ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಅಕ್ಟೋಬರ್ ವೇಳೆಗೆ ವಾರ್ಷಿಕ 12.7 ಮೆಟ್ರಿಕ್ ಟನ್ ಯೂರಿಯಾ ಉತ್ಪಾದನೆ ಯೋಜನೆ ಕಾರ್ಯಗತ: ಕೇಂದ್ರ ಸಚಿವ ಸದಾನಂದಗೌಡ

Posted On: 01 JUL 2020 6:34PM by PIB Bengaluru

ಅಕ್ಟೋಬರ್ ವೇಳೆಗೆ ವಾರ್ಷಿಕ 12.7 ಮೆಟ್ರಿಕ್ ಟನ್ ಯೂರಿಯಾ ಉತ್ಪಾದನೆ ಯೋಜನೆ ಕಾರ್ಯಗತ: ಕೇಂದ್ರ ಸಚಿವ ಸದಾನಂದಗೌಡ
 

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಸದಾನಂದ ಗೌಡ ಅವರು ನವದೆಹಲಿಯಲ್ಲಿಂದು ರಾಮಗುಂಡಂ ರಸಗೊಬ್ಬರ ಮತ್ತು ರಾಸಾಯನಿಕ ನಿಯಮಿತ (ಆರ್.ಎಫ್.ಸಿ.ಎಲ್.) ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿ, ಯೋಜನೆಯ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಯೋಜನೆ ಮುಕ್ತಾಯದ ಹಂತದಲ್ಲಿದ್ದು, ಈ ವರ್ಷ ಅಕ್ಟೋಬರ್ ಹೊತ್ತಿಗೆ ವಾಣಿಜ್ಯ ಉತ್ಪಾದನೆಯಲ್ಲಿ ತೊಡಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೋವಿಡ್ ಸಾಂಕ್ರಾಮಿಕದಿಂದ ಎದುರಾಗಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಆರ್.ಎಫ್.ಸಿ.ಎಲ್. ಕೈಗೊಂಡಿರುವ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪೂರ್ಣಗೊಂಡ ತರುವಾಯ, ಯೋಜನೆಯು ಪ್ರಧಾನಿಯವರ ಆತ್ಮ ನಿರ್ಭರ ಭಾರತ ದೃಷ್ಟಿಕೋನವನ್ನು ಸಾಕಾರಗೊಳಿಸಲಿದೆ ಎಂದರು. ಗೋರಖ್ಪುರ, ಬರೌನಿ, ಸಿಂಡ್ರಿ ಮತ್ತು ತಾಲ್ಚೇರ್ ಪುನಶ್ಚೇತನ ಯೋಜನೆಗಳ ಜೊತೆಗೆ ರಾಮಗುಂಡಂ ಯೋಜನೆ ಕಾರ್ಯಗತವಾದ ಬಳಿಕ ಯೂರಿಯಾ ಆಮದನ್ನು ವಾರ್ಷಿಕ 63.5 ಲಕ್ಷ ಮೆಟ್ರಿಕ್ ಟನ್ ತಗ್ಗಿಸಲಿದೆ ಎಂದರು.
ಆರ್.ಎಫ್.ಸಿ.ಎಲ್. ಅನಿಲ ಆಧಾರಿತ ಯೂರಿಯಾ ಘಟಕವಾಗಿದ್ದು ತೆಲಂಗಾಣದ ರಾಮಗುಂಡಂನಲ್ಲಿ 12.7 ಲಕ್ಷ ಮೆಟ್ರಿಕ್ ಟನ್ ವಾರ್ಷಿಕ ಉತ್ಪಾದನೆ ಸಾಮರ್ಥ್ಯಹೊಂದಿದೆ. ಇದು ಜಂಟಿ ಸಹಯೋಗದ ಕಂಪನಿಯಾಗಿದ್ದು, ರಾಷ್ಟ್ರೀಯ ರಸಗೊಬ್ಬರ ನಿಯಮಿತ (ಎನ್.ಎಫ್.ಎಲ್.), ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್) ಮತ್ತು ಭಾರತೀಯ ರಸಗೊಬ್ಬರ ನಿಯಮಿತ (ಎಫ್.ಸಿ.ಐ.ಎಲ್.)ದಿಂದ ರೂಪಿತವಾಗಿದೆ. ಈ ಯೋಜನೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2016ರ ಆಗಸ್ಟ್ 7ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಇದು ಪೂರ್ಣಗೊಂಡ ತರುವಾಯ ಆರ್.ಎಫ್.ಸಿ.ಎಲ್. ಯೋಜನೆ ಆಮದು ಯೂರಿಯಾ ಮೇಲಿನ ಅವಲಂಬನೆಯನ್ನು ತಗ್ಗಿಸಲಿದ್ದು, ವಿದೇಶೀ ವಿನಿಮಯ ತಗ್ಗಿಸಲಿದೆ ಮತ್ತು ಉದ್ಯೋಗವನ್ನೂ ಸೃಷ್ಟಿಸಲಿದೆ.
ಈ ಸಭೆಯ ವೇಳೆ, ಶ್ರೀ ನಿರ್ಲಿಪ್ ಸಿಂಗ್ ರಾಯ್, ಸಿಇಓ, ಆರ್.ಎಫ್.ಸಿ.ಎಲ್. ಯೋಜನೆಯ ವಿವಿಧ ಭೌದಿಕ ಕಾಮಗಾರಿಗಳ ಪ್ರಗತಿಯ ಸಂಕ್ಷಿಪ್ತ ವಿವರ ನೀಡಿ, ಯೋಜನೆ ಶೇ.99ರಷ್ಟು ಪೂರ್ಣಗೊಂಡಿದೆ ಎಂದರು. ಲಾಕ್ ಡೌನ್ ಅವಧಿಯಲ್ಲಿ ಕೆಲ ಕಾಲ ಯೋಜನೆ ಸ್ಥಗಿತವಾಗಿತ್ತು, 2020ರ ಮೇ 3ರಿಂದ ಪುನಾರಂಭವಾಗಿದೆ ಎಂದು ತಿಳಿಸಿದರು. ಮಾನವ ಶಕ್ತಿಯ ಲಭ್ಯತೆ ಸಮಸ್ಯೆಯ ಪ್ರದೇಶವಾಗಿದ್ದು, ಆಡಳಿತವು ಪೂರ್ವಭಾವಿ ಕ್ರಮಗಳ ಮೂಲಕ ಅಂದರೆ ಗುತ್ತಿಗೆ ಕಾರ್ಮಿಕರಿಗೆ ಉಚಿತ ಊಟ ಮತ್ತು ವಸತಿ ಹಾಗೂ ಲಾಕ್ ಡೌನ್ ಅವಧಿಯಲ್ಲೂ ವೇತನ ನೀಡಿ ಉಳಿಸಿಕೊಂಡಿದೆ.
ಭಾರತ ಸರ್ಕಾರ, ಯೂರಿಯಾ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿ ಮಾಡಲು ಮತ್ತು ಯೂರಿಯಾ ವಲಯದಲ್ಲಿ ಹೊಸ ಹೂಡಿಕೆಗೆ ಅವಕಾಶ ನೀಡಲು ಹೊಸ ಹೂಡಿಕೆ ನೀತಿ (ಎನ್.ಐ.ಪಿ.), 2012 ಪ್ರಕಟಿಸಿದೆ. ಎನ್.ಐ.ಪಿ, 2012ರ ಅಡಿಯಲ್ಲಿ ಭಾರತ ಸರ್ಕಾರ 5 ಮುಚ್ಚಿಹೋಗಿರುವ ರಸಗೊಬ್ಬರ ಘಟಕಗಳನ್ನೂ ಪುನಶ್ಚೇತನಗೊಳಿಸುತ್ತಿದೆ. ಪುನಶ್ಚೇತನವಾಗುತ್ತಿರುವ ಐದು ಸಾರ್ವಜನಿಕ ವಲಯದ ಘಟಕಗಳು:-
ರಾಮಗುಂಡಂ ರಸಗೊಬ್ಬರ ಮತ್ತು ರಾಸಾಯನಿಕ ನಿಯಮಿತ (ಆರ್.ಎಫ್.ಸಿ.ಎಲ್)
ತಾಲ್ಚೇರ್ ರಸಗೊಬ್ಬರ ನಿಯಮಿತ (ಟಿಎಫ್.ಎಲ್.)
ಹಿಂದೂಸ್ತಾನ್ ಉರ್ವಾರಕ್ ಮತ್ತು ರಸಾಯನ್ ನಿಯಮಿತ (ಗೋರಖ್ಪುರ್, ಬರೌನಿ ಮತ್ತು ಸಿಂಡ್ರಿ)

***

​​​



(Release ID: 1635741) Visitor Counter : 189