನ್ನು ಉದ್ಘಾಟಿಸಲಾಗಿದ್ದು, ಅವುಗಳನ್ನು ಜಾರ್ಖಂಡ್ ಮತ್ತು ತಮಿಳುನಾಡುಗಳಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಜಾರ್ಖಂಡ್ ನಲ್ಲಿನ ಜೈವಿಕ ಪಾರ್ಕ್ ಗೆ ಪಾರ್ಸಾನಾಥ್ ಉದ್ಯಾನ ಎಂದು ಹೆಸರಿಡಲಾಗಿದ್ದು, ಅದನ್ನು ಸಿಐಎಲ್ ನ ಅಧೀನದಲ್ಲಿರುವ ಕಂಪನಿ ಭಾರತ್ ಕೋಕಿಂಗ್ ಕಲ್ಲಿದ್ದಲು ನಿಗಮ(ಬಿಸಿಸಿಎಲ್) ಅಭಿವೃದ್ಧಿಪಡಿಸಲಿದ್ದು, ಅದು 3.5 ಹೆಕ್ಟೇರ್ ಪ್ರದೇಶದಲ್ಲಿ ವಾಯುವಿಹಾರ ಪಥ, ಸಸ್ಯೋದ್ಯಾನ, ಆರಾಮ ಖುರ್ಚಿಗಳು, ಹಸಿರು ಸುರಂಗ, ಅಲಂಕಾರಿಕ ಮೀನು ಜೈವಿಕ ವ್ಯವಸ್ಥೆ ಹಾಗೂ ತ್ಯಾಜ್ಯದಿಂದ ಸಂಪತ್ತು ವಲಯವನ್ನು ಅಭಿವೃದ್ಧಿಪಡಿಸಲಾಗುವುದು. ತಮಿಳುನಾಡಿನಲ್ಲಿ ಜೈವಿಕ ಪಾರ್ಕ್ ಅನ್ನು ಎನ್ ಎಲ್ ಸಿ ಇಂಡಿಯಾ ಅಭಿವೃದ್ಧಿಪಡಿಸುತ್ತಿದ್ದು, ಸುಮಾರು 15 ಎಕರೆ ಪ್ರದೇಶದಲ್ಲಿ ದೋಣಿ ವಿಹಾರ, ಆರಾಮ ಕುರ್ಚಿ, ದಟ್ಟ ಕಾಡು, ಪಕ್ಷಿ ವೀಕ್ಷಿಸುವ ವಲಯ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲಾಗುವುದು. ಕೆರೆಯಲ್ಲಿ ನಾನಾ ಬಗೆಯ ಮೀನುಗಳು ಮತ್ತು 250ಕ್ಕೂ ಅಧಿಕ ಬಗೆಯ ಪಕ್ಷಿಗಳು, ಈ ಜೈವಿಕ ಪಾರ್ಕ್ ನ ಪ್ರಮುಖ ಆಕರ್ಷಣೆಯಾಗಲಿವೆ.
ಮೂರು ಜೈವಿಕ ಪಾರ್ಕ್ ಗಳು; ಮೂರು ಜೈವಿಕ ಪಾರ್ಕ್ ಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ಮಾಡಲಾಗಿದ್ದು, ಅವುಗಳಲ್ಲಿ ಒಂದು ಉತ್ತರ ಪ್ರದೇಶದಲ್ಲಿ ಸಿಐಎಲ್ ನ ಅಧೀನ ಸಂಸ್ಥೆ ನಾರ್ದರನ್ ಕೋಲ್ ಫೀಲ್ಡ್ಸ್ ಲಿಮಿಟೆಡ್, ಒಡಿಶಾದಲ್ಲಿ ಲಿಲಾರಿ ಜೈವಿಕ ಪಾರ್ಕ್ ಅನ್ನು ಸಿಐಎಲ್ ನ ಅಧೀನ ಸಂಸ್ಥೆ ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್(ಎಂಸಿಎಲ್) ಹಾಗೂ ಜಾರ್ಖಂಡ್ ನಲ್ಲಿ ಜೈವಿಕ ಪಾರ್ಕ್ ಅನ್ನು ಸಿಐಎಲ್ ನ ಅಧೀನ ಸಂಸ್ಥೆ ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್(ಸಿಸಿಎಲ್) ಅಭಿವೃದ್ಧಿ ಪಡಿಸುತ್ತಿವೆ. ಒಡಿಶಾದಲ್ಲಿ ಸಾಲ್ ಪ್ಲಾಂಟೇಶನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಅದನ್ನು ಎನ್ಎಲ್ ಸಿ(ಭಾರತ) ಲಿಮಿಟೆಡ್ ಅಭಿವೃದ್ಧಿಪಡಿಸುತ್ತಿದೆ.
***
(Release ID: 1640932)
Visitor Counter : 280